ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
48
ದುಷ್ಕರ್ಮಿ, ನರಾಧಮ, ಮೂಢ, ಅಲ್ಪಮೇಧ, ಹುತಜ್ಞಾನ, ಅಬುದ್ಧವ, ನಷ್ಟಾತ್ಮ , ಅಚೇತ, ಸಂಶಯಾತ್ಮ , ಡಂಭಮನ್ ( ಅಹಂಕಾರಿ ) ಮದಾಂಧ, ಅಸುರ, ರಾಕ್ಷಸ ಇವುಗಳು ವೈಜ್ಞಾನಿಕ ತತ್ವಜ್ಞಾನಿಗಳನ್ನು ನಿಂದಿಸಲು ಬಳಸಲಾದ ಪದಗಳಲ್ಲಿ ಕೆಲವು. ಈ ಎಲ್ಲ ಪದಗಳನ್ನು ಬಳಸಿರುವುದು ಇಂದಿನ ಫೇಸ್‌ಬುಕ್‌ನಲ್ಲಲ್ಲ, ಮಬ್ಭಕ್ತರೂ ಅಲ್ಲ. ಹಾಗಾದರೆ ಯಾರಪ್ಪಾ? ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಬಾಯಿಂದಲೇ ಈ ಅಣಿಮುತ್ತಗಳು ಉದುರಿಸಲಾಗಿದೆ. ಎಲ್ಲಿ ? ಭಗವದ್ಗೀತೆಯಲ್ಲಿ ಕುರುಕ್ಷೇತ್ರದ ರಣರಂಗದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ಎರಡೂ ಕಡೆ ಭೋರ್ಗರೆಯುತ್ತಿರುವಾಗ ಮಧ್ಯೆ ರಥವನ್ನು ನಿಲ್ಲಿಸಿಕೊಂಡು ಭಗವಂತ ನೀಡಿದ ಉಪದೇಶದಲ್ಲಿ 16 ನೇ ಇಡೀ ಅಧ್ಯಾಯವನ್ನೇ ವೈಜ್ಞಾನಿಕ ತತ್ವಜ್ಞಾನಿಗಳ ನಿಂದನೆಗೆ ಮೀಸಲಿಡಲಾಗಿದೆ. ಇನ್ನು ಬೇರೆ ಅಧ್ಯಾಯಗಳಲ್ಲಿಯೂ ನಿಂದನೆಗಳ ಮಳೆ ಕರೆಯಲಾಗಿದೆ. ಹೀಗೆ ಶ್ರೀಕೃಷ್ಣನ ಸುದರ್ಶನ ಚಕ್ರವನ್ನೇ ಶಬ್ದಾಸ್ತ್ರವನ್ನಾಗಿ ತಿರುಗಿಸಿ ವೈಜ್ಞಾನಿಕ ತತ್ವಜ್ಞಾನವನ್ನು ಕೊನೆಗಾಣಿಸಲು ಪ್ರಯತ್ನ ನಡೆಸಲಾಗಿದೆ.
ಇದೇ ಗೀತೆಯಲ್ಲಿ ಅಪರಿಮಿತ ಸಂಯಮವನ್ನು ಬೋಧಿಸಿದ ಭಗವಂತನೇ ಹೀಗೆಲ್ಲ ನಿಂದನೆಯ ಸುರಿಮಳೆ ಸುರಿಸಿದರೆ ಇನ್ನು ಭಕ್ತರ ಬಾಯಿಗಳಿಗೆ ತಡೆಯುಂಟೇ ! ಅಷ್ಟೇ ಅಲ್ಲದೆ, ಭಗವಂತ ಬಾಯಲ್ಲಿ ಹೇಳಿದುದನ್ನು ತಮ್ಮ ಬಲವಾದ ರಟ್ಟೆಗಳಿಂದ, ಶಸ್ತ್ರ ಸಜ್ಜಿತ ಕೈಗಳಿಂದಲೇ ಜಾರಿಗೆ ತರಲು ಹೊರಡುವುದಿಲ್ಲವೇ ? ಇದು ಕ್ರಿಸ್ತಪೂರ್ವ ಕಾಲದಲ್ಲಿ ವೈಜ್ಞಾನಿಕ ಚಿಂತನೆಗಳು ಆರಂಭವಾದ ದಿನದಿಂದಲೂ ಹಲ ಹಲವು ಬಾರಿ ನಡೆದಿದೆ. ಬೌದ್ಧ ಧರ್ಮದ ಮೇಲೆ ವೈದಿಕರು ಎಸಗಿದ ದೌರ್ಜನ್ಯಗಳ ಬಗ್ಗೆ ಒಂದಿಷ್ಟಾದರೂ ಮಾಹಿತಿ ಇದೆ. ನಮ್ಮದೇ ರಾಜ್ಯದ ವಚನಕಾರರ ಮೇಲೆ ಅಂದಿನ ಕಂದಾಚಾರಿ ಶಕ್ತಿಗಳು ರಾಜ ಪ್ರಭುತ್ವವನ್ನು ಬಳಸಿ ಜಾತಿ ವಿರೋಧದ ಒಂದು ಕ್ರಿಯೆಯ ಮೇಲೆ ಎರಗಿದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ.
ಇನ್ನು ಆ ಕಾಲದಲ್ಲಿ ಲೋಕಾಯತರು, ಸಾಂಖ್ಯರುಗಳಿಗೆ ಯಾವ ಗತಿ ಕಾಣಿಸಿರಬಹುದು ! ಊಹಿಸಿಯೇ ತಿಳಿಯಬೇಕಷ್ಟೆ !
‘ಈ ಜಗತ್ತು ತನ್ನಿಂದ ತಾನೇ ಕೇವಲ ಸ್ತ್ರೀ ಪುರುಷರ ಸಂಯೋಗದಿಂದ ಸೃಷ್ಟಿಯಾಗಿದೆ, ಕಾಮವೇ ಇದರ ಕಾರಣ. ಅದಕ್ಕೆ ದೇವರ ಅವಶ್ಯಕತೆಯೇನಿಲ್ಲ ಎನ್ನುತ್ತಾರೆ ಅಸುರೀ ಸ್ವಭಾವದ ಜನರು. ಈ ಜಗತ್ತು ಯಾರಿಂದಲೂ ಸ್ಥಾಪಿತವಾದುದಲ್ಲ. ಜಗತ್ತು ಅಸತ್ಯ ಎನ್ನುತ್ತಾರೆ.(ಗೀತೆ- 16.8) ಇದು ಈ ಶ್ಲೋಕದ ಬಗ್ಗೆ ಭಗವದ್ಗೀತೆಯ ಕನ್ನಡ ಅನುವಾದಗಳು ನೀಡುವ ಸರಳ ಅರ್ಥ.
ಈ ಶ್ಲೋಕ ಸಾಂಖ್ಯ ದರ್ಶನದ ವಿಕಾಸವಾದವನ್ನೇ ಗುರಿಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ಮೂಲ ಶ್ಲೋಕವೇ ವೈಜ್ಞಾನಿಕ ತತ್ವಜ್ಞಾನವನ್ನು ಪ್ರತಿಪಾದಿಸುವವರನ್ನು ನಿಂದಿಸಲೆಂದು ಕೃಷ್ಣನ ಬಾಯಿಂದ ಹೊರಡಿಸಿದುದರ ಭಾಗ. ಹೀಗಾಗಿ ಈ ಶ್ಲೋಕದಲ್ಲಿ ವೈಜ್ಞಾನಿಕ ತತ್ವಜ್ಞಾನದ ಕೆಲ ಅಂಶಗಳ ಜೊತೆಗೆ ಅದನ್ನು ಹೀಗಳೆಯುವ ರೀತಿಯಲ್ಲಿ ಜಗತ್ತು ಅಸತ್ಯ, ಕೇವಲ ಕಾಮದಿಂದ ಹುಟ್ಟಿದೆ ಎಂದು ಹೇಳುತ್ತಾರೆ ತಿರುಚಲಾಗಿದೆ.
ಈಗಾಗಲೇ ಹಿಂದಿನ ಲೇಖನಗಳಲ್ಲಿ ವಿವರಿಸಲಾಗಿರುವಂತೆ ಈ ಜಗತ್ತೇ ಸತ್ಯ, ಬೇರಾವುದೂ ಅಲ್ಲ. ಇಲ್ಲಿರುವ ವಸ್ತು ಪ್ರಪಂಚ ತಂತಮ್ಮ ಸ್ವಭಾವಕ್ಕೆ ಅನುಗುಣವಾಗಿ ವಿಕಾಸವಾಗುತ್ತಾ ಬಂದಿದೆ ಎಂಬುದನ್ನು ಸಾಂಖ್ಯ ದರ್ಶನ ವಿವರಿಸಿದೆ. ಇದಕ್ಕೆ ಸ್ತ್ರೀ ಪುರುಷ ಶಕ್ತಿಗಳ (ಇಲ್ಲಿ ಸ್ತ್ರೀ ಪುರುಷರು ವ್ಯಕ್ತಿಗಳಲ್ಲ) ಸಂಯೋಗದ ಉದಾಹರಣೆ ನೀಡಲಾಗಿದೆ.
ಈ ರೀತಿ ನಿಂದನೆ, ತಿರುಚುವಿಕೆಗಳು ಭಗವಂತನನ್ನೇ ಬಳಸಿ, ಗೀತೆಯ ಬಗ್ಗೆ ನಡೆಯುತ್ತಾ ಬಂದ, ನಡೆಯುತ್ತಿರುವ ಹಲ ಹಲವು ಸಾವಿರ ಉಪನ್ಯಾಸಗಳಲ್ಲಿ, ಅದನ್ನು ವಿವರಿಸಿದ,ವ್ಯಾಖ್ಯಾನಿಸಿದ ಗ್ರಂಥಗಳಲ್ಲಿ ಶಂಕರರಿಂದ ಆರಂಭಿಸಿ ಎಲ್ಲ ಆಚಾರ್ಯರುಗಳು, ಅವರ ಹಿಂಬಾಲಕರು, ಹಿಂಬಾಲಕರಲ್ಲದ ಪುರೋಹಿತರು, ಸಂತ ವರೇಣ್ಯರುಗಳಿಂದ ನಡೆಯುತ್ತಾ ಬಂದಿದೆ. ಈಗಲೂ ದಿನ ನಿತ್ಯ ನಡೆಯುತ್ತಿದೆ.
ಅದಕ್ಕೆ ಒಂದು ಉದಾಹರಣೆಯೆಂದರೆ ಡಿವಿಜಿಯವರು. ಮೂಲ ಶ್ಲೋಕದಲ್ಲಿಯೇ ಇರುವ ತಿರುಚುವಿಕೆ ಸಾಲದೆಂಬಂತೆ
ಡಿವಿಜಿಯವರು ತಮ್ಮದೇ ವಿಪರೀತ ವ್ಯಾಖ್ಯಾನ ನೀಡುತ್ತಾರೆ :
” ಸತ್ಯವೆಂದರೇನು ? ಸತ್ಯವೆಂಬುದೇ ಇಲ್ಲ. ಸತ್ಯವೆಂಬುದಿದ್ದರೆ ಅದನ್ನು ಕಂಡವರ್ಯಾರು ? ಜಗತ್ತಿಗೆ ಈಶ್ವರನೆಲ್ಲಿದ್ದಾನೆ ? ಇದು ಅನಾಯಕ ರಾಜ್ಯ. ಇದಕ್ಕೆ ಗೊತ್ತು ಗುರಿ ಇಲ್ಲ. ಧರ್ಮವೆಂಬ ವ್ಯವಸ್ಥೆ ಕೃತ್ರಿಮ. ಜಗತ್ತಿನಲ್ಲಿರುವುದೆಲ್ಲ ಹೇಗೋ ಹೇಗೋ ಆಗಿ ಬಂದವು. ಅವುಗಳಲ್ಲಿ ಒಂದು ಸಂಬಂಧ ಕ್ರಮವಿಲ್ಲ. ವೇದದಲ್ಲಿ ಹೇಳಿರುವ ರೀತಿಯ ಅಥವಾ ಜನ್ಮಾಂತರ ಋಣಾನುಬಂಧ ರೂಪದ ಪೂರ್ವಾಪರ ಸಂಬಂಧವಿಲ್ಲ. ಹಾಗಾದರೆ ಪ್ರಾಣಿಗಳಿವೆಯಲ್ಲ- ಎನ್ನುವೆಯೋ ? ಅದೆಲ್ಲ ಸ್ತ್ರೀ ಪುರುಷರ ಕಾಮದ ಸ್ವಭಾವ – ಹೀಗೆನ್ನುತ್ತಾರೆ ಅಸುರರು. ಅದೇ ನಾಸ್ತಿಕವಾದ. ಅದೇ ಚಾರ್ವಾಕ ಮತ.
ಕರ್ಮ ಸೂತ್ರವು ಜಗತ್ತನ್ನೆಲ್ಲ ಒಂದು ಮೂಟೆಯನ್ನಾಗಿ ಕಟ್ಟಿದೆ- ಎಂಬುದನ್ನು ಅವರು ಅಂಗೀಕರಿಸುವುದಿಲ್ಲ.
ಹೀಗೆ ಮೂಲ ಶ್ಲೋಕದಲ್ಲಿ ಕಾಣದ ಇದು ಚಾರ್ವಾಕ ಮತ, ನಾಸ್ತಿಕವಾದ ಎಂದು ಹೇಳಲು ಅವರಿಗೆ ಇಂಬು ನೀಡಿದ್ದು ಶಂಕರರು ಈ ಶ್ಲೋಕಕ್ಕೆ ಬರೆದ ಭಾಷ್ಯ. ಅದರಲ್ಲಿ ಇತಿ ಲೋಕಾಯತಿಕ ದೃಷ್ಟಿಃ ಇಯಂ ಎಂದು ಉಲ್ಲೇಖಿಸಿದ್ದಾರೆ. ಇದರಿಂದಾಗಿ ಕೃಷ್ಣನ ಕಣ್ಣಲ್ಲಿ ಅಸುರರು ಯಾರು ಎಂಬುದು ಸ್ವಲ್ಪ ಮಟ್ಟಿಗಾದರೂ ಸ್ಪಷ್ಟವಾಯಿತು.
ಇದು ಒಂಬತ್ತನೇ ಶತಮಾನದ ವ್ಯಾಖ್ಯಾನವಾಯಿತು. ಡಿವಿಜಿಯವರು ಇಪ್ಪತ್ತನೆಯ ಶತಮಾನದಲ್ಲಿ ಭಗವದ್ಗೀತೆಯನ್ನು ಜೀವನ ಧರ್ಮ ಯೋಗ ಎಂದು ತಮ್ಮ ಭಾಷ್ಯ ಬರೆಯುವಾಗಲೂ ಚಾರ್ವಾಕರಿಗೇ ಸೀಮಿತಗೊಳಿಸಲಾಗುತ್ತದೆಯೇ ? ಭಾರತದಲ್ಲಿ ವೈಜ್ಞಾನಿಕ ತತ್ವಜ್ಞಾನವನ್ನು ಬೆಳೆಸಿದ ನ್ಯಾಯ- ವೈಶೇಷಿಕ ದರ್ಶದ ಅಣುವಾದವನ್ನು ಕೈ ಬಿಟ್ಟು ಗ್ರೀಕರ ಕಡೆಗೆ ಸಾಗಿ ಇಂದಿನ ಭೌತಶಾಸ್ತ್ರದ ಪರಮಾಣುವಾದವನ್ನು ಖಂಡಿಸುತ್ತಾರೆ. ಅವರೆನ್ನುತ್ತಾರೆ :
“ಮನುಷ್ಯನೂ ಅಷ್ಟೇ. ಅವನ ಮನಸ್ಸೂ ಅಷ್ಟೇ ಪರಮಾಣು ಚೇಷ್ಟಿತವೇ. ಪರಮಾಣುಗಳು ಹೀಗೆ ಆಡಿ ಆಡಿ ಒಂದು ದಿನ ನಿಶ್ಚೇಷ್ಟವಾಗಬಹುದು. ಅದೇ ಮೃತ್ಯು. ಅದು ಬರುವವರೆಗೆ ಯಾವುದು ಸುಖವೆನ್ನಿಸುತ್ತದೆಯೋ ಅದೇ ಒಳ್ಳೆಯದು. ಪುಣ್ಯವೆಂಬುದೂ ಪಾಪವೆಂಬುದೂ ಪುನರ್ಜನ್ಮವೆಂಬುದೂ ಕಟ್ಟು ಕತೆ. ಸತ್ತ ಮೇಲೆ ಏನೂ ಇಲ್ಲ.”
ಡಿವಿಜಿಯವರ ಮತ್ತು ಅವರಂತಹ ವೈದಿಕರಿಗೆ ವಿಜ್ಞಾನ ಯುಗದಲ್ಲೂ ವೈಜ್ಞಾನಿಕ ತತ್ವಜ್ಞಾನ, ಅದರ ವಿಕಾಸವಾದ ಎದುರಾಳಿಯಾಗಿ ಕಾಣುತ್ತದೆ. ಪ್ರಜಾಪ್ರಭುತ್ವವಾದಿಗಳಾಗಿ ಮಾತನಾಡುತ್ತಲೇ , ಜನಮೆಚ್ಚುವಂತೆ ಜನರ ಬದುಕಿನ ಕೆಲ ಸಂಗತಿಗಳ ಕಗ್ಗವನ್ನು ಮಂಕುತಿಮ್ಮಗಳಿಗೆ ಉಪದೇಶ ಮಾಡುತ್ತಲೇ ವರ್ಣ-ಜಾತಿ ಅಸಮಾನತೆ, ಬೇಧ, ಕ್ರೌರ್ಯಗಳಿಗೆ ಅಡಿಪಾಯವಾಗಿರುವ ಪುನರ್ಜನ್ಮ,ಕರ್ಮ ಸಿದ್ಧಾಂತವನ್ನು ಬಿಡಲಾರರು.
ಮುಂದುವರೆಸಿ ಅವರು “ಅದು ನಾಸ್ತಿಕವಾದ. ಅದು ಭೌತಸರ್ವತಾವಾದ (materialism). ಕಮ್ಯುನಿಸ್ಟ್ (communist) ಪಂಥದವರು ಭೌತಸರ್ವತಾವಾದಿಗಳು. ದೈವಶ್ರದ್ಧಾವಿರೋಧಿಗಳು ಎಂಬುದು ಪ್ರಸಿದ್ಧವಾದ ಸಂಗತಿ” ಎಂದು ಹೇಳುತ್ತಾ ಕೊನೆಗೆ ‘ಬ್ರಹ್ಮವಿಲ್ಲವೆಂದು ತಿಳಿದವನು ತಾನೇ ಇಲ್ಲದವನಾಗುತ್ತಾನೆ’ ಎಂಬ ತಮ್ಮ ಒಳಮನಸ್ಸಿನ ಬಯಕೆಯನ್ನು ತೈತ್ತಿರೀಯೋಪನಿಷತ್ತಿನ ಉಲ್ಲೇಖದ ಮೂಲಕ ಹೊರಗಿಡುತ್ತಾರೆ.
ಶಂಕರರ ಭಾಷ್ಯದಂತೆ ಇವರೂ ತಮ್ಮ ವ್ಯಾಖ್ಯಾನದ ಮೂಲಕ ವೈಜ್ಞಾನಿಕ ತತ್ವಜ್ಞಾನದ ಪರಂಪರೆಯನ್ನು ಲೋಕಾಯತರಿಂದ ಮುಂದುವರೆಸಿ ಗ್ರೀಕ್ ಅಣುವಾದಿಗಳು, ಇಪ್ಪತ್ತನೆಯ ಶತಮಾನದ ಭೌತ ವಿಜ್ಞಾನಿಗಳಿಂದ ಕಮ್ಯುನಿಸಂವರೆಗೂ ತಂದು ಉಪಕಾರ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಪುನರ್ಜನ್ಮ, ಕರ್ಮವಾದಿಗಳಿಗೆ ಕಮ್ಯುನಿಸಂ ಸೇರಿದಂತೆ ಎಲ್ಲ ವೈಜ್ಞಾನಿಕ ತತ್ವಜ್ಞಾನವನ್ನು ಇಲ್ಲವಾಗಿಸಬೇಕೆಂಬುದೇ ಅಂತಿಮ ಗುರಿ. ಅದಾಗದೇ ಬ್ರಹ್ಮ ಸತ್ಯ ಜಗನ್ಮಿಥ್ಯಾವಾದಕ್ಕೆ ಉಳಿವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಡಿವಿಜಿಯವರು ವೈಜ್ಞಾನಿಕ ತತ್ವಜ್ಞಾನದ ನಿಂದನೆಗೆಂದೇ ರಚಿತವಾದ ಗೀತೆಯ ಈ ಅಧ್ಯಾಯದ ತಿರುಳೆಂದರೆ-
“ಭಗವದಂಗೀಕಾರ, ಭಗವದ್ವಿಧಿ ಸ್ವೀಕಾರ ಇವೆರಡು (ಈ ಅಧ್ಯಾಯದ ತಿರುಳಾದ) ದೈವಾಸುರ ಗುಣ ವಿಮರ್ಶನೆಯಿಂದ ಬೋಧ್ಯವಾಗುತ್ತದೆ. ಮೊದಲು ಪರಮಾತ್ಮ ವಸ್ತು ಸರ್ವತ್ರ ವ್ಯಾಪಿಸಿ ಸರ್ವಕಾರಕವಾಗಿ ಸರ್ವೇಶ್ವರನಾಗಿರುತ್ತದೆ ಎಂವುದನ್ನು ಮನಸಾ ಅಂಗೀಕರಿಸಬೇಕು. ಎರಡನೆಯದಾಗಿ, ಈ ಭಗವದಂಗೀಕಾರದ ಫಲಿತಾಂಶವಾಗಿ ಭಗವದಾಜ್ಞೆಗೆ ಕಾಯಾ ವಾಚಾ ಮನಸಾ ವಿಧೇಯನಾಗಬೇಕು.”
ಹೀಗೆ ಮಾಡದವರು, ಚಾತುರ್ವರ್ಣ್ಯಂ ಮಯಾ ಸೃಷ್ಟಂ ನಾಲ್ಕು ವರ್ಣಗಳು ನನ್ನಿಂದಲೇ ಸೃಷ್ಟಿಸಲ್ಪಟ್ಟಿವೆ ಎಂಬಿತ್ಯಾದಿ ಆದೇಶಗಳನ್ನು ಒಪ್ಪದವರು ಅಸುರರು. ಭಗವದ್ಗೀತೆಯ ಕಾಲದಲ್ಲಿ ಯಾರು ಇಂತವರು ? ಲೋಕಾಯತರು, ಬೌದ್ಧರು, ಸಾಂಖ್ಯ ತತ್ವಜ್ಞಾನಿಗಳು ಇವರನ್ನೇ ಗೀತೆಯಲ್ಲಿ ಬೇರೆ ಬೇರೆಡೆ ಖಂಡಿಸಲಾಗಿದೆ, ನಿಂದಿಸಲಾಗಿದೆ. ಈಗ ಯಾರು ವಿಜ್ಞಾನಿಗಳು, ಕಮ್ಯುನಿಸ್ಟರು. ಅವರ ವಿಜ್ಞಾನದ ಫಲಗಳನ್ನು ದಿನನಿತ್ಯ ಬಳಸುತ್ತಲೇ ಅದನ್ನು ಹೀಗಳೆಯುವ, ವಿಜ್ಞಾನಿಗಳನ್ನು ನಿಂದಿಸುವ ಕೃತ್ಯಗಳು ದಿನನಿತ್ಯ ನಡೆಯುತ್ತಿವೆ. ಕಮ್ಯುನಿಸಂ ಮತ್ತು ಕಮ್ಯುನಿಸ್ಟರನ್ನು ನಾಶ ಮಾಡುವ ಕುಯತ್ನಗಳಿಗೆ ಕೊನೆಯೇ ಇಲ್ಲ.
ತನ್ನನ್ನೇ ಇಲ್ಲವೆನ್ನುವ, ತನ್ನೆಲ್ಲ ಉಪದೇಶದ ಬುಡಕ್ಕೇ ಕೊಡಲಿ ಪೆಟ್ಟು ಹಾಕುವ ಈ ಅಸುರರನ್ನು ಭಗವಂತ ಸುಮ್ಮನೆ ಬಿಡಲು ಸಾಧ್ಯವೇ ?
ಭಗವಂತನ ಬಾಯಿಂದಲೇ ಹೀಗೆಲ್ಲ ಹೇಳಿಸಲಾಗಿದೆ :
‘ನನ್ನ ಮಾತಿನಲ್ಲಿ ದೋಷ ಬಗೆಯುತ್ತಾ ನನ್ನ ಮಾತಿನಂತೆ ಆಚರಿಸುವುದಿಲ್ಲವೋ ಅವರು ಅರಿವಿಲ್ಲದ ಮೂರ್ಖರು. ಅವರ ನಾಶ ಖಂಡಿತ ತಿಳಿದುಕೊ.'( 3.31-32)
‘ಅಜ್ಞಾನಿಯೂ , ಶ್ರದ್ಧಾಹೀನನೂ ಆದ ಸಂಶಯಾತ್ಮನು ನಾಶ ಹೊಂದುತ್ತಾನೆ. ಸಂಶಯಾತ್ಮನಿಗೆ ಈ ಲೋಕವೂ ಇಲ್ಲ. ಪರಲೋಕವೂ ಇಲ್ಲ. ಅವನಿಗೆ ಎಲ್ಲೆಲ್ಲಿಯೂ ಸುಖವಿಲ್ಲ’ (4.40)
ಅಷ್ಟೇ ಅಲ್ಲದೆ ಲೋಕಾಯತರು, ಸಾಂಖ್ಯ ದರ್ಶನದ ತತ್ವಜ್ಞಾನಿಗಳು, ಬೌದ್ಧರು ಇವರುಗಳ ಬಗೆಗೆ ಭಗವಂತನ ಬಾಯಿಂದ ಎಂತಹಾ ಭಗವಂತನ ಸ್ಥಾನಕ್ಕೆ ಯೋಗ್ಯವಲ್ಲದ ದ್ವೇಷದ ಮಾತುಗಳನ್ನು ತುರುಕಲಾಗಿದೆಯೆಂದರೆ-
‘ಅಂತಹ ಕ್ರೂರಿಗಳನ್ನೂ, ದ್ವೇಷಕ್ಕೆ ಅರ್ಹರಾದವರನ್ನು ಸತತವಾಗಿ ಅಸುರ ಜನ್ಮಕ್ಕೆ ದೂಡುತ್ತಲೇ ಇರುತ್ತೇನೆ. ಜನ್ಮ ಜನ್ಮಾಂತರಗಳಲ್ಲೂ ಈ ಮೂಢರು ಅಲ್ಲೇ ಕೊಳೆಯುತ್ತಿದ್ದು ಅಧಮರಾಗುತ್ತಾರೆ.’ (16.19-20) ಎನ್ನುತ್ತಾನೆ, ಘೋರ ಪಾಪ ಮಾಡಿದವರೂ ಸೇರಿದಂತೆ ಎಲ್ಲರ ಉದ್ಧಾರ ಮಾಡುತ್ತೇನೆಂದು ಘೋಷಿಸಿದ ಭಗವಂತ.
ಈ ಎಲ್ಲ ದ್ವೇಷವನ್ನು ಕಕ್ಕುವುದಕ್ಕೆಂದೇ ಮೀಸಲಾದ ಈ ಅಧ್ಯಾಯದ ಹೆಸರೇನೆಂದು ಗೊತ್ತೆ? ದೈವಾಸುರ ಸಂಪದ್ವಿಭಾಗ ಯೋಗ!
ಸಂಪತ್ತನ್ನು ಹೇಗೆ ವಿಭಾಗ ಮಾಡಲಾಗಿದೆಯೆಂದು ಮೇಲಿನ ವಿವರಣೆಗಳಿಂದ ತಿಳಿಯಿತಲ್ಲ. ಈ ಅಧ್ಯಾಯದ ಹೆಸರು, ಗೀತೆಯಲ್ಲಿಲ್ಲದ ಆದರೆ ಗೀತೋಪದೇಶಕ ಕೃಷ್ಣನಿಗೆ ಸಂಬಂಧಿಸಿದ ಅಮೃತದ ಹಂಚಿಕೆಯ ಪ್ರಸಂಗವನ್ನು ನೆನಪಿಗೆ ತರುತ್ತದೆ. ತಮ್ಮ ಜೊತೆಗೇ ಶ್ರಮಿಸಿದ ರಾಕ್ಷಸರಿಗೆ ಅಮೃತ ದಕ್ಕದಂತೆ ಮೋಹಿನಿ ರೂಪದ ವಿಷ್ಣು ವಂಚಿಸಿದ ಸಂಪದ್ವಿಭಾಗಕ್ಕಿಂತ ಗೀತೆಯ ಸಂಪದ್ವಿಭಾಗ ಘೋರವಾಗಿದೆ. ಹಲವು ಜನ್ಮಗಳನ್ನು ಮಾತ್ರವಲ್ಲ ಭಾರತದ ಇಡೀ ಇತಿಹಾಸವನ್ನು ಆಕ್ರಮಿಸಿದೆ.
ತತ್ವಜ್ಞಾನದ ಕತ್ತು ಹಿಚುಕುವ ಕ್ರೌರ್ಯ :
ಭಗವದ್ಗೀತೆ ಪ್ರಸ್ತಾಪಿಸುವ ದರ್ಶನಗಳಲ್ಲಿ ಉಪನಿಷತ್ತುಗಳ ಆತ್ಮ, ಬ್ರಹ್ಮ, ಕರ್ಮ ತತ್ವಗಳ ನಂತರ ಸಾಂಖ್ಯಕ್ಕೆ ಪ್ರಮುಖ ಪಾತ್ರವಿದೆ. ಸಾಂಖ್ಯದೊಡನೆ ಜೋಡಿಯಾದ ಯೋಗ ಮತ್ತೊಂದು.
ಆದರೆ ಭಗವದ್ಗೀತೆಯಲ್ಲಿ ಸಾಂಖ್ಯದ ವಿಕಾಸವಾದವನ್ನು, ಸ್ವಭಾವವಾದವನ್ನು ನಿರಾಕರಿಸಿರುವಾಗ, ದ್ವೇಷಿಸಿರುವಾಗ ಸಾಂಖ್ಯಕ್ಕೆ ಏಕೆ ಪ್ರಾಮುಖ್ಯತೆ ನೀಡಲಾಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ.
ಜಾತಿ ವ್ಯವಸ್ಥೆಯನ್ನು ನಿರಾಕರಿಸಿದವರಿಗೆ ಎಂತಹಾ ಆಪತ್ತು ಕಾದಿದೆ ಎಂಬುದಕ್ಕೆ ವಚನಕಾರರ ಉದಾಹರಣೆ ನಮ್ಮ ಕಣ್ಣ ಮುಂದಿರುವಾಗ ಈ ಜಾತಿ ವಿರೋಧಕ್ಕೆ ಆಧಾರವಾಗುವ ತತ್ವ ದರ್ಶನವನ್ನು ವಚನಕಾರರು, ತಮಿಳು ಶೈವರು ಮತ್ತಿತರರಿಗೆ ಒದಗಿಸಿದ ಸಾಂಖ್ಯ ದರ್ಶನಕ್ಕೆ ಎಂತಹ ಆಪತ್ತು ಕಾದಿರಬಹುದು ?
ನಮ್ಮ ದೇಶದಲ್ಲಿ ವರ್ಣ-ಜಾತಿ ವ್ಯವಸ್ಥೆಯ ಸಮರ್ಥಕರು ಅದಕ್ಕೆ ವಿರುದ್ಧವಾದ ಯಾವುದೇ ವಿಚಾರಗಳು ಮೂಡಿದರೂ ಅವುಗಳ ಕತ್ತು ಹಿಚುಕಲು, ಇಲ್ಲವೆನಿಸಿಬಿಡಲು ಎಲ್ಲ ರೀತಿಯ ತಂತ್ರ, ಕುತಂತ್ರಗಳನ್ನೂ ಅನುಸರಿಸುತ್ತಾರೆ ಎಂಬುದಕ್ಕೆ ಬೌದ್ಧ ಧರ್ಮ ದೇಶದಲ್ಲಿ ಕಾಣೆಯಾದುದೇ ದೊಡ್ಡ ಉದಾಹರಣೆ.
ಯಾವುದೇ ಯೋಚನೆ, ವಿಚಾರ, ತತ್ವಗಳನ್ನು ಅವುಗಳನ್ನು ಒಪ್ಪದವರು ವಿಮರ್ಶೆಗೊಳಪಡಿಸುವುದು, ಟೀಕಿಸುವುದು ಅದರ ಕೊರತೆ, ದೋಷ, ತಪ್ಪುಗಳನ್ನು ಎತ್ತಿ ತೋರಿಸುವುದು ಚರ್ಚೆ, ವಾದಗಳ ಆರೋಗ್ಯಕರ ವಿಧಾನ. ಇವು ಯಾವುದೇ ತತ್ವಗಳನ್ನು ಬೆಳೆಸುತ್ತದೆ, ಗಟ್ಟಿಯಾಗಿಸುತ್ತದೆ. ಭಾರತದಲ್ಲಿಯೂ ಇಂತಹ ವಿಮರ್ಶೆಗಳು ವಾದಗಳು ವಿವಿಧ ದರ್ಶನಗಳು, ಧರ್ಮಗಳ ನಡುವೆ ನಡೆದಿವೆ. ತತ್ವಶಾಸ್ತ್ರದ ಬೆಳವಣಿಗೆಗೆ ಕಾರಣವಾಗಿವೆ. ಇಂತಹ ಸಮಯದಲ್ಲಿ ಬೇರೆ ತತ್ವ,ದರ್ಶನಗಳನ್ನು ಪೂರ್ವ ಪಕ್ಷವೆಂದು ಅದರ ವಿಚಾರಗಳನ್ನು ಸಂಗ್ರಹ ರೂಪದಲ್ಲಿ ನೀಡಿ ಅವುಗಳನ್ನು ವಿಮರ್ಶಿಸುವುದು, ಖಂಡಿಸುವುದು ಭಾರತದ ತತ್ವಶಾಸ್ತ್ರದ ಗ್ರಂಥಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಧಾನ.
ಆದರೆ ತಮಗೆ ಒಲ್ಲದ ತತ್ವಗಳನ್ನು ಒರೆಸಿ ಹಾಕಿ ಬಿಡುವ ದುರುದ್ದೇಶದಿಂದ ವರ್ಣ-ಜಾತಿ ಸಮರ್ಥಕರು ಮತ್ತವರ ಅನುಯಾಯಿಗಳು ಅನುಸರಿಸುವ ಕುತಂತ್ರಗಳನ್ನು ಹೀಗೆ ವಿಂಗಡಿಸಬಹುದು :
* ಅಪಹಾಸ್ಯ ಮಾಡುವುದು, ಹೀಗಳೆಯುವುದು, ನಿಂದಿಸುವುದು, ದೂಷಿಸುವುದು, ಮೂಲೆಗುಂಪು ಮಾಡುವುದು – ಆ ಮೂಲಕ ಜನರು ಅದರತ್ತ ಹಾಯದಂತೆ ಮಾಡುವುದು. ಜನರೂ ಆ ವಿಚಾರಗಳ ಪ್ರತಿಪಾದಕರನ್ನು ನಿಂದಿಸುವುದು, ದೂರ ಮಾಡುವುದು. ಅವರನ್ನು ದೃತಿಗೆಡಿಸುವುದು, ಕುಗ್ಗಿಸುವುದು.
* ಆ ತತ್ವಗಳನ್ನು ವಿರೂಪಗೊಳಿಸುವುದು, ಅವುಗಳಲ್ಲಿ ಇಲ್ಲದ್ದನ್ನು ತುರುಕುವುದು, ಅವುಗಳ ತಿರುಳನ್ನೇ ತೆಗೆದು ಕೇವಲ ಹೊರರೂಪ ಮಾತ್ರ ಉಳಿಸಿಕೊಳ್ಳುವುದು.
*ಸ್ವತಃ ಆ ತತ್ವಗಳ ಪ್ರತಿಪಾದಕರೇ ಟೀಕೆಗಳಿಗೆ ಅಂಜಿ ಅವುಗಳನ್ನು ಬ್ರಾಹ್ಮಣ್ಯದ ವಿಚಾರಗಳಿಗೆ ಹಾನಿಯಾಗದಂತೆ ಒಗ್ಗಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡುವುದು. ಅವರಿಂದಲೇ ಮೂಲ ತಿರುಳಿಗೆ ಧಕ್ಕೆ ಉಂಟಾಗುವಂತೆ ಮಾಡುವುದು.
* ಆ ಸಿದ್ಧಾಂತಗಳ ಗ್ರಂಥಗಳನ್ನು ಪಸರಿಸದಂತೆ ತಡೆಯುವುದು, ಅವುಗಳ ಅಧ್ಯಯನ, ಚರ್ಚೆ ಕೈಗೊಳ್ಳದಂತೆ ತಡೆಯುವುದು, ಅವುಗಳ ಪ್ರತಿಗಳನ್ನು ಮಾಡದಂತಹ ಸನ್ನಿವೇಶ ನಿರ್ಮಿಸುವುದು.
* ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ವೈಜ್ಞಾನಿಕ ತತ್ವಜ್ಞಾನದ ವಿಚಾರಗಳು ಬಹಳ ಜನಪ್ರಿಯವಾಗಿ ಬಿಟ್ಟರೆ ಆ ಜನಪ್ರಿಯತೆಯನ್ನೇ ವರ್ಣ- ಜಾತಿ ವ್ಯವಸ್ಥೆಯ ಸಮರ್ಥನೆಗೆ ಬಳಸಿಕೊಳ್ಳನುವಾಗುವಂತೆ ತಿರುಚುವುದು. ತಿರುಚಿದ ವಿಚಾರಗಳನ್ನು ತಾವೇ ಡಂಗುರ ಹೊಡೆದು ಪ್ರಚಾರ ಮಾಡುವುದು.
* ವರ್ಣ-ಜಾತಿ ವಿರೋಧಿ ಗ್ರಂಥಗಳನ್ನು ನಾಶ ಮಾಡುವುದು. ಪ್ರಭುತ್ವ ಶಕ್ತಿಯ ದುರ್ಬಳಕೆ ಮಾಡಿ ವ್ಯಾಪಕ ನಾಶ.
* ಆ ಸಿದ್ಧಾಂತಗಳ ಪ್ರತಿಪಾದಕರಿಗೆ ಕಿರುಕುಳ, ಹಿಂಸೆ, ಕೊಲೆ.
ವರ್ಣ- ಜಾತಿ ಸಮರ್ಥಕರು ಅದನ್ನು ವಿರೋಧಿಸುವ ಬೌದ್ಧ ಧರ್ಮ, ಸಾಂಖ್ಯ ತತ್ವಗಳ ಮೇಲೆ ಇಲ್ಲಿ ವಿವರಿಸಲಾದ ವಿವಿಧ ಕುತಂತ್ರ ಮತ್ತು ದ್ವೇಷದ ಕ್ರಮಗಳನ್ನು ಉಪಯೋಗಿಸಿರುವ ಉದಾಹರಣೆಗಳು ಹಲ ಹಲವು.
ಭಗವದ್ಗೀತೆಯೂ ಸೇರಿದಂತೆ ವಿವಿಧ ವೇದಾಂತದ ಗ್ರಂಥಗಳು, ವಿವಿಧ ದರ್ಶನಗಳ ಗ್ರಂಥಗಳಲ್ಲಿ ಈ ಕುತ್ಸಿತ ಕ್ರಿಯೆಗಳು ಹೇಗೆ ನಡೆದಿವೆ, ಅವುಗಳಿಂದ ಭಾರತದಲ್ಲಿ ವಿಜ್ಞಾನ ಹಾಗೂ ವೈಜ್ಞಾನಿಕ ತತ್ವಜ್ಞಾನಕ್ಕೆ ಸಂಭವಿಸಿದ ಮಹಾನ್ ಹಾನಿಯ ಬಗ್ಗೆ ಮುಂದೆ ಪರಿಶೀಲಿಸೋಣ.
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು