ಜೀವವಿಜ್ಞಾನಿಯ 'ಕೊರೊನಾ' ನೋಟ

ಕೋವಿಡ್ -19 :  ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ಲೇಸು
ಡಾ. ಪ್ರಶಾಂತ ನಾಯ್ಕ, ಬೈಂದೂರು
ಜೀವವಿಜ್ಞಾನ ವಿಭಾಗ / ಮಂಗಳೂರು ವಿಶ್ವವಿದ್ಯಾಲಯ
ಕಣ್ಣಿಗೆ ಕಾಣುವುದು ಹೋಗಲಿ ಸೂಕ್ಷ್ಮದರ್ಶಕದಲ್ಲಿಯೂ ಗೋಚರಿಸದ  ಸೂಕ್ಷ್ಮಾಣು ಸೂಕ್ಷ್ಮ ಒಂದು ಯಕಶ್ಚಿತ್ ವೈರಸ್ ಜಗತ್ತಿನಾದ್ಯಂತ ಸಾವಿರಾರು ಜನರ ಪ್ರಾಣವನ್ನು ನುಂಗಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು  ಹೇಗೆ ಸಾಧ್ಯ ಎಂಬುದು ಸೋಜಿಗದ ಪ್ರಶ್ನೆ. ಹಾಗಂತ ಈ ವೈರಸ್‌ನಿಂದ ಸೋಂಕಿತರಾದ ಎಲ್ಲರೂ ಇಹಲೋಕ ತ್ಯಜಿಸಿದರು ಅಂತಲ್ಲ. ಜಗತ್ತಿನಾದ್ಯಂತ ಸೋಂಕಿತರಲ್ಲಿ ಸರಾಸರಿ ಶೇಕಡ ೪ ರಷ್ಟು ಜನರ ಸಾವಿಗೆ ಕಾರಣವಾಗಿರುವ ಹೊಸ ತಳಿಯ ಕೊರೊನಾವೈರಸ್  ಮಾಡುತ್ತಿರುವ ಅನಾಹುತ ಎದೆ ಝಲ್ ಎನಿಸುತ್ತದೆ. ಕೊರೊನಾ ವೈರಸ್ ಸೋಂಕಿನಿಂದ ಆಗುವ ಸಾವಿನ ಪ್ರಮಾಣ ಆಯಾಯ ದೇಶದ ಭೌಗೋಳಿಕತೆ, ಹವಾಮಾನ, ಆಹಾರ ಪದ್ಧತಿ, ಜೀವನಶೈಲಿ, ಹವ್ಯಾಸಗಳು, ಆರ್ಥಿಕ ಸ್ಥಿತಿ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿದೆ.  ಗಾಳಿಯಲ್ಲಿ 3 ಗಂಟೆ, ತಾಮ್ರದ ಮೇಲೆ 4 ಗಂಟೆ, ಹಲಗೆಯಲ್ಲಿ 24 ಗಂಟೆ,  ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿ 2-3 ದಿನಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಮೇಲೆ 3 ದಿನಗಳು,  ‘ಜೀವಂತ’  ಇದ್ದು, ಕೊನೆಗೆ ಅಲ್ಲಿಯೇ ‘ಸಾಯುವ’  ಕೊರೊನಾವೈರಸ್-19 ಮನುಷ್ಯನ ದೇಹವನ್ನು ಸೇರಿದಾಗ ಏಕೆ ನಾಶವಾಗುವುದಿಲ್ಲ.  ಅದೂ ನಿಸರ್ಗದತ್ತವಾದ ರೋಗ ನಿರೋಧಕ ಶಕ್ತಿ ಎಂಬ ಶಸ್ತ್ರಸಜ್ಜಿತವಾದ ಪ್ರತಿರಕ್ಷಣಾ ವ್ಯವಸ್ಥೆ ಇರುವಾಗಲೂ.
ಕೊರೊನಾವೈರಸ್-19 ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಮೊದಲು ನಾವು ವೈರಸ್‌ಗಳ ಸಾಮಾನ್ಯ ಲಕ್ಷಣಗಳು, ರಚನೆ ಮತ್ತು  ಜೀವನಚಕ್ರವನ್ನು ಅರಿತುಕೊಳ್ಳಬೇಕು.  ವೈರಸ್‌ಗಳು ಅತ್ತ ಸಂಪೂರ್ಣವಾಗಿ ಜೀವಿಯು ಅಲ್ಲದ  ಇತ್ತ ನಿರ್ಜೀವಿಯು ಅಲ್ಲದ ಒಂಥರಾ ತ್ರಿಶಂಕು ಸ್ಥಿತಿಯಲ್ಲಿರುವ ಕಣಗಳು. ಸುಮಾರು 20  ರಿಂದ 400 ನ್ಯಾನೊಮೀಟರ್ (0.00002 – 0.0004 ಮಿಲಿಮೀಟರ್) ವ್ಯಾಸವನ್ನು ಹೊಂದಿರುವ ಅವುಗಳನ್ನು ವೈರಲ್ ಕಣಗಳು ಅಥವಾ ವೈರಾಣುಗಳು ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.  ಯಾವುದೇ ಒಂದು ವಸ್ತು ಜೀವಿ ಎಂದು ಪರಿಗಣಿಸಬೇಕಾದರೆ ಮುಖ್ಯವಾಗಿ ಅದು ಸ್ವತಂತ್ರವಾಗಿ ವಂಶಾಭಿವೃದ್ಧಿ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಬ್ಯಾಕ್ಟೀರಿಯಾ, ಶಿಲೀಂಧ್ರ, ಪಾಚಿ, ಸಸ್ಯ,  ಪ್ರಾಣಿ,  ಎಲ್ಲವೂ ಕೂಡ ಇನ್ನೊಂದು ಪ್ರಭೇದವನ್ನು ಅವಲಂಬಿಸದೆ ತಮ್ಮ ಸಂತಾನವನ್ನು ಬೆಳೆಸುತ್ತವೆ.  ಆದರೆ ವೈರಸ್‌ಗಳು ಸ್ವತಂತ್ರವಾಗಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ.  ಅವುಗಳು ಸಂತಾನಾಭಿವೃದ್ಧಿಗೆ ಇನ್ನೊಂದು ಜೀವಿಯನ್ನು ಅವಲಂಬಿಸಿ ಆತಿಥ್ಯವನ್ನು ಪಡೆಯುತ್ತವೆ.  ಯಾವ ಜೀವಿಯನ್ನು ಒಂದು ವೈರಸ್  ತನ್ನ ಸಂತಾನಾಭಿವೃದ್ಧಿಗೆ  ಆಶ್ರಯವನ್ನು ಪಡೆಯುತ್ತದೆಯೋ ಆ ಜೀವಿಯು ಆಶ್ರಯದಾತ ಅರ್ಥಾತ್  ಆತಿಥೇಯ (ಹೋಸ್ಟ್) ಆಗಿರುತ್ತದೆ. ‘ಅತಿಥಿ ದೇವೋಭವ’ ಅನ್ನುವ ಮಾತಿದೆ;  ವೈರಿಯೇ ಮನೆ ಬಾಗಿಲಿಗೆ  ಬಂದರೂ  ಅತಿಥಿಯಂತೆ ಸ್ವಿಕರಿಸಿ ಉಪಚರಿಸುವ ಸಂಸ್ಕೃತಿ.   ಇಲ್ಲಿ ಆಶ್ರಯ ನೀಡುವ ಹೋಸ್ಟ್ ನ್ನೇ  ಸಂಕಷ್ಟಕ್ಕೆ ಸಿಕ್ಕಿಸುವ ಕೊರೊನಾವೈರಸ್ ಅನ್ನು  ‘ಅತಿಥಿ ದೆವ್ವೊಭವ’ ಅನ್ನಬಹುದು.   ಆಯಾಯ ವೈರಾಣುಗಳ ಹೊಂದಾಣಿಕೆಗೆ ತಕ್ಕಂತೆ ತಮಗೆ ಬೇಕಾದ ಬ್ಯಾಕ್ಟೀರಿಯಾ,   ಸಸ್ಯ  ಅಥವಾ ಪ್ರಾಣಿಯನ್ನು ಹೋಸ್ಟ್  ಆಗಿ ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಸ್ತುತ ನಮ್ಮನ್ನು ಪೆಡಂಭೂತವಾಗಿ ಕಾಡುತ್ತಿರುವ ಕೊರೊನಾವೈರಸ್-೧೯ ಕ್ಕೆ ಮನುಷ್ಯರೇ ಹೋಸ್ಟ್.  ಯಾವ ಜೀವಿಯನ್ನು ಹೋಸ್ಟ್ ಆಗಿ ಅವಲಂಬಿಸಬೇಕು ವಿಕಸನ ಪ್ರಕ್ರಿಯೆಯಲ್ಲಿ ಅದಕ್ಕೆ ತಕ್ಕಂತೆ  ವ್ಯವಸ್ಥೆಯನ್ನು ಹೊಂದಿರುತ್ತವೆ.  ಈಗ ನಮ್ಮೆದುರು ಇರುವ ಹೊಸ ತಳಿಯ ಕೊರೊನಾವೈರಸ್ ಮನುಷ್ಯರ ಮುಖ್ಯವಾಗಿ ಶ್ವಾಸಕೋಶದ ಅಲ್ವಿಯೋಲಾರ್ ಕೋಶಗಳನ್ನು  ಹೋಸ್ಟ್  ಆಗಿ  ಆಕ್ರಮಿಸಲು ಬಲವಾದ ಆಯುಧವನ್ನೇ ಹೊತ್ತುಬಂದಿದೆ. ಆ ‘ಆಯುಧ’ ಯಾವುದೆಂಬುದನ್ನು ಮುಂದೆ ನೋಡೋಣ.
ಸ್ವತಂತ್ರವಾಗಿ ಇರುವಾಗ ಜಡ ವಸ್ತುವಿನಂತೆ ಇರುವ ವೈರಾಣುಗಳಿಗೆ ಜೀವಿಗಳಲ್ಲಿರುವ ಕೆಲವು ಅತ್ಯಮೂಲ್ಯ ಗುಣಾಂಶಗಳು ಇವೆ.  ಪ್ರತಿಯೊಂದು ಜೀವಿಯಲ್ಲಿಯೂ ಅದರ ಗುಣಧರ್ಮವನ್ನು ನಿರ್ಧರಿಸುವ ವಂಶವಾಹಿಗಳು (ಜೀನ್ಸ್ ) ಹೊಂದಿರುವ ಅನುವಂಶಿಕ ವಸ್ತು ಇದೆ.  ಅದರಂತೆ ವೈರಾಣುಗಳಲ್ಲಿಯೂ ತಳಿ ಮಾಹಿತಿ ಹೊಂದಿರುವ ಅನುವಂಶಿಕ ವಸ್ತು ಇದೆ. ಕೆಲವು ವೈರಾಣುಗಳಲ್ಲಿ ಅದು ಡಿಎನ್ಎ   ರೂಪದಲ್ಲಿದ್ದರೆ (ಡಿಎನ್ಎ  ವೈರಸ್) ಇನ್ನು ಕೆಲವು ವೈರಾಣುಗಳಲ್ಲಿ ಅದು ಆರ್.ಎನ್.ಎ. ಆಗಿರುತ್ತದೆ (ಆರ್.ಎನ್.ಎ. ವೈರಸ್). ಈಗ ನಾವು ಮಾತನಾಡುತ್ತಿರುವ ಕೊರೊನಾವೈರಸ್ ಒಂದು  ಆರ್.ಎನ್.ಎ.   ವೈರಸ್.  ಜೀವಕೋಶದಲ್ಲಿರುವ ಪ್ಲಾಸ್ಮಾ ಪೊರೆ ವೈರಾಣುಗಳು ಸೇರಿದಂತೆ  ಯಾವುದೇ ಬಾಹ್ಯ ವಸ್ತುಗಳನ್ನು ಸುಲಭವಾಗಿ ಒಳ ಪ್ರವೇಶಿಸಲು ಬಿಡುವುದಿಲ್ಲ. ಆದರೆ “ಚಾಪೆ ಕೆಳಗೆ ತೂರಿದರೆ ನಾ ರಂಗೋಲಿ ಕೆಳಗೆ’  ಅನ್ನುವಂತೆ ಪ್ಲಾಸ್ಮಾ ಪೊರೆಯನ್ನು ಬೇಧಿಸಿ  ಜೀವಕೋಶದೊಳಗೆ ತೂರಿಕೊಳ್ಳಲು  ಸಾರ್ಸ್ ಮತ್ತು ಕೋವಿಡ್-19  ಉಂಟುಮಾಡುವ  ಕೊರೊನಾವೈರಸ್ ಗಳು ತಮ್ಮ ಹೊರಮೈಯಲ್ಲಿ  ಗದೆ  ಆಕಾರದ  “ಸ್ಪೈಕ್” ಎಂಬ  ಗ್ಲೈಕೊಪ್ರೊಟೀನ್ ಹೊಂದಿರುತ್ತವೆ.  ಮೇಲೆ ಹೇಳಿರುವ ಬಲವಾದ  ಆಯುಧ ಅಂದರೆ ಇದೇ  “ಸ್ಪೈಕ್”.  ಭೀಮ-ದುರ್ಯೋಧನರು ತಮ್ಮ ಬಳಿಯಿದ್ದ ಗದೆಗಳನ್ನು ಹೋರಾಟಕ್ಕೆ ಬಳಸಿಕೊಂಡರೆ ಕೊರೊನಾವೈರಸ್ ಗಳು ತಮ್ಮಲ್ಲಿರುವ ಗದೆ (“ಸ್ಪೈಕ್”) ಗಳನ್ನು  ಹೋಸ್ಟ್ ಕೋಶದ ಒಳಗಡೆ  ಪ್ರವೇಶಿಸಲು ಉಪಯೋಗಿಸುತ್ತವೆ.
ಹೇಗೆ ಅಂತ ನೋಡೋಣ. ಶ್ವಾಸಕೋಶಗಳು, ಅಪಧಮನಿಗಳು, ಹೃದಯ, ಮೂತ್ರಪಿಂಡ ಮತ್ತು ಕರುಳಿನಲ್ಲಿರುವ ಕೋಶಗಳ ಪ್ಲಾಸ್ಮಾ ಪೊರೆಯ ಹೊರಗಿನ ಮೇಲ್ಮೈಗೆ ಅಂಟಿಕೊಂಡು  ರಕ್ತದೊತ್ತಡವನ್ನು ಕಡಿಮೆ ಮಾಡಲು ಒಂದು ಕಿಣ್ವವಿದೆ; ಅದರ ಹೆಸರು ‘ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ 2’ (ಸಂಕ್ಷಿಪ್ತವಾಗಿ, ಎಸಿಇ 2).  ಸಾರ್ಸ್ ಮತ್ತು ಕೊವಿಡ್ -19 ಮಾರಕ ರೋಗಗಳನ್ನು ಉಂಟು ಮಾಡುವ ಕೊರೊನಾವೈರಸ್‌ಗಳು  ಹೋಸ್ಟ್  ಕೋಶಗಳ ಒಳಗೆ ತೂರಿಕೊಳ್ಳಲು ಇದೇ ‘ಎಸಿಇ 2’ ಅನ್ನು ಪ್ರವೇಶ ಬಿಂದುವಾಗಿ ಬಳಸಿಕೊಳ್ಳುತ್ತವೆ.  ಬೀಗ ಹಾಕಿರುವ ಮನೆಯೊಳಗೆ ಪ್ರವೇಶಿಸಲು ಪೂರಕವಾದ ಕೀಲಿಕೈಯನ್ನು ಬಳಸಿ ಬೀಗ ತೆರೆದು ಪ್ರವೇಶಿಸಬೇಕು.  ಅಂತೆಯೇ ಎಸಿಇ -2  ಎಂಬ ಬೀಗವನ್ನು ತೆರೆಯಲು ಅದಕ್ಕೆ ಪೂರಕವಾದ   ಸ್ಪೈಕ್ ನ್ನು ಕೀಲಿಕೈ ಯಂತೆ ಬಳಸಿಕೊಂಡು ಒಳ ಪ್ರವೇಶಿಸುತ್ತದೆ. ಎಸಿಇ -2  ಮಾತ್ರವಲ್ಲದೆ ಲಿಪಿಡ್  ದ್ವಿ-ಪದರು ಪ್ಲಾಸ್ಮಾ ಪೊರೆಯ ಸುತ್ತಲೂ ಲಂಗರು ಹಾಕಿದ ಅನೇಕ ಇತರ ಕ್ರಿಯಾತ್ಮಕ ಪ್ರೋಟೀನ್ ಗಳಿವೆ. ಸಾರ್ಸ್ ಕಾಯಿಲೆಗೆ ಕಾರಣವಾಗಿರುವ  Sars-Cov ಮತ್ತು  ಕೋವಿಡ್ -19 ಉಂಟುಮಾಡುವ  Sars-Cov-2 ವೈರಾಣುಗಳು ಹೋಸ್ಟ್  ಕೋಶದೊಳಗೆ ಪ್ರವೇಶ ಪಡೆಯಲು ಎಸಿಇ -2   ಅನ್ನು ರಿಸೆಪ್ಟರ್ ಆಯ್ಕೆ ಮಾಡಿಕೊಂಡಿವೆ. ಒಳ ಪ್ರವೇಶ ಮಾಡಿದ ವೈರಸ್ ತನ್ನ ಅಂಗಿಯನ್ನು  ಕಳಚಿ ಅಂದರೆ ಹೊರಕವಚವನ್ನು  ಚಿದ್ರಿಸಿ ತನ್ನಲ್ಲಿರುವ ಆರ್.ಎನ್.ಎ.  ಬಿಡುಗಡೆಗೊಳಿಸುತ್ತದೆ. ಪ್ರೋಟೀನ್ ಗಳನ್ನು ಉತ್ಪತ್ತಿ ಮಾಡುವ   ರೈಬೋಸೋಮ್ ಎಂಬ ಅಂಗಾಂಶದೊಳಗೆ  ‘ಆರ್ ಎನ್ಎ’   ಅನ್ನು  ಅಂಟಿಸಿ ತನಗೆ ಬೇಕಾದ ಪ್ರೊಟೀನ್ ಗಳನ್ನು ತಯಾರಿಸಿಕೊಳ್ಳುತ್ತವೆ.  ಸಾಕಷ್ಟು ಪ್ರಮಾಣದಲ್ಲಿ  ಪ್ರೋಟೀನ್ ಗಳು ಉತ್ಪತ್ತಿಯಾದ  ನಂತರ  ‘ಆರ್ ಎನ್ಎ   ಅವಲಂಬಿತ ಆರ್ ಎನ್ಎ  ಪಾಲಿಮರೇಸ್’   ಎಂಬ ಕಿಣ್ವದ ಸಹಾಯದಿಂದ  ಏಕ-ಎಳೆಯ ದಾರದಂತಿರುವ ತನ್ನ ‘ಆರ್.ಎನ್.ಎ. ಅನ್ನು ಸಾಕಷ್ಟು ಸಂಖ್ಯೆಯಲ್ಲಿ ಪಡಿಯಚ್ಚು ಮಾಡುತ್ತದೆ. ನಿಸರ್ಗದ ವೈಚಿತ್ರ್ಯವೆಂದರೆ ಒಮ್ಮೆ ಈ ವೈರಾಣುಗಳು ಒಳ ಪ್ರವೇಶಿಸಿದ ನಂತರ ಹೋಸ್ಟ್ ಕೋಶದ ಆಣ್ವಿಕ ಯಂತ್ರೋಪಕರಣಗಳನ್ನು ಅಪಹರಣ ಮಾಡುತ್ತವೆ! ಅಂದರೆ   ರೈಬೋಸೋಮ್, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್, ಗಾಲ್ಗಿ ಕಾಂಪ್ಲೆಕ್ಸ್ ಎಂಬ ಅಂಗಾಂಶಗಳನ್ನು ತಮ್ಮೆಡೆಗೆ ವಾಲಿಸಿಕೊಂಡು  ತಮಗೆ ಬೇಕಾದ ಅಣುಗಳನ್ನು  (ಆರ್.ಎನ್.ಎ.  ಮತ್ತು ಪ್ರೋಟೀನ್) ಉತ್ಪಾದಿಸಿ ಸರಿಯಾಗಿ ಒಂದಕ್ಕೊಂದು ಜೋಡಿಸಿಕೊಂಡು ಹೊಸ ವೈರಾಣುಗಳಾಗಿ ಹೊರಬರುತ್ತವೆ.  ತಮಗಿಂತ 10 ರಿಂದ 100 ಪಟ್ಟು ದೊಡ್ಡದಾದ  ಹೋಸ್ಟ್ ಕೋಶಗಳ  ಯಂತ್ರೋಪಕರಣಗಳನ್ನು  ಅಪಹರಿಸುವ ಅತ್ಯಂತ ಚಿಕ್ಕ ಗಾತ್ರದ ವೈರಾಣುಗಳ ಸಾಮರ್ಥ್ಯದ ಹಿಂದೆ ಇರುವ ರಹಸ್ಯ ವಿಜ್ಞಾನಿಗಳಿಗೆ ಇಂದಿಗೂ ಬಿಡಿಸಲಾಗದ ಗಂಟು.

ಕೊರೊನಾವೈರಸ್ ರೇಖಾಚಿತ್ರ ಚಿತ್ರ ಕೃಪೆ : ಸ್ಟ್ಯಾಡ್ಲರ್, ಕೆ (ಗ್ರಂಥಸೂಚಿ 3)

ಕೊರೊನಾ ವೈರಸ್ ರೇಖಾಚಿತ್ರ
ಚಿತ್ರ ಕೃಪೆ : ಸ್ಟ್ಯಾಡ್ಲರ್, ಕೆ (ಗ್ರಂಥಸೂಚಿ 3)

 
ಒಂದು ಹೋಸ್ಟ್ ಕೋಶದಿಂದ ಹತ್ತಾರು ಹೊಸ ವೈರಾಣುಗಳು ಹುಟ್ಟಿಕೊಳ್ಳುತ್ತವೆ.   ಜೀವಕೋಶಗಳಿಂದ ಹೊರಬರುವ ಹೊಸ ವೈರಲ್ ಕಣಗಳು ಇತರ ಕೋಶಗಳ ಸೋಂಕನ್ನು ಮುಂದುವರಿಸುತ್ತಾ  ಸಂಖ್ಯೆಯನ್ನು ವೃದ್ಧಿಸುತ್ತಾ ಹೋಗುತ್ತವೆ. ಕೆಲವೇ ದಿನಗಳಲ್ಲಿ ಒಂದು, ಹತ್ತು, ನೂರು, ಸಾವಿರ, ಲಕ್ಷ, ಕೋಟಿ ವೈರಲ್ ಕಣಗಳು ಉತ್ಪತ್ತಿಯಾಗುತ್ತವೆ. ಅದಕ್ಕೆ ತಕ್ಕಂತೆ ದೇಹವು ಪ್ರತಿಕ್ರಯಿಸಿ  ಹಲವಾರು ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ಸೋಂಕಿತ ವ್ಯಕ್ತಿಯ ರೋಗನಿರೋಧಕ ಶಕ್ತಿ ಸಾಕಷ್ಟು ಪ್ರಬಲವಾಗಿದ್ದರೆ, ವೈರಲ್ ಕಣಗಳು ನಾಶವಾಗುತ್ತವೆ.  ದೇಹದ ರೋಗನಿರೋಧಕ ಶಕ್ತಿಯು ವೃದ್ಧಿಸುತ್ತಿರುವ ವೈರಾಣುಗಳನ್ನು ಹತೋಟಿಗೆ ತರಲು ವಿಫಲವಾದರೆ, ಜ್ವರ, ನೆಗಡಿ, ದಣಿವು, ಗಂಟಲು ನೋವು, ಒಣ ಕೆಮ್ಮು, ಅತಿಸಾರ, ಇತ್ಯಾದಿ ಕೋವಿಡ್-19 ರ ರೋಗಲಕ್ಷಣಗಳು ಕ್ರಮೇಣ ಒಂದೊಂದಾಗಿ ಪ್ರಾರಂಭವಾಗುತ್ತವೆ. ಈ ಲಕ್ಷಣಗಳು ಆರಂಭದಲ್ಲಿ  ಸೌಮ್ಯವಾಗಿದ್ದು ಕ್ರಮೇಣ ತೀವ್ರತೆಯನ್ನು ಪಡೆಯುತ್ತವೆ (ಇದು ಇನ್ನೂ ತೀವ್ರವಾಗಿ ಹೋದರೆ, ರೋಗಿಯು ನ್ಯುಮೋನಿಯಾ ಮತ್ತು ಬಹು-ಅಂಗಗಳ ವೈಫಲ್ಯಕ್ಕೆ ತುತ್ತಾಗುತ್ತಾರೆ). ಇಂತಹ ಲಕ್ಷಣಗಳು ಕಂಡು ಬಂದ  ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಬುದ್ಧಿವಂತರ ಲಕ್ಷ್ಮಣ.  ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ  ಸೋಂಕಿತ ವ್ಯಕ್ತಿಗಳು  ಗುಣಮುಖರಾಗುತ್ತಾರೆ.  ಸುಮಾರು 80% ಜನರು ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲದೆಯೂ ರೋಗದಿಂದ ಚೇತರಿಸಿಕೊಳ್ಳುತ್ತಾರೆ ಸಮೀಕ್ಷೆಯಿಂದ ತಿಳಿದುಬಂದಿದೆ. ವಯಸ್ಸಾದವರು, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗಳು, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿರುವವರು ಗಂಭೀರ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಧೂಮಪಾನಿಗಳ ಶ್ವಾಸಕೋಶವು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಈಗಾಗಲೇ ದುರ್ಬಲಗೊಂಡಿರುವುದರಿಂದ, ಇನ್ನೂ ತೀವ್ರವಾಗಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗಬಹುದು.
ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ‘ ಇಂಕುಬೇಶನ್ ಅವಧಿ’   ಇರುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾದ ಕ್ಷಣ ಮತ್ತು ರೋಗದ ಲಕ್ಷಣಗಳು ಪ್ರಾರಂಭವಾಗುವ ನಡುವಿನ ಸಮಯದ ಅಂತರ. ಕೋವಿಡ್-19 ಗೆ ಕಾರಣವಾಗುವ ಕೊರೊನಾವೈರಸ್ ‘ಇಂಕುಬೇಶನ್ ಅವಧಿ’  1 ರಿಂದ 14  ದಿನಗಳು  (ಸರಾಸರಿ ಐದು ದಿನಗಳು). ಇದರರ್ಥ ರೋಗಲಕ್ಷಣಗಳು ಸೋಂಕು ಉಂಟಾದ ದಿನದಂದೇ  ಅಥವಾ ಸೋಂಕಿನ 14 ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು.  ಕೋವಿಡ್ -19 ವೇಗವಾಗಿ ಹರಡಲು ಇದೂ ಒಂದು ಮುಖ್ಯ ಕಾರಣವಾಗಿದೆ. ಈ ಇಂಕುಬೇಶನ್ ಅವಧಿಯಲ್ಲಿ, ಸೋಂಕಿತ ವ್ಯಕ್ತಿಗಳಿಂದ  ಅನೇಕ ಜನರಿಗೆ ಹರಡುವ ಸಾಧ್ಯತೆ ಇದೆ. ಏಕೆಂದರೆ ಸೋಂಕಿತ ವ್ಯಕ್ತಿಗೇ  ತನ್ನೊಳಗೆ ಅಪಾಯಕಾರಿ  ವೈರಸ್ ಒಂದು ಸೇರಿ ಆಟ ಶುರು ಮಾಡಿದೆ ಎಂದು ಗೊತ್ತಿರುವುದಿಲ್ಲ.  ಮೂಗು ಅಥವಾ ಬಾಯಿಯಿಂದ ಸಣ್ಣ ಹನಿಗಳ ಮೂಲಕ, ಕೆಮ್ಮು ಮತ್ತು ಸೀನುವಾಗ,  ರೋಗಾಣುಗಳು ನೇರವಾಗಿ ಹರಡುತ್ತವೆ.  ಈ ಕಾರಣಕ್ಕಾಗಿ, ವಿಶ್ವ ಆರೋಗ್ಯ ಸಂಸ್ಥೆ (W.H.O.) ಮತ್ತು ಸರ್ಕಾರಗಳು ಸಾಮಾಜಿಕ ಅಂತರವನ್ನು (ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 3 ಅಡಿ ದೂರ) ಕಾಪಾಡಿಕೊಳ್ಳಲು ಜನರನ್ನು ಒತ್ತಾಯಿಸುತ್ತಿರುವುದು. ಪರೋಕ್ಷವಾಗಿ, ಸೋಂಕಿತ ವ್ಯಕ್ತಿಗಳು ಮುಟ್ಟಿದ ಕಲುಷಿತ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಬಳಸುವ ಮೂಲಕ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆದುದರಿಂದ, ಮುಂಜಾಗ್ರತಾ ಕ್ರಮವಾಗಿ ನಾವು ಆಗಾಗ್ಗೆ ಸಾಬೂನಿನಿಂದ ಕೈ ಮತ್ತು ಮುಖ ತೊಳೆಯುತ್ತಿರಬೇಕು. ಲಭ್ಯವಿದ್ದರೆ ಸ್ಯಾನಿಟೈಜರ್ ಬಳಸೋಣ  (70% ಆಲ್ಕೋಹಾಲ್ ಒಳಗೊಂಡಿರುವ ಸ್ಯಾನಿಟೈಜರ್ ರೋಗಾಣುಗಳ ಹೊರ ಕವಚದ ಲಿಪಿಡ್ ದ್ವಿ-ಪದರವನ್ನು ಹಾನಿಗೊಳಿಸುವುದರಿಂದ,  ಕೈಗಳನ್ನು ಸ್ವಚ್ ಗೊಳಿಸಲು ಹೆಚ್ಚು ಪರಿಣಾಮಕಾರಿಯಾಗಿದೆ). ಹಾಗೆಯೇ,  ಕಣ್ಣು, ಮೂಗು ಮತ್ತು ಬಾಯಿಗಳಿಂದ ವೈರಾಣುಗಳು ಪ್ರವೇಶ ಪಡೆಯುವುದರಿಂದ ಪದೇಪದೇ ಮುಟ್ಟುವುದನ್ನು ತಪ್ಪಿಸಬೇಕು. ನಮ್ಮನ್ನು ಮತ್ತು ನಮ್ಮವರನ್ನು ರಕ್ಷಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು  ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಎಲ್ಲಾ ಮಾಹಿತಿಗಳನ್ನು ನಂಬಿ ಮೂರ್ಖರಾಗದಿರೋಣ.
ಈ ಕೊರೊನಾವೈರಸ್  ಒಬ್ಬರಿಂದ ಒಬ್ಬರಿಗೆ ಘಾತೀಯ ಪ್ರಮಾಣದಲ್ಲಿ ಹರಡುತ್ತದೆ. ಉದಾಹರಣೆಗೆ ಒಂದನೇ ಸುತ್ತಿನಲ್ಲಿ ಒಬ್ಬ ಸೋಂಕಿತ ವ್ಯಕ್ತಿಯಿಂದ ಕನಿಷ್ಠ 3 ಜನರಿಗೆ ಸೋಂಕು ಉಂಟಾದರೆ, ಹತ್ತನೇ ಸುತ್ತಿನಲ್ಲಿ 5,9049 ಜನರಿಗೆ ಸೋಂಕು ಹರಡಿರುತ್ತದೆ. ಅದೇ    ನೂರನೇ ಸುತ್ತಿನಲ್ಲಿ ಎಷ್ಟಾಗುತ್ತದೆ ಎಂದು ಉಹಿಸಲು ಸಾಧ್ಯವಿಲ್ಲ (3100 = ???). ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಆಗಿರುವುದು ಇದನ್ನು ತಡೆಯಲೆಂದೇ;  ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾವೈರಸ್ ಹಾವಳಿಯನ್ನು ಹತೋಟಿಗೆ ತರಲು ಲಾಕ್ಡೌನ್  ಒಂದೇ ಪರಿಹಾರ ಸೂತ್ರ. ನಮ್ಮೆದುರು ವಿಲನ್ ಆಗಿ ನಿಂತಿರುವ ಕೊರೊನಾವೈರಸ್ ಗೆ ‘ದೊಡ್ಡಣ್ಣ’ ಸಣ್ಣಣ್ಣ, ಮಂತ್ರಿಮಹೋದಯರು, ಸೆಲೆಬ್ರಿಟಿಗಳು, ಶ್ರೀಮಂತ, ಬಡವ,  ಬಲ್ಲಿದ ಎಂಬ ಯಾವ ಬೇದಭಾವ ಇಲ್ಲ. ಎಚ್ಚರ ತಪ್ಪಿದರೆ ಯಾರು ಬೇಕಾದರೂ ಇದರ ಸೋಂಕಿಗೆ ಒಳಗಾಗಬಹುದು.
ಒಂದು ವಸ್ತು ವೈರಸ್ ಕಣಗಳಿಂದ ಕಲುಷಿತವಾಗಿದೆ. ಆ ವಸ್ತುವಿನ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದರೆ  ‘ಓ ಇಲ್ಲೊಬ್ಬ ಅಸಾಮಿ ಸಿಕ್ಕಿದ್ದಾನೆ ಹೋಗಿ ತಗಲಾಕೋಣ’ ಎಂದು  ಆ ವೈರಸ್,  ಸೋಂಕು ಉಂಟು ಮಾಡುವುದಿಲ್ಲ. ಏಕೆಂದರೆ ವೈರಾಣುಗಳಿಗೆ ನಮಗೆ ಇರುವಂತೆ ಮೆದುಳು ಇಲ್ಲ ಬುದ್ಧಿವಂತಿಕೆ ಅಂತೂ ಇಲ್ಲವೇ ಇಲ್ಲ. ಆದರೆ ಆ ಆಸಾಮಿ ಗೊತ್ತಿಲ್ಲದೆ ಕಲುಷಿತವಾಗಿರುವ ವಸ್ತುವನ್ನು ಸ್ಪರ್ಶಿಸಿ ಅದೇ ಕೈಯಿಂದ (ಶುಚಿಗೊಳಿಸದೆ)  ಊಟ ತಿಂಡಿ ಮಾಡಿದರೆ,  ಕಣ್ಣು ಮೂಗು ಬಾಯಿ ಮುಟ್ಟಿಕೊಂಡರೆ ಸೋಂಕು ಉಂಟಾಗುತ್ತದೆ.   ಹಾಗೆಯೇ ಇನ್ನೊಂದು ಮುಖ್ಯವಾದ ವಿಷಯ,  ‘ಬರೆದಿದ್ದೆಲ್ಲ ಕವನವಲ್ಲ, ಕೆಮ್ಮಿದ್ದೆಲ್ಲ ಕೊರೊನಾ ಅಲ್ಲ’ ಅನ್ನುವ ಇತ್ತೀಚಿನ ಒಂದು ಶಾಯರಿಯಂತೆ,  ಒಂದು ಕೆಮ್ಮು, ಒಂದು ಸೀನು ಬಂದಕೂಡಲೇ “ಅಯ್ಯೋ ನನಗೆ ಕೊರೊನಾ ಬಂದಿದೆ”  ಎಂದು ಆತಂಕಕ್ಕೆ ಒಳಗಾಗಬಾರದು.  ಯಾವುದಕ್ಕೂ ವೈದ್ಯಕೀಯ ತಪಾಸಣೆ ಮಾಡಿಸಿ ನಿರಾಳರಾಗೋಣ.
ಭಾರತದಲ್ಲಿಯೂ ಸೇರಿದಂತೆ, ಕೊರೊನಾವೈರಸ್ ವಿರುದ್ಧ ಔಷಧಿ  ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಶ್ವಾದ್ಯಂತ ತ್ವರಿತಗತಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇದು ಅನೇಕ ಕಠಿಣ ಪರೀಕ್ಷೆಗಳು ಮತ್ತು ಕ್ಲಿನಿಕಲ್ ಪ್ರಯೋಗಗಳನ್ನು ದಾಟಿ ಬರಬೇಕಾಗಿರುವುದರಿಂದ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಸದ್ಯ ವಿಶ್ವಾದ್ಯಂತ ವೈದ್ಯಕೀಯ ತುರ್ತುಸ್ಥಿತಿ ಇರುವುದರಿಂದ, ಹೊಸ ಉತ್ಪನ್ನಗಳನ್ನು ಬೇಗನೆ ಬಿಡುಗಡೆ ಮಾಡಲು ಅವಕಾಶವಿದೆ. ಮಾರಕ ರೋಗ ಕೋವಿಡ್ -19 ಗುಣಪಡಿಸಲು ಶಕ್ತಿಯುತ  ಔಷಧಿ ಮತ್ತು  ಬಾರದಂತೆ ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮಾಡುತ್ತಿರುವ ಪ್ರಯತ್ನಗಳು ಆದಷ್ಟು ಬೇಗ ಯಶಸ್ವಿಯಾಗಲಿ ಎಂದು ಹಾರೈಸೋಣ. ಅಲ್ಲಿಯವರೆಗೆ ನಮ್ಮ ಜಾಗ್ರತೆ ನಾವು ಮಾಡೋಣ,  ವೇಗವಾಗಿ ಹಬ್ಬುತ್ತಿರುವ ಕೊರೊನಾವೈರಸ್ ಎಂಬ ಹೆಮ್ಮಾರಿಯನ್ನು ಓಡಿಸಲು ಸರ್ಕಾರದ ಜೊತೆ ಕೈಜೋಡಿಸೋಣ.
ಕೊನೆಯದಾಗಿ,  ಸೋಂಕಿತ ವ್ಯಕ್ತಿಗಳ ತಪಾಸಣೆ, ಚಿಕಿತ್ಸೆ,  ಆರೈಕೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು,  ಹಾಗೂ ಎಲ್ಲಾ ಸೇವಾರ್ಥಿಗಳಿಗೆ ಒಂದು ದೊಡ್ಡ ಹ್ಯಾಟ್ಸಾಫ್ ಹೇಳೋಣ.

ಕಳೆದ 3-4 ತಿಂಗಳುಗಳ ಹಿಂದಷ್ಟೇ ‘ಕೊರೊನಾ’ ಎಂಬ ಹೆಸರಿನ ವೈರಸ್ ಮನೆಮಾತಾಗಿದ್ದರೂ 1930 ರಲ್ಲೇ  ಇದರ ಅಸ್ತಿತ್ವವನ್ನು  ಪತ್ತೆಹಚ್ಚಲಾಗಿತ್ತು. ಉಸಿರಾಟ ಸೋಂಕಿನಿಂದ ಸಾಯುತ್ತಿದ್ದ ಸಾಕು ಕೋಳಿಯಲ್ಲಿ  ಇದನ್ನು ಮೊದಲು ಪತ್ತೆಹಚ್ಚಲಾಗಿತ್ತು. ಮನುಷ್ಯರಲ್ಲಿ ಶೀತ ನೆಗಡಿ ಉಂಟುಮಾಡುವ ಕೊರೊನಾವೈರಸ್ ಅನ್ನು  1960 ರಲ್ಲಿ ಗುರುತಿಸಲಾಯಿತು.  ಜಗತ್ತಿನಾದ್ಯಂತ ಇಷ್ಟೆಲ್ಲಾ ರಂಪಾರಾಮಾಯಣ ಮಾಡುತ್ತಿರುವ  ಈ ಕ್ಷುದ್ರ  ವೈರಸ್ ಗೆ ‘ಕೊರೊನಾ’ ಎಂಬ ಸುಂದರ ಹೆಸರು ಬೇಕಿತ್ತೇ..? ಆ ಹೆಸರಿಗೂ ಒಂದು ಹಿನ್ನೆಲೆ ಇದೆ. ವಿಜ್ಞಾನಿಗಳು 2-ಆಯಾಮದ ವಿದ್ಯುನ್ಮಾನ ಸೂಕ್ಷ್ಮದರ್ಶಕದಲ್ಲಿ ಈ ವೈರಸ್ ನ್ನು ಪರೀಕ್ಷಿಸಿದಾಗ ಗೋಳಾಕಾರದ ಅದರ  ಹೊರಮೈ ಸುತ್ತಲೂ ಕಿರೀಟ ಆಕಾರದ ಅಥವಾ ಸೌರ ಕರೋನ (ಖಗ್ರಾಸ ಸೂರ್ಯಗ್ರಹಣದ ಸಮಯದಲ್ಲಿ ಕಂಡುಬರುವ ನೋಟ) ವನ್ನು ನೆನಪಿಸುವ ವಿಶಿಷ್ಟ  ರಚನೆ ಕಂಡುಬಂತು.  ಲ್ಯಾಟಿನ್ ಭಾಷೆಯಲ್ಲಿ ಕೊರೊನಾ ಅಂದರೆ ಕಿರೀಟ. ಈ ವಿಶಿಷ್ಟವಾದ ನೋಟ ವೈರಾಣುಗಳಲ್ಲಿ ಮಾತ್ರ  ಕಂಡುಬಂದಿರುವುದರಿಂದ ಅವುಗಳಿಗೆ ಕೊರೊನಾವೈರಸ್  ಎಂದೇ ಹೆಸರಿಡಲಾಯಿತು.

 

2002-2004ರಲ್ಲಿ, 29 ದೇಶಗಳಲ್ಲಿ ಸಾವಿರಾರು ಜನರಿಗೆ ಸಾರ್ಸ್ (ಸಿವಿಯರ್ ಎಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್’  – ವಿಪರೀತ ತೀವ್ರತೆಯುಳ್ಳ ಉಸಿರಾಟದ ಕಾಯಿಲೆ) ಉಂಟುಮಾಡಿ ಸುಮಾರು 800 ಜನರ ಸಾವಿಗೆ ಕಾರಣವಾಗಿರುವುದು ಕೂಡ ಕೊರೊನಾವೈರಸ್ (SARS-CoV). ಆದರೆ ಈಗ ಬಂದಿರುವ ಹೊಸ ತಳಿಯ  ಕೊರೊನಾವೈರಸ್ (SARS-CoV-2) ಸಾರ್ಸ್ ವೈರಸ್ (SARS-CoV) ಗಿಂತಲೂ ಇನ್ನಷ್ಟು ಅಪಾಯಕಾರಿ. ಕಾರಣ ವಿಕಸನ ಪ್ರಕ್ರಿಯೆಯಲ್ಲಿ  ಇದು ಇನ್ನಷ್ಟು ಶಕ್ತಿಶಾಲಿಯಾಗಿ ಮೂಡಿಬಂದಿದೆ.  ಇತ್ತೀಚೆಗೆ ಕೋವಿಡ್ -19 ಕಾರಣವಾಗಿರುವ ವೈರಾಣುವಿನ 3-ಆಯಾಮದ ರಚನೆಯನ್ನು ವಿವರವಾಗಿ ವಿಶ್ಲೇಷಿಸಿದಾಗ  ಗದೆ ಆಕಾರದ “ಸ್ಪೈಕ್ ಸಾರ್ಸ್ ಕೊರೊನಾವೈರಸ್   ಗಿಂತ  ನಾಲ್ಕು ಪಟ್ಟು ಹೆಚ್ಚು ಬಲವಾಗಿ  ಮಾನವ ಜೀವಕೋಶಗಳಲ್ಲಿರುವ ಎಸಿಇ-2 ಗೆ ಅಂಟಿ ಸೋಂಕನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ.   ಅದಕ್ಕಾಗಿಯೇ, ವಿಜ್ಞಾನಿಗಳು ಆ ಸ್ಪೈಕ್ ಅನ್ನು ಗುರಿಯಾಗಿಸಿ ಔಷಧಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ವೈರಾಣುವಿನ ಸ್ಪೈಕ್ ಹಾನಿಗೊಳಿಸಿದರೆ ಅಥವಾ ಅದು ಎಸಿಇ-2 ಗೆ ಅಂಟದಂತೆ ತಡೆದು ನಿಲ್ಲಿಸಿದರೆ, ಕೋವಿಡ್ -19 ಪರಿಣಾಮಕಾರಿಯಾಗಿ ಗುಣಪಡಿಸಬಹುದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

 

ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬುತ್ತಿರುವ ಹೊಸ ತಳಿಯ ಕೊರೊನಾವೈರಸ್ ಇದ್ದಕ್ಕಿದ್ದಂತೆ ಡಿಸೆಂಬರ್ 2019ರಲ್ಲಿ ಉದ್ಭವವಾಗಿದ್ದು ಹೇಗೆ; ಅಲ್ಲಿ ತನಕ ಇದು ಎಲ್ಲಿ ಅಡಗಿತ್ತು? ಮನುಷ್ಯರಂತೆ ಸಸ್ತನಿ ಆಗಿರುವ ಬಾವಲಿಗಳಲ್ಲಿಯೂ  ಕೊರೊನಾವೈರಸ್ ಇದೆ.  ಈಗ ಬಂದಿರುವ ಕೊರೊನಾವೈರಸ್ ಬಾವಲಿ ಗಳಲ್ಲಿರುವ ವೈರಸ್ ಗೆ 96% ಹೋಲಿಕೆಯನ್ನು ಹೊಂದಿದೆ.  ಆದ್ದರಿಂದ ಇದು ಬಾವಲಿಗಳಿಂದ  ಹುಟ್ಟಿಕೊಂಡಿದೆ ಎಂದು ಊಹಿಸಲಾಗಿದೆ. ಇರುವೆ ಭಕ್ಷಕ (ಪ್ಯಾಂಗೊಲಿನ್) ಕೂಡ ಇದೇ ತರನಾದ ವೈರಸ್ ಇರುವುದು ಪತ್ತೆಹಚ್ಚಲಾಗಿದೆ.  ಬಾವಲಿಗಳಿಂದ ನೇರವಾಗಿ ಅಥವಾ ಬಾವಲಿಗಳಿಂದ ಸೋಂಕಿಗೆ ಒಳಗಾದ ಪ್ಯಾಂಗೊಲಿನ್ ಮೂಲಕವೂ ಮಾನವನ ದೇಹದೊಳಗೆ ಈ ಕೊರೊನಾವೈರಸ್ ಪ್ರವೇಶ ಪಡೆದಿರಬಹುದು ಎಂದು ಇತ್ತೀಚಿನ ಅಧ್ಯಯನವು ತಿಳಿಸುತ್ತದೆ. ಮನುಷ್ಯರಿಗೆ ಸೋಂಕು ತಗಲುವ ಮೊದಲು, ಈ ಪ್ರಾಣಿಗಳಲ್ಲಿ ಮುಟೇಶನ್ ಮುಖಾಂತರ ರೂಪಾಂತರಗೊಂಡು ಹೊಸ ತಳಿಯಾಗಿ ವಕ್ಕರಿಸಿ ಶರವೇಗದಲ್ಲಿ ಒಬ್ಬರಿಂದ ಒಬ್ಬರಿಗೆ ಹೆಚ್ಚು ಸುಲಭವಾಗಿ ಹರಡಲು ಅವಕಾಶ ಉಂಟಾಯಿತು. ಚೀನಾದಲ್ಲಿ ಬಾವಲಿ ಮತ್ತು ಪ್ಯಾಂಗೊಲಿನ್ ಎರಡನ್ನು ಕೂಡ ಆಹಾರವಾಗಿ ಬಳಸುತ್ತಾರೆ. ಹಾವು, ಮುಂಗುಸಿ,  ಪಕ್ಷಿ, ಚೇಳು, ಎರೆಹುಳು, ಕಪ್ಪೆ, ಕೀಟ ಇಂತಹ ಇನ್ನೂ ಅನೇಕ ವನ್ಯ ಪ್ರಾಣಿಗಳನ್ನು ಅವುಗಳ ಪಾಡಿಗೆ ಬದುಕಲು ಬಿಡದೇ ಆಹಾರಕ್ಕಾಗಿ ಬೇಟೆಯಾಡಿದರೆ ಏನು ಅನಾಹುತ ಆಗುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

 

ಮಾಧ್ಯಮಗಳಲ್ಲಿ ಹೊಸ ತಳಿಯ ಕೊರೊನಾವೈರಸ್ ಸೃಷ್ಟಿಸಿದ ಅನಾಹುತಗಳನ್ನು ಪ್ರಸ್ತುತಪಡಿಸುವಾಗ ಕೆಲವೊಮ್ಮೆ ‘ಕೋವಿಡ್-19’,  ಇನ್ನು ಕೆಲವೊಮ್ಮೆ ‘ಕೊರೊನಾವೈರಸ್’ ಎನ್ನಲಾಗುತ್ತದೆ.  ಏನಿದು ಎರಡೆರಡು ಹೆಸರು; ಕೆಲವರಿಗೆ ಗೊಂದಲಕ್ಕೀಡುಮಾಡಬಹುದು. ‘ಕೋವಿಡ್-19’ ಇದು ಹೊಸ ರೂಪ ತಾಳಿರುವ ಕೊರೊನಾವೈರಸ್ ಸೋಂಕಿನಿಂದ ಉಂಟಾಗುವ ರೋಗಕ್ಕೆ ವಿಶ್ವಆರೋಗ್ಯ ಸಂಸ್ಥೆ ಇಟ್ಟಿರುವ ಹೆಸರು. ‘ಕೋವಿಡ್-19’ ಇದರ ವಿಸ್ತೃತ ರೂಪ ‘ಕೊರೊನಾವೈರಸ್ ಡಿಸೀಸ್ – 2019.     ಕನ್ನಡದಲ್ಲಿ ‘ಕೊರೊನಾ ವೈರಸ್ ರೋಗ -19’ ಎಂದು ಹೆಸರಿಸಬಹುದು. ಚೀನಾದ ವುಹಾನ್ ನಗರದಲ್ಲಿ 2019 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಲಾಯಿತು.  ಪ್ರಸ್ತುತ  ವಿಶ್ವದಾದ್ಯಂತ ಸಮಸ್ಯೆಯನ್ನು ತಂದೊಡ್ಡಿರುವ ಹೊಸ ತಳಿಯ ಕೊರೊನಾವೈರಸ್ ನ  ನಿಜವಾದ  ನಾಮಧೇಯ  ‘ಸಿವಿಯರ್ ಎಕ್ಯೂಟ್ ರೆಸ್ಪಿರೇಟರಿ  ಸಿಂಡ್ರೋಮ್ ಕೊರೊನಾವೈರಸ್ -2’.  ಸಂಕ್ಷಿಪ್ತವಾಗಿ, SARS CoV-2.  ವುಹಾನ್‌ನ ಸೆಂಟ್ರಲ್ ಆಸ್ಪತ್ರೆಯ ವೈದ್ಯರಾದ ಡಾ. ಲಿ ವೆನ್ಲಿಯಾಂಗ್, ಕೊರೊನಾವೈರಸ್ ನಿಂದ  ಹರಡುವ ಮಾರಣಾಂತಿಕ ಸಾರ್ಸ್ ಕಾಯಿಲೆ ಬಗ್ಗೆ ಡಿಸೆಂಬರ್ ತಿಂಗಳಲ್ಲೇ  ಅಲ್ಲಿ ಜಾಗೃತಿ ಮೂಡಿಸಿದ್ದರು. ಅದೇ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ  7, 2020  ರಂದು ಡಾ. ಲಿ ವೆನ್ಲಿಯಾಂಗ್ ನಿಧನರಾಗಿರುವುದು ವಿಪರ್ಯಾಸದ ಸಂಗತಿ.  ಮುಂಬರುವ ಅಪಾಯದ ಮುನ್ಸೂಚನೆಯನ್ನು ಅಲ್ಲಿನ ಸರ್ಕಾರ  ನಿರ್ಲಕ್ಷಿಸಿರುವುದು ಇನ್ನೂ ವಿಪರ್ಯಾಸ. ಅಪಾಯದ ಮುನ್ಸೂಚನೆಯನ್ನು ಅರಿತು ಆವಾಗಲೇ  ತುರ್ತು  ಕ್ರಮ ಕೈಗೊಂಡಿದ್ದರೆ,  ಇವತ್ತು ಈ ಮಟ್ಟಕ್ಕೆ ಕಾಳ್ಗಿಚ್ಚಿನಂತೆ  ಹಬ್ಬಿ ಜಗತ್ತಿನಾದ್ಯಂತ ಆಗುತ್ತಿರುವ ದುರಂತವನ್ನು ತಪ್ಪಿಸಬಹುದಿತ್ತು. ಕಾಲ ಮೀರಿ ಹೋಗಿದೆ.

 

ವೈರಾಣುಗಳ ಬಗ್ಗೆಯೇ ಸಂಶೋಧನೆ ಮಾಡಲು ಇರುವಂತ ಸಂಸ್ಥೆ  ‘ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ’   ಇಲ್ಲಿ ಜೈವಿಕ (ಕುಲಾಂತರಿ) ತಂತ್ರಜ್ಞಾನದ ಮೂಲಕ ಹೊಸ ತಳಿಯನ್ನು (ಜೈವಿಕ ಆಯುಧ..?) ಸೃಷ್ಟಿಸಿ ಆಕಸ್ಮಿಕವಾಗಿ ಅದು ಜನಸಂದಣಿಗೆ ಬಿಡುಗಡೆಗೊಂಡಿ(ಗೊಳಿಸ)ರಬಹುದು ಎಂದು ಚೀನಾ ಸರಕಾರದ ವಿರುದ್ಧ ಜಗತ್ತಿನಾದ್ಯಂತ ಬಿಂಬಿತವಾದ  ಅನುಮಾನವನ್ನು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು  (ಇಮ್ಯುನೊಲಾಜಿ ಮತ್ತು ಮೈಕ್ರೋಬಯಾಲಜಿ ಇಲಾಖೆ, ದಿ ಸ್ಕ್ರಿಪ್ಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಾ ಜೊಲ್ಲಾ, ಸಿಎ, ಯುಎಸ್ಎ, ಇಲ್ಲಿಯ ಡಾ. ಕ್ರಿಸ್ಟಿಯನ್ ಜಿ. ಆಂಡರ್ಸನ್  ನೇತೃತ್ವದ ತಂಡ) ಉನ್ನತಮಟ್ಟದ ಸಂಶೋಧನೆ ನಡೆಸಿ ‘ಹೊಸ ತಳಿಯ ಕೊರೊನಾವೈರಸ್ ಮಾನವ ನಿರ್ಮಿತ ಅಲ್ಲ,  ಬದಲಾಗಿ ನೈಸರ್ಗಿಕವಾಗಿ ರೂಪಾಂತರಗೊಂಡು ಪ್ರಾಣಿಯಿಂದ ಮಾನವ ದೇಹ ಸೇರಿರುವುದು’   ಎಂದು ನಿರೂಪಿಸಿರುವುದು ಚೀನಾ ಸರಕಾರಕ್ಕೆ ಸಮಾಧಾನ ತಂದಿರಬಹುದು (ಈ ಸಂಶೋಧನಾ ವರದಿಯು ಮಾರ್ಚ್ 2020 ರ ಸಂಚಿಕೆಯ ‘ನೇಚರ್ ಮೆಡಿಸಿನ್’ ನಿಯತಕಾಲಿಕದಲ್ಲಿ  ಪ್ರಕಟವಾಗಿದೆ). ಆದಾಗ್ಯೂ, ಚೀನಾ ಸರ್ಕಾರವು ಆರಂಭದಲ್ಲಿ ಅಪಾಯಕಾರಿ ಸಾಂಕ್ರಮಿಕ ರೋಗದ ಬಗ್ಗೆ ಗಮನಕ್ಕೆ ತಂದ ಅಲ್ಲಿನ ವೈದ್ಯರನ್ನು ಖಳನಾಯಕನನ್ನಾಗಿ ಮಾಡಿರುವುದು ಹಾಗೂ ವಿಶ್ವ ಆರೋಗ್ಯ ಸಂಸ್ಥೆಗೆ ತಪ್ಪು ಮಾಹಿತಿ ನೀಡಿ ಇಡೀ ಜಗತ್ತಿನ ದಾರಿತಪ್ಪಿಸಿರುವುದು ಅಕ್ಷಮ್ಯ ಅಪರಾಧ.
ಎಷ್ಟೆಲ್ಲ ತಂತ್ರಜ್ಞಾನಗಳು, ಅತ್ಯುನ್ನತ ವೈಜ್ಞಾನಿಕ ಆವಿಷ್ಕಾರಗಳು,  ಇರುವಾಗಲೂ ಕೊರೊನಾವೈರಸ್ ವಿಶ್ವದಾದ್ಯಂತ ಮಾಡುತ್ತಿರುವ ರಂಪಾಟ ನೋಡಿದರೆ ನಿಸರ್ಗದ ಸೃಷ್ಟಿ-ಸ್ಥಿತಿ-ಲಯ ನಿಯಮದ ಎದುರು ಮನುಷ್ಯರ ಆಟ ಏನೂ ನಡೆಯದು ಎಂದು ಕಿವಿಹಿಂಡಿ ಹೇಳುವಂತಿದೆ.

 

ಕೊರೊನಾವೈರಸ್ ರೇಖಾಚಿತ್ರ
ಚಿತ್ರ ಕೃಪೆ : ಸ್ಟ್ಯಾಡ್ಲರ್, ಕೆ (ಗ್ರಂಥಸೂಚಿ 3)
 

ಗ್ರಂಥಸೂಚಿ :

 1. Andersen, K. G., Rambaut, A., Lipkin, W. I., Holmes, E. C., & Garry, R. F. (2020). The proximal origin of SARS-CoV-2. Nature Medicine, 1-3.
 2. Chen, N., Zhou, M., Dong, X., Qu, J., Gong, F., Han, Y., … & Yu, T. (2020). Epidemiological and clinical characteristics of 99 cases of 2019 novel coronavirus pneumonia in Wuhan, China: a descriptive study. The Lancet395(10223), 507-513.
 3. Stadler, K., Masignani, V., Eickmann, M., Becker, S., Abrignani, S., Klenk, H. D., & Rappuoli, R. (2003). SARS—beginning to understand a new virus. Nature Reviews Microbiology1(3), 209-218.
 4. Tavakoli, A., Vahdat, K., & Keshavarz, M. (2020). Novel Coronavirus Disease 2019 (COVID-19): An Emerging Infectious Disease in the 21st Century. ISMJ22(6), 432-450.
 5. World Health Organization. (2020). Naming the coronavirus disease (COVID-19) and the virus that causes it. World Health Organization. https://www. who. int/emergencies/diseases/novel-coronavirus-2019/technical-guidance/naming-the-coronavirus-disease-(covid-2019)-and-the-virus-that-causes-it.

‍ಲೇಖಕರು avadhi

April 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

34 ಪ್ರತಿಕ್ರಿಯೆಗಳು

 1. SVK,

  Highly informative article presented as easily understandable. Thanks to Prof. Prashanth Naik.

  ಪ್ರತಿಕ್ರಿಯೆ
 2. Thyagam harekala

  ಅದ್ಭುತ ವಿವರಣೆ… ಎಲ್ಲಾ ಜನ ಸಮುದಾಯದವರಿಗೆ ಸುಲಭ ವಾಗಿ ಅರ್ಥ ವಾಗುವ ರೀತಿಯಲ್ಲಿ ಡಾ. ಪ್ರಶಾಂತ್ ನಾಯ್ಕ್ ಅವರು ಪ್ರಸ್ತುತ ಪಡಿಸಿದ್ದಾರೆ… ಮುಖ್ಯವಾಗಿ ಅವರು ಒಬ್ಬ ಉತ್ತಮ ಲೇಖಕರು ಹೌದು… ಅಭಿನಂದನೆಗಳು… ಸರ್…

  ಪ್ರತಿಕ್ರಿಯೆ
 3. Dr Ummappa Poojary P

  Highly informative, presented in common men’s language. Real value addition to the awareness creation in the prevailing situation. Great Sir, well done. Standard article should find a place in standard media so that it could reach all.

  ಪ್ರತಿಕ್ರಿಯೆ
  • Ramesh Gani

   Sir you have presented in very effective manner this information is eagerly needed for educated and uneducated people brcabec lot of people do not much about corona virus in this context you have educated all citizens through your knowldge from bottom of my heart congratulations you you as a friend I am very proud about you for giving small meaningful social sevices to our society

   ಪ್ರತಿಕ್ರಿಯೆ
 4. Shivarama

  ಸರ್, ಸಮಯೋಚಿತ ಉಪಯುಕ್ತ ಬರಹ. ಧನ್ಯವಾದಗಳು. ಕೋರೋನಾ ಬಗ್ಗೆ ‌ಗೊತ್ತಿಲ್ಲದವರೇ ಹೆಚ್ಚು. ನಿಮ್ಮ ಒಪ್ಪಿಗೆ ಇದ್ದಲ್ಲಿ ನನ್ನ ಬಂಧುಗಳಿಗೆ ಕಳುಹಿಸಲೇ?

  ಪ್ರತಿಕ್ರಿಯೆ
 5. ರಾಜಾರಾಮ ಹೆಗಡೆ

  … ಸಕಾಲಿಕ ಬರಹ… ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಬರೆದಿದ್ದೀರಿ.. ಧನ್ಯವಾದಗಳು..

  ಪ್ರತಿಕ್ರಿಯೆ
 6. Shambhu Sharma

  Pleased to come across such a scientific article with such clarity & depth in such “Chaste Kannada’. Felt my learning of Medical Microbiology, studied about half a century ago, refreshed & updated, Profuse thanks.

  ಪ್ರತಿಕ್ರಿಯೆ
 7. Yamuna.S.M

  Jana saamaanyarige sulabhavaagi artha aaguva proudha baravanige. Vaignaanika lekhana kannadadallli moodisuvudu bahala santhosha. Keep it up sir, thank you..

  ಪ್ರತಿಕ್ರಿಯೆ
  • subramanya v

   ಕರೊನ ದ ಮಾಹಿತಿಯನ್ನು ತುಂಬಾ ಪ್ರಸ್ತುತವಾಗಿ ಎಲ್ಲಾ ವರ್ಗ ದವರೂ ಅರ್ಥ ವಾಗುವಂತೆ ತಿಳಿಸಿದ ಡಾ ಪ್ರಶಾಂತ್ ಇವರಿಗೆ ಆಭಿನಂದನೆಗಳು

   ಪ್ರತಿಕ್ರಿಯೆ
 8. Keshava Moorthy C G

  Coronaದ ನಾಮಧೇಯದಿಂದ ಶುರುವಾಗಿ – ಅದರ ಹಿನ್ನೆಲೆ, ರಚನೆ, ಸಂತಾನೋತ್ಪತ್ತಿ, ಹರಡುವಿಕೆ, ತಡೆಯುವಿಕೆ ಹಾಗೂ ಲಸಿಕೆಯ ಅಭಿವೃದ್ಧಿ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್. ತಮ್ಮ ಲೇಖನದಿಂದ ಜನಸಾಮಾನ್ಯರ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ.

  ಪ್ರತಿಕ್ರಿಯೆ
 9. Shreenivasagiliyaru

  Relavent.discriptive and act of social responsibility. Well balanced article. Congracts

  ಪ್ರತಿಕ್ರಿಯೆ
 10. Prashant Ganiga Byndoor

  Very nice article, everyone can understand easily about deadly virus Corona and which gives useful advice in research of medicine also.

  ಪ್ರತಿಕ್ರಿಯೆ
 11. Sure she Devadiga

  ಅತ್ಯುತ್ತಮ ವಿಷಯ ವನ್ನೊಳಗೊಝಡ ಲೇಖನ. ಧನ್ಯವಾದಗಳು

  ಪ್ರತಿಕ್ರಿಯೆ
 12. Dr.Ananda

  Dear Dr.Prashanth, nice article ,even common man can understand. You made good attempt in collecting lot of information about covid-19 and thanks for sharing that. Wish you good luck.

  ಪ್ರತಿಕ್ರಿಯೆ
 13. Dr Ananda K.

  Dear Dr. Prashanth, nice article, made good collection. Thanks for sharing.wish you good luck.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: