ಜಿ ಎನ್ ನಾಗರಾಜ್ ಅಂಕಣ- ದೇವರಿಂದಲೇ ನೇಮಿತನಾದ ನಾನು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

27

ನಾನು, ಹಮ್ಮುರಾಬಿ, ದೇವರಿಂದ ಮುಖ್ಯಸ್ಥನಾಗಿ ನೇಮಕವಾದವನು, ರಾಜರುಗಳಲ್ಲೇ ಅತಿ ಪ್ರಮುಖನಾದವನು, ಯೂಫ್ರೆಟೀಸ್ ನದಿಗಳ ಹಳ್ಳಿಗಳನ್ನು ಗೆದ್ದವನು, ಈ ದೇಶದ ಬಾಯಲ್ಲಿ ಸತ್ಯ ಮತ್ತು ನ್ಯಾಯವನ್ನು ಇಟ್ಟವನು,ಜನರಿಗೆ ಸುಖ ಸಮೃದ್ಧಿಯನ್ನು ಅನುಗ್ರಹಿಸಿದವನು.
ನಾನು, ಹಮ್ಮುರಾಬಿ ಸೂರ್ಯ ದೇವತೆ ಯಾರಿಗೆ ಕಾನೂನು ಕಟ್ಟಲೆಗಳನ್ನು ನೀಡಿದನೋ ಅವನು, ನನ್ನ ಮಾತುಗಳು ಅತ್ಯುತ್ತಮ, ನನ್ನ ಕ್ರಿಯೆಗಳಿಗೆ ಸರಿಸಮಾನವೇ ಇಲ್ಲ.

ಇದು ಕ್ರಿಸ್ತ ಪೂರ್ವ 1792 ರಿಂದ 1750 ರವರೆಗೆ ಜಗತ್ತಿನ ಅತಿ ಪ್ರಾಚೀನ ನಾಗರೀಕತೆಯ ಅತಿ ಪ್ರಾಚೀನ ಸಾಮ್ರಾಜ್ಯಗಳಲ್ಲೊಂದಾದ ಬ್ಯಾಬಿಲೋನ್ ಸಾಮ್ರಾಜ್ಯವನ್ನು ಆಳಿದ ರಾಜನ ಶಾಸನದ ನುಡಿಗಳು.

ಈಜಿಪ್ಟ್ ಪ್ರದೇಶದಲ್ಲಿ ಮೊದಲು ರಾಜ್ಯಗಳ ಸ್ಥಾಪನೆಯಾದಾಗ 40 ಕ್ಕಿಂತ ಹೆಚ್ಚು ಕುಲಾಧಿಪತ್ಯದ ರಾಜ್ಯಗಳಿದ್ದವು. ಯುದ್ಧ, ಆಕ್ರಮಣಗಳ ನಂತರ ಉತ್ತರ ಈಜಿಪ್ಟ್ ಮತ್ತು ದಕ್ಷಿಣ ಈಜಿಪ್ಟ್  ಎಂಬ ಎರಡು ರಾಜ್ಯಗಳಾದವು. ಸುಮಾರು ಕ್ರಿಸ್ತ ಪೂರ್ವ 3000 ವರ್ಷಗಳ ವೇಳೆಗೆ, ಬ್ಯಾಬಿಲೋನಿನ ಸಾಮ್ರಾಜ್ಯ ಸ್ಥಾಪನೆಗೆ ಒಂದು ಸಾವಿರ ವರ್ಷ ಮೊದಲೇ ದಕ್ಷಿಣ ಈಜಿಪ್ಟ್‌ನ ರಾಜ ಉತ್ತರ ಈಜಿಪ್ಟನ್ನು ಗೆದ್ದು ಒಂದು ಮಹಾ ಬಲಶಾಲಿಯಾದ ಸಾಮ್ರಾಜ್ಯವನ್ನು ಸ್ಥಾಪಿಸಿದ. ಈ ಸಾಮ್ರಾಟರುಗಳು ತಮ್ಮನ್ನು ಫೆರೋ ಎಂದು ಕರೆದುಕೊಂಡರು. ಇದೇ ವಿಶ್ವದ ಮೊದಲ ಸಾಮ್ರಾಜ್ಯವೆಂದು ಕಾಣುತ್ತದೆ. 

ಈ ಫೆರೋ ಸಾಮ್ರಾಟ ಹೇಳುತ್ತಾನೆ: ನಾನು ಮಹಾ ದೇವತೆ, ಚಿನ್ನದ ಹೋರಸ್ (ರಾಜ ದೇವತೆ ಎಂದು ಪರಿಗಣಿಸಲ್ಪಟ್ಟ ಈ ದೇವತೆ ಗಿಡುಗನ ರೂಪದಲ್ಲಿ ಅದರ ಎರಡು ಕಣ್ಣುಗಳು ಸೂರ್ಯ ಚಂದ್ರರೆಂದು ಚಿತ್ರಿಸಲ್ಪಟ್ಟಿದೆ. ಫೇರೋ ಸ್ಚತಃ ಹೋರಸ್ ದೇವತೆಯೇ ಎಂದು, ವಿವಿಧ ಕಾಲದ  ಸಾಮ್ರಾಟ ಫೇರೋಗಳು ಈ ದೇವತೆಯ ವಿವಿಧ ರೂಪಗಳೆಂದು ಭಾವಿಸಲಾಗಿದೆ), ರಾ ದೇವತೆಯ ಮಗ ಸಾರುತ್ತಾನೆ: ಕೇವಲ ಈಜಿಪ್ಟ್ ಮಾತ್ರ ಅಲ್ಲ, ಇಡೀ ವಿಶ್ವ, ಅದರ ಉದ್ದ ಅಗಲ, ಪೂರ್ವ ಪಶ್ಚಿಮಗಳೆಲ್ಲ, ಸೂರ್ಯ ಚಲಿಸುವ ಎಲ್ಲ ಇಡೀ ವೃತ್ತಾಕಾರದ ಮಂಡಲ, ಆಕಾಶ ಮತ್ತು ಅದರಲ್ಲೇನಿದೆಯೋ ಅದೆಲ್ಲ, ಭೂಮಿ ಮತ್ತು ಅದರ ಮೇಲೇನಿದೆಯೋ ಅದೆಲ್ಲ, ಎರಡು ಕಾಲುಗಳಲ್ಲಾಗಲೀ, ನಾಲ್ಕು ಕಾಲುಗಳಲ್ಲಾಗಲೀ ಚಲಿಸುವುದೆಲ್ಲ, ಯಾವುದೆಲ್ಲಾ ಹಾರಾಡುತ್ತವೆಯೋ ಅವೆಲ್ಲ ಇಡೀ ಜಗತ್ತು ಅದರ ಉತ್ಪತ್ತಿಯನ್ನೆಲ್ಲ ನನಗೆ ಅರ್ಪಿಸುತ್ತವೆ. 

ಫೆರೋಗಳು ಸೂರ್ಯನ ಮಕ್ಕಳಾದ್ದರಿಂದ ಸೂರ್ಯನಂತಹ ಕಿರಣಗಳ ಮೂಲಕವೇ ಎಲ್ಲವನ್ನೂ ವೀಕ್ಷಿಸುವ ಸಾಮರ್ಥ್ಯ ಇದೆ ಎಂದು ಜನರನ್ನು ನಂಬಿಸಲಾಗಿತ್ತು. ಅವರ ಬಿರುದು ಬಾವಲಿಗಳು ದೇವತೆಗಳನ್ನು ಹೊಗಳುವ ಕೀರ್ತನೆಗಳಂತೆಯೇ ಇರುತ್ತಿದ್ದವು. 
ಅವರ ಸಾವಿನ ನಂತರ ಅವರನ್ನು ಚಿರಂಜೀವಿಗಳನ್ನಾಗಿಸಲು ಅವರ ದೇಹಗಳನ್ನು ವಿಶೇಷ ಔಷಧಿ, ರಾಸಾಯನಿಕಗಳಿಂದ ಮಮ್ಮಿಗಳಾಗಿ ರಕ್ಷಿಸಲಾಯಿತು. ಅವರು ಸತ್ತ ನಂತರದ ಬದುಕಿಗಾಗಿ ಬಹು ದೊಡ್ಡ ಅರಮನೆಗಳಂತಹ ಸಮಾಧಿಗಳನ್ನು ಕಟ್ಟಲಾಯಿತು. ಅವುಗಳಲ್ಲಿ ಅತ್ಯಮೂಲ್ಯ ಆಭರಣಗಳು ಮತ್ತಿತರ ವಸ್ತುಗಳನ್ನು ಇಡಲಾಯಿತು. ಈ ಬೃಹದಾಕಾರದ ಕಟ್ಟೋಣಗಳನ್ನೇ ಇಂದು ಲಕ್ಷಾಂತರ ಜನ ಪ್ರವಾಸ ಮಾಡಿ ವಿಶ್ವ ಬೆಕ್ಕಸ ಬೆರಗಾಗಿ ನೋಡುತ್ತಾರೆ. ಈಜಿಪ್ಟಿನ ದೆರವಾಲಯಗಳಲ್ಲಿ ಫೆರೋಗಳ ಮೂರ್ತಿಯನ್ನು ದೇವತೆಗಳ ವಿಗ್ರಹಗಳ ಸಮಾನವಾಗಿ ಕೆತ್ತಲಾಗಿದೆ. 

ಹೀಗೆ ರೋಮ್‌ನ ಸಾಮ್ರಾಟರು ತಾವು ದೇವತೆಗಳ ರಾಜ ಜ್ಯೂಪಿಟರ್‌ನ ಪ್ರತಿರೂಪ ಎಂತಲೇ ಬಿಂಬಿಸಿಕೊಳ್ಳುತ್ತಿದ್ದರು. ಜ್ಯೂಪಿಟರ್‌ನಂತೆ ಆಕಾಶದ, ಗುಡುಗು ಸಿಡಿಲಿನ ದೇವತೆಯೆಂದು ಘೋಷಿಸಿಕೊಳ್ಳುತ್ತಿದ್ದರು. ಆ ದೇವತೆಯಂತೆ ವೇಷ ಭೂಷಣಗಳನ್ನು ತೊಡುತ್ತಿದ್ದರು. ರೋಮುಲಸ್ ಎಂಬ ಸಾಮ್ರಾಟನಂತೂ ತಾನು ಜ್ಯೂಪಿಟರ್‌‌ಗೆ ಸಮಾನ ಅಥವಾ ಅದಕ್ಕಿಂತ ಹೆಚ್ಚು ಎಂಬಂತೆ ಹೇಳಿಕೊಳ್ಳುತ್ತಿದ್ದ. 

ಈ ನಾಗರೀಕತೆಗಳ ಬಹಳ ಕಾಲದ ನಂತರ ಇವುಗಳಿಗೆ ಸಂಪರ್ಕವೇ ಇಲ್ಲದಂತೆ ರೂಪುಗೊಂಡ ಅಮೆರಿಕ ಖಂಡದ ಮಾಯಾ,ಇಂಕಾ ಸಾಮ್ರಾಜ್ಯಗಳ ಸಾಮ್ರಾಟರುಗಳೂ ತಾವು ಸೂರ್ಯ ದೇವನ ಮಕ್ಕಳೆಂದು ಘೋಷಿಸಿಕೊಂಡಿದ್ದರು. ಬೆಟ್ಟಗಳ ಮೇಲಿನ ಅವರ ದೇವಾಲಯಗಳು ಈ ರಾಜರುಗಳ ದೈವಿಕತೆಯನ್ನು ಸಮರ್ಥಿಸಲೆಂದೇ ರೂಪುಗೊಳಿಸಲಾಗಿತ್ತು. 

ಭಾರತದ ನಮಗಂತೂ ರಾಜರುಗಳು ಪುರೋಹಿತರುಗಳು ನಡೆದಾಡುವ ದೇವರುಗಳೆಂದೇ ಸಾರಿಕೊಳ್ಳುವ ಪ್ರಕ್ರಿಯೆ ಸಾಮಾನ್ಯ. ಭಾರತದ ರಾಜರುಗಳೆಲ್ಲ ಸೂರ್ಯ ವಂಶದವರು ಅಥವಾ ಚಂದ್ರ ವಂಶದವರೆಂದು ಕೀರ್ತಿಸಲ್ಪಟ್ಟಿರುವುದನ್ನು ಕಾಣುತ್ತೇವೆ. ವಂದಿ ಮಾಗಧರು ಅವರ  ಉಗ್ಘಡಿಸುವ ಬಿರುದುಗಳಲ್ಲಿ ಮತ್ತು ಅವರೇ ಕೆತ್ತಿಸಿಕೊಂಡ ಶಾಸನಗಳಲ್ಲಿ ತಾವು ಪರಮೇಶ್ವರ, ಪೃಥ್ವಿ ವಲ್ಲಭ ಎಂದು ದೇವರುಗಳ ಹೆಸರಿನ ಬಿರುದುಗಳು ಸಾಮಾನ್ಯ. 

ಅಂದಿನ ಕಾಲದ ನೀತಿ,ಕಟ್ಟಲೆಗಳನ್ನು ನಿರೂಪಿಸುವ ಮನುಸ್ಮೃತಿಯಲ್ಲಿ ರಾಜರುಗಳ ದೈವಿಕ ಸ್ವರೂಪ ಯಾವುದೇ ಸಂಶಯಕ್ಕೆಡೆಯಿಲ್ಲದಂತೆ ನಿರೂಪಿಸಲ್ಪಟ್ಟಿದೆ.

ಇಂದ್ರಾನಿಲಯಮಾರ್ಕಾಣಾಮಗ್ನೇಶ್ಚ ವರುಣಸ್ಯ/
ಚಂದ್ರ ವಿತ್ತೇಶಯೋಶ್ಚೈವ ಮಾತ್ರಾ ನಿಹೃತೃ ಶಾಶ್ವತೀಃ// 7.4

ಇಂದ್ರ ವಾಯು,ಯಮ,ಸೂರ್ಯ, ಅಗ್ನಿ,ಚಂದ್ರ ಕುಬೇರರೆಂಬ ಅಷ್ಟ ದಿಕ್ಪಾಲಕ ದೇವತೆಗಳ ಸತ್ವಾಂಶಗಳಿಂದ ರಾಜನು ಸೃಷ್ಟಿಸಲ್ಪಟ್ಡಿದ್ದಾನೆ. 

ಯಸ್ಯಾದೇಷಾಂ ಸುರೇಂದ್ರಾಣಾಂ ಮಾತ್ರಾಭ್ಯೋ ನಿರ್ಮಿತೋ ನೃಪಃ /
ತಸ್ಮಾದಭಿಭವತ್ಶೇಷ ಸರ್ವಭೂತಾನಿ ತೇಜಸಾಃ // 7.5

ಈ ದೇವತೆಗಳ ಉತ್ತಮ ಸತ್ವಗಳಿಂದ ರಾಜನು ಸೃಷ್ಟಿಸಲ್ಪಟ್ಟಿರುವುದರಿಂದ ತನ್ನ ತೇಜಸ್ಸಿನಿಂದ ಎಲ್ಲ ಪ್ರಾಣಿಗಳನ್ನೂ ತನ್ನ ಇಚ್ಛಾನುವರ್ತಿಯಾಗಿ ಮಾಡಿಕೊಳ್ಳುತ್ತಾನೆ.

ಬಾಲೋಪಿ ನಾವಮಂತವ್ಯೋ ಮನುಷ್ಯ ಇತಿ ಭೂಮಿಪಃ/
ಮಹತೀ ದೇವತಾ ಹೈಷಾ ನರರೂಪೇಣ ತಿಷ್ಟತಿ // 7.8

ರಾಜನು ಚಿಕ್ಕ ಹುಡುಗನಾಗಿದ್ದರೂ ಅವನು ಸಾಮಾನ್ಯ ಮನುಷ್ಯನೆಂದು ಹಗುರಾಗಿ ಕಾಣಬಾರದು. ಏಕೆಂದರೆ ಮಹತ್ತರವಾದ ದೇವತೆಗಳೇ ಮನುಷ್ಯ ರೂಪ ಧರಿಸಿರುತ್ತವೆ. 

ಏಕಮೇವ ದಹತ್ಯಗ್ನಿರ್ನರಂ ದುರುಪಸರ್ಪಿಣಂ /
ಕುಲಂ ದಹತಿ ರಾಜಾಗ್ನಿಃ ಸಪಶುದ್ರವ್ಯಸಂಚಯಂ// 7.9

ಬೆಂಕಿಯು ತನ್ನ ಬಳಿ ಅಗೌರವದಿಂದ ಸುಳಿದ ಒಬ್ಬ ಮನುಷ್ಯನನ್ನು ಮಾತ್ರ ಸುಡುತ್ತದೆ. ಆದರೆ ರಾಜಾಗ್ನಿಯು ತನ್ನೆದುರು ನಿಲ್ಲುವ ಉದ್ಧಟತನ ಇಡೀ ಕುಲ, ಅವನ ಪಶು, ಧನ ಸಂಪತ್ತೆಲ್ಲವನ್ನೂ ದಹಿಸಿಬಿಡುತ್ತದೆ. 

ಭಾರತದಲ್ಲಿ ಹೀಗೆ ರಾಜರುಗಳು ಕೇವಲ ಒಬ್ಬ ದೇವತೆಯ ಅಂಶ ಮಾತ್ರವಲ್ಲದೆ ಹಲವು ದೇವತೆಗಳ ಸತ್ವವನ್ನು ಉಳ್ಳವರು. ಎದುರಾಗುವವರನ್ನು ಸುಟ್ಟು ಬಿಡುವ ಶಕ್ತಿಯುಳ್ಳವರು. ಆದ್ದರಿಂದ ಎಚ್ಚರ ! ಎಚ್ಚರ !! ಯಾರೂ ರಾಜನ ವಿರುದ್ಧ ವರ್ತಿಸಬೇಡಿರಿ. (ಇಂದು ಭಾರತದಲ್ಲಿ ಈ ಮನುಸ್ಮೃತಿಯನ್ನೇ ಸಂವಿಧಾನವನ್ನಾಗಿ ಮಾಡುವ ದಿಶೆಯಲ್ಲಿ ಹಲ ಹಲವು ರೀತಿಯ ಉಪಟಳಗಳ ಮೂಲಕ ಮೇಲಿನ ಶ್ಲೋಕವನ್ನು ತದ್ವತ್ ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.)

ಈಜಿಪ್ಟಿನ ಒಬ್ಬ ಫೇರೋ ರಾಜಾಜ್ಞೆ ಹೊರಡಿಸುತ್ತಾನೆ : ಎದುರಾದವರನ್ನು ಕೊಲ್ಲಿ, ಅವರ ಸಂಬಂಧಿಗಳನ್ನೆಲ್ಲಾ ನಾಶ ಮಾಡಿ, ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಮಾಡಿ. ಅತಿ ಅಪಾಯಕಾರಿ ಶತ್ರುಗಳೆಂದರೆ ಬಡವರು. 

ಅವನ ಆದೇಶವನ್ನು ಪಾಲಿಸಿದ ಅಧಿಕಾರಿಗಳಿಗೆ ಹೆಚ್ಚು ಗುಲಾಮರು ಮತ್ತು ಪಶು ಮಂದೆಯನ್ನು ನೀಡುತ್ತಾನೆ. ಅದೇ ಫೆರೋ ಮಗನಿಗೆ ಉಪದೇಶ ಮಾಡುತ್ತಾನೆ: ನಿನ್ನ ಸಾಮಂತರಿಗೆ,ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡು , ಸೇನಾಧಿಕಾರಿಗಳಿಗೆ ಮೇಲ್ದರ್ಜೆಗೇರಿಸು,ಅವರನ್ನು ಸದಾ ಸಂತೃಪ್ತರಾಗಿರುವಂತೆ ಭೂಮಿ, ಪಶು ಮಂದೆಗಳನ್ನು ಕೊಡು.

ಈ ಸಾಮ್ರಾಟರುಗಳ ಆಕ್ರಮಣ ಹೇಗಿತ್ತೆಂದರೆ, ಒಬ್ಬ ಸೇನಾ ನಾಯಕ ಹೇಳುತ್ತಾನೆ: 
ಸೈನ್ಯ ವಿಜಯಿಯಾಗಿ ಹಿಂದಿರುಗಿತು. ನಮ್ಮ ನೆರೆಯ ದೇಶವನ್ನು ನಾಶ ಮಾಡಿಬಿಟ್ಟೆವು. ಅವರ ತೋಟಗಳು, ದ್ರಾಕ್ಷಿ ಬಳ್ಳಿ ವನಗಳನ್ನು ಸುಟ್ಟು ಹಾಕಿ ಬಿಟ್ಟೆವು. ಅವರ ಹಳ್ಳಿಗಳನ್ನು ಅಗ್ನಿಗಾಹುತಿ ಮಾಡಿದೆವು. ಹತ್ತಾರು ಸಾವಿರ ಜನರನ್ನು ಕೊಂದು ಹಾಕಿದೆವು. ಮತ್ತೆ ಹತ್ತಾರು ಸಾವಿರ ಜನರನ್ನು ಗುಲಾಮರನ್ನಾಗಿ ಹಿಡಿತಂದೆವು. ನಮ್ಮ ರಾಜ ‌ನಮ್ಮನ್ನು ಬಾಯ್ತುಂಬಾ ಹೊಗಳಿದ. 

ಇಂತಹ ರಾಜ ಪ್ರಭುತ್ವಗಳು ಕ್ರಿ ಪೂ 400 ರಿಂದ ಕ್ರಿ.ಶಕೆ ಆರಂಭವಾಗುವುದರೊಳಗೆ ಭಾರತಾದ್ಯಂತ ಹಬ್ಬಿದವು.  ಜಗತ್ತಿನೆಲ್ಲ ರಾಜ ಪ್ರಭುತ್ವಗಳೂ ಇದೇ ರೀತಿ ಕ್ರೂರವಾಗಿ ವರ್ತಿಸುತ್ತಿದ್ದವು  ಎಂಬುದನ್ನು ಪೂರ್ವದ ಚೀನಾದಿಂದ ಭಾರತ,ಪರ್ಷಿಯ,ಮೆಸಪೊಟೋಮಿಯಾ,ಬ್ಯಾಬಿಲೋನಿಯಾ,ಈಜಿಪ್ಟ್, ರೋಮ್ ಗ್ರೀಸ್ ಅಮೇರಿಕಗಳವರೆಗೆ ರಾಜ್ಯಗಳು,ಸಾಮ್ರಾಜ್ಯಗಳು ಸ್ಥಾಪಿತವಾದ ಎಲ್ಲೆಡೆ ನೋಡುತ್ತೇವೆ.
ಭಾರತದಲ್ಲಿ ಆಕ್ರಮಣ ಮಾಡಿದ ರಾಜರುಗಳು ನೆರೆಯ ರಾಜ್ಯಗಳ ಹಳ್ಳಿಗಳನ್ನು, ನಗರಗಳನ್ನು ಲೂಟಿ ಮಾಡುವುದು, ಅವರ ಹೊಲ ಗದ್ದೆ, ತೋಟಗಳನ್ನು ಸುಟ್ಟು ಬೂದಿ ಮಾಡುವುದು, ನೀರಿನ ಆಸರೆಗಳಿಗೆ ವಿಷ ಬೆರೆಸುವುದು ಇವೆಲ್ಲ ತಮ್ಮ ಶೌರ್ಯದ ಭಾಗವೆಂದೇ ಭಾವಿಸಿದ್ದರು. ತಮ್ಮದೇ ಪ್ರಜೆಗಳು ತಾವು ಹೇರಿದ ಅತಿ  ಹೊರೆಯಾದ ಕಂದಾಯ ,ತೆರಿಗೆ ನೀಡದಿದ್ದರೆ ಸೈನ್ಯವನ್ನು ಅಲ್ಲಿಗೆ ಕಳಿಸಿ ಕ್ರೂರ ಶಿಕ್ಷೆಗಳನ್ನು ವಿಧಿಸುತ್ತಿದ್ದುದು ಹಲವು ದಾಖಲೆಗಳಿಂದ ತಿಳಿಯ ಬರುತ್ತದೆ. 

ಆಕ್ರಮಣ ಮಾಡಿದ ರಾಜರುಗಳನ್ನು ಸೋಲಿಸಿ ಅವರ ರಾಜಧಾನಿಯನ್ನು ಲೂಟಿ ಮಾಡಿದ ನೆನಪಿಗೆ, ಲೂಟಿ ಹಣದಿಂದ ಬೃಹತ್ ದೇವಾಲಯಗಳನ್ನು ನಿರ್ಮಿಸುವುದು, ಆ ರಾಜರುಗಳು ಇವರನ್ನು ಸೋಲಿಸಿ ಇವರ ರಾಜಧಾನಿ ಲೂಟಿ ಮಾಡಿದ ನೆನಪಿಗೆ ಬೃಹತ್ ದೇವಾಲಯಗಳನ್ನು ಕಟ್ಟಿಸಿದ ಉದಾಹರಣೆಗಳು ಹಲವಾರು. 

ಈ ಎಲ್ಲ ಉದಾಹರಣೆಗಳಲ್ಲಿ ಕಾಣುವುದೇನೆಂದರೆ ಇಲ್ಲಿಯ ರಾಜ,ಅವನ ಪ್ರಭುತ್ವ ಮಾತ್ರವಲ್ಲ ಅವನ ಧರ್ಮ, ದೇವರುಗಳೂ ಕೂಡಾ  ಪೂರ್ತಿಯಾಗಿ ಬೇರೆಯೇ ಆಗಿದ್ದವು. 
ಈ ಸ್ಥಿತಿಗೆ ಮಾನವ ಸಮಾಜ ಹೇಗೆ ಸಾಗಿ ಬಂತು? ಬುಡಕಟ್ಟುಗಳು ಬೆಳಕು,ಮಳೆಗಾಗಿ ಪ್ರಾರ್ಥಿಸುತ್ತಿದ್ದ ಅದೇ ಸೂರ್ಯ, ಮಳೆಯ ದೇವರುಗಳು ಇವರೇನೇ? ಅವರುಗಳು  ದೇವರುಗಳೆಂದು ಪರಿಗಣಿಸಿದ್ದ ಜುಂಜಪ್ಪ, ಬೀರಪ್ಪ,ಮಲ್ಲಪ್ಪ, ಕರಿಯಪ್ಪ, ಮೈಲಾರ ಮೊದಲಾದ ಮನುಷ್ಯರೇ ಆಗಿದ್ದ ಸರಳ ಬುಡಕಟ್ಟು ವೀರರುಗಳಿಗೂ ರಾಜ ಮಹಾರಾಜರುಗಳು ತಮ್ಮ ದೈವತ್ವಕ್ಕೆ ನೆಪವಾಗಿಸಿದ್ದ ದೇವರುಗಳಿಗೂ ಎಷ್ಟೊಂದು ಅಂತರ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: