9 ಆಗಸ್ಟ್- ನಾಗಸಾಕಿಯಲ್ಲಿ ಅಣುಬಾಂಬ್ ಹಾಕಿ ಲಕ್ಷಾಂತರ ಜನರನ್ನು ಕೊಂದ ಕ್ರೌರ್ಯದ ದಿನ.
ಅದರ ನೆನಪಿನಲ್ಲಿ ಪ್ರಸಿದ್ಧ ಕವಯತ್ರಿ ಇಲ್ಯಾ ಎಹ್ರೆನ್ಬರ್ಗ್ (ಇಂಗ್ಲಿಷ್ ಅನುವಾದ: ಇವಾ ಸ್ಟ್ರಾಸ್) ಕವನ ಇದು.
ನಾಗಸಾಕಿಯ ಸುತ್ತ ಸುತ್ತುತ್ತದೆ ಎಚ್ಚೆತ್ತ ಮಳೆ,
ಕೋಪದಿಂದ
ಬಾಲೆಯೊಬ್ಬಳು ಆತಂಕದಿಂದ ಅಪ್ಪಿ ಹಿಡಿದಿದ್ದಾಳೆ
ಕಣ್ಣಿಲ್ಲದ, ಕಾಲಿಲ್ಲದ, ಬೊಂಬೆಯನ್ನು
ಇಂತಹ ಮಳೆ ಯಾರಿಗೂ ಬೇಡ
ಇಂತಹ ಮಳೆ ಯಾರಿಗೂ ಬೇಡ
ಮರಗಿಡಗಳಿಗೂ ಸಂತಸ ತರದು
ಹೂವರಳಿಸಲು ಕಾದು ನಿಂತಿದೆ ಚೆರ್ರಿ ಗಿಡ
ಆದರೇನು?
ಮೊಗ್ಗುಗಳೇ ಮುರುಟಿ ಹೋಗಿವೆ
ಈ ಮಳೆಯಲ್ಲಿ ಬೂದಿ ಬೆರೆತಿದೆ
ಸ್ಮಶಾನದ ಬೂದಿ
ಬೊಂಬೆ ಕುರುಡು ಇಂದು
ನಾಳೆ ಬಾಲೆಯೇ ಕುರುಡು
ಶಿಶುವಿನ ಶವಪೆಟ್ಟಿಗೆ
ವಿಧಿಯ ಕ್ರೂರ ವಿಷದ ಆಗರ
ತೀರಲಾಗದ ದಃಖ
ಕಾಲ ಮಾಗಿದಂತೆ ದ್ವೇಷವಾಗುತ್ತದೆ
ದ್ವೇಷ, ಮಳೆಯಂತೆ ಎಲ್ಲವನ್ನೂ ಆವರಿಸುತ್ತದೆ
ಆಸರೆಯೆಲ್ಲಿಯೂ ಕಾಣದು.
ಮೀನುಗಳು ಹುಚ್ಚಾಗುತ್ತವೆ
ಹಾರುವ ಹಕ್ಕಿ ನೆಲಕ್ಕಪ್ಪಳಿಸುತ್ತದೆ
ಪಾರಿವಾಳಗಳು ವಿಕಾರವಾಗಿ ಅರಚಲಾರಂಭಿಸುತ್ತವೆ.
ಡೊಂಬರ ಕಾಗೆಯೊಡನೆ ಸ್ಪರ್ಧಿಸುತ್ತವೆ
ಸಾವಧಾನದಿಂದ ನೀರಲ್ಲಿ ಸಾಗುತ್ತಿರುವ
ಜಲಚರಗಳೂ ಕಿರುಚಾಡಿ ಕಚ್ಚಾಡುತ್ತವೆ.
ಹುಲ್ಲು ಮಲೆತು ನಿಲ್ಲತ್ತದೆ,
ಜನರ ವಿರುದ್ಧ
ಹೂವಿನ ವಿರುದ್ಧ
ಪ್ರಾಣವಾಯು
ನಿಮ್ಮೆದೆಯ ನೋವಾಗಿ
ಹೃದಯವನ್ನು ಹೀರುತ್ತದೆ,
ನುಂಗುತ್ತದೆ
ನೊಣೆಯುತ್ತದೆ.
ಓ ನಾಗಸಾಕಿ,
ಮಳೆಯಂತೆಯೇ ದ್ವೇಷವನ್ನೂ
ತಾಳಲಾಗುವುದಿಲ್ಲ ನಿನಗೆ
ಆದರೆ
ನಿನ್ನನ್ನು
ಸಾಯಲು ಬಿಡುವುದಿಲ್ಲ ನಾವು
ಜೀವ ತುಂಬುತ್ತೇವೆ.
ಸಿದ್ಧಾಂತಗಳ ಪ್ರಶ್ನೆಯಿಲ್ಲಿಲ್ಲ
ಧರ್ಮಗಳ ಪ್ರಶ್ನೆಯೂ ಇಲ್ಲಿಲ್ಲ
ಇದು ಕೇವಲ ಜೀವನದ ಪ್ರಶ್ನೆ
ಸರಳ ಸುಂದರ ಜೀವನದ ಪ್ರಶ್ನೆ
ಆಗ
ನಾವೆಲ್ಲರೂ ಒಟ್ಟಾದಾಗ
ʻನಾಗಸಾಕಿಗಳನ್ನು ಸೃಷ್ಟಿಸಲು ಯಾರಿಗೂ ಬಿಡೆವುʼ
ಎಂದು ಪಣತೊಟ್ಟಾಗ
ಮಳೆ ಬಯಲಾಗುತ್ತದೆ.
ಮರಗಿಡಗಳೂ ಬಾಡದೆ ನಳನಳಿಸುತ್ತವೆ.
* * *
0 Comments