ಜಿ ಎನ್ ನಾಗರಾಜ್ ಅಂಕಣ- ಗಣಪತಿಗಳಿಂದ ಗೌರಿಯ ಮಾತೃ ಪ್ರಧಾನ ವ್ಯವಸ್ಥೆಯ ಕೊನೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

19

ಗಣನಾಯಕಾಯ ಗಣ ದೈವತಾಯ ಗಣಾಧ್ಯಕ್ಷಾಯಾ ಧೀಮಹಿ

ಕೆಲವೇ ವಾರಗಳಲ್ಲಿ ಗಣಪತಿಗಳ ಮೆರೆದಾಟ ಬೀದಿ ಬೀದಿ,ಊರೂರುಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಅವನು ಗೌರಿಯ ಕುಮಾರ.‌ ಅವನನ್ನು ಜನ ಪೂಜಿಸುತ್ತಿರುವುದು ವಿಘ್ನೇಶ್ವರ , ವಿದ್ಯೆಯ ದೇವತೆ ಎಂದು. ಆದರೆ ಗಣಪತಿ ಎಂದರೆ ಗಣನಾಂ ಪತಿಃ – ಗಣದ ಪತಿ. ಮೇಲೆ ಉಲ್ಲೇಖಿಸಲಾದ ಶ್ಲೋಕ ಗಣನಾಯಕ,ಗಣ ದೇವತೆ,ಗಣಾಧ್ಯಕ್ಷ ಎಂದೆಲ್ಲ ಕೀರ್ತಿಸಲಾಗಿರುವ ಈ ಆಯಾಮದಲ್ಲಿ ಯಾರೂ ಅವನನ್ನು ನೆನಪಿಸಿಕೊಳ್ಳುತ್ತಿಲ್ಲ. ಗಣೇಶ,ಗಣಪತಿ,ಗಣನಾಯಕ,ಗಣಾಧ್ಯಕ್ಷ ಎಂಬ ಈ ಪದಗಳು ವ್ಯಕ್ತಿಯ ಸ್ಥಾನದ ಸೂಚಕಗಳೇ ಹೊರತು ಹೆಸರುಗಳಲ್ಲ. ಈ ಸ್ಥಾನ ಯಾವುದು ? ಈ ಪದಗಳೇ ದೇವತೆಯ ಹೆಸರಾಗಿ ವ್ಯಾಪಕವಾಗಿ ಬಳಕೆಯಾಗಿರುವುದು ಏನನ್ನು ಸೂಚಿಸುತ್ತದೆ‌ ? ಗಣಪತಿಗೆ ಗಣದ ಪತಿಯ ಸ್ಥಾನದಿಂದಾಗಿ ಮಾತ್ರ ಮಹತ್ವ ಬಂದಿದೆಯೇ ? ಸಭಾಪತಿ, ರಾಷ್ಟ್ರಪತಿ ಎಂಬಂತೆ ? ಗಣಪತಿ ಗಣದ ಪತಿಯಾಗಿದ್ದು ಹೇಗೆ ? ದೇಶಾದ್ಯಂತ ವಿವಿಧ ರೂಪದಲ್ಲಿ ಗ್ರಾಮೀಣ ಜನತೆ , ಮಹಿಳೆಯರಿಂದ ವ್ಯಾಪಕವಾಗಿ ಇಂದೂ ಪೂಜಿಸಲ್ಪಡುತ್ತಿರುವ ತಾಯಿ ಗೌರಿ ಬದಿಗೆ ಸರಿಸಲ್ಪಟ್ಟು ಗಣಪತಿಯ ಆರಾಧನೆ ಪ್ರಧಾನ ಸ್ಥಾನ ಪಡೆದದ್ದು ಹೇಗೆ ? ಗಣಪತಿಯ ಜನನದ ಕತೆ ಹೇಳುವಂತೆ ಕೇವಲ ಗೌರಿಯ ಮಗ ಮಾತ್ರ. ಶಿವನ ಮಗ ಅಲ್ಲ. ಅವನಿಗೆ ತನ್ನ ತಂದೆ,ತಂದೆಗೆ ಮಗ ಗೊತ್ತೇ ಇರಲಿಲ್ಲ. ಈ ಕತೆ ಏನನ್ನು ಸೂಚಿಸುತ್ತದೆ ?
ಈ ಪ್ರಶ್ನೆಗಳು ಭಾರತದಲ್ಲಿ “ಅಮ್ಮ” ಕೇಂದ್ರಿತ ಸಮಾಜ ಪುರುಷ ಕೇಂದ್ರಿತ ಸಮಾಜವಾಗಿ ಪರಿವರ್ತನೆಗೊಂಡದ್ದು ಹೇಗೆ  ಎಂಬುದನ್ನು ತಿಳಿದುಕೊಳ್ಳಲು ದೊಡ್ಡ ಕೊಡುಗೆ ನೀಡುತ್ತದೆ. ಗಣಪತಿ ಮೂಷಿಕ ವಾಹನ ಎಂಬುದೂ ಕೂಡಾ ಮಹಿಳೆಯರ ಅಧೀನ ಸ್ಥಿತಿಯ,ಗುಲಾಮಿ ಸ್ಥಿತಿಯ ಆರಂಭ.

ಪೂಜಿಸುವ ಭಕ್ತರಿಗೆ ಹೇಗೆ ಗಣಪತಿ ಬಹಳ ಮಹತ್ವದ ದೇವತೆಯೋ ಹಾಗೆಯೇ ಭಾರತದ ಸಮಾಜದ ಬೆಳವಣಿಗೆಗಳನ್ನು ಅರ್ಥೈಸಿಕೊಳ್ಳಲು ಬಯಸುವ ಮಾನವಶಾಸ್ತ್ರಜ್ಞರು, ಇತಿಹಾಸಕಾರರು, ಇತರ ಸಮಾಜವಿಜ್ಞಾನಿಗಳಿಗೂ ಬಹಳ ಮಹತ್ವದ್ದು.

“ಅಮ್ಮ” ದೇವತೆಗಳಿಗೆ ಗಂಡರಿಲ್ಲ
” ಅಮ್ಮ” ದೇವತೆಗಳನ್ನು ಪೂಜಿಸುವುದನ್ನು ಈಗಲೂ ನೋಡುತ್ತೇವೆ. ಆದರೆ ಯಾರೂ ಅಪ್ಪ ದೇವತೆಗಳನ್ನು ಪೂಜಿಸುವುದಿಲ್ಲ.  ಇಂದು ಪುರುಷ ದೇವತೆಗಳ ಆರಾಧನೆಯೇ ಪ್ರಧಾನ ಧಾರ್ಮಿಕ ಆಚರಣೆ. ಆದರೆ ಅವರು ದೇವರುಗಳಷ್ಟೇ. ರಾಮ,ಕೃಷ್ಣ,ಶಿವ ಮೊದಲಾದ ದೇವರುಗಳನ್ನು ಅಪ್ಪ ದೇವತೆಗಳೆಂದು ಕರೆಯುವುದಿಲ್ಲ.   ಗ್ರಾಮೀಣ ಅಮ್ಮ ದೇವತೆಗಳ ಜೊತೆಗೆ ಯಾವ ಪುರುಷ ದೇವತೆಗಳನ್ನು ಪೂಜೆ ಮಾಡುವುದಿಲ್ಲ. ದೇವಾಲಯದಲ್ಲಿಯೂ , ಉತ್ಸವ ಮೂರ್ತಿಯಾಗಿ ಊರಾಡುವಾಗಲೂ ಅಮ್ಮ ನನ್ನು ಮಾತ್ರ ಮೆರೆಸುತ್ತಾರೆ. ಮುಂದೆ ಆಕೆಗೆ ಶಿವ ಅಥವಾ ಮತ್ತೊಬ್ಬ ದೇವರನ್ನು ಗಂಡ ಎಂದು ಹೇಳಿದರೂ ಅವೆಲ್ಲ ಬಾಯಿಮಾತಷ್ಟೇ. ಪೂಜೆ,ಆಚರಣೆಗಳಲ್ಲಿ ಅವರ ಯಾವ ಪಾತ್ರವೂ ಇಲ್ಲ. ಕೇವಲ ವೈದಿಕ ಪುರಾಣಗಳಲ್ಲಿನ ಸ್ತ್ರೀ ದೇವತೆಯರಿಗೆ ಗಂಡಂದಿರನ್ನು ಕಲ್ಪಿಸಿದ್ದಾರೆ. ಬೇರೆ ಧರ್ಮಗಳಲ್ಲಿ ಕೇವಲ ಪರುಷ ಮಾತ್ರವೇ ದೇವರು ಎಂದಂತೆ ಭಾರತದಲ್ಲಿ ಮಾಡಲಾಗಲಿಲ್ಲ. ಜನರಲ್ಲಿ ಅಮ್ಮ ದೇವತೆಗಳ ಬಗ್ಗೆ ದೀರ್ಘ ಕಾಲದಿಂದ ಇರುವ ಗಾಢ ನಂಬಿಕೆ ಇದಕ್ಕೆ ಕಾರಣ. ಪ್ರತಿ ಮುಖ್ಯ ದೇವರಿಗೂ ಒಬ್ಬ ಜೊತೆಗಾತಿಯನ್ನು ಕೂಡಿಸಲೇ ಬೇಕಾಯಿತು. ಈ ಜೊತೆಗಾತಿ ದೇವತೆಗಳು ಪುರುಷ ದೇವರುಗಳನ್ನು ನಮ್ಮ ಜನರು ಕಂಡುಕೊಳ್ಳುವ ಮೊದಲೇ ವ್ಯಾಪಕವಾಗಿ ಜನರ ಮನದಲ್ಲಿ ನೆಲೆಯೂರಿದ್ದ ಅಮ್ಮ ದೇವತೆಗಳ ವೈದೀಕೀಕರಿಸಿದ ರೂಪ. (ಮುಂದಿನ ಲೇಖನವೊಂದರಲ್ಲಿ ಈ ಪ್ರಕ್ರಿಯೆಯ ಸಾಮಾಜಿಕ ಸಂದರ್ಭ,ಅಗತ್ಯ ಇವುಗಳ ಬಗ್ಗೆ ವಿವರಿಸಲಾಗುವುದು)

ಈ ಪ್ರಕ್ರಿಯೆ ದಿಗಂಬರರಾದ ಜೈನ ತೀರ್ಥಕರರನ್ನೂ ಆವರಿಸಿತು. ಬೌದ್ಧ ಶ್ರಮಣರನ್ನೂ ಬಿಡಲಿಲ್ಲ. ಜೈನರು ಸೃಷ್ಟಿಸಿಕೊಂಡ ಸ್ತ್ರೀ ದೇವತೆಗಳು ತೀರ್ಥಂಕರರ ಪತ್ನಿಯರಲ್ಲ. ಆದರೆ ಪ್ರತಿ ತೀರ್ಥಂಕರರಿಗೂ ಅವರ ಪರಿವಾರದಲ್ಲಿ ಒಬ್ಬ ನಿರ್ದಿಷ್ಟ ಯಕ್ಷಿ ಶಾಸನ ದೇವತೆಯರಾಗಿ ಪೂಜೆಗೊಳಗಾಗಿದ್ದಾರೆ. ಚಕ್ರೇಶ್ವರಿ, ಪದ್ಮಾವತಿ, ಜ್ವಾಲಾಮಾಲಿನಿ, ಕೂಷ್ಮಾಂಡಿನಿ ಹೀಗೆ ಹಲವು ಯಕ್ಷಿಯರು. ವಿಶೇಷವೆಂದರೆ ಯಕ್ಷಿ ಪೂಜೆ ಹೆಚ್ಚು ಪ್ರಚಲಿತವಾಗಿರುವುದು ಅಮ್ಮ ದೇವತೆಗಳೂ ಅತ್ಯಂತ ಜನಪ್ರಿಯವಾಗಿ ಇನ್ನೂ ಪೂಜಿಸಲ್ಪಡುವ ದಕ್ಷಿಣ ಭಾರತದಲ್ಲಿಯೇ ಎಂಬುದು ಗಮನಾರ್ಹ. ಬೌದ್ಧರಲ್ಲಿ ತಾರಾ ದೇವತೆಗಳೆಂದು ಸ್ತ್ರೀ ದೇವತೆಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಈ ಸಂಗತಿಗಳು ಭಾರತದಲ್ಲಿ ಅಮ್ಮ ದೇವತೆಗಳ ಪೂಜೆಯ ಪ್ರಾಬಲ್ಯವನ್ನು ಮತ್ತು ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ.
“ಅಮ್ಮ” ದೇವತೆಗಳು ಹಿಂದಿನ ಲೇಖನಗಳಲ್ಲಿ ವಿವರಿಸಿದಂತೆ ಅಪ್ಪನ ಅಗತ್ಯದ ಅರಿವೂ ಇಲ್ಲದ ಕಾಲದ, ಅಮ್ಮನೇ ವಂಶದ,ಬುಡಕಟ್ಟಿನ,ಕುಲದ ಮೂಲವಾದ ಕಾಲದ ದೇವತೆಗಳು. ಅಮ್ಮನೇ ಮಕ್ಕಳ, ಮೊಮ್ಮಕ್ಕಳ ಪಾಲಕಳೂ ರಕ್ಷಕಳೂ ಅವರ ತಿಳುವಳಿಕೆಯ ಮೂಲವೂ ಆಗಿದ್ದವಳು. ಅದರಿಂದಾಗಿ ಅಂತಹ ಪೂಜನೀಯ ಅಮ್ಮನ ನಿಧನದ ನಂತರ ಬುಡಕಟ್ಟಿನ ಅಗಲಿದ ಹಿರಿಯಳಾಗಿ “ಅಮ್ಮ” ನಾಗಿ ಪೂಜಿತಳಾದವಳು.

ಆಗಿನ ಬುಡಕಟ್ಟುಗಳು ತಮ್ಮ ಗುಂಪಿನ ಜನರ ಬದುಕಿನ ವಿವಿಧ ಕಾರ್ಯ ನಿರ್ವಹಣೆ ಮಾಡಲು ಒಬ್ಬ ಮುಖ್ಯ ವ್ಯಕ್ತಿಯ ನೇತೃತ್ವ ಬಯಸಿದರೆಂದರೆ ಬುಡಕಟ್ಟಿನ ಜನರಿಗೆ ಅಜ್ಜಿಯಾಗಿ,ತಾಯಿಯಾಗಿ, ಸೋದರಿಯಾಗಿದ್ದ ಹಿರಿಯ ಅಮ್ಮನದೇ ಆಗಿತ್ತು. ಅಮ್ಮ, ಆಗ ಬುಡಕಟ್ಟಿನ ನಿತ್ಯದ ಬದುಕಿನ ಕೆಲಸಗಳನ್ನು ಗುಂಪಿನವರಿಗೆ ಹಂಚುವ  ನಾಯಕಿ, ಆಹಾರಕ್ಕಾಗಿ ಅವರೊಡನೆ ಬೇಟೆಗೆ ಹೋಗುವ ಬೇಟೆಗಾರ್ತಿ, ಮೇಲೆರಗುವ ಹುಲಿ,ಸಿಂಹಗಳನ್ನು ಎದುರಿಸುವ ಹುಲಿಗೆಮ್ಮ, ಸಿಂಹವಾಹಿನಿ, ಹುಲಿವಾಹಿನಿ. ಜನರಿಗೆ ರೋಗಗಳ ನಿವಾರಣೆಯ ಮದ್ದುಗಳನ್ನು,ಮೂಲಿಕೆಗಳನ್ನು ಬಲ್ಲ ವೈದ್ಯೆ, ಹೆಣ್ಣು ಮಕ್ಕಳ ಹೆರಿಗೆ ಮಾಡಿಸುವ ಸೂಲಗಿತ್ತಿ, ಹಿಂದೆ ಹಿರಿಯಳಾಗಿ ಕಾಲವಾಗಿದ್ದ ಅಮ್ಮ‌ನ ಪೂಜೆ ಮತ್ತಿತರ ಆಚರಣೆಗಳನ್ನು ಮಾಡುವ ಪೂಜಾರಿಣಿ. ಅಷ್ಟೇ ಅಲ್ಲದೆ ಅಗತ್ಯ ಬಂದರೆ ತಮ್ಮ ಬುಡಕಟ್ಟಿನ ಮೇಲ ಪ್ರಾಣಿಗಳನ್ನು ಬೇಟೆಯಾಡುವವಳು  ಇತರ ಬುಡಕಟ್ಟುಗಳನ್ನು ಎದುರಿಸುವ ಸೇನಾನಾಯಕಿ ಕೂಡಾ. ಹೀಗೆ ಹಲವು ಪಾತ್ರಗಳು.

ಅವಳು ನಿರ್ವಹಿಸುತ್ತಿದ್ದ ಈ ಪಾತ್ರಗಳ ಪಳೆಯುಳಿಕೆಯಾಗಿ ಇಂದಿನ ಅಮ್ಮನ ಪೂಜೆಯ ಆಚರಣೆಗಳಲ್ಲಿ,ನಂಬಿಕೆಗಳಲ್ಲಿ ನೋಡಬಹುದು. ಅದು ಮಾರಮ್ಮ, ಎಲ್ಲಮ್ಮ, ಪಟಲದಮ್ಮ, ಕೆಂಚಮ್ಮ,ಕರಿಯಮ್ಮ , ಹುಲಿಗೆಮ್ಮ, ಯಾರೇ ಆಗಿರಲಿ ಈ ಎಲ್ಲ ದೇವತೆಗಳ ಆರಾಧನೆಗಳಲ್ಲಿ ಕುಲದ ಅಥವಾ ಊರ ಜನರನ್ನು ಕಾಪಾಡುವ ದೇವತೆ, ಸಿಡುಬು ಮೊದಲಾದ ರೋಗ ನಿವಾರಣೆ ಮಾಡುವವಳು. ಜೊತೆಗೆ ಮೇಲೆರಗುವ ಇತರ ಬುಡಕಟ್ಟುಗಳನ್ನು ಎದುರಿಸುವ, ಸಂರಕ್ಷಿಸುವ ಸೇನಾನಾಯಕಿ, ಮಾರಿ, ಕಾಳಿ, ದುರ್ಗೆ. ಪ್ರತಿ “ಅಮ್ಮ ” ದೇವತೆಯ ಮೂರ್ತಿಯ ಕೈಗಳಲ್ಲೂ ಆಯುಧಗಳಿವೆ. ಸಿಟ್ಟು ಬಂದರೆ ರುದ್ರಾವೇಶ ತಳೆಯುವವ ಉರಿಗಣ್ಣಿಯರಾಗಿಯೇ ಸರಿ ಸುಮಾರು ಎಲ್ಲ ಅಮ್ಮ ದೇವತೆಗಳನ್ನೂ ಕೀರ್ತಿಸಲಾಗಿದೆ. ಈ ದೇವತೆಗಳು ಸಂಹರಿಸುವವರನ್ನು ರಾಕ್ಷಸರೆಂದು ವೈದಿಕ ಪುರಾಣಗಳು ಚಿತ್ರಿಸಿವೆ ಎಂಬುದನ್ನು ಬಗೆದು ನೋಡಿದರೆ ಕಾಣುವ ಸತ್ಯ ಆಕೆ ಸ್ವತಃ ಸೇನಾನಾಯಕಿ ಆಗಿದ್ದಳೆಂಬುದು.

ಅದರ ಜೊತೆಗೆ ಆಕೆ ಪೂಜಾರಿಣಿಯೂ ಆಗಿದ್ದಳೆಂಬುದಕ್ಕೆ ಹಲವು ಉದಾಹರಣೆಗಳಿವೆ. ಎಲ್ಲಮ್ಮನ ಬಗ್ಗೆ ಬರೆದಂತೆ ಮಾತಂಗಿ, ಜೋಗತಿಯರು ಎಲ್ಲಮ್ಮನ ಪೂಜಾರಿಣಿಯರು. ಈಗ ಅವರನ್ನು ಪೂಜಾರಿಣಿ ಸ್ಥಾನದಿಂದ ಕೇವಲ ಎಲ್ಲಮ್ಮನ ಹಡಲಗಿ ಹೊತ್ತು ಜೋಗಾಡುವದಕ್ಕೆ ಸೀಮಿತಗೊಳಿಸಲಾಗಿದ್ದರೂ ಆಕೆ ಎಲ್ಲಮ್ಮನ ಒಕ್ಕಲಿನ ಮನೆಗಳಲ್ಲಿ ಪುರೋಹಿತಳಂತೆ ಕಾರ್ಯ ನಿರ್ವಹಿಸುತ್ತಿದ್ದಳು. ಅವರ ಮನೆಯ ಮೇಲ್ಜಾತಿಯವರ ಮದುವೆಗಳಲ್ಲಿಯೂ ದಲಿತಳಾದ ಜೋಗತಿಯ  ಕೈ ಮುಟ್ಟಿಸಿಯೇ ತಾಳಿ ಕಟ್ಟಬೇಕು ಎಂಬ ನಂಬಿಕೆಗಳು ಇನ್ನೂ ಇವೆ. ಈ ಪದ್ಧತಿ ಎಲ್ಲಮ್ಮ ದೇವತೆಗೆ ಮಾತ್ರ ಸೀಮಿತವಲ್ಲ. ಇನ್ನೂ ಹಲವು ಗ್ರಾಮೀಣ ದೇವತೆಗಳಿಗೆ ಮಾತಂಗಿಯರು ಇದ್ದಾರೆ.  ಕರಗ ಹೊರುವ ಪದ್ಧತಿ ಇರುವ ದ್ರೌಪದಿ ಮೊದಲಾದ ಕೆಲವು ದೇವತೆಗಳ ಜಾತ್ರೆಗಳಲ್ಲಿ ಕರಗ ಹೊರುವವರು ಪುರುಷರಾದರೂ ಅವರು ಸ್ತ್ರೀಯರ ಸೀರೆ, ಕುಪ್ಪಸ, ಆಭರಣ, ಹರಿಷಿಣ, ಕುಂಕುಮ, ಬಳೆ ಮೊದಲಾ ವೇಷ ಭೂಷಣ ಧರಿಸಿಯೇ ಕರಗ ಹೊರುತ್ತಾರೆ. ಹೀಗೆಯೇ ಕೆಲವು ಬುಡಕಟ್ಟುಗಳಲ್ಲಿಯೂ ಸ್ತ್ರೀಯರ ಉಡುಪು ಧರಿಸಿ ಆಚರಣೆಗಳನ್ನು ಕೈಗೊಳ್ಳುವ ಪದ್ಧತಿ ಉಳಿದು ಬಂದಿದೆ.

ವಿಶ್ವಾದ್ಯಂತ ಇದ್ದ ಅಮ್ಮ ಕೇಂದ್ರಿತ ಸಮಾಜಗಳಲ್ಲಿ ಮಹಿಳಾ ನಾಯಕಿಯರು ಪೂಜಾರಿಣಿಯರೂ, ಸೇನಾ ನಾಯಕರೂ ಆಗಿದ್ದರು ಎಂಬುದು ಹಲವು ಆಕರ,ಆಧಾರಗಳಿಂದ ಶ್ರುತವಾಗಿದೆ. ಭಾರತದಲ್ಲಂತೂ ಮೇಲೆ ಉಲ್ಲೇಖಿಸಿದ ಜೀವಂತ ಆಚರಣೆಗಳೇ ಸಾಕು. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಇಂದು ಅಮ್ಮಗಳ ಪೂಜೆಯ ಪದ್ಧತಿ ಅಳಿದು ಹೋಗಿದೆ ಇಲ್ಲವೇ ಕಣ್ಣಿಗೆ ಕಾಣದಷ್ಟು ಸೀಮಿತವಾಗಿವೆ. ಅಲ್ಲಿಯ ಸಂಶೋಧಕರು ಸ್ತ್ರೀಯರು ಕೇವಲ ಮರಗಿಡಗಳಿಂದ ಆಹಾರ ಸಂಗ್ರಹಣೆ ಮತ್ತು ಇಲಿ,ಮೊಲಗಳಂತಹ ಸಣ್ಣ ಪ್ರಾಣಿಗಳ ಬೇಟೆಗೆ , ಕುಂಬಾರಿಕೆಗೆ ಸೀಮಿತವಾಗಿದ್ದರು ಎಂಬ ಸಂಕುಚಿತ ದೃಷ್ಟಿ ತಳೆದಿದ್ದರು. ಇತಿಹಾಸ ಪೂರ್ವ ಪುರಾತನ ಕಾಲದ ಅಸ್ಥಿ ಪಂಜರಗಳ ಜೊತೆ ಆಯುಧಗಳನ್ನೂ ಹೂಳಿದ ಪ್ರಸಂಗಗಳನ್ನು ಕಂಡಾಗೆಲ್ಲ ಈ ಸಂಶೋಧಕರು ದಶಕಗಳ ಕಾಲ ಅವು ಪುರುಷ ಬೇಟೆಗಾರರ, ಸೇನಾ ನಾಯಕರ ಅಸ್ಥಿಪಂಜರಗಳು ಎಂಬ ತೀರ್ಮಾನಕ್ಕೆ ಬಂದಿದ್ದರು. ಇತ್ತೀಚಿನ ಕಾಲದಲ್ಲಿ ಉತ್ಖನನ ಮತ್ತು ಮಾನವ ಶಾಸ್ತ್ರ ಕ್ಷೇತ್ರವನ್ನು ಪ್ರವೇಶಿಸಿದ ಮಹಿಳಾ ತಜ್ಞರು ಈ ತೀರ್ಮಾನಗಳಲ್ಲಿ ಕಾಣುವ ಪುರುಷಾಹಂಕಾರದ ವರ್ತನೆಯನ್ನು ಕಟುವಾದ ಟೀಕೆಗೊಳಪಡಿಸಿದರು ಮತ್ತು ಇಂತಹ ಕೆಲ ಅಸ್ಥಿಪಂಜರಗಳನ್ನು ಮರು ಪರಿಶೀಲನೆಗೊಳಪಡಿಸಿದರು. ಆಗ ಕಂಡದ್ದು ಆಯುಧಗಳೊಡನೆ ಸಮಾಧಿ ಮಾಡಲಾಗಿದ್ದ ವ್ಯಕ್ತಿಗಳಲ್ಲಿ ಹಲವರು ಸ್ತ್ರೀಯರಾಗಿದ್ದರು. ಅಲ್ಲಿನ ಇತರ ಪುರಾವೆಗಳೂ ಹೇಳುವಂತೆ ಅವರುಗಳು ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರು ಎಂಬುದು ಸಾಬೀತಾಗಿದೆ. ಹಿಂದಿನ ಲೇಖನದಲ್ಲಿ ಪ್ರಮೀಳೆಯರು,ಅಮೆಜಾನ್‌ಗಳು ಮೊದಲಾದ ಉದಾಹರಣೆಗಳು ಅದನ್ನು ಸಾಬೀತು ಮಾಡುತ್ತವೆ. ಹಾಗೆಯೇ ಸ್ತ್ರೀಯರು ಪೂಜಾರಿಣಿಯರೂ ಆಗಿದ್ದರೆಂಬುದಕ್ಕೆ ಹಿಂದಿನ ಲೇಖನದಲ್ಲಿ ಸೆಲ್ಟಿಕ್ ಸಮುದಾಯದ ಮಹಿಳಾ ದ್ರುಯಿಡರ ( ಪುರೋಹಿತರು) ಬಗ್ಗೆ ವಿವರಿಸಲಾಗಿದೆ. ಅದಲ್ಲದೆ ಡಿಮೆಟರ್ ಮೊದಲಾದ ಸ್ತ್ರೀ ದೇವತೆಗಳಿಗೆ ಪೂಜಾರಿಣಿಯರಿದ್ದರು.  ನಮ್ಮ ದೇಶದ ಕರಗ ಹೊರುವವರಂತೆ ಡಿಮೆಟರ್ ದೇವತೆಗೆ ಪುರುಷರು ಸ್ತ್ರೀ ವೇಷಧಾರಿಗಳಾಗಿ ಪೂಜೆ ನಡೆಸುತ್ತಿದ್ದರು.

ಹೀಗೆ ಹಲವು ಪುರಾವೆಗಳು ಸ್ತ್ರೀಯರು ವಿಶ್ವಾದ್ಯಂತ ಅಮ್ಮ ಕೇಂದ್ರಿತ ಸಮಾಜಗಳಲ್ಲಿ ಮಹಿಳೆಯರೇ ನಾಯಕತ್ವ ವಹಿಸಿ ಬೇಟೆ,ಯುದ್ಧಗಳಲ್ಲಿಯೂ ಭಾಗವಹಿಸುತ್ತಿದ್ದರು. ನಾಯಕತ್ವವನ್ನೂ ವಹಿಸುತ್ತಿದ್ದರು. ಆದರೆ ಈ ನಾಯಕತ್ವ ಅಧಿಪತ್ಯವಾಗಿರಲಿಲ್ಲ. ಪುರುಷರು ಕೀಳು ಎಂಬ ಅಧೀನ ಸ್ಥಿತಿಯ ಸಂಬಂಧಗಳು ಹೇರಲ್ಪಟ್ಟಿರಲಿಲ್ಲ ಎಂಬ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಸಹಜ ಜೈವಿಕ ಸಂಬಂಧಗಳ ಮೇಲೆ ಆಧಾರಿತವಾಗಿದ್ದ ಅಮ್ಮನ ನಾಯಕತ್ವ ಏಕೆ ಮತ್ತು ಹೇಗೆ ಕುಸಿಯಿತು ?  ಪುರುಷರ ನಾಯಕತ್ವ ಮಾತ್ರವಲ್ಲ ಪುರುಷಾಧಿಪತ್ಯ , ಮಹಿಳಾ ಅಧೀನತೆ ,ಅಸಮಾನತೆ ಹೇಗೆ ಸ್ಥಾಪನೆಯಾಯಿತು ಎಂಬ ಬಗ್ಗೆ ಸರಿಯಾದ ತಿಳುವಳಿಕೆಗೆ ಬರಬೇಕು. ಇತಿಹಾಸದ ಸರಿಯಾದ ಅರಿವು ನಮ್ಮ ದೈನಂದಿನ ಕ್ರಿಯೆ,ಸಾಹಿತ್ಯ ರಚನೆಗಳಿಗೆ, ಶಿಕ್ಷಣಕ್ಕೆ ಆಧಾರಭೂತವಾಗಬೇಕು.

ಲಕ್ಷಾಂತರ ವರ್ಷಗಳ ಕಾಲ ಮಾನವರು ಕೇವಲ ಪ್ರಾಣಿಗಳ ಗುಂಪುಗಳಂತೆ ಜೀವಿಸಿದ್ದರು. ನಂತರ ಮೊದಲ ಬಾರಿಗೆ ಅಜ್ಜಿಯರು ಅಸ್ತಿತ್ವ ಕಂಡ ನಂತರ ಮಾನವರ ಮೊದಲ ಅರಿವಿನ ಸ್ಫೋಟ ಕಾಲದಲ್ಲಿ  ಸಮಾಜ ಎಂದು ಪರಿಭಾವಿಸಬಹುದಾದ ಅಮ್ಮ ಕೇಂದ್ರಿತ  ಸಾಮಾಜಿಕ ರಚನೆ ಆರಂಭವಾಯಿತು.   40-50,000 ವರ್ಷಗಳ ಕಾಲದಲ್ಲಿ ನಡೆಯುತ್ತಾ ಬಂದಿತು. ಲೈಂಗಿಕ ಸಂಬಂಧಗಳು ಹಲವು ಸ್ಥಿತ್ಯಂತರಗಳನ್ನು ಕಂಡು ವಿವಾಹದ ರೂಪು ಪಡೆದ  ದೀರ್ಘ ಕಾಲ ಪ್ರಕ್ರಿಯೆಯ ಬಗ್ಗೆ ಈಗಾಗಲೇ ಎರಡು ಲೇಖನಗಳಲ್ಲಿ ವಿವರಿಸಿದ್ದೇನೆ.

ಮಕ್ಕಳು ಹುಟ್ಟಲು ಗಂಡಸೂ ಕೂಡಾ ಬೇಕು ಎಂದು ಗೊತ್ತಾಗುವ ಮೊದಲೇನೋ ಅಮ್ಮ ಕೇಂದ್ರಿತ ಸಮುದಾಯವಾಗಿ ಬದುಕುವುದು ಸಹಜ. ಆದರೆ ಅಪ್ಪನೊಬ್ಬ ಇದ್ದಾನೆ ಎಂದು ಗೊತ್ತಾದ ಮೇಲೂ 40-50,000  ವರ್ಷಗಳವರೆಗೂ ಅಮ್ಮ ಕೇಂದ್ರಿತ ಸಮುದಾಯ ಮುಂದುವರೆದದ್ದು ಏಕೆ ?   ಕೇವಲ ನಾಲ್ಕೈದು ಸಾವಿರ ವರ್ಷಗಳ ಹಿಂದೆ ಅಪ್ಪ ಕೇಂದ್ರಿತ ಸಮಾಜವಾಗಿದ್ದು ಹೇಗೆ ? ಅಮ್ಮ ಕೇಂದ್ರಿತ ಸಮಾಜವನ್ನು ಪಕ್ಕಕ್ಕೆ ಸರಿಸಿದ್ದು ಹೇಗೆ ?

ಗಣಪತಿಗಳು ಮತ್ತು ಗೌರಿ, ಈ ಪ್ರಶ್ನೆಗಳಿಗೆ ನೀಡುವ ಉತ್ತರ :
ಪುರಾಣಗಳ ಕತೆಯಂತೆ ನೋಡಿದರೂ ಗಣಪತಿ ಕೇವಲ ಗೌರಿಯ ಕುಮಾರ. ಅವಳ ಸೃಷ್ಟಿ. ಅಪ್ಪ ಗೊತ್ತಿಲ್ಲ. ಇದು ಬಹಳ ಸ್ಪಷ್ಟವಾಗಿ ಅಮ್ಮ ಕೇಂದ್ರಿತ ಸಮಾಜದಲ್ಲಿನ ಪ್ರಸಂಗ. ಮತ್ತೊಂದು ವಿಶೇಷ ಗಮನಿಸಬೇಕಾದ್ದು ಗೌರಿ,ಗಣಪತಿ ಹಬ್ಬಗಳು ಜೊತೆ ಜೊತೆಯಾಗಿ ಬರುತ್ತವೆ. ಇಬ್ಬರೂ ಒಟ್ಟಿಗೇ ಪೂಜಿಸಲ್ಪಡುತ್ತಾರೆ. ಆದರೆ ಈ ಹಬ್ಬಗಳಲ್ಲಿ ಶಿವನ ಆರಾಧನೆ ಇಲ್ಲ. ಪ್ರಸ್ತಾಪವೂ ಇಲ್ಲ. ಗೌರಿಯ ಪೂಜೆ ಮಾಡುವ ಬೇರೆ ಬೇರೆ ಆಚರಣೆಗಳಿವೆ. ಉತ್ತರ ಭಾರತದಲ್ಲಿ ಗೌರಿ ಎಂದರೆ ಕೇವಲ ಎಳೆ ಸಸಿಗಳ ಕಟ್ಟು ಮತ್ತು ಅದನ್ನು ಹಿಡಿದ ಕನ್ಯೆ.ಅದರ ಪೂಜೆಯಲ್ಲಿ ಭಾಗವಹಿಸುವವರು ಕೇವಲ ಮಹಿಳೆಯರು. ಮಣ್ಣಿನ ಗಡಿಗೆಯ ಮೇಲೆ ಮಗುವಿನ ಚಿತ್ರ ಬರೆದು ಧಾನ್ಯವನ್ನು ಬಿತ್ತಿ ಮೊಳಕೆ ಬರುವವರೆಗೆ ಪೂಜಿಸುವ ಪದ್ಧತಿ. ಇದು ಗೌರಿ ಒಬ್ಬ ಅಮ್ಮ ದೇವತೆ. ಶಿವ ಆಕೆಯ ಗಂಡ ಎಂಬುದು ನಂತರ ಪುರಾಣ ಕತೆ ಎಂಬುದನ್ನು ಸೂಚಿಸುವಂತಿದೆ.
ಗೌರಿ ನೀರಿನ ದೇವತೆ,ಗಣೇಶ ಮೆಕ್ಕಲು ಮಣ್ಣಿನ ಅಥವಾ ಸಗಣಿ ಗೊಬ್ಬರದ ಸಂಕೇತ ಎಂಬ ಬಗ್ಗೆ ವಿವರವಾಗಿ ಬೇರೆ ಕಡೆ ಬರೆದಿದ್ದೇನೆ.
ಇಲ್ಲಿ ಮುಖ್ಯವಾದ ಅಂಶವೆಂದರೆ ಈ ಗೌರಿಯ ಕುಮಾರ ಗಣದ ಪತಿಯಾದ ಎಂಬುದು. ಮಾನವ ಸಮಾಜದ ಬೆಳವಣಿಗೆಯಾಗುತ್ತಾ , ಜನಸಂಖ್ಯೆ ಹೆಚ್ಚಳ , ಆಹಾರದ ಕೊರತೆ, ಬೇಸಿಗೆಯ ಲ್ಲಿ ನೀರಿಗಾಗಿ ಹಾಹಾಕಾರ ಮತ್ತಿತರ ಸಮಸ್ಯೆಗಳು ವಿವಿಧ ಬುಡಕಟ್ಟುಗಳು ಪದೇ ಪದೇ ಮುಖಾಮುಖಿಯಾಗುವಂತೆ ಮಾಡಿವೆ. ಇದಕ್ಕೆ ಹಲವು ಆಧಾರಗಳು ಭಾರತದಲ್ಲಿಯೂ, ವಿಶ್ವಾದ್ಯಂತವೂ ದೊರೆತಿದೆ. ಒಂದು ಉದಾಹರಣೆ ಕರಗ ಎಂಬ ಕುಂಭಕ್ಕೆ ದೊರೆತಿರುವ ವೀರಕುಮಾರರ ಖಡ್ಗಧಾರಿಗಳ ಸಹಿತ ರಕ್ಷಣೆ. ಇತರ ಬುಡಕಟ್ಟುಗಳ ಜೊತೆ ಪದೇ ಪದೇ ಕಾಳಗ ಹೂಡುವ ರಕ್ಷಿಸಿಕೊಳ್ಳುವ ಅಗತ್ಯ ಬಂದಾಗ ಬುಡಕಟ್ಟಿನ ನಾಯಕಿಯರಾದ ಅಮ್ಮ  ಅದಕ್ಕೆ ಸಿದ್ಧರಾದ ಯುವಪಡೆಯೊಂದನ್ನು ಕಳಿಸಬೇಕಾಯಿತು. ಬುಡಕಟ್ಟುಗಳಲ್ಲಿ  ರಕ್ತ ಬಾಂಧವ್ಯದ ಪರಮ ತೀವ್ರತೆ ಎಂದರೆ ತಮ್ಮ ಬುಡಕಟ್ಟಿನ ಅಥವಾ ಕುಲದ ಯಾರಿಗಾದರೂ ಹಾನಿ ,ಅವಮಾನಗಳಾದರೆ ಇಡೀ ಬುಡಕಟ್ಟು ಅದಕ್ಕೆ ಉತ್ತರ ಕೊಡುವುದು ಇಡೀ ಬುಡಕಟ್ಟಿನ ಹೊಣೆಯಾಗಿರುತ್ತಿತ್ತು. ಅಂತಹ ಯುದ್ಧದ ಪ್ರಸಂಗ ಒದಗಿದಾಗ ಹಿರಿಯಳಾದ ಅಮ್ಮ ತನ್ನ ಮಕ್ಕಳಲ್ಲಿ ಒಬ್ಬ ಸೂಕ್ತ ವೀರನ ನಾಯಕತ್ವದಲ್ಲಿ ಯುವಕರನ್ನು ಯುದ್ಧಕ್ಕೆ ಅಣಿ ಮಾಡಿ ಕಳಿಸುತ್ತಿದ್ದಳು. ಇದು ಬುಡಕಟ್ಟಿನಲ್ಲಿ  ಅಮ್ಮ ಎಂಬ ನಾಯಕಿಯ ಜೊತೆಗೆ ಒಬ್ಬ ಸೇನಾನಾಯಕನನ್ನು ಸೃಷ್ಟಿಸಿತು. ಮೊದ ಮೊದಲು ಇದೊಂದು ತಾತ್ಕಾಲಿಕ ಪದವಿ. ಯುದ್ಧದ ಪ್ರಸಂಗ ಬಂದಾಗ ಮಾತ್ರ ಇಂತಹ ನಾಯಕನ ಆಯ್ಕೆ ಮಾಡಿ ಕಳಿಸಲಾಗುತ್ತಿತ್ತು.  ಇದೇ ಪದ್ಧತಿ ಮುಂದುವರೆದಾಗ ಆ ಹುದ್ದೆ ಖಾಯಂ ಆಯಿತು. ಅಮ್ಮನ ಮಗ ಮೊದಲು ಗಣದ ಸೇನಾ ನಾಯಕನಾದ.

ಇದೇ ಸಮಯದಲ್ಲಿ ಜನ ಸಂಖ್ಯೆಯ ಹೆಚ್ಚಳ ಬುಡಕಟ್ಟುಗಳ ನಡುವೆ ವಸ್ತು ವಿನಿಮಯ ಹೆಚ್ಚಾಗುವಂತೆ ಮಾಡಿತು. ದೂರದೂರದ ಊರುಗಳಿಗೆ ವಾಣಿಜ್ಯ ಬೆಳೆಯಿತು. ಶಿಲಾಯುಧಗಳನ್ನು ತಯಾರಿಸಲು ಅಗತ್ಯವಾದ ವಿಶೇಷ ಕಲ್ಲುಗಳಿಗಾಗಿ, ಅವುಗಳನ್ನು ಪರಿಣಸಮಕಾರಿಯಾಗಿ ಕತ್ತರಿಸುವ ಗಾಜಿನಂತಹ ಹರಿತ ಮತ್ತು ಕಲ್ಲುಗಳಿಗಿಂತಲೂ ಗಟ್ಟಿಯಾದ ವಸ್ತುಗಳು- ಎಲ್ಲೋ ಒಂದು ಅಗ್ನಿ ಪರ್ವತ ಯಾವಾಗಲೋ ಸಿಡಿದು ಸುರಿಸಿದ ಲಾವಾರಸ ಗಟ್ಟಿಯಾದಾಗ ಇಂತಹ ವಿಶೇಷ ಗುಣದ ವಸ್ತು ಸಿಗುತ್ತಿತ್ತು. ಕೆಲವೊಮ್ಮೆ ಹಲವು ನೂರು ಕಿಮಿ ಪಯಣಿಸಿ ಅಲ್ಲಿಗೇ ಹೋಗಿ ಅವುಗಳನ್ನು , ಬುಡಕಟ್ಟು ಗುರುತುಗಳಿಗೆ, ವಿವಿಧ ರೀತಿಯ ಅಲಂಕರಣಕ್ಕೆ ಬಳಸುವ ಮಣಿಗಳು ಇತ್ಯಾದಿಗಳನ್ನು ತರುವುದು, ತಮ್ಮಲ್ಲಿ ಸಿಗುವ ವಿವಿಧ ಪ್ರಾಣಿಗಳ ಚರ್ಮಗಳು, ಆನೆಗಳ ದಂತಗಳು ಮುಂತಾದವುಗಳನ್ನು, ತಯಾರಿಸಿದ ಪರಿಣತ ಶಿಲಾಯುಧಗಳನ್ನು ಕೂಡಾ ವಿನಿಮಯ ಮಾಡಿಕೊಳ್ಳುವುದು ಇತ್ಯಾದಿ ದೂರ ವಾಣಿಜ್ಯ ಬೆಳೆಯಿತು.

ಪ್ರಾಚೀನ ಶಿಲಾಯುಗದ ಕೊನೆಯ ಕಾಲದಲ್ಲಿ ಆರಂಭವಾದ ಇಂತಹ ವಾಣಿಜ್ಯ ನವ ಶಿಲಾಯುಗ ,  ಕೃಷಿ ,ಪಶುಸಂಗೋಪನೆಯ ಆರಂಭದಲ್ಲಿ ಮತ್ತಷ್ಟು ಬೆಳೆಯಿತು. ಇಂತಹ ಕೆಲಸಗಳಿಗೆ ಕೂಡಾ ಪುರುಷ ಸದಸ್ಯರನ್ನು ಹೆಚ್ಚು ತೊಡಗಿಸಬೇಕಾಯಿತು. ಇಂತಹ ಸಂದರ್ಭಗಳಿಂದ ಅಮ್ಮ ತನ್ನ ಮಗನನ್ನು ಬುಡಕಟ್ಟು ಅಥವಾ ಕುಲದ  ನಾಯಕನನ್ನಾಗಿ ನೇಮಿಸಬೇಕಾಯಿತು. ಹೀಗೆ ಗಣಪತಿಗಳು ಅಮ್ಮನ ಸ್ಥಾನವನ್ನು ಪಡೆದುಕೊಂಡರು ಬುಡಕಟ್ಟು ಅಥವಾ ಕುಲಗಳಿಗೆ ಗಣ ಎಂದೂ ಸಂಸ್ಕೃತದಲ್ಲಿ ಕರೆಯಲಾಗುತ್ತಿತ್ತು. ಇಂತಹ ಗಣದ ನಾಯಕನೆಂದು, ಗಣಪತಿ, ಗಣದ ಈಶ ಗಣೇಶನೆಂದು ಅವನು ಕರೆಯಲ್ಪಟ್ಟ. ಹೀಗೆ ಅಮ್ಮನಿಂದ ಮಗಳಿಗೆ ಗಣದ ನಾಯಕತ್ವ ವರ್ಗಾವಣೆಯಾಗುತ್ತಿದ್ದ ಸಾವಿರಾರು ವರ್ಷದ ಪದ್ಧತಿ ಅಮ್ಮನ ಆಯ್ಕೆಯಾಗಿ ಅವಳ ಮಗನಿಗೆ ವರ್ಗಾವಣೆಯಾಯಿತು.

ಗಣನಾಯಕನಾದ ಹಿರಿಯ ಅಮ್ಮನ ಈ ಮಗ ಮುಂದಿನ ತಲೆಮಾರಿನವರಾದ  ಆಕೆಯ ಹೆಣ್ಣು ಮಕ್ಕಳ ಮಕ್ಕಳಿಗೆ ಸೋದರ ಮಾವನಲ್ಲವೇ. ಸೋದರ ಮಾವ ಮುಂದೆ ಗಣದ ಹೊಣೆ, ತನ್ನ ಅಳಿಯಂದಿರ ಹೊಣೆ ಹೊತ್ತುಕೊಂಡ. ಮದುವೆಯ ಪದ್ಧತಿ ಆರಂಭವಾಗದ ಆ ಸಮಯದಲ್ಲಿ ಅಪ್ಪನ ಅರಿವಿಲ್ಲ. ಸೋದರ ಮಾವನೇ ಎಲ್ಲ.  ಇದೇ ಅಳಿಯ ಸಂತಾನ ಪದ್ಧತಿ ಕೂಡಾ.

ಹೀಗೆ ಪುರುಷ ಮೊತ್ತ ಮೊದಲು ಮಾನವ ಸಮಾಜದ ನಾಯಕನಾದ. ಆದರೆ ಯಾರು ನಾಯಕನಾಗಬೇಕೆಂಬ ಹೊಣೆ  ಅಮ್ಮನ ಅಥವಾ ಅಮ್ಮಂದಿರ  ಕೈಯಲ್ಲೇ ಇತ್ತು.

ಇದಿನ್ನೂ ಪುರುಷ ಕೇಂದ್ರಿತ ಸಮಾಜ. ಪುರುಷಾಧಿಪತ್ಯದ ಸಮಾಜದ ಮೊದಲ ಹೆಜ್ಜೆ.

ಈ ಗಣಪತಿಗೆ ಗಜಮುಖ ಬಂದದ್ದು ಹೇಗೆ ? ಗಜಮುಖ  ಗಣಪತಿ ತನ್ನ ದಡೂತಿ ದೇಹದ ಭಾರವನ್ನು ಇಲಿಯ ಮೇಲೆ ಹೊರಿಸಿದ್ದು ಹೇಗೆ ? ಇಲಿಯ ವಾಹನತ್ವಕ್ಕೂ ಮಹಿಳೆ ಗುಲಾಮಳಂತೆ ಬದುಕಬೇಕಾದ ಸ್ಥಿತಿಗೂ ಏನು ಸಂಬಂಧ ?
ಮುಂದಿನವಾರದ ಸಂಚಿಕೆಯಲ್ಲಿ.

‍ಲೇಖಕರು Admin

August 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: