ಕೃಷ್ಣ ಪ್ರಸಾದ್ ಗೋವಿಂದಯ್ಯ
ಪರ್ಯಾಯ ಕೃಷಿ ವಿಧಾನಗಳನ್ನು ನೋಡಲು ಜರ್ಮನಿಗೆ ಬಂದವನಿಗೆ ಇನ್ನಿಲ್ಲದ ನಿರಾಸೆ. ಬರ್ಲಿನ್ನ ಸಾಂಪ್ರದಾಯಿಕ ಕಟ್ಟಡಗಳು, ಐಷಾರಾಮಿ ರೈಲು, ಅದ್ದೂರಿ ಮಾಲ್, ಭಾರತೀಯ ಹೋಟೆಲ್ಗಳಲ್ಲಿ ಜರ್ಮನಿ ಊಟದ ರುಚಿ ನೋಡುವುದರಲ್ಲೇ ಎರಡು ದಿನ ಮುಗಿದು ಹೋಗಿತ್ತು.
ಕೃಷಿಕರ ತೋಟ ನೋಡಲು ಹೋದರೆ ಅವೆಲ್ಲಾ 750 ಎಕರೆಯ ಯಾಂತ್ರೀಕೃತ ಫಾರಂಗಳು. ಗಜ ಗಾತ್ರದ ಟ್ರಾಕ್ಟರ್, ಕಣ್ಣು ಹಾಯಿಸುವಷ್ಟು ಸಾಲಿನಲ್ಲಿ ಬೆಳೆದು ನಿಂತ ಮುಸುಕಿನ ಜೋಳ, ಕೊಬ್ಬಿದ ಹಂದಿ, ಹಸುಗಳು… ಕಲಿಯುವುದು ಏನನ್ನು?.
ಕೃಷಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಜರ್ಮನಿಯಲ್ಲಿ ಐವತ್ತು ಅಥಾವ ನೂರು ಎಕರೆಯಲ್ಲಿ ಕೃಷಿ ಮಾಡುವುದು ಅಸಾಧ್ಯ. ನೂರಾರು ಎಕರೆಯ ಹೊಲವನ್ನು ಒಂದಿಬ್ಬರು ನೋಡಿಕೊಳ್ಳುತ್ತಾರೆ. ನೆಲ ಉಳಲು, ಕಳೆ ಕೀಳಲು, ಔಷಧಿ ಸಿಂಪಡಿಸಲು, ಕಟಾವು ಮಾಡಲು ಯಂತ್ರಗಳನ್ನೇ ಅವಲಂಬಿಸಿದ್ದಾರೆ.
ರೋಬೋಟ್ ಗಳು ಕೃಷಿರಂಗ ಪ್ರವೇಶಿಸಿವೆ. ಸಾಲಿನಲ್ಲಿ ಸಾಗುತ್ತಾ ಫಸಲು ಕಟಾವು ಮಾಡುವ, ಡೈರಿ ಫಾರಂಗಳಲ್ಲಿ ಪಶು ಆಹಾರ ನೀಡುವ ಕೆಲಸ ರೊಬೋಟ್ಗಳದ್ದು. 2.6 ಲಕ್ಷ ರೈತರಿರುವ ಜರ್ಮನಿಯಲ್ಲಿ 36 ಸಾವಿರ ಸಾವಯವ ರೈತರಿದ್ದಾರೆ. ರಾಸಾಯನಿಕಗಳ ಬಳಕೆ ಮಾಡುವುದಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಇವರದೂ ಯಾಂತ್ರಿಕ ಬೇಸಾಯವೇ.

ಕೃಷಿ ವಿಸ್ತರಣಾ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಕಂಪನಿಗಳ ವಕ್ತಾರರು ಯಾರನ್ನು ಮಾತನಾಡಿಸಿದರೂ ಎಲ್ಲರದೂ ರಾಸಾಯನಿಕ ಕೃಷಿಯ ಮಾತೇ.
ಯಾರಲ್ಲೂ ಸ್ಥಳೀಯ ಬೀಜಗಳ ಸಂಗ್ರಹವಿಲ್ಲ. ಕಂಪನಿಗಳ ಬೀಜಗಳನ್ನೇ ಅವಲಂಬಿಸಿದ್ದಾರೆ. ಪ್ರತಿಬಾರಿ ದುಬಾರಿ ಬೆಲೆ ತೆತ್ತು ಬೀಜ ತರಬೇಕು. 2030 ರ ಹೊತ್ತಿಗೆ ಕೃಷಿ ಕ್ಷೇತ್ರದ ಶೇ.30ರಷ್ಟನ್ನು ಸಾವಯವಕ್ಕೆ ಪರಿವರ್ತಿಸುವ ಗುರಿಯನ್ನು ಜರ್ಮನಿ ಹೊಂದಿದೆ. ಆದರೆ ಸಾವಯವ ಕೃಷಿಯ ಮೂಲವಾದ ಸ್ಥಳೀಯ ಬೀಜಗಳ ಅಭಿವೃದ್ಧಿಯಲ್ಲಿ ಏನೇನೂ ಪ್ರಯತ್ನಗಳಾಗಿಲ್ಲ.
ಮೂರನೆಯ ದಿನದ ಮಧ್ಯಾಹ್ನದ ಊಟದ ನಂತರ ಲುಬೆಕ್ ಸಮೀಪದ ತೋಟವೊಂದಕ್ಕೆ ಹೋದೆವು. ತೋಟದ ಮಾಲೀಕರನ್ನು ನೋಡಿದ ಕ್ಷಣವೇ ಇವರನ್ನು ಎಲ್ಲೋ ನೋಡಿದ ನೆನಪು. Biolandನ ಜಾಲತಾಣಗಳಲ್ಲಿ ಈ ಸಾವಯವ ಕೃಷಿ ದಂಪತಿಗಳನ್ನು ಕಂಡಿದ್ದೆ. ನನ್ನ ಪರಿಚಯ ಹೇಳಿಕೊಂಡ ತಕ್ಷಣ ಅವರಿಗೂ ಖುಷಿ. ಲಗುಬಗೆಯಿಂದ ತೋಟ ಸುತ್ತಾಡಿಸಿದರು. ಹತ್ತಾರು ಬಗೆಯ ಸ್ಥಳೀಯ ತಳಿಗಳ ತೋರಿಸಿದರು.
Rolf stoltenpergರ ತೋಟ ಅದು. ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ ನಡೆಸುತ್ತಿದ್ದಾರೆ. ಬೀಜ ಸಂರಕ್ಷಣೆಯಲ್ಲಿ ಅಪಾರ ಆಸಕ್ತಿ. ಜರ್ಮನಿಯ ರಾಸಾಯನಿಕ ತೋಟಗಳ ರೀತಿ ಯಾಂತ್ರಿಕವಲ್ಲ. ಶಿಸ್ತಾದ ಸಾಲು, ದೊಡ್ಡ ಪ್ರಮಾಣದ ಯಂತ್ರೋಪಕರಣಗಳು ಇವರಲ್ಲಿಲ್ಲ. ನೈಸರ್ಗಿಕವಾಗಿ ಬೆಳೆದು ನಿಂತ ಆಪಲ್, ಬೆರ್ರಿ, ಚರ್ರಿ, ಪ್ಲಮ್ ಮರಗಳು. ಅವುಗಳ ನಡುವೆ ಸುತ್ತಾಡುವ ಕೋಳಿ, ಹುಲ್ಲುಗಾವಲಲ್ಲಿ ಮೇಯುವ ಹಸು,ತೆರೆದ ಬಯಲಿನ ಹಂದಿ ದೊಡ್ಡಿ, ಸಣ್ಣ ಸಣ್ಣ ತರಕಾರಿ ಮಡಿ, ಹೂವಿನ ಸಾಲು ಸಾಲು…
ತಮ್ಮ ತೋಟದ ಉತ್ಪನ್ನಗಳನ್ನು ತಾವೇ ನೇರ ಮಾರಾಟ ಮಾಡುತ್ತಾರೆ. ಇದಕ್ಕೆಂದೇ ತಮ್ಮ Hohlegruft farmನಲ್ಲಿ ಸಾವಯವ ಅಂಗಡಿ ತೆರೆದಿದ್ದಾರೆ. ಸಮೀಪದ ನಗರಗಳಿಂದ ವಾರಾಂತ್ಯಕ್ಕೆ ಬರುವ ಗ್ರಾಹಕರು ತೋಟದಲ್ಲಿ ಸುತ್ತಾಡಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡೊಯ್ಯತ್ತಾರೆ.
ಮೂರು ಘಂಟೆಗಳ ಕಾಲ ಅವರ 80 ಹೆಕ್ಟೇರ್ ಸಾವಯವ ತೋಟದ ಸೊಬಗನ್ನು ನೋಡುವ ಸಂಭ್ರಮ ನನ್ನದಾಯಿತು.
ತೋಟದ ಒಡತಿ ಆನ್ಕೆಗೆ ಅಪರೂಪದ ಬೀಜ, ಗಿಡಗಳನ್ನು ಬೆಳೆಸುವುದರಲ್ಲಿ ವಿಷೇಷ ಆಸಕ್ತಿ. ಮೈಸೂರು ಮೂಲದ ರಾಸ್ ಬೆರ್ರಿ ಇವರ ತೋಟದಲ್ಲಿ ಗೊಂಚಲು ಗೊಂಚಲು ಹಣ್ಣು ಬಿಟ್ಟಿದ್ದು ಕಂಡು ಸೋಜಿಗವಾಯಿತು. ನಮ್ಮಲ್ಲಿ ಇದು ಕಾಡು ಗಿಡ. ಕುಶಾಲನಗರ, ಮಡಿಕೇರಿಯ ಕಾಡುಗಳಲ್ಲಿ ಬೆಳೆಯುವ ಇದರ ಬಗ್ಗೆ ನಮಗೆ ಎಳ್ಳಷ್ಟೂ ಜ್ಞಾನವಿಲ್ಲ.

ರಾಸ್ ಬೆರ್ರಿ ನಮ್ಮ ಊರಿನದು ಎಂಬುದು ಕೇಳಿ ಆನ್ಕೆ ಅಚ್ಚರಿಗೊಂಡರು. ಅದರ ಗಿಡದ ಗೆಲ್ಲುಗಳ ಕತ್ತರಿಸಿ ನೆಡಲು ಕೊಟ್ಟರು.
ಜರ್ಮನ್ ನ ರಾಸಾಯನಿಕ ಕೃಷಿಕರಿಗಿಂತ ಭಿನ್ನವಾಗಿ ಸಣ್ಣ ಪ್ರಮಾಣದ ಯಂತ್ರಗಳನ್ನು ಇಟ್ಟುಕೊಂಡು, ತಾವೇ ಹೊಲದಲ್ಲಿ ದುಡಿವ Rolf stoltenpergರ ಕುಟುಂಬ ಕಂಡು ಸಂತಸವಾಯಿತು.
ಹತ್ತಾರು ಬೀಜ ಅವರು ನನಗೆ ಕೊಡುಗೆಯಾಗಿ ಕೊಟ್ಟರು. ಪ್ರತಿಯಾಗಿ ನಾನು Sahaja Seedsನ ಬೀಜದ ಪ್ಯಾಕೆಟ್ ಮತ್ತು ದೀಪಿಕಾರ Reviving Vegetable Diversity ಪುಸ್ತಕ ಕೊಟ್ಟೆ. ಅವರ ಮಗಳು ಅನಾ ಸಹಜ ಸೀಡ್ಸ ಪ್ಯಾಕೆಟ್ ಹಿಡಿದು ಪೋಸ್ ಕೊಟ್ಟರು.
ಮಾರನೆಯ ದಿನ ಹ್ಯಾಂಬರ್ಗ ಬಳಿ ಇನ್ನೊಂದು ಸಾವಯವ ತೋಟ ನೋಡುವ ಅವಕಾಶ ಬಂತು. 360 ಹೆಕ್ಟೇರ್ ಹೊಲವನ್ನು ಸರ್ಕಾರದಿಂದ 60 ವರ್ಷಗಳಿಗೆ ಗುತ್ತಿಗೆ ಪಡೆದಿರುವ Hofladen farm ಅದು.
George Lutz ಎಂಬ ಕೃಷಿಕ ನಡೆಸುತ್ತಿರುವ ಈ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವಯವ ಕೃಷಿ ನಡೆಯುತ್ತಿದೆ. ಡೈರಿ, ಹಂದಿ ಸಾಕಣೆ, ಕೋಳಿ ಸಾಕಣೆ, ಹಣ್ಣಿನ ತೋಟ, ಬೇಕರಿ, ಮೌಲ್ಯವರ್ಧನೆ, ಸಾವಯವ ಮಳಿಗೆ…. ಒಂದೇ ಸೂರಿನಡಿ ಹತ್ತಾರು ಚಟುವಟಿಕೆಗಳು. ಜೇನುಗಳನ್ನು ಆಕರ್ಷಿಸಲು 5 ಎಕರೆಯಲ್ಲಿ ಮಾಡಿದ ಹೂ- ತರಕಾರಿ ತೋಟ ಕಣ್ಮನ ಸೆಳೆಯಿತು.
ಸಂಜೆ ಹೊರಟಾಗ, ಕದ್ದ- ಕೇಳಿ ಪಡೆದ ಬೀಜಗಳಿಂದ ನನ್ನ ಬ್ಯಾಗ್ ತೊನೆಯುತ್ತಿತ್ತು.
0 ಪ್ರತಿಕ್ರಿಯೆಗಳು