ಜಿ ಎನ್ ನಾಗರಾಜ್ ಅಂಕಣ- ಜ್ಯೋತಿಷ್ಯಕ್ಕೂ ಕರ್ಮಕ್ಕೂ, ವರ್ಣಗಳಿಗೂ ಕರ್ಮಕ್ಕೂ ಸಂಬಂಧವಿದೆಯೇ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

39

“ಏ! ಪ್ರಾರಬ್ಧ, ನನ್ನ ಜನ್ಮಕ್ಕೆ ಅಂಟಿಕೊಂಡು ಬಿಟ್ಟಿದ್ದೀಯ” “ನನ್ನ ಕರ್ಮಕ್ಕೆ ಬೇರೇವರ‌ನ್ನ ಬೈದು ಏನು ಪ್ರಯೋಜನ” ಇಂತಹ ಮಾತುಗಳು ಕುಟುಂಬಗಳಲ್ಲಿ, ಜನರ ನಡುವೆ ಸರ್ವೇ ಸಾಮಾನ್ಯ. ನಾ ಮಾಡಿದಾ ಕರ್ಮ ಬಲವಂತವಾದರೆ ಎಂಬ ಪುರಂದರ ದಾಸರ ಪದಗಳಂತಹವು ಹಳ್ಳಿಗಳ ಭಜನಾ ಮಂಡಲಿಗಳಲ್ಲಿ ಹಾಗೂ ದೇವಾಲಯಗಳ ನಿತ್ಯದ ಭಜನೆಗಳಲ್ಲಿ ಹಾಡಲ್ಪಡುತ್ತವೆ.

ಜನರ ಬದುಕಿನ ಸಂಕಟ ಸಂತೋಷಗಳೆಲ್ಲಕ್ಕೂ ಅವರವರ ಹಿಂದಿನ ಜನ್ಮದ ಕರ್ಮವೇ ಕಾರಣ ಎಂಬ ವೇದಾಂತದ  ಕರ್ಮ ಸಿದ್ಧಾಂತ ಜನ ಸಾಮಾನ್ಯರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಈ ಮಾತುಗಳು‌ ಸೂಚಿಸುತ್ತವೆ. ಇದು ಕರ್ಮ ಸಿದ್ಧಾಂತದ ಬಹಳ ಸರಳ ಜನಜನಿತ ರೂಪ. ಆದರೆ ಕರ್ಮ ಸಿದ್ಧಾಂತ ಇಷ್ಟು ಸರಳವಾಗಿಲ್ಲ. ಅದರದೇ ಆದ ಪಾರಿಭಾಷಿಕ ಪದಗಳು, ವ್ಯಾಖ್ಯೆಗಳನ್ನು ಪಡೆದು ಕ್ಲಿಷ್ಟವಾಗಿದೆ.
ಕರ್ಮಗಳು ಸಂಚಿತ, ಪ್ರಾರಬ್ಧ, ಕ್ರಿಯಾಮಾಣ ಮತ್ತು ಆಗಾಮಿ ಎಂಬ ನಾಲ್ಕು ಕಾಲಗಣನೆ ಆಧಾರಿತ ವಿಧಗಳಿವೆ. ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿರುವ ಕರ್ಮಗಳು ಸಂಚಿತ ಕರ್ಮ, ಹಿಂದೆ ಮಾಡಿದ ಕರ್ಮ ಈ ಜನ್ಮದಲ್ಲಿ ಅನುಭವಿಸುವಂತಹವು ಪ್ರಾರಬ್ಧ ಕರ್ಮ, ಈ ಜನ್ಮದಲ್ಲಿ ಮಾಡುವುದೆಲ್ಲ ಕ್ರಿಯಾಮಾಣ ಕರ್ಮ, ಮುಂದಿನ ಜನ್ಮದಲ್ಲಿ ಅನುಭವಿಸುವುದು ಆಗಾಮಿ‌ ಕರ್ಮ. ಇವುಗಳಲ್ಲಿ ಮತ್ತೆ  ಹಲವು ವಿಭಾಗಗಳಿವೆಯಂತೆ !

ಈ ಪ್ರಾರಬ್ಧ ಎಂಬ ಪ್ರಾರಬ್ಧವಂತೂ ಜನರ ಬಳಕೆಯಲ್ಲಿದೆ. ಉಳಿದವು ಪುರಾಣ, ಪುಣ್ಯಕತೆಗಳಲ್ಲಿ ಹುದುಗಿವೆ. ಜ್ಯೋತಿಷ್ಯಕ್ಕೂ ಕರ್ಮ ಸಿದ್ಧಾಂತವೇ ಬುನಾದಿಯಂತೆ ! ಸಾಮಾನ್ಯವಾಗಿ ಗ್ರಹ ಗತಿಗಳೇ ಜ್ಯೋತಿಷ್ಯದ ಆಧಾರ ಎಂದು ಜನರೆಲ್ಲ ಭಾವಿಸಿದ್ದಾರೆ.   ಅನಸೂಯ ಎಸ್ ರಾಜೀವ್ ಎಂಬುವರು ಪತ್ರಿಕೆಯೊಂದರಲ್ಲಿ ಬರೆದಂತೆ ಜಾತಕದಲ್ಲಿ 5 ನೇ ಮನೆಯು ಸಂಚಿತ ಕರ್ಮವನ್ನೂ 9 ನೇ ಮನೆಯು ಆಗಾಮಿ ಕರ್ಮವನ್ನು ಲಗ್ನವು ಪ್ರಾರಬ್ಧ ಕರ್ಮವನ್ನೂ ಸೂಚಿಸುತ್ತದಂತೆ. ಆಯಾ ವ್ಯಕ್ತಿಯ ಬಗ್ಗೆ ಮಾತ್ರವಲ್ಲದೆ  ಅವನ/ಳ ಕುಟುಂಬದ, ಅವನ/ಳ ಒಡಹುಟ್ಟಿದವರ ಬದುಕಿನ ಬಗೆಗೂ ಕರ್ಮ ಸಿದ್ಧಾಂತ ಆಧಾರಿತ ಜ್ಯೋತಿಷ್ಯ ಹೇಳುತ್ತದಂತೆ. ಅವರವರ ಆಯಸ್ಸು, ರೋಗಗಳ ಬಗ್ಗೆ, ಹೆಂಡತಿ ಮಕ್ಕಳ ಬಗ್ಗೆ ಕೂಡಾ ಜ್ಯೋತಿಷ್ಯ ಹೇಳುವುದು ಕರ್ಮ ಸಿದ್ಧಾಂತದ ಆಧಾರದ ಮೇಲೆಯೇ. ಗರುಡ ಪುರಾಣದಲ್ಲಿ  ಯಾರಿಗೂ ಕಾಣದ ನಮ್ಮ ಹಿಂದಿನ ಜನ್ಮದ ಕರ್ಮಗಳಿಂದ ಇಂದಿನ ಜನ್ಮದ ಫಲವನ್ನು ಜ್ಯೋತಿಷ್ಕರು ತಿಳಿಸುತ್ತಾರೆ ಮಾತ್ರವಲ್ಲದೆ ನಮ್ಮ ಕರ್ಮ ಫಲವನ್ನೇ ಬದಲಾಯಿಸಿಬಿಡುವ ಪರಿಹಾರಗಳನ್ನೂ ಸೂಚಿಸುತ್ತಾರೆ ! ಇಂತಹ ಜ್ಯೋತಿಷ್ಕರ ಬಳಿ ಜನ ಮುಕುರುವುದೂ ಅವರವರ ಕರ್ಮವೇ ಅಲ್ಲವೇ !

ಇನ್ನು ನಿಮಗೆ ಆಗಿ ಬರುವಂತಹ ಬಾಗಿಲು ಹೇಗಿರಬೇಕು?  ಮಲಗುವ ಕೊಠಡಿ ಈ ಮೂಲೆಯಲ್ಲಿದ್ದರೆ ಇಂತಹಾ ಫಲ, ಅಡಿಗೆ ಮನೆ ಆ ಮೂಲೆಯಲ್ಲಿದ್ದರೆ ಅಂತಹಾ ಫಲ ಎಂದು ನಿಮ್ಮ ಕರ್ಮವನ್ನು ಬದಲಾಯಿಸಲು ಸಹಾಯ ಮಾಡುವ ವಾಸ್ತು ಶಾಸ್ತ್ರ ತಜ್ಞರಿಗೂ ಕರ್ಮ ಸಿದ್ಧಾಂತವೇ ಆಧಾರವೇ, ನನಗೆ ತಿಳಿಯದು.

ಸಾವಿರಾರು ವರ್ಷಗಳಿಂದ ಜನರನ್ನು ಜ್ಯೋತಿಷ್ಯ, ಕರ್ಮ ಪರಿಹಾರದ ಪೂಜೆ ಅರ್ಚನೆ, ವ್ರತ, ಷೋಡಷ ದಾನ ಮೊದಲಾದವುಗಳತ್ತ ದೂಡಲು, ಜನರು ಕಷ್ಟಪಟ್ಟು ಗಳಿಸಿದ ಆದಾಯದ ಗಣನೀಯ ಭಾಗವನ್ನು ಸೆಳೆಯಲು  ಕರ್ಮ ಸಿದ್ಧಾಂತದ ಬಗ್ಗೆ ಮೂಡಿಸಿದ ಆಳವಾದ ನಂಬಿಕೆ ಕಾರಣವಾಗಿದೆ.

ಭಾರತೀಯ ತತ್ವಶಾಸ್ತ್ರದ ಅತ್ಯುನ್ನತ ಕೊಡುಗೆಗಳಲ್ಲಿ ಮಹತ್ವದ್ದೆಂದು ಸಾರಲಾದ ಉಪನಿಷತ್ತುಗಳೇ ಇಂತಹ ಪದ್ಧತಿಗಳ ಉಗಮವೆಂಬುದು ಆಶ್ಚರ್ಯಕರವೇ ಸರಿ.

ಆದರೆ ಕರ್ಮ ಸಿದ್ಧಾಂತದ ಪರಿಣಾಮಗಳಲ್ಲಿ ಮೇಲಿನದು ಬಹಳ ಸಣ್ಣ ಅಂಶವಷ್ಟೇ . ಅದು ಭಾರತೀಯರ ಜನ ಜೀವನದ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮೊದಲಾದ ಹಲವು ರಂಗಗಳನ್ನು ವ್ಯಾಪಿಸಿದೆ. ದೇಶ ಸರ್ವಾಂಗೀಣ ಬೆಳವಣಿಗೆಯ ಗತಿಯನ್ನೂ ನಿರ್ಧರಿಸುವಂತಹ ಮಹತ್ತರ ಪರಿಣಾಮ ಬೀರಿದೆ.

ಉಪನಿಷತ್ತುಗಳಲ್ಲಿ :
ಹಲವು ಉಪನಿಷತ್ತುಗಳು ಕರ್ಮ ಸಿದ್ಧಾಂತವನ್ನು ಪ್ರಸ್ತಾಪಿಸುತ್ತವೆ, ವಿವರಿಸುತ್ತವೆ.  ಬೃಹದಾರಣ್ಯಕ ಉಪನಿಷತ್ತು ಅದರ ಹಲವು ಭಾಗಗಳಲ್ಲಿ ಮನುಷ್ಯರ ಸಾವಿನಿಂದ ಆರಂಭವಾಗಿ ಹೇಗೆ ಕರ್ಮವು ಬೆನ್ನು ಹತ್ತುತ್ತದೆ ಎಂಬುದನ್ನು ಈ ರೀತಿ ಹೇಳಿದೆ :
ವ್ಯಕ್ತಿಯ ಬದುಕಿನ ಕೊನೆಯ ಹ  ಕಾಣುತ್ತಿಲ್ಲ, ಸವಿಯುತ್ತಿಲ್ಲ, ಮಾತಾಡುತ್ತಿಲ್ಲ , ಕೇಳುತ್ತಿಲ್ಲ….. ಎನ್ನುವರು. ಆಗ ಆತ್ಮನು ಹೊರಕ್ಕೆ ಹೊರಡುತ್ತಾನೆ. ಅವನನ್ನು ವಿದ್ಯಾ, ಕರ್ಮಗಳೂ ಪೂರ್ವ ( ಜನ್ಮದ ) ಪ್ರಜ್ಞೆಯೂ ಬೆಂಬಿಡಿಯುವವು. 4-4-2
ಇದಕ್ಕೆ ಶಂಕರರು ಭಾಷ್ಯ ಬರೆಯುತ್ತಾ ಈ ವಿವರಿಸಿದ್ದಾರೆ.

ಯಥಾ ಕರ್ಮಂ,ಯಥಾ ಶ್ರುಥಂ ಅನ್ಯೇಷಾಂ ವಾ ಭೂತಾನಾಂ ಸಂಬನ್ಧಿ ಶರೀರಾನ್ತರಮ್ – – -ಕರ್ಮಕ್ಕೆ ಅನುಗುಣವಾಗಿ ಜ್ಞಾನಕ್ಕೆ ಅನುಗುಣವಾಗಿ ಮತ್ತೆ ಯಾವ ಭೂತಗಳಿಗೆ ಸಂಬಂಧಿಸಿದ್ದೋ ಅಂತಹ ದೇಹವನ್ನು ಧರಿಸಿಕೊಳ್ಳುತ್ತಾನೆ.

ಕರ್ಮಣಾ ನಿಯಮಾನಸ್ಯ ಸ್ವಾತನ್ತ್ರ್ಯಾಭಾವಾತ್/ ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ ಪಾಪಃ ಪಾಪೇನ – ಕರ್ಮವು ಆ ವ್ಯಕ್ತಿಯನ್ನು ಕರೆದೊಯ್ಯುತ್ತಿರುವುದರಿಂದ ಅವನಿಗೆ/ಳಿಗೆ ಯಾವ ಸ್ವಾತಂತ್ರ್ಯವೂ ಇರುವುದಿಲ್ಲ. ಪುಣ್ಯ ಕರ್ಮದಿಂದ ಒಳ್ಳೆಯವರೂ, ಪಾಪ ಕರ್ಮದಿಂದ ಪಾಪಿಗಳೂ ಆಗುವರು.

ಹೀಗೆ ಮನುಷ್ಯರು ಸಾಯುವುದರ ಜೊತೆಯಲ್ಲೇ ಅವರ ಮುಂದಿನ ಜನ್ಮವನ್ನು ಅವರ ಹಿಂದಿನ ಜನ್ಮದಲ್ಲಿನ ಪಾಪ, ಪುಣ್ಯ ಕರ್ಮಗಳು ನಿರ್ಧರಿಸುತ್ತವೆ ಎನ್ನುತ್ತಾರೆ. ಅಷ್ಟೇ ಅಲ್ಲ “ಸುಖ ದುಃಖಾದಿ ಫಲ ನಿಮಿತ್ತಂ ಕರ್ಮ ಇತ್ಯೇತಸ್ಮಿನ್ ಪಕ್ಷೇ ಸ್ಥಿತೇ ವೇದ ಸ್ಮೃತಿನ್ಯಾಯಲೋಕ ಪರಿಗೃಹಿತೇ ದೇವೇಶ್ವರಕಾಲಾಸ್ತಾವತ್ ನ ಕರ್ಮಫಲವಿಪರ್ಯಾಸಕರ್ತಾರಃ ಸುಖ ದುಃಖ ಮುಂತಾದ ಫಲಕ್ಕೆ ಕರ್ಮವೇ ಕಾರಣ ಎಂದು ವೇದ, ಸ್ಮೃತಿಗಳು, ನ್ಯಾಯ ಲೋಕಗಳು ಒಪ್ಪಿಕೊಂಡಿವೆ. ಆದ್ದರಿಂದ ದೇವತೆಗಳು, ಈಶ್ವರ, ಕಾಲ ಕೂಡಾ ಅದನ್ನು ಬದಲಾಯಿಸಲಾರವು” ಎನ್ನುತ್ತಾರೆ. ಜನರ ಸುಖ ದುಃಖಗಳಿಗೆ ದೈವ ಕಾರಣವೇ, ಕಾಲ ಕಾರಣವರೆ, ಬದುಕಿನ ವಿವಿಧ ದ್ರವ್ಯಗಳ ಸ್ವಭಾವ ಕಾರಣವೇ ಎಂಬ ವಾದಗಳನ್ನು ಪರಿಶೀಲಿಸುತ್ತಾ ವೇದ, ಸ್ಮೃತಿಗಳು ವಾದಿಸುವಂತೆ “ತತ್ರ ಕರ್ಮಣಃ ಪ್ರಾಧಾನ್ಯಮ್” ಎನ್ನುತ್ತಾರೆ.

ಇಲ್ಲಿ ಅವರು ಹೇಳಿದ ಕರ್ಮ ಫಲವನ್ನು ದೇವತೆಗಳು, ಈಶ್ವರ, ಕಾಲ ಕೂಡಾ ಬದಲಾಯಿಸಲಾರವು ಎನ್ನುವ ಅಂಶ ಬಹಳ ಮುಖ್ಯ. ಕರ್ಮ ಫಲ ಎಂಬುದು ಅಂತಹ ಮೀರಲಾರದ ನಿಯಮ ಎಂದ ಮೇಲೆ ಜ್ಯೋತಿಷ್ಯ, ಮತ್ತೇನೇನೋ ವ್ರತ, ದಾನಗಳಿಂದ ಅದನ್ನು ದೂರ ಮಾಡಲಾಗುವುದೇ?

ಶಂಕರರು ಈ ಉಪನಿಷತ್ತಿನಲ್ಲಿ ವರ್ಣಗಳ ಸೃಷ್ಟಿಗೆ ಸಂಬಂಧಿಸಿದ ಶ್ಲೋಕಗಳಿಗೆ ವಿವರಣೆ ನೀಡುವಾಗ ಹೀಗೆ ಹೇಳಿದ್ದಾರೆ :
ಬ್ರಹ್ಮಣಾ ಸೃಷ್ಟಾ ವರ್ಣಾಃ ಕರ್ಮಾರ್ಥಮ್ / ತಚ್ಛ ಕರ್ಮ ಧರ್ಮಾಖ್ಯಂ ಸರ್ವಾನೇವ ಕರ್ತವ್ಯತಯಾ ನಿಯನೃ ಪುರುಷಾರ್ಥ ಸಾಧನಂ ಚ //
ಬ್ರಹ್ಮದಿಂದ ವರ್ಣಗಳು ಕರ್ಮಕ್ಕಾಗಿ ಸೃಷ್ಟಿಯಾಗಿರುತ್ತವೆ. ಆ ಧರ್ಮವೆಂಬ ಕರ್ಮವು ತನ್ನನ್ನು ಮಾಡಬೇಕೆಂದು ಎಲ್ಲರನ್ನೂ ಕಟ್ಟು ಮಾಡತಕ್ಕದ್ದೂ ಪುರುಷಾರ್ಥ ಸಾಧನವೂ ಆಗಿರುತ್ತದೆ.

ಕರ್ಮಗಳಿಗಾಗಿಯೇ ವರ್ಣಗಳ ಸೃಷ್ಟಿ. ಆಯಾ ವರ್ಣಗಳು ತಂತಮ್ಮ ವರ್ಣದ ಕರ್ಮಗಳನ್ನು ಮಾಡಲೇಬೇಕೆನ್ನುವುದು ಧರ್ಮ. ಅದೇ ಪುರುಷಾರ್ಥಗಳ ಸಾಧನೆಯ ಮಾರ್ಗ. ಅದೇ ಕಟ್ಟಳೆ ಎನ್ನುವಾಗ ಕರ್ಮ ಸಿದ್ಧಾಂತದ ಮೂಲಕ್ಕೆ ಬರುತ್ತಾರೆ. ಮತ್ತು ಮುಂದುವರೆದು ಈ ಉಪನಿಷತ್ತು ಹೇಳುತ್ತದೆ ಆಯಾ ವರ್ಣದವರು ಕೃಷಿಯೇ ಮುಂತಾದ ತಂತಮ್ಮ ಲೌಕಿಕ ಕರ್ಮಗಳನ್ನು ( ಕುಲ ಕಸಬುಗಳನ್ನು) ಮಾಡದೇ ಹೋದರೆ ಅವರ ಕರ್ಮ ಹಾಗೆಯೇ ಉಳಿದುಹೊಗುತ್ತದೆ.  ಅಂದರೆ ಮತ್ತೆ ಅದೇ ವರ್ಣದಲ್ಲಿ ಜನ್ಮವೆತ್ತಿ ಆ ಕರ್ಮವನ್ನು ತೀರಿಸಲೇಬೇಕಾಗುತ್ತದೆ.

ಈ ಉಪನಿಷತ್ತುಗಳ ಕರ್ಮ ಸಿದ್ಧಾಂತ ಹೀಗೆ ಅನಾವರಣಗೊಳ್ಳುತ್ತದೆ : ಜನ್ಮಾರಂಭಕ ಕರ್ಮ ಮತ್ತು ಭೋಗದಾಯಕ ಕರ್ಮ ಎಂದು . ಯಾವ ಜಾತಿಯಲ್ಲಿ ಅಥವಾ ಯಾವ ಜೀವಿಯಾಗಿ ಹುಟ್ಟುವುದು, ಯಾವ ರೂಪ ( ಎತ್ತರ,ಕುಳ್ಳು, ಬಣ್ಣ, ಸುರೂಪ, ಕುರೂಪ) ಪಡೆಯುವುದು, ಎಷ್ಟು ಆಯಸ್ಸು ಎಂಬುದು ಹಿಂದಿನ ಜನ್ಮಗಳ ಸಂಚಿತ ಕರ್ಮದ ಫಲವಾಗಿ ಹುಟ್ಟುವಾಗಲೇ ನಿರ್ಧಾರವಾಗಿ ಬಿಡುತ್ತವೆ.

ವರ್ಣ-ಜಾತಿ ವ್ಯವಸ್ಥೆಯ ಸೃಷ್ಟಿಯಾಗಿರುವುದೇ ವಿವಿಧ ಕರ್ಮಗಳನ್ನು ವಿಧಿಸಿ ಅದನ್ನು ಮಾಡಲೇಬೇಕೆಂಬ ಕಟ್ಟಲೆ ವಿಧಿಸಲು ಎಂಬುದು ವರ್ಣ ವ್ಯವಸ್ಥೆಯ ರಚನೆಯ ಸಮರ್ಥನೆಯಾದ ಒಂದು ಮುಖ್ಯ ವಿಷಯವಾದರೆ ಮತ್ತೊಂದು ಕೀಳು ವರ್ಣ,ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ತಾನು ಆ ಕೀಳು ಜಾತಿಯಲ್ಲಿ ಹುಟ್ಟಿ ಅನುಭವಿಸುತ್ತಿರುವ ಸಂಕಟಗಳಿಗೆ ಅವನೇ /ಳೇ ಕಾರಣ. ಅವನ/ಳ  ಹಿಂದಿನ ಜನ್ಮಗಳ ಪಾಪಗಳ ಸಂಚಯವೇ ಕಾರಣ ಎಂದು ತನ್ನನ್ನು ತಾನೇ ನಿಂದಿಸಿಕೊಳ್ಳಬೇಕಷ್ಟೇ ಹೊರತು ವ್ಯವಸ್ಥೆಯನ್ನಲ್ಲ, ಅದನ್ನು ಸೃಷ್ಟಿಸಿದವರನ್ನಲ್ಲ, ಅದನ್ನು ಇಂದೂ ಬಿಗಿ ಕಟ್ಟಲೆಯಾಗಿ ಹೇರುತ್ತಿರುವವರನ್ನಲ್ಲ. ಅಸ್ಪೃಶ್ಯತೆಯ ಕೀಳ್ತನ,ಅವಮಾನಗಳು  ಅಸ್ಪೃಶ್ಯರ ಪಾಪಗಳ ನಿವಾರಣೆ ಮಾಡುವುದಕ್ಕಾಗಿ. ಒಮ್ಮೆ ನಮ್ಮ ಇಂದಿನ‌ ಪ್ರಧಾನಿ ಮೋದಿಯವರು ಎಂದಂತೆ ಝಾಡಮಾಲಿಗಳು, ಮಲ ಹೊರುವವರು ಇಡೀ ಸಮಾಜದ ಸೇವೆಗೆ, ತಮ್ಮ ಹಿಂದಿನ ಜನ್ಮಗಳ ಪಾಪ ನಿವಾರಣೆಗೆ ತಮಗೆ ಸಿಕ್ಕ ಸದವಕಾಶವೆಂದು ಭಾವಿಸಿ ಸಂತೋಷದಿಂದ ಈ ಕೆಲಸ ಮಾಡಬೇಕು.

ಭೋಗದಾಯಕ ಕರ್ಮ ಎಂದರೆ ಆಯಾ ಜನ್ಮವೆತ್ತಿರುವ ವ್ಯಕ್ತಿಯು ತನ್ನ ಜನ್ಮದಲ್ಲಿ ಅನುಭವಿಸುವ ಸುಖ ದುಃಖಗಳು, ಭಾಗ್ಯ ಸಂಕಟಗಳು, ರೋಗ ರುಜಿನಗಳು, ಆಯಸ್ಸು ಸಾವಿನ ರೀತಿ ಇತ್ಯಾದಿಗಳೆಲ್ಲವೂ ಇದರಲ್ಲಿ ಸೇರುತ್ತವೆ.

ಈ ರೀತಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಅನುಭವಿಸುವ ಕಷ್ಟ ಪರಂಪರೆಗೆ – ಕೂಲಿಕಾರನ ಬಡತನ, ಹಸಿವು, ಜಂಜಾಟಗಳು, ರೈತನು ಬೆಳೆದ ಬೆಲ ಕುಸಿತ, ಗೊಬ್ಬರ, ಔಷಧಿಗಳ ಬಳಕೆ, ಅವುಗಳ ಬೆಲೆ ಏರಿಕೆ,  ಸಾಲಬಾಧೆ, ಆತ್ಮ ಹತ್ಯೆ, ಮಹಿಳೆಯರಾಗಿ ಹುಟ್ಟುವುದರಿಂದಲೇ ಅನುಭವಿಸುವ ಸಂಕಟ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳೆಲ್ಲವಕ್ಕೂ ಈ ವ್ಯವಸ್ಥೆ, ರಾಜ ಪ್ರಭುತ್ವದ ರಾಜರು, ಪ್ರಜಾ ಪ್ರಭುತ್ವದ ಭ್ರಷ್ಟ ರಾಜಕಾರಣಿ ಯಾರನ್ನೂ ದೂರುವಂತಿಲ್ಲ. ಸಿಡಿದೇಳುವಂತಿಲ್ಲ ಅನುಭವಿಸಬೇಕಷ್ಟೇ !

ಇದರ ಬಗ್ಗೆ ಸಂಸ್ಕೃತ ಹಾಗೂ ತತ್ವಶಾಸ್ತ್ರದ ವಿದ್ವಾಂಸರಾದ ಪ್ರೊ.ಹಿರಿಯಣ್ಣನವರು ತಮ್ಮ ತತ್ವಶಾಸ್ತ್ರದ ರೂಪುರೇಖೆಗಳು ಎಂಬ ಪುಸ್ತಕದಲ್ಲಿ ಹೇಳುತ್ತಾರೆ : ” ಈ ಸಿದ್ಧಾಂತವು  ಪ್ರದರ್ಶಿಸಿ ತೋರಿಸಬಹುದಾದ ಸತ್ಯವನ್ನು ಒಳಗೊಂಡಿದೆ ಎಂದು ಭಾವಿಸುವಂತಿಲ್ಲ. ಅದು ನಮ್ಮಲ್ಲಿ ಹುಟ್ಟಬಹುದಾದ ಕಹಿ ಭಾವನೆಯನ್ನು ಹೋಗಲಾಡಿಸುತ್ತದೆ. “

ರಾಮಕೃಷ್ಣಾಶ್ರಮದ ಮಾಧವಾನಂದರು ರಾಧಾಕೃಷ್ಣನ್‌ರವರು ಪ್ರಧಾನ ಸಂಪಾದಕರಾದ ಯುಗಯಾತ್ರೀ ಭಾರತೀಯ ಸಂಸ್ಕೃತಿಯ ಮೊದಲನೆಯ ಸಂಪುಟಕ್ಕೆ ಬರೆದ ಲೇಖನದಲ್ಲಿ ಹೀಗೆ ವಿಶ್ಲೇಷಿಸುತ್ತಾರೆ : “ಮಾನವನಿಗೆ ತನ್ನ ಈಗಿನ ಅವಸ್ಥೆಗೆ ತನ್ನನ್ನು ತಾನೇ ಅಭಿನಂದಿಸಿಕೊಳ್ಳಬೇಕು ಅಥವಾ  ನಿಂದಿಸಿಕೊಳ್ಳಬೇಕು. ಏಕೆಂದರೆ ಕರ್ಮ ನಿಯಮವು ಕಠೋರವಾದದು. “

ಒಟ್ಟಿನಲ್ಲಿ ಮಾನವರು ತಮ್ಮ ಪರಿಸ್ಥಿತಿಗೆ ಕಾರಣವಾದ ವ್ಯವಸ್ಥೆಯನ್ನು ಹೊಣೆ ಮಾಡಿ , ಕಾರಣರಾದವರನ್ನು ಗುರಿ ಮಾಡಿ ಯಾವ ಆಂದೋಲನ, ಚಳುವಳಿ, ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ. ಹೆಚ್ಚೆಂದರೆ ಜ್ಯೋತಿಷ್ಕರನ್ನು ಕೇಳಿ, ಗೋದಾನ,ಭೂದಾನ ಮೊದಲಾದ ಶೋಡಶ ದಾನಗಳನ್ನು ಮಾಡಿ , ಯಾಗ,ಪೂಜೆ ಮೊದಲಾದ ಸತ್ಕಾರ್ಯಗಳನ್ನು  ಮಾಡಿ.ದೇವರ ಭಜನೆ ಮಾಡಿ, ಒಳ್ಳೆಯ ಮುಂದಿನ ಜನ್ಮ ಪಡೆದು, ಭೋಗಗಳನ್ನು ಅನುಭವಿಸುವ ಅವಕಾಶ ಪಡೆಯಿರಿ.

ಮಾನವ ಜನ್ಮ ದೊಡ್ಡದೋ ,ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ !

ಕೊನೆಯಲ್ಲಿ ಒಂದೆರಡು ಪ್ರಶ್ನೆಗಳು : ಕರ್ಮ ಸಿದ್ಧಾಂತದ ಪ್ರಕಾರ ಡಾ. ಅಂಬೇಡ್ಕರ್‌ರವರು ಹಿಂದಿನ ಜನ್ಮಗಳಲ್ಲಿ ಮಾಡಿದ ಸಂಚಿತ ಪುಣ್ಯಕರ್ಮ ಫಲವಾಗಿ ಮನುಷ್ಯರಾಗಿ ಹುಟ್ಟಿದರು. ಅವುಗಳಲ್ಲಿ ಮಾಡಿದ ಸಂಚಿತಪಾಪಕರ್ಮಗಳ ಫಲವಾಗಿ ಅಸ್ಪೃಶ್ಯರಾಗಿ ಹುಟ್ಟಿದರು. ಪ್ರಾರಬ್ಧ ಕರ್ಮಗಳ ಫಲವಾಗಿ ಕಷ್ಟ, ಅವಮಾನಗಳನ್ನು ಅನುಭವಿಸಿದರು. ಆ ಜನ್ಮಗಳಲ್ಲಿ ಮಾಡಿದ ಪುಣ್ಯ ಕಾರ್ಯಗಳ ಫಲವಾಗಿ ಅವರ ಪ್ರಾರಬ್ಧ ಕರ್ಮ ಅವರಿಗೆ ಒಳ್ಳೆಯ ವಿದ್ಯಾಭ್ಯಾಸ, ಹುದ್ದೆ, ಗೌರವ, ಜೀವನ ದೊರಕಿತು. ಅವುಗಳನ್ನು ಉಪಯೋಗಿಸಿ ಕೋಟ್ಯಾಂತರ ಜನರಿಗೆ ಉಪಕಾರ ಮಾಡಿ ಆಗಾಮಿ ಪುಣ್ಯ ಕರ್ಮ ಗಳಿಸಿದರು. ಆದರೆ ಅವರು ಅವರ ವರ್ಣ ನಿರ್ದೇಶಿತ ಕೀಳು ಕುಲಕಸಬು ಮಾಡದೆ ಆ ಕರ್ಮವನ್ನು ಮಾಡಬೇಕಾದ ಬಾಕಿ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಅದು ಮಹಾಪಾಪವಲ್ಲವೇ ?  ಅಂದ ಮೇಲೆ ಅವರ ಮುಂದಿನ ಜನ್ಮವೂ ಅಸ್ಪೃಶ್ಯರಾಗಿ ಅವರ ಕೀಳು ಕುಲಕಸಬನ್ನು ಮಾಡದೇ ತಪ್ಪಿಸಿಕೊಳ್ಳುವಂತಿಲ್ಲ. ಆದರೆ ಅವರು ಮಾಡಿದ ಅಸಂಖ್ಯ ಪರೋಪಕಾರದ ಗತಿ ಏನು ?  ಅಥವಾ ಬೌದ್ಧರಾದದ್ದರಿಂದ ಆ ಧರ್ಮದ ಪ್ರಕಾರ ಅವರು ಮುಂದಿನ ಜನ್ಮದಲ್ಲಿ ಬೌದ್ಧ ಬೋಧಿಗಳಾಗಿ ಹುಟ್ಟುವರೆ?

ಓ ! ತಲೆ ಚಿಟ್ಟು ಹಿಡಿದು ಹೋಯಿತು ! ನೀವ್ಯಾರಾದರೂ ಬಿಡಿಸುವಿರಾ ಈ ಕಾಂಪ್ಲೆಕ್ಸ್ ಒಗಟನ್ನು !

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: