
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
50
ಆಪ್ಟೆಕ್; 1986ರಲ್ಲಿ ರಾಜಸ್ಥಾನ ಮೂಲದ ಮುಂಬೈ ನಿವಾಸಿ ರಾಕೇಶ್ ಜುಂಜುನ್ವಾಲಾ ಸ್ಥಾಪಿಸಿದ ಐಟಿ ಸಂಸ್ಥೆ. ಕಂಪ್ಯೂಟರಿನ ಬೇಸಿಕ್ ಕೋರ್ಸಿನಿಂದ ಮೊದಲುಗೊಂಡು C, C+ ಇತ್ಯಾದಿ ಅಡ್ವಾನ್ಸ್ ಕೋರ್ಸುಗಳನ್ನು ಕೇವಲ 5000 ರೂಪಾಯಿಗಳನ್ನು ಹೂಡಿ ಆರಂಭಿಸಿದ ಆಪ್ಟೆಕ್, ಇಂದು 221.31 ಕೋಟಿ ಆಸ್ತಿಯನ್ನು ಹೊಂದಿದ ಸಂಸ್ಥೆಯಾಗಿ ಬೆಳೆದಿದೆಯಂತೆ. ಟಿವಿ ಚಾನಲ್, ಏರ್ ಲೈನ್ಸ್ ಮುಂತಾದ ಉದ್ಯಮಗಳಲ್ಲೂ ತೊಡಗಿಸಿಕೊಂಡು, ವಿಶ್ವದ ಶ್ರೀಮಂತರಲ್ಲಿ 438ನೇ ಸ್ಥಾನದಲ್ಲಿದ್ದ ರಾಕೇಶ್ ಜುಂಜುನ್ವಾಲಾ ತಮ್ಮ 62ನೇ ವಯಸ್ಸಿನಲ್ಲಿ, ಇದೇ ಆಗಸ್ಟ್ 14 ರಂದು ಬಹು ಅಂಗ ವೈಫಲ್ಯದಿಂದ ನಿಧನಹೊಂದಿದರು. ಆಗ ಆಪ್ಟೆಕ್ ಅಂದ್ರೆ ಮಸ್ತ್ ಹವಾ ಇದ್ದ ಕಂಪ್ಯೂಟರ್ ಕೋರ್ಸ್. ಈಗ ಒಂದು ದಶಕದ ಮೇಲಾಯ್ತು ಆ ಹೆಸರು ನನ್ನ ಕಿವಿಗೆ ಬಿದ್ದಿಲ್ಲ. 1997-98ರಲ್ಲಿ ನಾನು ಲೋಣಿಯಲ್ಲಿ ಆರು ತಿಂಗಳ ಕಂಪ್ಯೂಟರ್ ಬೇಸಿಕ್ ಕೋರ್ಸ್ ಮಾಡಿದೆ. ಆರಂಭದಲ್ಲಿ ಎಷ್ಟೇ ನೋಟ್ಸ್ ಮಾಡಿಕೊಂಡರೂ ಮರೆತೇಹೋಗುತ್ತಿತ್ತು! ಆಗ ನನಗೆ ಮನೆಗೆಲಸಗಳನ್ನು ನಿಭಾಯಿಸುತ್ತಲೇ ವಿದ್ಯಾಭ್ಯಾಸ ಮುಂದುವರೆಸುವವರ ಕಷ್ಟ ಅರಿವಾಗಿದ್ದು.
ಬೇಸಿಕ್ ಕೋರ್ಸಿನ ಪರೀಕ್ಷೆ ಬರೆದು ಮುಗಿಸಿ ಅಡ್ವಾನ್ಸ್ ಕೋರ್ಸ್ ಮಾಡಬೇಕೆಂದು ಫಾರ್ಮ್ ಕೂಡ ತಂದಿಟ್ಟುಕೊಂಡೆ. ಅಷ್ಟರಲ್ಲಿ ನಾನು ಮತ್ತೆ ಬಸುರಿಯಾಗಿದ್ದು ತಿಳಿಯಿತು. ಓದು ಮುಂದುವರೆಸುವ ವಿಷಯ ಹಿಂದೆ ಸರಿಯಿತು. ತಮ್ಮ ಹೆಗಲ ಮೇಲಿದ್ದ ಜವಾಬ್ದಾರಿಗಳನ್ನು ನೆನೆದು ಇವರು ಮತ್ತೊಂದು ಮಗು ಬೇಡ ಎಂದರು. ಆಗ ನನಗೂ ಅದು ಸರಿ ಅನಿಸಿತಾದರೂ, ಗರ್ಭ ತೆಗೆಯಲು ವೈದ್ಯರು ಕೊಟ್ಟ ದಿನ ಹತ್ತಿರವಾದಂತೆಲ್ಲ ನನಗೆ ಈ ಮಗು ಬೇಕೇಬೇಕು ಎನಿಸತೊಡಗಿ ಇವರನ್ನು ನಾನಾ ರೀತಿಯಲ್ಲಿ ಒಪ್ಪಿಸಲು ಪ್ರಯತ್ನಿಸಿದೆ. ತಾಯಿ, ಓದುತ್ತಿರುವ, ಮದುವೆಯಾಗಲಿರುವ ಮೂರು ಜನ ಒಡಹುಟ್ಟಿದವರು, ಹೆಂಡತಿಯಾದ ನಾನು, ಅವಳಿ ಮಕ್ಕಳು ಇಷ್ಟು ಜನರ ಜವಾಬ್ದಾರಿ ತಮ್ಮ ಒಬ್ಬರ ಮೇಲೆಯೇ ಇರುವುದರಿಂದ, ಬರುವ ಸಂಬಳದಲ್ಲಿ (ಐದು ಸಾವಿರದಲ್ಲಿ ಏಳು ನೂರು ಮನೆ ಬಾಡಿಗೆ, ಮುನ್ನೂರೂ ಪಿಎಫ್ ಕಟ್ ಆಗಿ, ನಾಲ್ಕು ಸಾವಿರ ಇವರಿಗೆ ಕೈಗೆ ಬರುತ್ತಿತ್ತು ) ಮತ್ತೊಂದು ಜೀವವನ್ನು ಸಾಕುವ ಶಕ್ತಿ ತಮಗಿಲ್ಲವೆಂದೂ, ಗರ್ಭಪಾತ ಮಾಡಿಸಿ ಅದೇ ಸಮಯದಲ್ಲಿ ಟ್ಯುಬಕ್ಟಮಿ ಮಾಡಿಸುವುದು ಎಂದೂ ಇವರು ಖಡಾಖಂಡಿತವಾಗಿ ಹೇಳಿದರೂ, ಓಟಿ ಒಳಗೆ ಕಾಲಿಡುವವರೆಗೆ ಅವರ ನಿರ್ಧಾರವನ್ನು ಬದಲಿಸುವ ನನ್ನ ಪ್ರಯತ್ನ ಮುಂದುವರೆದೇ ಇತ್ತು… ಯಾರು ಎಷ್ಟು ಸಮಜಾಯಿಸಿ ತಿಳಿ ಹೇಳಿದರೂ ನನ್ನ ಕಣ್ಣೀರು ನಿಲ್ಲದಾಗಿತ್ತು. ಒಡಲಿಲ್ಲಿ ಮೂಡಿದ್ದ ಒಂದೂವರೆ ತಿಂಗಳ ಜೀವದ ಮೇಲೆ ಮಮತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇತ್ತು. ಬದುಕು ಭಾವನೆಗಳಿಂದಲ್ಲ ನಡೆಯುವುದು ಎಂದು ಆಗ ತಿಳಿದೇ ಇರಲಿಲ್ಲ ನನಗೆ.
ವಾಸ್ತವ ಗೆದ್ದು ಭಾವನೆ ಮತ್ತೆ ಎದೆಯ ಚಿಪ್ಪಿನೊಳಗೆ ಹುದುಗಿಹೋಯಿತು..
ಅಲ್ಲಿನ ಆಸ್ಪತ್ರೆಯ ಸಿಬ್ಬಂಧಿ ವರ್ಗ ಮತ್ತು ವೈದ್ಯರೆಲ್ಲ ಪರಿಚಿತರೇ ಆದ್ದರಿಂದ, ಸೂಜಿಗೇ ಹೆದರುವ ನನ್ನ ಪುಕ್ಕಲುತನ ಅವರಿಗೆಲ್ಲ ಗೊತ್ತಿತ್ತು. ಆದ್ದರಿಂದ ನನಗೆ ಲೋಕಲ್ ಅನಸ್ತೇಶಿಯಾ ಕೊಡದೇ ಜನರಲ್ ಅನೇಸ್ತಿಶೀಯಾ ಅಂದ್ರೆ ಸಂಪೂರ್ಣ ಪ್ರಜ್ಞೆ ತಪ್ಪುವ ಇಂಜೆಕ್ಷನ್ ಕೊಟ್ಟು (ಆಗಲೂ ಪ್ಲೀಸ್ ಇಂಜೆಕ್ಷನ್ ಬೇಡ, ಔಷಧಿ ಏನಾದರೂ ಇದ್ದರೆ ಕೊಡಿ ಎಂದು ಬೇಡಿಕೊಂಡಿದ್ದೆ ಅನೇಸ್ತೀಶಿಯಾ ತಜ್ಞೆಯಲ್ಲಿ! ಒಂಚೂರೂ ನೋವಾಗದ ಹಾಗೆ ಇಂಜೆಕ್ಷನ್ ಕೊಡುವುದಾಗಿ ಅವರು ಮಗುವನ್ನು ಸಮಾಧಾನಿಸುವಂತೆ ನನ್ನನ್ನು ಸಮಾಧಾನಿಸಿದ ಆಕೆ ನೋಡಲು ತುಂಬಾ ಚೆಂದ ಇದ್ದರು ಅನ್ನುವುದು ಪ್ರಜ್ಞೆ ತಪ್ಪುತ್ತಿರುವಾಗ ಗಮನಿಸಿದ್ದೆ) ಅವರು ಹತ್ತರವರೆಗೆ ಎಣಿಸಲು ಹೇಳಿ, ನಾನು ಆರರವರೆಗೆ ಹೇಳುವವರೆಗೆ ಎಚ್ಚರವಿತ್ತು.

ಪ್ರಜ್ಞೆ ಬಂದಾಗ ವಿಪರೀತ ಹೊಟ್ಟೆ ನೋವು. ಇವತ್ತೊಂದು ದಿನ ಹಾಗಿರುತ್ತಷ್ಟೆ, ನಾಳೆ ಕಡಿಮೆಯಾಗುತ್ತೆ ಎಂದು ಸಮಾಧಾನ ಮಾಡಿದರು ನನ್ನನ್ನು. ಸ್ವಲ್ಪ ಹೊತ್ತಿನ ನಂತರ ನಾನಿದ್ದ ಸ್ಪೆಷಲ್ ವಾರ್ಡಿಗೆ ಬಂದ ದೀಪಕ್ ಶಿಂಗಾರೆ ಭಯ್ಯಾ, “ಕ್ಯಾ ಭಾಭಿ ಆಪ್ ಭೀ ನಾ, ಹಮಾರೆ ಕುಚ್ ಕದರ್ ಹೀ ನಹಿ ಆಪ್ಕೊ’’ ಅಂದರು. ಇದೇನಿದು ನಾನಿಲ್ಲಿ ಆಪರೇಶನ್ ನೋವಿನಿಂದ ಒದ್ದಾಡ್ತಾ ಇದ್ದ್ರೆ ಈ ಮನುಷ್ಯ ಹೀಗೆ ಹೇಳ್ತಿದ್ದಾರಲ್ಲ ಅನಿಸಿ, ಏನಾಯ್ತು ನಾನೇನು ಮಾಡಿದೆ ನಾನು ಎಂದು ಅರ್ಧ ಗಾಬರಿ, ಅರ್ಧ ಸಿಟ್ಟಲ್ಲಿ ಕೇಳಿದೆ. ಆಗ ನಗುತ್ತಾ ಅವರು ಹೇಳಿದ್ದು ಇಷ್ಟು.
ಆಪರೇಶನ್ ಮುಗಿದ ಮೇಲೆ ಬರಬೇಕಾದ ಸಮಯದಲ್ಲಿ ನನಗೆ ಪ್ರಜ್ಞೆ ಮರಳದೆ, ಸ್ವಲ್ಪ ಕಾದು ನೋಡಿದರೂ ಪರಿಸ್ಥಿತಿ ಬದಲಾಗದೇ ಅಲ್ಲಿದ್ದವರೆಲ್ಲ ಗಾಬರಿಯಾಗಿದ್ದಾರೆ. ಪ್ರಜ್ಞೆ ಬರಿಸಲು ನನ್ನನ್ನು ಅಲುಗಾಡಿಸಿ, ಜಿಗುಟಿ, ಕೆನ್ನೆ ತಟ್ಟಿ (ಬಾರಿಸಿ!) ನನ್ನ ಪತಿಯೂ ಸೇರಿದಂತೆ ಯಾರೆಲ್ಲ ಏನೆಲ್ಲ ಮಾತಾಡಿದರೂ ನಾನು ಎಚ್ಚರಗೊಂಡಿಲ್ಲಂತೆ. ಇನ್ನು ವೈದ್ಯಕೀಯ ರೀತಿಯಲ್ಲಿ ಪ್ರಯತ್ನಿಸುವುದು ಎಂದು ವೈದ್ಯರುಗಳು ಮಾತನಾಡಿಕೊಳ್ಳುತ್ತಿರುವಾಗಲೇ, ದೀಪಕ್ ಭಯ್ಯಾ ನನ್ನ ಬಳಿ ಬಂದು ಜೋರಾಗಿ, “ಭಾಭಿ, ಅಮೋಲ್ ಆಯಾ ದೇಖಿಯೇ, ಬಾತ್ ಕೀಜಿಯೇ” ಎಂದಾಗ ನಾನು ‘ಮ್ಂ’ ಅಂದೆನಂತೆ! ಆಗ ಎಲ್ಲರೂ ನಿರಾಳವಾದರಂತೆ. ಮಗನ ಹೆಸರಿಗೆ ನಾನು ಪ್ರತಿಕ್ರಿಯಿಸಿದ್ದು ಕಂಡು ನಗುತ್ತಾ, ಇನ್ನು ಭಯವಿಲ್ಲ, ವಾರ್ಡಿಗೆ ಶಿಫ್ಟ್ ಮಾಡಿ ಎಂದು ಡಾ. ಬದಾಮಿ ಹೇಳಿ ಅಲ್ಲಿಂದ ತೆರಳಿದರಂತೆ. ನಡೆದ ಪ್ರಸಂಗವನ್ನು ಹೇಳುತ್ತಾ ದೀಪಕ್ ಭಯ್ಯಾ, “ದೇಖಾ, ಇಸ್ ಬೇಚಾರಾ ಭಯ್ಯಾ ಬೋಲೆ ತೊ ಕುಚ್ ಇಜ್ಜತ್ ಹೀ ನಹಿ ಆಪ್ಕಾ ಮನ್ ಮೇ. ಬಚ್ಚಾ ಕಾ ನಾಮ್ ಲೇತೇ ಹೀ ಹೋಷ್ ಮೆ ಆಯಿ ಆಪ್!” ಎಂದು ನಗುತ್ತಾ ನನ್ನ ಕಾಲೆಳೆದರು.
ಡಾ. ಬದಾಮಿ ಸ್ತ್ರೀ ರೋಗ ತಜ್ಞರು. ತುಂಬಾ ಸೌಮ್ಯ, ಗಂಭೀರ ಸ್ವಭಾವದ ಮನುಷ್ಯ. ಹೆಸರಿನಲ್ಲಷ್ಟೇ ಅವರ ಮನೆತನದ ಹೆಸರು ಬದಾಮಿ ಇದ್ದಿದ್ದು. ಆದರೆ ಅವರು ಕರ್ನಾಟಕದವರಲ್ಲ, ಮಹಾರಾಷ್ಟ್ರದವರಾಗಿದ್ದರು. ತುಂಬಾ ಒಳ್ಳೆಯ ವೈದ್ಯರು. ಅವರು ತಮ್ಮನ್ನು ಪರೀಕ್ಷಿಸುತ್ತಾರೆಂದರೆ ಆಸ್ಪತ್ರೆಗೆ ಬಂದ ಸ್ತ್ರೀರೋಗಿಗಗಳಿಗೆ ತಾವು ಹುಶಾರಾಗೇ ಆಗ್ತೀವಿ ಅನ್ನುವಷ್ಟು ಭರವಸೆ ಮೂಡುವಷ್ಟು ನಿಪುಣ ವೈದ್ಯರು. ರೋಗಿಯ ಗೌರವಕ್ಕೆ ಎಳ್ಳಷ್ಟೂ ಧಕ್ಕೆಯಾಗದಂತೆ ಇರುತ್ತಿತ್ತು ಅವರ ವರ್ತನೆ. ಹೀಗಾಗಿ ನನಗೂ ಅವರ ಬಳಿ ಆರೋಗ್ಯ ತೋರಿಸಿಕೊಳ್ಳುವುದೆಂದರೆ ಎಳ್ಳಷ್ಟೂ ಮುಜುಗರವಾಗುತ್ತಿರಲಿಲ್ಲ.

ನನ್ನ ಗರ್ಭ ನಿಂತು ನಾನು ಆಸ್ಪತ್ರೆಗೆ ಹೋದಾಗ ಅವರು ರಜೆಯಲ್ಲಿದ್ದ ಕಾರಣ ಅಲ್ಲಿದ್ದ ವೈದ್ಯೆ ಒಬ್ಬರ ಬಳಿ ತೋರಿಸಿಕೊಳ್ಳುವುದು ಅನಿವಾರ್ಯವಾಯಿತು. ಅಲ್ಲಿನ ಸಿಬ್ಬಂಧಿ ವರ್ಗಕ್ಕೆನೇ ಆಕೆಯ ಕೈಗುಣದ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದು ನನಗೆ ಗೊತ್ತಾಯಿತು. ನಂತರ ನನ್ನ ಟ್ಯುಬಕ್ಟಮಿ ಆಕೆಯೇ ಮಾಡುವುದು ಅಂದಾಗ ಹೆದರಿದೆ. ಡಾ. ಬದಾಮಿಯವರು ಆಪರೇಶನ್ ಮಾಡಿದರೆ ಮಾತ್ರ ನಾನು ಮಾಡಿಸಿಕೊಳ್ಳುವುದು ಎಂದು ಹಠ ಹಿಡಿದಾಗ, ಇನ್ನೊಬ್ಬರು ವಹಿಸಿಕೊಂಡ ಮೇಲೆ ಹಾಗೆಲ್ಲ ತಾವು ಮಾಡಲು ಬರುವುದಿಲ್ಲವೆಂದು ಡಾ. ಬದಾಮಿ ತಿಳಿಸಿ ಹೇಳಿದರಾದರೂ, ಹಾಗಿದ್ದಲ್ಲಿ ನನಗೀ ಆಪರೇಶನ್ನೇ ಬೇಡ (ಆ ನೆಪದಿಂದಲಾದರೂ ಮಗುವನ್ನು ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ನನ್ನ ಹಠದ ಹಿಂದೆ ಇತ್ತು) ಎಂದು ನನ್ನ ಹಠ ಮುಂದುವರೆದಿಸಿದ್ದರಿಂದ, ಅವರು ಆಯಿತು ನಾನಿರ್ತೀನಿ ಓಟಿಯಲ್ಲಿ, ಆಯ್ತಲ್ಲ ಎಂದು ಸಮಾಧಾನಿಸಿದರು. ಓಟಿಯಲ್ಲಿರ್ತಾರೆ ಅಂದರೆ ಅವರೇ ಆಪರೇಶನ್ ಮಾಡುವುದು ಎಂದು ನಾನಂದುಕೊಂಡೆ. ಆದರೆ ಆ ದಿನ ಅವರು ಓಟಿಯಲ್ಲಿದ್ದರು ಅಷ್ಟೆ.
ಆ ಮಹಾತಾಯಿಯೇ (ಕ್ಷಮಿಸಿ, ಹೀಗನ್ನುತ್ತಿರುವುದಕ್ಕೆ) ಆಪರೇಶನ್ ಮಾಡಿದ ಪರಿಣಾಮವಾಗಿ ಮುಂದೆ ಒಂದೂವರೆ ತಿಂಗಳು ಸತತ ಹೊಟ್ಟೆ ನೋವಿನ ಸೆಳೆತದಿಂದ ಬಳಲಿ ಬೆಂಡಾಗಿಹೋದೆ ನಾನು… ಅದೇನು ವ್ಯತ್ಯಾಸ ಮಾಡಿದ್ದರೋ ಆಕೆ, ಅದನ್ನು ಮಾತ್ರೆ ಇಂಜೆಕ್ಷನ್ ಮೂಲಕ ಡಾ. ಬದಾಮಿಯವರೇ ಸರಿಪಡಿಸಬೇಕಾಯಿತು. ಇದರ ನಡುವೆ ನನ್ನ ಹುಚ್ಚುಚ್ಚು ನಗುವಿನಂದಾಗಿ ಹಾಕಿದ ಏಳು ಹೊಲಿಗೆಗಳಲ್ಲಿ ಮೇಲಿನದು ಮತ್ತು ಕೇಳಗಿನದು ಫಟ್ ಎಂದು ಹರಿದುಹೋಗಿ ಅದನ್ನು ಸಂಭಾಳಿಸುವ ಸಂಭ್ರಮ ಬೇರೆ! ಹೊಲಿಗೆ ಹಾಕಿದ ಮೇಲೆ ಏಳು ದಿನಗಳವರೆಗೆ ನೆಗಡಿ ಕೆಮ್ಮು ಬರದ ಹಾಗೆ ನೋಡಿಕೊಳ್ಳಿ, ಟಾಯ್ಲೆಟ್ಟಿಗೆ ಹೋದಾಗ ತಿಣುಕುವುದಾಗಲಿ, ಯಾವುದೇ ಪ್ರಸಂಗದಲ್ಲಿ ಹೆಚ್ಚು ನಗುವುದಾಗಲಿ ಮಾಡಬೇಡಿ ಎಂದು ತಾಕೀತು ಮಾಡಿ ಮನೆಗೆ ಕಳಿಸಿದ್ದರು ಆಸ್ಪತ್ರೆಯಿಂದ. ಎಲ್ಲವನ್ನೂ ಸರಿಯಾಗಿಯೇ ಪಾಲಿಸುತ್ತಿದ್ದೆ. ಅದೊಂದು ಅದ್ಯಾವ ಜೋಕಿಗೋ ನೆನಪಿಲ್ಲ, ನಗಲು ಆರಂಭಿಸಿದವಳಿಗೆ ಏನೇ ಮಾಡಿದರೂ ನಗು ಕಂಟ್ರೋಲ್ ಆಗದೆ ಅವಘಡ ಮಾಡಿಕೊಂಡೆ. ಹಾಗಾಗುವಲ್ಲೂ ಆ ವೈದ್ಯೆ ನನ್ನ ಹೊಟ್ಟೆಯನ್ನು ಅಡ್ಡಡ್ಡ ಸೀಳದೇ ಉದ್ದುದ್ದ ಸೀಳಿದ್ದೂ ಒಂದು ಕಾರಣವಾಗಿತ್ತು!
। ಇನ್ನು ಮುಂದಿನ ವಾರಕ್ಕೆ ।
0 ಪ್ರತಿಕ್ರಿಯೆಗಳು