ಆರ್ ಎಸ್ ಹಬ್ಬು
**
ಕಲಾ ಭಾಗ್ವತ್ ಅವರ ಕೃತಿ ‘ಜಾಲಂದರ’.
ಈ ಕೃತಿಯನ್ನು ಬೆಂಗಳೂರಿನ ‘ಸ್ನೇಹಾ ಎಂಟರ್ ಪ್ರೈಸಸ್’ ಪ್ರಕಟಿಸಿದ್ದಾರೆ.
ಹಿರಿಯ ಸಾಹಿತಿ ಆರ್ ಎಸ್ ಹಬ್ಬು ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.
**
ಕನ್ನಡದ ಸಾಹಿತ್ಯದಲ್ಲಿ ವಿಮರ್ಶಕರಾಗಿ ತಮ್ಮದೇ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಕಲಾ ಭಾಗ್ವತರು, ಜಾಲಂದರದ ಕವಾಟುಗಳನ್ನು ತೆರೆದು, ಓದುಗರಿಗೆ ಸಾಹಿತ್ಯ ಸಿಂಚನದ ಅನುಭವ ನೀಡಿದ್ದಾರೆ. ಅವರ ಇತ್ತೀಚಿನ ವಿಮರ್ಶಾ ಕೃತಿ ʼಜಾಲಂದರ, ಆಯ್ದ ಲೇಖನಗಳುʼ ಅವರ ಓದಿನ ವ್ಯಾಪ್ತಿಯನ್ನು, ಅವರಲ್ಲಡಗಿರುವ ಒಳ ನೋಟದ ಆಳವನ್ನು, ಭಾಷೆಯ ಮೇಲೆ ಅವರಿಗಿರುವ ಪ್ರಭುತ್ವವನ್ನು ಅನಾವರಣಗೊಳಿಸುತ್ತದೆ. ಇಲ್ಲಿನ ಲೇಖನಗಳನ್ನು ಸ್ಥೂಲವಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಮೊದಲನೆಯದು – ಪಂಪ ಯುಗದ ಸಾಹಿತ್ಯ, ಹರಿದಾಸ ಸಾಹಿತ್ಯ, ವೀರಶೈವ ಪರಂಪರೆಯ ಭಕ್ತಿ ಕವಿ ಹರಿಹರನ ಗಿರಿಜಾ ಕಲ್ಯಾಣ ಮತ್ತು ಹವ್ಯಕ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇವುಗಳ ವಿಶ್ಲೇಷಣೆ. ಎರಡನೆಯದು – ಹಿರಿಯ ಸಾಹಿತಿಗಳಾದ ಎಸ್. ಎಲ್. ಭೈರಪ್ಪ ಮತ್ತು ವಿ.ಜಿ. ಭಟ್ಟರಿಂದ ಮೊದಲ್ಗೊಂಡು, ಶತಮಾನದ ಸಾಹಿತಿ ಎನ್ನಬಹುದಾದ ಜಯಂತ ಕಾಯ್ಕಿಣಿ, ಸುಧಾ ಮೂರ್ತಿ ಮತ್ತು ಇತ್ತೀಚಿನ ಲೇಖಕಿಯರಾದ ಅಮಿತಾ ಭಾಗ್ವತ ಮತ್ತು ಸಹನಾ ಕಾಂತಬೈಲು ರವರ ಕೃತಿಗಳ ಅವಲೋಕನ ಮತ್ತು ಮೂರನೆಯದು – ಡಾ. ವಿಶ್ವನಾಥ ಕಾರ್ನಾಡ, ವ್ಯಾಸರಾಯ ಬಲ್ಲಾಳ, ಡಾ. ಬಿ.ಎಮ್.ಹೆಗ್ಡೆ ಮತ್ತು ಯಕ್ಷಗಾನ ಸಾರಥಿ ಎನಿಸಿದ ಗೋಪಾಲಕೃಷ್ಣ ಮುಂತಾದ ಗಣ್ಯರ ವ್ಯಕ್ತಿ ಚಿತ್ರಣ ಮತ್ತು ಸಮಾಜಕ್ಕೆ ಅವರ ಕೊಡುಗೆ. ಇವುಗಳ ಹೊರತಾಗಿ,
ವಿಮರ್ಶಕರೊಂದಿಗೆ ಮಾತುಕತೆ, ಕನ್ನಡಕ್ಕೆ ಕಸವು ನೀಡಿದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ, ಇವು ಜಾಲಂಧರದ ಇತರ ಪ್ರಮುಖ ಲೇಖನಗಳು.
‘ಪಂಪ ಯುಗದ ಚಂಪೂ ಕವಿಗಳ ಐತಿಹಾಸಿಕ ಪ್ರಜ್ಞೆʼ, ಸಂಶೋಧನಾತ್ಮಕ ಲೇಖನವಾಗಿದ್ದು, ಅದು ಹತ್ತನೆ ಶತಮಾನದ ಚಂಪೂ ಕವಿಯಾದ ಆದಿ ಕವಿ ಪಂಪನ ವಿಕ್ರಮಾರ್ಜುನ ವಿಜಯವನ್ನು ವಿಸ್ತೃತವಾಗಿ ವಿಶ್ಲೇಷಿಸುತ್ತ, ನಾಗಚಂದ್ರನ ಕಾವ್ಯದ ಕುರಿತು ಕಿರಿದಾಗಿ ಬರೆಯುತ್ತ, ಪೊನ್ನ, ರನ್ನ, ಜನ್ನ ಮೊದಲಾದ ಕವಿಗಳನ್ನು ಉಲ್ಲೇಖಿಸುತ್ತ, ಆ ಕವಿಗಳಲ್ಲಿದ್ದ ಐತಿಹಾಸಿಕ ಪ್ರಜ್ಞೆಯನ್ನು ವಿವರಿಸುತ್ತದೆ. ಈ ಕವಿಗಳಿಗೆ ತಮ್ಮ ಪ್ರದೇಶದ ಇತಿಹಾಸವನ್ನು ಕಟ್ಟಿಕೊಡುವ, ನಿಂತ ನೆಲದ ಇತಿಹಾಸವನ್ನು ಜನರಿಗೆ ಕಾಣಿಸುವ ಮತ್ತು ದಾಖಲಿಸುವ ಹಂಬಲ ಎದ್ದು ತೋರುತ್ತದೆ. ಅವರ ಈ ಐತಿಹಾಸಿಕ ಪ್ರಜ್ಞೆಯಿಂದಲೇ, ಅವರು ಜನ ಜೀವನಕ್ಕೆ ಹತ್ತಿರವಾಗುವ ಚರಿತ್ರೆಯನ್ನು ಕಟ್ಟಿ, ಕಾಲಾತೀತ ಮೌಲ್ಯವನ್ನು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ, ಬಿಂಬಿಸಿದ್ದಾರೆ ಎಂದು ಕಲಾ ಭಾಗ್ವತ್ ಅಭಿಪ್ರಾಯ ಪಡುತ್ತಾರೆ. ಪಂಪ ಯುಗದಲ್ಲಿ ಕನ್ನಡ ಮತ್ತು ತೆಲಗು ಪ್ರದೇಶಗಳು ರಾಜಕೀಯವಾಗಿ ತುಂಬಾ ಹತ್ತಿರವಾಗಿದ್ದವು ಮತ್ತು ತೆಲಗು ಸಾಹಿತ್ಯದ ಮೇಲೆ ಕನ್ನಡದ ಪ್ರಭಾವವನ್ನು, ಆ ಮೂಲಕ ಸಾಂಸ್ಕೃತಿಕ ಬಾಂಧವ್ಯವನ್ನು ಕಾಣಬಹುದು ಎಂದು ಅವರು ವಿವರಿಸುತ್ತಾರೆ. ಹರಿದಾಸ ಸಾಹಿತ್ಯದ ಕುರಿತಾದ ಲೇಖನದಲ್ಲಿ, ಲೇಖಕಿ, ದಾಸ ಸಾಹಿತ್ಯವು ಕಾವ್ಯ ತತ್ವಗಳನ್ನು ಅಳವಡಿಸಿಕೊಂಡು, ಏಕಕಾಲಕ್ಕೆ ಕಾವ್ಯ ಧರ್ಮ ಮತ್ತು ಜೀವನ ಧರ್ಮವನ್ನು ಪ್ರತಿಪಾದಿಸುತ್ತದೆ ಎಂದು ವಾದಿಸುತ್ತಾರೆ. ದಾಸ ಸಾಹಿತ್ಯದಲ್ಲಿ ತತ್ವದ ಚಿಂತನೆ, ಭಕ್ತಿಯಂಥ ಶಿಷ್ಟ ಮೌಲ್ಯಗಳು ಮತ್ತು ಜೀವನ ಶ್ರದ್ಧೆ ಸ್ಪುಟವಾಗಿ ಕಾಣುತ್ತದಲ್ಲದೇ, ಅದು ಸಂಗೀತದೊಂದಿಗೂ ಸಾಮರಸ್ಯವನ್ನು ಹೊಂದಿದ್ದು, ಸಾಹಿತ್ಯ ಗುಣ, ಶೃಂಗಾರ, ಮತ್ತು ಮಧುರ ಭಾವಗಳ ಆಗರವಾಗಿದೆ. ಹಾಗಾಗಿ ಅದು
ಜನಪದರ ಸಾಹಿತ್ಯವಾಗಿ ರೂಪುಗೊಂಡಿತು ಎಂದು ಲೇಖಕಿ ಸಾಧಿಸುತ್ತಾರೆ.
ಲೇಖಕಿ ಕಲಾ ಭಾಗ್ವತ್
‘ಗಿರಿಜಾ ಕಲ್ಯಾಣʼ, ರಗಳೆ ಕವಿ ಎಂದೇ ಪ್ರಸಿದ್ಧನಾದ ವೀರಶೈವ ಪರಂಪರೆಯ ಭಕ್ತಿ ಕವಿ, ಹರಿಹರನ ಪ್ರಮುಖ ಕೃತಿ. ಈ ಕಾವ್ಯದ ಆಧಾರ ಪೃಕೃತಿ – ಪುರುಷ ತತ್ವ. ಆತನ ಕೃತಿ ರಚನೆಯ ಮೂಲ ಸೆಲೆ ಭಕ್ತಿ. ರಗಳೆಯನ್ನು ಮಾಧ್ಯಮವಾಗಿಸಿ, ಆಧುನಿಕ ಕಥನ ಗೀತೆಗೆ ಬುನಾದಿ ಹಾಕಿದ ಕವಿ ಹರಿಹರ ಎನ್ನುತ್ತ, ಕಲಾ ಭಾಗ್ವತರು, ಅವನೊಬ್ಬ ಕ್ರಾಂತಿ ಕವಿ, ಸ್ವತಂತ್ರ ಮನೋವೃತ್ತಿಯ ಮಾರ್ಗವನ್ನು ಹಾಕಿಕೊಟ್ಟ ಯುಗ ಪುರುಷ ಎಂದು ಬಣ್ಣಿಸುತ್ತಾರೆ. ಗಿರಿಜಾ ಕಲ್ಯಾಣದ ಕಥಾ ಹಂದರವನ್ನು, ಈ ಲೇಖನದಲ್ಲಿ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ‘ಹವ್ಯಕ ಭಾಷೆ, ಸಾಹಿತ್ಯ, ಸಂಸ್ಕೃತಿʼ ಕುರಿತಾದ ಪ್ರಬಂಧವು, ಸ್ಕಂದ ಪುರಾಣದ ಮೂಲಕ ಮತ್ತು ಅನೇಕ ಶಾಸನಗಳ ಮೂಲಕ ಹವ್ಯಕ ಜನಾಂಗದ ಮೂಲವನ್ನು ಹುಡುಕುತ್ತ, ಆ ಜನಾಂಗದ ಜೀವನ ಕ್ರಮ, ಅದರ ಭಾಷೆ, ಸಾಹಿತ್ಯ ಕ್ಷೇತ್ರಕ್ಕೆ ಅದರ ಕೊಡುಗೆ, ಯಕ್ಷಗಾನದಂಥ ಶ್ರೀಮಂತ ಕಲೆಯ ಬೆಳವಣಿಗೆಯಲ್ಲಿ ಅದರ ಪಾತ್ರ ಇತ್ಯಾದಿಗಳನ್ನು ವಿವರಿಸುತ್ತದೆ. ವಿಮರ್ಶಾ ಸಾಹಿತ್ಯ ಅನೇಕ ಕಾರಣಗಳಿಂದಾಗಿ ಕ್ಷೀಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಭಾಗ್ವತರ ʼವಿಮರ್ಶಕರೊಂದಿಗೆ ಮಾತುಕತೆʼ ಒಂದು ಮಹತ್ವದ ಲೇಖನವೆನಿಸುತ್ತದೆ. ಇಲ್ಲಿ ಅವರು ಇಂದಿನ ಖ್ಯಾತ ವಿಮರ್ಶಕರೆನಿಸಿದ ಡಾ. ಜಿ.ಎಮ್.ಹೆಗ್ಡೆ, ಡಾ. ಜನಾರ್ಧನ ಭಟ್ ಮತ್ತು ಡಾ. ಎಂ.ಎಸ್. ಆಶಾದೇವಿಯರ ಜೊತೆಗಿನ ಸಂದರ್ಶನಗಳನ್ನು ದಾಖಲಿಸಿದ್ದಾರೆ. ಈ ವಿಮರ್ಶಕರ ಅಭಿಪ್ರಾಯಗಳು ಸಾಂಧರ್ಭಿಕವಾದವುಗಳು ಮತ್ತು ಪ್ರಸ್ತುತವಾದವುಗಳು ಎನ್ನುವುದರಲ್ಲಿ ಸಂದೇಹವಿಲ್ಲ. ವರ್ತಮಾನದ ಕನ್ನಡ ಸಾಹಿತ್ಯದ ವಿಮರ್ಶೆಯ ಸ್ಥಿತಿಗತಿಗಳ ಕುರಿತು ವಿಷಾದವನ್ನು ವ್ಯಕ್ತಪಡಿಸುವ ಡಾ.ಹೆಗ್ಡೆ, ವಿಮರ್ಶೆಯ ಬೆಳವಣಿಗೆಗೆ ಪತ್ರಿಕಾ ಮಾಧ್ಯಮಗಳು ಮುಂದಾಗಬೇಕು ಎನ್ನುತ್ತಾರೆ.
ಯುವ ಜನಾಂಗ ಸಾಹಿತ್ಯಕ್ಕೆ ಹತ್ತಿರವಾಗುವಂಥ, ಅವರಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸುವಂಥ ಕಾರ್ಯವನ್ನು ಸರಕಾರ, ಪತ್ರಿಕೆಗಳು ಮತ್ತು ವಿಶ್ವವಿದ್ಯಾಲಯಗಳು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಡಾ. ಜನಾರ್ಧನ ಭಟ್ ಅವರು, ಕನ್ನಡ ಸಾಹಿತ್ಯದ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ವಿವರಿಸುತ್ತ, ವಿಮರ್ಶಕನಲ್ಲಿ ಬದುಕಿನ ಸತ್ಯವನ್ನು ಮತ್ತು ಸತ್ವವನ್ನು ಅನ್ವೇಷಿಸುವ ಗುಣವಿರಬೇಕು ಎನ್ನುತ್ತಾರೆ. ಸಾಹಿತ್ಯ ಕೇಂದ್ರಗಳು ʼಎಡʼ ಮತ್ತು ʼಬಲʼಗಳಾಗಿ ವಿಭಜನೆಗೊಂಡಿದ್ದು, ಸರಕಾರ ಅಕಾಡೆಮಿ, ಟ್ರಸ್ಟ್ ಮತ್ತು ಪರಿಷತ್ತುಗಳನ್ನು ರದ್ದು ಮಾಡಿ, ಸಾಹಿತ್ಯವನ್ನು ತನ್ನಷ್ಟಕ್ಕೆ ಬೆಳೆಯಲು ಬಿಡಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಡಾ. ಎಮ್.ಎಸ್. ಆಶಾದೇವಿಯವರೊಡನೆಯ ಸಂದರ್ಶನದಲ್ಲಿ ಸ್ತ್ರೀವಾದಿ ಸಾಹಿತ್ಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ವರ್ಗ ನಿಷ್ಠೆ, ಲಿಂಗ ನಿಷ್ಠೆ ಮತ್ತು ಜಾತಿ ನಿಷ್ಠೆ ಅತಿಯಾದರೆ ವಿಮರ್ಶೆಗಳ ವಿವೇಕವು ಮರೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆಯನ್ನು ಕೊಡುತ್ತಾರೆ. ಎಸ್. ಎಲ್. ಭೈರಪ್ಪನವರ ಕಾದಂಬರಿ ʼಮಂದ್ರʼವನ್ನು ವಿಶ್ಲೇಷಿಸುತ್ತ, ಹಿಂದುಸ್ಥಾನಿ ಸಂಗೀತವನ್ನು ನಾಲ್ಕು ವರ್ಷಗಳ ತನಕ ಅಭ್ಯಾಸ ಮಾಡಿದ ಲೇಖಕಿ, ಭೈರಪ್ಪನವರು ಸಂಗೀತವನ್ನು ಸಾಹಿತ್ಯದ ವಾಕ್ಯಗಳಲ್ಲಿ ನೇಯ್ಗೆ ಮಾಡಿ, ಸಮಕಾಲೀನ ವಿದ್ಯಮಾನಗಳನ್ನು ಮತ್ತು ಬದುಕಿನ ಹಲವು ಆಯಾಮಗಳನ್ನು ಅದಕ್ಕೆ ಜೋಡಿಸಿರುವುದು ಅನನ್ಯವೆನ್ನುತ್ತಾರೆ. ವಿ.ಜಿ.ಭಟ್ಟರ ಕವನಗಳಲ್ಲಿರುವ ತುಂಟತನ, ಆದರೆ ಅಷ್ಟೇ ಗಂಭೀರವಾಗಿ ಬದುಕನ್ನು ಕಾಣುವ ಅವರ ದೃಷ್ಟಿಕೋನ, ಓದುಗರಿಗೆ ದಕ್ಕುವ ಸಂಗತಿಗಳನ್ನು ಮಾತ್ರ ಕವನ ರೂಪದಲ್ಲಿ ಇಳಿಸುವುದು, ಅತಿ ಭಾವುಕತೆಯೂ ಇಲ್ಲದ ಮತ್ತು ಶುಷ್ಕವೂ
ಆಗಿರದ ಅವರ ಅನುಭವ ಜನ್ಯ ಕವನಗಳು, ಅವರನ್ನು ಸಾಹಿತ್ಯದ ವಿಶಿಷ್ಟ ನೆಲೆಯಲ್ಲಿ ನಿಲ್ಲಿಸಿವೆ ಎಂದು ಭಾಗ್ವತ್ ಹೇಳುತ್ತಾರೆ.
ಡಾ. ಗಜಾನನ ಶರ್ಮಾರವರ ʼಚೆನ್ನಭೈರಾದೇವಿʼ ಎಂಬ ಐತಿಹಾಸಿಕ ಕಾದಂಬರಿಯನ್ನು ವಿಶ್ಲೇಷಿಸುತ್ತ, ಅವರು ವಿದೇಶಿಗರು ಬರೆದಿರುವ ದಾಖಲೆಗಳ ಮೂಲಕ ಇತಿಹಾಸವನ್ನು ಅರ್ಥೈಸುತ್ತಿರುವ ಸಂದರ್ಭದಲ್ಲಿ ನಗಣ್ಯವೆನಿಸಿರುವ ಅನೇಕ ಪ್ರಮುಖ ಘಟನೆಗಳಲ್ಲಿ, ಐವತ್ತನಾಲ್ಕು ವರ್ಷಗಳ ಕಾಲ ಉತ್ತರಕನ್ನಡದ ಗೆರುಸೊಪ್ಪಾ ಪ್ರದೇಶದ ಅರಸಿಯಾಗಿ, ಪೋರ್ತುಗೀಜರ ಮತಾಂತರ, ಹಿಂಸೆ ಮತ್ತು ದೌರ್ಜನ್ಯವನ್ನು ತಡೆದ ಚೆನ್ನ ಭೈರಾದೇವಿಯ ಆಡಳಿತವೂ ಒಂದಾಗಿದ್ದು, ಅದನ್ನು ತಮ್ಮ ಕಾದಂಬರಿಯ ಮೂಲಕ ಡಾ.ಶರ್ಮಾ ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳುತ್ತಾರೆ. ಸಮುದಾಯದ ಹಿತವನ್ನೇ ತನ್ನ ಹಿತವನ್ನಾಗಿಸಿ, ತನ್ನ ಆಡಳಿತಾವಧಿಯಲ್ಲಿ ಯುದ್ಧಕ್ಕೆ ಆಸ್ಪದ ಕೊಡದೆ, ಮೆಣಸಿನ ಕಾಳನ್ನು ಬೆಳೆಸಲು ತನ್ನ ಪ್ರಜೆಗಳಿಗೆ ಪ್ರೋತ್ಸಾಹಿಸಿ, ರಾಜ್ಯವನ್ನು ಸಂಪದ್ಭರಿತವಾಗಿ ಮಾಡಿದ ಚೆನ್ನಭೈರಾದೇವಿ, ಪ್ರಜೆಗಳಿಗೆ ʼಅವ್ವರಸಿʼ ಯಾಗಿದ್ದರು ಎನ್ನುವ ಶರ್ಮಾ, ಈ ಕಾದಂಬರಿಯ ಮೂಲಕ ಒಬ್ಬ ಹೆಣ್ಣಿನ ಘನತೆಯನ್ನು ಪ್ರಾಮಾಣಿಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಭಾಗ್ವತ ವಿಶ್ಲೇಷಿಸುತ್ತಾರೆ. ಡಾ.ಜನಾರ್ಧನ ಭಟ್ ಅವರ ʼವಿನೂತನ ಕಥನ ಕಾರಣʼವೆಂಬ ಮಹತ್ತರ ವಿಮರ್ಶಾ ಗ್ರಂಥವು, ಅನೇಕ ಒಳನೋಟಗಳನ್ನು
ಕೊಡುವುದರ ಮೂಲಕ, ವಿಮರ್ಶೆಯ ಹಲವು ಸಾಧ್ಯತೆಗಳನ್ನು ತಿಳಿಸಿರುವುದು ಅಧ್ಯಯನಕಾರರಿಗೆ ಬಹಳ ಉಪಯುಕ್ತವಾಗಿದೆ ಎಂದು ವಿಶ್ಲೇಷಿಸುವ ಭಾಗ್ವತ್ ಇಲ್ಲಿನ ಅಧ್ಯಯನ ಪೂರ್ಣ ಲೇಖನಗಳು ಮೌಲಿಕವಾಗಿದ್ದು, ಓದುಗರ ವಿಮರ್ಶಾ ಬುದ್ದಿಯನ್ನು ಚುರುಕುಗೊಳಿಸುತ್ತದೆ ಎಂದು ಸಾಧಿಸುತ್ತಾರೆ. ಸೃಜನಶೀಲ ಕೃತಿಯಷ್ಟೇ ಆಸಕ್ತಿ ಹುಟ್ಟಿಸುವ ಈ ಕೃತಿ ಕನ್ನಡ ಸಾಹಿತ್ಯ ಕೇತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಎಂದು ಅವರು ತೀರ್ಮಾನಕ್ಕೆ ಬರುತ್ತಾರೆ.
ಸಂಶೋಧಕರೂ, ಪ್ರಯೋಗಶೀಲರೂ ಮತ್ತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಜಿ.ಎನ್. ಉಪಾಧ್ಯ ಅವರು ಮುಂಬೈಯಲ್ಲಿ ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. ಅವರು ರಚಿಸಿದ ಕೃತಿ ‘ಅನಿಕೇತನ ಪ್ರಜ್ಞೆ ಮತ್ತು ಕನ್ನಡʼ, ಕನ್ನಡದ ಐತಿಹಾಸಿಕ ಅಂಶಗಳಿಂದ ಹಿಡಿದು ಪ್ರಸ್ತುತವರೆಗಿನ ಅನೇಕ ವಿಷಯಗಳ ಮಾಹಿತಿ ಮತ್ತು ವ್ಯಾಖ್ಯಾನಗಳನ್ನು ಚರ್ಚಿಸುತ್ತದೆ. ಈ ಗ್ರಂಥದ ಹಾಸು ತುಂಬ ದೊಡ್ಡದು. ಅದು ಕನ್ನಡ ಭಾಷೆಯ ಪ್ರಾಚೀನತೆ, ಕರ್ನಾಟಕ ಸಂಸ್ಕೃತಿಯ ಲಕ್ಷಣಗಳು, ಸ್ಥಳ ನಾಮಗಳು, ವಚನ ಚಳವಳಿ, ದಾಸ ಸಾಹಿತ್ಯ ಮುಂತಾದ ಹಲವು ವಿಷಯಗಳನ್ನು ಸಂಶೋಧನಾತ್ಮಕವಾಗಿ
ಚರ್ಚಿಸುವುದರೊಂದಿಗೆ, ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವದ ಮೇಲೆ ಬೆಳಕನ್ನು ಚೆಲ್ಲುತ್ತದೆ ಎಂದು ಲೇಖಕಿ ಕಲಾ ಭಾಗ್ವತ್ ವಿಶ್ಲೇಷಿಸಿದ್ದಾರೆ. ಕನ್ನಡದ ಮುಖ್ಯ ಸಾಹಿತ್ಯ ರಚನೆಗಳಾದ ಪ್ರೊ. ವಿ.ಎಮ್. ಇನಾಮದಾರರ ʼಡಾ. ಅಂಬೇಡಕರ್ ವ್ಯಕ್ತಿ ವಿಚಾರʼ, ಪ್ರೊ.ಬರಗೂರು ರಾಮಚಂದ್ರಪ್ಪನವರ ʼಕನ್ನಡ ಪ್ರಜ್ಞೆʼ ಡಾ. ಬಿ. ಜನಾರ್ಧನ ಭಟ್ ರ ಸಾಹಿತ್ಯ ವಿಮರ್ಶೆ ಒಂದು ಪ್ರವೇಶಿಕೆʼ, ಡಾ.ನಿತ್ಯಾನಂದ ಶೆಟ್ಟಿಯವರ ʼಮಾರ್ಗಾನ್ವೇಷಣೆʼ ಇತ್ಯಾದಿಗಳನ್ನು ಉಪಾಧ್ಯ ತಮ್ಮ ಗ್ರಂಥದಲ್ಲಿ ವಿಶ್ಲೇಷಿಸಿದ್ದು, ಅದು ನಿಚ್ಚಳವಾಗಿ ಅಧ್ಯಯನಾಸಕ್ತರಿಗೆ ಮತ್ತು ಕನ್ನಡ ಓದುಗರಿಗೆ, ಕನ್ನಡ ಭಾಷಾ ಜ್ಞಾನದ ಹರವನ್ನು ಹೆಚ್ಚಿಸಬಲ್ಲದು ಎಂದು ಭಾಗ್ವತ್ ಅಭಿಪ್ರಾಯ ಪಡುತ್ತಾರೆ. ಮಹಿಳಾ ಲೇಖಕಿಯರ ಕೃತಿಗಳ ಮತ್ತು ಮುಂಬಯಿ ವಾಸಿ ಲೇಖಕರ ಕೃತಿಗಳ ವಿಶ್ಲೇಷಣೆಗೆ ಆದ್ಯತೆ ಕೊಟ್ಟಿರುವುದು, ಜಾಲಂದರದ ಒಂದು ವೈಶಿಷ್ಟ್ಯವೆನ್ನಬಹುದು.
ಉದಾಹರಣೆಗೆ ಸುಧಾ ಮೂರ್ತಿಯವರ ಕಾದಂಬರಿ ‘ಪರಿಧಿʼ, ಸ್ಮಿತಾ ಅಮೃತರಾಜ್‌ರ ಕವನ ಸಂಕಲನ, ‘ಮಾತು ಮೀಟಿ ಹೋಗುವ ಹೊತ್ತುʼ, ಅಮಿತಾ ಭಾಗ್ವತರ ಕವನ ಸಂಕಲನ ‘ಕುಮುದಾಳ ಭಾನುವಾರ ಮತ್ತು ಕಾದಂಬರಿ ‘ನೀಲಿ ನಕ್ಷೆʼ, ಸಹನಾ ಕಾಂತಬೈಲು ಬರೆದ ಪ್ರಬಂಧ ಮಾಲೆ ‘ಆನೆ ಸಾಕಲು ಹೊರಟವಳುʼ ಇವೆಲ್ಲ ಮಹಿಳಾ ಕೇಂದ್ರೀಕೃತ ಕೃತಿಗಳು. ‘ಪರಿಧಿಯುʼ ಮಹಿಳೆಯ ಒಳ ತೋಟಿಗಳನ್ನು, ತುಮುಲಗಳನ್ನು, ಸೂಕ್ಷ್ಮ ಸಂವೇದನೆಯನ್ನು ವಿವರಿಸುತ್ತ, ಸ್ತ್ರೀ ಸತ್ವದ ಮುಕ್ತ ಅನಾವರಣವನ್ನು ಮಾಡುತ್ತದೆ ಎನ್ನುತ್ತ ಭಾಗ್ವತ್, ‘ಮಾತು ಮೀಟಿ ಹೋಗುವ ಹೊತ್ತುʼ ಕುಡಿ, ಗಿಡ ಮತ್ತು ಮರಗಳ ರೂಪಕದೊಂದಿಗೆ ಹೆಣ್ಣಿನ ಸಂವೇದನೆಯನ್ನು ವರ್ಣಿಸುತ್ತದೆ, ʼಕುಮುದಾಳ ಭಾನುವಾರʼ ದಲ್ಲಿ ಅಮಿತಾ ಭಾಗ್ವತ್, ದಿನ ನಿತ್ಯದ ಅವಸರದ ಜೀವನದಲ್ಲಿಯೂ, ಕುಮುದಾ ಹೇಗೆ ಸುಖ ಕಾಣತ್ತಾಳೆ ಎನ್ನುವುದನ್ನು ವಿವರಿಸುತ್ತ. ಜೀವನ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ ಎಂದು ಜಾಲಂದರದ ಲೇಖಕಿ ಹೇಳುತ್ತಾರೆ. ಅವರು ಅಮಿತಾ ಭಾಗ್ವತರ ನೀಲಿ ನಕ್ಷೆ ಕಾದಂಬರಿಯನ್ನು ವಿಶ್ಲೇಷಿಸುವಾಗ, ಕಾರವಾರದ ಮೀನುಗಾರ ಕುಟುಂಬದ ಹುಡುಗಿ ಸರಯೂ, ಮುಂಬೈಗೆ ಬಂದು ತನ್ನ ಅಸ್ತಿತ್ವವನ್ನು ಕಾಪಿಟ್ಟಿಕೊಳ್ಳುವುದರ ಜೊತೆ, ಘನತೆಯಿಂದ ಬದುಕುವ ಮಾರ್ಗವನ್ನು ಕಂಡುಕೊಳ್ಳುತ್ತಾಳೆ ಎನ್ನುವ ಕಥಾವಸ್ತುವನ್ನು ಓದುಗರೆದುರು ಬಿಚ್ಚಿಡುತ್ತ, ಚಿತ್ತಾಲರು, ಬಲ್ಲಾಳರು ಮತ್ತು ನಿಂಜೂರರು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿರುವದಕ್ಕಿಂತ ಭಿನ್ನವಾಗಿ ಮುಂಬೈಯನ್ನು ಅಮಿತಾ ಭಾಗ್ವತ್ ಚಿತ್ರಿಸದ್ದಾರೆ ಎನ್ನುತ್ತಾರೆ. ‘ಆನೆ ಸಾಕಲು ಹೊರಟವಳುʼ ಕೃತಿಯಲ್ಲಿ, ಹಳ್ಳಿಯೊಂದರಲ್ಲಿ ಬೆಳೆದ ಸಹನಾ ಕಾಂತಬೈಲು ತಾವೇ ಸ್ವತ: ಕೃಷಿ, ಹೈನುಗಾರಿಕೆ, ಜೇನು ಸಾಕಣಿಕೆಯ ಜೊತೆ ಮನೆಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಮತ್ತು ಆನೆ ಸಾಕುವ ಸಾಹಸದ ಕತೆಯನ್ನು ಚಿತ್ರಿಸಿದ್ದಾರೆ. ಸ್ವಾನುಭವದ ಮೇಲೆ ಕಟ್ಟಿಕೊಟ್ಟ ಇಲ್ಲಿನ ಪ್ರಬಂಧಗಳು ರೋಚಕವಾಗಿವೆ ಮತ್ತು ಆಪ್ತವಾಗಿವೆ ಎಂದು ಜಾಲಂದರ ಸೂಚಿಸುತ್ತದೆ.
ʼಸೂರಿ ಪರ್ವʼ, ಶತಮಾನದ ಅಂಗಳದಲ್ಲಿ ಬಲ್ಲಾಳರ ನೆನಪು, ʼಜಗದಾಪ್ತ ಸಂಜೀವಿನಿ ಡಾ. ಬಿ.ಎಮ್.ಹೆಗ್ಡೆʼ, ʼಕರ್ನಾಟಕ ಯಕ್ಷಗಾನ ಸಾರಥಿ ಗೋಪಾಲಕೃಷ್ಣರುʼ ಈ ಲೇಖನಗಳು ವ್ಯಕ್ತಿ ಚಿತ್ರಣವನ್ನು ಕೊಡುವುದರ ಜೊತೆ, ಆ ವ್ಯಕ್ತಿಗಳ ಸಾಧನೆ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ವಿವರಿಸುತ್ತವೆ. ‘ಸೂರಿ ಪರ್ವʼವು ಕನ್ನಡದ ಪ್ರಥಮ ಸಾಮಾಜಿಕ ನಾಟಕವೆಂದೇ ಪ್ರಸಿದ್ಧವಾದ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನʼ ವನ್ನು ಬರೆದು ಪ್ರಸಿದ್ಧರಾದ ಕರ್ಕಿ ವೆಂಕಟ್ರಮಣ ಶಾಸ್ತ್ರಿ ಸೂರಿಯವರ ಬಹು ಮುಖ ಪ್ರತಿಭೆಯನ್ನು ಪ್ರದರ್ಶಿಸುವ ಪತ್ರಿಕೋದ್ಯಮ, ಮುದ್ರಣ ಕಾರ್ಯ, ಸಾಹಿತ್ಯ, ಗ್ರಂಥ ಸಂಪಾದನೆ ಇತ್ಯಾದಿಗಳನ್ನು ಒಳಗೊಂಡಿದೆ. ಮುಂಬೈ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ಶೋಧ ಪ್ರಬಂಧ ಗ್ರಂಥವಾಗಿ ಹೊರತಂದ ಶಶಿಕಲಾ ಹೆಗಡೆಯವರ ಈ ಕೃತಿಯು ಸಂಗ್ರಹ ಯೋಗ್ಯ ಎಂದು ಭಾಗ್ವತ್ ವರ್ಣಿಸಿದ್ದಾರೆ. ವ್ಯಾಸರಾಯ ಬಲ್ಲಾಳರ ಕುರಿತಾದ ಲೇಖನದಲ್ಲಿ, ಬಲ್ಲಾಳರ ಕಾದಂಬರಿಗಳ ಸಮಗ್ರ ನೋಟ, ಅವರ ಕೈಚಳಕದಲ್ಲಿ ಮೂಡಿಬಂದ ಕತೆಗಳ ಅವಲೋಕನ, ಅವರ ಪ್ರಬಂಧಗಳ, ಪ್ರವಾಸ ಕಥನದ, ರೂಪಾಂತರ ನಾಟಕಗಳ ವಿವರಗಳಿವೆ. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಗುರುತಿಸಿಕೊಂಡ ಸಾಹಿತಿಗಳಾದ ಬಲ್ಲಾಳರ ಕಾದಂಬರಿಗಳ ಸನ್ನಿವೇಶಗಳು ಮುಂಬೈ ಕೇಂದ್ರಿಕೃತವಾಗಿದ್ದರೂ, ಗ್ರಾಮೀಣ ಸೊಗಡನ್ನು ಅಲ್ಲಿ ನಾವು ಕಾಣಬಹುದು ಎಂದು ಅವರು ವಿವರಿಸುತ್ತಾರೆ. ಹಾಗಿದ್ದೂ ನಗರ ಪ್ರಜ್ಞೆಯು ಅವರ ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿದೆ ಎಂದು ಭಾಗ್ವತ್ ಬಣ್ಣಿಸುತ್ತಾರೆ. ‘ಬಂಡಾಯʼವನ್ನು ಹೊರತುಪಡಿಸಿ, ಬಲ್ಲಾಳರ ಇತರ ಕಾದಂಬರಿಗಳು ಸ್ತ್ರೀ ಕೇಂದ್ರಿತವಾಗಿವೆ. ಅವರ ಕತೆಗಳಲ್ಲಿ ಸಾಮಾಜಿಕ ಪಿಡುಗುಗಳಾದ ಸಾಮೂಹಿಕ ಕ್ರೌರ್ಯ, ಅತ್ಯಾಚಾರ, ಅಲ್ಲದೇ ಮುಗ್ಧ ಜನರ ಕಷ್ಟಗಳು, ಅವರ ಅಸ್ಥಿರತೆ, ಏಕಾಂಗಿತನ ಇತ್ಯಾದಿ ಅಭಿವ್ಯಕ್ತಗೊಂಡಿದ್ದು, ಈ ಕತೆಗಳು ದೇಶಾತೀತ ಮತ್ತು ಕಾಲಾತೀತ ನೆಲೆಯಲ್ಲಿ ಮಹತ್ವದ ಕೊಡುಗೆಗಳಾಗಿವೆ ಎಂದು ಅವರು ಹೇಳುತ್ತಾರೆ.
ಪ್ರಸಿದ್ಧ ಹೃದ್ರೋಗ ತಜ್ಞ, ಡಾ. ಬಿ. ಎಮ್. ಹೆಗ್ಡೆಯವರನ್ನು ‘ಜಗದಾಪ್ತ ಸಂಜೀವಿನಿ’ ಎಂದು ಬಣ್ಣಿಸುವ ಭಾಗ್ವತ್, ಅವರು ಅಲೋಪತಿ ವೈದ್ಯರಾಗಿಯೂ, ನೈಸರ್ಗಿಕ, ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆಗೆ ಒತ್ತು ಕೊಟ್ಟು, ರೋಗಿಗಳಿಗೆ ಮನೋಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯದಲ್ಲಿ ತತ್ಪರರಾಗಿದ್ದಾರೆ ಎಂದು ಶ್ಲಾಘಿಸುತ್ತಾರೆ. ಈಗಾಗಲೇ ಭಾಗ್ವತರು ವೈದ್ಯಭೂಷಣ ಡಾ. ಬಿ.ಎಮ್. ಹೆಗ್ಡೆ ಎಂಬ ಕೃತಿಯನ್ನು ರಚಿಸಿದ್ದಾರೆ ಎನ್ನುವುದು ವಿಶೇಷ. ಇವೆಲ್ಲ ಲೇಖನಗಳ ಮಧ್ಯದಲ್ಲಿ ಜಯಂತ ಕಾಯ್ಕಿಣಿ ಪ್ರಬಂಧ ಲೋಕವೆಂಬ ಲೇಖನವನ್ನು ಜೋಡಿಸಿರುವುದು
ಅಪ್ಯಾಯಮಾನವೆನಿಸುತ್ತದೆ. ಈಗಾಗಲೇ ಜಯಂತರವರ ಪ್ರಬಂಧಗಳ ಅವಲೋಕನವನ್ನು ‘ಜೀವಸ್ವರʼ ಎಂಬ ಶೀರ್ಷಿಕೆಯ ಗ್ರಂಥದಲ್ಲಿ ಮಾಡಿರುವ ಭಾಗ್ವತರು, ಜಯಂತರ ಪ್ರಬಂಧಗಳಲ್ಲಿದ್ದ ಗ್ರಾಮೀಣ ಮತ್ತು ನಗರ ಜೀವನದ ಜೀವನ್ಮುಖೀ ಸಂವೇದನೆಗಳನ್ನು ಗುರುತಿಸುತ್ತಾರೆ. ಅವರ ಪ್ರಬಂಧಗಳು ಬದುಕಿಗೆ ತುಸುವಾದರೂ ಕಸುವನ್ನು ಕೊಡಬಲ್ಲವು ಎನ್ನುವುದು ಅವರ ಪ್ರಾಮಾಣಿಕ ಅನಿಸಿಕೆ ಎನಿಸುತ್ತದೆ. ‘ಕರ್ನಾಟಕ ಯಕ್ಷಗಾನ ಸಾರಥಿ ಗೋಪಾಲಕೃಷ್ಣರುʼ ಈ ಲೇಖನವು ಯಕ್ಷಗಾನ ಕಲೆಯ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ಸತತವಾಗಿ ನೀಡುತ್ತಿರುವ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಡಾ. ಜಿ.ಎಲ್.ಹೆಗಡೆಯವರಿಗೆ ಮೀಸಲಾಗಿದೆ. ಡಾ. ಗಿರಿಜಾ ಶಾಸ್ತ್ರಿಯವರ ‘ಸಂಗೀತದ ಒಸಗೆʼ, ಶ್ರಿನಿವಾಸ ಜೋಕಟ್ಟೆಯವರ ‘ಮುಂಬೈ ಮಿಂಚುʼ, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯರ ಪ್ರಧಾನ ಸಂಪಾದಕತ್ವದಲ್ಲಿ ಕಥಾ ಸಾಹಿತ್ಯದ ಮಹತ್ವ ಲೇಖಕರೆನಿಸಿದ ಮಿತ್ರಾ ವೆಂಕಟ್ರಾಜ್‌ರ ಸಾಹಿತ್ಯದ ಸಮೀಕ್ಷೆʼ ‘ಮಿತ್ರಾವಳಿʼ, ಹೊರನಾಡಾದ ಮುಂಬೈಯಲ್ಲಿ, ಕರ್ನಾಟಕ ಮಲ್ಲ ಎಂಬ ದೈನಿಕವನ್ನು ಪ್ರಾರಂಭಿಸಿ, ಆಪ್ತ ಮಿತ್ರನೆನಿಸಿದ, ಚಂದ್ರಶೇಖರ ಪಾಲೆತ್ತಾಡಿ ಕುರಿತಾದ ಅಭಿನಂದನಾ ಗ್ರಂಥ, ಡಾ. ವಿಶ್ವನಾಥ ಕಾರ್ನಾಡರನ್ನು ಪೂರ್ಣವಾಗಿ ಪರಿಚಯಿಸುವ, ಅಭಿನಂದನಾ ಗ್ರಂಥ, ಕರ್ಕಿ
ಸೂರಿ ವೆಂಕಟರಮಣ ಶಾಸ್ತ್ರಿಯವರ ಕುರಿತಾದ ಕೃತಿ ʼಸೂರಿ ಪರ್ವʼ ಇವು ಜಾಲಂದರದಲ್ಲಿ ವಿಶ್ಲೇಷಿಸಲ್ಪಟ್ಟ ಇತರ ಕೃತಿಗಳು.
ಇಷ್ಟಲ್ಲದೇ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿರುವ ಕಲಾ ಭಾಗ್ವತರು, ‘ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ’ ಎಂಬ ದೀರ್ಘ ಲೇಖನವನ್ನೂ ಮತ್ತು ಕನ್ನಡಕ್ಕೆ ಕಸುವು ನೀಡಿದ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವೆಂಬ ಪರಿಚಯ ಲೇಖನವನ್ನೂ ಜಾಲಂದರದಲ್ಲಿ ಸೇರಿಸಿದ್ದಾರೆ. ಜೊತೆಗೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಕಟಿಸಿರುವ ಪ್ರಮುಖ ಸಂಶೋಧನಾ ಕೃತಿಗಳ ಪರಿಚಯಾತ್ಮಕ ಸಮೀಕ್ಷೆಯೂ ಜಾಲಂದರದಲ್ಲಿ ಕಾಣಬಹುದು. ಬಹುಶ: ಈ ಪ್ರಬಂಧಗಳ ವಿಶ್ಲೇಷಣೆಗೆ ಪ್ರತ್ಯೇಕ ಲೇಖನವನ್ನೇ ಬರೆಯಬೇಕಾದೀತು. ಕಲಾ ಭಾಗ್ವತರು ತಮ್ಮ ವಿಸ್ತ್ರತ ಓದು, ಸಂಶೋಧನೆ ಮತ್ತು ಸತತ ಅಧ್ಯಯನಗಳ ಅಡಿಯಲ್ಲಿ ಜಾಲಂದರವನ್ನು ರಚಿಸಿ, ಕನ್ನಡ ವಿಮರ್ಶಾ ಸಾಹಿತ್ಯಕ್ಕೆ ತಮ್ಮದೇ ಆದ ಕಾಣ್ಕೆಯನ್ನು ಸಲ್ಲಿಸಿದ್ದಾರೆ. ಈ ಗ್ರಂಥವು ಮುಂದಿನ ಕನ್ನಡ ಸಾಹಿತ್ಯದ ಸಂಶೋಧಕರಿಗೆ ಒಂದು ಮಾರ್ಗ ಸೂಚಿಯಾಗಿದೆ ಎನ್ನಬಹುದು. ಇದನ್ನು ರಚಿಸಿದ ಕಲಾ ಭಾಗ್ವತರಿಗೆ ಅಭಿನಂದನೆಗಳು.
0 ಪ್ರತಿಕ್ರಿಯೆಗಳು