ಜಿ ಎನ್ ನಾಗರಾಜ್ ಅಂಕಣ- ವಾಜಪೇಯ ಎಂಬ ಕುಡಿದು, ತಿನ್ನುವ ಯಜ್ಞ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

32

ಕುದುರೆ ಬಲಿಯೂ ಯಜ್ಞ, ತುರುಗಳ್ಳತನವೂ ಯಜ್ಞ. ವಾಜಪೇಯಿಯವರು ಭಾರತದ ಪ್ರಧಾನಿಯಾಗಿದ್ದರು ಎಂಬ ಕಾರಣಕ್ಕೆ ಈ ಪದ ಭಾರತದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವವರಿಗೆ ಪರಿಚಯವಾಗಿದೆ. ಹಾಗೆಯೇ ʼಅಶ್ವಮೇಧʼ ಎಂಬ ಯಜ್ಞವೊಂದಿದೆ ಎಂಬುದು ಮಹಾಭಾರತ, ರಾಮಾಯಣಗಳ ಪರಿಚಯ ಇರುವವರಿಗೆಲ್ಲ ಗೊತ್ತು. ಆದರೆ ವಾಜಪೇಯ ಎಂಬ ಯಜ್ಞವೂ ಒಂದಿದೆ ಎಂಬುದು ವೃತ್ತಿ ವೈದಿಕರಲ್ಲಿಯೂ ಕೆಲವೇ ಜನರಿಗಷ್ಟೇ ಗೊತ್ತು.

ವಾಜಪೇಯ ಯಜ್ಞ ಎಂಬುದು ರಾಜರುಗಳ ಪಟ್ಟಾಭಿಷೇಕ ಯಜ್ಞವಾದ ರಾಜಸೂಯಕ್ಕೆ ಮೊದಲು ನಡೆಯಬೇಕಾದ ಆಚರಣೆ, ಬ್ರಾಹ್ಮಣರು ಪುರೋಹಿತ ಸ್ಥಾನಕ್ಕೇರಿದಾಗ ಕೂಡಾ ಆಚರಿಸುವ ಯಜ್ಞ ಎಂದೂ ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಹಾಗೂ ಇತರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ಈ ಯಜ್ಞದ ವಿವಿಧ ಆಚರಣೆಗಳು ಈ ರೀತಿ ಇವೆ.

ಮೊತ್ತಮೊದಲನೆಯದು, ಒಟ್ಟಾಗಿ ಮದ್ಯಪಾನ ಮಾಡುವುದು:

ಇಂದ್ರನಿಗೆ ಐದು ವಾಜಪೇಯ ಪಾನ ಪಾತ್ರೆಯಲ್ಲಿ, ಉಳಿದ 34 ಜನ ದೇವತೆಗಳಿಗೆ ಒಂದೊಂದು ಪಾನಪಾತ್ರೆಯಂತೆ 17ರಲ್ಲಿ ಸೋಮ,17 ರಲ್ಲಿ ಸುರೆಯನ್ನು ಅರ್ಪಿಸುವುವುದು. ನಂತರ ಯಜ್ಞದ ಪುರೋಹಿತರು, ಬ್ರಾಹ್ಮಣರು, ಯಜ್ಞವನ್ನು ಕೈಗೊಂಡ ಯಜಮಾನ ಎಲ್ಲರೂ ಸೇರಿ ಮೂರು ಹಂತದಲ್ಲಿ ಕುಡಿಯುವುದು. ಹೀಗೆ ಕುಡಿಯುವಾಗ ಸಾಮವೇದದ ವಾಜಪೇಯ ಸಾಮ ಮತ್ತು ಇತರ 16 ಸಾಮಗಳನ್ನು ಹಾಡಲಾಗುತ್ತದೆ. 22 ಹಸುಗಳನ್ನು ಬಲಿ ನೀಡಲಾಗುತ್ತದೆ. ಅವುಗಳಲ್ಲಿ 17 ಪ್ರಜಾಪತಿ ಎಂಬ ದೇವತೆಗೆ, ಸರಸ್ವತಿಗೂ ಒಂದು ಹಸುವಿನ ಬಲಿ. ಈ ಬಲಿಗಳನ್ನು ನೀಡುವಾಗ ವಾಮದೇವ್ಯ ಸಾಮವನ್ನು ಹಾಡಲಾಗುತ್ತದೆ. ವಾಮದೇವ್ಯ ಸಾಮವೆಂದರೆ ಛಾಂದೋಗ್ಯ ಉಪನಿಷತ್ತಿನಲ್ಲಿ ವಿವರಿಸಿರುವಂತೆ ಸಂಭೋಗವನ್ನು, ಅದರ ವಿವಿಧ ಹಂತಗಳನ್ನು ಪ್ರತಿನಿಧಿಸುವ ಸಾಮವೇದದ ಮಂತ್ರ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೆಣ್ಣಿನ ಜೊತೆಗೆ ಸಂಭೋಗ ಮಾಡಿದವನಿಗೆ ವಾಜಪೇಯ ಯಾಗಕ್ಕೆ ಸಮಾನ ಫಲ ದೊರಕುತ್ತದೆಂದೂ ಹೇಳಲಾಗಿದೆ.

ಇವುಗಳ ನಂತರ ಒಂದು 17 ರಥಗಳು ಭಾಗವಹಿಸುವ ಓಟದ ಸ್ಫರ್ಧೆಯನ್ನು ಮಾಡಲಾಗುತ್ತದೆ. ಈ ಸ್ಫರ್ಧೆಯಲ್ಲಿ ರಾಜನಾಗುವವನು ಗೆದ್ದನೆಂದು ಘೋಷಿಸಿ ಅವನ ರಾಣಿಯೊಡನೆ ಗೋಧಿಯ ಹಿಟ್ಟು ,ಉಪ್ಪುಗಳನ್ನು ಸ್ಪರ್ಶಿಸುತ್ತಾರೆ. ನಂತರ ರಾಜನನ್ನು ಅತ್ತಿಯ ಮರದ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಲಾಗುತ್ತದೆ. ಆಗ ಅನ್ನದ ನೈವೇದ್ಯ ಮಾಡಿ ರಾಜನ ಮೇಲೆ ಅನ್ನದ ಅಭಿಷೇಕವನ್ನು ಮಾಡಲಾಗುತ್ತದೆ. 17 ವಿವಿಧ ಬಗೆಯ ತಿನಿಸುಗಳ ನೈವೇದ್ಯವನ್ನೂ ಮಾಡಲಾಗುತ್ತದೆ.

ವೇದ ಮತ್ತು ಶ್ರೌತಸೂತ್ರಗಳಲ್ಲಿ ವಿವರಿಸಲಾದ ಈ ಯಾಗದ ವಿವರಗಳಲ್ಲಿ ಎರಡು ಭಾಗಗಳಿರುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಸಾಮೂಹಿಕವಾಗಿ ಸೋಮ, ಸುರೆಗಳನ್ನು ಕುಡಿಯುವುದು, ಹಸುಗಳನ್ನು ಬಲಿ ನೀಡುವುದು, ರಥ ಸ್ಫರ್ಧೆ ಇದು ಮೊದಲನೆಯ ಭಾಗ. ಸಿಂಹಾಸನದಲ್ಲಿ ಅಭಿಷೇಕ 17 ತಿನಿಸುಗಳ ನೈವೇದ್ಯ ಅನ್ನದಿಂದ ಅಭಿಷೇಕ ಇವು ಎರಡನೇ ಭಾಗ.
ಮೊದಲನೆಯ ಭಾಗದ ಆಚರಣೆಗಳೆಲ್ಲ ಬುಡಕಟ್ಟು ಕಾಲದವು. ಎರಡನೆಯ ಭಾಗ ನಂತರ ಸೇರಿಸಲ್ಪಟ್ಟವು.

ಮೊದಲನೆಯ ಭಾಗ ಬುಡಕಟ್ಟುಗಳ ಎಲ್ಲ ಜನರೂ ಒಟ್ಟಿಗೆ ಸೋಮ ರಸವನ್ನು, ಸುರೆಯನ್ನು ತಯಾರಿಸಿ ಒಟ್ಟಿಗೆ ಕುಳಿತು ಕುಡಿಯುವುದು, ಹಸುಗಳನ್ನು ಕಡಿದು ತಿನ್ನುವುದು. ಹೀಗೆ ತೃಪ್ತಿಕರವಾಗಿ ತಿಂದ ನಂತರ ತಮ್ಮ ನಡುವೆ ಕ್ರೀಡಾ ಸ್ಫರ್ಧೆಗಳನ್ನು ನಡೆಸುವುದು. ಗೆದ್ದವನಿಗೆ ಅತ್ತಿಯ ಮರದ ಆಸನದ ಮೇಲೆ ಕುಳ್ಳಿರಿಸಿ ಮತ್ತಷ್ಟು ತಿನಿಸುಗಳನ್ನು ನೀಡುವ ಬಹುಮಾನ ಇಷ್ಟು ಸ್ಪಷ್ಟವಾಗಿ ಕಾಣುತ್ತದೆ. ಇವುಗಳ ಜೊತೆಗೆ ಸಾಮೂಹಿಕ ಕಾಮಕ್ರೀಡೆಯೂ ಇದ್ದಿರಬಹುದು ಎಂಬ ಸೂಚನೆ, ವಾಮದೇವ್ಯ ಸಾಮದ ಹಾಡುವಿಕೆ, ಸಂಭೋಗವನ್ನು ವಾಜಪೇಯ ಯಾಗಕ್ಕೆ ಸಮೀಕರಿಸಿರುವುದು ಮೊದಲಾದವುಗಳಿಂದ ದೊರಕುತ್ತದೆ. ಆದರೆ ಅದನ್ನು ಬುಡಕಟ್ಟುಗಳ ಕಾಲಾನಂತರ ರಾಜರುಗಳ ಪಟ್ಟಾಭಿಷೇಕದ ಯಾಗವಾಗಿ ಮಾರ್ಪಾಡಿಸಿದಾಗ ಕಾಮಕ್ರೀಡೆಯನ್ನು ಈ ವಿವರಣೆಗಳ ಒಳಗೆ ಹುದುಗಿಸಲಾಗಿರುವಂತೆ ತೋರುತ್ತದೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ವಾಮದೇವ್ಯ ಸಾಮವನ್ನು ಹೀಗೆ ವಿವರಿಸಲಾಗಿದೆ :
ಉಪಮಂತ್ರಯತೇ ಸ ಹಿಂಕಾರೋ ಜ್ಞ ಪಯತೇ ಸ ಪ್ರಸ್ತಾವಃ ಸ್ತ್ರೀಯಾ ಸಹ ಶೇತೇ ಸ ಉದ್ಗೀಥಃ ಪ್ರತಿ ಸ್ತ್ರೀಂ ಸಹ ಶೇತೆ ಸ ಪ್ರತಿಹಾರಃ ಕಾಲಂ ಗಚ್ಛತಿ ತನ್ನಿಧನಂ ಪಾರಂ ಗಚ್ಛತಿ ತನ್ನಿಧನಮೇತದ್ವಾಮದೇವ್ಯಂ ಮಿಥುನೇ ಪ್ರೋತಮ್ 2-13-1 ಸ್ತ್ರೀಯನ್ನು ಕರೆಯುವುದು ಹಿಂಕಾರ, ಅವಳೊಡನೆ (ಸಂಭೋಗಕ್ಕೆ ) ವಿನಂತಿ ಮಾಡುವುದು ಪ್ರಸ್ತಾವ, ಸ್ತ್ರೀಯೊಡನೆ ಮಲಗುವುದು ಉದ್ಗೀಥ, ಸ್ತ್ರೀಯ ಮೇಲೆ ಮಲಗುವುದು ( ಸಂಭೋಗಿಸುವುದು ) ಪ್ರತಿಹಾರ, ಕಾಲ ಕಳೆದ ಮೇಲೆ ನಿಧನ, ಅಂತಿಮಗೊಳ್ಳುವುದು ನಿಧನ. ಹೀಗೆ ವಾಮದೇವ್ಯ ಸಾಮವು ಮಿಥುನದೊಡಗೂಡಿದೆ.

ಮುಂದಿನ ಮಂತ್ರದಲ್ಲಿ ಹೀಗೆ ಹೇಳಿದೆ :
ಹೀಗೆ ಮಿಥುನವನ್ನು ಒಳಗೊಂಡಿರುವ ವಾಮದೇವ್ಯವನ್ನು ಯಾರು ಅರಿತುಕೊಂಡಿರವನೋ ಅವನು ಮಿಥುನಿಯಾಗುತ್ತಾನೆ. ಹೀಗೆ ಮೈಥುನಗಳನ್ನು ಮಾಡುತ್ತಾ ಮಕ್ಕಳನ್ನು ಪಡೆಯುತ್ತಾನೆ. ಪೂರ್ಣಾಯುಸ್ಸನ್ನು ಪಡೆಯುತ್ತಾನೆ. ಬಾಳಿ ಬೆಳಗುತ್ತಾನೆ, ಮಹಾನ್ ಮಕ್ಕಳನ್ನು ಮತ್ತು ಪಶು ಸಂಪತ್ತನ್ನೂ ಪಡೆದು ಮಹಾ ಕೀರ್ತಿವಂತನಾಗುತ್ತಾನೆ. ತನ್ನೊಡನೆ ಸಮಾಗಮವನ್ನು ಬಯಸುವ ಯಾವ ಸ್ತ್ರೀಯನ್ನೂ ತಿರಸ್ಕರಿಸಕೂಡದು. ಇದೇ ವ್ರತವು. 2-13-2 ಚೆನ್ನಾಗಿ ಕುಡಿದ ಮೇಲೆ ಪ್ರಾಣಿಗಳನ್ನು ಬಲಿ ಕೊಡುವಾಗ ಈ ಸಾಮವೇದದ ಹಾಡನ್ನು ಹಾಡಬೇಕೆಂದು ಏಕೆ ವಿಧಿಸಿದೆ ? ಉಪನಿಷತ್ತಿನ ಈ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದಿಸಿದ ಸ್ವಾಮಿ ಆದಿ ದೇವಾನಂದರಿಗೆ ಎಂತಹ ಮಡಿ ಭಾವನೆ ಉಂಟಾಗಿದೆಯೆಂದರೆ ಇದರಲ್ಲಿ ಹಲವು ವಾಕ್ಯಗಳ ಅನುವಾದವನ್ನು ಹಾರಿಸಿ ಹಿಂದಿನಂತೆ ಅನುವಾದ ಮಾಡಿಕೊಳ್ಳಿ ಎನ್ನುತ್ತಾರೆ.

ಇರಲಿ, ಇದರಲ್ಲಿ ಮತ್ತೊಂದು ವಾಕ್ಯವಿದೆ, ಸಮಾಗಮ ಬಯಸಿದ ಯಾವ ಸ್ತ್ರೀಯನ್ನೂ ತಿರಸ್ಕರಿಸಬಾರದು ಎಂದು. ಈ ಅಂಶ ವಿವಾಹ ಪದ್ಧತಿ ಅಸ್ತಿತ್ವಕ್ಕೆ ಬರುವ ಮೊದಲಿನ ಕಾಲದ್ದು ಎಂಬುದನ್ನು ಹೇಳುತ್ತದೆ.

ಈ ವಾಕ್ಯವೂ ಸೇರಿದಂತೆ ಈ ಎಲ್ಲ ಅಂಶಗಳು ಈ ಆಚರಣೆ ಬುಡಕಟ್ಟುಗಳ ಕಾಲದ್ದು. ಅಂದು ಹೆಚ್ಚು ಪ್ರಾಣಿಗಳು ಉತ್ಪತ್ತಿಯಾಗಿ ಬೇಟೆಗೆ ಹೆಚ್ಚು ದೊರಕಲಿ ಎಂಬ, ಪಶುಪಾಲನೆಯ ಘಟ್ಟದಲ್ಲಿ ಹೆಚ್ಚು ಪಶು ಸಂಪತ್ತು ಜನಿಸಲಿ ಎಂಬ, ಬೆಳೆಗಳನ್ನು ಬೆಳೆಯುವ ಘಟ್ಟದಲ್ಲಿ ಬೆಳೆ ಹೆಚ್ಚಾಗಲಿ ಎಂಬ ಆಶಯದಿಂದ ಕೈಗೊಳ್ಳುತ್ತಿದ್ದ ಆಚರಣೆಗಳು. ಈ ತೆರನ ಆಚರಣೆಗಳು ವಿಶ್ವಾದ್ಯಂತ ವಿವಿಧ ‌ಬುಡಕಟ್ಟುಗಳಲ್ಲಿ ಅಸ್ತಿತ್ವದಲ್ಲಿದ್ದುದನ್ನು ಮಾನವ ಶಾಸ್ತ್ರಜ್ಞರು ದಾಖಲಿಸಿದ್ದಾರೆ.

ಇಂತಹ ಸಾಮೂಹಿಕ ಕುಡಿತ, ಬಲಿ, ಭೋಜನ, ಸಂಭೋಗದಲ್ಲಿ ತೊಡಗುವ ಫಲವಂತಿಕೆಯ ಆಚರಣೆ ( fertility cult )ಯ ಭಾಗವಾಗಿ ಈ ಆಚರಣೆಗಳು ಬಹುಕಾಲದಿಂದ ಆರ್ಯರಲ್ಲೂ ಅಸ್ತಿತ್ವದಲ್ಲಿದ್ದುವೆಂಬುದು ಕಾಣುತ್ತದೆ. ಆರ್ಯರ ಮೂಲ ಪ್ರದೇಶ ಮತ್ತು ಇತರ ಹಸುಗಳ ಸಾಕಣೆ, ಕುದುರೆ ಪಳಗಿಸುವ ಸಮುದಾಯಗಳಲ್ಲಿ ಇಂತಹ ಫಲವಂತಿಕೆಯ ಆಚರಣೆಗಳು ರೂಢಿಯಲ್ಲಿದ್ದವು. ನಂತರ ರಾಜಪ್ರಭುತ್ವದ ಕಾಲದಲ್ಲಿ ರಾಜರ ಪಟ್ಟಾಭಿಷೇಕವನ್ನು ಒಳಗೊಳ್ಳುವಂತೆ ವಾಜಪೇಯ ಯಜ್ಞದ ರೂಪ ನೀಡಲಾಗಿದೆ ಎಂಬುದು‌ ಸ್ಪಷ್ಟವಾಗುತ್ತದೆ.
ರಾಜಪ್ರಭುತ್ವಕ್ಕೆ ಅಂತಹ ಅವಶ್ಯಕತೆ ಏಕೆ ಉದ್ಭವಿಸಿತು ?

ಕುದುರೆ ಬಲಿ ಸಾಮ್ರಾಜ್ಯ ವಿಸ್ತರಣೆಯ ಸಾಧನವಾದ ಪರಿ :
ನಮಗೆ ಪರಿಚಯವಾಗಿರುವ ಅಶ್ವಮೇಧಯಾಗ ರಾಜನೊಬ್ಬ ಸಾಮ್ರಾಟನಾದಾಗ ಬಯಸಿ ಕೈಗೊಳ್ಳುವ ಯಜ್ಞ. ‌ಒಂದು ಕುದುರೆಯನ್ನು ಪೂಜೆ ಮಾಡಿ ಲಗಾಮು ಕಳಚಿ ಬಿಟ್ಟು ಅದು ಹೋದೆಡೆಯೆಲ್ಲ ಸೈನ್ಯದ ಜೊತೆ ರಾಜ ಕುಟುಂಬದ ವೀರರು ಹಿಂಬಾಲಿಸುತ್ತಾ ಹೋಗುವುದು; ಯಾರು ಕುದುರೆಯನ್ನು ಕಟ್ಟಿ ಹಾಕುತ್ತಾರೋ ಅವರೊಡನೆ ಯುದ್ಧ ಮಾಡಿ ಸೋಲಿಸಿ ಶರಣಾಗತರನ್ನಾಗಿ ಮಾಡಿಕೊಳ್ಳುವುದು ಇಲ್ಲವೇ ಅವರನ್ನು ಕೊಂದು ಅವರ ರಾಜ್ಯವನ್ನು ವಶಪಡಿಸಿಕೊಳ್ಳುವುದು, ಅವರು ಕುದುರೆಯನ್ನು ಕಟ್ಟದಿದ್ದರೆ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದು ಸಾಮ್ರಾಟನ ಅಧೀನತೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದು.

ಒಂದು ವರ್ಷದ ನಂತರ ಈ ಕುದುರೆ ಮತ್ತೆ ಈಗ ಸಾಮ್ರಾಟನಾಗಿರುವ ಮೂಲ ರಾಜನ ಸ್ಥಾನಕ್ಕೆ ಮರಳಿದಾಗ ಯಾಗ ಮಾಡಿ ಆ ಕುದುರೆಯನ್ನು ಬಲಿ ಕೊಡುವುದು. ಇದು ಅಶ್ವಮೇಧ ಯಾಗದ ಮುಖ್ಯಾಂಶಗಳು.

ಭಾರತ ಕುದುರೆಯ ಉಗಮ ಸ್ಥಾನವಲ್ಲ. ಆದ್ದರಿಂದ ಈ ಯಾಗದ ಆಚರಣೆಗಳ ಮೂಲವನ್ನು ಕುದುರೆಗಳು ಉಗಮಗೊಂಡ ಪ್ರದೇಶದಲ್ಲಿಯೇ ಶೋಧಿಸಬೇಕು.

ಜೀವ ವಿಕಾಸ ವಿಜ್ಞಾನಿಗಳು, ಇತಿಹಾಸಜ್ಞರು ಅನ್ವೇಷಿಸಿರುವಂತೆ ಕುದುರೆಗಳ ವಿಕಾಸವಾದದ್ದು, ಅವುಗಳನ್ನು ಪಳಗಿಸಿದ್ದು ಕಾಕಸಸ್ ಪರ್ವತಗಳ ತಪ್ಪಲಿನ ಮಧ್ಯ ಏಷಿಯಾ ಪ್ರದೇಶದ ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ. ಆಫ್ರಿಕಾದಲ್ಲಿ ಮಾನವರ ವಿಕಾಸವಾದ ಮೇಲೆ ಅಲ್ಲಿಗೆ ವಲಸೆ ಹೋದ ಮಾನವರು ಅದನ್ನು ಬೇಟೆಯಾಡಿ ಆ ಪ್ರದೇಶದ ತಮ್ಮ ಮುಖ್ಯ ಆಹಾರವನ್ನಾಗಿ ಮಾಡಿಕೊಂಡರು. ಈ ಸಮಯದಲ್ಲಿ ಮಾನವರು ಆಹಾರವನ್ನಾಗಿ ಮಾಡಿಕೊಂಡ ಬೇರೆಲ್ಲ ಪ್ರಾಣಿಗಳಂತೆ ಕುದುರೆಗಳನ್ನೂ ತಮ್ಮ ದೈವಗಳಿಗೆ ಬಲಿಯಾಗಿ ಅರ್ಪಿಸುವ ಪದ್ಧತಿ ರೂಢಿಗೆ ಬಂತು. ಕುದುರೆ ಈ‌ ಸಮುದಾಯಗಳಿಗೆ ಒಂದು ಟೋಟೆಂ ಕುಲ ಸಂಕೇತ, ಕುಲ ದೇವತೆಯೂ ಆಯಿತು. ಮನುಷ್ಯರು ಕುದುರೆಯ ಅವಳಿ ಜವಳಿಯಾಗಿ ಹುಟ್ಟಿದವರು, ಕುದುರೆಯ ಹಾಲು ಕುಡಿದೇ ಇಬ್ಬರೂ ಬೆಳೆದವರು ಎಂಬ ಜಾನಪದ ಕತೆಗಳು ಹುಟ್ಟಿದವು.
ಈ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಕುದುರೆಯನ್ನು ಪಳಗಿಸಿದ ಮೇಲೂ ಬಹುಕಾಲ ಆಹಾರಕ್ಕಾಗಿ ಸಾಕಲಾಗುತ್ತಿತ್ತು. ಈಗ ಕೇವಲ ಮಾಂಸ ಮಾತ್ರವಲ್ಲ ಹಾಲು ಕೂಡಾ ವ್ಯಾಪಕವಾಗಿ ಆಹಾರವೆಂದು ಬಳಕೆಯಾಯಿತು.

ಅದನ್ನು ವಾಹನವಾಗಿ ಬಳಸಲಾರಂಭಿಸಿದ್ದು ಬಹು ಕಾಲದ ನಂತರ. ಆಗ ಮೊದಲಿಗೆ ಅದು ದನ, ಕುರಿ ಮತ್ತಿತರ ಪ್ರಾಣಿಗಳನ್ನು ಸಾಕುವ ಸಂದರ್ಭದಲ್ಲಿ ಗಮನಿಸುವುದಕ್ಕೆ, ದೊಡ್ಡ ಮಂದೆಗಳನ್ನು ಒಟ್ಟುಗೂಡಿಸುವುದಕ್ಕೆ, ಒಂದು ಹುಲ್ಲುಗಾವಲಿನಿಂದ ಮತ್ತೊಂದು ಹುಲ್ಲುಗಾವಲಿಗೆ ಹೊಡೆದುಕೊಂಡು ಹೋಗುವುದಕ್ಕೆ ಬಹು ದೊಡ್ಡ ಸಹಾಯಕವಾಯಿತು.

ಮುಂದೆ ಅದು ಯುದ್ಧಗಳಿಗೆ ಬಳಕೆಯಾದಾಗ ಕುದುರೆಗಳ ವೇಗದ ಪಯಣ ಕುದುರೆಯ ಬಳಕೆಯಿಲ್ಲದ ಸಮುದಾಯಗಳಿಗೆ ಬಹಳ ಮಾರಕವಾಗಿ ಪರಿಣಮಿಸಿತು. ಚಕ್ರಗಳ ಅವಿಷ್ಕಾರದ ನಂತರ ಬಂಡಿಗಳು, ಯುದ್ಧದ ರಥಗಳೆನ್ನೆಳೆಯುವ ಸಾಧನವಾಗಿ ಮತ್ತಷ್ಟು ಪರಿಣಾಮಕಾರಿಯಾಯಿತು. ಈ ಸಂಸ್ಕೃತಿಯನ್ನು ಈಗ ಕುರ್ಗನ್ ಸಂಸ್ಕೃತಿ ಎಂದು ಕರೆಯಲಾಗುತ್ತಿದೆ.

ಸ್ಟೆಪೀಸ್ ಹುಲ್ಲುಗಾವಲುಗಳಿಂದ ಕುದುರೆ ಸವಾರ ಕುರ್ಗನ್ ಸಂಸ್ಕೃತಿಯ ನಾಗರಿಕರು ತಮ್ಮ ಪಶು ಮಂದೆಗಳೊಂದಿಗೆ ಈ ಕಡೆ ಪೂರ್ವಕ್ಕೆ, ದಕ್ಷಿಣಕ್ಕೆ ಇರಾನ್, ಭಾರತದ ಕಡೆಗೆ, ಆ ಕಡೆ ಪಶ್ಚಿಮಕ್ಕೆ ಯುರೋಪಿನ ಕಡೆಗೆ ವಲಸೆ ಬಂದರು. ಎರಡೂ ಕಡೆ ಈ ಪಶುಸಂಗೋಪಕರ ದಾಳಿಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಮೆಸಪೋಟೊಮಿಯಾ, ಯುರೋಪುಗಳಲ್ಲಿಯೂ ಬೆಳೆದಿದ್ದ ಬುಡಕಟ್ಟು ಮತ್ತು ಕೃಷಿ ಆಧಾರಿತ ನಾಗರಿಕತೆಗಳ ಮಾತೃ ಮೂಲೀಯ, ಮಾತೃ ಕೇಂದ್ರಿತ ಸಮಾಜಗಳನ್ನು ಅಧೀನ ಮಾಡಿಕೊಂಡವು.

ಮಧ್ಯ ಏಷಿಯಾ ಮತ್ತು ಕಜಾಕಸ್ತಾನ, ಕಿರ್ಗಿಜ್‌ಸ್ತಾನ ಮೊದಲಾದ ಪ್ರದೇಶಗಳ ಸಮಾಧಿಗಳಲ್ಲಿ ಸತ್ತ ಬುಡಕಟ್ಟು ಮುಖ್ಯಸ್ಥರನ್ನು ಸಮಾಧಿ‌ ಮಾಡುವಾಗ ಅವರು ಬಳಸುತ್ತಿದ್ದ ಕುದುರೆಗಳನ್ನೂ ಬಲಿ ನೀಡಿ ಸಮಾಧಿ ಮಾಡುತ್ತಿದ್ದ ಪದ್ಧತಿ ಇತ್ತು. ಈ ಕುದುರೆ ಸತ್ತವರನ್ನು ಪರಲೋಕಕ್ಕೆ ಕೊಂಡೊಯ್ಯುವ ವಾಹನ ಎಂಬ ನಂಬಿಕೆ ಇತ್ತು.

ಪಶುಸಂಗೋಪನೆಯಲ್ಲಿ ಸಹಾಯಕವಾಗಿ ಬಳಕೆಯಾದ ಮೇಲೆ ಕುದುರೆಯ ಉಪಯೋಗ ಬಹು ಮುಖ್ಯವಾಗಿ ಬಳಕೆಯಾದದ್ದು ಹುಲ್ಲುಗಾವಲುಗಳನ್ನು ಹುಡುಕುವುದರಲ್ಲಿ ಮತ್ತು ಆಕ್ರಮಿಸಿಕೊಳ್ಳುವುದರಲ್ಲಿ.‌ ಮಳೆಯ ಋತುಗಳು ಮತ್ತು ಪ್ರಮಾಣಕ್ಕನುಗುಣವಾಗಿ ಎಲ್ಲಿ ಇನ್ನೂ ಹಸಿರು ಉಳಿದಿದೆ ಎಂದು ದೂರ ದೂರದ ಪ್ರದೇಶಗಳಲ್ಲಿ ಹುಡುಕಿ ಮುಂದಿನ ವಲಸೆಯ ಮಾರ್ಗವನ್ನು ನಿರ್ಧರಿಸಲು ಕುದುರೆಗಳಿಂದ ಬಹಳ ಪ್ರಯೋಜನವಾಯಿತು. ಅದರ ಮುಂದುವರಿಕೆ ಎಂಬಂತೆ ಆ ಹುಲ್ಲುಗಾವಲುಗಳಲ್ಲಿ ಬೇರೆ ಬುಡಕಟ್ಟುಗಳ ಪಶುಮಂದೆಗಳಿದ್ದರೆ ಆ ಹುಲ್ಲುಗಾವಲುಗಳನ್ನು ಆಕ್ರಮಿಸಿಕೊಳ್ಳುವ ಕಾದಾಟದಲ್ಲಿಯೂ ಕುದುರೆಗಳು ಬಹು ಉಪಯುಕ್ತವಾದವು.

ಸಾಮಾನ್ಯವಾಗಿ ದನ, ಕುರಿಗಳ ಪಶುಸಂಗೋಪಕರು ಮಳೆಯ ವಾರ್ಷಿಕ ಚಕ್ರಕ್ಕನುಗುಣವಾಗಿ ತಮ್ಮ ವಾರ್ಷಿಕ ವಲಸೆಯ ಮಾರ್ಗವನ್ನು ರೂಪಿಸಿಕೊಂಡಿರುತ್ತಾರೆ. ಭಾರತದಲ್ಲಿ ಇಂದೂ ಕೂಡ ಕುರಿಗಳ ಮಂದೆಗಳನ್ನು ಒಂದು ವಾರ್ಷಿಕ ಆವರ್ತನಕ್ಕೆ ಅನುಸಾರವಾಗಿ ಮೇಯಿಸಿಕೊಂಡು ಬರುವ ಕುರುಬರನ್ನು ಕಾಣಬಹುದು. ದನಗಳ ಮಂದೆಗಳನ್ನೂ ಈ ವಾರ್ಷಿಕ ಚಕ್ರಕ್ಕನುಗುಣವಾಗಿ ಮೇಯಿಸುವ ಪರಿಪಾಠ ಮಧ್ಯ ಏಷ್ಯಾದ ಪಶುಪಾಲಕರ ನಡುವೆಯೂ ಇತ್ತು. ಈ ಬಗ್ಗೆ ಹಲವು‌ ಅಧ್ಯಯನಗಳಾಗಿವೆ.

ಈ ಕಾಲಘಟ್ಟದಲ್ಲಿ ಕುದುರೆಗಳು ಹಸಿರು ಹುಲ್ಲುಗಾವಲುಗಳನ್ನು ಹುಡುಕುವ ಮುಂದಳವಾದವು. ಅವುಗಳನ್ನು ಮೇಯಲು ಬಿಟ್ಟಾಗ ಅವು ತಮ್ಮ ಹುಲ್ಲುಗಾವಲುಗಳಿಗೆ ಪ್ರವೇಶಿಸಿದರೆ ಆ ಹುಲ್ಲುಗಾವಲುಗಳನ್ನು ಬಳಸುತ್ತಿರುವವರು ಅವುಗಳನ್ನು ಕಟ್ಟಿ ಹಾಕುವುದು ಸಹಜ. ಅದು ಎರಡು ಪಶುಪಾಲಕ ಬುಡಕಟ್ಟುಗಳ ನಡುವೆ ಕಾದಾಟಕ್ಕೆ ಕಾರಣವಾಗುತ್ತಿತ್ತು. ಗೆದ್ದವರು ಸೋತವರ ಹುಲ್ಲುಗಾವಲುಗಳನ್ನು ಮಾತ್ರವಲ್ಲ ಪಶು ಮಂದೆಗಳನ್ನೂ ವಶ ಪಡಿಸಿಕೊಳ್ಳುತ್ತಿದ್ದರು. ವರ್ಷ ಪೂರ್ತಿ‌ ತಮ್ಮ ಮಂದೆಗಳಿಗೆ ಯಥೇಚ್ಛವಾಗಿ ಹುಲ್ಲು ದೊರಕಿಸಿಕೊಳ್ಳುವ ವಿಧಾನವಾಗಿ ಒಂದು ಕುದುರೆಯನ್ನು ಪೂಜಿಸಿ, ಅದರ ಮೇಲೆ ಅದರ ಒಡೆಯ ಬುಡಕಟ್ಟಿನ ಗುರುತು ಹಚ್ಚಿ ಬಿಡುವ ಪದ್ಧತಿ ರೂಢಿಗೆ ಬಂದಿತು.
ಇಂತಹ ಕುದುರೆ, ತಮ್ಮ‌ ಮಂದೆಗಳಿಗೆ ಇಡೀ ವರ್ಷದಲ್ಲಿ ಹಸಿರು ಹುಲ್ಲನ್ನು ದೊರಕಿಸುವ ಹುಲ್ಲುಗಾವಲುಗಳನ್ನು ಹುಡುಕಿಕೊಟ್ಟ ಕುದುರೆಗೆ ಮತ್ತಷ್ಟು ದೈವಿಕ ಮೌಲ್ಯ ಹೆಚ್ಚಾಯಿತು.

ಈ ಕುದುರೆಯನ್ನು ವಿಶೇಷವಾಗಿ‌ ಪೂಜಿಸಿ ದೈವಗಳಿಗೆ ಬಲಿ ಕೊಡುವ ಆಚರಣೆಗಳು ಪಶುಪಾಲಕ ಬುಡಕಟ್ಟುಗಳ ಹಂತದಲ್ಲಿಯೇ ರೂಪಿತವಾದವು. ಈ ಪದ್ಧತಿ ಆರ್ಯ ಪಶುಪಾಲಕರು ಭಾರತಕ್ಕೆ ಪ್ರವೇಶಿಸುವ ಮೊದಲೇ ತಾಜಿಕಿಸ್ತಾನ, ಕಿರ್ಗಿಜ್‌ಸ್ತಾನ, ಆಫ್ಘಾನಿಸ್ತಾನ, ಇರಾನುಗಳಲ್ಲಿಯೇ ಆರಂಭವಾಗಿತ್ತು.
ಇದು ಅಶ್ವಮೇಧದ ಆಚರಣೆಗಳ ಎರಡನೇ ಹಂತ.

ಹುಲ್ಲುಗಾವಲುಗಳನ್ನು ಹುಡುಕಿ‌ ಆಕ್ರಮಿಸಿಕೊಳ್ಳುವ ಈ ಪದ್ಧತಿ ಬಹಳ ರಾಜಪ್ರಭುತ್ವಗಳ ಹಂತದಲ್ಲಿ ಫಲವತ್ತಾದ ಭೂಮಿಯುಳ್ಳ ರಾಜ್ಯಗಳನ್ನು ಆಕ್ರಮಿಸಿ ಯಾಗಕರ್ತನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಸಾಧನವಾಗಿಸಿಕೊಂಡದ್ದು ಆಶ್ಚರ್ಯಕರವೇನಲ್ಲ.‌

ಈ ಹಂತದ ಅಶ್ವಮೇಧ ಬಹಳ ವೈಭವೋಪೇತವಾದ ಯಜ್ಞವಾಯಿತು. ಒಂದು ವರ್ಷ ಕಾಲ ಯಜ್ಞ ವೇದಿಯ ಬಳಿ ಹಗಲೂ ರಾತ್ರಿ ಪುರಾಣ ಪ್ರಸಂಗಗಳನ್ನು ನಡೆಸುವ ಕ್ರಮವಾಯಿತು. ಹಗಲು ಬ್ರಾಹ್ಮಣ ಕವಿಗಳು ಬ್ರಾಹ್ಮಣರನ್ನು ವೈಭವೀಕರಿಸುವ ಕತೆಗಳನ್ನು ಹೇಳಿದರೆ ರಾತ್ರಿಯೆಲ್ಲ ಕ್ಷತ್ರಿಯರನ್ನು, ಅವರ ಶೌರ್ಯ ಸಾಹಸಗಳನ್ನು ವರ್ಣನೆ ಮಾಡುವ ಕತೆಗಳನ್ನು ಕ್ಷತ್ರಿಯ ಕುಲದ ಸೂತರು ಹೇಳುತ್ತಿದ್ದರು. ವರ್ಷವುದ್ದಕ್ಕೂ ಕತೆ ಹೇಳಲು ಬೇಕಾದ ಸಾಮಗ್ರಿಗಳಿಗಾಗಿ ತಮಗೆ ತಿಳಿಯಬಂದ ಬುಡಕಟ್ಟು ಜಾನಪದ ಕತೆಗಳನ್ನೂ, ಲಾವಣಿಗಳನ್ನೂ ಬಳಸಿಕೊಳ್ಳುತ್ತಿದ್ದರು.

ಹೀಗೆ ಸೃಷ್ಟಿಸಲ್ಪಟ್ಟ ಕತೆಗಳೇ ಇಂದು 18 ಪುರಾಣಗಳೆಂದು ಸಂಕಲಿತವಾಗಿವೆ. ಕುದುರೆಯ ಪರ್ಯಟನ ವರ್ಷದ ಕೊನೆಯಲ್ಲಿ ಸಾವಿರಾರು ಮಂದಿ ಬ್ರಾಹ್ಮಣರು, ಹಲವು ಹತ್ತು ಸಾವಿರ ಮಂದಿ ಸಾಮಾನ್ಯರು ಭಾಗವಹಿಸುವ ಆಚರಣೆಯಾಗಿ ಬ್ರಾಹ್ಮಣರಲ್ಲಿ ಅಶ್ವಮೇಧ ಯಾಗ ಸ್ಥಾನ ಪಡೆಯಿತು.

ಭಾರತದಲ್ಲಿ ಅಶ್ವಮೇಧ ಯಾಗವನ್ನು ಮಾಡುವ ಸಾಹಸ ಮಾಡಿದವರು ಕೆಲವೇ ರಾಜರುಗಳು. ಅವರ ಪಟ್ಟಿಯೂ ಪುರಾಣಗಳಲ್ಲಿವೆ. ಸಾಮ್ರಾಟರುಗಳು ಪರರಾಜ್ಯಗಳ ಮೇಲೆ ಆಕ್ರಮಣ ಮಾಡಲು ಬಹು ವೆಚ್ಚದ ವರ್ಷ ಕಾಲದ ಅಶ್ವಮೇಧ ಯಾಗದ ನೆಪವೇನೂ ಅವಶ್ಯಕವಿರಲಿಲ್ಲ. ಯಾವ ಯಾಗದ ಪ್ರಸಂಗಗಳಿಲ್ಲದೆಯೂ ನೂರಾರು ರಾಜರುಗಳು ಪರರಾಜರುಗಳ ರಾಜ್ಯಗಳನ್ನು ಆಕ್ರಮಿಸಿದ್ದಾರಲ್ಲಾ.
ಆದರೆ ಬುಡಕಟ್ಟು ಕಾಲದ ಕುದುರೆ ಬಲಿಯ ಆಚರಣೆಗೆ ಧಾರ್ಮಿಕ ಪರಿವೇಷವನ್ನೇಕೆ ನೀಡಲಾಗಿದೆ.

ಶತಪಥ ಬ್ರಾಹ್ಮಣದಲ್ಲಿ ವಿವರವಾದ ಕಟ್ಟಲೆಗಳೊಂದಿಗೆ ವಿವರಿಸಲಾದ ರಾಜಸೂಯ ಯಾಗ ಮತ್ತೊಂದು ಮಹಾ ಯಾಗ. ರಾಜರುಗಳ ಪಟ್ಟಾಭಿಷೇಕದ ಯಾಗ ಎಂದು ಪ್ರಸಿದ್ಧಿ. ಮಹಾಭಾರತದಲ್ಲಿ ಇದರ ಆಚರಣೆಯ ಮೂಲಕ ಜನರಿಗೆ ಪರಿಚಿತವಾಗಿದೆ.

ಎರಡು ವರ್ಷಗಳ ಕಾಲ ನಡೆಯುವ ಈ ಯಾಗದ ಆಚರಣೆಯಲ್ಲಿ ಪಟ್ಟಾಭಿಷೇಕದ ನಂತರ ತುರುಗೊಳ್ ಅಥವಾ ಗೋಗ್ರಹಣ ಮತ್ತು ಪಗಡೆಯಾಟ ಯಾಗದ ಅವಿಭಾಜ್ಯ ಅಂಗ. ನಿಜವಾದ ಗೊಗ್ರಹಣವೇನೂ ನಡೆಯುವುದಿಲ್ಲ. ಅದರ ಒಂದು ಅಣಕು ಪ್ರಹಸನ ನಡೆಯುತ್ತದೆ. ‌
ಈ ಯಾಗ ಕೂಡಾ ಪಶು ಸಂಗೋಪನಾ ಬುಡಕಟ್ಟುಗಳ ಕಾಲದ ಆಚರಣೆಯ ವಿಸ್ತರಣೆ. ರಾಜರ ಪಟ್ಟಾಭಿಷೇಕಕ್ಕೇನೂ ನೇರವಾಗಿ ಸಂಬಂಧವಿಲ್ಲದ ಹಸುಗಳ ಕಳ್ಳತನ ಇದರ ಭಾಗವಾಗಿರುವುದೇ ಇದಕ್ಕೆ ಪುರಾವೆ. ಮಹಾಭಾರತದಲ್ಲಿನ‌ ಕೌರವರು ಮಾಡಿದ ವಿರಾಟನ ಗೋಗ್ರಹಣ ಕೂಡಾ ನೈಜ ದನಗಳ್ಳತನವಲ್ಲ. ಪಾಂಡವರ ಅಜ್ಞಾತವಾಸವನ್ನು ಬಯಲಿಗೆಳೆಯಲಷ್ಟೇ ಬಳಕೆಯಾಗಿದೆ. ಭಾರತದ ಉದ್ದಕ್ಕೂ ಒಂದು ಗ್ರಾಮದ ಜನ ಮತ್ತೊಂದು ಗ್ರಾಮದ ಮೇಲೆ ಬಿದ್ದು ಹಸುಗಳ ಕಳ್ಳತನ ಮಾಡುತ್ತಿದ್ದ ಸಾವಿರಾರು ಪ್ರಸಂಗಗಳಿವೆ. ಆದರೆ ರಾಜರುಗಳ ಕಣ್ಣು ಪರರಾಜ್ಯದ ಭೂಮಿಯ ಮೇಲೆ, ಧನ ಸಂಪತ್ತಿನ ಮೇಲೆ. ಆದರೆ ರಾಜಸೂಯ ಯಾಗದಲ್ಲಿ ಬುಡಕಟ್ಟು ಕಾಲದ ಗೋಗ್ರಹಣ ಏಕೆ ತೂರಿಕೊಂಡಿತು ?

ಬುಡಕಟ್ಟು ಕಾಲದ ಈ ಆಚರಣೆಗಳಿಗೆ ಯಾಗ ಯಜ್ಞಗಳೆಂಬ ಧಾರ್ಮಿಕ ಕಟ್ಟಲೆಗಳ ರೂಪ ನೀಡಿದ್ದು ರಾಜಪ್ರಭುತ್ವಗಳ ಕಾಲದಲ್ಲಿ. ರಾಜರುಗಳು ಮಾತ್ರ ಆಚರಿಸಲು ಸಾಧ್ಯವಿರುವಂತೆ ಈ ಆಚರಣೆಗಳನ್ನು ವೈಭವೋಪೇತ ಮಾಡಲಾಯಿತು. ಸಾವಿರಾರು ಪುರೋಹಿತರು, ಇತರ ಅನೇಕ ಸಾವಿರ ಬ್ರಾಹ್ಮಣ ಸಹಾಯಕರುಗಳನ್ನು ದಾನ ಧರ್ಮಾದಿಗಳ ಮೂಲಕ ಪೋಷಿಸಲು ಅನುಕೂಲವಾಗುವಂತೆ ರೂಪಿಸಲಾಯಿತು.
ಬುಡಕಟ್ಟುಗಳ ಮೂಲದಿಂದ ಬುಡಕಟ್ಟುಗಳ ಕಾಲದ ಸಮಾನ ಬದುಕಿನ ಕಟ್ಟಲೆ, ಆಹಾರ ಮತ್ತು ಇತರ ಸಾಧನ ಸಂಪತ್ತುಗಳ ಸಮಾನ ಹಂಚಿಕೆಯ ಕಟ್ಟು ನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ರಾಜರುಗಳಿಗೆ ತಮ್ಮ ಆಳ್ವಿಕೆಗೆ ಜನರ ಒಪ್ಪಿಗೆ ಪಡೆಯಲು ಆ ಕಾಲದ ಆಚರಣೆಗಳ ಚೌಕಟ್ಟನ್ನೇ ಬಳಸುವುದು ಅಗತ್ಯವಾಯಿತು. ಹಾಗೆಯೇ ಹೊಸತಾಗಿ ರೂಪುಗೊಳಿಸಿದ್ದ ಧರ್ಮವೂ ಜನರ ಮನಸ್ಸಿನಾಳಕ್ಕೆ ಹೊಕ್ಕು ಅವರನ್ನು ತನ್ನ ಹಿಡಿತಕ್ಕೆ ಸೆಳೆದುಕೊಳ್ಳಲು ಬುಡಕಟ್ಟು ಆಚರಣೆಗಳ ಮೊರೆ ಹೊಗಬೇಕಾಯಿತು.

ಹಿಂದಿನ ಕೆಲವು ಲೇಖನಗಳಲ್ಲಿ ಬುಡಕಟ್ಟು ವೀರರು ಮತ್ತು ಅಮ್ಮ ದೇವತೆಗಳನ್ನು‌ ವೈದಿಕೀಕರಿಸಿ, ಪುರಾಣೀಕರಿಸಿ ವೈದಿಕ ಧರ್ಮ ಜನ ಸಮುದಾಯಗಳನ್ನು ಸೆಳೆದುಕೊಂಡಂತೆಯೇ ಯಜ್ಞ ಯಾಗಾದಿಗಳೂ ಕೂಡಾ ಅದೇ ಪ್ರಕ್ರಿಯೆಯ ಅಂಗಗಳಾದವು.

ಈ ಪ್ರಕ್ರಿಯೆ ವಿಶ್ವದ ಎಲ್ಲ ಮುಖ್ಯ ಧರ್ಮಗಳಲ್ಲಿಯೂ ಸಾಮಾನ್ಯವಾಗಿದೆ. ಕ್ರಿಸ್ತ ಧರ್ಮದ ಕ್ರಿಸ್ಮಸ್, ಈಸ್ಟರ್ ಮೊದಲಾದ ಮುಖ್ಯ ಹಬ್ಬಗಳು ಕ್ರಿಸ್ತನಿಗಿಂತ ಸಾವಿರಾರು ವರ್ಷ ಹಳೆಯದಾದ ಬುಡಕಟ್ಟು ಮೂಲದ ಆಚರಣೆಗಳೇ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: