ಸತೀಶ ಕುಲಕರ್ಣಿ
ನಮ್ಮೊಂದಿಗೆ ಇನ್ನಿಲ್ಲದ ಗೆಳೆಯ ಜಿ.ಕೆ. ರವೀಂದ್ರಕುಮಾರರ ಬಗ್ಗೆ ಬರೆಯಲು ಕುಳಿತಿದ್ದೇನೆ. ನಾನಾ ನಮೂನೆಯ ಗೆಳೆಯರು ಸಿಗುತ್ತಾರೆ. ಚಹಾದಂಗಡಿಯಲ್ಲಿ ಬಿಲ್ಲು ಬಂದಾಗ ಗಪ್ ಚುಪ್ ಎದ್ದು ಹೋಗುವ, ಹೊತ್ತಿಲ್ಲದ ಹೊತ್ತಿನಲ್ಲಿ ಫೋನ್ ಮಾಡಿ ಕಾಡುವ, ತಮ್ಮ ಸಾಧನೆಗೆ ತಾವೇ ‘ಉದೋ, ಉದೋ’ ಅಂದುಕೊಳ್ಳುವ ಒಂದು ರೀತಿಯ ಗೆಳೆಯರು.
ಇನ್ನು ಕೆಲವರು ಒಂದು ಶಿಸ್ತು ಆತ್ಮೀಯತೆ, ತೂಗಿಟ್ಟ ಪ್ರೀತಿ, ಮಾತು ಸಂಬಂಧ, ಬರವಣಿಗೆ – ಎಲ್ಲವೂ ಹಿತಮಿತ. ಈ ಪೈಕಿ ರವೀಂದ್ರಕುಮಾರ ಎರಡನೆಯ ಕೆಟಗೆರಿಗೆ ಸೇರಿದವರು.
೧೯೯೫ ರಲ್ಲಿ ಅವರ ‘ಸಿಕಾಡ’ ಸಂಕಲನಕ್ಕೆ ಹಾವೇರಿ- ಹಂಸಬಾವಿಯ ವಾರಂಬಳ್ಳಿ ಕಾವ್ಯ ಪ್ರಶಸ್ತಿ ಬಂದಿತ್ತು. ಹಂಸಬಾವಿಯಲ್ಲಿ ನಡೆದ ಸರಳ ಪ್ರಶಸ್ತಿ ಪ್ರದಾನ ಸಮಾರಂಭದ ಸೂತ್ರಧಾರತ್ವ ನನ್ನದು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದ್ದರು. ರವೀಂದ್ರರ ಪತ್ನಿ ಶ್ರೀಮತಿ ಮಂದಾರವಲ್ಲಿ ಬಗಲಲ್ಲಿ ಮಗ ಅನನ್ಯನನ್ನು ಎತ್ತಿಕೊಂಡು ಬಂದಿದ್ದರು.
ವಾರಂಬಳ್ಳಿ ಕಾವ್ಯ ಪ್ರಶಸ್ತಿ ೧೯೯೫ ರಿಂದ ೨೦೦೪ರ ವರಗೆ ೧೦ ವರ್ಷಗಳ ಕಾಲ ಕರ್ನಾಟಕದ ಕವಿ ಲೋಕವನ್ನು ತಿರುಗಿ ನೋಡುವಂತೆ ಮಾಡಿತ್ತು. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ, ಬುದ್ಧಣ್ಣ ಹಿಂಗಮಿರೆ, ಡಾ. ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಎಚ್.ಎಸ್. ವೆಂಕಟೇಶಮೂರ್ತಿ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜ ಮುಂತಾದ ದಿಗ್ಗಜರು ಪ್ರಶಸ್ತಿ ಪ್ರದಾನ ಮಾಡಿದ ಕಾವ್ಯ ಪ್ರಶಸ್ತಿ.
ವಿಶೇಷವೆಂದರೆ ಮೊದಲ ವರ್ಷದ ಪ್ರಶಸ್ತಿ ರವೀಂದ್ರಕುಮಾರ ಸಿಕಾಡಕ್ಕೆ ಬಂದಿತ್ತು. ಸಿಕಾಡ ಒಂದು ಹುಳು. ೧೭ ವರ್ಷಗಳ ಕಾಲ ಪೊರೆಯೊಳಗೆಯೆ ಅಡಗಿ, ಆನಂತರ ಒಂದು ತಿಂಗಳು ಮಾತ್ರ ಭೂಮಿಯ ಮೇಲೆ ಬದುಕುವ ಕೀಟ. ಜಿಂವ ಎಂದು ಸೂರು ಹಿಡಿದು ಹಗಲು ರಾತ್ರಿ ರೆಕ್ಕೆ ಬಡಿತದಲ್ಲಿಯೆ ಗುಂಯಿಗುಡುವ ಕೀಟ. ಇಂತಹ ಅಪರೂಪದ ಸಿಕಾಡಾವನ್ನು ಕಾವ್ಯಕ್ಕೆ ತಂದು, ಅದರ ಜೀವ ಮಿಡಿತವನ್ನು ಅನುಭವಿಸಿದ ಕವಿ ರವೀಂದ್ರಕುಮಾರ.
ಧ್ಯಾನ ಕಾಣದ ಜ್ಞಾನ
ತವಕ ಕಾಣದ ಜತನ
ಕಾಯಲಾಗದ ಕಾಯ
ಮಾಯಲಾಗದ ಗಾಯ
ನಮ್ಮ ಅಧ್ಯಾಯ
ಇಂಥ ಚಿಂತನಶೀಲ ಸಾಲುಗಳನ್ನು ಬರೆದ ಕವಿ ಈತ. ಟ್ರಿಮ್ ಆದ ದಾಡಿ, ತುಂಬು ನಗೆ, ಇಸ್ತ್ರೀ ಮುರಿಯದ ಇನ್‌ಶರ್ಟ್ ಉಡುಪಿನ ಶೈಲಿ – ಒಂದಚೂರು ದೂರು ನಿಂತೆ ಮಾತನಾಡುವ ರೀತಿ ಮರೆಯಲಾಗದ್ದು.
ಹಾವೇರಿಯ ನನ್ನ ಮನೆಗೆ ೨೨ ಮೇ ೨೦೧೭ ರಂದು ಬಂದಿದ್ದರು. ಬಹಳ ಹೊತ್ತು ಕಾವ್ಯ ಬಿಟ್ಟು ಮತ್ತೇನು ಮಾತನಾಡಲಿಲ್ಲ. ನನ್ನ ಪುಸ್ತಕ ಪ್ರಪಂಚ ನೋಡಿ ತುಂಬಾ ಚೆನ್ನಾಗಿಟ್ಟಿದ್ದೀರಿ ಎಂದು ಹೇಳಿ ಹತ್ತಾರು ಪುಸ್ತಕಗಳನ್ನು ನೋಡಿ ಕಿರು ನಗೆ ನಕ್ಕಿದ್ದರು.
ರವೀಂದ್ರಕುಮಾರರ ಕಾವ್ಯ ರಚನಾ ಶೈಲಿ ಮತ್ತು ದಿನವಹಿ ಬದುಕಿನ ಶೈಲಿ ಕೂಡಾ ಬಹಳ ಬೇರೆಯದೆಯಾಗಿತ್ತು. ಅವರ ಕವಿತೆಗಳು ನಮ್ಮ ದಿನಮಾನಗಳ ಕಾವ್ಯಕ್ಕಿಂತ ತುಸು ಭಿನ್ನವಾಗಿತ್ತು. ಹೇಳುವುದನ್ನು ತುಂಬ ಸೂಚ್ಯವಾಗಿ, ಸೂಕ್ಷ್ಮವಾಗಿ ಪಿಸು ಮಾತುಗಳಲ್ಲಿಯೆ ಕಟ್ಟುವ ರೀತಿಯದು. ವಸ್ತುಗಳ ಆಯ್ಕೆ ಕೂಡ ಬಹಳ ಡಿಫರಂಟ್ ಆಗಿತ್ತು.
ಸಿಕಾಡಾ, ಪ್ಯಾಂಜಿಯಾ, ಕದಗಳಿಲ್ಲದ ಊರಲ್ಲಿ – ಈ ಹೆಸರುಗಳನ್ನು ಓದಿದರೆ ಸಾಕು ಇಲ್ಲೇನೋ ಬ್ಯಾರೆ ಐತಿ ಅನಿಸುತ್ತಿತ್ತು. ನಾವೆಲ್ಲ ಸಂತೆಯಲ್ಲಿ ನಿಂತು ಕವಿತೆ ಬರೆದವರು. ನಮ್ಮ ದಂಗೆ ದನಿಗೆ ಅವರದು ತುಂಗೆಯ ಹರುವಿನ ಮಾಧುರ‍್ಯವಿತ್ತು. ಪದ ಬಳಕೆ, ಲಯ ನಡೆಗೆ, ಪ್ರತಿಮಾತ್ಮಕ ಬಂಧ ಜೊತೆಗೆ ಯಾವುದೇ ಅಬ್ಬರಕ್ಕೆ ಈಡಾಗದ ಕಾವ್ಯ ಅವರದು.
ನಿನಗಾಗಿ ಕವಿತೆ ಬರೆವಾಗ ನೀನಿರುವುದಿಲ್ಲ
ಬರೆದ ಕವಿತೆಯ ನೀನೋದುವಾಗ ನಾನಿರುವುದಿಲ್ಲ
ಇಂಥ ವ್ಯಂಜಕತೆಯ ಸಂಧಿಗೊಂದಿಗಳ ನಡುವೆ ಓಡಾಡಿ ಸಾವನ್ನು ಧ್ಯಾನಿಸಿದ ಕವಿ. ಆಕಾಶವಾಣಿಯಂಬ ಮೌನ ಮನೆಗೆ ಅನೇಕರನ್ನು ಕರೆಯಿಸಿ ಪರಿಚಯಿಸಿದ ಕೀರ್ತಿ ರವೀಂದ್ರರರದು. ಸತ್ಯಕಾಮರನ್ನು ಸಂದರ್ಶಿಸಿಸುವ ಒಂದು ಅಮೂಲ್ಯ ಸಂದರ್ಭ ನನಗೆ ಅವರಿಂದಾಗಿ ಬಂದಿತ್ತು. ಆ ಸಂದರ್ಶನದ ಅನುಭವವನ್ನು ನಾನು ಮರೆತಿಲ್ಲ.
ತುಸು ಜಗಳ ತಂಟೆಗಳ ನಡುವೆ ಹೊಂಟ ಸತ್ಯಕಾಮರನ್ನು ಸಮಾಧಾನಿಸಿ ಒಂದು ಸುಂದರ ಸಂದರ್ಶವನ್ನಾಗಿಸಿದ್ದರು. ನಮ್ಮಂತ ಚಳವಳಿ ಸಾಹಿತಿಗಾರರ ನಡುವೆ ಒಂದಂತರ ಕಾಯ್ದುಕೊಂಡೇ ಒಂದಿಷ್ಟು ಕಾಲ ಬರೆದು ಬದುಕಿದ ರವೀಂದ್ರಕುಮಾರ ಕಾವ್ಯ ಕೂಡಾ, ನಮ್ಮ ಮುಖ್ಯ ಕಾವ್ಯಧಾರೆಯ ನಡುವೆ ತುಸು ದೂರ ನಿಂತಂತಹದು.
ನಮ್ಮ ಪಾದಗಳು ನಮ್ಮನಾಳುವಾಗ
ಇಂದಿನ ದಿಕೆ ಉಳಿಗಾಲವಿಲ್ಲ
ಇನ್ನು ನಿನ್ನೆಯ ಪಾಡೇನು
ನಾಲ್ಕು ವರ್ಷಗಳ ಹಿಂದೆ ಹೊರಟು ಹೋದ ಪ್ರಹ್ಲಾದ ಅಗಸನಕಟ್ಟೆ ಮತ್ತು ರವೀಂದ್ರಕುಮಾರ ಇಬ್ಬರು ಕವಿಗಳು ನಮಗೆ ಕೆಲವು ಸಾಹಿತ್ತಯದ ಸಣ್ಣ ಸಣ್ಣ ಪಾಠಗಳನ್ನು ಹೇಳಿಕೊಟ್ಟು ಹೋಗಿದ್ದಾರೆ.
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!
ಕನ್ನಡ ಭಾಷೆಯ ಚೆಂದ ಕೆ. ಟಿ. ಗಟ್ಟಿ ನಮ್ಮ ಕರ್ನಾಟಕ ರಾಜ್ಯದ ಎಂಎಲ್ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ...
ರವೀಂದ್ರರ ಅಗಲಿಕೆ ನೋವುಂಟು ಮಾಡಿದೆ
ಅವರ ಆತ್ಮಕ್ಕೆ ಶಾಂತಿ ಲಭಿಸಲಿ
ನಿಜ, ಜಿಕೆ ಕಾವ್ಯ ಅಬ್ಬರಕೆ ಈಡಾಗದ ಕಾವ್ಯ. ಈ ಸಾವು ನ್ಯಾಯವಲ್ಲದ್ದು
ಒಳ್ಳೆಯ ಶ್ರದ್ಧಾಂಜಲಿ……. ಇಜೇರಿ
ಉತ್ಜಮ ಶಬ್ದಾಂಜಲಿ.
ಅಗಲಿದವರನ್ನು ಪರಿಚಯಿಸುವ ಆತ್ಮೀಯ ಲೇಖನ