ಜಿ ರಾಮಕೃಷ್ಣ ಅವರು ಕಂಡಂತೆ ‘ಮತ್ತೊಂದು ರಾತ್ರಿ’

ಜಿ ರಾಮಕೃಷ್ಣ

ಗಾಂಧೀಜಿಯನ್ನು ಕೊಂದು ಎಪ್ಪತ್ತೆರಡು ವರ್ಷಗಳೇ ಕಳೆದಿದ್ದರೂ ಇನ್ನೂ ಅವರೆಲ್ಲೋ ಅವಿತು ಕೂತಿದ್ದಾರೆ, ಹುಡುಕಿ ಹೊಡೆದು ಹಾಕಬೇಕೆಂಬ ವಿಚಿತ್ರ ಮನಸ್ಸುಗಳು ನಮ್ಮಲ್ಲಿನ್ನೂ ಇವೆ ಮತ್ತು ವರ್ಷೇ ವರ್ಷೇ ಹೆಚ್ಚುತ್ತಿವೆ.

ಪ್ರಾಚೀನ ಭಾರತದ ಇತಿಹಾಸವನ್ನು  ಮನಬಂದಂತೆ ಬದಲಾಯಿಸಿಕೊಂಡು ಬರೆದಿಟ್ಟುಕೊಳ್ಳುವ ಮೂರ್ಖತನ ಒಂದೆಡೆ, ವರ್ತಮಾನವನ್ನು ತಿರುಚಿಕೊಂಡು ಸಂಭ್ರಮ ಪಡುವುದು ಇನ್ನೊಂದೆಡೆ.

ಒಂದು ಇಡೀ ದೇಶವು ಹೀಗೆ ವಾಸ್ತವವನ್ನು ತನ್ನಿಂದ ಮರೆಮಾಚಿಕೊಳ್ಳಲು ಯತ್ನಿಸುವುದು ಅಪರೂಪ. ಕಳೆದ ವರ್ಷ ಜನವರಿ ಮುವತ್ತರಂದು ವಯಸ್ಸಾದ ಒಬ್ಬ ಮಹಿಳೆ ಗಾಂಧೀಜಿಯ ಚಿತ್ರಪಟವೊಂದನ್ನು ಎದುರಿಗಿರಿಸಿಕೊಂಡು ಬಂದೂಕಿನಿಂದ ಆ ಚಿತ್ರಕ್ಕೆ ಗುಂಡು ಹಾರಿಸುತ್ತಿದ್ದುದು ವ್ಯಾಪಕವಾಗಿ ಪ್ರಚಾರದಲ್ಲಿತ್ತು. ಗೋಡ್ಸೆ ಗುಂಡು ಹೊಡೆಯಲಿಲ್ಲವೆಂದು ಪ್ರಚಾರ ಮಾಡುವವರಿಗೆ ಆ ಮಹಿಳೆ ಅದೇನು ಸಂದೇಶ ಕೊಡಹೊರಟಿದ್ದಳೋ ತಿಳಿಯದು.

ಇತಿಹಾಸವನ್ನು ತಿರುಚುವುದರಿಂದ ಅದನ್ನು ಇಲ್ಲವಾಗಿಸಬಹುದು, ಅದನ್ನು ಪುನರ್ರಚಿಸಬಹುದು, ಎಂಬ ಮಾನಸಿಕ ಕ್ಷೋಭೆ ಆಕೆಯನ್ನು ವಿಹ್ವಲಗೊಳಿಸಿದ್ದಿರಬೇಕು. ಗಾಂಧೀಜಿಯ ಸಿದ್ಧಾಂತ ಮತ್ತು ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನು ಅಮೂಲಾಗ್ರವಾಗಿ ವಿಶ್ಲೇಷಿಸಿ ಮರುಮಾಪನ ಮಾಡಲಡ್ಡಿಯಿಲ್ಲ, ಆದರೆ ಅವರ ಚಿತ್ರಪಟಕ್ಕೆ  ಗುಂಡು ಹೊಡೆದು ಏನನ್ನೋ ಸಾಧಿಸಿದೆವೆಂಬ ಉತ್ಸಾಹವು ಶುದ್ಧಾಂಗವಾಗಿ ಅಸಂಬದ್ಧವಾದುದು.

ಗಾಂಧೀಜಿ ಬದುಕಿದ್ದಾಗಲೇ ಅವರನ್ನು ಗೌರವದಿಂದ ಟೀಕಿಸುತ್ತಿದ್ದವರಿಗೇನೂ ಕೊರತೆ ಇರಲಿಲ್ಲ. ಆದರೆ ಗಾಂಧಿ ಎಂಬ ಆಯಸ್ಕಾಂತವು ಲಕ್ಷಗಟ್ಟಲೆ ಮನಸ್ಸುಗಳಿಗೆ ಉಲ್ಲಾಸ ಉಂಟುಮಾಡಿದ್ದು ಅಷ್ಟೇ ಸತ್ಯ. ಮಾನ್ಯ ವಿ.ಕೃ.ಗೋಕಾಕರು ಗಾಂಧೀಜಿಯನ್ನು ಕುರಿತ ಒಂದು ಕವನದಲ್ಲಿ ಹೇಳಿದ್ದರು, “ನೋಡಿ, ಆ ನರಪೇತಲ ನಾರಾಯಣನ ಶರೀರದಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಅದೆಷ್ಟೂ ರಕ್ತವಿದ್ದಿತೋ ತಿಳಿಯದು, ಅದರೆ ದೇಶಕ್ಕೆ ರಕ್ತನಿಧಿಯಾಗಿದ್ದ ಆತ” ಎಂದು.

ಗಾಂಧೀಜಿಯ ಕರೆಗೆ ಓಗೊಟ್ಟು ಅದೆಷ್ಟು ಮಂದಿ ಎಲ್ಲವನ್ನೂ ತ್ಯಾಗಮಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಲೀನವಾಗಿಹೋದರು! “ಯಾವ ನುಡಿಗಡಣಕೂ ನಿಲುಕದಿಹೆ, ಸಿಲುಕದಿಹೆ, ಸದ್ಧರ್ಮ ಬೋಧನೆಯ ಶಾಂತಿಯಲಿ ಕರುಣಿಸಿಹೆ” ಎಂದು ಕವಿ ಕಯ್ಯಾರ ಕಿಯಿಣ್ಣ ರೈ ಹಾಡಿದ್ದರು. ಅಂತಹ ಗಾಂಧಿಜಿಯನ್ನು ಕಂಡು ಮನಸೋತಿದ್ದ ಕೇವಲ ಹದಿನೈದು ಮಂದಿಯ ಪರಿಚಯವನ್ನು ಶ್ರೀ ಪಾವಣ್ಣನ್‌ ಪ್ರಸ್ತುತ ಸಂಕಲನದಲ್ಲಿ ಮಾಡಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಗಾಂಧೀಜಿಯ ವ್ಯಕ್ತಿತ್ವ ಮತ್ತು ಅದರ್ಶಗಳನ್ನು ಮನಸಾರೆ ಸ್ವೀಕರಿಸಿ ಜೀವನದುದ್ದಕ್ಕೂ ಆ ಆದರ್ಶಗಳ ಪಾಲನೆಗಾಗಿ ಶ್ರಮಿಸಿದವರೇ.

೧೯೩೧ ಸಂದರ್ಭ. ಆ ವರ್ಷದ ಮಾರ್ಚ್‌ ೫ ರಂದು ಗಾಂಧೀಜಿ ಅಂದಿನ ವೈಸರಾಯ್‌ ಇರ್ವಿನ್ನನೊಡನೆ ಸಂಧಾನ ನಡೆಸಿ ಒಪ್ಪಂದವೊದಕ್ಕೆ ಸಹಿ ಹಾಕಿದ್ದರು. ಒಪ್ಪಂದದಲ್ಲಿ ಯುವ ಕ್ರಾಂತಿಕಾರಿ ಭಗತ್‌ ಸಿಂಗ್‌ನನ್ನು ಕುರಿತಂತೆ ಯಾವ ಪ್ರಸ್ತಾಪವೂ ಬಂದಿರಲಿಲ್ಲ. ಮಾರ್ಚ್‌೨೩ರಂದು ರಾತ್ರಿಯ ಅವೇಳೆಯಲ್ಲಿ ಅವನನ್ನು ವಸಾಹತು ಸರ್ಕಾರವು ನೇಣುಗಂಭಕ್ಕೇರಿಸಿತ್ತು. ಅದೇ ೨೩ರಿಂದ ಒಂದು ವಾರ ಕರಾಚಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯುವುದಿತ್ತ.

ಗಾಂಧೀಜಿ ಕರಾಚಿ ರೈಲ್ವೆ ನಿಲ್ದಾಣವನ್ನು ತಲುಪಿದಾಗಿ ಭಗತ್‌ ಸಿಂಗ್‌ರ ನೌಜವಾನ್‌ ಭಾರತ್‌ ಸಭಾದ ಯುವ ಸದಸ್ಯರು ಕೆಂಪು ಅಂಗಿ ತೊಟ್ಟು ಗಾಂಧಿ ವಿರುದ್ಧ ಪ್ರತಿಭಟಿಸುತ್ತಿದ್ದರು. ಮತ್ತು ಕಪ್ಪು ಬಟ್ಟಯಿಂದ ಮಾಡಿದ ಹೂಗುಚ್ಚವೊಂದನ್ನು ಗಾಂಧೀಜಿಗೆ ನೀಡಿದರು. “ಗಾಂಧೀಜಿ ಒಪ್ಪಂದ ಭಗತ್‌ ಸಿಂಗ್ನನ್ನು ನೇಣುಗಂಬಕ್ಕೇರಿಸಿದೆ” ಎಂದು ಘೋಷಣೆ ಕೂಗುತ್ತಿದ್ದರು. ಗಾಂಧೀಜಿ ವಿಚಲಿತರಾಗಲಿಲ್ಲ. ಮತ್ತು ಯುವಕರು ಗಾಂಧೀಜಿ ಮೇಲೆ ಎರಗಿಹೋಗಲಿಲ್ಲ. ಆದರೆ, ನಾವಿಂದು ದೇಶದಲ್ಲಿ ಎಂತಹ ವಿಷಗಾಳಿಯನ್ನು ಹರಡುತ್ತಿದ್ದೇವೆಂದರೆ ಅವನಾರೋ ತಲೆಹೋಕ ಚಲನಚಿತ್ರವನ್ನು ಸಿದ್ಧಪಡಿಸಿದ್ದಾನಂತೆ: ʼಗಾಂಧಿಯನ್ನು ನಾನೇಕೆ ಕೊಂದೆ?”.

ಪ್ರಸ್ತುತ ಸಂಕಲನದಲ್ಲಿ ಹದಿನೈದು ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಗಾಂಧೀಜಿ ತಮಗೇಕೆ ಹತ್ತಿರವಾದರು ಎಂದುದನ್ನು ಶೋಧಿಸಿದ್ದಾರೆ. ಗಾಂಧೀಜಿಯ ವಿಮರ್ಶೆ ಮಾಡುವುದೆಂದರೆ ಅರ್ಥಹೀನವಾಗಿ ಅವರನ್ನು ಹೀಯಾಳಿಸುವುದು ಎಂಬ ಕುಚೋದ್ಯದಲ್ಲ ತೊಡಗಿರುವ ನಮ್ಮ ನಾಯಕರಲ್ಲಿ ಯಾರೂ ಸೌಂದರಾಂಬಾಳ್‌ ಇಲ್ಲ, ಮರಗತಂ ಚಂದ್ರಶೇಖರ್‌ ಇಲ್ಲ, ವಿಠಲರಾವ್‌ ಇಲ್ಲ. ಇನ್ನು ಗಾಂಧೀಜಿಯನ್ನು ಎಲ್ಲಿಂದ ಅರಸಿ ತರೋಣ! ಪ್ರಸ್ತುತ ಸಂಕಲನವು ಕ್ರಿಯಾಶೀಲರ ಪರಿಚಯ ಮಾಡಿಕೊಡುತ್ತದೆ. ಅವರೆಲ್ಲಾ ಒಂದು ಆದರ್ಶದ ಕನಸನ್ನು ಕಂಡವರು. ಈಗಲೂ ನಮಗೆ ಕನಸು ಕಾಣುವವರು ಬೇಕು, ಆದರೆ ದ್ವೇ಼ಷವನ್ನು ಬಂಡವಾಳ ಮಾಡಿಕೊಂಡು ದೇಶ ಕಟ್ಟುವ ಕನಸುಗಾರರು ಬೇಡ.

ಗಾಂಧೀಜಿ ಅನೇಕ ವೇಳೆ ವಾದದಲ್ಲಿ ವಿಶ್ಲೇಷಣೆಗೆ ಒತ್ತುಕೊಡುವ ಬದಲು ತಮ್ಮ ಅಂತರಾತ್ಮದ ಸಂದೇಶವೆಂದು ತೀರ್ಮಾನ ಪ್ರಕಟಿಸುತ್ತಿದ್ದುಂಟು. ಅವರಿಗೆ ಮಾತ್ರವೇ ಅಂತರಾತ್ಮವಿದ್ದಿತೆ? ಸುಭಾಷ್‌, ಜವರಹರಲಾಲ್‌, ಸುಚೇತಾ ಮುಂತಾದವರಿಗೆ ಅಂತರಾತ್ಮ ಇರಲಿಲ್ಲವೇ? ಜಿದ್ದಿನಿಂದ ಗಾಂಧೀಜಿ ಸುಭಾಷ್‌ಚಂದ್ರರನ್ನು ಕಾಂಗ್ರೆಸ್‌ನ ಅಧ್ಯಕ್ಷರಾಗಲು ಬಿಡಲಿಲ್ಲವೆಂಬುದು ಇತಿಹಾಸ. ಅವರಿಗೆ ಪಟ್ಟಾಭಿ ಸೀತಾರಾಮಯ್ಯ ಅಧ್ಯಕ್ಷರಾಗಬೇಕೆಂಬ ಒಲವಿತ್ತು. ʼಪಟ್ಟಾಭಿ ಸೋಲು, ನನ್ನ ಸೋಲು” ಎಂದು ಗಾಂಧೀಜಿ ಪಟ್ಟುಹಿಡಿದು ಚುನಾಯಿತರಾಗಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರಿಂದ ರಾಜಿನಾಮೆ ಕೊಡಿಸಿದ್ದರು. ಅದೆಲ್ಲಾ ಆಗಿಹೋದ ಇತಿಹಾಸ.

ಇಂದು ನಮಗೆ ಬೇಕಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳ ಪೂರೈಕೆ, ಜೆ.ಸಿ.ಕುಮರಪ್ಪರಂತಹ ಅರ್ಥಶಾಸ್ತ್ರಜ್ಞರು, ಕೆ. ಸ್ವಾಮಿನಾಥನ್‌ರಂತಹ ಇತಿಹಾಸ ತಜ್ಞರು. ನಿರರ್ಥಕವಾಗಿ “ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲಿಲ್ಲ” ಇತ್ಯಾದಿಯಾಗಿ ಹೇಳುತ್ತಾ ಕೊರಕಲು ಹಾದಿಗಳಲ್ಲಿ ಮುಗ್ಗರಿಸುವುದು ಬೇಡ. ಭೂತಕಾಲದ ವೈಭವೀಕರಣವು ನಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವುದಿಲ್ಲ. ವಿಠಲರಾವ್‌ ಅಂಥವರು ಇತಿಹಾಸದ ನಿರ್ಮಾತೃಗಳಾಗುತ್ತಾರೆ, ಏಕೆಂದರೆ ಅವರು ವಾಸ್ತವದಲ್ಲಿ ನಂಬಿಕೆ ಇರುವವರು ಮತ್ತು ಭವಿಷ್ಯದ ಬಗ್ಗೆ ಗಂಭೀರವಾದ ಆಸಯಗಳನ್ನುಳ್ಳವರು.

ಪ್ರಸ್ತುತ ಈ ಮನೋಜ್ಞ ಸಂಕಲನವು ನಮ್ಮನ್ನು ಚಿಂತನೆಯಲ್ಲಿ ತೊಡಗಿಸಲಿ, ಮೌಲ್ಯಗಳ ಜೀವಂತಿಕೆಯನ್ನು ಸಾಬೀತುಪಡಿಸಲಿ, ವಸ್ತುನಿಷ್ಠ  ಮಧ್ಯಪ್ರವೇಶಕ್ಕ ಇಂಬು ನೀಡಲಿ ಎಂದು ಹಾರೈಸಬಹುದಾಗಿದೆ. “ಗಾಂಧಿಯನ್ನು ನಾನೇಕೆ ಕೊಂದೆ?” ಎಂಬ ಅವಾಸ್ತವವನ್ನು ಬದಿಗಿಟ್ಟು “ಗಾಂಧೀಜಿಯನ್ನು ನಾನು ಹೇಗೆ ಜೀವಂತವಾಗಿರಿಸಬಲ್ಲೆ?” ಎಂಬುದರತ್ತ ಮನಸ್ಸು ಮತ್ತು ಕ್ರಿಯೆಯನ್ನು ಜಾಗೃತಗೊಳಿಸಿಕೊಳ್ಳೋಣ.

‍ಲೇಖಕರು Admin

June 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: