ಜಿ ಎನ್ ನಾಗರಾಜ್ ಅಂಕಣ- ಬೆಂಕಿಯ ಫ್ಯಾಕ್ಟರಿಗಳು ಮಕ್ಕಳನ್ನು ನೀಡುವ ದೇವತೆಗಳಾದರೇ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

8

ಅರಿವಿನ ಸ್ಫೋಟಗಳ ಮರೆಯ ಅರಿವಿನ ಮಿತಿಗಳು, ಕೊರತೆಗಳು ಮತ್ತು ಅವು ತಳೆದ ವಿಶಿಷ್ಟ ರೂಪಗಳು.

ಬಹಳಷ್ಟು ಊರುಗಳಲ್ಲಿ ಒಂದು ಅರಳಿ ಕಟ್ಟೆ ಇರುತ್ತದೆ.. ಆ ಕಟ್ಟೆಯ ಮೇಲೆ ಅಲ್ಲಲ್ಲಿಯ ಬುದ್ಧರ ನಡುವೆ ಅವರ ಅರಿವಿನ ಮಥನವಾಗುತ್ತಾ ಇರುವುದು ಹಳ್ಳಿಗಳಲ್ಲಿ ಸಾಮಾನ್ಯ ದೃಶ್ಯ.  ಅದೇ ಕಟ್ಟೆಯಲ್ಲಿ ಸೀರೆ ಸುತ್ತಿದ, ಬಳೆಗಳ ರಾಶಿಯನ್ನೇ ಹೊತ್ತ ಬೇವಿನ ಮರ, ಅರಳಿ ಮರದ ಪಕ್ಕದಲ್ಲೇ ತಂಪು ನೆರಳನ್ನು ನೀಡುತ್ತಿರುತ್ತದೆ. ಅವುಗಳ ನಡುವೆ ತಳಿಕೆ ಹಾಕಿಕೊಂಡ ಜೋಡಿ ಸರ್ಪಗಳ ಪ್ರತಿಮೆಗಳೂ ಕೆಲವು ಇರುತ್ತವೆ. ಮಕ್ಕಳಾಗದ ಹಲವು ಮಹಿಳೆಯರು ಹರಕೆ ಹೊತ್ತು ಅರಳಿಕಟ್ಟೆಯ ಎರಡೂ ಮರಗಳ ಸುತ್ತ ಪ್ರದಕ್ಷಿಣೆ ಹಾಕುವುದು ಸಾಮಾನ್ಯ.

ಬೇವಿನ‌  ಮರಕ್ಕೆ ಸೀರೆ ಉಡಿಸುವ, ಬಳೆಗಳನ್ನು ಹಾಕುವ ಪೂಜೆ ಪುನಸ್ಕಾರಗಳೂ ನಡೆಯುತ್ತಿರುತ್ತವೆ. ನಾಗ ಪ್ರತಿಮೆಗಳು ಅಲ್ಲಿ ಸ್ಥಾಪಿಸಲ್ಪಟ್ಟಿರುವುದೂ ಇದಕ್ಕೆ ಪೂರಕವಾಗಿಯೇ ! ಆದರೆ ಈ ಅರಳಿಕಟ್ಟೆ ಎಂದರೆ ಅದು ಇರುವ ಊರುಗಳಲ್ಲಿ ಒಂದು ಬೆಂಕಿ ಪೊಟ್ಟಣ ಬರುವ ಮೊದಲಿನ ಬೆಂಕಿ ಉತ್ಪಾದಿಸುವ ಸಾಧನವಾಗಿ ಬಳಕೆಗೆ ಬಂತು ಎಂದರೆ ನಂಬಲು ಕಷ್ಟವಲ್ಲವೇ ?  ಈ ಬೆಂಕಿ ಉತ್ಪಾದಿಸುವ ವಿಧಾನವೇ ಮಕ್ಕಳನ್ನು ಪಡೆಯುವ ಹರಕೆ ಹೊರಲು ಕಾರಣವಾಗಿದೆ ಎಂದರೆ !

70,000 – 30,000 ವರ್ಷಗಳ ಹಿಂದೆ ಮಾನವರು ಬೆಂಕಿಯ ಬಗೆಗಿನ‌ ಅರಿವನ್ನು ಪಡೆದುಕೊಂಡ ಸಮಯದ ಸಂಗತಿಗಳವು. ಆಹಾರ ಬೇಯಿಸಲು, ಚಳಿಯಿಂದ ರಕ್ಷಿಸಿಕೊಳ್ಳಲು, ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಬೆಂಕಿಯನ್ನು ಹೊತ್ತಿಸುವ, ನಿಯಂತ್ರಿಸುವ ಕೌಶಲ್ಯ ಗಳಿಸುವುದು ಬಹಳ ತುರ್ತಿನದು. ಅದಕ್ಕೆ ಈ ಆದಿಮಾನವರು ವಿವಿಧ ವಿಧಾನಗಳನ್ನು ಪ್ರಕೃತಿಯನ್ನು ವೀಕ್ಷಿಸಿ, ಸ್ವತಃ ಪ್ರಯೋಗಗಳನ್ನು ಮಾಡಿ ಕಲಿತರು. ಬೆಣಚು ಕಲ್ಲುಗಳನ್ನು ಒಂದರೊಡನೆ ಮತ್ತೊಂದನ್ನು ಘರ್ಷಿಸಿದಾಗ ಬೆಂಕಿಯ ಕಿಡಿಗಳು ಸಿಡಿಯುವುದು, ಮರ ಮರ ಮಥನಿಸಿ ಕಾಡುಕಿಚ್ಚು ಹೊತ್ತಿಕೊಳ್ಳುವುದು ಮೊದಲಾದವನ್ನು ಗಮನಿಸಿದರು.

ಬೆಣಚು ಕಲ್ಲು ಲಭ್ಯವಿಲ್ಲದ ಪ್ರದೇಶಗಳಲ್ಲಿ ಎರಡು ಮರದ ತುಂಡುಗಳನ್ನು ಪರಸ್ಪರ ಉಜ್ಜಿ ಬೆಂಕಿ ಪಡೆಯುವುದು ಸಾಮಾನ್ಯ ವಿಧಾನ ವಾಯಿತು. ಹೀಗೆ ಮರಗಳನ್ನು ಉಜ್ಜಿ ಬೆಂಕಿ ಪಡೆಯುವಾಗ ಕೆಲವು ಮರಗಳು ಗಟ್ಟಿ ಕಾಂಡವನ್ನು, ಮತ್ತೆ ಕೆಲವು ಮೃದು ಕಾಂಡವನ್ನು ಹೊಂದಿರುವುದನ್ನು ಗಮನಿಸಿದರು. ಗಟ್ಟಿ ಮರದ ತುಂಡುಗಳನ್ನು ಕೋಲಿನಂತೆ ಲಂಬವಾಗಿ ಹಿಡಿದು ಮೃದು ಮರದ ಹಲಗೆಯ ಮೇಲೆ ಒತ್ತಿ ಕಡೆದರೆ ಹೊಗೆ ಬಂದು ಬೆಂಕಿಯ ಕಿಡಿಗಳು ಏಳುವುದು ಕಡಿಮೆ ಶ್ರಮದಾಯಕ ಎಂಬುದು ಅವರ ಅನುಭವಕ್ಕೆ ಬಂದಿತು.

ಇದು ನೆನಪಿಟ್ಟುಕೊಳ್ಳಲು ಸುಲಭವಾಗುವಂತೆ  ರೂಪಕಗಳ ಮೂಲಕ ಪ್ರಕೃತಿಯ ಕ್ರಿಯೆಗಳನ್ನು ಅರ್ಥೈಸಿಕೊಳ್ಳುವ ಆದಿಮಾನವರ ಕಣ್ಣಿಗೆ ಇವು  ಸ್ತ್ರೀ ಪುರುಷರ ಲೈಂಗಿಕ ಅವಯವಗಳಂತೆ ಮತ್ತು ಮರ ಮರಗಳ ಮಥನ ಮೈಥುನದಂತೆ ಕಂಡಿತು. ಲಂಬವಾದ ಕಡೆಗೊಲಿನಂತೆ ಬಳಸುವ ಮರಗಳನ್ನು ಗಂಡು ಮರಗಳೆಂದು ಕೆಳಗಿನ ಮರದ ಹಲಗೆಯನ್ನು ಹೆಣ್ಣು ಮರವೆಂದು ಗುರುತಿಸಲಾರಂಭಿಸಿದರು.

ಹೀಗೆ ಅರಳಿ ಗಂಡು ಮರ, ಬೇವು ಹೆಣ್ಣು ಮರವಾಯಿತು. ಬೆಂಕಿಯನ್ನು ಪಡೆಯುವ ಸುಲಭದ ಸಾಧನವಾಗಿ ಈ ಮರಗಳನ್ನು ಊರ ಬಳಿ ಜೋಡಿಯಾಗಿ ಬೆಳೆಸಲಾರಂಭಿಸಿದರು. ಅವುಗಳನ್ನು ಗಂಡ ಹೆಂಡತಿ ಎಂದು ಭಾವಿಸಿದರು.

ಅಂದು ಬಹಳವಾಗಿದ್ದ ಮಕ್ಕಳಾಗದ ಸಮಸ್ಯೆಗಳು , ಎಳೆ  ಮಕ್ಕಳ ಸಾವುಗಳು ಮಕ್ಕಳಿಗಾಗಿ ಹಂಬಲಿಸುವಂತೆ ಮಾಡಿದವು. ಮಕ್ಕಳಾಗುವುದು ಹೇಗೆ, ಕೆಲವು ಬಾರಿ ಮಕ್ಕಳೇಕೆ ಆಗುವುದಿಲ್ಲ ಎಂಬ ಬಗ್ಗೆ ಹಲವು ಹತ್ತು ಸಾವಿರ ವರ್ಷ ಮಾನವರಿಗೆ ಅರಿವಿರಲಿಲ್ಲ. ತೀರಾ ಇತ್ತೀಚೆಗೆ ಜೀವ ವಿಜ್ಞಾನದ ಬೆಳವಣಿಗೆಯ ನಂತರವಷ್ಟೇ ಈ ಬಗ್ಗೆ ಅರಿವು ಮೂಡಿದ್ದಲ್ಲವೇ ? ಅಂದಿನ ಮಾನವರ ಅರಿವಿನ ಈ ಮಿತಿ ಅವರು ಗಂಡ ಹೆಂಡತಿಯರೆಂದು ಭಾವಿಸಿದ, ಸರಿಯಾದ ವಿಧಾನದಿಂದ ಮಥಿಸಿದರೆ ಖಾತರಿಯಾಗಿ ಬೆಂಕಿಯನ್ನು ಉತ್ಪಾದಿಸುವ ಈ ಮರಗಳನ್ನು ಮಕ್ಕಳನ್ನು ಪಡೆಯಲು ಪೂಜಿಸುವಂತೆ ಪ್ರೇರೇಪಿಸಿತು.

ಮುಂದೆ ಹಲವು ಸಾವಿರ ವರ್ಷಗಳ ನಂತರ ಬೆಂಕಿಯನ್ನು ಪಡೆಯಲು ಬೆಂಕಿ ಪೊಟ್ಟಣವೂ ಸೇರಿದಂತೆ ಹಲವು ವಿಧಾನಗಳು ಬಳಕೆಗೆ ಬಂದ ನಂತರದಲ್ಲಿ ಈ ಮರಗಳನ್ನು ಜೋಡಿಯಾಗಿ ಬೆಳೆಸಿ ಕಟ್ಟೆ ಕಟ್ಟಿ ಸಂರಕ್ಷಿಸಿದ ನಿಜ ಉದ್ದೇಶವೇ ಮರೆಯಾಗಿ ಕೇವಲ ಮಕ್ಕಳನ್ನು ಪಡೆಯುವ ಪೂಜೆಯ ಸಾಧನವಾಗಿ, ಹಳ್ಳಿಗಳ ನ್ಯಾಯ ಪಂಚಾಯ್ತಿ ಮತ್ತಿತರ ಸಭೆಗಳ ಸ್ಥಾನವಾಗಿ, ಹರಟೆ ಕಟ್ಟೆಯಾಗಿ ಮಾತ್ರ ಬಳಕೆಯಲ್ಲಿವೆ. ತಳಿಕೆ ಹಾಕಿಕೊಂಡ‌ ಹಾವುಗಳೂ ಕೂಡಾ ಮಕ್ಕಳನ್ನು ಪಡೆಯುವ ಪೂಜೆಯ ಸಾಧನವಾಗಿ ಬಳಕೆಗೆ ಬಂದಿದ್ದುದರಿಂದ ಅವುಗಳ ಪ್ರತಿಮೆಗಳೂ ಈ ಕಟ್ಟೆಗಳಲ್ಲಿ ತಾವು ಪಡೆದುಕೊಂಡಿವೆ.

ಅರಿವಿನ ಸ್ಫೋಟಗಳು ಮಾನವರ ಇತಿಹಾಸದ ಬಹು ಮಹತ್ವದ ಹೆಜ್ಜೆಗಳು. ಈ ಅರಿವಿನ ನೆಗೆತದ ಮರೆಯಲ್ಲಿಯೇ ಮಾನವರಿಗೆ ಅಂದು ದಕ್ಕದ ಅರಿವಿನ ಮಹಾ ಸಾಗರಗಳೂ ಇತ್ತಲ್ಲ! ಇಂದೂ ಕೂಡಾ ಮನುಷ್ಯರಿಗೆ ಪ್ರಕೃತಿಯ ವಿಸ್ತಾರದ ಒಂದು ಸಣ್ಣ ಅಂಶವಷ್ಟೇ ತಿಳಿದಿರುವುದು ಎಂದ ಮೇಲೆ ಅಂದಿನ ಮಾನವರ ಅರಿವಿನ ಮಿತಿಗಳು, ಕೊರತೆಗಳು ನಮ್ಮ ಸಹಾನುಭೂತಿಯ ಅಧ್ಯಯನಕ್ಕೆ ಗುರಿಯಾಗಬೇಕು.

ಆದರೆ ಮುಖ್ಯ ವಿಷಯವೆಂದರೆ ಅಂದಿನ ಅರಿವಿನ ಮಿತಿಗಳು ಏಕೆ ವಿಜ್ಞಾನದ ಸ್ಫೋಟಗಳನ್ನು ದಿನ ದಿನವೂ ಕಾಣುತ್ತಿರುವ ಇಂದಿನ ಆಧುನಿಕ ಮಾನವರನ್ನು ಕೂಡಾ ಗಣನೀಯವಾಗಿ ವ್ಯಾಪಿಸಿವೆ, ಅವರ ಅರಿವಿನ ಮೇಲೆ ಮಿತಿಗಳನ್ನು ಹೇರುತ್ತಿವೆ ಎಂಬುದು.

ಬೆಂಕಿ ಹೊತ್ತಿಸುವುದು ಹಲವು ಸಂದರ್ಭದಲ್ಲಿ ಸಮಸ್ಯೆಯಾದ್ದರಿಂದ ಬೆಂಕಿಯನ್ನು ಸದಾ ಕಾಪಾಡಿಕೊಳ್ಳುವುದೇ  ಒಳ್ಳೆಯದು ಎಂದು ಭಾವಿಸಿದರು. ಒಬ್ಬ ಗೃಹಸ್ಥನೆಂದರೆ ಮನೆಯಲ್ಲಿ  ಯಾವಾಗಲೂ ಬೆಂಕಿ ಆರದೆ ಉರಿಯುತ್ತಿರಬೇಕು.‌ ಮದುವೆಯಾಗಿ ಹೊಸ ಮನೆ ಮಾಡಿದವರು ತಂದೆಯ ಮನೆಯಿಂದ ಬೆಂಕಿ ತಂದುಕೊಳ್ಳಬೇಕು. ಹೀಗೆ ತಲೆ ತಲಾಂತರದಿಂದ ಬೆಂಕಿ ಪಿತೃಗಳ ಮನೆಯಿಂದ ಪುತ್ರರ ಮನೆಗೆ ವರ್ಗಾವಣೆಯಾಗುತ್ತಾ ಹೋಗುವುದು ವಾಡಿಕೆಯಾಯಿತು. ಇಂತಹ ಸಂದರ್ಭದಲ್ಲಿ ಬೆಂಕಿ ಹೊತ್ತಿಸುವುದೇ ಒಂದು ವಿಶೇಷ ಕೌಶಲ್ಯವಾಗಿ ಅದನ್ನು ಬಲ್ಲವರು ಅಗ್ನಿಹೋತ್ರಿಗಳೆಂಬ ಪುರೋಹಿತ ವರ್ಗವಾದರು. ಇಂದೂ ಅರಳಿಮರ ಮತ್ತು ಬೇವಿನ ಮರದ ಅರಣಿಯಿಂದಲೇ ಬೆಂಕಿ ಹೊತ್ತಿಸಬೇಕೆಂಬ ನಂಬಿಕೆಯುಳ್ಳ ಹಲವು ಆರಾಧನಾ ಪದ್ಧತಿಗಳನ್ನು ನೋಡುತ್ತೇವೆ.

ಅರಿವು ನೀಡಿದ ಅಜ್ಜಿಯರೇ “ಅಮ್ಮ”೦ದಿರಾದರು.

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಊರೂರಿಗೆ ಹಲವಾರು “ಅಮ್ಮ” ಗಳ ಗುಡಿಗಳನ್ನು ನೋಡುತ್ತೇವೆ. ನಾವು ಈ “ಅಮ್ಮ” ನ ಒಕ್ಕಲು ಎಂದು ಹೇಳಿಕೊಳ್ಳುವ ಜನರು ಆ ಊರುಗಳಲ್ಲಿ, ನೆರೆಯ ಊರುಗಳಲ್ಲೂ ಇರುತ್ತಾರೆ. ಆ ಅಮ್ಮ ಅವರ ಮನೆ ದೇವರು. ಉತ್ತರ ಕರ್ನಾಟಕದಲ್ಲಿ ಈ ರೀತಿಯ ಪದ್ಧತಿ ಇದೆ : ಪ್ರತಿಯೊಂದು ಕುಟುಂಬಕ್ಕೂ ಒಂದು ಗಂಡು ದೇವರು, ಒಂದು ಹೆಣ್ಣು ದೇವರು ಮನೆ ದೇವರಾಗಿರುತ್ತಾರೆ. ಈ ರೀತಿ ಸಾವಿರಾರು “ಅಮ್ಮ”ಗಳಿದ್ದಾರೆ. ಕೆಲವು ಜಾನಪದ ಸಂಶೋಧಕರು ಈ “ಅಮ್ಮ” ಗಳ ಪಟ್ಟಿ ಮಾಡಲು ಪ್ರಯತ್ನಿಸಿ ಸೋತಿದ್ದಾರೆ. ಅಷ್ಟೊಂದು ಬಾಹುಳ್ಯ. ಅವುಗಳಲ್ಲಿ ಮಾರಮ್ಮ, ಎಲ್ಲಮ್ಮ‌ನಂತೆ ಬಹಳ ಜನರಿಂದ ಪೂಜಿಸಲ್ಪಟ್ಟ ಅಮ್ಮಗಳಿರುತ್ತಾರೆ.

“ಅಮ್ಮ”ನ ಒಕ್ಕಲಲ್ಲದವರೂ ಈ ದೇವತೆಗಳಿಗೆ ಬಹಳ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸಿಡುಬಿನಂತಹ ಬಹಳ ಅಪಾಯಕಾರಿ ಕಾಯಿಲೆಗಳು ಬಂದಾಗ ಅದು ಅಮ್ಮ ಎಂದೇ ಪರಿಗಣಿಸಿ ಅಮ್ಮನಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ. ಅಂತಹ ಅಪಾಯಕಾರಿಯಲ್ಲದ ಕಾಯಿಲೆಗಳು, ಮಳೆ ಮತ್ತಿತರ ಪ್ರಕೃತಿಯ ವಿಕೋಪಗಳು ಇಂತಹವುಗಳ ಬಗ್ಗೆಯೂ “ಅಮ್ಮ” ನಿಗೆ ವಿವಿಧ ರೀತಿಯಲ್ಲಿ ಪೂಜೆಗಳನ್ನು ಸಲ್ಲಿಸುತ್ತಾರೆ. ಅಮ್ಮಗಳ ಜಾತ್ರೆ, ಪೂಜೆಗಳ ಸಮಯದಲ್ಲಿ ಪ್ರಾಣಿ ಬಲಿ- ಕೋಣ, ಕುರಿ, ಆಡು, ಕೋಳಿ ಇತ್ಯಾದಿಗಳ ಬಲಿ ಕೆಲವು ದೇವತೆಗಳಿಗೆ ಸಾಮಾನ್ಯ.

ಇಂದು ಇಡೀ ವಿಶ್ವದಲ್ಲಿ ದಕ್ಷಿಣ ಭಾರತ “ಅಮ್ಮ” ದೇವತೆಗಳ ನೆಲೆವನೆಯಾಗಿದೆ. ಆದರೆ ಇತಿಹಾಸದಲ್ಲೊಮ್ಮೆ ಇಡೀ ವಿಶ್ವವನ್ನೇ “ಅಮ್ಮ” ದೇವತೆಗಳು ಆವರಿಸಿದ್ದ ಲಕ್ಷಣಗಳು ವಿಶ್ವದ ಹಲವು ಭಾಗಗಳಲ್ಲಿ ಕಾಣುತ್ತವೆ. ಹಲವು ಪ್ರದೇಶಗಳಲ್ಲಿ ಈಗ ಬೇರೆ ಗಂಡು ಏಕದೇವತಾ ಆರಾಧನೆಯ ಪದ್ಧತಿಯ ಅಡಿಪಾಯದಲ್ಲಿ ಈ “ಅಮ್ಮ‌”ಗಳು ಹುದುಗಿ ಹೋಗಿವೆ. ನಮ್ಮ ಭಾಗದ ಹರಪ್ಪಾ- ಮೊಹೆಂಜದಾರೋ ಸಿಂಧೂ ನದಿಯ ಸಂಸ್ಕೃತಿ, ಮೆಸಪಟೋಮಿಯಾ, ಈಜಿಪ್ಟ್, ಬಾಬಿಲೋನಿಯಾ ಮೊದಲಾದ ಹಲವು ಪ್ರಾಚೀನ ಸಂಸ್ಕೃತಿಗಳ ಪ್ರದೇಶದಲ್ಲಿನ ಉತ್ಖನನಗಳು ಆಯಾ ಪ್ರದೇಶಗಳಲ್ಲಿ ಹತ್ತಾರು ಸಾವಿರ ಹೆಣ್ಣು ಮೂರ್ತಿಗಳನ್ನು ಬೆಳಕಿಗೆ ತಂದಿವೆ.

ಈ ಹೆಣ್ಣು ಮೂರ್ತಿಗಳು ಆಯಾ ಪ್ರದೇಶದ “ಅಮ್ಮ” ಗಳ ಆರಾಧನೆಯ ಕುರುಹುಗಳಾಗಿವೆ. ಈ ಕೆಲವು ಪ್ರದೇಶಗಳಲ್ಲಿ ಕೆಲವು ದೇವತೆಗಳ ಆರಾಧನೆ ಉಳಿದುಬಂದಿದೆ. ಈ ” ಅಮ್ಮ” ಗಳ ಆರಾಧನೆ ಬಹು ಮಟ್ಟಿಗೆ 70,000-30,000 ವರ್ಷಗಳ ಹಿಂದಿನ ಮೊದಲ ಅರಿವಿನ ಸ್ಫೋಟದ ಸಮಯದಲ್ಲಿ ಆರಂಭವಾಗಿದೆ. ಆ ಸಮಯದಲ್ಲಿ ಹೆಣ್ಣು ಮೂರ್ತಿಗಳು ಬಹಳ ವಿಪುಲವಾಗಿ ದೊರಕುತ್ತವೆ . ನಂತರವೂ ಐದು ಸಾವಿರದಿಂದ ಮೂರು ಸಾವಿರ ವರ್ಷದ ಹಿಂದಿನವರೆಗೂ ಹಲವು ಪ್ರದೇಶಗಳಲ್ಲಿ ಇವುಗಳ ಪೂಜೆ ಮುಂದುವರೆದಂತೆ ಸಂಶೋಧನೆಗಳು ತಿಳಿಸಿವೆ.

ಈ “ಅಮ್ಮ ” ಗಳ ಪೂಜೆಯ ಪದ್ಧತಿಯ ಉಗಮ ಮೊದಲ ಅರಿವಿನ ಸ್ಫೋಟದೊಂದಿಗೆ ಜೋಡಿಸಿಕೊಂಡಿರುವುದು ವಿಶೇಷ. ಈ ಲೇಖನಮಾಲೆಯ ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಲಕ್ಷಾಂತರ ವರ್ಷಗಳ ಕಾಲ ಮಾನವರಿಗೆ ಅಪ್ಪಂದಿರಾರು ಎಂಬುದೇ ಗೊತ್ತಿರಲಿಲ್ಲ ಮಾತ್ರವಲ್ಲ ಮಕ್ಕಳ ಹುಟ್ಟಿಗೆ ಗಂಡು ಬೇಕೆಂದೇ ಗೊತ್ತಿರಲಿಲ್ಲ. ಯಾವಾಗಲೋ ಒಂದು ದಿನ ಗಂಡು ಹೆಣ್ಣು ತಮ್ಮ ಲೈಂಗಿಕ ತೃಪ್ತಿಗೆ ಕೂಡಿದ್ದಕ್ಕೂ  ಮತ್ತೆ ಹಲ ದಿನಗಳು ಕಳೆದ ನಂತರ ಯಾವಾಗಲೋ ಒಂದು ದಿನ ಹೆರಿಗೆಯಾಗಿ ಮಗು ಜನಿಸುವುದಕ್ಕೂ ಸಂಬಂಧವಿದೆ ಎಂಬುದು ಅವರ ಅರಿವಿಗೆ ದಕ್ಕಿರಲಿಲ್ಲ. ಆಗ ತಿಂಗಳು, ಋತುಗಳು, ವರ್ಷಗಳು ಎಂಬ ಕಾಲ ಗಣನೆ ಕೂಡಾ ಗೊತ್ತಿರಲಿಲ್ಲವಲ್ಲ. ಹೀಗಾಗಿ ಅಮ್ಮ ಮಾತ್ರವೇ ಮಕ್ಕಳ ಹುಟ್ಟಿಗೆ ಕಾರಣ.

ಅಮ್ಮನಲ್ಲಿ ಯಾವುದೋ ಒಂದು  ವಿಶೇಷ ಶಕ್ತಿ ಇದೆ. ಈ ಶಕ್ತಿಯ ಬಲದಿಂದ ಅಮ್ಮ ಮಕ್ಕಳ ಹುಟ್ಟಿಗೆ ಕಾರಣಳು. ಅವಳ ಬಸಿರು, ಲೈಂಗಿಕ ಅವಯವಗಳು, ಹಾಲೂಡಿ ಬೆಳೆಸುವ ಮೊಲೆಗಳಲ್ಲಿ ಈ ಶಕ್ತಿ ಅಡಗಿದೆ ಎಂದು ಆ ಆದಿ ಮಾನವರು ಭಾವಿಸಿದರು. ಅಂದಿನ ಮಾನವ ಸಂಬಂಧಗಳು ಅಮ್ಮ, ಆಕೆಯ ಮಕ್ಕಳು ಎಂಬ ಜಗತ್ತಿನ ಅತ್ಯಂತ ಸಮೀಪದ ಭಾಂಧವ್ಯದೊಂದಿಗೆ ತಳುಕಿ ಹಾಕಿಕೊಂಡಿತ್ತು. ಮಾನವ ಸಮುದಾಯದ ಬುಡಕಟ್ಟುಗಳ ಮೂಲ ಘಟಕವೆಂದರೆ ಅಮ್ಮ ಮತ್ತು ಆಕೆಯ ಮಕ್ಕಳು. ಆಕೆಯ ಹೆಣ್ಣು ಮಕ್ಕಳಿಗೆ ಹುಟ್ಟುವ ಮಕ್ಕಳು ಇದೇ ಘಟಕದಲ್ಲಿ ಮುಂದುವರೆಯುತ್ತಾರೆ. ಮೊದಲಿಗೆ ಈ ಘಟಕ ಬಹಳ ಸಣ್ಣದು. ಏಕೆಂದರೆ ಅಮ್ಮ ಜೀವಿಸುತ್ತಿದ್ದುದೇ ಬಹಳ ಅಲ್ಪ ಕಾಲ. ಸರಾಸರಿಯಾಗಿ 20 ವರ್ಷ. ಎಂದರೆ ಕೆಲವರು ಮಾತ್ರ 30-40 ವರ್ಷ ಕಾಣುತ್ತಿದ್ದರು.

ಮುಂದೆ ಮೊದಲ ಅರಿವಿನ ಸ್ಫೋಟದ ಪರಿಣಾಮವಾಗಿ ಮಾನವರ ಆಯುಸ್ಸು ದುಪ್ಪಟ್ಟಾದಾಗ ಮಾತ್ರ ಮಾನವರು ಮೊದಲ ಬಾರಿಗೆ ಅಜ್ಜಿ,ಅಜ್ಜಂದಿರನ್ನು (ಅಜ್ಜ ಎಂದರೆ ಆಗ ಅಪ್ಪ, ಅಮ್ಮನ ಅಪ್ಪ ಅಲ್ಲ. ಅಜ್ಜಿಯ ತಮ್ಮಂದಿರು, ಈಗಿನ ಸಂಬಂಧದ ಪದ ಬಳಕೆಯಂತೆ ಸೋದರ ಮಾವಂದಿರು)  ಕಂಡರು. ಆಗ ಈ ಮೂಲ ಘಟಕ  ಅಮ್ಮ, ಮಕ್ಕಳು, ಮೊಮ್ಮಕ್ಕಳು, ಅಪರೂಪಕ್ಕೆ ಮರಿಮಕ್ಕಳು ಎಂದು ಸ್ವಲ್ಪ ವಿಸ್ತಾರವಾಯಿತು.

ಹಿಂದಿನ ಲೇಖನಗಳಲ್ಲಿ ವಿವರಿಸಿದಂತೆ ಈ ಅಜ್ಜಿಯರು ಹಲವು ದಶಕಗಳ ಕಾಲ ತಾವು ವೀಕ್ಷಿಸಿ, ತುಲನೆ ಮಾಡಿದ ಆಧಾರದಲ್ಲಿ ಸಸ್ಯ, ಪ್ರಾಣಿಗಳ ಬಗೆಗಿನ ಅರಿವನ್ನು ಮೊಮ್ಮಕ್ಕಳ ತಲೆಮಾರಿಗೆ ನೀಡಿದರು. ಯಾವುದು ಆಹಾರ, ಯಾವುದು ಅಲ್ಲ, ಯಾವ ಕಾಯಿಲೆಗೆ ಯಾವ ಗಿಡದ ಮದ್ದು ಎಂದೆಲ್ಲಾ ತಿಳಿಸುವುದರ ಮೂಲಕ ಮಕ್ಕಳು, ಮೊಮ್ಮಕ್ಕಳನ್ನು ಕಾಪಾಡಿದರು. ಆದ್ದರಿಂದ ಈ ಗುಂಪುಗಳಿಗೆ ಅಜ್ಜಿಯರ ಮೇಲೆ ತಮ್ಮನ್ನು ಹಸಿವು, ರೋಗಗಳಿಂದ ಕಾಪಾಡಿದವರು ಎಂದು ಅಪಾರ ಗೌರವ, ಪ್ರೇಮ ಇರುವುದು ಸಹಜ.

ಈ ಗುಂಪುಗಳು, ಗುಂಪಿನ ಮೂಲವಾದ ಅಜ್ಜಿ ಅಥವಾ ಮುತ್ತಜ್ಜಿಯ ಹೆಸರಿನಿಂದ ಗುರುತಿಸಲ್ಪಟ್ಟವು. ಈ ಅಜ್ಜಿ, ಮುತ್ತಜ್ಜಿಯರು ಸತ್ತ ಮೇಲೂ ಆ ಗುಂಪುಗಳು ಅವರ ಹೆಸರಿನಲ್ಲೇ ಗುರುತಿಸಿಕೊಳ್ಳುವುದು ಮುಂದುವರೆಯಿತು. ಜೊತೆಗೆ ಅಳಿದ ಅಜ್ಜಿ ಯಾ ಮುತ್ತಜ್ಜಿಯರನ್ನು ನಿರ್ದಿಷ್ಟ ಸ್ಥಳದಲ್ಲಿ ಹುಗಿದು ಅವರಿಗೆ ಆಗಾಗ ಗೌರವ ಸಲ್ಲಿಸುವ ಪದ್ಧತಿ ಬೆಳೆಯಿತು. ಹೀಗೆ ಒಂದು ಮೂಲ ಘಟಕ ತಮ್ಮ ಅಜ್ಜಿ ಯಾ ಮುತ್ತಜ್ಜಿಯರ ಒಕ್ಕಲೆಂದು ಪರಿಗಣಿತವಾದರು. ತಮ್ಮ ಕುಲದ ಗುರುತಾದ ಅಜ್ಜಿಯರು ಆ ಕುಲ ದೇವತೆ ಎಂದು ಪೂಜಿಸಲ್ಪಟ್ಟರು. ತಮ್ಮನ್ನು ಕಾಪಾಡುವ ಈ “ಅಮ್ಮ” ದೇವತೆಗೆ, ಬೇಟೆಯೇ ಪ್ರಧಾನವಾದ ಆಹಾರವಾಗಿದ್ದ ಕಾಲದ “ಅಮ್ಮ”ನಿಗೆ ಇಷ್ಟವಾದ ಬೇಟೆಯನ್ನು ಆಹಾರವಾಗಿ ಸಮರ್ಪಿಸಿ, ಅವಳ ನೆನಪಿನಲ್ಲಿ ತಾವೂ ತಿಂದು ಸಂತಸಪಟ್ಟರು. “ಅಮ್ಮ” ಪೂಜೆ ಮತ್ತು ಜಾತ್ರೆಗಳು ಹೀಗೆ ಆರಂಭವಾದವು.

“ಅಮ್ಮ” ಗಳ ಈ ಉಗಮವೂ ಕೂಡಾ ಮಕ್ಕಳ ಹುಟ್ಟಿನ ಪ್ರಕ್ರಿಯೆಯ ಬಗೆಗಿನ ಅರಿವಿನ ಕೊರತೆಯಿಂದ  ತಾಯೊಬ್ಬಳೇ ಮಕ್ಕಳ ಹುಟ್ಟಿಗೆ ಕಾರಣ ಎಂಬ ಕಲ್ಪನೆಯಿಂದ ಮೂಡಿ ಬಂದದ್ದು ಎಂಬುದನ್ನು ತಿಳಿಸುತ್ತದೆ. ಮುಂದೆ ಮಕ್ಕಳ ಹುಟ್ಟಿಗೆ ಅಪ್ಪನ ಅವಶ್ಯಕತೆಯ ಅರಿವು ಮೂಡುವುದರ ಜೊತೆಗೆ  ಪುರುಷಾಧಿಪತ್ಯ ಆರಂಭವಾದಾಗ ಜಗತ್ತಿನ ಹಲವು ಪ್ರದೇಶಗಳಲ್ಲಿ “ಅಮ್ಮ” ದೇವತೆಗಳ ಪೂಜೆಯ ಅಳಿವನ್ನು ಕಾಣುತ್ತೇವೆ. ಆದರೆ ದಕ್ಷಿಣ ಭಾರತದಲ್ಲಿ ಹಲವು “ಅಮ್ಮ”ಗಳ ಪೂಜೆ, ಉತ್ತರ ಭಾರತದಲ್ಲಿ ಕೆಲವೇ ಹೆಣ್ಣು ದೇವತೆಗಳ ಪೂಜೆ ಉಳಿದುಕೊಂಡು ಬಂದಿರುವುದರ ಹಿನ್ನೆಲೆಯನ್ನು ಸಂಶೋಧನೆಗೆ ಒಳಪಡಿಸಬೇಕು.

ಹೀಗೆ ಮನುಷ್ಯರ ಅರಿವಿನ ಸ್ಫೋಟಗಳು ಅವರ ಬೆಳವಣಿಗೆಯ ಮಜಲುಗಳಾಗಿರುವಂತೆ ,ಆ ಅರಿವಿನ ಮಿತಿ,ಕೊರತೆಗಳು ಹಲವು ಕಲ್ಪನೆ, ನಂಬಿಕೆಗಳ ಹುಟ್ಟಿಗೆ ಕಾರಣವಾಗಿವೆ.

ಮುಂದಿನ ಸಂಚಿಕೆಯಲ್ಲಿ ಗಾಳಿ, ಮಳೆ  ಪ್ರಾಣಿ, ಸಸ್ಯ, ಮರ ದೇವರುಗಳು ಮತ್ತು ಮಾನವರ ಅರಿವು

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: