ಜಿ ಎನ್ ನಾಗರಾಜ್ ಅಂಕಣ- ಕ್ರಿಸ್ಮಸ್ ಎಂಬ ಸಂಕ್ರಾಂತಿ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

33

ಕ್ರಿಸ್ಮಸ್ ಎಂದರೆ ಸಂಕ್ರಾಂತಿ, ಈಸ್ಟರ್ ಎಂದರೆ ಯುಗಾದಿ. ಕ್ರಿಸ್ಮಸ್ ಎಂದರೆ ಜಗಕ್ಕೆಲ್ಲ ಗೊತ್ತು, ಯೇಸು ಕ್ರಿಸ್ತ ಹುಟ್ಟಿದ ದಿನ. ಕ್ರಿಶ್ಚಿಯನ್ನರ ದೊಡ್ಡ ಹಬ್ಬ ಎಂದು. ಆದರೆ ಅದು ಸಂಕ್ರಾಂತಿ ಹಬ್ಬದ ಯುರೋಪಿನ ರೂಪ. ಕ್ರಿಸ್ತನ ಹುಟ್ಟಿಗೆ ಸಾವಿರಾರು ವರ್ಷಗಳ ಮೊದಲಿನಿಂದಲೇ ಆಚರಣೆಯಲ್ಲಿದ್ದ ಹಬ್ಬ. ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಯಣ ಆರಂಭಿಸುವ , ಗಡ ಗಡ ನಡುಗಿಸುವ ಯುರೋಪಿನ ಕೊರೆವ ಚಳಿ ಕೊನೆಯಾಗುವ ಕಾಲ ಬಂತೆಂಬ ಆಶಾ ಭಾವನೆಯ ಹಬ್ಬ. ನಮ್ಮ ದೇಶದ ಸಂಕ್ರಾಂತಿಯಂತಹ ಉತ್ತರಾಯಣ ಪುಣ್ಯಕಾಲದ ಆರಂಭವನ್ನು ಯುರೋಪಿನ ಬುಡಕಟ್ಟು ಜನರು ಆಚರಿಸುತ್ತಿದ್ದ ಹಬ್ಬ. ಬುಡಕಟ್ಟು ಕಾಲದ ನಂತರವೂ ಇಡೀ ಯುರೋಪಿನಲ್ಲಿ ಆಚರಿಸುತ್ತಿದ್ದ ಸಂಭ್ರಮ ಅದು. ರೋಮನ್ ಸಾಮ್ರಾಜ್ಯದಲ್ಲಂತೂ ವಾರಗಟ್ಟಲೆ ವೈಭವದ ಆಚರಣೆ. 

ಕನ್ನೆ ಮೇರಿ, ಅವಳ ಶಿಶು,ಕ್ರಿಸ್ಮಸ್ ಮರ, ಸಾಂಟಾ ಕ್ಲಾಸ್ ಮುಂತಾದ ಅದರ ಮುಖ್ಯ ನಂಬಿಕೆ, ಆಚರಣೆಗಳೂ ಕೂಡಾ ಬುಡಕಟ್ಟು ಮೂಲದವಂತೆ. ಈಜಿಪ್ಟ್, ಸಿರಿಯಾ, ಪರ್ಷಿಯಾ, ಗ್ರೀಸ್, ರೋಮ್‌ ಮೊದಲಾದ ದೇಶಗಳ ಪ್ರಾಚೀನ ಆಚರಣೆಗಳ ಬಗ್ಗೆ ಅಧ್ಯಯನ ಮಾಡಿದ ಮಾನವ ಶಾಸ್ತ್ರಜ್ಞರು ವಿವರಿಸಿದ್ದಾರೆ. ಈ ಆಚರಣೆಗಳು ಹಾಗೂ ಅವುಗಳು ಕ್ರಿಸ್ತನ ಹುಟ್ಟಿನ ಜೊತೆ ಜೋಡಿಸಿಕೊಂಡ ಬಗೆಯ ಬಗ್ಗೆ ಕೆಳಗೆ ವಿವರಿಸಲಾಗಿದೆ.

 ಈಸ್ಟರ್ ಎಂಬುದು ಕ್ರಿಶ್ಚಿಯನ್ನರ ಮತ್ತೊಂದು ಮುಖ್ಯ ಹಬ್ಬ. ಈಗ ಅವರು ಆಚರಿಸುತ್ತಿರುವಂತೆ ಕ್ರಿಸ್ತನ ಪುನರಾಗಮನ. ಗುಡ್ ಫ್ರೈಡೆ‌ಯ ದಿನ ಶಿಲುಬೆಗೇರಿಸಲ್ಪಟ್ಟ ಯೇಸುವು ಮತ್ತೆ ಸಮಾಧಿಯಿಂದೆದ್ದು ಕಾಣಿಸಿಕೊಂಡ ಸಂಭ್ರಮದ ದಿನ ಈಸ್ಟರ್. ಆದರೆ ಇದು ಬರುವುದು ಮಾರ್ಚ್‌ನಲ್ಲಿ. ವಸಂತ ಋತುವಿನ ಆಗಮನದ ಜೊತೆಗೆ ಕೂಡಿಕೊಂಡಿದೆ. ನಮ್ಮ ಯುಗಾದಿಯಂತೆಯೇ ಇದೂ ಕೂಡಾ ವಸಂತಾಗಮನವನ್ನು ಬುಡಕಟ್ಟು ಜನರು ಸಂಭ್ರಮಿಸುತ್ತಿದ್ದ ಹಬ್ಬ. ಈಸ್ಟರ್ ಹಬ್ಬದ ಬನ್ನಿ ಮೊಲಗಳು, ಬಣ್ಣ ಬಳಿದ ಮೊಟ್ಟೆಗಳು ಮುಂತಾದ ಈಸ್ಟರ್ ಹಬ್ಬದ ಆಚರಣೆಗಳೂ ಬುಡಕಟ್ಟು ಮೂಲದವು. 

ಈ ಎರಡು ಕ್ರಿಶ್ಚಿಯನ್ ಹಬ್ಬಗಳಲ್ಲದೇ ನವೆಂಬರ್‌ನಲ್ಲಿ ಆಚರಿಸುವ ಆಲ್ ಸೋಲ್ಸ್ ಅಥವಾ ಎಲ್ಲ ಆತ್ಮಗಳ ಹಬ್ಬವೂ ಕೂಡಾ ಅದೇ ಸಮಯದಲ್ಲಿ ಯುರೋಪಿನಲ್ಲಿ, ನೆರೆಯ ದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಆಚರಿಸಲಾಗುತ್ತಿದ್ದ ಹಿರಿಯರ ಹಬ್ಬ. ನಮ್ಮ ಓಣಂ, ಪಕ್ಷ, ವಾರ್ಷಿಕ ತಿಥಿ, ದೀಪಾವಳಿಗಳಂತೆ. 

ಇನ್ನೂ ಕೆಲವು ಸಂತರ ಹಬ್ಬಗಳೂ ಕೂಡಾ ಬುಡಕಟ್ಟು ಆಚರಣೆಗಳ ಸಮಯಕ್ಕೇ ಜೋಡಿಸಿಕೊಂಡವು. 

ಅಜೇಯ ಸೂರ್ಯ ಹುಟ್ಟಿದ ದಿನ 

( Dies Solis Invecti nati ) ಯೇಸು ಕ್ರಿಸ್ತ ಹುಟ್ಟಿದ ದಿನವಾದದ್ದು ಹೇಗೆ ? 

ಯೇಸು ಹುಟ್ಟಿದ್ದು ಎಂದು ಎಂಬ ಬಗ್ಗೆ ಬೈಬಲ್‌ನಲ್ಲಿ ಯಾವ ಸುಳಿವೂ ಇಲ್ಲ. ಕ್ರಿಸ್ತ ಶಕೆಯ ಮೊದಲ ಎರಡು ಶತಮಾನಗಳಲ್ಲಿ ಕ್ರಿಸ್ತನ ಹುಟ್ಟನ್ನು ಆಚರಿಸುವ ಪದ್ಧತಿಯೇ ಇರಲಿಲ್ಲ. ಕ್ರಿಶ್ಚಿಯನ್ ಧರ್ಮ ಹರಡಿದ ಮೊದಲ ಶತಮಾನಗಳಲ್ಲಿ ಧಾರ್ಮಿಕ ಅಧಿಕಾರಿಗಳು ಕ್ರಿಸ್ತ ಹುಟ್ಟಿದ ಹಬ್ಬಕ್ಕಿಂತ ಜನರಿಗಾಗಿ ಪ್ರಾಣ ತ್ಯಾಗ ಮಾಡಿದ ಗುಡ್ ಫ್ರೈಡೇ ಮತ್ತು ಅವನ ಪುನರಾಗಮನದ ಈಸ್ಟರ್ ಹಬ್ಬವೇ ಮುಖ್ಯ. ಹುಟ್ಟಿದ ದಿನವಲ್ಲ ಎಂದು ಭಾವಿಸಿದ್ದರು.‌ನಂತರದ ವರ್ಷಗಳಲ್ಲಿ ಕ್ರಿಸ್ತ ಹುಟ್ಟಿದ ದಿನದ ಬಗ್ಗೆ ನಿರ್ದಿಷ್ಟ ದಿನಾಂಕ ಇಲ್ಲದ ಕಾರಣ‌ ಬೇರೆ ಬೇರೆ ದಿನಗಳಲ್ಲಿ ಅದನ್ನು ಆಚರಿಸಲಾಗುತ್ತಿತ್ತು. 

ರೋಮ್ ಚಕ್ರಾಧಿಪತ್ಯದಲ್ಲಿ ಡಿಸೆಂಬರ್ 25 ನ್ನು ಸೂರ್ಯ ಹುಟ್ಟಿದ ದಿನವೆಂದು ಬಹು ಕಾಲದಿಂದ ಆಚರಿಸಲಾಗುತ್ತಿತ್ತು. ಅದು ಬರಿ ಸೂರ್ಯ  ಸೋಲಿಸಲಾಗದ ಸೂರ್ಯ ಹುಟ್ಟಿದ ದಿನ. ಏಕೆಂದರೆ ಡಿ.25 ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಯಣ ಆರಂಭಿಸುವ ಉತ್ತರಾಯಣದ ದಿನ.‌ಮಿತ್ರ‌ಎಂಬ ಸೂರ್ಯನ ಆರಾಧನೆಯ ಪಂಥದ ಹಬ್ಬವೂ ಆಗಿತ್ತು. ( ಭಾರತದಲ್ಲಿ ಉತ್ತರಾಯಣದ ಆರಂಭ ಜನವರಿ 14 ಕೆಲವೊಮ್ಮೆ 15 ಎಂದು ಭಾವಿಸಿ ಸಂಕ್ರಾಂತಿಯನ್ನು ಅಂದು ಆಚರಿಸಲಾಗುತ್ತದೆ. ಆದರೆ ಭಾರತೀಯ ಪಂಚಾಂಗದಲ್ಲಿನ ಲೆಕ್ಕಾಚಾರದಲ್ಲಿ ಉತ್ತರಾಯಣದ‌ ಆರಂಭ ದಿನ ಮತ್ತು ಮಕರ ಸಂಕ್ರಾಂತಿಯ ದಿನವನ್ನು ಒಟ್ಟಾಗಿ ಆಚರಿಸಲಾಗುತ್ತಿತ್ತು.‌ಆದರೆ ಭೂಮಿಯ ವಾಲುವಿಕೆಯಿಂದಾಗಿ ಪ್ರತಿ ವರ್ಷ ಇವೆರಡರ ನಡುವೆ 50 ಸೆಕೆಂಡ್ ಅಂತರ ಉಂಟಾಗುತ್ತಿದೆ . ಉತ್ತರಾಯಣದ ದಿನ ಮತ್ತು ಮಕರ ಸಂಕ್ರಾಂತಿ ಎರಡೂ ಒಂದೇ‌ ದಿನವಾಗಿ ಡಿ.22 ರಂದು ಇದ್ದದ್ದು ಕ್ರಿಸ್ತ ಶಕ 272ರಲ್ಲಿ 1750 ವರ್ಷಗಳ ಹಿಂದೆ. ಉತ್ತರಾಯಣದ ಆರಂಭ ಡಿ. 22 ರಲ್ಲಿಯೇ ಇದೆ.  ಮಕರ ಸಂಕ್ರಾಂತಿ ಜ.14 ಕ್ಕೆ ಬಂದಿದೆ.).

ಯುರೋಪಿನಲ್ಲಿ ತಾಪಮಾನ ಬಹಳ ಕಡಿಮೆಯಲ್ಲವೇ. ಜನರಿಗೂ ಕಷ್ಟ. ಕೆಲ ಗಿಡ ಮರಗಳ ಹೊರತಾಗಿ ಉಳಿದೆಲ್ಲವೂ ಬೋಳಾಗಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ದಕ್ಷಿಣಾಯನದ ಅವಧಿ ಸೂರ್ಯನ ಸೋಲಿನ ಅವಧಿ ಎಂದು ಜನರು ಭಾವಿಸಿದ್ದರು. ಉತ್ತರಾಯಣದ ನಂತರ ಸೂರ್ಯನ ಗೆಲುವಿನ ದಿನಗಳಿಗಾಗಿ  ಜನರೆಲ್ಲ ಎದುರು ನೋಡುತ್ತಿದ್ದ ದಿನ. ಚಳಿಯ ಸಂಕಟ ಸದಾ ಕಾಲ ಇರುವುದಿಲ್ಲ. ಸೂರ್ಯ ಬೆಳೆಯಲಾರಂಬಿಸುತ್ತಾನೆ, ಚಳಿಗಾಲ ಕೊನೆಯಾಗಿಯೇ ಆಗುತ್ತದೆ ಎಂಬ ಭರವಸೆ, ಆಶಾ ಭಾವನೆಯನ್ನು ಮೂಡಿಸುವ ಆಚರಣೆ. 

ಕನ್ಯೆ ಜನನ ನೀಡಿದಳು, ಶಿಶು ಜನನವಾಯಿತು :

ಈಜಿಪ್ಟ್, ಸಿರಿಯಾ ಮತ್ತಿತರ ದೇಶಗಳಲ್ಲಿ ಸೂರ್ಯಾರಾಧನೆ ಬಹಳ ವ್ಯಾಪಕವಾಗಿತ್ತು. ಅಲ್ಲಿ ಬಹಳ ಹಿಂದಿನ ಕಾಲದಿಂದಲೂ ಸೂರ್ಯ -ಗ್ರೇಟ್ ಮದರ್, ಹೆವೆನ್ಲಿ ವರ್ಜಿನ್ ಮಹಾಮಾತೆ, ಸ್ವರ್ಗೀಯ ಕನ್ಯೆಯ ಶಿಶು ಎಂದು ಭಾವಿಸಲಾಗಿತ್ತು. ಉತ್ತರಾಯಣದ ಸಮಯದಲ್ಲಿ ಸೂರ್ಯನ ಜನನ ಎಂದೂ ಭಾವಿಸುತ್ತಿದ್ದರು. ಉತ್ತರಾಯಣದ ದಿನದ ಹಿಂದಿನ ದೀರ್ಘತಮ ರಾತ್ರಿಯಂದು ಒಂದು ನಿರ್ದಿಷ್ಟ ದೇವಾಲಯದ ತೀರಾ ಒಳಕ್ಕೆ ಹೋಗಿರುತ್ತಿದ್ದರು. ಮಧ್ಯ ರಾತ್ರಿ ಒಳಗಿನಿಂದ ಹೊರಕ್ಕೆ “ಹೋ ಕನ್ಯೆಗೆ ಹೆರಿಗೆಯಾಯಿತು” ಎಂದು ಕೂಗುತ್ತಾ ಹೊರ ಬರುತ್ತಿದ್ದರು. ಈಜಿಪ್ಟಿನಲ್ಲಂತೂ ಆ ಸಮಯದಲ್ಲಿ ಆಗತಾನೆ ಹುಟ್ಟಿದ ಶಿಶುವಿನಂತೆ ಸೂರ್ಯನನ್ನು ಚಿತ್ರಿಸಿ ಅದನ್ನು ಹೊರತಂದು ಹೊರಗೆ ನೆರೆದಿರುತ್ತಿದ್ದ ಸೂರ್ಯಾರಾಧಕರಿಗೆ ತೋರಿಸುತ್ತಿದ್ದರು. 

ಕನ್ಯೆಯ ಹೆರಿಗೆ ಮತ್ತು ಡಿ.25 ರಂದು ಅವಳು ಶಿಶುವಿಗೆ ಜನನ ನೀಡುವುದು ಎಂಬುದೂ ಕೂಡಾ ಪ್ರಾಚೀನ ಕಾಲದ ಆಚರಣೆಯ ಭಾಗ. ನಂತರ ಕ್ರೈಸ್ತ ಧರ್ಮದಲ್ಲಿ ಈ ಭಾವನೆ ಕನ್ಯೆ ಮೇರಿ ದೇವರ ಮಗನಿಗೆ ಜನ್ಮ ನೀಡಿದ್ದು ಎಂಬ ರೂಪ ತಳೆದಿದೆ ಎಂದು ಸರ್ ಜೇಮ್ಸ್ ಫ್ರೇಜರ್ ಎಂಬ ಮಾನವ ಶಾಸ್ತ್ರಜ್ಞರು ದಾಖಲಿಸಿದ್ದಾರೆ. Sun ಎಂಬ ಸೂರ್ಯನ ಜನನ son ಎಂಬ ದೇವರ ಮಗ ಹುಟ್ಟಿದ ಎಂಬ ರೂಪ ತಳೆದಿದೆ ಎಂಬುದನ್ನು ಕ್ರಿಸ್ಮಸ್ ಆಚರಣೆಗಳ ಮೂಲ ಆದಿವಾಸಿ ರೂಪವನ್ನು ಅನ್ವೇಷಿಸಿದ ಹಲವು ಮಾನವ ಶಾಸ್ತ್ರಜ್ಞರು ವಿವರಿಸಿದ್ದಾರೆ.

 ರೋಮ್ ಚಕ್ರಾಧಿಪತ್ಯದಲ್ಲಿ ಡಿ.25 ಸೂರ್ಯನ ಹುಟ್ಟು ಹಬ್ಬದ ಜೊತೆಗೆ ಡಿ. 17ರಿಂದಲೇ ಶನಿ ದೇವತೆಯನ್ನು ಕೃಷಿ ಹಬ್ಬವಾಗಿ ಆಚರಿಸುತ್ತಿದ್ದರು. ( ನಮ್ಮ ಸಂಕ್ರಾಂತಿ ಹಬ್ಬವೂ ಕೃಷಿಯ ಹಬ್ಬವಲ್ಲವೇ ?  ) ಅದನ್ನು ಸಾಟರ್ನಾಲಿಯಾ ಹಬ್ಬ ಎಂದು ಕರೆಯಲಾಗುತ್ತಿತ್ತು. ಅದೊಂದು ಫಲವಂತಿಕೆಯ ಹಬ್ಬವಾಗಿತ್ತು. ಈ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗಳು ವಾರಗಳ ಹಿಂದೆಯೇ ಆರಂಭವಾಗುತ್ತಿತ್ತು. ಬಹಳ ಉತ್ಸಾಹದಿಂದ ಈ ಎರಡೂ ಹಬ್ಬಗಳನ್ನು ಆಚರಿಸುತ್ತಿದ್ದರು. ರಾತ್ರಿಯೆಲ್ಲಾ ಕುಡಿದು, ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು.

ಕ್ರಿಶ್ಚಿಯನ್ ಧರ್ಮ ಪ್ರಚಲಿತವಾದ ನಂತರ , ರೋಮನ್ ಸಾಮ್ರಾಜ್ಯ ಕ್ರಿಶ್ಚಿಯನ್ ಧರ್ಮವನ್ನು ಪ್ರಭುತ್ವವಾಗಿ ಘೋಷಿಸಿದ ನಂತರ ಸಾಟರ್ನಾಲಿಯಾ ಮತ್ತು ಅಜೇಯ ಸೂರ್ಯ ಹುಟ್ಟಿದ ದಿನಗಳ ಹಬ್ಬಗಳು ಪಾಗನ್ ಆಚರಣೆಗಳು. ಇವುಗಳನ್ನು ಯಾರೂ ಆಚರಿಸಬಾರದು, ಕ್ರಿಶ್ಚಿಯನ್ನರು ಇವುಗಳಲ್ಲಿ ಭಾಗವಹಿಸಬಾರದು ಎಂದು ಕ್ರಿಶ್ಚಿಯನ್ ಧರ್ಮಾಧಿಕಾರಿಗಳು, ರೋಮನ್ ಪ್ರಭುತ್ವಾಧಿಕಾರಿಗಳು ನಿಷೇಧ ಮಾಡಿದರು.‌ ಇವುಗಳನ್ನು ‌ನಿರಂತರವಾಗಿ ಕಟು ಟೀಕೆಗೆ ಮಾತ್ರವಲ್ಲ ನಿಂದನೆಗೆ ಒಳಪಡಿಸಿದರು. ಶತಮಾನಗಳ ಕಾಲ ಈ ಸಂಘರ್ಷ ನಡೆಯುತ್ತಿತ್ತು. ಹಲವೊಮ್ಮೆ ಹಿಂಸಾತ್ಮಕ ಕದನ ಕೂಡಾ.

ಆದರೂ ಬಹು ದೊಡ್ಡ ಪ್ರಮಾಣದಲ್ಲಿ ಕ್ರಿಶ್ಚಿಯನ್ನರು ಈ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಈ ಸನ್ನಿವೇಶದಲ್ಲಿ ರೋಮನ್ ಸಾಮ್ರಾಜ್ಯದ ಅದಿಕಾರಿಯೂ ಜೊತೆಗೆ ಒಬ್ಬ ಧರ್ಮಾಧಿಕಾರಿಯೂ ಆಗಿದ್ದ ಸೆಕ್ಸ್‌ಟಸ್ ಜ್ಯೂಲಿಯಸ್ ಆಫ್ರಿಕಾನಸ್ ಕ್ರಿ.ಶ. 225 ರಲ್ಲಿ  ಡಿ.25 ರಲ್ಲಿಯೇ ಯೇಸು ಜನಿಸಿದ್ದು ಎಂಬುದಕ್ಕೆ ಒಂದು ವಿಶಿಷ್ಟ ಧಾರ್ಮಿಕ ಕಾರಣ ನೀಡಿ ಕ್ರಿಸ್ತ ಧರ್ಮದ ಚರಿತ್ರೆ ಬರೆದ. ಆದರೂ ಇದು ಸಾರ್ವತ್ರಿಕವಾಗಿ ಒಪ್ಪಿಗೆ ಪಡೆದಿರಲಿಲ್ಲ.

 ಮೊದಲ ಕ್ರಿಶ್ಚಿಯನ್ ರೋಮನ್ ಸಾಮ್ರಾಟ ಕಾನ್ಸ್‌ಸ್ಟಾಂಟೈನ್ ಕ್ರಿ.ಶ. 325 ರಲ್ಲಿ ಕ್ರಿಸ್ಮಸ್- ಯೇಸು ಹುಟ್ಟಿದ ದಿನವನ್ನು ಡಿ.25 ರಂದು ಆಚರಿಸಬೇಕೆಂದು ತೀರ್ಮಾನಿಸಿದನು.‌ ನಂತರ ಚರ್ಚ್ ಕ್ರಿ.ಶ.336 ರಲ್ಲಿ ಅಧಿಕೃತವಾಗಿ ಡಿ.25 ರಂದು ಕ್ರಿಸ್ತನ ಜನ್ಮ ದಿನಾಚರಣೆಯಾಗಿ ಆಚರಿಸಿತು. ನಂತರದ ಶತಮಾನಗಳಲ್ಲಿ “ಪಾಗನ್ ” ಎಂದು ಹೆಸರಿಸಲಾದ ಹಬ್ಬಗಳ ಹಲವು ಆಚರಣೆಗಳನ್ನು ಕ್ರಿಸ್ಮಸ್ ಒಳಗೊಂಡಿತು. ಆ ಆಚರಣೆಗಳಿಗೆ ಪರ್ಯಾಯ‌ ಆಚರಣೆಯಾಗಿ ಜನಪ್ರಿಯವಾಯಿತು. 

ಸಾಮ್ರಾಟನ ಮತ್ತು ಚರ್ಚ್‌ನ ಈ ತೀರ್ಮಾನಕ್ಕೆ ಕಾರಣ ಪ್ರಾಚೀನ ಆಚರಣೆಗಳ ಕ್ರಿಶ್ವಿಯನೀಕರಣ ( christianisation ). ಅದರ ಮೂಲಕ ಕ್ರೈಸ್ತೇತರ ಜನರನ್ನು ಸೆಳೆಯುವುದು, ಕ್ರೈಸ್ತರ ನಡುವೆ ಏಕೀಕರಣ. ರೋಮನ್ ಸಾಮ್ರಾಟರು ಮತ್ತು ಪೋಪರುಗಳು ಕೈಗೊಂಡ ಈ ಕ್ರಮ  ಒಂದು ರಾಜಕೀಯ ಕ್ರಮ ಎಂದು ಬಹಳ ಜನ ಕ್ರಿಶ್ಚಿಯನ್ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. 

ಸೆಕ್ಸ್‌ಟಸ್ ಕ್ರಿಸ್ತ ಹುಟ್ಟಿದ್ದು ಡಿ 25 ರಂದೇ ಎಂದು ಸಾಧಿಸಲು ನೀಡಿದ ಕಾರಣ ಧಾರ್ಮಿಕವಾಗಿತ್ತೇ ಹೊರತು ಐತಿಹಾಸಿಕವಾಗಿರಲಿಲ್ಲ. ಅದೊಂದು ವಿಶಿಷ್ಟ ತರ್ಕವಾಗಿತ್ತು ! 

ಬೈಬಲ್ ಪ್ರಕಾರ ವಿಶ್ವದ ಸೃಷ್ಡಿ ಆರಂಭವಾದ ದಿನ ಮಾರ್ಚ್ 21. ಅಂದಿನಿಂದ ವಿವಿಧ ಸೃಷ್ಟಿಗಳು ಸಾಗುತ್ತಾ ಮಾರ್ಚ್ 25 ರಂದು ಬೆಳಕಿನ ಸೃಷ್ಟಿಯಾದ ದಿನವಂತೆ. ಕ್ರಿಶ್ಚಿಯನ್ನರಿಗೆಲ್ಲ ವಿಶ್ವದ ಬೆಳಕಾದ ಕ್ರಿಸ್ತ ಆ ದಿನವಲ್ಲದೆ ಬೇರಾವ ದಿನ ಮೇರಿಯ ಗರ್ಭ ಹೊಗಲು ಸಾಧ್ಯ ? ಆದ್ದರಿಂದ ಮಾರ್ಚ್ 25 ರಂದೇ ಮೇರಿಯ ಗರ್ಭ ಧಾರಣೆಯಾಯಿತು. ಅಂದಿನಿಂದ 9 ತಿಂಗಳಿಗೆ ತಾನೇ ಜನನ. ಆದ್ದರಿಂದ ಒಂದು ದಿನವೂ ಹೆಚ್ಚು ಕಡಿಮೆಯಾಗದೆ  ಡಿ.25 ರಂದು ಕ್ರಿಸ್ತನ ಜನನವಾಯಿತು. ಎಷ್ಟೊಂದು ಸುಂದರ ಕ್ರಿಸ್ತ ಧರ್ಮದ ಚರಿತ್ರಕಾರನಾದ ಸೆಕ್ಸ್‌ಟಸ್ ಎಂಬ ಪಾದ್ರಿಯ ತರ್ಕ !

ಪುರಾಣಗಳನ್ನು ಸೃಷ್ಟಿ ಎಲ್ಲ ಧರ್ಮಗಳ ಅನಿವಾರ್ಯ ಅಂಗ ಎಂಬುದಂತೂ ಇದರಿಂದ ಸಾಬೀತಾಗುತ್ತದೆ. 

ಅಂತೂ ಜಗಕೆಲ್ಲ ನಿಜ ಬೆಳಕನ್ನೀವ ಆ ಸನ್‌ನ (sun )ಹುಟ್ಟಿನ ಸಂಭ್ರಮವನ್ನು ಕ್ರಿಶ್ಚಿಯನ್ನರಿಗೆ ಧಾರ್ಮಿಕ ಬೆಳಕನ್ನು ನೀಡಿದ ಈ ಸನ್‌ನ (son) ಜನನದ  ಸಂಭ್ರಮ ಆವರಿಸಿಕೊಂಡಿತು. ಆ ಸೂರ್ಯನಿಗೆ ಜನ್ಮವೀಯುವಳೆಂದು ನಂಬಲಾದ ದೇವ ಕನ್ಯೆಯ ಸ್ಥಾನವನ್ನು ಈ ಕನ್ಯೆ ಮೇರಿ ತುಂಬಿದಳು.

ಜೊತೆಗೆ ಕ್ರಿಸ್ಮಸ್ ಹಬ್ಬದ ಮುಖ್ಯ ಅಂಗಗಳಾದ ಕ್ರಿಸ್ಮಸ್ ಮರ, ಅದರಲ್ಲಿ ತೂಗುವ ದೀಪಗಳು. ಚಾಕಲೇಟ್‌ಗಳು, ಸಾಂಟಾ ಕ್ಲಾಸ್ ಎಂಬ ಕೆಂಪು ದಿರಿಸಿನ ಪ್ರೀತಿಯ ಮುದುಕ, ಅವನ ಕೊಡುಗೆಗಳು ಇಂತಹ 16 ಕ್ಕಿಂತ ಹೆಚ್ಚು ಆಚರಣೆಗಳು ಕೂಡಾ ಜರ್ಮನಿ, ಯುರೋಪಿನ ಉತ್ತರ ಭಾಗದ, ವಿಶ್ವದ ವಿವಿಧ ಪ್ತದೇಶಗಳ ಬುಡಕಟ್ಟುಗಳ, ಜನಪದಗಳ ಮೂಲದ ಆಚರಣೆಗಳು , ಕ್ರಿಸ್ಮಸ್ ಹಬ್ಬದೊಳಗೆ ಸೇರಿಕೊಂಡವು. ಅಥವಾ ಗುಳುಂ ಆದವು ಎನ್ನಬೇಕೆ ? 

ಈಸ್ಟರ್ -ವಸಂತ ಕಾಲದ ದೇವಿಯ ಹಬ್ಬ.

ಕ್ರಿಸ್ತ ಶಿಲುಬೆಗೇರಿ ಪುನರಾಗಮನದ ಹಬ್ಬ ಈಸ್ಟರ್‌ನ ಹೆಸರೇ ಆಂಗ್ಲೋ ಸ್ಯಾಕ್ಸನ್ ಸಮುದಾಯದ ಈಸ್ತ್ರ, Eostre ಎಂಬ ವಸಂತ ದೇವಿಯ ಮೂಲದ್ದು. ಆದರೆ ಇದರ ಬುಡಕಟ್ಟು ಮೂಲ ಆರಂಭವಾಗುವುದು ಕ್ರಿಸ್ತನ ಜನನಕ್ಕಿಂತ ಎರಡು ಸಾವಿರ ವರ್ಷಗಳ ಹಿಂದೆ. ಸುಮೇರಿಯನ್ನರ ಒಬ್ಬ ದೇವತೆ ಇನಾನಳ ಕತೆಯಿಂದ. ಇದು ಆಕೆಯ ಪತಿ ಮತ್ತು ಅವಳ ಸಾವು ಮತ್ತು ಪುನರ್ ಹುಟ್ಟಿಗೆ ಸಂಬಂಧಿಸಿದ್ದು. ಈ ದೇವತೆ ಮೆಸಪೊಟೋಮಿಯಾದಲ್ಲಿ ಇಸ್ತಾರ್ ದೇವತೆ ಎಂದು ಹೆಸರಾದಳು.  

ಇದೇ ರೀತಿ ವಿಶ್ವದ ಹಲವು ಪ್ರದೇಶಗಳಲ್ಲಿ ಚಳಿಗಾಲ ಪ್ರಕೃತಿಯ ಸಾವು ಎಂದು ವಸಂತಕಾಲದ ನಳ ನಳಿಸುವ ಸೊಬಗನ್ನು ಹೊಸ ಹುಟ್ಟು ಎಂದು ಕಲ್ಪಿಸಿಕೊಂಡಿದ್ದಾರೆ ಜನಪದರು. ಅದನ್ನು ದೇವತೆಗಳ ಸಾವು ಮತ್ತು ಹೊಸ ಹುಟ್ಟು ಎಂದು ಸಮೀಕರಿಸಿಕೊಂಡಿದ್ದಾರೆ.‌ 

ಈ ವಸಂತೋತ್ಸವ ಭಾರತದಲ್ಲಿ ಹೊಸ ವರುಷಕೆ ಹೊಸತು ಹೊಸತನ್ನು ತರುವ ಯುಗಾದಿಯಾಗಿದೆ. ಹೀಗೆ ಕ್ರಿಸ್ಮಸ್ ಸಂಕ್ರಾಂತಿಯಾದರೆ ಈಸ್ಟರ್ ಯುಗಾದಿಯಾಗಿದೆ.

ಈಸ್ಟರ್‌ ಹಬ್ಬದ ಈಸ್ಟರ್ ಬನ್ನಿ ಎಂಬ ಮೊಲದ ಆಕಾರವೂ  ಆಂಗ್ಲೋ ಸ್ಯಾಕ್ಸನ್ ಸಮುದಾಯದ ಈಸ್ತ್ರ ದೇವಿಯ ಸಂಕೇತವಾದ ಮೊಲದ್ದು. ಮೊಲ ವಸಂತಕಾಲದ ಉತ್ಸಾಹದ ಸಂಕೇತ. ಈ ಹಬ್ಬದಲ್ಲಿ ಮುಖ್ಯವಾದ ಬಣ್ಣ ಬಣ್ಣವಾಗಿ ಸಿಂಗರಿಸಿದ ಮೊಟ್ಟೆಯೂ ಈ ದೇವಿಯ ಸಂಕೇತ. ಮೊಲವೇ ಮೊಟ್ಟೆ ಇಟ್ಟಿತೆಂಬುದು ಜರ್ಮಾನಿಕ್ ಸಮುದಾಯದ ಜಾನಪದ ಕತೆಯ ಮೂಲದ್ದು. ಬ್ಯಾಬಿಲೋನಿಯಾದ ಇಸ್ತಾರ್ ದೇವತೆ ಹುಟ್ಟಿದ್ದೇ ದೇವಲೋಕದಿಂದ ಟೈಗ್ರಿಸ್ ನದಿಗೆ ಉರುಳಿ ಬಿದ್ದ ಮೊಟ್ಟೆಯಿಂದ. 

ಈಸ್ಟರ್ ಹಬ್ಬದ ದಿನಾಂಕಗಳನ್ನು ನಿಗದಿ ಮಾಡಿದ್ದೂ ಕೂಡಾ ರೋಮನ್ ಸಾಮ್ರಾಟ ಕಾನ್‌ಸ್ಟಾಂಟೈನ್ ಕ್ರಿ.ಶ. 325 ರಲ್ಲಿ ಸೇರಿಸಿದ್ದ ಕ್ರೈಸ್ತ ಧರ್ಮಾಧಿಕಾರಿಗಳ ಸಮಾವೇಶದಲ್ಲಿ. ‌

ಹೀಗೆ ಕ್ರಿಶ್ಚಿಯನ್ ಧರ್ಮವೂ ಜಗತ್ತಿನೆಲ್ಲೆಡೆ ಪ್ರಕೃತಿಯ ಎರಡು ವಾರ್ಷಿಕ ಬದಲಾವಣೆಗಳ ಸೆಲೆಬ್ರೇಷನ್ ಆಗಿ ಸಾವಿರಾರು ವರ್ಷಗಳಿಂದ ಆಚರಿಸುತ್ತಿದ್ದ ಹಬ್ಬಗಳನ್ನು ಆವರಿಸಿಕೊಂಡಿತು. ಜನಬಾಹುಳ್ಯವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಳಸಿಕೊಂಡಿತು. ಜಗತ್ತಿನೆಲ್ಲ ಧರ್ಮಗಳೂ ಬುಡಕಟ್ಟು, ಜನಪದಗಳ ಬದುಕಿನ ಮೇಲೆ ಈ ರೀತಿಯ ಆಕ್ರಮಣಗಳನ್ನೆಸಗಿವೆ. ಭಾರತದಲ್ಲಿ ಈ ಪ್ರಕ್ರಿಯೆ ಹಲ ಹಲವು ರೂಪಗಳನ್ನು ಪಡೆದಿದೆ. 21 ನೆಯ ಶತಮಾನದಲ್ಲಿಯೂ ನಿರಂತರವಾಗಿ ಸಾಗುತ್ತಿದೆ. 

ವಿಶ್ವದ ಪ್ರಮುಖ ಧರ್ಮಗಳು ಈ ರೀತಿಯ ಆಕ್ರಮಣಗಳಿಗೆ ಕೈ ಹಾಕುವ ಅವಶ್ಯಕತೆ ಏಕೆ ಬಂತು ? 

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: