ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋ, ಅರಿಸ್ಟಾಟಲ್‌ ತೀರ್ಮಾನ ಸುಳ್ಳಾಗಿದ್ದು.

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

18

ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ಪೇನುಗಳಲ್ಲಿ ಅಮ್ಮ ದೇವತೆಗಳ ಮೆರೆದಾಟ.
ವಿಕ್ಟೋರಿಯಾ , ಈ ಹೆಸರು ಭಾರತದ ಇತಿಹಾಸದಲ್ಲಿ ಸೇರಿ ಹೋಗಿರುವ ಬ್ರಿಟಿಷ್ ಹೆಸರು. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕಸ್ತೂರ್‌ಬಾ ರಸ್ತೆಯ ಅಂಚಿನಲ್ಲಿರುವ ಈ ಹೆಸರಿನ ಪ್ರತಿಮೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಸ್ವಾತಂತ್ರ್ಯದ ಹೆಗ್ಗುರುತಾಗಿ ಅದರ ಎದುರು ಸ್ಥಾಪಿಸಲಾದ ಬಹು ಪ್ರಸಿದ್ಧ ಗಾಂಧೀಜಿ ಪ್ರತಿಮೆಯ ಮುಂದೆ ಈಗ ಅದು ಬಹಳ ಮಂಕಾಗಿದೆ.

ಬಹಳ ಆಶ್ಚರ್ಯಕರ ಕಾಕತಾಳಿಯ ಸಂಗತಿ ಎಂದರೆ ವಿಕ್ಟೋರಿಯಾ ಎಂಬ ಹೆಸರು ಬ್ರಿಟಿಷ್ ಇತಿಹಾಸದಲ್ಲಿ ಪ್ರಾಚೀನ ಬ್ರಿಟಿಷರ ಸ್ವಾತಂತ್ರ್ಯ ಪ್ರೇಮ ಮತ್ತು ಹೋರಾಟದ ಸಂಕೇತ. ಕ್ರಿಸ್ತಯುಗದ ಆದಿಯಲ್ಲಿ ರೋಮನ್ ಚಕ್ತವರ್ತಿ ನೀರೋನ ಸೈನ್ಯ ಬ್ರಿಟನ್ನಿನ ಮೇಲೆ ಆಕ್ರಮಣ ನಡೆಸಿದಾಗ  ಎದುರಿಸಿದ ಸಮಯದಲ್ಲಿ ಅಲ್ಲಿನ ಸೆಲ್ಟಿಕ್ ಬಹು ದೇವತಾರಾಧನೆಯ ಬುಡಕಟ್ಟುಗಳು ಬೌಡಿಕಾ ಎಂಬ ಧೀರೆಯ ನಾಯಕತ್ವದಲ್ಲಿ, ವಿಕ್ಟೋರಿಯಾ ಎಂಬ ಯುದ್ಧ ದೇವತೆಯ ಹೆಸರಿನಲ್ಲಿ ಧೀರ ಪ್ರತಿಭಟನೆ ತೋರಿದರು. ರೋಮನ್ನರ ನೆಲೆಗಳನ್ನು, ಅದರಲ್ಲೊಂದಾದ ಲಂಡನ್ನನ್ನು ನಾಶ ಪಡಿಸಿದರು.

ವಿಕ್ಟೋರಿಯಾ ದೇವತೆಯ ಪ್ರಾಚೀನ ಹೆಸರು ಅಂಡ್ರಾಸ್ಟೆ. ಸೆಲ್ಟಿಕ್ ಬುಡಕಟ್ಟುಗಳ ಸಮುದಾಯ ರಕ್ಷಕ ದೇವತೆ. ಯುದ್ಧ ಧೀರೆ. ನೈಕ್, ಬೆಲ್ಲೋನಾ, ಸಿಬಿಲೆ, ವ್ಯಾಕ್ಯುನಾ, ಮ್ಯಾಗ್ನಾ ಮೇಟರ್ (ಮಹಾ ಮಾತೆ ) ಮೊದಲಾದವರಂತೆ ವಿಕ್ಟೋರಿಯಾ ( ಅಂಡ್ರಾಸ್ಟೆ ) ಕೂಡಾ ರಥಾರೂಢಳಾಗಿ ಚಿತ್ರಿತಳಾಗಿದ್ದಾಳೆ. ಈ ದೇವತೆಗಳು ನಮ್ಮ ದುರ್ಗೆ, ಕಾಳಿಯರ ಪ್ರತಿರೂಪದಂತೆ.  ಈಗ ಲಭ್ಯವಾಗಿರುವ ಪಟ್ಟಿಯಂತೆ ಸೆಲ್ಟಿಕ್ ಸಮುದಾಯಗಳು 200 ದೇವತೆಗಳನ್ನು ಪೂಜಿಸುತ್ತಿದ್ದರಂತೆ ! ಮತ್ತೂ ವಿಶೇಷವೆಂದರೆ ಸೆಲ್ಟಿಕ್ ಬುಡಕಟ್ಟುಗಳಲ್ಲಿ ಹಲವು ತಮಗೆ ಒಬ್ಬ ತಂದೆ ದೇವತೆ ಮತ್ತು ಒಬ್ಬಳು ತಾಯಿ ದೇವತೆ ಇದ್ದಾರೆಂದು ನಂಬಿದ್ದರು.

ಕರ್ನಾಟಕದಲ್ಲಿ ಸರಿಸುಮಾರು ಎಲ್ಲ ಬ್ರಾಹ್ಮಣೇತರ ಜಾತಿಗಳಲ್ಲಿ ಹಾಗೂ ಹಲವು ಬ್ರಾಹ್ಮಣ ಉಪಜಾತಿಗಳಲ್ಲಿಯೂ ಒಬ್ಬ ಗಂಡು ಮನೆ ದೇವರು, ಮತ್ತೊಬ್ಬ ಹೆಣ್ಣು ಮನೆ ದೇವರನ್ನು ಹೊಂದಿರುವುದನ್ನು ನೋಡಬಹುದು. ಕೆಲವು ಜಾತಿಗಳಲ್ಲಿ ಮದುವೆ ಮಾತುಕತೆ ಸಂದರ್ಭದಲ್ಲಿ ನಿಮ್ಮ ಗಂಡು ಮನೆ ದೇವರ್ಯಾವುದು, ಹೆಣ್ಣು ಮನೆ ದೇವರ‌್ಯಾವುದು ಎಂದು ಕೇಳುವುದು, ಒಂದು ದೇವರು ಹೊಂದಿಕೊಂಡರೂ ಇನ್ನೊಂದು ಹೊಂದುವುದಿಲ್ಲ ಎಂದು ಮದುವೆ ಸಂಬಂಧ ಕೂಡಿಬರದಿರುವ ಪದ್ಧತಿ ಇದೆ. ಹಲವು ಜಾತಿಗಳಲ್ಲಿ ಹೆಣ್ಣು ಮನೆ ದೇವರ‌್ಯಾವುದು ಎಂಬುದನ್ನು ಮರೆತೇ ಬಿಟ್ಟಿದ್ದಾರೆ.

ಸೆಲ್ಟಿಕ್ ಜನರ ತಾಯಿ ದೇವತೆ ಮ್ಯಾಟ್ರೋನಾ ಭೂದೇವತೆ,ಮಕ್ಕಳನ್ನು ನೀಡುವ ದೇವತೆಯಾಗಿದ್ದಳು. ಇದೇ ತಾಯಿ ದೇವತೆ ಬುಡಕಟ್ಟಿನ ಭೂಮಿ ಮತ್ತು ಜನರ ರಕ್ಷಣೆಯ ದೇವತೆಯ ರೂಪವನ್ನೂ ತಳೆಯುತ್ತಿದ್ದರು. ಅಂಡ್ರಾಸ್ಟೆ ಅಂತಹದೊಂದು ರೂಪ. ಇವರ ಇತರ ತಾಯಿ ದೇವತೆಗಳಲ್ಲಿ ನೀರಿನ ಚಿಲುಮೆಯ ದೇವತೆಗಳಾದ ಸಿರೋನಾ, ಬೋರ್ವೊ , ಕುದುರೆಯ ರೂಪದ ಎಪೋನಾ ಅವರನ್ನು ರೋಗಗಳಿಂದ ರಕ್ಷಿಸುವ ಹಲವು ದೇವತೆಗಳೂ ,ಕಾಡಿನ ದೇವತೆಗಳೂ ಸೇರಿದ್ದಾರೆ. ಭಾರತದ ಅಮ್ಮ ದೇವತೆಗಳಂತೆಯೇ. ಈ ತಾಯಿ ದೇವತೆಗಳಿಗೆ ಮಕ್ಕಳೆಂದು ಪರಿಗಣಿತರಾದ ಮಹಿಳಾ ಪೂಜಾರಿಣಿಯರೂ ಇದ್ದರೆಂದು ಅವರಿಗೆ ಬಾಂದ್ರುಯಿ, ಬೋಧಮಾಲ್, ತ್ಸಿಚ್ಛಾಗ ಎಂದೆಲ್ಲಾ ಕರೆಯಲ್ಪಡುತ್ತಿದ್ದರಂತೆ.

ಇವರ ದೇವತೆಗಳಲ್ಲೊಬ್ಬ ಸಾರಂಗದ ಕೊಂಬುಗಳುಳ್ಳ ಸೆರ್ನುನ್ನೋಸ್. ಹೋರಿಗಳು, ನಾಯಿಗಳು, ಹಲವು ಜಿಂಕೆ ಪ್ರಬೇಧಗಳ ಜೊತೆ ಇರುವ ವಿಗ್ರಹದ ರೂಪದಲ್ಲಿ ಪೂಜಿತನಾಗಿದ್ದಾನೆ.‌

ಸೆಲ್ಟಿಕ್ ಬುಡಕಟ್ಟುಗಳ ಆಚರಣೆಗಳ ಮುಖ್ಯಸ್ಥರಿಗೆ ದ್ರುಯಿಡರೆಂದು ಕರೆಯುತ್ತಿದ್ದರು. ಅವರು ಸೆಲ್ಟಿಕ್ ಜನರಿಗೆ ಪೂಜಾ ಆಚರಣೆಗಳು, ಕಾರಣಿಕಗಳನ್ನು ಹೇಳುವ ಮಾಂತ್ರಿಕರು, ರೋಗಗಳನ್ನು ಗುಣ ಮಾಡುವವರು, ಜನರಿಗೆ ಸಲಹೆ‌ ನೀಡುವವರು, ಈ ಜನರ ತತ್ವಜ್ಞಾನಿಗಳೂ ಆಗಿದ್ದರು. ಇವರನ್ನು ಬಹಳ ಗೌರವದಿಂದ ಕಾಣಲಾಗುತ್ತಿತ್ತು. ಎರಡು ಬುಡಕಟ್ಟುಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಇವರುಗಳು ಬಂದರೆಂದರೆ ಎರಡೂ ಬಣಗಳೂ ಇವರು ಮುಂದೆ ಸಾಗುವವರೆಗೆ ಯುದ್ಧವನ್ನು ನಿಲ್ಲಿಸುತ್ತಿದ್ದರಂತೆ.

ಮಹಿಳಾ ದ್ರುಯಿಡರು ಮತ್ತು ದ್ರುಯಿಡರು ಭಾರತದ ಬುಡಕಟ್ಟುಗಳು, ಕುಲಗಳಲ್ಲಿ ಕಾಣುವ ದೇವರಗುಡ್ಡ, ಬುದ್ವಂತ, ತಮ್ಮಡಿಗಳ ಬೆಳವಣಿಗೆಯಂತೆ ಕಾಣುತ್ತಾರೆ.

ಹೀಗೆ ನೂರಾರು ಸ್ತ್ರೀ, ಪುರುಷ ದೇವತೆಗಳನ್ನು ಪೂಜಿಸುವ, ಸ್ತ್ರೀ, ಪುರುಷ ಪೂಜಾರಿಗಳು/ ಪುರೋಹಿತರನ್ನು ಹೊಂದಿರುವ ಈ ಸಮುದಾಯ ಭಾರತದ ಜನ ಸಮುದಾಯಗಳ ಜೊತೆ ಸಮೀಕರಣ ಮಾಡಬಹುದೆಂಬಂತೆ ಕಾಣುತ್ತದೆ.

ಸೆಲ್ಟಿಕ್ ಜನರು ಯುರೋಪಿನಲ್ಲಿ ಇಂಡೋ ಯುರೋಪಿಯನ್ ಭಾಷೆಗಳಿಗಿಂತ ಮೊದಲು ಮಾತನಾಡಲಾಗುತ್ತಿದ್ದ ಸೆಲ್ಟಿಕ್ ಭಾಷೆಯನ್ನಾಡುವವರು ಎಂದು ಗುರುತಿಸಲಾಗಿದೆ. ಸೆಲ್ಟಿಕ್ ಸಮುದಾಯದ ಗುರುತುಗಳು ಬ್ರಿಟನ್ ಮತ್ತದರ ಸ್ಕಾಟ್ಲೆಂಡ್, ವೆಲ್ಶ್ ಮತ್ತು ನೆರೆಯ ಐರ್ಲೆಂಡ್‌ಗಳಲ್ಲಿ ಹೆಚ್ಚು ವ್ಯಾಪಕವಾಗಿವೆ. ಸೆಲ್ಟಿಕ್ ಭಾಷೆಗಳು ಈ ಪ್ರದೇಶಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಆದರೆ ಇವರು ಯುರೋಪಿನ ಯಾವುದೇ ಒಂದು ದೇಶಕ್ಕೆ ಮಾತ್ರ ಸೀಮಿತರಾದವರಲ್ಲ. ಗ್ರೀಸ್ ಮತ್ತು ಇಟಲಿಯನ್ನು ಹೊರತುಪಡಿಸಿ ಯುರೋಪಿನ ಮಧ್ಯದ, ಪಶ್ಚಿಮದ ಉತ್ತರದ ಭಾಗಗಳನ್ನು ಆವರಿಸಿದ್ದ ಜನ ಸಮುದಾಯ. ಸ್ಪೇನ್, ಪೋರ್ಚುಗಲ್, ಫ್ರಾನ್ಸ್,ಬ್ರಿಟನ್, ಆಲ್ಪ್ಸ್ ಪರ್ವತ ಶ್ರೇಣಿಗಳ ಮೇಲೆ, ಅದರ ತಪ್ಪಲುಗಳ ಪ್ರದೇಶಗಳ ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್‌‌ ಹಂಗರಿ,ಜೆಕ್,ಸ್ಲೋವಾಕ್‌‌ ಮೊದಲಾದ ದೇಶಗಳಲ್ಲಿ ವ್ಯಾಪಿಸಿದ್ದವರು.ಈ ಪ್ರದೇಶಗಳ ಮೇಲೆ ರೋಮನ್ ಆಕ್ರಮಣವನ್ನು ಹಲವು ಕಾಲ ಎದುರಿಸಿ ನಿಂತವರು.

ಈ ದೇಶಗಳಲ್ಲಿ ಇಂದಿಗೂ ಸೆಲ್ಟಿಕ್ ಭಾಷೆ, ನಂಬಿಕೆ,ಆಚರಣೆಗಳ ಪ್ರಭಾವ ನಿಚ್ಚಳಾಗಿದೆ. ಅಮ್ಮ ದೇವತೆಗಳ ಆರಾಧನೆ  ಈ ಎಲ್ಲ ಪ್ರದೇಶಗಳಲ್ಲಿ ಕಾಣುತ್ತದೆ. ಈ ಸಮುದಾಯಗಳ ಜಾನಪದ ಕತೆಗಳು, ಕಾವ್ಯಗಳಲ್ಲಿ ಅಮ್ಮ ಕೇಂದ್ರಿತ ಸಮಾಜದ ಗುರುತುಗಳು ಢಾಳಾಗಿವೆ. ಕ್ರಿಶ್ಚಿಯನ್ ಧರ್ಮ ಹಬ್ಬಿದ ನಂತರ ಸೆಲ್ಟಿಕ್ ದೇವತಾಚರಣೆ, ಸಾಮಾಜಿಕ ಪದ್ಧತಿಗಳನ್ನು ಪಾಗನ್ ಎಂದು ಬಹಿಷ್ಕರಿಸುವುದು, ಚರ್ಚ್ ಪಾದ್ರಿಗಳು ಅವುಗಳನ್ನು ಅನುಸರಿಸುವರನ್ನು ಶಿಕ್ಷಿಸುವುದು, ಜನರಿಗೆ ಕಾರಣಿಕ ನುಡಿಗಳನ್ನು ಹೇಳುತ್ತಿದ್ದ ಪೂಜಾರಿಣಿ,ಮಹಿಳಾ ಮಾಂತ್ರಿಕರನ್ನು ಬಹಿರಂಗವಾಗಿ ಬೆಂಕಿಯಲ್ಲಿ ಸುಡುವುದು ಮೊದಲಾದ ಕ್ರಮಗಳಿಂದ ಈ ಕಥಾನಕಗಳು, ಆಚರಣೆಗಳು ಮರೆಗೆ ಸರಿಸಲ್ಪಟ್ಟವು. ಆದರೂ ರಹಸ್ಯ ಪಂಥಗಳಾಗಿ ಉಳಿದಿವೆ. ಕ್ರಿಶ್ಚಿಯನ್ ಧರ್ಮ ಪ್ರಭುಗಳೂ ತಮ್ಮ ಆಚರಣೆಗಳಲ್ಲಿ ಕೆಲವು ಸೆಲ್ಟಿಕ್ ಆಚರಣೆಗಳನ್ನು ಸೇರಿಸಿಕೊಳ್ಳಲೇ ಬೇಕಾದ ಒತ್ತಡಕ್ಕೆ ಒಳಗಾದರು.
ಬ್ರಿಟನ್ನಿನಲ್ಲಿ ಎವೆಬುರಿ ಧಾರ್ಮಿಕ ಸಂಸ್ಕೃತಿಯಲ್ಲಿ ಕೂಡಾ ಅಮ್ಮ ಕೇಂದ್ರಿತ ಸಾಮಾಜಿಕ ಪದ್ಧತಿಯ ಮೂಲವನ್ನು ಅಧ್ಯಯನ ಮಾಡಲಾಗಿದೆ. ಸಿಲ್ಬರಿ ಬೆಟ್ಟಗಳ ಮೇಲೆ ಬಹಳ ಶ್ರಮ ಹಾಕಿ ನಿರ್ಮಿಸಲಾದ  ದೊಡ್ಡ ಕಲ್ಲು ಕಂಬಗಳಿಂದ ರಚಿಸಲಾದ ಪುರಾತನ ವೃತ್ತಗಳು ( stone henge’s ) ಹಲವು ಕಾಲದಿಂದ ಮಾನವ ಶಾಸ್ತ್ರಜ್ಞರು ಮತ್ತು ಇತಿಹಾಸಕಾರರ ಕುತೂಹಲವನ್ನು ಕೆರಳಿಸಿದ್ದವು. ಮಾನವ ಶಾಸ್ತ್ರಜ್ಞರು ಈ ವೃತ್ತಗಳು ಅಮ್ಮ ದೇವತೆಗಳ ಆರಾಧನೆಗಾಗಿ ನಿರ್ಮಿಸಲಾದವು ಎಂದು ಆಧಾರಪೂರ್ವಕವಾಗಿ ವಿವರಿಸಿದ್ದಾರೆ. ಇಲ್ಲಿನ ಕೆಲವು ಪ್ರದೇಶಗಳಲ್ಲಿ ಹಿರಿಯರ ಸಮಾಧಿಗಳು ಅವರ ಪೂರ್ವಿಕ ಅಮ್ಮಗಳ ಆರಾಧನೆಯ ಸ್ಥಳಗಳೂ ಆಗಿವೆ.

ಸೆಲ್ಟಿಕ್ ಮೂಲದ , ಪ್ರಸಿದ್ಧ ಆಲ್ಪ್ಸ್ ಪರ್ವತ ಶ್ರೇಣಿಗಳಿಗೆ ಸೇರಿದ ಡೋಲೊಮೈಟ್ಸ್ ಬೆಟ್ಟ ಸಾಲಿನ ಮೇಲೆ ಜೀವಿಸುತ್ತಿದ್ದ ರೇಷಿಯನ್,ಲಾಡಿನ್ ಸಮುದಾಯಗಳ ಜಾನಪದ ಕಥಾನಕಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದವರು ಅವುಗಳಲ್ಲಿ ಅಮ್ಮ ದೇವತೆಗಳು, ಅಮ್ಮ ಕೇಂದ್ರಿತ ಸಾಮಾಜಿಕ ಸಂಬಂಧಗಳು ಪ್ರಧಾನವಾಗಿದ್ದುದನ್ನು ಗುರುತಿಸಿದ್ದಾರೆ. ಅವುಗಳಲ್ಲಿಯೂ ಫೇನ್ ಜಾನಪದ ಕಥಾ ಚಕ್ರದಲ್ಲಿ ಫೇನ್ ನಾಯಕಿಯರ ಸಾಹಸಗಳು ಅಂದು ಅಸ್ತಿತ್ವದಲ್ಲಿದ್ದ ಅಮ್ಮ ಕೇಂದ್ರಿತ ಸಮಾಜದ ರೂಪಗಳನ್ನು ವಿವರಿಸಲು‌ ಸಹಾಯಕವಾಗಿದೆ. ರೇಷಿಯನ್ನರ ರೇಟೋರೋಮನ್ ಮಾರ್ಗರೆಟಾ ಎಂಬ ದೇವತೆಯ ಬಗೆಗಿನ ಹಾಡುಗಳಲ್ಲಿಯೂ ಅಮ್ಮ ದೇವತೆಯ ಆರಾಧನೆಯ ಮೂಲವನ್ನು ಕಾಣಬಹುದು.

ಯುರೋಪಿನ ಅತ್ಯಂತ ಉತ್ತರದ ಫಿನ್ಲಂಡಿನ ಪ್ರಸಿದ್ಧ ಜಾನಪದ ಕಾವ್ಯ ಕಲೇವಾಲಾವನ್ನು ವಿವರವಾದ ಅಧ್ಯಯನಕ್ಕೊಳಪಡಿಸಿದ ಮಾನವ ಶಾಸ್ತ್ರಜ್ಞರು ಅದರಲ್ಲಿ ಅಮ್ಮ‌ಗಳ ಆರಾಧನೆ ಮತ್ತು‌ ಅಮ್ಮ ಕೇಂದ್ರಿತ ಸಾಮಾಜಿಕ ಸಂಬಂಧಗಳನ್ನು ಗುರುತಿಸಿದ್ದಾರೆ‌. ಆರ್ಕ್ಟಿಕ್ ಸಮುದ್ರದ ಬಳಿಯ ಸಾಮಿ ಬುಡಕಟ್ಟಿನಲ್ಲಿಯೂ ಅಮ್ಮ ಕೇಂದ್ರಿತ ಸಾಮಾಜಿಕ ಸಂಬಂಧಗಳ ಕುರುಹುಗಳಿವೆ.

ಯುರೋಪಿನ ಹಲವು ಕಡೆಗಳಲ್ಲಿ ಸಮಾಧಿಗಳ ಮೇಲಿನ ಚಿತ್ರಗಳಲ್ಲಿ, ಆಚರಣೆಗಾಗಿ ಉಪಯೋಗಿಸುತ್ತಿದ್ದರೆಂದು ಕಂಡುಹಿಡಿದ ಗುಹೆಗಳಲ್ಲಿ ಅಮ್ಮ ಆರಾಧನೆಯ, ಮಹಿಳಾ ಪೂಜಾರಿಣಿಯರ ಕುರುಹುಗಳು ಕಂಡುಬಂದಿವೆ.
ಜರ್ಮನಿಯಲ್ಲಿ ಲೇಕ್ ಕಾನ್ಸ್‌ಟನ್ಸ್ ಎಂಬ ಸರೋವರ ಪ್ರಸಿದ್ಧ ಪ್ರವಾಸ ಸ್ಥಳ. ಅದರ ಬಳಿಯಲ್ಲೊಂದು ಮದರ್ಸ್ ವಾಲ್.ತಾಯಂದಿರ ಗೋಡೆ. ಇತ್ತೀಚೆಗೆ ಪುರಾತನ ಇತಿಹಾಸದ ಸಂಶೋಧಕರು ಕಂಡುಕೊಂಡ ಒಂದು  ಶಿಲಾಯುಗದ ಕೊನೆಯ ಭಾಗದ ಸಮಯದಲ್ಲಿ ಆದಿ ಮಾನವರು ಬರೆದ ಬಂಡೆಯ ಮೇಲಿನ ಚಿತ್ರಗಳು. ಇದರಲ್ಲಿ ಚಿತ್ರಿತವಾಗಿರುವವರು “ಅಮ್ಮ” ಗಳು. ಆದಿಮಾನವರ ಅಮ್ಮಂದಿರು.ಅವರನ್ನು ಆರಾಧಿಸುವ ಒಂದು ಆಚರಣೆಯ ಭಾಗವಾಗಿ ಬಂಡೆಗಳ ಮೇಲೆ ಚಿತ್ರಿಸಲ್ಪಟ್ಟವರು. ದಕ್ಷಿಣ ಜರ್ಮನಿಯಲ್ಲಿ ವ್ಯಾಪಕವಾಗಿರುವ ಇಂತಹ ಹಲವು ಚಿತ್ರಗಳ ತುಣುಕುಗಳನ್ನೂ ಅವರು ವಿವರಿಸಿದ್ದಾರೆ. ಜರ್ಮಾನಿಕ ಜನ ಸಮುದಾಯ ಹರಡಿದ ಇತರ ಯುರೋಪಿನ ದೇಶಗಳಲ್ಲೂ ಮಹಿಳಾ ಪೂಜಾರಿಣಿಯರು ಧಾರ್ಮಿಕ ಆಚರಣೆಗಳ ಮುಖ್ಯ ಸ್ಥಾನದಲ್ಲಿದ್ದುದರ ಗುರುತುಗಳನ್ನು ಮತ್ತೊಬ್ಬ ಮಾನವ ಶಾಸ್ತ್ರಜ್ಞರು ವಿವರಿಸಿದ್ದಾರೆ. ಪುರಾತನ ಜರ್ಮನಿಯಲ್ಲಿ ಅಮ್ಮಗಳೇ ಪ್ರಮುಖ ಸ್ಥಾನದಲ್ಲಿದ್ದರು ಎಂಬುದು ಅಲ್ಲಿಯ ಪ್ರಾಚೀನ ಕಥಾನಕಗಳನ್ನು ಅಧ್ಯಯನಕಾರರ ಶೋಧ.

ಸ್ಪೇನ್ ಮತ್ತು ಫ್ರಾನ್ಸ್‌ನ ನಡುವಣ ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಬಾಸ್ಕ್ ಸಮುದಾಯಗಳಲ್ಲಂತೂ ಇಂದಿಗೂ ತಂದೆ ಮೂಲದ ವಂಶದ ಹೆಸರುಗಳೇ ಇಲ್ಲ. ಅವರ ಅಡ್ಡ ಹೆಸರು ಅಥವಾ ಮೂರನೇ ಹೆಸರಿನಲ್ಲಿ ಅಮ್ಮ ಮೂಲದ ಕುಲದ ಹೆಸರುಗಳಿವೆ ಎಂದು ಅವುಗಳ ಅಧ್ಯಯನಗಳು ತಿಳಿಸಿವೆ. ಇಟಲಿಗೆ ಸೇರಿದ ಸಾರ್ಡಿನಿಯಾ ಎಂಬ ದ್ವೀಪದ ಜನ ಸಮುದಾಯದ ಮೂಲಪುರಾಣ ಕಾವ್ಯದಲ್ಲಿ ಈ ಸಮುದಾಯದ ಸೆಲ್ಟಿಕ್ ಮೂಲ ಹಾಗೂ ಅಮ್ಮ ದೇವತೆಗಳ ಆರಾಧನೆಯ ವಿವರಗಳಿವೆ.

ಯುರೋಪಿನ ಅತ್ಯಂತ ದಕ್ಷಿಣದ ತುದಿಯಾದ ಕ್ರೀಟ್‌ ದ್ವೀಪದ ಮಿನೋವನ್ ಸಂಸ್ಕೃತಿಯಲ್ಲಿ ಅಮ್ಮಗಳ ಆರಾಧನೆಯ ಹಲವು ಆಕರಗಳನ್ನು ಕಾಣಬಹುದು. ಅಲ್ಲಿನ ಉತ್ಖನನಗಳು ಮತ್ತು ಕಟ್ಟಡಗಳ ಅಧ್ಯಯನ ಅಮ್ಮ ಕೇಂದ್ರಿತ ಸಾಮಾಜಿಕ ಪದ್ಧತಿಯ ಹಲವು ಆಸಕ್ತಿಕರ ವಿವರಗಳು ದೊರೆತಿವೆ. ಅಲ್ಲಿನ ದೊಡ್ಡ, ಅರಮನೆಯಾಕಾರದ ಕಟ್ಟಡಗಳ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಅದೊಂದು ಪುರುಷಾಧಿಕಾರದ ಅಧಿಪತ್ಯದ ಅರಮನೆ. ಧಾನ್ಯಗಳನ್ನು ತೆರಿಗೆಯಾಗಿ ವಸೂಲಿ ಮಾಡಿ ಸಂಗ್ರಹಿಸುವ ತಾಣಗಳು ಎಂದು ಬಹಳ ಕಾಲ ಊಹಿಸಿದ್ದರು. ಆದರೆ ಅವುಗಳ ವಿವರ ಅಧ್ಯಯನ ಅಂದಿನ ಸಮಾಜದಲ್ಲಿ ಅಮ್ಮ ಕೇಂದ್ರಿತ ಬದುಕಿನ ಉತ್ತಮ ವಿವರಗಳನ್ನು ವಿಶ್ವಕ್ಕೆ ನೀಡಿದೆ. ಆ ಅರಮನೆಗಳಂತಹ ದೊಡ್ಡ ಕಟ್ಟಡಗಳಲ್ಲಿ ಅಮ್ಮ ಮೂಲದ ಒಂದು ವಂಶವೇ ವಾಸಿಸುತ್ತಿತ್ತು.  ದೊಡ್ಡ ಸಭಾಗೃಹಗಳು,ಉಗ್ರಾಣಗಳು ಎಂದುಕೊಂಡಿದ್ದವು ಎಲ್ಲ ಸ್ತ್ರೀಯರೊಂದು ಕಡೆ ,ಪುರುಷರೊಂದು ಕಡೆ ಮಲಗುವ ಜಾಗಗಳು, ಅವುಗಳು ಕೂಡು ಕುಟುಂಬದ ದೊಡ್ಡ ಅಡುಗೆ ಮನೆಗೆ ಜೋಡಿಸಿಕೊಂಡಿದ್ದವು. ಅವುಗಳ ಮಧ್ಯೆ ಅವರ ಹಿರಿಯರ ಬಗೆಗಿನ ಆಚರಣೆಗಳ ಕಟ್ಟಡಗಳಾಗಿವೆ ಎಂದು ಕಂಡು ಹಿಡಿಯಲಾಗಿದೆ.

ಯುರೋಪಿನಲ್ಲಿ ಮಾನವ ಸಮಾಜದ ಉದಯಕಾಲದಿಂದಲೂ ಪಿತೃ ಪ್ರಧಾನ ಸಮಾಜ ಎಂಬುದು ಬಹು ಕಾಲ ಎಲ್ಲ ಸಮಾಜ ವಿಜ್ಞಾನಿಗಳು ಇತಿಹಾಸಕಾರರು ಒಮ್ಮುಖವಾಗಿ ತೀರ್ಮಾನಿಸಿಬಿಟ್ಟಿದ್ದರು. ಪ್ಲೇಟೋ ಯುರೋಪಿನ ಸಾಮಾಜಿಕ ಮಾದರಿಯಲ್ಲಿಯೇ ಪಿತೃ ಪ್ರಧಾನ ಸಮಾಜ, ಪುರುಷ ಆಳ್ವಿಕೆ, ಮಹಿಳೆಯರ ಅಧೀನತೆಯ ಸಮಾಜದ ಆದರ್ಶ ಎಂದು ಘೋಷಿಸಿದ್ದನು. ಅದನ್ನನುಸರಿಸಿ ಅರಿಸ್ಟಾಟಲ್‌‌ನಂತಹ ಬಹು ದೊಡ್ಡ ವಿದ್ವಾಂಸ ಮತ್ತು ತತ್ವಶಾಸ್ತ್ರಜ್ಞನೂ ಕೂಡಾ ಹಿಂದೆ, ಇಂದು ಮತ್ತು ಮುಂದೂ ಕೂಡಾ ಪುರುಷಾಳ್ವಿಕೆಯೇ ಉತ್ತಮ ಸಮಾಜ ರಚನೆ ಎಂದು ತೀರ್ಮಾನ ಹೇಳಿದ್ದನು. ಕ್ರಿಶ್ಚಿಯನ್ ಧರ್ಮದ ಎಲ್ಲ ಗ್ರಂಥಗಳು, ಸೈಂಟ್‌ಗಳೂ ಅದನ್ನು ಸಾವಿರಾರು ವರ್ಷ ಪ್ರತಿಪಾದಿಸಿ ಮಹಿಳಾ ಅಧೀನತೆಗೆ ಧಾರ್ಮಿಕ ಅಡಿಪಾಯ ಹಾಕಿದ್ದರು. ಆದರೆ ಅದನ್ನು ಈ ಮೇಲಿನ ಎಲ್ಲ ಶೋಧಗಳು ಒಡೆದು ಹಾಕಿವೆ.

ಹೀಗೆ ಇಡೀ ಯುರೋಪು ಕೂಡಾ ಮೂಲದಲ್ಲಿ ಅಮ್ಮ ಕೇಂದ್ರಿತ ಸಮಾಜವಾಗಿತ್ತು ಎಂಬುದು ಈಗ ನಿರ್ವಿವಾದವಾಗಿದೆ. ಆಳವಾದ ಅಧ್ಯಯನ ಮಾಡಿದ ಕೆಲವು ವಿದ್ವಾಂಸರು ಅಮ್ಮ ಕೇಂದ್ರಿತ ಸಮಾಜ ಪೂರ್ವ ಏಷ್ಯಾದಿಂದ ಮಧ್ಯ ಏಷ್ಯಾ ಮತ್ತು ಯುರೋಪಿನವರೆಗೂ ವ್ಯಾಪಿಸಿದೆ ಎಂದು ಸಾಧಾರವಾಗಿ ಸಾಬೀತು ಮಾಡಿದ್ದಾರೆ. ಆಫ್ರಿಕಾ, ಅಮೇರಿಕಾಗಳಲ್ಲಿಯೂ ಅಮ್ಮ ಕೇಂದ್ರಿತ ಸಮಾಜವೇ ಹಲವು ಹತ್ತು ಸಾವಿರ ವರ್ಷಗಳ ಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಸಾಬೀತಾಗಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: