ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸ್ಸೆಲ್ಲಾ ಬಿಜಾಪುರದಲ್ಲಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

46

ಮಕ್ಕಳು ನಿಧಾನವಾಗಿ ಕೂರಲು, ಅಂಬೆಗಾಲಿಡಲು ಆರಂಭಿಸುತ್ತಿದ್ದಂತೆಯೇ ನಾವು ನಮ್ಮ ಸ್ಟ್ಯಾಂಡರ್ಡನ್ನು ಸ್ವಲ್ಪ ಹೈ ಲೆವಲ್ಲಿಗೆ ತಂದೆವು. ಅಂದ್ರೆ ಕುರ್ಚಿ ಮೇಜು ಪಲ್ಲಂಗ ಥರದವುಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಎತ್ತರದಲ್ಲಿ ಇಡತೊಡಗಿದೆವು ಅಂತರ್ಥ. ಕೆಳಗಿರುವ ಯಾವ ಸಾಮಾನಿಗೂ ಉಳಿಗಾಲವಿರುವುದಿಲ್ಲ ಮಕ್ಕಳು ಮನೆ ತುಂಬಾ ಹರಿದಾಡಲು ಆರಂಭಿಸಿದಾಗ. ಮಕ್ಕಳು ಒಳಗೆ ಬರದಂತೆ ಆದರೆ ಅಮ್ಮ ಅಂದ್ರೆ ನಾನು ಅವರ ಕಣ್ಣಿಗೆ ಕಾಣುವಂತೆ ಅಲ್ಲಿಯವರೆಗೆ ಬಾಗಿಲಿರದ ಅಡುಗೆ ಮನೆಗೆ ಒಂದು ಜಾಳಿಗೆಯ ಬಾಗಿಲು ಬಂದಿತು. ತಲಬಾಗಿಲು ತೆರೆದಿಟ್ಟರೂ ಮಕ್ಕಳು ಹೊಸ್ತಿಲು ದಾಟಿ ಆಚೆ ಹೋಗದಂತೆ ಅಲ್ಲೊಂದು ಅವರೆತ್ತರಕ್ಕೆ ಸಮನಾಗಿ ಬಾಗಿಲಿಗೆ ಅಡ್ಡವಾಗಿ ಕಟ್ಟಿಗೆಯ ಪಟ್ಟಿಗಳಿಂದ ಮಾಡಿದ ಪುಟ್ಟ ಬಾಗಿಲು ಮಾಡಲಾಯಿತು. ಹಾಗೆ ಮಾಡುವ ಮೂಲಕ ಅವರಿಗೆ ಆಡಲು, ನನಗೆ ನಿರಾತಂಕವಾಗಿ ಕೆಲಸ ಮಾಡುತ್ತಲೇ ಮಕ್ಕಳನ್ನು ಗಮನಿಸಿಕೊಳ್ಳಲು ಸಾಧ್ಯ ಮಾಡಿಕೊಟ್ಟರು ಇವರು. ಮಕ್ಕಳ ನಗು, ಆಟಗಳು ಮನಸಿನ ದಣಿವನ್ನು ಆರಿಸಿಕೊಳ್ಳಲು ತುಂಬಾ ಸಹಾಯ ಮಾಡಿದವು. 

ಮಕ್ಕಳ ಆಗಿನ ನಲಿವಿನ ಮೋಜಿನ ಪ್ರಸಂಗಗಳ ಬಗ್ಗೆ ಬರೆದರೆ ಅವೇ ನಾಲ್ಕು ಕಂತುಗಳಾಗಬಹುದೇನೋ. ಆಗೆಲ್ಲ, ನನ್ನ ಹಾಗೆ ಅವಳಿ ಮಕ್ಕಳನ್ನು ಹೆರದೆ, ಒಂದೊಂದನ್ನೇ ಹೆತ್ತವರ ಮಕ್ಕಳು ಪಾಪ ಆಟವಾಡಲು ಜೊತೆಯಿಲ್ಲದೇ ಅದೆಷ್ಟು ಬೋರ್ ಅನುಭವಿಸ್ತವೋ ಅಂದುಕೊಳ್ಳುತ್ತಿದ್ದೆ ನಾನು. ಅಷ್ಟು ಚೆಂದ ಜೊತೆಗೂಡಿ ಆಡುತ್ತಿದ್ದರು ಅಮೋಲ್ ಮತ್ತು ಅದಿತಿ. 

ಸಿರಿಲ್ಯಾಕ್‌ನಿಂದ ಮೆದುವಾದ ಅನ್ನ ತಿನ್ನುವಷ್ಟು ಮಕ್ಕಳು ಬೆಳೆದಾಗ, ಮನೆಯಲ್ಲಿ ನಾನು ಮಾಡಿದ ಅಡುಗೆಗಿಂತ ನಲ್ಲು ಭಾಬಿ (ಅದೇ ಪಕ್ಕದ ಮನೆಯವರು ನಾವು ಬಂದ ದಿನ ನಮ್ಗೆ ನಾಸ್ಟಾ ಎಲ್ಲಾ ಮಾಡಿಕೊಟ್ಟಿದ್ದರಲ್ಲ ಅವರು) ಮಾಡುವ ಮಕ್ಕಳಿಗೆ ಹೆಚ್ಚು ರುಚಿಸುತ್ತಿತ್ತು. ಅವರು, ಅವರತ್ತೆ ಸತ್ಯಭಾಮಾ (ಅವರನ್ನು ನಾವೆಲ್ಲಾ ಆಜ್ಜಿ ಅನ್ನುತ್ತಿದ್ದೆವು), ಅವರ ಮಕ್ಕಳಾದ ಕೀರ್ತಿ, ಕಿರಣ್ ಮತ್ತು ಅಶ್ವಿನಿ ಎಲ್ಲರಿಗೂ ನನ್ನ ಮಕ್ಕಳೆಂದರೆ ಪ್ರಾಣ. ಅವರ ಮನೆಯ ಪಮೇರಿಯನ್ ನಾಯಿ ಸೋನಿಗೂ ಸಹ! ಹೀಗಾಗಿ ಮಕ್ಕಳನ್ನು ಊಟದ ಹೊತ್ತಿಗೆ ಅವರಲ್ಲ್ಯಾರಾದರೂ ಒಬ್ಬರು ತಮ್ಮ ಮನೆಗೆ ಕರೆದುಕೊಂಡು ಹೋಗಿಬಿಡುತ್ತಿದ್ದರು. ಎಷ್ಟು ದಿನ ಅಂತ ನಲೂ ಭಾಬಿಗೆ ತೊಂದರೆ ಕೊಡುವುದು?! ಅವರು ಪಾಪ ನಿತ್ಯ ಎರಡು ಹೊತ್ತು ತಮ್ಮನೆಯ ಜನಕ್ಕೆ, ನಾಯಿಗೆ ಅಲ್ಲದೆನೇ ಅನೇಕ ಬ್ಯಾಚ್ಯುಲರ್ಸ್ ವೈದ್ಯರುಗಳಿಗೆ ಮನೆಯಿಂದ ಊಟ ತಯಾರಿಸುತ್ತಿದ್ದರು. ಅದರ ಮೇಲೆ ನನ್ನಿಬ್ಬರು ಮಕ್ಕಳ ಊಟ ಬೇರೆ ಈಗ. ತಿನ್ನುವುದು ಮುಷ್ಟಿಯಷ್ಟೇ ಅನ್ನವಾದರೂ ಅದು ಅನ್ನವೇ ತಾನೇ? ಹೀಗಾಗಿ ನಾನು ಮೆಲ್ಲನೇ ನನ್ನ ಮಕ್ಕಳ ಕಣ್ಣಿಗೆ ಕಾಣದಂತೆ ಕಿಟಕಿಯಿಂದ ಅವರಿಬ್ಬರ ಪಾಲಿನ ಊಟ ಕೊಡತೊಡಗಿದೆ. ಮೊದಮೊದಲು ನಲು ಭಾಬಿ ನನ್ನನ್ನು ಬೈದು ತೆಗೆದುಕೊಳ್ಳಲು ನಿರಾಕರಿಸಿದರಾದರೂ ನನ್ನ ಹಠಕ್ಕೆ ಅವರು ಮಣಿಯಲೇಬೇಕಾಯಿತು. 

ಮಕ್ಕಳ ಮೊದಲ ಹುಟ್ಟುಹಬ್ಬ ಅನ್ನುವಷ್ಟರಲ್ಲಿ ಭಾರತಿ ಅಂದ್ರೆ ಇವರ ದೊಡ್ಡ ತಂಗಿಯ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ನನ್ನ ನಾಲ್ಕನೇ ನಾದಿನಿ, ಅಲ್ಲಿಯ ಹವಾಮಾನ ಒಗ್ಗುತ್ತಿಲ್ಲವೆಂದು ನಮ್ಮಲ್ಲಿಗೇ ಬಂದಾಗಿತ್ತು. ಮಕ್ಕಳ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಮಾಡಿದೆವಾದರೂ ಸಂಭ್ರಮ ಬಲು ಜೋರಾಗಿತ್ತು. ನನ್ನ ಮಕ್ಕಳು ಜೂನ್ ತಿಂಗಳಿನಲ್ಲಿ ಹುಟ್ಟಿದ್ದಲ್ಲವೇ, ಶಾಲೆಗಳು ಆರಂಭವಾಗುವ ಸಮಯವದು. ಭಾರತಿ ಮತ್ತು ರಾಮನಗೌಡ (ಮೈದುನ)ರ ಓದು ಮತ್ತು ಮದುವೆ ವಯಸ್ಸಿಗೆ ಬಂದಿದ್ದ ಮೂರನೇ ನಾದಿನಿ (ಮಲ್ಲಮ್ಮ)ಗೆ ನೋಡಲು ವರನ ಕಡೆಯವರು ಲೋಣಿಯವರೆಗೆ ಬರುವುದು ಅನುಮಾನವೆನಿಸಿ, ಬಿಜಾಪುರದ ಆದರ್ಶನಗರದಲ್ಲಿ ಮನೆ ಮಾಡಿದೆವು. ಅತ್ತೆಯವರೊಂದಿಗೆ ಅವರೆಲ್ಲ ಅಲ್ಲಿರುವುದು, ನಾವು ಆಗಾಗ ಹೋಗಿ ನೋಡಿಕೊಂಡು ಬರುವುದು ಎಂದಾಯಿತು. ಅತ್ತೆಯವರು ಬಿಜಾಪುರಕ್ಕೆ ಹೋದ ಮೇಲೆ ನಾನು ಮಾಡಿದ ಮೊದಲ ಕೆಲಸವೆಂದರೆ ಮನೆಗೆಲಸಕ್ಕೆ ಕೆಲಸದವಳನ್ನು ನೇಮಿಸಿಕೊಂಡಿದ್ದು! ಪಾತ್ರೆ, ಬಟ್ಟೆ ಕಸ ನೆಲ ಒರೆಸುವುದರಿಂದ ಮುಕ್ತಿ ದೊರೆತಂತಾಗಿ ಅಷ್ಟರ ಮಟ್ಟಿಗೆ ನಿರಾಳವಾಗಿ ಉಸಿರಾಡತೊಡಗಿದೆ. ಅದರಿಂದ ಮದ್ಯಾಹ್ನದ ಹೊತ್ತು ಮಕ್ಕಳು ಮಲಗಿದಾಗ, ಅವರೊಂದಿಗೆನೇ ಒಂದರೆಗಳಿಗೆಯಾದರೂ ಮಲಗಲು ಅವಕಾಶ ಸಿಗತೊಡಗಿತು. 

ಮುಂದೆ ಆರು ತಿಂಗಳ ನಂತರ ಲೋಣಿಗೆ ಬಂದಿದ್ದ ಅವ್ವ ನನ್ನ ಅವಸ್ಥೆಯನ್ನು ನೋಡಲಾಗದೇ, ಅದಿತಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ನಾನು ಹಿಂಜರಿದಿದ್ದಕ್ಕೆ ನನಗೆ ತಿಳಿಸಿ ಹೇಳಿ ತನ್ನ ಜೊತೆಗೆ ಕರೆದುಕೊಂಡು ಹೋಗೇಬಿಟ್ಟಳು! ಅದಿತಿಯೂ ಸಹ ಹೋಗುವಾಗ ಹಠ ಮಾಡಲಿಲ್ಲ. ನನಗೋ ಮಗಳನ್ನು ಬಿಟ್ಟಿರುವುದು ಹೇಗೆ ಎಂದು ಮತ್ತೆ ಮತ್ತೆ ಕಣ್ಣು ತುಂಬಿ ಬರುತ್ತಿತ್ತು. “ಏನ್ ಒಳ್ಳೇ ಮಗಳ್ನ ಗಂಡನಮನಿಗೆ ಕಳಿಸ್ದಂಗ ಮಾಡಾಕತ್ತೀಯಲ್ಲ, ನೋಡ್ಕೊ ನಿನ್ನ ಅವತಾರ ಹೆಂಗಾಗಿ ಹೋಗಿದೆ ಅಂತ. ಮೊದ್ಲ ನೀ ಸುಧಾರಸ್ಕೊ ಆಮ್ಯಾಲೆ ಕರ್ಕೊಂಡು ಬರಾಕತ್ತೆಂತ” ಎಂದು ಅವ್ವ ಕಕ್ಕುಲತೆಯಿಂದ ಸಮಾಧಾನ ಮಾಡಿ ಅದಿತಿಯೊಂದಿಗೆ ಬಿಜಾಪುರಕ್ಕೆ ಹೋದಳು. 

ಇಲ್ಲಿ ನಮ್ಮಿಬ್ಬರನ್ನು ಬಿಡಿ, ಅದಿತಿ ಬಿಜಾಪುರಕ್ಕೆ ಹೋಗುತ್ತಲೇ ಅಮೋಲ್ ಮುಖದ ಮೇಲಿನ ನಗು ಹೊರಟೇಹೋಯಿತು. ಅವನನ್ನು ನಗಿಸಲು ನಾವೆಲ್ಲಾ ಏನೆಲ್ಲಾ ಸರ್ಕಸ್ ಮಾಡಿದರೂ ನಗುತ್ತಿರಲಿಲ್ಲ ಮಗು. ಸುಮ್ಮನಿರುವುದು ಇಲ್ಲವೇ ಅಳುವುದು. ಊಟ ಸಹ ನಿರಾಕರಿಸತೊಡಗಿದ. ಅವನು ಅದಿತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಎಂಟು ದಿನಗಳೊಳಗಾಗಿ ಅತ್ತ ಅದಿತಿಯನ್ನು ನೆನೆಯುತ್ತಾ, ಇತ್ತ ಅಮೋಲನ ಅವಸ್ಥೆಗೆ ಮರುಗುತ್ತಾ, ಏನೇ ಕಷ್ಟವಾದರೂ ನಮ್ಮ ಮಕ್ಕಳು ನಮ್ಮ ಬಳಿಯೇ ಜೊತೆಯಾಗಿಯೇ ಇರಲಿ ಎಂದು ನಿರ್ಧರಿಸಿ, ಅಮೋಲನನ್ನೆತ್ತಿಕೊಂಡು ಬಿಜಾಪುರಕ್ಕೆ ಹೊರಟೆವು. ಬಸ್ಸು ಸೋಲಾಪುರ ದಾಟಿ ಬಿಜಾಪುರ ಸಮೀಪಿಸುತ್ತಿದ್ದಂತೆಯೇ ನನ್ನ ಮಗನ ಮುಖದಲ್ಲಿ ನಗು ಹೂವನಂತರಳಿತ್ತು! ನಮ್ಮಿಬ್ಬರಿಗೂ ಅಚ್ಚರಿಯಾಗಿದ್ದು, ಇನ್ನೂ ಒಂದು ಗಂಟೆಯ ದಾರಿ ದೂರವಿದ್ದರೂ ಅಮೋಲನಿಗೆ ಬಿಜಾಪುರ ಹತ್ತಿರವಾಗ್ತಿದೆ ಅಂತ ಗೊತ್ತಾಗಿದ್ದು ಹೇಗೆ ಅನ್ನುವುದು! ಪೂರಾ ಎಂಟು ದಿನಗಳ ಕಾಲ ನಿದ್ದೆಯಲ್ಲೂ ನಗದ ಮಗ ಈಗ ನಗುತ್ತಿದ್ದಾನೆ! ಅವನ ಅಂದಿನ ಅರಳಿದ ಮುಖ ನನ್ನೆದೆಯಲ್ಲಿ ಅಚ್ಚೊತ್ತಿದಂತಿದೆ ಇಂದಿಗೂ. 

ಮನೆ ತಲುಪುತ್ತಿದ್ದಂತೆಯೇ ಅದಿತಿಯ ಕೆನ್ನೆ ಸವರಿದ್ದೇನು, ಅವಳನ್ನು ತಬ್ಬಿಕೊಂಡಿದ್ದೇನು, ಮನೆಯವರೆಲ್ಲರ ಕಣ್ಣಲ್ಲೂ ನೀರು ಮಕ್ಕಳ ಈ ವರ್ತನೆ ಕಂಡು. ಅಮೋಲನನ್ನು ಕಂಡು ಅಷ್ಟು ಖುಷಿಯಾದ ಅದಿತಿ ನನ್ನ ಹತ್ತಿರ ಬರಲು ತಯಾರಿಲ್ಲ, ಸುಮ್ಮನೆ ನನ್ನನ್ನೇ ನೋಡುತ್ತಾ ದೂರ ನಿಂತಳು ಸ್ವಲ್ಪ ಹೊತ್ತು. ಅವಳ ಮನಸ್ಸಲ್ಲಿ ಎಷ್ಟು ಸಿಟ್ಟಿತ್ತೋ ಏನೋ ಅವಳನ್ನು ಬಿಟ್ಟು ದೂರ ಇದ್ದಿದ್ದಕ್ಕೆ. ನಂತರ ಓಡಿಬಂದು ತನ್ನ ಪುಟ್ಟ ಕೈಗಳ ಹಾರ ನನ್ನ ಕೊರಳಿಗೆ ಹಾಕಿತು ಕೂಸು. 

ಅಪ್ಪ ಅವ್ವ ನಮ್ಮಿಬ್ಬರಿಗೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿರುವುದನ್ನು ಒತ್ತಿ ಹೇಳಿ, ಮಕ್ಕಳನ್ನು ತಾವು ನೋಡಿಕೊಳ್ಳುವುದಾಗಿ ನಮ್ಮಿಬ್ಬರನ್ನು ಎಂಟು ದಿನ ಸುತ್ತಾಡಿ ಬರಲು ಕಳಿಸಿದರು. ಬಿಜಾಪುರದಲ್ಲಿಯೇ ಅತ್ತೆಯವರೂ ಇದ್ದರಲ್ಲ, ಆ ಮನೆಯಲ್ಲಿ ಅಮೋಲನನ್ನು, ತವರಿನಲ್ಲಿ ಅದಿತಿಯನ್ನು ಬಿಟ್ಟು ಹೊರಟೆವು ನಾವು. ನಿತ್ಯ ಅವರಿಬ್ಬರನ್ನು ಭೇಟಿ ಮಾಡಿಸುವುದಾಗಿ ಎರಡೂ ಮನೆಯವರು ಹೇಳಿ ನಮ್ಮನ್ನು ಒಪ್ಪಿಸಿ ಕಳಿಸಿದ್ದರು. ಬೇಲೂರು, ಹಳೆಬೀಡು, ಸೋಮನಾಥಪುರ ನೋಡುವಷ್ಟರಲ್ಲಿ ಮೂರು ದಿನಗಳಾಗಿದ್ದವು. ಮನಸ್ಸೆಲ್ಲಾ ಬಿಜಾಪುರದಲ್ಲಿ. ಎಂಟು ದಿನಕ್ಕೆಂದು ಬಂದವರು ನಾಲ್ಕನೇ ದಿನ ಬೆಳಿಗ್ಗೆ ಬಿಜಾಪುರದಲ್ಲಿದ್ದೆವು ನಾವಿಬ್ಬರೂ. ಮಕ್ಕಳನ್ನು ಬಿಟ್ಟಿರುವುದು ಸುಲಭವಾಗಲೇಯಿಲ್ಲ ನಮಗೆ. ನಮ್ಮನ್ನು ನೋಡಿದ್ದೇ ಅಡ್ರಾಶಿ ತೆಕ್ಕೆಗೆ ಬಿದ್ದವು ಮಕ್ಕಳೆರಡೂ. ಎರಡೂ ಮನೆಗಳಲ್ಲೂ ಮಕ್ಕಳ ಗುಣಗಾನ! “ಏನ್ ಮಕ್ಕಳವಾ ನಿನ್ನೂವು! ಒಂಚೂರರ ಹಠಾ ಮಾಡಬೇಕ್ ಹೇಳ್ತೀನಿ, ಕೇಳಬ್ಯಾಡ! ಉಣ್ಣು ಅಂದಾಗ ಉಂಡು ಆಡಕೊಂಡು, ಹೇಳಿದಂಗ ಕೇಳಕೊಂಡು ಇದ್ದ್ರು ಇಬ್ಬ್ರೂ ಎರಡೂ ಮನ್ಯಾಗ. ಭಾಳ ಪುಣ್ಯಾ ಮಾಡೀರಿ ಹಿಂತಾ ಮಕ್ಕಳನ್ನ ಪಡ್ಯಾಕ” 

ಮಕ್ಕಳು ಯಾರಿಗೂ ತೊಂದರೆ ಕೊಡಲಿಲ್ಲ, ಆ ಮೂಲಕ ಭಾರವಾಗಲಿಲ್ಲ ಅನ್ನುವ ಸಮಾಧಾನದೊಂದಿಗೆ ಮಕ್ಕಳೊಂದಿಗೆ ಶಿರ್ಡಿಯ ಬಸ್ ಹತ್ತಿದೆವು ನಾವಿಬ್ಬರೂ. ಬಿಜಾಪುರದಿಂದ ಲೋಣಿಗೆ ಯಾವುದೇ ನೇರ ಬಸ್ ಅಂದೂ ಇರಲಿಲ್ಲ ಈಗಲೂ ಇಲ್ಲ. ಶಿರ್ಡಿಗೆ ಹೋಗಿಯೇ ಬಸ್ ಬಿಜಾಪುರಕ್ಕೆ ಹತ್ತಬೇಕಿತ್ತು. ವಾಪಸ್ ಬರುವಾಗ ಅಲ್ಲಿ ಇಳಿದು ಲೋಣಿಗೆ ಬರಬೇಕಿತ್ತು. ಬಿಜಾಪುರದಿಂದ ಬಸ್ ಹೊರಟ ಮೇಲೆ ಮಕ್ಕಳು ಕಾಡಲಿಲ್ಲ ಬೇಡಲಿಲ್ಲ ಎಂದು ಎಲ್ಲರೂ ಹೇಳಿದ್ದರ ಬಗ್ಗೆ ಯೋಚಿಸಿದೆ. ಅದು ಹೇಗೆ ಅಷ್ಟು ಪುಟ್ಟ ಮಕ್ಕಳಿಗೆ ಹಾಗಿರಬೇಕೆಂದು ಗೊತ್ತಾಯಿತು?! ಆ ನಾಲ್ಕು ದಿನ ಮಕ್ಕಳ ಮನಸ್ಸಲ್ಲಿ ಏನು ಓಡುತ್ತಿದ್ದಿರಬಹುದು? ಯಾಕೆ ವಯೋಸಹಜವಾಗಿ ಮನೆಯವರೊಂದಿಗೆ ಹಠ ಮಾಡಲಿಲ್ಲ?

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: