ಜಿ ಕೆ ಜಿ ಎಂಬ ವಿಶ್ವಾಮಿತ್ರ!

ಇಂದು ನಿಧನರಾದ ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರಿಗೆ ನಟ ಮಂಡ್ಯ ರಮೇಶ್‌ ʻರಂಗನಮನʼ

ಮಂಡ್ಯ ರಮೇಶ್

‘ಜಿ.ಕೆ.ಜಿ. ಸರ್ ‘ನಟನ’ದ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಿ’ ಅಂದೆ. ದುರುಗುಟ್ಟಿ ನೋಡಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಭರ್ತಿ 81 ದಾಟಿತ್ತು!

ನಾನು ಮತ್ತೆ ಪೆದ್ದು ನಗೆ ನಕ್ಕು ತಲೆ ಕೆರೆದೆ! ಒಂದೆರಡು ಕ್ಷಣ ಬಿಟ್ಟು ‘ಈ ವಯಸ್ಸಲ್ಲಿ ಅದಕ್ಕೋಸ್ಕರ ಮೈಸೂರಿಗೆ ಟ್ರಾವೆಲ್ ಮಾಡೋದು ಕಷ್ಟ ಕಣಯ್ಯ, ರಮೇಶ!’ ಅಂತ ಮೆಲ್ಲ ಗದರಿದರು. ಅವರ ಕೋಪ ಇದ್ದದ್ದೇ ಹಾಗೆ. ಅವರಿಗಿದ್ದಿದ್ದು ವ್ಯವಸ್ಥೆಯ ಮೇಲಿನ ಕೋಪ! ಅಸಮಾನತೆ ಮೇಲಿನ ಸಿಟ್ಟು!

ರಂಗಾಯಣದ ಗೌರ್ನಿಂಗ್ ಕೌನ್ಸಿಲ್ ‘ರಂಗಸಮಾಜ’ದಲ್ಲಿ ಅವರೊಂದಿಗೆ ನಾವೆಲ್ಲ ಸದಸ್ಯರಾಗಿದ್ದುದೇ ದೊಡ್ಡ ಸೌಭಾಗ್ಯ. ಉರಿವ ಬೆಂಕಿಯ ಉಂಡೆಯ ಹಾಗೆ ಸದಾ ತಹತಹಿಕೆ ಅವರದು. ಅನಿಸಿದ್ದನ್ನು ನೇರವಾಗಿ ಎಸೆಯುವ ಸ್ವಭಾವ.. ಹೀಗೊಂದು ರಂಗಸಮಾಜದ ಮೀಟಿಂಗ್ ಗೆ ರಂಗಾಯಣಕ್ಕೆ ಬಂದವರು ‘ನಡೀ ಬರ್ತೀನಿ ಕ್ಲಾಸ್ಗೆ’ ಅಂದರು ! ಅಂದಂತೆ ಬಂದರು ! ‘ನಟನ’ ಆವರಣ ನೋಡಿ ಕಣ್ಣಲ್ಲಿ ಮೆಚ್ಚುಗೆಯನ್ನಿತ್ತು, ಹೆಗಲ ಮೇಲೆ ಕೈಯಿಟ್ಟು ‘ಗುಡ್’ ಅಂದರು ನವಿರಾಗಿ.

ಹೊಸ ರಂಗ ವಿದ್ಯಾರ್ಥಿಗಳಿಗೆ ಆತ ಸಿನಿಮಾ ಗ್ಲಾಮರ್ ನಟ! ದೇವರೇ ಮಾಡಿ ಕಳುಹಿಸಿದ ಚಂದದ ಮೇಕಪ್ಪಿನ ಮುಖಲಕ್ಷಣ , ಸೊಗಸಾದ ಎತ್ತರ. ತರಗತಿಯೇ ಅದುರುವಂತಿದ್ದ ಆಳದ ಬೇಸ್ ವಾಯ್ಸ್. ಎಲ್ಲಕ್ಕಿಂತ ಮೀರಿ ವಿದ್ವತ್ತು!

‘ಏನು ಮಾತಾಡ್ಲಿ’ ಅಂದ್ರು!
‘ಶೇಕ್ಸ್ ಪಿಯರ್ ಬಗ್ಗೆ ಅವನ ನಾಟಕಗಳ ಬಗ್ಗೆ’ ಅಂದೆ!
‘ಇಲ್ಲ ನನ್ನಿಷ್ಟ ಬಂದದ್ದು ಮಾತಾಡ್ತೀನಿ’ ಅಂದ್ರು.
‘ಆಯ್ತು ಸರ್’ ಅಂದು ನಕ್ಕೆ!

ಶೇಕ್ಸ್ ಪಿಯರ್ ನ ಬಗ್ಗೆ,ಅವನ ದುರಂತ ನಾಟಕಗಳ ಬಗೆಗೆ ಮಾತನಾಡುತ್ತಾ ಹೋದರು. ಒಂದೆರಡು ಗಂಟೆಗಳು ಅಲ್ಲಿ ಎಲಿಜಬೆತ್ ಥಿಯೇಟರ್ ನ ಕಾಲಘಟ್ಟ, ಶೇಕ್ಸ್ ಪಿಯರ್, ಅವನ ನಾಟಕಗಳು, ವೈನೋದಿಕದ ತುಲನೆ…ಎಲ್ಲವೂ ಜೀವಿಸಿದ್ದವು. ಸ್ಪುಟವಾದ ಅವರ ಕನ್ನಡ, ಧ್ವನಿಯ ಏರಿಳಿತ ,ಎಲ್ಲವೂ ಮಾದರಿಯೇ. ಎಲ್ಲರೂ ಸಂತೋಷಿಸಿದರು. ಎದ್ದುನಿಂತು ನಿಧಾನ ಹೊರಟರು. ಎಲ್ಲರೂ ಗೌರವದಿಂದ ನಮಿಸಿದರು.

ಅವರ ಚಿಂತನೆಗಳು ಇಷ್ಟವಾಗುವುದು ಬಿಡುವುದು ವಯಕ್ತಿಕ ಆಯ್ಕೆ. ಆದರೆ ಅವರ ಜ್ಞಾನ, ವರ್ಚಸ್ಸು, ತೀಕ್ಷ್ಣ ಮಾತುಗಾರಿಕೆ, ನಟನೆ ಯ ರಿವಾಜು ಮತ್ತು ಸಮಾಜ ಪ್ರೀತಿ ಪ್ರಶ್ನಾತೀತವಾದವು.

ಜಿ.ಕೆ.ಜಿ. ಸರ್, ತುಂಬು ಬದುಕು ನಿಮ್ಮದು. ನಮಗೆ ಅನೇಕವನ್ನು ಕಲಿಸಿದ್ದೀರಿ. ನೆಮ್ಮದಿಯಿಂದ ಹೋಗಿ ಬನ್ನಿ ಸರ್. ನಾವು ಅಳುವುದು ನಿಮಗೆ ಇಷ್ಟವಿಲ್ಲವೆಂದು ನಮಗೆ ಗೊತ್ತು… ಆದರೂ ಈ ಕ್ಷಣಕ್ಕೆ ಮನ ಮುದುರಿದೆ.

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: