ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 5

ಮೂಲ : ನಿಕೊಲಾಯ್ ಗೊಗೊಲ್
ಅನು : ಜಿ. ವಿ. ಕಾರ್ಲೊ

ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್ ದಸ್ತವೆಸ್ಕಿ ಪ್ರಮುಖ. ನಾವೆಲ್ಲಾ ಗೊಗೊಲಾನ The Overcoat ನಿಂದ ಹೊರ ಬಂದವರೆಂದು ಅವನು ಗೊಗೊಲನನ್ನು ಸ್ಮರಿಸುತ್ತಾನೆ.

ಗೊಗೊಲ್, ಅವನ ಸಮಕಾಲಿನ ರಶ್ಯನ್ ಸಮಾಜವನ್ನು ಲೇವಡಿ ಮಾಡುವ ನಾಟಕ The Inspector General, ಮಾನವ ಸರಕುಗಳಲ್ಲೊಂದಾದ ಗುಲಾಮರ ಲೇವಾದೇವಿಯ The Dead Souls ಕಾದಂಬರಿ ಮತ್ತು ಪ್ರಭುತ್ವವನ್ನು ಅಣಕಿಸುವ, ಬಡ ಗುಮಾಸ್ತನ ಕತೆ The Overcoat ಮತ್ತು ಪ್ರಸ್ತುತ ಅಧಿಕಾರಿಶಾಹಿಯ ಒಣ ಪ್ರತಿಷ್ಠೆ ಮತ್ತು ಮಹತ್ವಾಕಾಂಕ್ಷೆಯ The Nose ಓದುವಾಗ, ‘ಮೂಗು’ ಇಲ್ಲದಿರುವುದು ಎಷ್ಟೊಂದು ಅನಾಹುತಾಕಾರಿಯಾಗಬಲ್ಲದೆಂದು ನನಗೆ ‘ರಾಮಾಯಣ’ದ ‘ಶೂರ್ಪನಖಿ’ಯ ಪಾತ್ರ ಕಣ್ಣ ಮುಂದೆ ಬಂದಿತು.

5

ಮಾರನೆಯ ದಿನ, ಪೊಲೀಸರ ಬಳಿಗೆ ಹೋಗುವ ಮುನ್ನ ಕೊವಾಲ್ಯೊವ್ ತನ್ನ ಸ್ಟಾಫ್ ಆಫೀಸರನ ಹೆಂಡತಿಗೆ, ತನಗೆ ಸೇರಿದ್ದ ವಸ್ತುವನ್ನು ಯಾವುದೇ ತಕರಾರುಗಳಿಲ್ಲದೆ ಸ್ವಸ್ಥಾನದಲ್ಲಿ ಸೇರಿಸಬೇಕೆಂದು ಒಂದು ಪತ್ರವನ್ನು ಬರೆದ. ಅದು ಹೀಗಿತ್ತು:

“ಪ್ರೀತಿಯ ಮಿಸೆಸ್ ಆಲೆಕ್ಸಾಂಡ್ರಾ ಗ್ರಿಗೊರಿಯೆವ್ನಾ,

ನಿಮ್ಮ ಈ ವಿಚಿತ್ರ ನಡವಳಿಕೆಯು ನನಗೆ ಕಿಂಚಿತ್ತೂ ಅರ್ಥವಾಗುತ್ತಿಲ್ಲ. ಇದರಿಂದ ನಿಮಗೆ ಏನೂ ಉಪಯೋಗವಾಗುವುದಿಲ್ಲ. ನೀವು ಬಲವಂತದಿಂದ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲು ಸಾಧ್ಯವಿಲ್ಲ. ಇನ್ನು ನನ್ನ ಮೂಗಿನ ಕುರಿತಾಗಿ, ಅದು ನೀವು ಅಲ್ಲದೆ ಬೇರೆ ಯಾರೂ ಕಾರಣರಲ್ಲವೆಂದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಮೂಗು ಒಮ್ಮೆಲೇ ಅದರ ಸ್ವಸ್ಥಾನದಿಂದ ಮಾಯವಾಗಿದ್ದು, ಉನ್ನತ ಸರಕಾರಿ ಅಧಿಕಾರಿಯೊಬ್ಬರ ವೇಷ ಧರಿಸಿ ಅದು ಎಲ್ಲೆಡೆ ಓಡಾಡಿಕೊಂಡಿದ್ದು, ಮತ್ತೆ ಯಥಾವತ್ತಾಗಿ ಪ್ರತ್ಯಕ್ಷಗೊಂಡಿದ್ದು ಎಲ್ಲಾ ನೀವೇ ಅಥವಾ ನಿಮ್ಮ ನಿರ್ದೇಶನದ ಮೇರೆಗೆ ಯಾರೋ ನಡೆಸಿದ್ದ ವಾಮಾಚಾರದಿಂದಾಗಿ ಎನ್ನುವುದನ್ನು ನಾನು ಅರಿತಿದ್ದೇನೆ.

ಈ ಮೂಲಕ ನಾನು ನಿಮಗೆ ಎಚ್ಚರಿಸುವುದೇನೆಂದರೆ, ಇವತ್ತಿನೊಳಗೆ ನನ್ನ ಮೂಗು ತನ್ನ ಸ್ವ ಸ್ಥಾನಕ್ಕೆ ಸೇರದಿದ್ದಲ್ಲಿ ನಾನು ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

ಇತೀ ತಮ್ಮ, 

ಪ್ಲೆಟೊನ್ ಕೊವಾಲ್ಯೊವ್.

ನಲ್ಮೆಯ ಶ್ರೀ ಕೊವಾಲ್ಯೊವ್‌ರವರೇ,

ನಿಮ್ಮ ಪತ್ರವನ್ನು ಓದಿ ನಿಜವಾಗಲೂ ಆಘಾತವಾಯಿತು. ಈ ರೀತಿಯ ದೂಷಣೆಯ ಪತ್ರವನ್ನು ನಿಮ್ಮಿಂದ ಖಂಡಿತವಾಗಿಯೂ ನಾನು ನಿರೀಕ್ಷಿಸಿರಲಿಲ್ಲ. ನೀವು ಹೇಳಿರುವಂತ ಸರಕಾರಿ ಅಧಿಕಾರಿ ಅಥವಾ ವೇಷಾಧಾರಿ ಅಧಿಕಾರಿಯನ್ನು ನಾನು ಯಾವತ್ತೂ ನನ್ನ ಮನೆಯಲ್ಲಿ ಭೇಟಿಯಾಗಿರುವುದಿಲ್ಲ.

ಫಿಲಿಪ್ ಇವಾನೊವಿಚ್ ಪೊಟ್ಹಾಚಿಕೊವ್ ಬಿಟ್ಟರೆ ಬೇರೆ ಯಾರೂ ನನ್ನ ಮನೆಗೆ ಬಂದಿರುವುದಿಲ್ಲ. ಫಿಲಿಪ್ ನನ್ನ ಮಗಳನ್ನು ಮದುವೆಯಾಗುವ ಪ್ರಸ್ತಾಪವನ್ನು ಇಟ್ಟಿದ್ದು ನಿಜ ಮತ್ತು ಆತ ಗೌರವಸ್ಥ ಮತ್ತು ಓದಿಕೊಂಡಿರುವ ಯುವಕನೆಂಬುದರಲ್ಲಿ ಯಾವುದೇ ಸಂಶಯಗಳಿಲ್ಲವಾದರೂ, ನಾನು ಈವರೆಗೆ ನನ್ನ ಸಮ್ಮತಿಯನ್ನು ಕೊಟ್ಟಿರುವುದಿಲ್ಲ. 

ನೀವು ಮುಂದುವರಿದು ನಿಮ್ಮ ಮೂಗಿನ ಬಗ್ಗೆ ಹೇಳುತ್ತಿದ್ದೀರಿ. ಈ ಆರೋಪವನ್ನು ಹೇಗೆ ಅರ್ಥ ಮಾಡಿಕೊಳ್ಳುವುದೆಂದು ನನಗೆ ತಿಳಿಯುತ್ತಿಲ್ಲ. ನಿಮ್ಮನ್ನು ನಾನು ಮೂರ್ಖನನ್ನಾಗಿಸುತ್ತಿದ್ದೇನೆಂದು ನಿಮ್ಮ ಭಾವನೆಯಾದರೆ, ನಿಜಕ್ಕೂ ನನಗೆ ಆಶ್ಚರ್ಯವಾಗುತ್ತಿದೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ನಿಮ್ಮ ಭಾವನೆಗಳಿಗೆ ವ್ಯತಿರಿಕ್ತವಾಗಿದೆ. 

ನನ್ನ ಮಗಳ ಕೈಯನ್ನು ಕೇಳಿಕೊಂಡು ನೀವು ಅಧಿಕೃತವಾಗಿ ಕೋರಿಕೊಂಡರೆ ಖಂಡಿತವಾಗಿಯೂ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಇದು ನನ್ನ ಮನದಾಳದ ಆಸೆಯೂ ಕೂಡ.

-ಗೌರವಾದರಗಳೊಂದಿಗೆ

ನಿಮ್ಮ,

ಅಲೆಕ್ಸಾಂಡ್ರ ಪೊಡ್‌ಟೊಚಿನ್

ಈ ಪತ್ರವನ್ನು ಓದಿ ಮುಗಿಸುತ್ತಿದ್ದಂತೆ ಕೊವಾಲ್ಯೊವ್‌ನಿಗೆ ತನ್ನ ಮೂಗಿನ ವಿಚಾರದಲ್ಲಿ ಆಕೆ ಖಂಡಿತವಾಗಿಯೂ ನಿರಪರಾಧಿ ಎನ್ನುವುದು ಮನದಟ್ಟಾಯಿತು. ‘ತಪ್ಪಿತಸ್ಥ ವ್ಯಕ್ತಿ ಈ ರೀತಿಯ ಪತ್ರ ಬರೆಯಲು ಸಾಧ್ಯವಿಲ್ಲ,’ ಎಂದು ಅವನು ತೀರ್ಮಾನಿಸಿದ.

ಹಾಗಾದರೆ, ಇದೆಲ್ಲಾ ಹೇಗೆ ಘಟಿಸಿತು? ಅವನಿಗೆ ತಲೆ-ಬುಡ ಒಂದೂ ಅರ್ಥವಾಗಲಿಲ್ಲ. 

ಅಷ್ಟರಲ್ಲಿ ಈ ವಿಚಾರ ಪಟ್ಟಣದೊಳಗೆಲ್ಲಾ ರೆಕ್ಕೆಪುಕ್ಕ ಕಟ್ಟಿಕೊಂಡು ಹರಡಿತ್ತು

ಅತೀಂದ್ರಿಯ ವಿದ್ಯಾಮಾನಗಳ ಬಗ್ಗೆ ಜನರು ತಲೆಕೆಡಿಸಿಕೊಂಡಿದ್ದ ಕಾಲವದು. ಆಗಷ್ಟೇ ಕಾಂತತ್ವದ ಕುರಿತಾಗಿ ಹೊಸ ಹೊಸ ಪ್ರಯೋಗಗಳು ಶುರುವಿಟ್ಟುಕೊಂಡಿದ್ದವು. ಅಲ್ಲದೇ ಕೊನುಶೆನ್ನಿ ಬೀದಿಯ ಅರಸರ ಕುದುರೆ ಲಾಯಕ್ಕೆ ಸೇರಿದ್ದ ಮನೆಯೊಂದರಲ್ಲಿ ಪೀಠೋಪಕರಣಗಳು ಹುಚ್ಚೆದ್ದು ಕುಣಿಯುತ್ತಿದ್ದ ಸುದ್ದಿ (ಈ ಬಗ್ಗೆ ಪುಷ್ಕಿನ್ ತನ್ನ 17ನೇ ಡಿಸೆಂಬರ್ 1833ರ ದಿನಚರಿಯಲ್ಲಿ ಉಲ್ಲೇಖಿಸಿದ್ದಾನೆ. 1832ರಲ್ಲಿ ತತಾರಿನೋವಾ ಎಂಬ ಹೆಣ್ಣುಮಗಳು ಮನೋಬಲವೊಂದರಿಂದಲೇ ವಸ್ತುಗಳನ್ನು ಆಚೀಚೆ ಸರಿದಾಡಿಸಬಲ್ಲೆ ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಳೆಂಬ ಕಾರಣಕ್ಕಾಗಿ ಸೈಂಟ್ ಪೀಟರ್ಸ್​ಬರ್ಗ್‌ನಿಂದ ಗಡಿಪಾರು ಮಾಡಲಾಗಿತ್ತು.) ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗೇ ಇತ್ತು. ಆದ್ದರಿಂದ, ಸರ್ಕಾರಿ ಮೌಲ್ಯಮಾಪಕ ಕೊವಾಲ್ಯೊವ್‌ನ ಮೂಗು ಸ್ವತಂತ್ರವಾಗಿ ಮಧ್ಯಾಹ್ನದ ಮೂರು ಗಂಟೆಯ ಹೊತ್ತಿನಲ್ಲಿ ನೆವೆಸ್ಕಿ ಅವೆನ್ಯೂವಿನಲ್ಲಿ ಸವಾರಿ ಹೊರಟಿತ್ತು ಎಂದು ಕೇಳಿಸಿಕೊಂಡಾಗ ಯಾರೂ ಮೂಗು ಮುರಿದುಕೊಳ್ಳಲಿಲ್ಲ! 

ಸುದ್ದಿ ಹರಡುತ್ತಿದ್ದಂತೆ ಕುತೂಹಲಿಗಳು ಸೇರತೊಡಗಿದರು.

ಈಗಷ್ಟೇ ಮೂಗನ್ನು ಇಂಥ ಸ್ಥಳದಲ್ಲಿ ನೋಡಿದ್ದೆ ಎಂಬ ಸುದ್ದಿ ಹರಡಿದ್ದೇ ತಡ, ಎಷ್ಟೊಂದು ಜನ ಸೇರುತ್ತಿದ್ದರೆಂದರೆ ಅವರನ್ನು ಚದುರಿಸಲು ಪೊಲೀಸರನ್ನು ಕರೆಸಬೇಕಾಗುತ್ತಿತ್ತು. ರಂಗಮಂದಿರದೊಳಗೆ ಮೂಗು ಪ್ರತ್ಯಕ್ಷವಾಗಿತ್ತು ಅಂತ ಸುದ್ದಿಯೊಂದು ಹರಡಿದ್ದೇ ತಡ ಯಾರೋ ಕನ್ನಡಕಧಾರಿ ಹಳಸಿದ ಕೇಕುಗಳನ್ನು ಮಾರುವವನು ರಂಗ ಮಂದಿರದ ಹೊರಗಡೆ ಬಾಡಿಗೆಗೆ ಬೆಂಚುಗಳನ್ನು ತಂದು ಜನರು ತಲಾ 80 ಕೊಪೆಕುಗಳನ್ನು ಕೊಟ್ಟು ಹತ್ತಿ ನೋಡಲು ಅನುವು ಮಾಡಿಕೊಟ್ಟ.

ಒಬ್ಬ ನಿವೃತ್ತ ಕರ್ನಲ್ ಸಾಹೇಬರು ಮುಂಜಾನೆಯೇ ಮನೆಯಿಂದ ಹೊರಟು ಬಹಳ ಕಷ್ಟಪಟ್ಟು ಮುಂಬಾಗಿಲಿನಿಂದ ಒಳಗೆ ನುಗ್ಗಲು ಸಫಲರಾದರು. ಅವರ ದುರಾದೃಷ್ಟಕ್ಕೆ ಅಂಗಡಿಯ ಶೋಕೇಸಿನೊಳಗೆ ಮೂಗಿನ ಬದಲು ಅಲ್ಲಿ ಬರೇ ಒಂದು ಉಣ್ಣೆಯ ಜರ್ಸಿ ಮತ್ತು ತರುಣಿಯೊಬ್ಬಳು ತನ್ನ ಕಾಲ್ಚೀಲಗಳನ್ನು ಸರಿಪಡಿಸುತ್ತಿರುವುದನ್ನು ಒಂದು ಮರದ ಮರೆಯಲ್ಲಿ ಕದ್ದು ನೋಡುತ್ತಿರುವ ತರುಣನ ಶಿಲಾ ಚಿತ್ರವಿತ್ತು. ಆ ಚಿತ್ರ ಕಳೆದ ಹತ್ತು ವರ್ಷಗಳಿಂದ ಅದೇ ಜಾಗದಲ್ಲಿ ವಿರಾಜಮಾನವಾಗಿತ್ತು. ಕರ್ನಲ್ ಸಾಹೇಬರು,“ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಮೋಸಗೊಳಿಸಬಾರದು,” ಎನ್ನುತ್ತ ನಿರಾಶೆ ಮತ್ತು ಕೋಪದಿಂದ ಭುಸುಗುಡುತ್ತಾ ಅಲ್ಲಿಂದ ಹಿಂದಿರುಗಿದರು. 

ನಂತರ, ಮೇಜರ್ ಕೊವಾಲ್ಯೊವ್‌ರ ಮೂಗು ನೆವೆಸ್ಕಿ ರಸ್ತೆ ಬಿಟ್ಟು ಟಾವ್ರಿಚೆಸ್‌ಕಿ ಪಾರ್ಕಿನಲ್ಲಿ ಬಹಳ ಸಮಯದಿಂದ ಸುತ್ತಾಡುತ್ತಿದೆ ಎಂಬ ಸುದ್ದಿ ಹರಡತೊಡಗಿತು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕೊಜ್ರೊವ್-ಮಿರ್ಜಾನಿಗೆ (ಇರಾನಿನ ರಾಜ ಶಾ ನ ಬಳಿ ಟುರ್ಕ್ಮೆನ್‌ನಲ್ಲಿ ಶಾಂತಿ ಸ್ಥಾಪನೆ ಕುರಿತು ಮಾತನಾಡಲು ಟೆಹರಾನಿಗೆ ಹೋಗಿದ್ದ ರಶ್ಯಾದ ಹೆಸರಾಂತ ನಾಟಕಕಾರ ಗ್ರಿಬೋಎಡೆವ್‌ನ ಕೊಲೆಯಾಗಿತ್ತು. ರಾಜಕುಮಾರ ಕೊಜ್ರೊವ್-ಮಿರ್ಜಾ ಈ ಬಗ್ಗೆ ಸಂತಾಪ ಸೂಚಿಸಲು ಶಾ ನ ಅಧಿಕೃತ ಪ್ರತಿನಿಧಿಯಾಗಿ ಬಂದಿದ್ದ) ಇದು ಕಂಡು ಕೇಳರಿಯದ ವಿಷಯವಾಗಿತ್ತು. ಇದೊಂದು ಅಪೂರ್ವ ಘಟನೆ ಎಂದು ‘ಶಸ್ತ್ರಚಿಕಿತ್ಸ ವೈದ್ಯರ ಸಂಘ’ದ ವಿದ್ಯಾರ್ಥಿಗಳು ಕೂಡ ಕುತೂಹಲದಿಂದ ಪಾರ್ಕಿಗೆ ಮುಗಿಬಿದ್ದರು. ಸಾಮಾಜಿಕವಾಗಿ ಮೇಲ್‌ಸ್ತರದ ಹೆಣ್ಣುಮಗಳೊಬ್ಬಳು ಪಾರ್ಕಿನ ಆಡಳಿತಾಧಿಕಾರಿಗೆ, “ನನ್ನ ಮಕ್ಕಳನ್ನು ಕಳಿಸುತ್ತಿದ್ದೇನೆ. ಅವರಿಗೆ ಈ ವಿಚಿತ್ರವನ್ನು ತೋರಿಸಿ ಈ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಕೊಡಿ,” ಎಂದು ಸೂಚನೆಯನ್ನೂ ಕೊಟ್ಟಳು.

ಈ ವಿಚಾರವಂತೂ ಉಳ್ಳವರ ಮೋಜು ಮಸ್ತಿ ಸಂಘಟಿಸುತ್ತಿದ್ದವರಿಗಂತೂ ಹಾಲನ್ನ ಉಂಡಂತಾಗಿತ್ತು. ಅವರ ಖಜಾನೆ ಬರಿದಾಗುತ್ತಿದ್ದ ಸಮಯದಲ್ಲೇ ಒಂದು ಹೊಸ ವಿಷಯ ಸಿಕ್ಕಿತ್ತು!

ಇದನ್ನು ಕೇಳಿದ ಕೆಲವು ಬುದ್ದಿವಂತರು, ಜನರು ಈಗಿನ ಕಾಲದಲ್ಲೂ ಇಂಥ ಅಜ್ಜಿ ಕತೆಗಳನ್ನು ನಂಬುತ್ತಾರಲ್ಲಾ ಇವರಿಗೆ ಏನನ್ನಬೇಕು ಎಂದು ಗೊಣಗಿಕೊಂಡರು.

ಇದೊಂದು ವಿಚಿತ್ರ ಜಗತ್ತು. ನಂಬಲು ಸಾಧ್ಯವೇ ಇಲ್ಲವೆಂದು ನೀವು ಭಾವಿಸಿದ್ದ ಕೆಲ ಸಂಗತಿಗಳು ನಿಮ್ಮ ಕಣ್ಣೆದುರೇ ಜರಗುತ್ತವೆ. ರಾಜ್ಯದ ಕೌನ್ಸಿಲರ್ ಆಗಿ ಮೆರೆದು ಕೋಲಾಹಲ ಸೃಷ್ಟಿಸಿದ್ದ ಕೊವಾಲ್ಯೊವ್‌ನ ಮೂಗು ಏನೂ ನಡೆದೇ ಇಲ್ಲವೆಂಬಂತೆ ಮತ್ತೆ ಬಂದು ಸ್ವಸ್ಥಾನ ಅಂದರೆ ಕೊವಾಲ್ಯೊವ್‌ನ ಎರಡು ಕೆನ್ನೆಗಳ ಮಧ್ಯೆ ಸೇರಬೇಕೇ!? ಅಂದು ಏಪ್ರಿಲ್ 7ನೇ ತಾರೀಕು. ಕೊವಾಲ್ಯೊವ್ ಬೆಳಿಗ್ಗೆ ಎದ್ದು ಅಭ್ಯಾಸ ಬಲದಿಂದ ಕನ್ನಡಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ಅವನ ಮೂಗು ಯಥಾಸ್ಥಾನದಲ್ಲಿ ವಿರಾಜಮಾನವಾಗಿತ್ತು. ಖಾತ್ರಿ ಪಡಿಸಿಕೊಳ್ಳಲು ಅವನು ಅದನ್ನು ತನ್ನ ಮುಷ್ಠಿಯಿಂದ ಬಲವಾಗಿ ಹಿಡಿದ. ಅವನು ನೋಡಿದ್ದು ದಿಟವಾಗಿತ್ತು. ಮೂಗು ಯಥಾಸ್ಥಾನದಲ್ಲಿತ್ತು. “ಆಹಾ!”ಕೊವಾಲ್ಯೊವ್ ಆನಂದದಿಂದ ಜೋರಾಗಿ ಉದ್ಗರಿಸಿದ. ಅದೇ ಹೊತ್ತಿಗೆ ಇವಾನ್ ಅಲ್ಲಿ ಬರದಿದ್ದರೆ ಅವನು ಬರಿಗಾಲಿನಲ್ಲಿ ಅಲ್ಲೇ ನೃತ್ಯ ಮಾಡುತ್ತಿದ್ದನೇನೋ!

ಅವನು ಸೋಪು ಹಚ್ಚಿ ಮುಖವನ್ನು ಚೆನ್ನಾಗಿ ತೊಳೆದು ಕನ್ನಡಿ ನೋಡಿದ. ಮೂಗು ಅಲ್ಲೇ ಇತ್ತು. ಮುಖವನ್ನು ಟವೆಲಿನಿಂದ ಚೆನ್ನಾಗಿ ಒರೆಸಿ ಮತ್ತೊಮ್ಮೆ ಕನ್ನಡಿ ನೋಡಿದ. ಮೂಗು ಅಲ್ಲೇ ಇತ್ತು!

“ಇಲ್ನೋಡೋ ಇವಾನ್. ನನ್ನ ಮೂಗಿನ ಮೇಲೆ ಮೊಡವೆ ಬಂದಿರೋ ಹಾಗಿದೆ!”

ಅವನೆಲ್ಲಿ, “ಸಾಹೇಬ್ರೇ ನಿಮ್ಮ ಮೂಗಿನ ಮೇಲೆ ಮೊಡವೆ ಇರಲಿ ಅಸಲಿಗೆ ಅಲ್ಲಿ ಮೂಗೇ ಇಲ್ಲ!” ಎಂದು ಎಲ್ಲಿ ಇವಾನ್ ಹೇಳುತ್ತಾನೋ ಎಂದು ಕೊವಾಲ್ಯೊವ್ ಆತಂಕಗೊಂಡಿದ್ದ.

“ನಿಮ್ಮ ಮೂಗು ಸರಿಯಾಗೇ ಇದೆ ಸಾಹೇಬ್ರೆ. ಆದರೆ, ನನಗೆ ಮೊಡವೆ ಮಾತ್ರ ಕಾಣಿಸುತ್ತಿಲ್ಲ!” ಎಂದ.

“ಸದ್ಯ! ದೇವರು ದೊಡ್ಡವನು,” ಎನ್ನುತ್ತಾ ಕೊವಾಲ್ಯೊವ್ ಚಿಟಿಕೆ ಮುರಿದ.

ಅಷ್ಟರಲ್ಲಿ, ಇವಾನ್ ಯಾಕೊವ್‌ಲೆವಿಚ್ ಪ್ರತ್ಯಕ್ಷನಾದ. ಆದರೆ, ಕದ್ದು ಹಾಲು ಕುಡಿದು ಒದೆ ತಿಂದ ಬೆಕ್ಕಿನಂತಿತ್ತು ಅವನ ಮುಖಭಾವ!

“ನೀನು ನನ್ನನ್ನು ಮುಟ್ಟುವ ಮೊದಲು ಕ್ಷೌರ ಮಾಡುವ ಮುನ್ನ ಚೆನ್ನಾಗಿ ಕೈ ತೊಳೆದುಕೊಂಡಿದ್ದೀಯಾ ತಾನೆ?” ಕೊವಾಲ್ಯೊವ್ ಕೇಳಿದ.

“ನನ್ನ ಕೈಗಳು ಶುಭ್ರವಾಗಿವೆ.”

“ನೀನು ಸುಳ್ಳು ಹೇಳುತ್ತಿದ್ದೀಯ.”

“ಆಣೆ ಮಾಡಿ ಹೇಳುತ್ತೇನೆ ಸ್ವಾಮಿ, ನನ್ನ ಕೈಗಳನ್ನು ಈಗಷ್ಟೇ ಚೆನ್ನಾಗಿ ತೊಳೆದು ಬಂದಿದ್ದೇನೆ.”

“ಎಲ್ಲಿ ತೋರಿಸು?”

ಕೊವಾಲ್ಯೊವ್ ಕುಳಿತುಕೊಂಡ. ಅವನ ಮೈ ಮೇಲೆ ಟವಲನ್ನು ಹೊಚ್ಚಿ ಇವಾನ್ ಯಾಕೊಲೆವಿಚ್ ಅವನ ಕೆನ್ನೆಗಳ ಮೇಲೆ ಸೋಪನ್ನು ಹಚ್ಚತೊಡಗಿದ.

“ಹತ್ತೆರಿಕೆ, ಇದ್ನ ನೋಡ್ಲೇ ಇಲ್ವಲ್ಲ! ನನ್ನ್ ಕಣ್ಗಿಷ್ಟು…” ಎನ್ನುತ್ತಾ ಯಾಕೊಲೆವಿಚ್ ತುಸು ಹಿಂದಕ್ಕೆ ಸರಿದು ಕೊವಾಲ್ಯೊವ್‌ನ ಮೂಗನ್ನೇ ನೋಡತೊಡಗಿದ. ಕೊವಾಲ್ಯೊವ್‌ನ ತಲೆಯನ್ನು ಒಂದು ಪಕ್ಕಕ್ಕೆ ಬಾಗಿಸಿ ಓರೆಯಾಗಿ ನೋಡಿದ. “ಅದೇ, ಅದೇ… ಏನೂ ಸಂಶಯವಿಲ್ಲ,” ಎನ್ನುತ್ತಾ ಬಹಳ ನಾಜೂಕಾಗಿ ಎರಡು ಬೆರಳುಗಳಿಂದ ಮೂಗಿನ ತುದಿಯನ್ನು ತುಸು ಮೇಲಕ್ಕೆತ್ತಿ ನೋಡಿದ.

“ಸಾಕು, ಸಾಕು ನಿನ್ನ ಪರೀಕ್ಷೆ. ನನ್ನ ಮೂಗು ಜೋಪಾನ. ಮೊದಲು ನಿನ್ನ ಕೆಲಸ ಮಾಡು,” ಕೊವಾಲ್ಯೊವ್ ಗದರಿದ.

ಇವಾನ್ ಯಾಕೊವ್‌ಲೆವಿಚ್ ತನ್ನೆರಡೂ ಕೈಗಳನ್ನು ಪಕ್ಕಕ್ಕೆ ಇಳಿಬಿಟ್ಟು ಬೆಪ್ಪನಂತೆ ನಿಂತುಬಿಟ್ಟ. ಅವನು ತನ್ನ ಜೀವಮಾನದಲ್ಲೇ ಮೊಟ್ಟಮೊದಲು ಹೆದರಿದವನಂತೆ, ಮುಜುಗರಪಟ್ಟವನಂತೆ ಕಾಣಿಸುತ್ತಿದ್ದ. ನಂತರ ಅವನು ನಾಜೂಕಾಗಿ ಕೊವಾಲ್ಯೊವ್‌ನ ಗಲ್ಲದ ಕೆಳಗಿನ ಗಡ್ಡವನ್ನು ಹೇಗೋ ಹೆರೆದು ಮುಗಿಸಿದ.

ಕ್ಷೌರ ಮುಗಿಯುತ್ತಲೇ ಕೊವಾಲ್ಯೊವ್ ಗಡಿಬಿಡಿಯಿಂದ ಬಟ್ಟೆ ತೊಟ್ಟು, ಗಾಡಿಯನ್ನು ಕೂಗಿ ನೇರವಾಗಿ ಉಪಹಾರ ಗೃಹಕ್ಕೆ ನಡೆದ. ಒಳಗೆ ಕಾಲಿಡುವ ಮೊದಲೇ, “ವೇಯ್ಟರ್! ಒಂದು ಬಿಸಿ ಬಿಸಿ ಕಪ್ ಚೊಕೊಲೆಟ್ ಕಣಪ್ಪ,” ಎಂದು ಕನ್ನಡಿ ಇದ್ದ ಸ್ಥಳಕ್ಕೆ ಧಾವಿಸಿದ. ಯಾವುದೇ ಅನುಮಾನಗಳಿರಲಿಲ್ಲ. ಅವನ ಮೂಗು ದಿಟವಾಗಿಯೂ ಅಲ್ಲೇ ಇತ್ತು.! ಅವನು ಖುಷಿಯಿಂದ ಹಿಂದಿರುಗಿ ಕಣ್ಣುಗಳನ್ನು ಕಿರಿದಾಗಿಸಿ ನೋಡಿದ. ಇಬ್ಬರು ಸೈನಿಕರು ಎದುರು ಬದರು ಕುಳಿತು ಗಹನ ಚರ್ಚೆಯಲ್ಲಿ ಮಗ್ನರಾಗಿದ್ದರು. ಕೊವಾಲ್ಯೊವ್ ಅವರನ್ನು ಚೆನ್ನಾಗಿ ಗಮನಿಸಿದ. ಒಬ್ಬನ ಮೂಗು ಒಳಕೋಟಿನ ಗುಂಡಿಯಷ್ಟೂ ದೊಡ್ಡದಿರಲಿಲ್ಲ!

ಅವನು ಅಲ್ಲಿಂದ ನೇರವಾಗಿ ರಾಜ್ಯಾಡಳಿತ ಕಚೇರಿಗೆ ಹೋದ. ಅವನು ಉಪ ರಾಜ್ಯಪಾಲನ ಹುದ್ದೆಗೆ ಅರ್ಜಿ ಸಲ್ಲಿಸುವುವನಾಗಿದ್ದ. (ಇದಾಗದಿದ್ದಲ್ಲಿ ಯಾವುದಾದರೂ ಆಡಳಿತಾತ್ಮಕ ಹುದ್ದೆ) ಹಜಾರವನ್ನು ದಾಟುತ್ತಿದ್ದಂತೆಯೇ ಅವನಿಗಲ್ಲೊಂದು ಕನ್ನಡಿ ಕಾಣಿಸಿತು. ಯಾಂತ್ರಿಕವಾಗಿ ನೋಡಿದ. ಮೂಗು ಅಲ್ಲೇ ಇತ್ತು!

ಅಲ್ಲಿಂದ ಅವನು ತನ್ನೊಬ್ಬ ಹಳೆಯ ಸಹ ಮೌಲ್ಯಮಾಪಕನನ್ನು (ಮೇಜರ್) ಕಾಣಲು ಹೋದ. ನನ್ನನ್ನು ನೋಡಿ ಈ ನನ್ನ ಸಹದ್ಯೋಗಿ ತಲೆತಿರುಗಿ ಬೀಳದಿದ್ದರೆ ಎಲ್ಲವೂ ಸರಿ ಇದೆ ಎಂದು ಅರ್ಥ ಎಂದುಕೊಂಡ. ಆದರೆ, ಆ ಮನುಷ್ಯ ಏನೂ ಮಾತನಾಡಲಿಲ್ಲ.

ಅಲ್ಲಿಂದ ಕೆಳಗೆ ರಸ್ತೆಗೆ ಬರುತ್ತಿದ್ದಂತೆಯೇ ಅವನಿಗೆ, ಸ್ಟಾಫ್ ಆಫೀಸರನ ಮಡದಿ ಮಿಸೆಸ್ ಪೊಡ್‌ಟೊಚಿನ್ ಅವಳ ಮಗಳೊಂದಿಗೆ ಎದುರಾದಳು. ಅವನ ಶಿರವಂದನೆಗೆ ಅವರೂ ವಂದನೆ ಸಲ್ಲಿಸಿದರು. ಔಪಾಚಾರಿಕವಾಗಿ ಮಾತುಕತೆ ನಡೆಯಿತು. ಅಂತೂ, ಸಂಕಷ್ಟದಿಂದ ಪಾರಾದೆ ಎಂದು ಅವರು ಸಹಾನುಭೂತಿ ತೋರಿಸಿದರು. 

ಹಾಗೆಯೇ, ಮಾತನಾಡುವ ನೆಪದಲ್ಲಿ ಕೊವಾಲ್ಯೊವ್ ತನ್ನ ನಶ್ಯದ ಡಬ್ಬಿಯನ್ನು ಹೊರತೆಗೆದು ಒಂದೊಂದು ಹೊಳ್ಳೆಗೂ ನಶ್ಯ ಏರಿಸುವ ಕ್ರಿಯೆಯನ್ನು ಆದಷ್ಟು ಲಂಬಿಸಿ, “ಲೇ ಮುದಿ ಕೋಳಿ! ನಿನ್ನ ಮಗಳನ್ನು ನಾನು ಯಾವ ಕಾರಣಕ್ಕೂ ಮದುವೆಯಾಗೊಲ್ಲ, ತಿಳಿದುಕೋ!” ಎಂದು ತನ್ನಷ್ಟಕ್ಕೇ ಹೇಳಿಕೊಂಡ.

ಅವನಿಗೀಗ ನೆವೆಸ್ಕಿ ರಸ್ತೆಯಲ್ಲಿ ಓಡಾಡುತ್ತಾ ಥಿಯೇಟರಿಗೆ ಹೋಗಲು ಅಥವಾ ಹೋಟೆಲಿಗೋಗಲು ಯಾವುದೇ ಮುಜುಗರ ಆಗಲಿಲ್ಲ. ಅವನ ಮೂಗೂ ಕೂಡ ಯಥಾಸ್ಥಾನದಲ್ಲಿದ್ದು ಏನೂ ತೊಂದರೆ ಕೊಡಲಿಲ್ಲ. ಅಲ್ಲಿಂದ ಅವನನ್ನು ಹಿಡಿಯುವವರು ಯಾರೂ ಇಲ್ಲದಂತಾಯಿತು.

ಇಷ್ಟೆಲ್ಲಾ ನಮ್ಮ ಬೃಹದ್ ದೇಶದ ಉತ್ತರದ ರಾಜಧಾನಿಯಲ್ಲಿ ನಡೆಯಿತು! ಹಿನ್ನೋಟದಿಂದ ಮಾತ್ರ ಈ ಕತೆಯಲ್ಲಿ ಬಹಳಷ್ಟು ಉತ್ಪ್ರೇಕ್ಷಿತ ಘಟನೆಗಳಿವೆ ಎಂದು ನಿಮಗೆ ಭಾಸವಾಗಬಹುದು. ಯಾವುದೇ ಕಾರಣಗಳಿಲ್ಲದೆ ಒಮ್ಮೆಲೇ ಮೂಗು ಕಾಣೆಯಾಗುವುದು, ಬೇರೆ ಬೇರೆ ಸ್ಥಳಗಳಲ್ಲಿ ವೇಷ ತೊಟ್ಟು ಸ್ವತಂತ್ರವಾಗಿ ಓಡಾಡುತ್ತಿರುವುದು, ಮತ್ತು ಕೊವಾಲ್ಯೊವ್‌ನಿಗೆ ತನ್ನ ಮೂಗಿನ ಕುರಿತಾಗಿ ಪತ್ರಿಕೆಗಳು ಜಾಹೀರಾತು ಸ್ವೀಕರಿಸುವುತ್ತವೆಂದು ನಂಬುವುದು ಅತಿಶಯೋಕ್ತಿ ಅಲ್ಲವೆಂದು ಗೊತ್ತಿರಲಿಲ್ಲವೆಂದು ನಂಬುವುದು ಕಷ್ಟ.

ಇದೆಲ್ಲಾ ಹೋಗಲಿ. ಎಲ್ಲಕ್ಕಿಂತ ಮೊದಲು. ಇವಾನ್ ಯಾಕೊವ್‌ಲೆವಿಚನ ಮಡದಿ ಬೇಯಿಸಿದ ಬ್ರೆಡ್ಡಿನೊಳಗೆ ಕೊವಾಲ್ಯೊವ್‌ನ ಮೂಗು ಬರಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ. ಎಲ್ಲಕ್ಕಿಂತ ಆಶ್ಚರ್ಯದ ಸಂಗತಿ ಎಂದರೆ ಈ ಕುರಿತಾಗಿ ಈ ಲೇಖಕರು ಬರೆಯುವುದು! ಇದು ಖಂಡಿತವಾಗಿಯೂ ನನ್ನ ಅರಿವಿನ ಹೊರತಾದ ಸಂಗತಿ. ನಿಜವಾಗಿಯೂ ಕೂಡ. ಇದೊಂದು ಅಸಂಗತ ಸಂಗತಿ ಎಂದು ನಿಮಗನಿಸುವುದಿಲ್ಲವೇ?

ಆದರೆ, ನೀವು ಕೊಂಚ ಯೋಚಿಸಿ ಪರಾಮರ್ಶಿಸಿದರೆ ಇದರೊಳಗೆ ಸತ್ಯವಿದೆ. ನೀವು ಏನೇ ಅಂದರೂ, ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಪರೂಪಕ್ಕಿರಬಹುದು. ಆದರೇನು, ನಡೆಯುತ್ತಲೇ ಇರುತ್ತವೆ.

‍ಲೇಖಕರು Admin

December 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: