ಜಿ ಎನ್ ನಾಗರಾಜ್ ಅಂಕಣ – ಚರಕರ ವೈದ್ಯ – ವಚನಗಳ ಸಮಾನತೆ ಎಲ್ಲಿಂದೆಲ್ಲಿಯ ಸಂಬಂಧ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

45

ಮೂತ್ರ ವಿಸರ್ಜನೆ ಮತ್ತು ಲೈಂಗಿಕ ಅವಯವಗಳಾದ ಗುಪ್ತಾಂಗಗಳು ಮತ್ತು ಮಲ ವಿಸರ್ಜನಾಂಗವಾದ ಗುದಕ್ಕೂ ಕಣ್ಣು, ಮೂಗು, ನಾಲಿಗೆಗಳ ಜೊತೆ ಸಮಾನ ಸ್ಥಾನ ನೀಡುವ ಮೂಲಕ ಸಮಾಜದಲ್ಲಿ ವಿವಿಧ ಸಮುದಾಯಗಳು, ಜಾತಿಗಳ ಸಮಾನತೆಯನ್ನು ಕಂಡುಕೊಂಡ ಈ ಅಪೂರ್ವ ದೇಹ ವಿಜ್ಞಾನದ ಮೂಲ ಯಾವುದು ? ದೇಹದ ಅಂಗಾಂಗಳನ್ನೆಲ್ಲ ಪಂಚವಿಂಶತಿ ಎಂಬ  ಧಾರ್ಮಿಕ ತತ್ವಗಳೆಂದು ಭಾವಿಸಿದ ವಚನ ವೈಚಾರಿಕತೆಯ ಉಗಮ ಎಲ್ಲಿ ಎಂದು ಹುಡುಕಲಾರಂಭಿಸಿದೆ.

ವಚನಗಳ ಬಗ್ಗೆ, ಅವುಗಳ ಸಾಹಿತ್ಯಿಕ ವಿಶೇಷತೆಗಳ ಬಗ್ಗೆ, ಸಾಮಾಜಿಕವಾಗಿ ಕ್ರಾಂತಿಕಾರಿಯಾದ ಆಶಯಗಳ ಬಗ್ಗೆ ಬಹಳ ಆಸ್ಥೆಯಿಂದ ಬರೆದ ಸಾಹಿತಿಗಳು ಮತ್ತು ಇತರ ವಿಷಯಗಳ ವಿದ್ವಾಂಸರ ಯಾವ ಬರಹದಲ್ಲಿಯೂ ಇವುಗಳ ವಿವರಣೆ ಕಾಣಲಿಲ್ಲ. ಎಲ್. ಬಸವರಾಜುರವರು ಮಾತ್ರ ಈ ತತ್ವಗಳ ವಿವರಗಳನ್ನು ಟಿಪ್ಪಣಿಗಳಲ್ಲಿ ನೀಡಿದ್ದಾರೆ. ವಚನಗಳಲ್ಲಿ ಬರುವ ಪದಗಳನ್ನು ಅರ್ಥೈಸಿಕೊಳ್ಳಲು ಉಪಯುಕ್ತ ಎಂಬ ಕಾರಣಕ್ಕಾಗಿ. ಈ ಬಗ್ಗೆ ಪೇಚಾಡುತ್ತಾ ವಿವಿಧ ವಿವಿಗಳ ಮತ್ತಿತರ ಗ್ರಂಥ ಬಂಢಾರಗಳನ್ನು ಸೋಸುತ್ತಿರುವಾಗ ಒಮ್ಮೆ ಕೆಲ ವರ್ಷದ ಹಿಂದೆ ನಮ್ಮನ್ನಗಲಿದ ಮಠಗಳಲ್ಲಿ ಪ್ರಗತಿಪರತೆಯ ಸೆಲೆ ತುಂಬಿದ ಗದಗದ ತೋಂಟದಾರ್ಯ ಸ್ವಾಮೀಜಿಯವರು ವಚನಗಳ ತಾತ್ವಿಕತೆಯ ಬಗ್ಗೆ ನನ್ನ ಹುಡುಕಾಟದ ಬಗ್ಗೆ ತಿಳಿದುಕೊಂಡು ಒಮ್ಮೆ ಗೌರವ ಎಂಬ ಗ್ರಂಥವನ್ನು ಅಭಿಮಾನಪೂರ್ವಕವಾಗಿ ಅಂಚೆಯಲ್ಲಿ ಕಳಿಸಿದರು.

ಇದು 1986 ರಲ್ಲಿ ಪ್ರಕಟವಾದ ಅವರ ಮಠದ  ಪ್ರಕಟಣೆ. ಎಸ್ ಎಸ್ ಭೂಸನೂರಮಠರಿಗೆ ಅರ್ಪಿಸಿದ ಗೌರವ ಗ್ರಂಥ. ಇದರ ವಿಷಯ ವಿನ್ಯಾಸ ಎಂ.ಎಂ ಕಲಬುರ್ಗಿಯವರಂತೆ. ಅದರಲ್ಲಿ ವಚನಕಾರರದೆಂದು ಪ್ರಚಲಿತವಾದ ವಚನೇತರ ಸಾಹಿತ್ಯದ ಬಗ್ಗೆ ವಿವರಗಳನ್ನೊಳಗೊಂಡ ಬರಹಗಳಲ್ಲಿ ಬಿ.ವಿ. ಶಿರೂರ, ಬಿ.ನಂ.ಚಂದ್ರಯ್ಯ, ಎಸ್.ವಿದ್ಯಾಶಂಕರ್ ರವರ ಲೇಖನಗಳು, ಈ ದೇಹ ವಿಜ್ಞಾನದ ಬಗ್ಗೆ ವಚನಕಾರರ ತಿಳುವಳಿಕೆಯನ್ನು ಒಳಗೊಂಡಿವೆ. ಮತ್ತೆ ಕೆಲವು ಲಿಂಗಾಯತ, ವೀರಶೈವ ಮಠಗಳು ಈ ವಿಷಯಗಳ ಬಗ್ಗೆ ಧಾರ್ಮಿಕ ವಿದ್ವಾಂಸರ ‌ಬರಹಗಳನ್ನು ಪ್ರಕಟಿಸಿವೆ.  ಕಲಬುರಗಿಯವರದೇ ನಿರ್ದೇಶನದಂತೆ ಅವರು ಕನ್ನಡ ವಿವಿಯ ಉಪಕುಲಪತಿಗಳಾಗಿದ್ದಾಗ ಪ್ರಕಟಿಸಿದ ಬಸವಯುಗದ ವಚನೇತರ ಸಾಹಿತ್ಯ ಎಂಬ ಗ್ರಂಥ ಈ ವಿಷಯಗಳ ಬಗ್ಗೆ ವಚನಕಾರರು ಬರೆದರೆನ್ನಲಾದ ಮೂಲ ಸಾಹಿತ್ಯವನ್ನು ಒಳಗೊಂಡಿದೆ.

ಈ ಹುಡುಕಾಟ ಕರ್ನಾಟಕದ ಲಿಂಗಾಯತ ಮಠಗಳು ಪ್ರಕಟಿಸಿರುವ ಧಾರ್ಮಿಕ ಪುಸ್ತಕಗಳಿಂದ ಆರಂಭಿಸಿ, ಅವುಗಳು ನೀಡಿದ ಸೂಚನೆಯಂತೆ ತಮಿಳು ಶೈವ, ಕಾಶ್ಮೀರ ಶೈವ ಗ್ರಂಥಗಳ ಕಡೆಗೆ, ಕೊನೆಗೆ ವೇದಾಗಮಗಳೆಂದು ವೇದಗಳ ಜೊತೆ ಜೊತೆಗೆ ಸೇರಿಸಿ ಪ್ರಸ್ತಾಪಿಸಲ್ಪಡುವ ಆಗಮಗಳೆಂಬ ವಿಪುಲ ಸಾಹಿತ್ಯದ ಕಡೆಗೆ ಒಯ್ದಿತು. ಆದರೆ ಅವುಗಳೂ ಮೂಲವಲ್ಲ ಎಂದು ತಿಳಿಯಲಾಗಿ ಮತ್ತೆ ಶೋಧ ನಡೆಸಿದಾಗ ಅದು ಚರಕ ಸಂಹಿತೆಯತ್ತ ಕೊಂಡೊಯ್ದಿತು. ದೇಹ ರಚನೆಯ ವಿಜ್ಞಾನದ ಮೂಲ ಅತ್ಯಂತ ಪ್ರಾಚೀನ ವೈದ್ಯಕೀಯ ಗ್ರಂಥವಾದ ಚರಕ ಸಂಹಿತೆಯಲ್ಲಿ ಕಂಡದ್ದು ಬಹಳ ಸಹಜವೇ ಅಲ್ಲವೇ ?

ಚರಕ ಸಂಹಿತೆಯ ಶರೀರ ಸ್ಥಾನವೆಂಬ ಅಧ್ಯಾಯದಲ್ಲಿ ಹೀಗಿದೆ :
ಪುನಶ್ಚ ಧಾತುಬೇಧೇನ
ಚತುರ್ವಿಂಶಾತಿಕಾ ಸ್ಮೃತಃ/  ಮನೋ
ದಶೇಂದ್ರಿಯಾಣ್ಯಾರ್ಥಾಃ ಪ್ರಕೃತಿಶ್ಚಾಷ್ಟಾಧಾತುಕಿ //( ಶರೀರ ಸ್ಥಾನ 1- 17)


ಚತುರ್ವಿಂಶಿಕಾ ಎಂಬ ಮನಸ್ಸು, ದಶೇಂದ್ರಿಯಗಳು ( ಐದು ಜ್ಞಾನೇಂದ್ರಿಯಗಳು,ಐದು ಕರ್ಮೇಂದ್ರಿಯಗಳು), ಐದು ಜ್ಞಾನೇಂದ್ರಿಯಗಳ ವಿಷಯಗಳು ಮತ್ತು ಎಂಟು ಧಾತುಗಳಿಂದ ( ಪಂಚ ಭೂತಗಳು, ಮಹತ್, ಅಹಂ ಮತ್ತು ಅವ್ಯಕ್ತದಿಂದ ) ಕೂಡಿದ ಪ್ರಕೃತಿ ಇರುವ ಧಾತು ಬೇಧಗಳ ವಿಂಗಡಣೆಯೂ ಇದೆ. ಮುಂದೆ ಮನಸ್ಸು, ಬುದ್ಧಿ ಇವುಗಳು ಹೇಗೆ ಕೆಲಸ ಮಾಡುತ್ತದೆ. ಹೊರಗಣ ಪ್ರಪಂಚವನ್ನು  ಇಂದ್ರಿಯಗಳು ಕಂಡದ್ದನ್ನು ಅರ್ಥೈಸುವಲ್ಲಿ ಅವುಗಳ ಪಾತ್ರವೇನು ಎಂಬ ವೈಜ್ಞಾನಿಕ ವಿವರಣೆ ಇದೆ. ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು – ಅವುಗಳಲ್ಲಿ ಮಲ ಮೂತ್ರ ವಿಸರ್ಜನಾಂಗಗಳ ಅಗತ್ಯದ ಬಗ್ಗೆ ವಿವರಣೆ ಇದೆ. ( ಪಾಯುಪಸ್ಥಂ ವಿಸರ್ಜನಾರ್ಥಂ ಹಸ್ತೌ ಗ್ರಹಣಾಧಾರಿಣೇ  ಶರೀರ ಸ್ಥಾನ 1-26  ಗುದ,ಗುಹ್ಯ ವಿಸರ್ಜನೆಗಾಗಿ ಮತ್ತು ಕೈಗಳು ವಸ್ತುಗಳನ್ನು ಹಿಡಿದುಕೊಳ್ಳಲೋಸುಗ) ಆಯುರ್ವೇದಕ್ಕೆ ಈ 24 ಧಾತುಗಳಿಂದ ಕೂಡಿದ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಅಂಗಗಳಿಲ್ಲದೆ ಜ್ಞಾನವಿಲ್ಲ, ಕಾರ್ಯವಿಲ್ಲ ಎಂದೆನ್ನುತ್ತದೆ ಚರಕ ಸಂಹಿತೆ.

ಹಾಗೆಯೇ ವಚನಗಳಲ್ಲಿ ವಿವರಿಸಿದಂತೆ ಪಂಚ ಭೂತಗಳು ಒಂದೊಂದೂ ವಿಭಿನ್ನ ಗುಣಗಳನ್ನು ಹೊಂದಿವೆ. ಆಕಾಶ ಒಂದು ಗುಣವನ್ನು ( ಶಬ್ದ ಸಂವಹನ ) ಪಡೆದಿದ್ದರೆ ವಾಯು ಎರಡನ್ನು, ಅಗ್ನಿ ಮೂರನ್ನು, ನೀರು ನಾಲ್ಕು ಗುಣಗಳನ್ನು, ಭೂಮಿ ಐದೂ ಗುಣಗಳನ್ನೂ ಹೊಂದಿದೆ ಎಂಬ ವಿವರಗಳನ್ನು ಕೂಡಾ ಚರಕ ಸಂಹಿತೆ ನೀಡಿದೆ.
ಮತ್ತೊಂದು ಬಹು ಮುಖ್ಯವಾದ ತತ್ವ, ಹಲವಾರು ವಚನಗಳಲ್ಲಿ ಮತ್ತೆ ಮತ್ತೆ ಕಾಣುವುದು ಪಿಂಡಾಂಡ ಮತ್ತು ಬ್ರಹ್ಮಾಂಡಗಳ ಸಂಬಂಧ. (ಪಿಂಡಾಂಡವೆಂದರೆ ದೇಹ, ಬ್ರಹ್ಮಾಂಡವೆಂದರೆ ಲೋಕ )  ಬ್ರಹ್ಮಾಂಡದಲ್ಲಿರುವುದೆಲ್ಲ ಪಿಂಡಾಂಡದಲ್ಲಿದೆ. ಪಿಂಡಾಂಡದಲ್ಲಿರುವುದೆಲ್ಲ ಬ್ರಹ್ಮಾಂಡದಿಂದಲೇ ಆಗಿದೆ ಎಂಬುದು.


ಹಡಪದ ಅಪ್ಪಣ್ಣನೆಂಬ ಬಸವ ಯುಗದ  ವಚನಕಾರ ಹೇಳುವಂತೆ:
“…ದೃಕ್ಕು,ದೃಶ್ಯ,ನಿಜವೆಂಬ ತ್ರಿಕರಣವ ಏಕವ ಮಾಡಿ
ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು… ” ( ಸಂಪುಟ 9, ವಚನ ಸಂಖ್ಯೆ 1017)
ಪ್ರಸಿದ್ಧ ವಚನಕಾರ. ಸಿದ್ಧರಾಮಣ್ಣನ ವಚನ ಹೀಗಿದೆ :
“ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೇ”

ಬಾಲಸಂಗಯ್ಯ ಅಪ್ರಮಾಣದೇವನೆಂಬ ವಚನಕಾರನಂತೂ ಪುರಾಣಗಳಲ್ಲಿ ಹೇಳಲಾಗುವ ಅತಳ ವಿತಳ, ಭೂಲೋಕ, ಸುವರ್ಲೋಕ ಎಂಬ ಹದಿನಾಲ್ಕು ಲೋಕಗಳೂ ಈ ಸಪ್ತ ಧಾತುಗಳಿಂದಾದ ದೇಹದಲ್ಲಿಯೇ ಇದೆ ಎನ್ನುತ್ತಾನೆ :
” ಸಪ್ತಧಾತುಗಳಿಂದ ದೇಹವಾಗಿ ಬೆಳೆದ ಪಿಂಡ ಆಪಾದ ಮಸ್ತಕವೆಲ್ಲ ಬ್ರಹ್ಮಾಂಡ ಸಂಗ್ರಹವಾಗಿ ತೋರ್ಪುದೆಂತೆಂದೆಡೆ  :
ಪಾದತಳದಲ್ಲಿ ಅತಳ ಲೋಕ
ಜಂಘೆಯಲ್ಲಿ ಸುತಳ ಲೋಕ…

ಹೀಗೆ ಪಾದಗಳಿಂದ ಆರಂಭಿಸಿ ತಲೆಯವರೆಗೆ ಬೇರೆ ಬೇರೆ ಅಂಗಗಳಲ್ಲಿ ಈ ಲೋಕಗಳು ಹುದುಗಿದ್ದಾವೆ. ಮತ್ತೆ ಬೇರೆ ಲೋಕಗಳ ಚಿಂತೆಯೇಕೆ , ಈ ದೇಹವೇ ಎಲ್ಲಾ ಲೋಕಗಳ ಸಂಕೇತ ಎನ್ನುತ್ತಾನೆ.

ಮಾನವರ ಉಗಮ ಈ ಲೋಕದೊಳಗಿನ ವಸ್ತುಗಳಿಂದಲೇ ಹೊರತು ಲೋಕದ ಹೊರಗಿನ ವಸ್ತುಗಳಿಂದಲ್ಲ ಎಂದು ಈ‌ ತತ್ವ ಸೂಚಿಸುತ್ತದೆ. ಚರಕ ಸಂಹಿತೆ ಈ ಅಂಶವನ್ನು ಒತ್ತಿ ಹೇಳಿದೆ. ಒಂದು ಕಡೆ ವೈದ್ಯಕೀಯ ಚಿಕಿತ್ಸೆಯಲ್ಲಿ ಈ ತತ್ವ ಬಹಳ ಮಹತ್ವದ್ದು. ಅದೇ ಸಮಯದಲ್ಲಿ ವಚನಗಳು ಪ್ರತಿಪಾದಿಸಿದ ಸಾಮಾಜಿಕ ಸಮಾನತೆಗೂ ಕೂಡಾ ಮುಖ್ಯವಾದುದು. ಚರಕ ಸಂಹಿತೆಯ ಪ್ರಕಾರ ಮನುಷ್ಯ ದೇಹವೂ ಪಂಚಭೂತಗಳಿಂದ ಆಗಿದೆ. ಅವರ ಕ್ರಿಯಾಶೀಲತೆಗೆ ಕಾರಣವಾದ ಆಹಾರ ವಸ್ತುಗಳ ರಚನೆಯೂ ಪಂಚಭೂತಗಳಿಂದ ಕೂಡಿದೆ. ಆದ್ದರಿಂದ ಯಾವುದೇ ರೋಗಗಳ ಕಾರಣವೂ ಇವುಗಳ ಸಂಬಂಧದಲ್ಲಿ ಆದ ಏರು ಪೇರುಗಳಿಂದ ಸಂಭವಿಸಿದ್ದು.
ವೈದಿಕ ತತ್ವಶಾಸ್ತ್ರದಂತೆ ಯಾವುದೇ ಹೊರಗಿನ ಶಕ್ತಿಯಿಂದಲ್ಲ. ದೈವದ ಪಾತ್ರ ಅಲ್ಲಿಲ್ಲ. ವ್ಯಕ್ತಿಗಳ ಪೂರ್ವ ಜನ್ಮದ ಕರ್ಮ- ಪಾಪ ಪುಣ್ಯಗಳ ಪಾತ್ರವೂ ಇಲ್ಲ. ಆದ್ದರಿಂದ ರೋಗ ಕಾರಣವನ್ನು ಈ ಸಂಬಂಧದಲ್ಲಾದ ವ್ಯತ್ಯಾಸವನ್ನು ಶೋಧಿಸಬೇಕು. ಈ ಲೋಕದಲ್ಲಿ ಲಭ್ಯವಿರುವ , ದೇಹ,ಆಹಾರಗಳಂತೆ ಪಂಚಭೂತಗಳಿಂದಲೇ ಆಗಿರುವ ವಸ್ತುಗಳಿಂದಲೇ ರೋಗಗಳನ್ನು ಗುಣಪಡಿಸಬೇಕು ಎಂಬುದು ಅದರ ವೈದ್ಯಕೀಯ ಮಹತ್ವ.

ವಚನಕಾರರಿಗೆ ಭೂಮಿಯ ಮೇಲಣ ಎಲ್ಲ ವಸ್ತುಗಳೂ ಪಂಚಭೂತಗಳಿಂದಲೇ ಆಗಿದೆ. ಅಂದಮೇಲೆ ಎಲ್ಲ ಮಾನವರ ಶರೀರವೂ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಎಲ್ಲರೂ ಸಮಾನ ಎಂಬ ಮಹತ್ವ ಈ ತತ್ವಕ್ಕಿದೆ.
ಈ ತತ್ವದ ಮತ್ತೊಂದು ಮಹತ್ವವೆಂದರೆ ಪಂಚಭೂತಗಳಿಂದಲೇ ನಿರ್ಜೀವ ವಸ್ತುಗಳೂ, ಜೀವ ಇರುವ ವಸ್ತುಗಳೂ ಅಸ್ತಿತ್ವಕ್ಕೆ ಬಂದಿವೆ. ದೇಹ ಮಾತ್ರವಲ್ಲ ಜೀವದ ಉಗಮ ಕೂಡಾ ಪಂಚಭೂತಗಳಿಂದಲೇ.  ಜ್ಞಾನದ ಮೂಲಗಳಾದ ಇಂದ್ರಿಯಗಳು ಮಾತ್ರವಲ್ಲದೆ ಬುದ್ಧಿ, ಮನಸ್ಸು ಕೂಡಾ ಪಂಚಭೂತಗಳಿಂದಲೇ ಆಗಿದೆ. ಮನುಷ್ಯರ ಚಿಂತನೆಯ ಮೂಲವೂ, ಮಾನವರ ಪ್ರತಿಭೆ, ಮೇಧಾ ಶಕ್ತಿ ( ಬುದ್ಧಿವಂತಿಕೆ )ಯ ಮೂಲ ಕೂಡಾ ಪಂಚಭೂತಗಳಿಂದಾದ ಆಹಾರ ವಸ್ತುಗಳೇ ಎಂಬುದು ಅಂದಿಗೆ ಬಹು ಮುಖ್ಯ ಶೋಧ. ಆಹಾರದಿಂದಲೇ ಇವುಗಳ ಉತ್ಪತ್ತಿ ಎಂದಾಗ ಆಹಾರದ ಕೊರತೆಯೇ ಪ್ರತಿಭೆ, ಬುದ್ಧಿವಂತಿಕೆಯ ಕೊರತೆಗಳಿಗೆ ಕಾರಣ ಎಂಬುದು, ಅವರ ಕೀಳು ಜನ್ಮವಲ್ಲ, ಪೂರ್ವ ಜನ್ಮದ ಕರ್ಮ ಫಲವಲ್ಲ ಎಂಬುದು ಇಂದಿಗೂ ಎಲ್ಲರೂ ಮನಸ್ಸಿನ ಆಳಕ್ಕೆ ಇಳಿಸಿಕೊಳ್ಳಬೇಕಾದ ವಿಷಯವಲ್ಲವೇ ?

ಹಾಗೇಯೇ ಜೀವ , ಪ್ರಾಣ ಎಂಬುದರ ಮೂಲವನ್ನು ವೈದಿಕ ಧರ್ಮ, ಉಪನಿಷತ್ತುಗಳು ಮೊದಲಾದ ಧರ್ಮ ಗ್ರಂಥಗಳು ಬೇರೆ ಯಾವ್ಯಾವುದಕ್ಕೋ ಅರ್ಪಿಸಿವೆ. ಆದರೆ ಚರಕ ಸಂಹಿತೆ ಪ್ರಾಣಾಃ ಪ್ರಾಣಭೂತಮ್ ಅನ್ನಮ್ ಎನ್ನುತ್ತದೆ. ದೇಹ ಮಾತ್ರವಲ್ಲ ಪ್ರಾಣವೆಂಬುದು ಕೂಡಾ ಅನ್ನದಿಂದಲೇ ಹುಟ್ಟಿದ್ದು ಎಂಬ ಚಿಂತನೆ ಅದು.
ಚರಕ ಸಂಹಿತೆ ಮಾನವರು ಸೇವಿಸಿದ ಆಹಾರದ ಜೀರ್ಣ ಕ್ರಿಯೆಯ ಬಗ್ಗೆ ಸಾಕಷ್ಟು ಶೋಧ ನಡೆಸಿದೆ. ವಚನಗಳ ಸಂದರ್ಭದಲ್ಲಿ ಒಂದು ಅಂಶ ಮಹತ್ವದ್ದಾಗಿದೆ. ಆಹಾರವನ್ನು ಸ್ವೀಕರಿಸಿದ ಮೇಲೆ ಅದು ಎರಡು ಭಾಗಗಳಾಗುತ್ತವೆ. ಅದರಲ್ಲಿ ಒಂದು ದೇಹದ ಅಂಗಾಂಗಗಳನ್ನು ಪ್ರವೇಶಿಸುವ ಅಂಶ ಅದಕ್ಕೆ ಪ್ರಸಾದವೆಂದು ಹೆಸರು. ಮತ್ತೊಂದು ವಿಸರ್ಜನೆ ಮಾಡಲಾಗುವ ಅಂಶ. ಅದಕ್ಕೆ ಮಲ ಅಥವಾ ಕಿಟ್ಟ ಎಂದು ಹೆಸರು. ಪ್ರಸಾದದಿಂದಲೇ ಶರೀರ ರೂಪುಗೊಳ್ಳುವುದು. ವಚನಕಾರರು ಮತ್ತು ಅವರನ್ನನುಸರಿಸಿ ಎಲ್ಲ ಲಿಂಗಾಯತರು  ಪ್ರಸಾದ ಎಂಬ ಮಾತನ್ನು ಬಹಳ ಬಳಸುತ್ತಾರೆ ಎಂಬುದು ಬಹಳ ಜನರ ಗಮನಿಸಿರಬಹುದು. ವಚನಕಾರರು ಆಹಾರಕ್ಕೆ ಬಹಳ ಮಹತ್ವ ನೀಡುತ್ತಾರೆ. ಉಪವಾಸ ವ್ರತಗಳನ್ನು ನಿರಾಕರಿಸುತ್ತಾರೆ. ಅವರ ಧಾರ್ಮಿಕ ಸಿದ್ಧಾಂತಗಳಲ್ಲಿನ ಒಂದು ಮುಖ್ಯ‌ ತತ್ವ ದಾಸೋಹ. ಎಲ್ಲ ಮಾನವರಿಗೂ‌ ಆಹಾರ ಲಭ್ಯವಾಗಬೇಕು. ತಾನು ಊಟ ಮಾಡುವ ಮೊದಲು ಯಾರಾದರೂ ಹಸಿದವರಿದ್ದರೆ ಅವರಿಗೆ ಆಹಾರ ನೀಡಿ ಉಣಬೇಕು ಎಂದು ಅದು ಸಾರುತ್ತದೆ.  

ವಚನಕಾರರ ಧಾರ್ಮಿಕ ಸಿದ್ಧಾಂತಗಳಲ್ಲಿ ಮತ್ತೊಂದು ಮುಖ್ಯ  ಅಂಗವಾದ ಷಟ್ಸ್ಥಲಗಳಲ್ಲಿ ಒಂದಕ್ಕೆ ಪ್ರಸಾದಿ ಸ್ಥಲ ಎಂದೂ ಹೆಸರು. ವಚನಗಳಲ್ಲಿ ಮಾನವ ಶರೀರವನ್ನು ಪ್ರಸಾದ ಕಾಯ ಎಂದೂ ಗುರುತಿಸುತ್ತಾರೆ. ಪ್ರಸಾದ ಎಂಬುದು ಚರಕ ಸಂಹಿತೆಯನ್ನು ಹೇಗೆ ಪ್ರವೇಶಿಸಿತೋ ತಿಳಿಯದು. ಅಲ್ಲಿಯ ಅರ್ಥ ಮಾತ್ರ ಜೀರ್ಣವಾಗಿ ಶರೀರವನ್ನು ಪ್ರವೇಶಿಸಿ ಅದರ ಕ್ರಿಯೆ ಮತ್ತು ರಚನೆಗೆ ಆಧಾರವಾಗುವ ಸಾರಭೂತ ಅಂಶ ಎಂದು ಹೆಸರು. ಶರಣರು ಈ ಪದಕ್ಕೆ ದಿನನಿತ್ಯವೂ ಶಿವನ ಪ್ರಸಾದ ಎಂಬ ಅರ್ಥವನ್ನು ಕಲ್ಪಿಸುತ್ತಾರೆ. ಆದರೆ ಅದು ಇಂತಹ ವೈಜ್ಞಾನಿಕ ಮೂಲದಿಂದ ಬಂದಿದೆ. ವಚನಗಳ ಈ ಅಂಗ ತತ್ವಗಳ ಆಕರವನ್ನು ಹುಡುಕುತ್ತಾ ಹೋದರೆ ಅದು ತಮಿಳುನಾಡಿನ ಶೈವ ಧರ್ಮದ ಕಡೆಗೆ ಒಯ್ಯುತ್ತದೆ. ಹಲವು ಶರಣರ ವಚನಗಳಲ್ಲಿ ಪುರಾತನರ ಸ್ಮರಣೆ ಇದೆ. ಇದನ್ನು ಬಸವಣ್ಣನವರು ಮತ್ತು‌ ಅವರ ಸಮಕಾಲೀನರು ಅವರಿಗಿಂತ ಮುಂದೆ ವಚನಗಳನ್ನು ರಚಿಸಿದ , ಈ ತತ್ವಗಳನ್ನು ಬಿತ್ತರಿಸಿದ ಶರಣರನ್ನು ಉದ್ದೇಶಿಸಿ ಕೆಲವೆಡೆ ಹೇಳಿದ್ದಾರೆ. ಆದರೆ ಅವರ ವಚನಗಳಲ್ಲಿ ಬಹುತೇಕ ಕಡೆಗಳಲ್ಲಿ ಇದು ತಮಿಳುನಾಡಿನ ಶೈವ ನಾಯನಾರುಗಳನ್ನು ಇದು ಸೂಚಿಸುತ್ತದೆ. ಈ ಧಾರ್ಮಿಕ ಪಂಥ ವಚನಕಾರರಿಗಿಂತ ನಾಲ್ಕೈದು ಶತಮಾನ ಹಿಂದಿನದು.

ಈ ಶೈವ ಧರ್ಮದ ತತ್ವಗಳಲ್ಲಿಯೂ ವಚನಕಾರರಂತೆಯೇ 36 ತತ್ವಗಳು – ಅಂದರೆ 24 ಅಂಗ ತತ್ವ ಹಾಗೂ  12 ಲಿಂಗ ತತ್ವಗಳು – ಮುಖ್ಯ ತತ್ವಗಳಾಗಿವೆ. ಶರಣರಂತೆಯೇ 63 ನಾಯನಾರರಲ್ಲಿ ಕೆಲವು ಬ್ರಾಹ್ಮಣರೂ ಹಲವು ಶೂದ್ರರೂ ಇದ್ದಾರೆ. ವೆಲ್ಲಾಳರು ಎಂಬ ರೈತರು, ಭೂ ಮಾಲಕರು, ರಾಜರ ಸೇನಾಧಿಕಾರಿಗಳಾಗಿದ್ದ ಜಾತಿ ಅದು. ಬೇಡರ ಕಣ್ಣಪ್ಪನೂ ಸೇರಿದಂತೆ ಹಲವು ಬೇಟೆಗಾರ ಬುಡಕಟ್ಟಿನವರು, ನಂದನಾರರಂತೆ ಅಸ್ಪೃಶ್ಯರು, ಈಡಿಗರು, ಕೆಲವು ಮಹಿಳೆಯರೂ ಇದ್ದಾರೆ. ಒಬ್ಬಾಕೆ ವೈಶ್ಯೆಯೂ ಇದ್ದಾಳೆ. ‌ವಚನಕಾರ ಮಾದಾರ ಚೆನ್ನಯ್ಯನೆಂಬ ಹಿರಿಯ ಶರಣರಿಗೆ ತಮಿಳುನಾಡಿನ ಸಂಪರ್ಕವಿದ್ದು ಅಲ್ಲಿಯ ರಾಜನ ಬಳಿ ಸೇವೆ ಸಲ್ಲಿಸಿದ ,ಅಲ್ಲಿ ರಾಜನಿಗಿಂತ ಈ ಅಸ್ಪೃಶ್ಯ ಮಾದಾರನೇ ಶ್ರೇಷ್ಟ ಭಕ್ತ ಎಂದು ನಿರೂಪಿಸಿದ ಕತೆಯಿದೆ. ಹೀಗೆ 36 ತತ್ವಗಳನ್ನೊಪ್ಪಿದ ಈ ಧಾರ್ಮಿಕ ಪಂಥವೂ ಜಾತಿ ಬೇಧವನ್ನು ಎಣಿಸುತ್ತಿರಲಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.

ಹೀಗೆ 36 ತತ್ವಗಳನ್ನು ಒಪ್ಪಿಕೊಂಡ ಮತ್ತೊಂದು ಶೈವ ಪಂಥ ಕಾಶ್ಮೀರ ಶೈವ.  ಅಭಿನವ ಗುಪ್ತರೆಂಬ ವಿದ್ವಾಂಸರು, ಅವರ ಗುರುಗಳಿಂದ ಪಡೆದು ಪ್ರತಿಪಾದಿಸಿದ ಪತ್ಯಭಿಜ್ಞಾ ತತ್ವವೆಂಬುದರಲ್ಲಿ ಈ ಅಂಗ ಹಾಗೂ ಲಿಂಗ ತತ್ವಗಳನ್ನು ವಿವರವಾಗಿ ವ್ಯಾಖ್ಯಾನಿಸಿದೆ. ಈ ತತ್ವಗಳು ಅದರ ಆಧಾರ. ಈ ಪಂಥವೂ ಕೂಡಾ ಎಂಟರಿಂದ ಹತ್ತನೆಯ ಶತಮಾನದಲ್ಲಿ ಪ್ರವೃದ್ಧಮಾನವಾಗಿತ್ತು. ಅಭಿನವ ಗುಪ್ತ 10 ನೆ ಶತಮಾನದವರು. ಈ ಪ್ರತ್ಯಭಿಜ್ಞಾ ಶಾಸ್ತ್ರ ಧ್ವನ್ಯಾಲೋಕ ಗ್ರಂಥದ ಮೂಲಕ ಭಾರತದ ಸೌಂದರ್ಯ ಮೀಮಾಂಸೆ,  ರಸ ತತ್ವಗಳಿಗೂ ದೊಡ್ಡ ಕೊಡುಗೆ ನೀಡಿದೆ. ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಮೆರೆದಿದೆ ಎಂಬುದು ಗಮನಾರ್ಹ. ಚಿತ್ತ, ಮನ, ಬುದ್ಧಿ, ಅಹಂಕಾರ , ಜ್ಞಾನೇಂದ್ರಿಯ ಎಂಬ ಅಂಗ ತತ್ವಗಳ ಮೂಲಕ ಗ್ರಹಿಕೆ, ವಿಮರ್ಶನ, ಎಂಬ ಚಿಂತನಾ ವಿಧಾನಗಳ  ಬಗ್ಗೆ  ನಡೆಸಿದ ವಿಶ್ಲೇಷಣೆ ಸೌಂದರ್ಯ ಮೀಮಾಂಸೆಯ ಕಡೆಗೂ ವಿಸ್ತರಿಸಿದೆ.

ವಚನಕಾರರಿಗಿಂತ ಶತಮಾನಗಳ ಕಾಲ ಮೊದಲಿನವರಾದ ಈ ಎರಡೂ ಪಂಥಗಳೂ 36 ತತ್ವಗಳನ್ನು ಆಗಮಗಳಿಂದ ಪಡೆದುಕೊಂಡಿವೆ ಎಂದು ಹೇಳಿಕೊಂಡಿವೆ. ಸಂಶೋಧಕರು ತಮ್ಮ ಶೋಧಗಳ ಮೂಲಕ ಇದನ್ನು ದಾಖಲಿಸಿದ್ದಾರೆ. ನೂರಾರು ಗ್ರಂಥಗಳು, ಅವುಗಳಲ್ಲಿ ಶೈವ, ಶಾಕ್ತ, ವೈಷ್ಣವ ಪಂಥಗಳದ್ದೆಲ್ಲ ಸೇರಿ  ಆಗಮಗಳದ್ದೇ ಒಂದು ಲೋಕ ಎನ್ನುವಷ್ಟು ವ್ಯಾಪಕವಾಗಿದೆ. ಅವುಗಳಲ್ಲಿ  28 ಶೈವ ಆಗಮಗಳು, ಇವುಗಳಿಗೆ ಅಂಟಿಕೊಂಡ ಹಲವು ಉಪಾಗಮಗಳು ಇವೆ. ದೇವಾಲಯ ನಿರ್ಮಾಣ, ಮೂರ್ತಿ ಶಿಲ್ಪಗಳ ರಚನೆ, ಅವುಗಳ ಪೂಜಾ ವಿಧಾನಗಳು ಆಗಮ ಮೂಲದವು. ವೇದ, ವೇದಾಂಗಗಳು, ಉಪನಿಷತ್ತುಗಳಂತೆ ಈ ಧಾರ್ಮಿಕ ಗ್ರಂಥಗಳು ವ್ಯಾಪಕ ಮತ್ತು ಆಳವಾದ ಸಂಶೋಧನೆಗೆ ಒಳಪಟ್ಟಿಲ್ಲ. ಇದು ಭಾರತದ ತತ್ವಶಾಸ್ತ್ರೀಯ , ಧಾರ್ಮಿಕ ಹಾಗೂ ಇತಿಹಾಸದ ಅಧ್ಯಯನಕ್ಕೆ ಬಹಳ ಹಾನಿಯಾಗಿದೆ.


ಈ ಆಗಮಗಳ ಕಾಲವನ್ನು ಕ್ರಿ.ಪೂರ್ವದಿಂದ ಕ್ರಿಸ್ತ ಶಕದ ಮೊದಲ ಶತಮಾನಗಳವರೆಗೂ ಗುರುತಿಸುತ್ತಾರೆ.
ಈ ಆಗಮಗಳಲ್ಲಿ ಹಲವು ಶಿವಾಗಮಗಳು. ಈ  ಕೆಳಗಿನ ಆಗಮಗಳಲ್ಲಿ 36 ತತ್ವಗಳ ವಿಷದವಾದ ವಿಚರಣೆಗಳಿವೆ :
ನಿಃಕಲಾತೀತಾಗಮ,ಅತೀ ಮಹಾಗಮ, ಉತ್ತರ ವಾತುಲಾಗಮ, ಚಿತ್ಪ್ರಕಾಶಾಗಮ, ಚಕ್ರತೀತಾಗಮ, ವಿಜಯ ಭೈರವೀ ಆಗಮ. ಆಗಮಗಳಲ್ಲಿ 24 ಅಂಗ ತತ್ವಗಳನ್ನು ಸಕಲ ತತ್ವಗಳೆಂದೂ, 12 ತತ್ವಗಳನ್ನು ನಿಃಕಲ ತತ್ವಗಳೆಂದೂ ಕರೆಯಲಾಗಿದೆ. ಹೀಗೆ 36 ತತ್ವಗಳ ಉಗಮವನ್ನು ಆಗಮಗಳಿಗೆ ಟ್ರೇಸ್ ಮಾಡಬಹುದು.  ಇವುಗಳ ಭಾಷೆ, ಬರೆಯಲ್ಪಟ್ಟ ಪ್ರದೇಶಗಳ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಆದರೆ ಇವು ಅತ್ಯಂತ ಹೆಚ್ಚು ಪ್ರಚಲಿತವಾಗಿರುವುದು ದಕ್ಷಿಣ ಭಾರತದಲ್ಲಿ ಎಂಬುದಂತೂ ಬಹುಜನ ಒಪ್ಪಿತ ಸಂಗತಿ.

ಈ ಎಲ್ಲ ಪಂಥಗಳೂ 36 ತತ್ವಗಳನ್ನು ಮುಖ್ಯ ಧಾರ್ಮಿಕ ತತ್ವಗಳನ್ನಾಗಿ ಬಿಂಬಿಸಿದ್ದರೂ ಅವುಗಳ ಅಂಗ ತತ್ವಗಳಿಗೆ ನೀಡಿದ ಪ್ರಾಮುಖ್ಯತೆ ಬೇರೆ ಬೇರೆ.  ವಚನಕಾರರನ್ನು ಹೊರತುಪಡಿಸಿದರೆ ಬೇರೆ ಪಂಥಗಳಲ್ಲಿ ಅಂಗ ತತ್ವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ತಮಿಳು ಶೈವ ಪಂಥಗಳಲ್ಲಿ ವಿಭಿನ್ನ ಜಾತಿಯವರನ್ನು ಒಳಗೊಂಡಿದ್ದರೂ ಕೂಡಾ ಕಾಯಕವೇ ಕೈಲಾಸ, ದೇಹವೇ ದೇಗುಲ ಎಂಬ ತತ್ವವನ್ನು, ಇಷ್ಟಲಿಂಗದ ವ್ಯಾಪಕ ಪೂಜೆಯನ್ನು ಕಾಣುವುದಿಲ್ಲ. ಅವುಗಳಲ್ಲಿ ಶರಣರಲ್ಲಿರುವಂತೆ ಕುಶಲ ಕರ್ಮಿಗಳ, ಕಾಯಕ ಜೀವಿಗಳ ಪ್ರಾಧಾನ್ಯತೆ ಕಾಣುವುದಿಲ್ಲ. ಕಾಶ್ಮೀರ ಶೈವವಂತೂ ಕೆಲವೇ ವಿದ್ವಾಂಸರಿಂದ ರೂಪುಗೊಂಡಿದೆ. ಅಂಗ ತತ್ವಗಳನ್ನೊಪ್ಪಿದ ಧಾರ್ಮಿಕ ಪಂಥಗಳಿಗಿಂತ ಭಿನ್ನವಾಗಿ ವಚನ ಚಳುವಳಿ ಸಾಮಾಜಿಕ ತತ್ವಗಳನ್ನು ರೂಪಿಸಿಕೊಂಡ ಬಗೆಯನ್ನು ಮುಂದಿನ ಲೇಖನಗಳಲ್ಲಿ ವಿಶ್ಲೇಷಣೆ ಮಾಡುತ್ತೇನೆ.

ಆಗಮಗಳನ್ನೂ, ಕಾಶ್ಮೀರ ಶೈವದ ಗ್ರಂಥಗಳನ್ನೂ ತಂತ್ರಗಳೆಂದೂ ಕರೆಯುತ್ತಾರೆ  ಎಂಬುದು ಗಮನಿಸಬೇಕಾದ ವಿಷಯ. ಮುಂದೆ ಅದರ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತೇನೆ. 36 ತತ್ವಗಳ ಮೂಲ ಉಗಮ ಆಗಮಗಳಲ್ಲಿ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ಆದರೆ ಈ ಎಲ್ಲ ಪಂಥಗಳೂ ಪಂಚವಿಂಶತಿ ತತ್ವಗಳನ್ನು ಅಂದರೆ ಅಂಗ ತತ್ವಗಳನ್ನು ಷಡ್ದರ್ಶನಗಳಲ್ಲೊಂದಾದ ಸಾಂಖ್ಯ ದರ್ಶನದಿಂದ ಪಡೆದುಕೊಂಡಿವೆ. ಇತ್ತೀಚೆಗೆ ವಿಶ್ವಾದ್ಯಂತ ಜನಪ್ರಿಯವಾಗಿರುವ ಯೋಗ ಶಾಸ್ತ್ರವನ್ನು ಪತಂಜಲಿಯವರು ಸಾಂಖ್ಯ ಯೋಗ ಎಂದೇ ಕರೆದಿದ್ದಾರೆ. ಚರಕ ಸಂಹಿತೆಯ ಶರೀರ ಸ್ಥಾನದ ವಿವರಣೆಗೂ ಕೂಡಾ ಸಾಂಖ್ಯ ದರ್ಶನವೇ ಮೂಲ. ಹೀಗಾಗಿ ಸಾಂಖ್ಯ ದರ್ಶನ ಭಾರತೀಯ ಧರ್ಮಗಳ, ತತ್ವಶಾಸ್ತ್ರದ ಹಾಗೂ ಒಟ್ಟಾರೆ ಸಾಮಾಜಿಕ ಇತಿಹಾಸದಲ್ಲಿಯೇ ಬಹಳ ಪ್ರಮುಖ ಸ್ಥಾನ ಹೊಂದಿದೆ ಎಂದು ಇವುಗಳಿಂದ ಕಾಣುತ್ತದೆ.

ವಚನಕಾರರ ಜಾತಿ ಸಮಾನತೆ, ಮಹಿಳಾ ಸಮಾನತೆ, ದೇವಾಲಯ ನಿರಾಕರಣೆ, ಇಷ್ಟ ಲಿಂಗ ಪೂಜೆ ಮೊದಲಾದ ಪ್ರಮುಖ ತತ್ವಗಳಿಗೆ ಅಡಿಪಾಯವಾದ ಅಂಗತತ್ವಗಳ ಮೂಲವಾದ ಸಾಂಖ್ಯ ದರ್ಶನ ಲಿಂಗಾಯತ ಧರ್ಮದ ಅಧ್ಯಯನಕ್ಕೆ ಬಹಳ ಅಗತ್ಯವಾದುದು. ಅಷ್ಟೇ ಅಲ್ಲ, ವಿಶ್ವದಲ್ಲೇ ಮೊದಲಾಗಿ ಮನುಷ್ಯರ ಅಂಗಗಳ ವಿಕಾಸವಾದ ಬಗೆಯನ್ನೂ ತಮ್ಮದೇ ರೀತಿಯಲ್ಲಿ ವಿವರಿಸಿದೆ. ಇದು ಮತ್ತೊಂದು ಅಚ್ಚರಿ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: