ಜಿ ಎನ್ ನಾಗರಾಜ್ ಅಂಕಣ – ಹೆಣ್ಣಿನ ಗರ್ಭದಿಂದ ವಿಕಾಸವಾದದ ಜನನ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

46

ಮಕ್ಕಳೇ, ಈ ಪೀರಿಯಡ್‌ನಲ್ಲಿ ವಸ್ತುಗಳನ್ನು ಗ್ರಹಿಸುವ ( perception ) ಮತ್ತು ಅದರ ಆಧಾರದ ಮೇಲೆ ಕೈಗೊಳ್ಳುವ ತೀರ್ಮಾನಗಳಲ್ಲಿ ( inference ) ಕೆಲವೊಮ್ಮೆ ಇರುವ ದೋಷಗಳ ಬಗ್ಗೆ ತಿಳಿದುಕೊಳ್ಳೋಣ. ಪಂಚೇಂದ್ರಿಯಗಳು ಈ ಜಗತ್ತಿನ ಬಗಗೆ ಅರಿವು ಮೂಡಿಸುತ್ತವೆ. ಅವುಗಳಿಲ್ಲದೆ‌ ಅರಿವೆಂಬುದು ಸಾಧ್ಯವಿಲ್ಲ. ಆದರೆ ಅವುಗಳಿಂದ ನಮಗೆ ಸಿಗುವ ಮಾಹಿತಿಯಲ್ಲಿ ಹಲವೊಮ್ಮೆ ಕೆಲವು ದೋಷಗಳು ಇರುವ ಸಂಭವ ಇದೆ. ಈ ದೋಷಗಳು ಹೇಗೆ ಸಂಭವಿಸುತ್ತವೆ, ಅದರ ಬಗ್ಗೆ ವಹಿಸಬೇಕಾದ ಎಚ್ಚರ ಏನು ?
ಅತಿ ದೂರಾತ್ ಸಾಮೀಪ್ಯಾದ್
ಇಂದ್ರಯಾಘಾತಾನ್ ಮನೋನವಸ್ಥಾನಾತ್/
ಸೂಕ್ಷ್ಮ್ಯಾತ್ ವ್ಯವಧಾನಾತ್
ಅಭಿಭಾವಾತ್ ಸಮಾನ ಅಭಿಹಾರಾಚ್ಛ//
( ಸಾಂಖ್ಯಕಾರಿಕಾ -7)

  1. ಅತಿದೂರಾತ್ -ವಸ್ತುಗಳು ಅತಿ ದೂರ ಇದ್ದರೂ ಅವುಗಳನ್ನು ಸರಿಯಾಗಿ ಗ್ರಹಿಸಲಾಗುವುದಿಲ್ಲ.
  2. ಸಾಮೀಪ್ಯಾದ್ – ಇಂದ್ರಿಯಗಳು ಗ್ರಹಿಸಲು ಸಾಧ್ಯವಾಗುವುದಕ್ಕಿಂತ ಬಹಳ ಸಮೀಪ ಇದ್ದರೂ ನಮ್ಮ ಕಣ್ಣು,ಕಿವಿ, ಮೂಗು ಮೊದಲಾದ ಎಲ್ಲ ಇಂದ್ರಿಯಗಳು ವಸ್ತುಗಳ ಸ್ವರೂಪವನ್ನು ಸರಿಯಾಗಿ ಗ್ರಹಿಸಲಾಗುವುದಿಲ್ಲ.
  3. ಇಂದ್ರಿಯಾಘಾತಾನ್- ಇಂದ್ರಿಯಗಳಿಗೆ ಹಾನಿಯಾಗಿದ್ದರೆ ಕೂಡಾ ತಿಳಿಯುವುದಿಲ್ಲ.
  4. ಮನೋನವಸ್ಥಾನಾತ್- ಮನಸ್ಸನ್ನು ಕೇಂದ್ರೀಕರಿಸದಿದ್ದರೆ, ಚಂಚಲವಾಗಿದ್ದರೆ ಕೂಡಾ ತಿಳಿಯುವುದಿಲ್ಲ.
  5. ಸೂಕ್ಷ್ಮ್ಯಾತ್- ವಸ್ತುಗಳು ಬಹಳ ಸೂಕ್ಷ್ಮವಾಗಿದ್ದರೆ ಕೂಡಾ ನಮ್ಮ ಇಂದ್ರಿಯಗಳು ಅವುಗಳನ್ನು ಗುರುತಿಸಲಾರವು.
  6. ವ್ಯವಧಾನಾತ್- ನಮಗೆ ಅವುಗಳನ್ನು ತಿಳಿದುಕೊಳ್ಳುವ ವ್ಯವಧಾನ- ಸಮಯ, ಸಾಧನಗಳಿಲ್ಲದಿದ್ದರೂ ಕೂಡಾ ತಿಳಿದುಕೊಳ್ಳಲು ಅಡ್ಡಿಯಾಗುತ್ತದೆ.
  7. ಅಭಿಭಾವಾತ್- ನಾವು ಗ್ರಹಿಸಬಯಸುವ ವಸ್ತುಗಳಿಗೆ ಬೇರೆ ವಸ್ತುಗಳು ಅಡ್ಡವಾಗಿದ್ದರೂ ಕೂಡಾ ನಾವು ತಿಳಿದುಕೊಳ್ಳಬೇಕಾಗಿರುವ ವಸ್ತುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ.
  8. ಸಮಾನ ಅಭಿಹಾರಾಚ್ಛ- ವಸ್ತುಗಳು ಒಂದೇ ರೀತಿಯವಾಗಿದ್ದರೆ, ಹೀಗೆ ಒಂದೇ ರೀತಿಯವು ಬೆರೆತು ಕಲಬೆರಕೆಯಾಗಿದ್ದರೆ ಕೂಡಾ ತಿಳಿದುಕೊಳ್ಳುವುದು ಕಷ್ಟ.

ತಿಳಿಯಿತೇ, ವತ್ಸರೇ, ಯಾವುದೇ ವಸ್ತುವನ್ನು ಗ್ರಹಿಸುವಾಗ, ಅವುಗಳ ಸ್ವರೂಪದ ಬಗ್ಗೆ ತೀರ್ಮಾನಕ್ಕೆ ಬರುವಾಗ ಈ 8 ಅಂಶಗಳ ಬಗ್ಗೆ ‌ಎಚ್ಚರವಿರಬೇಕು. ಮರೆಯದಿರಿ.

ಮಾನವರ ಗ್ರಹಿಸುವಿಕೆಯ ಬಗ್ಗೆ ಈ ವಿವರಣೆ ಓದಿದ ಮೇಲೆ ನಿಮಗೆ ಏನೆನ್ನಿಸುತ್ತದೆ‌?
21 ನೆಯ ಶತಮಾನದ ಮನಶ್ಶಾಸ್ತ್ರದ ಅಥವಾ ವೈದ್ಯಕೀಯ ಪದವಿ ತರಗತಿಯಲ್ಲಿ ಗ್ರಹಿಸುವಿಕೆ ಬಗ್ಗೆ ಒಳ್ಳೆಯ ಅರಿವು ಮೂಡಿಸುವ ಉಪನ್ಯಾಸ ಕೇಳಿದೆವೆಂದೆನಿಸುವುದಿಲ್ಲವೆ !

ಇದು ಷಡ್ದರ್ಶನಗಳಲ್ಲೊಂದು ಎಂದು ಪರಿಗಣಿತವಾದ ಸಾಂಖ್ಯ ದರ್ಶನದ ಭಾಗ.
ಈ ವಿಷಯದ ಬಗ್ಗೆ ಈ ತೆರನ ವಿಶ್ಲೇಷಣೆ ಯಾವುದಾದರೂ ಉಪನಿಷತ್ತುಗಳಲ್ಲಿ, ಇತರ ವೈದಿಕ ತತ್ವಶಾಸ್ತ್ರದ ಗ್ರಂಥಗಳಲ್ಲಿ ಕಾಣುತ್ತದೆಯೇ ? ನಾನು ವೈದಿಕ ಗ್ರಂಥಗಳನ್ನು ವಿಶದವಾಗಿ ಅಧ್ಯಯನ ಮಾಡಿದವನೇನಲ್ಲ. ಆದ್ದರಿಂದ ಬಲ್ಲವರು ಯಾರಾದರೂ ದಯವಿಟ್ಟು ಮಾಹಿತಿ ನೀಡುವಿರಾ ?

ಮತ್ತೊಂದು ಉದಾಹರಣೆ ನೋಡೋಣ :

ಯಾವುದಾದರೂ ಒಂದು ಸಂಗತಿಯ ಬಗ್ಗೆ ನಾವು ಹೇಗೆ ತೀರ್ಮಾನಕ್ಕೆ ಬರುತ್ತೇವೆ :
ನಮ್ಮ ವಿವಿಧ ಇಂದ್ರಿಯಗಳು ವಸ್ತುಗಳನ್ನು ತಮ್ಮದೇ ಸಾಧನಗಳಿಂದ ಗ್ರಹಿಸುತ್ತವೆ. ಕಣ್ಣು, ಕಿವಿ, ಮೂಗು, ಚರ್ಮ ನಾಲಗೆ ಪ್ರತಿಯೊಂದು ಇಂದ್ರಿಯವು ಸಂಗ್ರಹಿಸುವ ಮಾಹಿತಿಯೂ ಬೇರೆ ಬೇರೆ. ಆದರೆ ಬುದ್ಧಿ ಈ ಎಲ್ಲ ಮಾಹಿತಿಗಳನ್ನೂ ಒಟ್ಟಾಗಿಸುತ್ತದೆ.

ಒಂದು ದೀಪದಲ್ಲಿ ಎಣ್ಣೆ, ಉರಿಯುವ ಬತ್ತಿ , ಮಣ್ಣಿನ ಅಥವಾ ಲೋಹದ ಕುಡಿಕೆ ಇವೆಲ್ಲ ಬೇರೆ ಬೇರೆ. ಆದರೆ ಇವೆಲ್ಲ ಸೇರಿ ಬೆಳಕು ನೀಡುವ ದೀಪವಾಗುತ್ತದೆ. ಹಾಗೆಯೇ ಒಂದು ವಸ್ತುವಿನ ಬೇರೆ ಬೇರೆ ಅಂಶಗಳನ್ನು ಒಟ್ಟಯಿಸಿದಾಗ ಮೂಡುವ ಚಿತ್ರ ಹೆಚ್ಚಿನ ಮತ್ತು ಸಮಗ್ರ ಅರಿವನ್ನು ಮೂಡಿಸುತ್ತದೆ. ಬುದ್ಧಿಯ ಕೆಲಸ ಹೀಗೆ ನಮಗೆ ಬದುಕಿನ ಬಗ್ಗೆ ಸಮಗ್ರ ಅನುಭವವನ್ನು ನೀಡುವುದು. ( ಸಾಂಖ್ಯಕಾರಿಕಾ 36)

ಮನುಷ್ಯರ ಗ್ರಹಿಸುವಿಕೆ ( perception), ವೀಕ್ಷಣೆ (observation ) ಅವುಗಳಿಂದ ಪಡೆಯುವ ಅರಿವಿನ ವಿಧಾನ ಇವುಗಳ ಬಯ ಇಂತಹ ಹಲವು ಉದಾಹರಣೆಗಳಿವೆ. ಪೂರ್ವವತ್- ಹಿಂದಿನ ಅನುಭವದ ಆಧಾರದ ಮೇಲೆ ತಿಳಿದುಕೊಳ್ಳುವುದು, ತೀರ್ಮಾನಗಳಿಗೆ ಬರುವುದು, ಶೇಷವತ್- ಒಂದು ಘಟನೆಯ ನಂತರ ಅದು ಉಳಿಸಿದ ಗುರುತುಗಳು- ಶೇಷದ ಆಧಾರದ ಬರುವ ತಿಳಿಯುವ ವಿಷಯ ಸಾಮಾನ್ಯತೋ ದೃಷ್ಟ- ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತಹ ವಿಷಯಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರುವುದು (ಸಾಂಖ್ಯಕಾರಿಕಾ-5)

ಸಾಂಖ್ಯ ದರ್ಶನದ ಬಹಳ ಮುಖ್ಯ ತಿರುಳು ಅದರ ವಿಕಾಸ ತತ್ವ. ಜಗತ್ತಿನ ಮೊತ್ತ ಮೊದಲ ವಿಕಾಸ ತತ್ವ ಎನ್ನಬಹುದಾದುದು. ಅಂದಿಗೆ ಈ ಶೋಧ ಬಹು ದೂರ ದೃಷ್ಟಿಯನ್ನುಳ್ಳ, ದಿಟ್ಟ ವಿಚಾರ. ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಸಮಯದಲ್ಲಿ ಅದನ್ನು ರೂಪಿಸಬೇಕೆಂದು ಅದರ ಉಪಕುಲಪತಿಗಳಾಗಿ ಆಹ್ವಾನಿಸಿ ಕರೆತರಲಾದ, ಡಾ.ಬ್ರಜೇಂದ್ರ ನಾಥ ಸೀಲರು , ರವೀಂದ್ರನಾಥ ಠಾಕೂರರಿಂದ ತಾವು ಸ್ಥಾಪಿಸಿದ ಶಾಂತಿನಿಕೇತನವನ್ನು ರೂಪಿಸಲೂ ಕೂಡಾ ಆಹ್ವಾನಿತರಾಗಿದ್ದವರು. ಅಂದು ಭಾರತದ ವಿಜ್ಞಾನದ ಇತಿಹಾಸದ ಬಗ್ಗೆ ತಮ್ಮ ಸಂಶೋಧನೆಯಿಂದ ಬಹಳ ಪ್ರಸಿದ್ಧರಾಗಿದ್ದರು. ಅವರು ತಮ್ಮ ಸಂಶೋಧನಾ ಗ್ರಂಥದಲ್ಲಿ ಸಾಂಖ್ಯ ದರ್ಶನ ರೂಪಿಸಿದ ವಿಕಾಸವಾದದ ಪ್ರಾಮುಖ್ಯತೆಯ ಬಗ್ಗೆ ಹೀಗೆ ಹೇಳಿದ್ದಾರೆ. ‘ ಸಾಂಖ್ಯ ದರ್ಶನದಲ್ಲಿ ವಿಶ್ವದ ವಿಕಾಸದ ಪ್ರಕ್ರಿಯೆಯನ್ನು ಸ್ಪಷ್ಟವಾಗಿಯೂ ಸಮಗ್ರವಾಗಿಯೂ ವಿವರಿಸುವ ಅತ್ಯಂತ ಪುರಾತನವಾದ ವಿಚಾರ ಸರಣಿಯು ಅಡಕವಾಗಿದೆ.

ಆದ್ದರಿಂದಾಗಿ ಬೌದ್ಧಿಕ ಚಿಂತನೆಯ ಸ್ಥಾನದಲ್ಲಿ ಅದಕ್ಕೆ ಅಸದೃಶವಾದ ಸ್ಥಾನವಿದೆ.
ಹಿಂದಿನ ಲೇಖನದಲ್ಲಿ ವಿವರಿಸಿದಂತೆ ಮುಂದಿನ ಅನೇಕ ತತ್ವಶಾಸ್ತ್ರಗಳು, ಧಾರ್ಮಿಕ ಪಂಥಗಳು, ವಚನ ಚಳುವಳಿಯ ಮೇಲೆ ಪ್ರಭಾವ ಬೀರಿದ ತತ್ವ. ಈ ವಿಕಾಸವಾದದ ಭಾಗವಾಗಿಯೇ ಚರಕ ಸಂಹಿತೆ, ಶುಶ್ರುತ ಸಂಹಿತೆಗಳಲ್ಲಿ ವಿವರಿಸಲಾದ ಚತುರ್ವಿಂಶತಿ (24) ಅಂಗ ತತ್ವಗಳು ರೂಪುಗೊಂಡಿವೆ. ಸಾಂಖ್ಯ ದರ್ಶನದ ಈ ವಿಕಾಸವಾದದ ಮೊದಲನೆಯ ತತ್ವ ‘ಇಲ್ಲದ್ದರಿಂದ ಇರುವುದು ಸೃಷ್ಟಿಯಾಗುವುದಿಲ್ಲ. ಅರ್ಥಾತ್ ಶೂನ್ಯದಿಂದ ಏನೂ ಸೃಷ್ಟಿಯಾಗುವುದಿಲ್ಲ’. ಯಾವ ವಸ್ತುವಾದರೂ ಸೃಷ್ಟಿಯಾಗಬೇಕಾದರೆ ಅದಕ್ಕೆ ಕಾರಣವಾದ ಮೂಲ ವಸ್ತುವೊಂದು ಇದ್ದಿರಲೇಬೇಕು. ನಾವು ಅನ್ವೇಷಿಸುತ್ತಿರುವ ವಸ್ತುವಿನ ಸ್ವರೂಪದಿಂದ ಅದರ ಅಸ್ತಿತ್ವಕ್ಕೆ ಕಾರಣವಾದ ಮೂಲ ವಸ್ತು ಯಾವುದೆಂಬುದನ್ನು ತಿಳಿಯಬಹುದು.

ಇದು ಮನುಷ್ಯರ ದೈನಂದಿನ ಅನುಭವಗಳಿಂದಲೇ ತಿಳಿಯಬಹುದಾದ ಸತ್ಯ. ಮೊಸರಿನ ಅಸ್ತಿತ್ವಕ್ಕೆ ಹಾಲು ಕಾರಣ. ಹಾಲು ಇಲ್ಲದೆ ಮೊಸರು‌ ಉಂಟಾಗುವುದಿಲ್ಲ. ತಾತ್ವಿಕ ಪರಿಭಾಷೆಯಲ್ಲಿ ಹಾಲು ಕಾರಣ ಮೊಸರು ಕಾರ್ಯ. ಹಾಗೆಯೇ ಭತ್ತದ ಬೆಳೆ ಭತ್ತದ ಬೀಜದಿಂದಲೇ ಬಂದಿರಬೇಕು. ಬೇರಾವುದರಿಂದಲೋ ಅದು ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇಲ್ಲ. ಅಸ್ತಿತ್ವದಲ್ಲೇ ಇಲ್ಲದುದರಿಂದ ಸೃಷ್ಟಿಯಾಗಲೂ ಸಾಧ್ಯವಿಲ್ಲ. ಈ ತತ್ವವನ್ನು ವಿಶ್ವದ ಮೊದಲ ವಿಜ್ಞಾನಿ ಎಂದು ಗುರುತಿಸಲಾದ ಉದ್ದಾಲಕ ಅರುಣಿಯ ಶೋಧಗಳಲ್ಲೇ ಕಾಣಬಹುದು. ಅಸತ್ ಅಂದರೆ ಅಸ್ತಿತ್ವದಲ್ಲಿ ಇಲ್ಲದುದರಿಂದ ಸತ್ ( ಅಸ್ತಿತ್ವದಲ್ಲಿರುವ ವಸ್ತು ) ಸೃಷ್ಟಿಯಾಗಲು ಸಾಧ್ಯವಿಲ್ಲ ಎಂಬ ಅವರು ರೂಪಿಸಿದ ಈ ತತ್ವಕ್ಕೆ ಸತ್ಕಾರ್ಯವಾದ ಎಂದು ಹೆಸರಿಸಲಾಗಿದೆ. ಈ ತತ್ವದ ಒಂದು ಅಂಗವೆಂದರೆ ಭತ್ತದ ಸಸಿ ಎಂಬ ಕಾರ್ಯ ಭತ್ತದ ಬೀಜ ಎಂಬ ಕಾರಣದಲ್ಲಿ ಮೊದಲೇ ಅಸ್ತಿತ್ವದಲ್ಲಿದೆ. ಆ ಕಾರಣದಿಂದ ಈ ಕಾರ್ಯ ಉದ್ಭವಿಸಿದೆ. ಆದ್ದರಿಂದ ಅಸ್ತಿತ್ವದಲ್ಲಿರುವ ಯಾವುದೇ ವಸ್ತುವನ್ನು ಪರಿಶೀಲಿಸಿ ಅದರ ಕಾರಣವಾದ ವಸ್ತುವಿನ ಬಗ್ಗೆ ತಿಳಿದುಕೊಳ್ಳಬಹುದು.

ಇದೇ ಸತ್ಯವನ್ನು ಅಸ್ತಿತ್ವದಲ್ಲಿರುವ ವಿಶ್ವಕ್ಕೆ, ವ್ಯೋಮಕ್ಕೆ ಅನ್ವಯಿಸಿದರೆ ಈ ವಿಶ್ವ, ವ್ಯೋಮಗಳೂ ಕೂಡಾ ಅಸ್ತಿತ್ವದಲ್ಲಿರುವ ವಸ್ತುವಿನಿಂದಲೇ ಉಗಮ ಹೊಂದಿವೆ. ಅಸ್ತಿತ್ವದಲ್ಲೇ ಇಲ್ಲದ ವಸ್ತುಗಳಿಂದ ಯಾರೋ ಅದನ್ನು ಸೃಷ್ಟಿಸಿರಲು ಸಾಧ್ಯವಿಲ್ಲ. ಅಸ್ತಿತ್ವದಲ್ಲಿರುವ ವಿಶ್ವ , ವ್ಯೋಮ ಭೌತ ವಸ್ತುವಾದುದರಿಂದ ಅದರ ಮೂಲ ಕಾರಣವೂ ಭೌತ ವಸ್ತುವೇ ! ಈ ತೀರ್ಮಾನಕ್ಕೆ ಸಾಂಖ್ಯ ದರ್ಶನ ರೂಪಿಸಿದವರು ಬಂದಿದ್ದಾರೆ. ಈ ಮೂಲಕಾರಣ ವಸ್ತುವನ್ನು ಅವರು ಅವ್ಯಕ್ತ ಅಥವಾ ಪ್ರಧಾನ ಎಂದು ಕರೆದಿರುವುದರಿಂದ ಇದನ್ನು ಪ್ರಧಾನವಾದ ಎಂದು ಕರೆಯಲಾಗಿದೆ.

ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ. ಇರುವುದನ್ನೆಲ್ಲ ಬ್ರಹ್ಮನೇ ಶೂನ್ಯದಿಂದ ಸೃಷ್ಟಿ ಮಾಡಿದ್ದಾನೆ, ಎಂಬ ಮಾತಂತೂ ಜನ ಸಾಮಾನ್ಯರಲ್ಲಿ ಜನ‌ಜನಿತವಾಗಿದೆಯಲ್ಲ. ಭಾರತದಲ್ಲಿ ಬೌದ್ಧ ಧರ್ಮವೊಂದರ ಹೊರತಾಗಿ ಎಲ್ಲ ಧರ್ಮಗಳವರನ್ನೂ ಈ ವಿಚಾರ ಆವರಿಸಿದೆ. ಅಷ್ಟೇ ಅಲ್ಲದೆ ವಿಶ್ವದೆಲ್ಲ ಧರ್ಮಗಳಲ್ಲಿಯೂ ಈ ಚಿಂತನೆ ಪ್ರಬಲವಾಗಿದೆ. ಈ ವಾದಕ್ಕೆ ಬ್ರಹ್ಮವಾದ, ಬ್ರಹ್ಮ ಕಾರಣವಾದ ತತ್ವಶಾಸ್ತ್ರದಲ್ಲಿ ಎಂದು ಕರೆಯಲಾಗಿದೆ. ಸಾಂಖ್ಯ ತತ್ವದರ್ಶನದ ವಿರುದ್ಧ ತಾತ್ವಿಕ ಯುದ್ಧವನ್ನೇ ಸಾರಿದವರು ಬ್ರಹ್ಮ ಮಾತ್ರ ಸತ್ಯ ಜಗತ್ತೆಲ್ಲ ಮಿಥ್ಯ ಎಂದು ಪ್ರತಿಪಾದಿಸಿದ ಬ್ರಹ್ಮ ಸೂತ್ರದ ಕತೃಗಳು ಮತ್ತು ಅದಕ್ಕೆ ಮತ್ತು ಮುಖ್ಯ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ಬಹುವಾಗಿ ಪಸರಿಸಿದ ಶಂಕರರು ಮತ್ತು ಇತರ ಆಚಾರ್ಯರುಗಳು. ಅವರು ಸಾಂಖ್ಯದ ಈ ತತ್ವವನ್ನು ಅಚೇತನವಾದವೆಂದು ಕರೆದರು.

ಚೇತನವಾದ ಮತ್ತು ಅಚೇತನವಾದಗಳ ನಡುವೆ ಸಂಘರ್ಷ ನಡೆದಿದೆ. ಅಂದು ಎಲ್ಲೆಡೆಯೂ ಹಾಗೂ ಎಲ್ಲ ಪ್ರಭುತ್ವಗಳೂ ಬಹು ದೊಡ್ಡ ಗಂಟಲಲ್ಲಿ ಬ್ರಹ್ಮವಾದವನ್ನು ಸಾರುತ್ತಿದ್ದ ಕಾಲದಲ್ಲಿ ಸಾಂಖ್ಯರ ಈ ತತ್ವದರ್ಶನ ಅವರ ಕಣ್ಣಿನಲ್ಲಿ ಎಷ್ಟೊಂದು ಅಪಾಯಕಾರಿಯಾಗಿ ಕಂಡಿರಬಹುದು ಊಹಿಸಿ. ಇಂತಹ ತತ್ವವನ್ನು ಮುಂದಿಟ್ಟವರಿಗೆ ನಿಜಕ್ಕೂ ಎಂಟೆದೆ ಇರಬೇಕು. ಬ್ರಹ್ಮ ಸೂತ್ರ ಎಂಬುದು ಎಲ್ಲ ಬ್ರಹ್ಮ ವಾದಿಗಳಿಗೆ ಆಧಾರಭೂತವಾದ ಗ್ರಂಥ. ಅದರಲ್ಲಿ 43 ಸೂತ್ರಗಳಲ್ಲಿ ಇತರ ಎಲ್ಲ ತತ್ವಗಳನ್ನು ಖಂಡಿಸಲಾಗಿದೆ. ಜೈನ ಸಿದ್ಧಾಂತವನ್ನು ಖಂಡಿಸಲು ನಾಲ್ಕು, ಬೌದ್ಧ ತತ್ವಗಳನ್ನು ಖಂಡಿಸಲು ಹದಿನೇಳು. ಆದರೆ ಸಾಂಖ್ಯದ ವಿಕಾಸವಾದವನ್ನು ಖಂಡಿಸಲು 60 ಸೂತ್ರಗಳು ಮೀಸಲಾಗಿವೆ ಎಂದರೆ ಈ ತತ್ವ ಅದೆಷ್ಟು ಬಾಧೆಯನ್ನುಂಟು ಮಾಡಿರಬಹುದು ಎಂದು ಊಹೆ ಮಾಡಬಹುದು.

ಶಂಕರರಂತೂ ಸಾಂಖ್ಯ ದರ್ಶನವನ್ನು ಅವರ‌ ಅದ್ವೈತ ಮತ್ತು ವೇದಾಂತದ ಪ್ರಧಾನ ಮಲ್ಲ ಎಂದು ಕರೆದಿದ್ದಾರೆ. ಕುಸ್ತಿಯಲ್ಲಿ ಪ್ರಧಾನ ಮಲ್ಲನನ್ನು ಸೋಲಿಸಿದರೆ ಉಳಿದೆಲ್ಕರನ್ನೂ ಸೋಲಿಸಿದಂತಲ್ಲವೇ ! ಹೀಗೆ ಸಾಂಖ್ಯವನ್ನು ಉಳಿದೆಲ್ಲ ಬ್ರಹ್ಮವಾದ,ಚೇತನವಾದಗಳಿಗಿಂತ ಪೂರ್ತಿ ಭಿನ್ನವಾದ ಭೌತವಾದ ಎಂದು ಪರಿಗಣಿಸಿದ್ದಾರೆ. ಜೈನ ಬೌದ್ಧ ಧರ್ಮಗಳ ಸಾಲಿನಲ್ಲಿಯೇ ನಾಸ್ತಿಕವಾದ ಎಂದು ಕರೆದಿದ್ದಾರೆ.

ಅದಕ್ಕೆ ಪ್ರಧಾನ ಕಾರಣ ಸಾಂಖ್ಯದ ತತ್ವಗಳ , ಮುಖ್ಯವಾಗಿ ಅದರ ವಿಕಾಸವಾದದ ಬಲವಾದ ಹೂರಣ. ಆದರೆ ಅಂದು ಕ್ರಿಸ್ತ ಶಕದ ಮೊದಲ ಶತಮಾನಗಳಲ್ಲಿ ರಚಿತವಾದುವೆನ್ನಲಾದ ಆಗಮಗಳ ಮೇಲೆ, ಶಂಕರರಿಗಿಂತ ಪೂರ್ವದಲ್ಲಿ ಒಂದೆರಡು ಶತಮಾನಗಳಲ್ಲಿ ತಾಂತ್ರಿಕ ಸಿದ್ಧರು, ತಮಿಳು ಶೈವ, ಕಾಶ್ಮೀರ ಶೈವಗಳ ಮೇಲೆ ಬೀರಿದ ಪ್ರಭಾವವೂ ಕಾರಣ. ಕೇರಳ ಮೂಲದ ಶಂಕರರಿಗೆ ತಮಿಳು ಶೈವದ ಸಿದ್ಧಾಂತಗಳ ಹಾಗೂ ಕಾಶ್ಮೀರದಲ್ಲಿ ಕೆಲ ಕಾಲ ಕಳೆದ ಅವರಿಗೆ ಕಾಶ್ಮೀರದ ಪತ್ಯಭಿಜ್ಞಾ ಶಾಸ್ತ್ರದ ಮೇಲೆ, ದೇಶದ ಇತರೆಡೆಗಳ ಶೈವ ಹಾಗೂ ತಾಂತ್ರಿಕ ಪಂಥಗಳ ಮೇಲೆ ಪ್ರಭಾವ ಬೀರಿದ್ದರ ಮಾಹಿತಿ ಇರುವುದು ಸಹಜ ತಾನೇ.

ಸಾಂಖ್ಯ ದರ್ಶನದ ವಿಕಾಸವಾದ :
ಸಾಂಖ್ಯ ದರ್ಶನದಲ್ಲಿ ಇಡೀ ವಿಶ್ವ ಭೌತ ವಸ್ತುಗಳಿಂದ ರಚನೆಯಾಗಿರುವುದರಿಂದ ವಿಶ್ವದ ಮೂಲ ವಸ್ತುವೂ ಭೌತ ವಸ್ತುವೇ. ಅದು ಪ್ರಧಾನ, ಪ್ರಕೃತಿ ಅಥವಾ ಅವ್ಯಕ್ತ ಎಂದು ಕರೆದಿದ್ದಾರೆ. ಈ ವಿಶ್ವ ಭೌತವಸ್ತುವಿನ ವ್ಯಕ್ತ ರೂಪವಾದರೆ ಅದರ ಮೂಲ ಅವ್ಯಕ್ತವಾಗಿರುವ ಭೌತ ವಸ್ತು ಎಂದು ಅವರ ಚಿಂತನೆ. ಭತ್ತದ ಬೀಜದಲ್ಲಿ ಅವ್ಯಕ್ವಾಗಿರುವ ಭತ್ತದ ಸಸ್ಯದಂತೆ.

ಪ್ರಕೃತಿ ಪ್ರಧಾನಪದೇನ ವೇದನೀಯಾ ಮೂಲ ಪ್ರಕೃತಿಃ/ ಪ್ರಕರೋತಿ ಇತಿ ಪ್ರಕೃತಿ ರಿತಿ ಉತ್ಪತ್ಯಾ ಪ್ರಕೃತಿ ಎಂದರೆ ಪ್ರಧಾನ ಎಂಬ ಪದದಿಂದ ಹೆಸರಿಸಲ್ಪಡುವ ಮೂಲ ಪ್ರಕೃತಿ. ಪ್ರ- ಕೃತಿ ಎಂಬ. ಪದದ ಉತ್ಪತ್ತಿ ‘ಹೆಚ್ಚಾಗಿ ಕೃತಿಸುತ್ತದೆ’ ರಚಿಸುತ್ತದೆ ಎಂಬುದಕ್ಕಾಗಿಯೇ ಅದಕ್ಕೆ ಪ್ರಕೃತಿ ಎಂಬ ಹೆಸರು. ಇದು ಕರ್ನಾಟಕದ ಸಾಯಣಾಚಾರ್ಯನ ( ವಿದ್ಯಾರಣ್ಯರೆಂದು ಹೆಸಾರಾದ ಮಾಧವಾಚಾರ್ಯನ ತಮ್ಮ ) ಮಗನಾದ ಮಾಧವಾಚಾರ್ಯನಿಂದ ರಚಿತವಾದ ಸರ್ವ ದರ್ಶನ ಸಂಗ್ರಹದ ವಿವರಣೆ ಇದು. ಇದು ನಾವು ಸಾಮಾನ್ಯವಾಗಿ ಕರೆಯುವ ಪ್ರಕೃತಿಗಿಂತ ಭಿನ್ನವಾದ ಎಲ್ಲದರ ಮೂಲವಾದ, ರೂಪ ಆಕಾರವಿಲ್ಲದ ವಸ್ತು. ಆದ್ದರಿಂದ ಇದನ್ನು ಗುರುತಿಸಲು ಮೂಲ ಪ್ರಕೃತಿ ಎನ್ನುತ್ತಾರೆ.

ಇದರಿಂದ ಮಹತ್ ಅಥವಾ ಬುದ್ಧಿ ವಿಕಾಸವಾಗುತ್ತದೆ. ಮಹತ್‌ನಿಂದ ಅಹಂಕಾರ ಎಂದು ಹೆಸರಿಸಲಾದ ಅಭಿಮಾನ ಅಥವಾ ಸ್ವಪ್ರಜ್ಞೆ ವಿಕಾಸವಾಗುತ್ತದೆ. ಈ ಸ್ವ ಪ್ರಜ್ಞೆಯಿಂದ ಮನಸ್ಸು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ವಿಕಾಸವಾಗುತ್ತವೆ. ಮುಂದೆ ಜ್ಞಾನೇಂದ್ರಿಯಗಳಿಗೆ ವಿಷಯಗಳಾದ ರೂಪ,ರಸ,ಗಂಧ,ಸ್ಪರ್ಶ, ಶಬ್ದ ಎಂಬ ಐದು ತನ್ಮಾತ್ರೆ ಅಥವಾ ಸೂಕ್ಷ್ಮ ಭೂತಗಳು ಉಗಮಗೊಳ್ಳುತ್ತವೆ. ಈ ಸೂಕ್ಷ್ಮ ಭೂತಗಳಿಂದ ಸ್ಥೂಲ ಭೂತಗಳು ಎಂದು ಕರೆಯಲ್ಪಟ್ಟ ಭೂಮಿ ಮೊದಲಾದ ಪಂಚ ಭೂತಗಳುವಿಕಾಸವಾಗುತ್ತವೆ.

ಈ ವಿಕಾಸದ ಸ್ವರೂಪವನ್ನು ನಾವು ಆಧುನಿಕ ವಿಕಾಸವಾದದೊಂದಿಗೆ ತುಲನೆ ಮಾಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಇದು ಅತ್ಯಂತ ಪ್ರಾಚೀನವಾದದ್ದು. ಒಂದು ರೀತಿ ತಿರುವುಮರುವಾಗಿ ಕಾಣುವ ಈ ಪ್ರಕ್ರಿಯೆಯನ್ನು ಅರ್ಥ ಮಾಡುಕೊಳ್ಳುವುದೂ ಕಷ್ಟವೆನಿಸಬಹುದು. ಆದರೆ ಈ ತತ್ವಗಳು‌ ಹೇಗೆ ರೂಪುಗೊಂಡಿರಬಹುದು ಎಂದು ತಿಳಿದುಕೊಂಡರೆ ಅವರ ಚಿಂತನೆಯ ದಿಕ್ಕು ದೆಸೆ ನಮಗೆ ಅರ್ಥವಾಗುತ್ತದೆ ಮಾತ್ರವಲ್ಲ ಆಶ್ಚರ್ಯವಾಗುತ್ತದೆ. ಈ ವಿಕಾಸ ತತ್ವದ ಉಗಮ ಹೆಣ್ಣಿನ ಗರ್ಭದಲ್ಲಿ ಭ್ರೂಣ ಹುಟ್ಟಿ ಬೆಳೆದು ಮಗುವಾಗಿ ಹೊರಲೋಕವನ್ನು ನೋಡುವ ಪ್ರಕ್ರಿಯೆಯಲ್ಲಿ ಈ ತತ್ವ ಹುಟ್ಟಿದೆ. ಪ್ರಕೃತಿ -ಪುರುಷ ಎಂಬ ಭಾರತದ ಪ್ರಸಿದ್ಧ ತಾತ್ವಿಕತೆಯೂ ಇದರೊಡನೆ ಮಿಳಿತವಾಗಿದೆ. ಅದನ್ನು ಸ್ಥಳಾಭಾವದಿಂದ ಮುಂದಿನ ಲೇಖನದಲ್ಲಿ ವಿವರಿಸಲಾಗುವುದು. ಇದು ಸಾಂಖ್ಯ ದರ್ಶನವನ್ನು ಮೊದಲಿಗೆ ರೂಪಿಸಿದ ಚಿಂತಕರ ಕಾಲದ ವಿಕಾಸವಾದ. ಈ ಕಾಲವನ್ನು ಸುಮಾರು ಕ್ರಿಸ್ತ ಪೂರ್ವ ೭೦೦ ವರೆಗೂ ಗುರುತಿಸಲಾಗಿದೆ. ತಾಂತ್ರಿಕರು, ಲೋಕಾಯತ ಇವುಗಳಿಂದ ಈ ದರ್ಶನ ಉಗಮವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.

ಉಪನಿಷತ್ತುಗಳಲ್ಲಿ ಸಾಂಖ್ಯದ ವಿರುದ್ಧವಾದ ವಾದಗಳು, ಬೌದ್ಧ, ಜೈನ ಧರ್ಮಗಳ ಮೊದಲ ಗ್ರಂಥಗಳಲ್ಲಿ ಅಲ್ಲಲ್ಲಿ ಪ್ರಸ್ತಾಪಗಳೂ ಸೇರಿದಂತೆ ಈ ದರ್ಶನದ ಮೂಲ ರೂಪವು ಬೌದ್ಧ ಧರ್ಮದ ಉಗಮಕ್ಕಿಂತ ಮೊದಲಿನದು ಎಂದು ಲೆಕ್ಕಿಸಲಾಗಿದೆ. ನಂತರ ಇದು ಚರಕ ಶುಶ್ರುತ ಸಂಹಿತೆಗಳಲ್ಲಿ ವಿವರಿಸಲ್ಪಟ್ಟಿದೆ. ಮಹಾಭಾರತದಲ್ಲಿ ಮೂರು ವಿವಿಧ ರೂಪಗಳಲ್ಲಿ ದಾಖಲಾಗಿದೆ. ಈ ವಿಕಾಸ ಈ ಪ್ರಪಂಚದ ವಸ್ತುಗಳಿಂದಲೇ ಆರಂಭವಾಗಿದ್ದು. ಇದೇ ವಸ್ತುಗಳಿಂದಲೇ ಮಾನವರ ದೇಹದ ವಿವಿಧ ಅಂಗಗಳು ಮಾತ್ರವಲ್ಲ ಬುದ್ಧಿ, ಸ್ವಪ್ರಜ್ಞೆ, ಮನಸ್ಸು ಮೊದಲಾದ ಚಿಂತನೆ, ಭಾವನೆಗಳ ಅಂಗಗಳು ಕೂಡಾ ವಿಕಾಸವಾಗಿವೆ ಎಂಬ ಅಂಶ ಮುಖ್ಯ. ಹಿಂದಿನ ಮೂರು ಲೇಖನಗಳಲ್ಲಿ ಹೇಳಿದಂತೆ ಎಲ್ಲ ಮಾನವರಿಗೂ ಈ ವಿಕಾಸ ಅನ್ವಯಿಸುತ್ತದೆ. ಎಲ್ಲ ಮಾನವರೂ ಈ ಇಪ್ಪತ್ತನಾಲ್ಕು ಅಂಗ ತತ್ವಗಳಿಂದ ರೂಪಿತರಾಗಿದ್ದಾರೆ ಎಂಬುದು ಮಾನವರೆಲ್ಲರ ಸನಾನತೆಯನ್ನು ಸಾರುವುದಕ್ಕೆ ಆಧಾರವಾಯಿತು ಎಂಬುದು ಮುಖ್ಯ.

ಈ ತತ್ವಗಳಿಗೆ ಮತ್ತೊಂದನ್ನು ಸೇರಿಸಿ ಇಪ್ಪತ್ತೈದು ಅಥವಾ ಪಂಚವಿಂಶತಿ ತತ್ವಗಳೆಂದು , ಈ ಭೌತವಾದಿ ತತ್ವಕ್ಕೆ ಆಗಮಗಳಲ್ಲಿ ಮತ್ತೆ ಶಿವ ತತ್ವ ಅಥವಾ ಲಿಂಗ ತತ್ವಗಳೆಂದು ಮತ್ತೆ 12 ಅನ್ನು‌ ಸೇರಿಸಿ ಮೂವತ್ತಾರು ತತ್ವಗಳೆಂದು ರೂಪಿಸಲಾಯಿತು. ಈ ಪ್ರಕ್ರಿಯೆ ಹೇಗೆ ನಡೆಯಿತು, ಈ ಪ್ರಕ್ರಿಯೆಯ ಮೇಲೆ ವೇದಾಂತದ ಮತ್ತು ಪ್ರಭುತ್ವ ಶಕ್ತಿಗಳ ಕೂಟದ ಒತ್ತಡವೇನು ? ಹೀಗೆ ಅಂಗ ತತ್ವಗಳೊಡನೆ ಲಿಂಗ ತತ್ವಗಳು ಸೇರಿಕೊಂಡದ್ದರ ಸಾಮಾಜಿಕ ಪರಿಣಾಮವೇನು ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: