ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
47
ಬೇಟೆಗಾರಳ ಜೊತೆಗೂಡಿದ ಬ್ರಾಹ್ಮಣ, ಚಮ್ಮಾರ, ಕಮ್ಮಾರ ತಾಂತ್ರಿಕ ಸಿದ್ಧರು ಮತ್ತು ವಚನಕಾರರು.
ಅಮ್ಮನ ಗರ್ಭದಲ್ಲಿ ಹೊಸ ಜೀವವೊಂದು ಜೀವ ತಳೆಯುತ್ತಿದೆ. ಮೊದಲ ಮೂರು ವಾರಗಳಲ್ಲಿ ಅದು ಕೇವಲ ಒಂದು ರೂಪು ತಳೆಯದ ಜೀವಕೋಶಗಳ ಗುಂಪು. ಮುಂದೆ ಯಾವ ರೂಪು ತಳೆಯಬಹುದೆಂಬ ಯಾವುದೇ ಸೂಚನೆಯಿಲ್ಲದ ಅವ್ಯಕ್ತ.
ಇದು ಮುಂದಿನ ವಾರಗಳಲ್ಲಿ ರೂಪು ತಳೆಯುತ್ತಾ ವ್ಯಕ್ತವಾಗತೊಡಗುತ್ತದೆ. ಮೊದಲಿಗೆ ನರಕೋಶ ಮತ್ತು ಮೆದುಳಿನ ಆದಿ ರೂಪದ ಸೂಚನೆ ಸಿಗುತ್ತದೆ. ನಂತರ ಕಣ್ಣು,ಕಿವಿಗಳ ಮೊದಲ ಸೂಚನೆ. ನಂತರ ಕೈ ಕಾಲುಗಳ ಸೂಚನೆ. ಈಗಿನ್ನೂ ಭ್ರೂಣ ಎನಿಸಿಕೊಂಡ ಜೀವ ಕೇವಲ ಅರ್ಧ ಇಂಚು ಮಾತ್ರ ಉದ್ದ.
ಗರ್ಭ ಧರಿಸಿ ಎರಡು ತಿಂಗಳಾಗುವ ವೇಳೆಗಿನ್ನೂ ಅದು ಕೇವಲ ಎರಡು ಇಂಚು ಉದ್ದ ಮಾತ್ರ. ಅದರಲ್ಲಿ ಅರ್ಧದಷ್ಟಿದ್ದು ಎದ್ದು ಕಾಣುವುದೇ ತಲೆ. ಮೊದಲು ಬೆಳೆಯುವುದೇ ಬುದ್ಧಿ, ಅದೇ ಮಹತ್ ಎಂಬಂತೆ ಕಾಣುತ್ತದೆ.
ನಂತರದ ವಾರಗಳಲ್ಲಿ ಶರೀರದ ಇತರ ಭಾಗಗಳು- ಮೂಳೆಗಳು, ಬೆನ್ನು ಮೂಳೆ, ಕೈ ಕಾಲು ಬೆಳೆಯುತ್ತಾ ಭ್ರೂಣದ ಒಟ್ಟು ಗಾತ್ರಕ್ಕೆ ಹೋಲಿಸಿದರೆ ತಲೆಯ ಗಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಕಿವಿಗಳಿಗೆ ಶಬ್ದಗಳು ಕೇಳಲಾರಂಭಿಸುತ್ತವೆ. ಭ್ರೂಣದ ಚಲನೆ ಆರಂಭವಾಗುತ್ತದೆ. ಒದೆಯಲಾರಂಭಿಸುತ್ತದೆ. ಈ ಭ್ರೂಣಕ್ಕೆ ತನ್ನತನ/ಸ್ವಪ್ರಜ್ಞೆ/ಅಹಂ ಮೂಡಿತೇನೋ ಎಂಬಂತೆ ಕಾಣುತ್ತದೆ. ಲೈಂಗಿಕ ಅವಯವಗಳು ಬೆಳೆಯಲಾರಂಭಿಸುತ್ತವೆ. ಮೂತ್ರ, ಮಲ ವಿಸರ್ಜನೆ ಆರಂಭವಾಗುತ್ತದೆ.
ಜನಿಸಿದ ನಂತರ ತನ್ನ ಜ್ಞಾನೇಂದ್ರಿಯಗಳಿಂದ ಸುತ್ತಲಿನ ಪ್ರಪಂಚದಲ್ಲಿ ಸ್ಪರ್ಶ, ರೂಪ, ರಸ, ಗಂಧ,ಶಬ್ದಗಳು ಎಂಬ ತನ್ಮಾತ್ರೆಗಳನ್ನು ಸೂಕ್ಷ್ಮವಾಗಿ ಗುರುತಿಸಲಾರಂಭಿಸುತ್ತದೆ ಜೀವ. ತನ್ನ ಬುದ್ಧಿ, ಮನಸ್ಸುಗಳಿಂದ ಸುತ್ತ ಮುತ್ತಲಿನ ಲೋಕದ ಭೂಮಿ,ನೀರು,ಗಾಳಿ,ಬೆಳಕು ( ಅಗ್ನಿ) ಆಕಾಶ ಎಂಬ ಪಂಚ ಭೂತಗಳ ಅಸ್ತಿತ್ವದ ಪರಿಚಯವಾಗುತ್ತದೆ. ಹೀಗೆ ಮಾನವರ ಜೀವ ವಿಕಾಸವಾಗುತ್ತದೆ.
ಸಾಂಖ್ಯ ದರ್ಶನ ವಿವರಿಸಿದ ರೀತಿಯ ಜೀವ ವಿಕಾಸ ಈ ರೀತಿಯಲ್ಲಿ ಗರ್ಭದೊಳಗೆ ಜೀವದ ಬೆಳವಣಿಗೆಯಾಗುವ ಪ್ರಕ್ರಿಯೆಯ ಸೂಕ್ಷ್ಮ ಅವಲೋಕನದಿಂದ ಹುಟ್ಟಿರುವಂತೆ ಕಾಣುತ್ತದೆ ಎಂದು ದೇವೀಪ್ರಸಾದ ಚಟ್ಟೋಪಾಧ್ಯಾಯರಂತಹ ತತ್ವಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಕಾರ,ರೂಪ ರಹಿತವಾದ ಕೋಶಗಳ ಗುಂಪೆಂಬ ಮೊದಲ ವಸ್ತುವಿಗೆ ಈ ದರ್ಶನದಲ್ಲಿ ಅವ್ಯಕ್ತ ಅಥವಾ ಪ್ರಧಾನ ಎಂಬ ಹೆಸರು ನೀಡಿದ್ದಾರೆ. ಇದರಿಂದ ಮೊದಲು ರೂಪುಗೊಳ್ಳುವುದೇ ಬುದ್ಧಿ. ಇದನ್ನು ಮಹತ್ ಎಂದು ಕರೆಯಲಾಗುತ್ತದೆ. ಮೇಲೆ ಹೇಳಿದಂತೆ ಈ ಅಭಿಪ್ರಾಯಕ್ಕೆ ಬರುವುದಕ್ಕೆ ಭ್ರೂಣದಲ್ಲಿ ಹಲವು ವಾರಗಳವರೆಗೆ ತಲೆಯೇ ದೊಡ್ಡದಾಗಿ ಕಾಣುತ್ತದೆ. ಈ ಬುದ್ಧಿಯಿಂದ ಸ್ವಪ್ರಜ್ಞೆ ಅಥವಾ ಅಹಂ ಹುಟ್ಟುತ್ತದೆ. ತನಗೆ ಹೊರತಾದ ಇತರ ಮಾನವರು,ಪ್ರಾಣಿಗಳು ಮತ್ತಿತರ ವಸ್ತುಗಳನ್ನುಳ್ಳ ಹೊರ ಜಗತ್ತಿನ ಅರಿವಿಲ್ಲದೆ ಸ್ವಪ್ರಜ್ಞೆಗೆ ಅಸ್ತಿತ್ವವಿಲ್ಲ. ಆದುದರಿಂದ ಈ ಅರಿವನ್ನು ಪಡೆಯಲು ಅವಶ್ಯವಾದ ಜ್ಞಾನೇಂದ್ರಿಯಗಳು ಅಹಂನಿಂದ ಹುಟ್ಟುತ್ತದೆ. ಈ ಹೊರ ಜಗತ್ತಿನ ಜೊತೆ ವ್ಯವಹರಿಸಿ ತನ್ನತನವನ್ನು ಹೊರ ಜಗತ್ತಿಗೆ ಕಾಣಿಸಿದಾಗಲೇ ಅಹಂ ಅಥವಾ ಸ್ವಪ್ರಜ್ಞೆಗೆ ಅರ್ಥ. ಮಾತಿಲ್ಲದೆ ಸ್ವಪ್ರಜ್ಞೆ ಅಥವಾ ಅಹಂ ಅನ್ನು ವ್ಯಕ್ತಪಡಿಸುವುದು ಹೇಗೆ ?. ತನ್ನತನವನ್ನು ವ್ಯಕ್ತಗೊಳಿಸಲು ಕೈಗಳಿಂದ ಮಾಡುವ ವಿವಿಧ ರೀತಿಯ ಕೆಲಸಗಳು, ಅದರಲ್ಲಿನ ಪರಿಣತಿ ಮುಖ್ಯ. ಕಾಲುಗಳ ಸಹಾಯದಿಂದ ಮಾಡುವ ಚಲನೆ ಮುಖ್ಯ. ಹೇಗೆ ಅವಯವಗಳು ಸ್ವಪ್ರಜ್ಞೆಯನ್ನು ಕ್ರಿಯಾಶೀಲಗೊಳಿಸುವುದರಿಂದ ಕರ್ಮೇಂದ್ರಿಯಗಳು ಕೂಡಾ ಅಹಂನಿಂದ ಜನಿಸಿದವು. ಜ್ಞಾನೇಂದ್ರಿಯಗಳಿಂದ ಪಡೆದ ಮಾಹಿತಿಯನ್ನು ಪರಿಷ್ಕರಿಸಿ, ಪರಾಮರ್ಶಿಸಿ ಹೊರ ಜಗತ್ತಿನ ಅರಿವನ್ನು ರೂಪಿಸಿಕೊಳ್ಳಲು ಮತ್ತು ಮಾತು, ಕ್ರಿಯೆಗಳಿಂದ ತನ್ನತನವನ್ನು ವ್ಯಕ್ತಪಡಿಸಲು ಮನಸ್ಸು ಅವಶ್ಯ.
ಆದ್ದರಿಂದ ಮನಸ್ಸು ಕೂಡಾ ಒಂದು ಇಂದ್ರಿಯ ಎಂದೇ ಸಾಂಖ್ಯ ದರ್ಶನ ಪರಿಗಣಿಸುತ್ತದೆ. ಹತ್ತು ಇಂದ್ರಿಯಗಳು ಎಂಬುದರ ಜೊತೆಗೆ ಏಕಾದಶ/ ಹನ್ನೊಂದು ಇಂದ್ರಿಯಗಳು ಎಂಬ ಪ್ರಯೋಗಗಳು ಚರಕ ಸಂಹಿತೆ ಮತ್ತಿತರ ಗ್ರಂಥಗಳಲ್ಲಿ ದೊರಕುತ್ತವೆ.
ಜೀವ ವಿಕಾಸದ ತತ್ವದ ಈ ನಿರೂಪಣೆಯನ್ನು ಗಮನಿಸಿದರೆ ಗರ್ಭದೊಳಗಿನ ಜೀವದ ಬೆಳವಣಿಗೆಯ ಬಗೆಗೆ ಅತ್ಯಂತ ಆಸಕ್ತಿಯಿಂದ ಮತ್ತು ಸೂಕ್ಷ್ಮವಾಗಿ ಗಮನಿಸಿರುವಂತಹವರೇ ಈ ವಿಕಾಸವಾದವನ್ನು ರೂಪಿಸಿರಲು ಸಾಧ್ಯ. ಹೀಗೆ ಹುಟ್ಟಿದ ನಂತರ ಶಿಶುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಬಹುದಾದವರು ತಾಯಂದಿರೂ ಸೇರಿ ಇತರ ಸ್ತ್ರೀಯರು ಇರಬಹುದು. ಆಸಕ್ತಿಯುಳ್ಳ ಪುರುಷರೂ ಗಮನಿಸಬಹುದು. ಆದರೆ ಗರ್ಭದೊಳಗೆ ಭ್ರೂಣದ ಬೆಳವಣಿಗೆಯನ್ನು ಗಮನಿಸುವ ಸಾಧ್ಯತೆ ಯಾರಿಗಿದೆ ? ವೈದ್ಯರು ಅದರಲ್ಲಿಯೂ ಹೆರಿಗೆ ಮಾಡಿಸುವುದರಲ್ಲಿ ತೊಡಗಿದವರಿಗೆ ಮಾತ್ರ ಸಾಧ್ಯ. ಅದರಲ್ಲಿಯೂ ವಿವಿಧ ಹಂತಗಳಲ್ಲಿ ಗರ್ಭಪಾತವಾದ ನಂತರದ ಚಿಕಿತ್ಸೆಯಲ್ಲಿ ಒಳಗೊಳ್ಳಲಾದವರಿಗೆ ಮಾತ್ರ ಆಯಾ ಹಂತಗಳ ಭ್ರೂಣಗಳ ಬೆಳವಣಿಗೆಯನ್ನು ಗಮನಿಸಲು ಸಾಧ್ಯ.
ಅಂದರೆ ಈ ವೈದ್ಯರಿಗೆ ಮಾತ್ರ ಅವಕಾಶ ಲಭ್ಯವಾಗುವ ಈ ಪರಿವೀಕ್ಷಣೆ, ಅದರ ಆಧಾರದ ಮೇಲೆ ತಾತ್ವಿಕ ನಿರೂಪಣೆಯನ್ನು ಮಾಡಲು ಸಾಧ್ಯ. ಚರಕ, ಶುಶ್ರುತ ಸಂಹಿತೆಗಳಲ್ಲಿ ದೇಹದ ಅಂಗಗಳ ವಿವರಣೆ ಸಹಜ. ಆದರೆ ಅದರ ತತ್ವಶಾಸ್ತ್ರೀಯ ವಿಶ್ಲೇಷಣೆಗೂ ಜಾಗ ದೊರೆತಿರುವುದು, ಈ ತತ್ವಗಳ ಬಗ್ಗೆ ಆತ್ರೇಯನೆಂಬ ವಿದ್ವಾಂಸ ಮತ್ತು ಇತರರು ಭಾಗವಹಿಸಿದ ಸಂವಾದ ಕೂಡಾ ದಾಖಲಾಗಿರುವುದನ್ನು ಗಮನಿಸಿದರೆ ದೇಬೀಪ್ರಸಾದರು ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸದಲ್ಲಿ ಹೇಳಿದಂತೆ ವೈದ್ಯರು ಅಂದಿನ ಶರೀರ ವಿಜ್ಞಾನದ ತಿಳುವಳಿಕೆಯನ್ನು ತಾತ್ವೀಕರಿಸುವುದರಲ್ಲಿಯೂ ಪಾತ್ರ ವಹಿಸಿದ್ದರು. ಸಾಂಖ್ಯ ತತ್ವಶಾಸ್ತ್ರದ ತತ್ವಗಳು ಅಂತಹ ಸಂದರ್ಭದಲ್ಲಿಯೇ ಶೋಧಗೊಂಡಿರಬಹುದು ಎಂಬ ಸಾಧ್ಯತೆ ಹೆಚ್ಚಿದೆ.
ಈ ವಿಕಾಸದ ಪ್ರಕ್ರಿಯೆಗೆ ಕಾರಣರಾರು ? ವಿಕಾಸಗೊಂಡ, ವಿಕಾಸದಲ್ಲಿ ಒಳಗೊಂಡ ಎಲ್ಲ ವಸ್ತುಗಳೂ ಭೌತಿಕ ವಸ್ತುಗಳು. ಇದರಲ್ಲೆಲ್ಲೂ ಬ್ರಹ್ಮ, ಆತ್ಮ, ಚೇತನಗಳ ಪ್ರವೇಶವಿಲ್ಲ. ಬ್ರಹ್ಮ ಅಥವಾ ತನ್ನಿಚ್ಚೆಯಂತೆ ಸೃಷ್ಟಿಸಿದ ಎಂಬುದಕ್ಕೂ ಅವಕಾಶವಿಲ್ಲ. ಹಾಗಾದರೇ ಈ ವಿಕಾಸ ಹೇಗಾಯಿತು? ಪಂಚ ಭೂತಗಳಿಂದ ಇಡೀ ಜಗತ್ತು ರೂಪುಗೊಂಡದ್ದು ಹೇಗೆ. ಮಡಕೆ ಮಾಡಲು ಕುಂಬಾರ ಹೇಗೆ ಬೇಕೋ ಹಾಗೆ ಸೃಷ್ಟಿಕರ್ತನೊಬ್ಬ ಇರಲೇಬೇಕು ಎಂದು ವೇದಾಂತ ಸಾರುತ್ತಿದೆಯಲ್ಲ ಹಾಗೆಯೇ ಈ ವಿಕಾಸ ಕ್ರಿಯೆಯೂ ಆಗಿರಬೇಕಲ್ಲವೇ ಎಂಬ ಪ್ರಶ್ನೆಗಳನ್ನು ಸಾಂಖ್ಯ ದರ್ಶನದ ತತ್ವಗಳನ್ನು ಖಂಡಿಸಿದ ವೇದಾಂತಿಗಳು ಎತ್ತಿದ್ದಾರೆ.
ಆದರೆ ಸಾಂಖ್ಯ ದರ್ಶನ ಅಂತಹ ವಾದಗಳಿಗೆ ಅವಕಾಶವನ್ನೇ ನೀಡಿಲ್ಲ. ಹೀಗೆ ವಿಕಾಸಗೊಳ್ಳುವುದು ಆಯಾ ವಸ್ತುಗಳ ಸ್ವಭಾವ. ಹೇಗೆ ಹರಿಯುವುದು ನೀರಿನ ಸ್ವಭಾವವೋ, ಬೀಸುವುದು ಗಾಳಿಯ ಸ್ವಭಾವವೋ ಅದೇ ರೀತಿ ಆಯಾ ವಸ್ತು , ಪ್ರಕ್ರಿಯೆಗಳ ಸ್ವಭಾವದಂತೆ ಬದಲಾವಣೆಗಳು ಜರುಗುತ್ತವೆ ಎಂದು ವಿವರಿಸಿದೆ. ಈ ನಿಯಮಕ್ಕೆ ಸ್ವಭಾವವಾದ ಎಂದು ತತ್ವಶಾಸ್ತ್ರದಲ್ಲಿ ಕರೆಯಲಾಗಿದೆ.
ಇದೇ ವಿಕಾಸದ ಪ್ರಕ್ರಿಯೆಯನ್ನು ಅಕ್ಕ ಮಹಾದೇವಿ, ಅಲ್ಲಮ ಪ್ರಭು ವಿವರಿಸಿದ್ದಾರೆ, ಚನ್ನಬಸವಣ್ಣನವರು ಮತ್ತಷ್ಟು ವಿವರವಾಗಿ ಹೇಳಿದ್ದಾರೆ. ಅವರ ಕೆಲವು ವಚನಗಳಲ್ಲಿ ಈ ವಿವರಗಳು ಕಾಣುತ್ತವೆ. ಮತ್ತೆ ಹಲವು ವಚನಗಳಲ್ಲಿ ಅದರ ಸೂಚನೆ ನೀಡಿದ್ದಾರೆ. ಅವರು ಸೃಷ್ಟಿಯ ವಚನಗಳೆಂಬ ಸಾಹಿತ್ಯವನ್ನೂ ಬರೆದಿದ್ದಾರೆಂದು ಕನ್ನಡ ವಿಶ್ವ ವಿದ್ಯಾಲಯದಿಂದ ಪ್ರಕಟವಾಗಿರುವ “ವಚನೇತರ ಸಾಹಿತ್ಯ” ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಈ ಸಾಹಿತ್ಯದ ಕತೃತ್ವದ ಬಗ್ಗೆ ಹಲವು ಸಂಶಯಗಳಿವೆ. ಅವುಗಳಲ್ಲಿ ಪಂಚೀಕರಣ ಪ್ರಕ್ರಿಯೆ ಎಂಬ ಹೆಸರಿನಲ್ಲಿ ಈ ವಿಕಾಸವಾದವನ್ನು ವಿವರಿಸಲಾಗಿದೆ.
ಅಕ್ಕ ಮಹಾದೇವಿಯವರ ಸೃಷ್ಟಿಯ ವಚನದಲ್ಲಿ –
“ಈ ಪಂಚ ತನ್ಮಾತ್ರಗಳಿಂದವೆ ಪಂಚ ಭೂತಗಳುತ್ಪತ್ತಿ
ಈ ಪಂಚ ಭೂತಗಳೇ ಪಂಚೀಕರಣವನೈದಿ ಅಂಗವಾಯಿತ್ತು
ಈ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು ಪ್ರತ್ಯಂಗವೆನಿಸಿತ್ತು “
ಈ ವಚನಗಳಲ್ಲಿ ಅಂಗತತ್ವಗಳೊಡನೆ ಲಿಂಗ ತತ್ವಗಳೊಡನೆಯ ಜೋಡಣೆಯೂ ಇದೆ ಎಂಬುದು ಬೇರೆಯಾಗಿ ಪರಿಶೀಲಿಸಬೇಕಾದ ವಿಷಯ.
ಸಾಂಖ್ಯ ದರ್ಶನ ಈ ಪ್ರಕೃತಿ ಸಹಜ ಪ್ರಕ್ರಿಯೆಯನ್ನು ತನ್ನ ಸೃಷ್ಟಿಯ ತತ್ವವನ್ನಾಗಿ ಅಂಗೀಕರಿಸಿರುವುದು ಹಲವು ಕಾರಣಗಳಿಗೆ ಬಹಳ ಮುಖ್ಯವಾಗುತ್ತದೆ. ಜೀವದ ವಿಕಾಸ ಜಗತ್ತಿನ ವಸ್ತುಗಳಿಂದಲೇ ಎಂಬುದನ್ನು ದೃಢಪಡಿಸುತ್ತದೆ. ಮತ್ತೊಂದು ಕಡೆ ಹೇಗೆ ಇಪ್ಪತ್ತು ನಾಲ್ಕು ಅಂಗತತ್ವಗಳು ಜಾತಿ, ಲಿಂಗ ಬೇಧವಿಲ್ಲದೆ ಎಲ್ಲ ಮಾನವರಿಗೆ ಸಮಾನವಾಗಿವೆ ಎಂಬುದರ ಜೊತೆಗೆ ಮಾನವ ವಿಕಾಸದ ಪ್ರಕ್ರಿಯೆಯೂ ಕೂಡಾ ಎಲ್ಲ ಮಾನವರಿಗೆ ಸಮಾನ ಎಂಬುದನ್ನು ಸಾರುತ್ತದೆ. ಸಮಾನತೆಯನ್ನು ಸಾಮಾಜಿಕವಾಗಿ ಅಂಗೀಕರಿಸುವುದಕ್ಕೆ, ಅನುಸರಿಸುವುದಕ್ಕೆ ಬಹು ಮುಖ್ಯ ಅಡಿಪಾಯವಾಗುತ್ತದೆ.
ಪೃಕೃತಿಯೊಂದಿಗೆ ಸೇರಿದ ಪುರುಷ-
ಚತುರ್ವಿಂಶತಿ ಎಂದು ಕರೆಯಲಾದ 24 ಅಂಗ ತತ್ವಗಳು ಪ್ರಕೃತಿಯ ಭಾಗವೆಂದು, ಅದು ಸಾಂಖ್ಯದ ಮೂಲ ತತ್ವವೆಂದು ಸಂಶೋಧಕರು ಹಲವಾರು ಮೂಲಗಳ ಪರಿಶೀಲನೆಯಿಂದ ಗುರುತಿಸಿದ್ದಾರೆ. ಹೆಣ್ಣೊಬ್ಬಳೇ ಮಕ್ಕಳ ಜನನಕ್ಕೆ ಕಾರಣ. ಅದು ಅವಳಲ್ಲಿರುವ ವಿಶೇಷ ಶಕ್ತಿ ಎಂದು ಲಕ್ಷಾಂತರ ವರ್ಷ ಮಾನವರ ತಿಳುವಳಿಕೆಯಾಗಿತ್ತು.
ಬುಡಕಟ್ಟುಗಳ ಕಾಲದ ಈ ತಿಳುವಳಿಕೆಯನ್ನೇ ಪ್ರಧಾನವಾಗಿಸಿಕೊಂಡು ಆಧಾರದ ತಾಂತ್ರಿಕ ಪಂಥಗಳು ರೂಪುಗೊಂಡಿದ್ದವು. ಅವುಗಳಲ್ಲಿ ಹೆಣ್ಣಿಗೆ ವಿಶೇಷ ಮಹತ್ವ. ಪುರುಷನ ಪಾತ್ರವನ್ನು ನಂತರ ಮಾತ್ರ ಗುರುತಿಸಲಾಯಿತು.
ಈ ಪಂಥಗಳಲ್ಲಿ ಬುಡಕಟ್ಟುಗಳ ಸ್ತ್ರೀ ದೇವತೆಗಳು, ಬುಡಕಟ್ಟುಗಳ ಪೂಜಾ ವಿಧಾನಕ್ಕೆ ಮಹತ್ವವಿತ್ತು. ವೇದಗಳ , ವೈದಿಕರ ದೇವತೆಗಳಿಗಿಂತ ಈ ದೇವತೆಗಳೇ ಹೆಚ್ಚು ಮಹತ್ವದವರು ಎಂದು ಸಾಧಿಸಲಾಗುತ್ತಿತ್ತು. ವರ್ಣ,ಜಾತಿ, ಪಂಥಗಳ ಬೇಧವಿರಲಿಲ್ಲ ಮಾತ್ರವಲ್ಲ ತಳ ಸಮುದಾಯಗಳ ಬದುಕಿನ ವಿಧಾನವೇ ಉತ್ತಮ ಎಂದು ಬಿಂಬಿಸುತ್ತಿದ್ದರು. ಬ್ರಾಹ್ಮಣ, ಕ್ಷತ್ರಿಯ ವರ್ಣದವರು ತಾಂತ್ರಿಕ ಪಂಥಗಳನ್ನು ಸ್ವೀಕರಿಸಿ ಪ್ರಸಿದ್ಧ ಚೌರಾಸಿ ಸಿದ್ಧರಲ್ಲಿ ಹೆಸರಾಗಿದ್ದಾರೆ. ಈ ಮೇಲ್ವರ್ಣದವರು ತಳ ಸಮುದಾಯದ ಬೇಟೆಗಾರ, ಕುಂಬಾರ ಜಾತಿಯ ಹೆಣ್ಣುಗಳನ್ನು ಸ್ವೀಕರಿಸುತ್ತಿದ್ದರು ಮಾತ್ರವಲ್ಲ, ಆ ಸನುದಾಯದ ಜೀವನ ಪದ್ಧತಿಗಳನ್ನು ಸ್ವೀಕರಿಸುತ್ತಿದ್ದರು.
ಚೌರಾಸಿ ಸಿದ್ಧರಲ್ಲಿ ಅತ್ಯಂತ ಪ್ರಸಿದ್ಧನಾದ ಸರಹಪಾ ಇದಕ್ಕೆ ಒಂದು ಉದಾಹರಣೆ. ಅವನು ಬ್ರಾಹ್ಮಣನಾದರೂ ಅದರ ವಿರುದ್ಧ ದಂಗೆಯೆದ್ದು ಬಾಣಗಳನ್ನು ತಯಾರಿಸುವ ಶರಕಾರ ಸಮುದಾಯದ ಹೆಣ್ಣಿನ ಜೊತೆಗೂಡಿದ. ತಾನೂ ಬಾಣಗಳನ್ನು ತಯಾರಿಸುವ ವೃತ್ತಿ ಕೈಗೊಂಡ.
ಸಹಜೀಯ ತಾಂತ್ರಿಕ ಪಂಥದ ಆದ್ಯನೆಂದು ರಾಹುಲ ಸಾಂಕೃತ್ಯಾಯನರಿಂದ ಗುರುತಿಸಲ್ಪಟ್ಟ ಈತ ಶರಣರಂತೆ ದೇಹವೇ ದೇಗುಲ ಎನ್ನುತ್ತಾನೆ.
“ದೇಹ ಸಮ ತೀರ್ಥವ ನಾ ಕಾಣಲಿಲ್ಲವೆಲ್ಲೂ ಹೊರಗೆ ಇದರಲೇ ಇಹುದು ಸುರನದಿಯೂ ಯಮುನೆಯೂ, ಇದರಲೇ ಪ್ರಯಾಗ ವಾರಣಾಸಿ, ಇದರಲೇ ಚಂದ್ರ ಸೂರ್ಯರು. ಕ್ಷೇತ್ರ ಪೀಠ ಉಪ ಪೀಠಗಳೆಲ್ಲವೂ ಇದರಲೇ ಏಕೆ ಭ್ರಮಿಪೆ ಹೊರಗೆ ಸಾಕು ಮೂರ್ಖತನ ” ಈ ಸಿದ್ಧರಲ್ಲಿ ಕರ್ನಾಟಕದವನಾದ್ದರಿಂದ ಕಾಣ್ಹಪಾ ಎಂದು ಹೆಸರಾದ ಒಬ್ಬ ಸಿದ್ಧ ತನ್ನ ಕವಿತ್ವ, ಚಿಂತನೆಗಳಿಗೆ ಬಹಳ ಪ್ರಸಿದ್ಧನಾದವನು. ಹಲವಾರು ಸಿದ್ಧರಿಗೆ ಗುರು.
ಇವನು ತನ್ನ ಪಂದ್ಯವೊಂದರಲ್ಲಿ –
‘ಆಗಮ ವೇದ ಪುರಾಣಗಳ ಪಂಡಿತರು ಬಹಳ ಹೆಮ್ಮೆಯಿಂದ ಬೀಗುತ್ತಾರೆ.ಆದರೆ ಅವರು ತೆಂಗಿನ ಕಾಯಿಯ ಹೊರ ಹೊರಗೇ ಸುತ್ತುವ ದುಂಬಿಯಂತೆ. ಸವಿಯಾದ ಪುಷ್ಟಿಕರವಾದ ತಿರುಳನ್ನರಿಯರು, ಸಿಪ್ಪೆಗೆ ಅಂಟಿಕೊಂಡಿದ್ದಾರೆ’ ಎಂದು ಹೇಳುತ್ತಾನೆ.
ಹೀಗೆ ಇವರ ಮತ್ತು ಶರಣರ ಹಲವು ವಿಚಾರಗಳನ್ನು ಬಹುವಾಗಿ ಹೋಲುತ್ತವೆ. ವಚನಕಾರರಂತೆಯೇ ಇವರುಗಳು ಜನ ಭಾಷೆಗಳಾದ ಅಪಭ್ರಂಶಗಳನ್ನೇ ಬಳಸಿದ್ದಾರೆ. ಆ ಭಾಷೆಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇವರು ಸಾಮಾನ್ಯವಾಗಿ ತಳ ಸಮುದಾಯಗಳ ಹೆಣ್ಣುಗಳನ್ನೇ ತಮ್ಮ ತಾಂತ್ರಿಕ ಸಾಧನೆಯ ಯೋಗ ಮುದ್ರೆಯರನ್ನಾಗಿ ಸ್ವೀಕರಿಸಿದ್ದಾರೆ.
ಸಿದ್ಧರಾಗಿ ಕೆಳಜಾತಿಯನ್ನು ಸ್ವೀಕರಿಸಿದ 84 ಸಿದ್ಧರಲ್ಲಿ 17 ಜನ ಬ್ರಾಹ್ಮಣರಿದ್ದಾರೆ . ರಾಜರು,ರಾಜಮನೆತನದವರು 14, ಉಳಿದವರು ಶೂದ್ರರು. ಶೂದ್ರರಲ್ಲಿ ಚಮ್ಮಾರ, ಅಗಸ, ಮೀನುಗಾರ ಮೊದಲಾದ ತಳ ಸಮುದಾಯದವರು ಅರ್ಧದಷ್ಟಿದ್ದಾರೆ. ಕೆಲ ಮಹಿಳೆಯರೂ ಸಿದ್ಧರಾಗಿದ್ದಾರೆ.
ಈ ರೀತಿ ಜಾತಿ ಸಂರಚನೆಯಲ್ಲಿಯೂ ವಚನ ಚಳುವಳಿಯನ್ನು ಹೋಲುತ್ತಾರೆ.
ಈ ಪಂಥಗಳು ಪುರುಷನ ಪಾತ್ರವನ್ನು ಗುರುತಿಸಿದರೂ ಕೂಡಾ ಹೆಣ್ಣೇ ಪ್ರಧಾನ. ಮಕ್ಕಳ ಜನನದಲ್ಲಿ ಪುರುಷನ ಪಾತ್ರ ಕೇವಲ ಲೈಂಗಿಕ ಸುಖಕಷ್ಟೇ ಸೀಮಿತವಾಗಿ ಹೊತ್ತು ಹೆತ್ತು ಸಲಹುವುದರಲ್ಲಿ ಹೆಣ್ಣಿನ ಪಾತ್ರವೇ ಪ್ರಧಾನವಾದಂತೆ ಜಗತ್ತಿನ ಸೃಷ್ಟಿಯಲ್ಲಿಯೂ ಪ್ರಕೃತಿಯೇ ಪ್ರಧಾನ.
ಲೋಕಾಯತ ಅಥವಾ ಚಾರ್ವಾಕ ತತ್ವಗಳು ಕೂಡಾ ಬುಡಕಟ್ಟುಗಳ ಮೂಲದ್ದು. ತಾಂತ್ರಿಕ ಪಂಥಗಳ ಜ್ಞಾತಿ. ಸಾಂಖ್ಯ ದರ್ಶನದ ಗ್ರಂಥಗಳನ್ನೂ ಶಂಕರ ಮೊದಲಾದ ವೈದಿಕ ತತ್ವಶಾಸ್ತ್ರಜ್ಞರು ತಂತ್ರಗಳೆಂದೇ ಕರೆದಿದ್ದಾರೆ. ಸಾಂಖ್ಯ ದರ್ಶನದ ತತ್ವಗಳ ಸ್ವರೂಪವೂ ಲೋಕಾಯತ ಮತ್ತು ತಾಂತ್ರಿಕ ಪಂಥಗಳ ತತ್ವಗಳು, ಸಿದ್ಧಾಂತಗಳಿಗೆ ಬಹಳ ಸಮೀಪ ಇವೆ.
ಮುಖ್ಯವಾಗಿ ಲೋಕಾಯತ ಮತ್ತು ಸಾಂಖ್ಯ ಎರಡೂ ಅರಿವಿನ ಮೂಲಗಳ ಬಗ್ಗೆ ಪ್ರತ್ಯಕ್ಷವೇ ಪ್ರಮಾಣ ಎಂದು ,ಪ್ರತ್ಯಕ್ಷ ಅನುಭವದ ಮೇಲೆ ಆಧಾರಿತವಾದ ಅನುಮಾನ ಎರಡನೇ ಪ್ರಮಾಣ ಎಂದು ಮಾತ್ರ ಒಪ್ಪಿಕೊಂಡಿರುವ ದರ್ಶನಗಳು. ವೈದಿಕ ಧರ್ಮ ಮತ್ತು ತತ್ವಶಾಸ್ತ್ರಗಳಂತೆ ವೇದವಾಕ್ಯಗಳ ಮೇಲೆ, ಶಾಸ್ತ್ರ ಗ್ರಂಥಗಳೇ ಪ್ರಮಾಣ ಎನ್ನುವುದನ್ನು ಸುತರಾಂ ಒಪ್ಪುವುದಿಲ್ಲ. ಇದನ್ನು ಸಾಂಖ್ಯ ದರ್ಶನ,ಲೋಕಾಯತ ದರ್ಶನಗಳನ್ನು ಖಂಡಿಸುವ ವೈದಿಕ ತತ್ವಶಾಸ್ತ್ರಜ್ಞರೆಲ್ಲ ಗುರುತಿಸಿದ್ದಾರೆ, ಖಂಡಿಸಿದ್ದಾರೆ.
ಆದ್ದರಿಂದ ಲೋಕಾಯತ ದರ್ಶನ, ತಾಂತ್ರಿಕ ಪಂಥಗಳು, ಸಾಂಖ್ಯ ದರ್ಶನಗಳ ಮೂಲ ಚಿಂತನೆ ಒಂದೇ. ಆದರೆ ಇನ್ನೂ ಬುಡಕಟ್ಟು ಜೀವನದ ಪರಿಧಿಯ ಒಳಗೇ ರೂಪಿತವಾದ ತಾಂತ್ರಿಕ ಪಂಥಗಳು ಮತ್ತು ಲೋಕಾಯತಗಳಿಗಿಂತ ಭಿನ್ನವಾಗಿ ಸಾಂಖ್ಯ ದರ್ಶನ ಬುಡಕಟ್ಟು ಜೀವನದ ಆಧಾರದ ಮೇಲೆಯೇ ಮತ್ತಷ್ಟು ಉನ್ನತ ಸ್ತರಕ್ಕೇರಿದ ತತ್ವಗಳನ್ನು ನಿರೂಪಿಸಿಕೊಂಡಿದೆ. ಮೇಲೆ ಹೇಳಿದಂತೆ ಪ್ರಕೃತಿಯ ಬೆಳವಣಿಗೆ ಬದಲಾವಣೆಗಳ ಜೊತೆಗೆ ಶರೀರದ ಬೆಳವಣಿಗೆಯನ್ನು ಗಮನಿಸಿದ ವೈದ್ಯರ ಕೊಡುಗೆಯೂ ಅದಕ್ಕೆ ಮುಖ್ಯವಾಗಿರಬಹುದು.
ಯೋಗ ಸೂತ್ರಗಳು –
ಸಾಂಖ್ಯ ದರ್ಶನದೊಂದಿಗೆ ಬೆಸೆದುಕೊಂಡ ದರ್ಶನವೆಂದರೆ ಯೋಗ ದರ್ಶನ. ಇತ್ತೀಚೆಗೆ ಬಹಳ ಪ್ರಚಲಿತವಾದ ಯೋಗಕ್ಕೂ ತತ್ವಶಾಸ್ತ್ರೀಯ ಚಿಂತನೆಗಳಲ್ಲಿ ಬಹಳ ಸಾಮ್ಯವಿದೆ. ಪಂತಂಜಲಿಯ ಯೋಗ ಸೂತ್ರಗಳಲ್ಲಿ ಪ್ರತಿ ಅಧ್ಯಾಯದ ಕೊನೆಗೆ ಸಾಂಖ್ಯ ಯೋಗವೆಂದೇ ಕರೆಯಲಾಗಿದೆ.
ಅದಕ್ಕೆ ಮುಖ್ಯ ಕಾರಣ ಯೋಗ ದೃಢಕಾಯದ ಮತ್ತು ಮಾನಸಿಕ ಬೆಳವಣಿಗೆ ಗುರಿಯಾಗಿರುವ ದರ್ಶನ. ಸಾಂಖ್ಯ ದರ್ಶನ ಅಂಗಗಳಿಗೆ ಪ್ರಾಮುಖ್ಯತೆ ನೀಡಿ ರೂಪಿಸಿದ ತತ್ವಗಳಾದ್ದರಿಂದ ಅಂಗಗಳನ್ನೇ ಕೇಂದ್ರೀಕರಿಸಿದ ಯೋಗಕ್ಕೂಅದಕ್ಕೂ ಹತ್ತಿರದ ಸಂಬಂಧ ಏರ್ಪಟ್ಟಿದೆ. ವೇದವಾಕ್ಯ, ಆತ್ಮದ ಕರ್ಮ ಲೇಪನ, ಪಾಪ ಪುಣ್ಯಗಳ ಆಧಾರ, ಗ್ರಹಗತಿಗಳ ಮೇಲೆ ರೋಗ ಚಿಕಿತ್ಸೆಯನ್ನು ಚರಕರ ವೈದ್ಯಕೀಯ ಆಧರಿಸದೆ ಆಹಾರ ಕ್ರಮ, ಔಷಧಿಗಳನ್ನು, ರೋಗ ನಿದಾನ, ವೈದ್ಯನ ತಿಳುವಳಿಕೆ ಅನುಭವಗಳಿಗೆ ಪ್ರಾಮುಖ್ಯತೆ ನೀಡಿದೆಯೋ ಅದೇ ರೀತಿ ಯೋಗವೂ ಕರ್ಮ ಸಿದ್ಧಾಂತ, ಜ್ಯೋತಿಷ್ಯ ಗ್ರಹಗತಿಗಳ ಮೇಲೆ ಅವಲಂಬಿಸದೆ ತನ್ನ ವ್ಯಾಯಾಮ, ಪ್ರಾಣಾಯಾಮಗಳಿಗೆ ಪ್ರಾಮುಖ್ಯತೆ ನೀಡಿದೆ. ಆದ್ದರಿಂದ ಚರಕರ ವೈದ್ಯಕ್ಕೆ ಸಾಂಖ್ಯ ದರ್ಶನದ ಅಂಗ ತತ್ವಗಳು ಉಪಯುಕ್ತವಾದಂತೆ ಯೋಗಕ್ಕೂ ಅದು ಅಡಿಪಾಯವಾಗಿದೆ. ಸಾಂಖ್ಯ ದರ್ಶನ ಹೇಗೆ ಇಂದ್ರಿಯಗಳಂತೆ ಕರ್ಮೇಂದ್ರಿಯಗಳನ್ನೂ, ಹಾಗೆಯೇ ಮನಸ್ಸು, ಬುದ್ಧಿ, ಸ್ವಪ್ರಜ್ಞೆಯನ್ನೂ ದೇಹದ ಭಾಗಗಳು, ದೇಹದ ಇತರ ಭಾಗಗಳ ಬೆಳವಣಿಗೆ ಮತ್ತು ಕ್ರಿಯೆಗಳ ಮೇಲೆ ಪರಸ್ಪರಾವಲಂಬನ ಇರುವಂತಹ ಅಂಗಗಳು ಎಂದೇ ಪರಿಗಣಿಸುತ್ತದೆಯೋ ಹಾಗೇಯೇ ಯೋಗವೂ ಕೇವಲ ಶರೀರದ ದೃಢತೆ ಮಾತ್ರವೇ ಅಲ್ಲದೆ ಮನಸ್ಸು, ಬುದ್ಧಿಗಳ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡುತ್ತದೆ ಮತ್ತು ಪರಸ್ಪರಾವಲಂಬನೆ ಇರುವ ವಿಷಯಗಳೆಂದು ಪರಿಗಣಿಸುತ್ತದೆ.
ಮತ್ತೂ ಮುಖ್ಯ ವಿಷಯವೆಂದರೆ ಸಾಂಖ್ಯ ದರ್ಶನ ಯಾವ ಅಂಗಗಳ ಕಾರ್ಯ ಕ್ಷಮತೆ, ದಕ್ಷತೆ, perception, inference, diligence, attention ಗಳು ಜಗತ್ತಿನ ಅರಿವನ್ನು ಪಡೆಯುವಲ್ಲಿ, ತೀರ್ಮಾನ ಕೈಗೊಳ್ಳುವಲ್ಲಿ ಮುಖ್ಯ ಎಂದು ಪರಿಗಣಿಸುತ್ತದೋ ಯೋಗ ದರ್ಶನ ಅದೇ ಕೈ ಕಾಲುಗಳು, ಅವುಗಳ ಮಾಂಸಖಂಡಗಳು, ನರವ್ಯೂಹಗಳು, ಕಣ್ಣು ಕಿವಿ, ಚರ್ಮ, ಶ್ವಾಸಕೋಶ, ರಕ್ತ ಪರಿಚಲನೆ, ಇತರ ಅಂಗಗಳ ಕಾರ್ಯ ದಕ್ಷತೆಯನ್ನು ಪರಿಣಾಮಕಾರಿಗೊಳಿಸಲು ಶ್ರಮಿಸುತ್ತದೆ. ಅದಕ್ಕೆ ಸಂಬಂಧಿಸಿದ ಅನುಭವಗಳನ್ನು ಕ್ರೋಡಿಕರಿಸಿ ಸೂತ್ರವಾಗಿಸಿದೆ.
ಹೀಗೆ ಈ ಎರಡು ದರ್ಶನಗಳೂ ಪರಸ್ಪರಾವಲಂಬಿಗಳಾಗಿವೆ.
ಅವುಗಳ ನಡುವೆ ಮತ್ತೂ ಒಂದು ಮುಖ್ಯ ಸಾಮ್ಯತೆ ಎಂದರೆ ಯೋಗವೂ ಬುಡಕಟ್ಟು ಮೂಲದ್ದು. ಕಾಡಿನ ಬೇಟೆಗಾರ ಜೀವನ ಮತ್ತು ಅದರ ಸ್ಥಿತ್ಯಂತರಗಳಿಗೆ ಅಗತ್ಯವಾದ ಅಂಗ ಸೌಷ್ಟವ ಮತ್ತು ಇಂದ್ರಿಯಗಳ ಪರಿಣಾಮಕಾರಿ ಕೆಲಸದ ಅನಿವಾರ್ಯತೆಯ ಫಲವಾಗಿ ಯೋಗದ ವಿವಿಧ ವ್ಯಾಯಾಮ, ಪ್ರಾಣಾಯಾಮಗಳು ಬೆಳೆದಿವೆ. ನಂತರ ಬೇರೆ ಬೇರೆಯಾಗಿ ಬೆಳೆದರೂ ಮತ್ತೆ ತತ್ವ ದರ್ಶನಗಳಾಗಿ ಒಂದುಗೂಡಿ ಸಾಂಖ್ಯ ಯೋಗವಾಗಿವೆ.
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು