ಜಯಲಕ್ಷ್ಮಿ ಪಾಟೀಲ್ ಅಂಕಣ- ಮೌನವಾಗಿ ಅಳತೊಡಗಿದೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

18

ಒಂದಿಬ್ಬರು ಮಾತಾಡುವ ದನಿ ಕೇಳ್ತಿದೆ! ಸತ್ತ ಮೇಲೂ ಭೂಮಿ ಮೇಲಿನ ಜನರು ಮಾತಾಡುವುದು ಕೇಳಿಸುತ್ತದೆಯಾ…? ಅಥವಾ ಬಹುಶಃ ನಾನಿನ್ನೂ ಸತ್ತಿಲ್ಲ… ಕಣ್ಣುಬಿಡಲು ಯತ್ನಿಸಿದೆ. ರೆಪ್ಪೆಯ ಮೇಲೆ ಭಾರವಾದುದ್ದೇನೋ ಇದೆಯೇನೋ ಎಂಬಂತೆ ಕಣ್ಣುಗಳು ಹೋಳಾಗಲೊಲ್ಲವು! ಮತ್ತೆ ತುಸು ಹೊತ್ತಿಗೆಲ್ಲ ನಿದ್ದೆಗಿಳಿದಿದ್ದೆ. ಹೀಗೆ ಎರಡು ಮೂರು ಬಾರಿ ಆಗುವಷ್ಟರಲ್ಲಿ ನಾನು ಬದುಕಿದ್ದೇನೆ ಎನ್ನುವುದು ಖಾತ್ರಿ ಆಯಿತು.

ಅಪ್ಪಾ ತಮ್ಮ ವೈದ್ಯ ಸ್ನೇಹಿತರೊಬ್ಬರ ಸಹಕಾರದಿಂದ ನನ್ನನ್ನು ಬದುಕಿಸಿದ್ದರು. ಬಲವಂತದಿಂದ ಕಣ್ತೆರೆದೆ. ನಾನು ನೆಲದ ಮೇಲಿಲ್ಲ, ಅಪ್ಪಾ ಮಲಗುವ ಮಂಚದ ಮೇಲಿರುವೆ. ಕಣ್ಣು ತೆರೆಯಲೇ ಆಗದಿದ್ದವಳು ಇಲ್ಲಿಗ್ಯಾವಾಗ ಹೇಗೆ ಬಂದು ಮಲಗಿದೆ ತಿಳಿಯಲಿಲ್ಲ. ಎದ್ದು ಕುಳಿತೆ. ಜೋಲಿ ಹೋಗುತ್ತಿತ್ತು. ಎಷ್ಟು ಗಂಟೆ ಅಥವಾ ಎಷ್ಟು ದಿನ ಹಾಗೇ ಮಲಗಿದ್ದೆ ಅನ್ನುವುದು ನನಗಿವತ್ತಿಗೂ ಗೊತ್ತಿಲ್ಲ. ಉಚ್ಚೆಗೆ ಅವಸರವಾದಂತೆನಿಸಿ ಎದ್ದು ಬಾತ್ರೂಮಿನತ್ತ ನಡೆಯತೊಡಗಿದೆ. ನಾಲಿಗೆಯಂತೆ ಕಾಲುಗಳೂ ತೊದಲುತ್ತಿದ್ದವು. ಗೋಡೆ, ಬಾಗಿಲ ತೋಳುಗಳನ್ನು ಆಸರೆಯಾಗಿಸಿಕೊಳ್ಳುತ್ತಾ ಹೋಗಿಬಂದೆ.

ಮನೆಯಲ್ಲಿ ತಣ್ಣನೆ ಮೌನ. ಯಾರೂ ಮಾತಾಡುತ್ತಿಲ್ಲ, ನನ್ನನ್ನು ಮಾತನಾಡಿಸುತ್ತಲೂ ಇಲ್ಲ. ಅವ್ವ ಸಿಟ್ಟಿಗೆದ್ದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಎಂಥಾ ಹೇಡಿ ಮಗಳನ್ನು ಹೆತ್ತೆನಲ್ಲ ಎಂದು ಪಶ್ಚಾತಾಪವಾಗಿರಲು ಸಾಕು. ಮೌನವಾಗಿ ಅಳತೊಡಗಿದೆ. ಅಪ್ಪಾ, ‘ಆಗಿದ್ದು ಆಗಿಹೋತು, ಅಳಬ್ಯಾಡ ಸುಮ್ನಾಗು’ ಅಂದ್ರು. ಅಳುತ್ತಲೇ ಮಲಗಿದವಳಿಗೆ ಮತ್ತೆ ನಿದ್ದೆ ತನ್ನ ಮಡಿಲಿಗೆಳೆದುಕೊಂಡಿತ್ತು. ಎಚ್ಚರವಾಗಿದ್ದು ಅದರ ಮಾರನೇ ದಿನ ಬೆಳಿಗ್ಗೆ. ಆ ವಾರವಿಡೀ ಶಾಲೆಗೆ ಹೋಗಲಿಲ್ಲ. ತುಂಬಾ ಅಳು ಬರುತ್ತಿತ್ತು. ದಿನವೂ ಅದೇ ಹೊತ್ತಿನಲ್ಲಿ ಅದು ಪುನರಾವರ್ತನೆಯಾಗುತ್ತಿತ್ತು. ಡಿಪ್ರೆಶನ್ನಲ್ಲಿದ್ದೆ ಎನ್ನುವುದು ಈಗ ತಿಳಿಯುತ್ತದೆ ನನಗೆ. ಆಗ ಅಂಥದ್ದೊಂದು ಪದವಿದೆಯೆಂದೂ ತಿಳಿದಿರಲಿಲ್ಲ. ಅಪ್ಪ ಅವ್ವ ಅದೇನು ಮಾತಾಡಿಕೊಂಡರೋ ಗೊತ್ತಿಲ್ಲ. 

ಒಂದಿನ ನನ್ನನ್ನು ಕರೆದು, ‘ಹುಲಿ ಸರ್ ನಿನಗ ತಮ್ಮನಿಗೆ ಬಾ ಅಂದಾರ ಹೋಗಿಬಾ’ ಎಂದರು. 

‘ಯಾಕ?’

‘ಗೊತ್ತಿಲ್ಲ. ನಿನ್ನ ಕಳ್ಸು ಅಂದ್ರು, ಹೋಗಿಬಾ’

ಹುಲಿ ಸರ್ ಎದುರು ನಿಲ್ಲುವ ಧೈರ್ಯ ಅವರ ಶಿಷ್ಯರೆನಿಸಿಕೊಂಡವರ್ಯಾರಿಗೂ ಇರಲಿಲ್ಲ. ಅಂಥದ್ದರಲ್ಲಿ ಅವರಿದ್ದಾಗ ಅವರ ಮನೆಗೆ ಹೋಗುವುದು! ಸಾಧ್ಯವಿಲ್ಲದ ಮಾತು ಅನಿಸಿತು. ಆದರೆ ಅವರೇ ಬಾ ಅಂದ ಮೇಲೆ ಅವರ ಆಣತಿಯನ್ನು ನಿರಾಕರಿಸುವ ಧೈರ್ಯವಾದರೂ ಎಲ್ಲಿದೆ?! 

ಸಂಜೆ ಹುಲಿ ಸರ್ ಮನೆಗೆ ಹೋದೆ. ಅವರ ಮನೆ ಊರ ನಡುವೆ ತುಸು ದಿಬ್ಬದಂತಿರುವ ಎತ್ತರದಲ್ಲಿನ ಜಾಗದಲ್ಲಿತ್ತು. ಅಳಕುತ್ತಾ ಬಾಗಿಲೆದುರು ನಿಂತೆ.

‘ಬಾ ಒಳಗ’ ಎಂದರು. ಹಿಂದೆಯೇ ಸಾವಿತ್ರ್ಯಕ್ಕಾರಿಗೆ (ಅವರ ಶ್ರೀಮತಿ, ನನ್ನವ್ವನ ಸ್ನೇಹಿತೆ), ‘ಡಾಕ್ಟರ್ ಮಗಳು ಪಪ್ಪಿ ಬಂದಾಳ ನೋಡು’

ಸಾವಿತ್ರ್ಯಕ್ಕಾರು ಅಡ್ರಾಶಿ ಹೊರ ಬಂದವರೇ ನನ್ನನ್ನು ತಬ್ಬಿಕೊಂಡೇ ‘ಬರ್ರಿ ಪಪ್ಪಿ’ ಒಳಗೆ ಕರೆದೊಯ್ದರು. ಅವರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಅದನ್ನು ಕಂಡೊಡನೆಯೇ ನನಗೂ ಅಳು ಬಂತು. ನನ್ನ ಕಣ್ಣೊರೆಸುತ್ತಾ, ‘ಅಳಬ್ಯಾಡ್ರಿ, ಏನೋ ಕೆಟ್ಟ ಘಳಿಗಿ ಹಂಗಾಗಿಹೋತು. ಮರ್ತುಬಿಡ್ರಿ ಅದನ್ನ ಇನ್ನ’ ಎಂದರು ಮೃದುವಾಗಿ. ಸಾವಿರ್ತ್ಯಕ್ಕಾರು ಇದ್ದಿದ್ದೇ ಹಾಗೆ. ತುಂಬಾ ಸೌಮ್ಯ ಸ್ವಭಾವದವರು. ಪತಿಯಿಂದಾಗಿ ಅವರಿಗೂ ಅಪಾರ ಸಾಹಿತ್ಯಾಸಕ್ತಿ. ಅವರನ್ನು ನೋಡಿದಾಗಲೆಲ್ಲ ಅದ್ಯಾಕೋ ಗೊತ್ತಿಲ್ಲ, ಅವರು ನನಗೆ ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ದೇವಿ ಅವರಂತೆ ಅನಿಸುತಿದ್ದರು.

ಮಗಳ ವಯಸ್ಸಿನ ನನ್ನನ್ನೂ ಬಹುವಚನದಿಂದ ಸಂಬೋಧಿಸುವಷ್ಟು ಸೌಜನ್ಯ. ಬ್ಯಾಡ್ರಿ ಅಕ್ಕಾರ, ಹೋಗು ಬಾ ಅನ್ನ್ರಿ, ಎಂದಾಗಲೆಲ್ಲ, ಆಯ್ತು ಎನ್ನುತ್ತಿದ್ದರಾದರೂ ಮತ್ತೆ ಮಾತಾಡುವಾಗ ಎಂದಿನ ಬಹುವಚನದಿಂದಲೇ ಶುರುವಾಗುತ್ತಿತ್ತು. ಚಹಾ ಮಾಡುತ್ತಲೇ ಮಾತು ಮರೆಸಲು, ಅವ್ವಾರು ಏನ್ ಮಾಡಾಕತ್ತಿದ್ದ್ರು, ಅಪ್ಪಾರು ದವಾಖಾನಿಯಿಂದ ಬಂದ್ರೇನು ಇತ್ಯಾದಿ ಕೇಳತೊಡಗಿದರು. ಚಹಾ ಆದ ಮೇಲೆ ನನ್ನಿದಿರೊಂದು ಚಹಾದ ಲೋಟವನ್ನಿಟ್ಟು ಹೊರಗೆ ಹೋಗಿ ಸರ್ ಗೆ ಚಹಾ ಕೊಟ್ಟರು. ಸರ್ ಇರುವ ಜಾಗದಲ್ಲಿ ಚಹಾ ಕುಡಿಯುವುದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು ನನಗೆ.

ಚಹಾ ಕುಡಿದಾದ ಮೇಲೆ ಹುಲಿ ಸರ್ ಒಳಗೆ ಬಂದು, ‘ಅದೇನೋ ಇಷ್ಟೊತ್ತಿಗೆ ಅಳಾಕ್ ಶುರು ಹಚ್ಕ್ಯಂತಿಯಲ್ಲಬೇ? ಡಾಕ್ಟರ್ ಸಾಹೆಬ್ರು ಹೇಳಿದ್ರು. ಎಲ್ಲಿ ಅಳು ಮತ್ತ.’ ಎಂದರು. ಅದನ್ನು ಕೇಳಿ ಒಂಥರಾ ಮುಜುಗರವಾಯಿತಾದ್ರೂ ಅಳು ತಡೆಯದಾಯ್ತು. ‘ಅಯ್ಯಾ ಇದೇನಿದು! ಅಲ್ಲಾ, ನಾನೇನೊ ತಮಾಷಿಗೆ ಹಂಗಂದ್ರ ನೀ ಖರೇನ ಅಳಾಕ ಹತ್ತಿದೆಲ್ಲವಾ. ಸುಮ್ನಾಗು ಅಳಬ್ಯಾಳ’ ಎಂದ ಹುಲಿ ಸರ್ ಗೆ ಅವರ ಪತ್ನಿ ಸಾವಿತ್ರಿ, ‘ಏನ್ ನೀವು? ಯಾವಾಗ ಏನು ಮಾತಾಡಬೇಕು ಅನ್ನೂದೂ ತಿಳ್ಯಂಗಿಲ್ಲ, ಇದೆಂಥಾ ತಮಾಷಿ!’ ಎಂದು ಸಣ್ಣಗೆ ಗದರಿಸಿದರು. ಹುಲಿ ಸರ್ ನೇರ ವಿಷಯಕ್ಕೆ ಬಂದ್ರು. 

‘ಅಲ್ಲಬೆ, ನಿಮ್ಮಪ್ಪ ಆಕಳಂಥಾಂವ, ನಿಮ್ಮವ್ವಂತೂ ಬಿಡು ಅಕಿಯಂಥ ಹೆಣ್ಮಗಳನ್ನ ನಾ ನೋಡಿಲ್ಲ ಅಂಥಾ ಸಂಬಾಯಿತ ಹೆಣ್ಮಗಳು. ಅಂಥಾದ್ರಾಗ ಏನಿದು ಹಿಂಗ ಮಾಡ್ಕೊಳ್ಳೂದು ಅಂದ್ರ? ಅಂಥಾದ್ದೇನಾತು?’

ಕೇವಲ ಅಪ್ಪ ಹೊಡದ್ರು, ಅವ್ವ ಬೈದ್ಲು ಅನ್ನೊ ಕಾರಣಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಹುಲಿ ಸರ್ ಅಂದುಕೊಂಡಿದ್ದಾರೆಂದು, ನಾನು ನಿಮಗೆ ಈ ಮುಂಚೆ ಹೇಳಿದೆನೆಲ್ಲ ಅದೆಲ್ಲವನ್ನೂ ಹೇಳಿ ಬಿಕ್ಕಿದೆ. ಹುಲಿ ಸರ್ ತಕ್ಷಣ, ‘ಅದೆಷ್ಟರ ನಿಶ್ಕಳಂಕ ಮನಸಬೆ ನಿಂದು!’ ಎಂದವರು ಸ್ವಲ್ಪ ಹೊತ್ತು ಸುಮ್ಮನಿದ್ದು, ‘ಆದ್ರ ಜಗತ್ತು ನಾವು ಅನಕೊಂಡಗ ಇರಂಗಿಲ್ಲಬೆ. ನಿಂದೇನೂ ಅಂದ್ರ ಏನೂ ತಪ್ಪಿಲ್ಲ. ಆದ್ರ ಜಗತ್ತಿನ ನೋಟಾನ ಬ್ಯಾರೆ. ಎಲ್ಲಾರೂ ತಮ್ಮ ಸ್ವಭಾವಕ್ಕ, ಅನುಭವಕ್ಕ ತಕ್ಕಂಗ ಎದ್ರಿನ ಮನಷ್ಯಾನ ಅಳೀತಾರ. ಕೆಲವು ನಾಲ್ಗಿ ಸಡ್ಲ (ಸಡಿಲು) ಇದ್ದೂವು ಹೆಂಗ ಬೇಕೋ ಹಂಗ ತಮ್ಮ ನಾಲ್ಗಿ ಹರಿಬಿಡ್ತಾವ. ನಿಮ್ಮ ಅವ್ವಾ ಅಪ್ಪಗ ಈ ಜಗತ್ತು ಹೆಂಗೈತಿ ಅನ್ನೂದು ಗೊತ್ತೈತಿ. ನಿಂದೇನೂ ತಪ್ಪಿಲ್ಲ ಅನ್ನೂದು ಅವ್ರಿಗೂ ಗೊತ್ತಿರ್ತತಿ. ಆದ್ರ ಈ ಸಡ್ಲ ನಾಲ್ಗಿ ಮಂದಿ ಬಾಯಿಗೆ ಹೆದರ್ತಾರ ಅವ್ರು. ಅವ್ರಿಗೇನೂ ಅನ್ನಾಕ ಆಗಂಗಿಲ್ಲ ಅಂತ ಮಗಳು ಅನ್ನೊ ಸಲಗಿ ಮ್ಯಾಲೆ ನಿನಗ ಅಂತಾರ. ಅದನ್ನ ಮನಸಿಗೆ ಹಚಗೊಂಡು ಕುಂತ್ರ ಹೆಂಗ? ನಿನ್ನ ಮ್ಯಾಲೆ ನನಗ ಭರವಸೆ ಐತಿ. ಶ್ಯಾಣಿ ಹುಡಗಿ ನೀನು ಸಾಲ್ಯಾಗ. ಜತಿಗೆ ಇಷ್ಟು ಚೊಲೊ ಮನಸಿರಾಕಿ. ಹಿಂಗ ಮತ್ತ ಹುಚ್ಚರಗತೆ ಮಾಡಂಗಿಲ್ಲಂತ ಮಾತು ಕೊಡು. ನಾಳಿಯಿಂದಾ ಸಾಲಿಗೆ ಬಾ, ಸಾಕಿನ್ನ ಸೂಟಿ ಮಾಡಿದ್ದು” ಎಂದು ಒಂದಿಷ್ಟು ತಿಳುವಳಿಕೆ ಮಾತು, ಒಂದಿಷ್ಟು ಪುಸಲಾಯಿಸುವಿಕೆಯೊಂದಿಗೆ ನನ್ನಲ್ಲೊಂದು ಭರವಸೆ, ಚೈತನ್ಯ ಮೂಡಿಸಿದರು. ಮುಂದೆ ಮೂರ್ನಾಲ್ಕು ದಿನಗಳಲ್ಲಿ ಚೇತರಿಸಿಕೊಂಡು ಎಂದಿನಂತೆ ಶಾಲೆಗೆ ಹೋಗತೊಡಗಿದೆ. 

ಅಂದಿನಿಂದ ಇಂದಿನವರೆಗೆ ಒಮ್ಮೆಯೂ ನಾನು ಸರ್ ಬಳಿ ಇದಕ್ಕಾಗಿ ಧನ್ಯವಾದಗಳನ್ನು ಹೇಳಿಲ್ಲ. ಇಂದು ಈ ಲೇಖನದ ಮೂಲಕ ನನ್ನಲ್ಲಿ ಕನ್ನಡ ಪ್ರೀತಿಯನ್ನು ಮತ್ತು ನನ್ನದು ನಿಶ್ಕಳಂಕ ಮನಸ್ಸು ಎನ್ನುವುದರ ಮೂಲಕ ನನ್ನಲ್ಲೊಂದು ಜಾಗೃತಿ ಮತ್ತು ಭರವಸೆ ಮೂಡಿಸಿದ ನನ್ನ ಗುರುವಿಗೆ ಹೃತ್ಪೂರ್ವಕ ಪ್ರಣಾಮಗಳೊಂದಿಗೆ ಧನ್ಯವಾದಗಳನ್ನರ್ಪಿಸಬಯಸುತ್ತೇನೆ.

ಅಂದು ಅಪ್ಪ ಅವ್ವ ನನ್ನೊಂದಿಗೆ ಅದ್ಯಾಕೆ ಅಷ್ಟೊಂದು ಕಠಿಣವಾಗಿದ್ದರು ಎನ್ನುವುದು ಅರ್ಥವಾಗಿರಲಿಲ್ಲ. ಆದರೆ ನನ್ನ ಮದುವೆಯಾಗಿ ನಿಧಾನವಾಗಿ ಬದುಕು ಮಾಗುತ್ತಿರುವ ಹೊತ್ತಲ್ಲಿ ಅದು ಅರ್ಥವಾಯಿತು. ನಾನು ಮೊದಲಿಗೆ ಮನೆಯಲ್ಲಿ ಎಂಟು ಜನ ಮಕ್ಕಳು ಎಂದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ನಾವು ಐವರು (ಅನುಕ್ರಮವಾಗಿ: ನಾನು, ಜಗದೀಶ, ರಾಣಿ (ಶಕುಂತಲಾ), ಬಾಪು (ರುದ್ರಗೌಡ) ಮತ್ತು ಪುಷ್ಪಾ) ಒಡಹುಟ್ಟಿದವರಾದರೆ, ಶಶಿಕಲಾ ನನ್ನ ಸೋದರತ್ತೆಯ ಮಗಳು, ಶೈಲಾ ಮತ್ತು ಸುಧೀರ ಇಬ್ಬರೂ ನನ್ನ ದೊಡ್ಡ ಕಾಕಾ ಪಂಡಿತ ಅವರ ಮಕ್ಕಳು. ಇವರೆಲ್ಲ ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದರು.

ವಿದ್ಯಾಭ್ಯಾಸಕ್ಕೆಂದು ನಮ್ಮೊಡನೆಯೇ ಇದ್ದವರು. ಈ ಮೂವರೂ ನನಗಿಂತ ಚಿಕ್ಕವರೇ. ಈ ಮೊದಲೇ ಹೇಳಿದಂತೆ ನನ್ನ ತಂದೆ ಹಾಗು ತಾಯಿಯ ಮನೆಯಲ್ಲಿ ನಾನೇ ಮೊದಲ ಕೂಸು. ಹೀಗಾಗಿ ಎಷ್ಟೇ ಚಿಕ್ಕವಳಾಗಿದ್ದರೂ ಎಲ್ಲರಿಗಿಂತ ದೊಡ್ಡವಳೇ! ಅಷ್ಟೂ ಮಕ್ಕಳ ಸ್ನಾನ, ತಲೆ ಬಾಚುವುದರಿಂದ ಮೊದಲುಗೊಂಡು ಈಗಿನಂತೆ ಆಗ ಹಳ್ಳಿಗಳಿಗೆ ಗ್ಯಾಸ್ ಸಪ್ಲೈ ಇರಲಿಲ್ಲವಾಗಿ ಅವ್ವ ನಮ್ಮಿಷ್ಟೂ ಜನಕ್ಕೆ ಅಡುಗೆ ಮಾಡುತ್ತಿದ್ದುದು ಒಲೆ ಮತ್ತು ಘಾಸ್ಲೆಟ್ ಸ್ಟೋವ್ ಮೇಲೆಯೇ. ಸಿಟಿಯಲ್ಲಿ ಮನೆಗೆಲಸದವರು ಸಿಕ್ಕಷ್ಟು ಸುಲಭದಲ್ಲಿ ಹಳ್ಳಿಗಳಲ್ಲಿ ಸಿಗುವುದಿಲ್ಲ.

ಕಂಡವರ ಮನೆ ಮುಸುರೆ ತೊಳೆಯುವುದು ಮೈಲಿಗೆ ಬಟ್ಟೆಗಳನ್ನು ಒಗೆದು ಮಡಿ ಮಾಡುವುದು ಎಂದರೆ ಅದು ಅವಮಾನವೆಂದೇ ಭಾವಿಸುವುದರಿಂದ ಅದನ್ನೂ ಮನೆಗೆಲಸಕ್ಕೆ ಜನ ಸಿಗುವವರೆಗೆ ಅವ್ವಾನೇ ಮಾಡಬೇಕು. ಇಷ್ಟು ಸಾಲದು ಅಂತ ಮನೆಯಲ್ಲಿ ಮಾಲಿಶ್ ಮಾಡುವ ಎಣ್ಣೆಯನ್ನು ತಯಾರಿಸಿಕೊಂಡು ಮೂರೂ ಹೊತ್ತು ನನ್ನ ತಂದೆಯ ಸೊಂಟದ ಮಾಲಿಶ್ ಮಾಡಬೇಕಿತ್ತು. ಇದೆಲ್ಲದರಿಂದ ಅವ್ವ ಹೈರಾಣಾಗಿಬಿಡುತ್ತಿದ್ದಳು. ಪಾಪ ತಾಯಿ ಇಲ್ಲದ ಪರದೇಸಿ ಮಕ್ಕಳವು ಸರಿದು ಕೂಡು ಎಂದರೂ ನೋವಾದೀತು ಎಂಬಂತೆ ನಡೆದುಕೊಳ್ಳುತ್ತಿದ್ದಳು ಅವರೊಂದಿಗೆ. ಅವರುಗಳೂ ಅಷ್ಟೇ, ಎಂದೂ ಯಾವುದಕ್ಕೂ ಹಠ ಮಾಡಿದವರಲ್ಲ.

ಬಹುಶಃ ಅವರಲ್ಲಿ ತಾವು ಹಂಗಿನಲ್ಲಿದ್ದೆವೆನ್ನುವ ಭಾವ ಬಲವಾಗಿತ್ತೋ ಏನೋ, ಅಪ್ಪ ಅವ್ವ ಇಬ್ಬರಿಗೂ ಎಂದೂ ಎದುರಾಡಿದವರಲ್ಲ. ನನಗಿಂಥದ್ದು ಬೇಕು ಎಂದು ಕೇಳಿದವರಲ್ಲ. ಆದರೆ ನಾನು ಹಾಗಿರಲಿಲ್ಲವಲ್ಲ! ನನ್ನದೇನೂ ತಪ್ಪಿಲ್ಲದಾಗ ಪ್ರಶ್ನಿಸುತ್ತಿದ್ದೆ. ಕಾರಣ ನನ್ನ ತಂದೆ ತಾಯಿ ಅನ್ನುವ ಸಲುಗೆ. ಉಳಿದ ಮಕ್ಕಳೆಲ್ಲ ದೇವರಂತೆ ಹೇಳಿದ್ದನ್ನು ಕೇಳುವಾಗ ನನ್ನ ಪ್ರಶ್ನೆಗಳು ಅಥವಾ ಮಾಡಬೇಕೆನಿಸಿದ್ದನ್ನು ಮಾಡಿಬಿಡುವ ಸ್ವಭಾವ ಅವ್ವನೊಳಗಿನ ಸಹನೆಯನ್ನು ಪರೀಕ್ಷಿಸುತ್ತಿದ್ದವು. ಅದಕ್ಕಾಗಿ ಅವ್ವ ರೇಗುತ್ತಿದ್ದಳು.

ಇನ್ನು ಅಪ್ಪಾ. ಅವ್ವ ಮೂರೂ ಹೊತ್ತು ಅಪ್ಪಾರ ಸೊಂಟದ ಮಾಲಿಶ್ ಮಾಡುತ್ತಿದ್ದಳು ಎಂದೆನಲ್ಲವೇ? ೧೯೭೫-೭೬ರಲ್ಲಿ ಸ್ಲಿಪ್ ಡಿಸ್ಕ್ ಆಗಿ ಅಪ್ಪಾ ತುಂಬಾ ತೊಂದರೆಗೊಳಗಾದರು. ಸರಿಪಡಿಸಿಕೊಳ್ಳಲು ಸೊಲ್ಲಾಪುರ, ಮುಂಬೈ, ಸೂರತ್ಕಲ್ ಎಂದು ಹಲವಾರು ಕಡೆ ತೋರಿಸಿಕೊಂಡರೂ ಸರಿಹೋಗದೆ ಕೊನೆಗೆ ಸೂರತ್ಕಲ್ಲಿನಲ್ಲಿಯ ವೈದ್ಯಕೀಯದಿಂದಾಗಿ ಗಂಟೆ ಎರಡು ಗಂಟೆಗಳ ಕಾಲ ಕೂರಲು ಸಾಧ್ಯವಾಗುತ್ತಿದ್ದುದನ್ನು ಕಂಡು, ಅಲ್ಲಿನ ಆರೈಕೆಯಾದ ಎಣ್ಣೆಯೊಂದನ್ನು ಹಚ್ಚಿ ಸೊಂಟಕ್ಕೆ ಮಾಲೀಶ್ ಮಾಡುವುದನ್ನು ಮನೆಯಲ್ಲೂ ಮುಂದುವರೆಸಲಾಯಿತು.

ಆ ಎಣ್ಣೆಯನ್ನು ತರಲು ಪ್ರತೀ ಸಲ ಅಲ್ಲಿಗೆ ಹೋಗುವುದು ಇಲ್ಲವೇ ತರಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲವಾದ್ದರಿಂದ ಅವ್ವನೇ ಆ ಎಣ್ಣೆಯನ್ನು ತಯಾರಿಸುವುದು ಮತ್ತು ಮಾಲೀಶ್ ಮಾಡುವುದು ಮಾಡಬೇಕಿತ್ತು. ಅಂಥಾ ಸೊಂಟದ ನೋವಿಟ್ಟುಕೊಂಡೂ ಅಪ್ಪಾ ಕೆಲಸ ಮಾಡಿ ನಮ್ಮನ್ನೆಲ್ಲ ಅಂದರೆ ತನ್ನ ಹೆಂಡತಿ ಮಕ್ಕಳಲ್ಲದೇ ತಮ್ಮ ತಂಗಿಯ ಮಕ್ಕಳನ್ನೂ ಸಾಕಬೇಕಿತ್ತು. ಜೊತೆಗೆ ಹೊಲದ ಲಾಗೋಡಿ, ಅದೂ ಇದೂ ಎಂದು ತಮ್ಮ ತಂದೆ ತಾಯಿಗೂ ಆಗಾಗ ಹಣ ಕಳಿಸಬೇಕಿತ್ತು.

ಅಪ್ಪಾರಿಗೆ ಆ ರೀತಿಯ ಒತ್ತಡ. ತಮ್ಮ ಹಕ್ಕಿನ ಕೂಸು ಅನ್ನುವ ಕಾರಣಕ್ಕೆ ಮತ್ತು ಮಕ್ಕಳಲ್ಲಿ ನಾನು ದೊಡ್ಡವಳು ಆದ ಕಾರಣಕ್ಕೆ ಅವರು ತಮ್ಮ ಸಿಟ್ಟನ್ನು ತೋರಿಸುತ್ತಿದ್ದರೇನೊ. ನನ್ನನ್ನು ಬಿಟ್ಟರೆ ನನ್ನಷ್ಟೇ ಅಥವಾ ನನಗಿಂತ ಹೆಚ್ಚಿನ ಒದೆ ಬೀಳುತಿದ್ದುದು ನನ್ನ ದೊಡ್ಡ ತಮ್ಮ ಜಗದೀಶನಿಗೆ. ನನ್ನ ಅವ್ವ ಅಪ್ಪ ಇಬ್ಬರೂ ತಮ್ಮದೇ ಒತ್ತಡಗಳಲ್ಲಿರುವುದು ಆಗ ನನ್ನ ಅರಿವಿಗೇ ಬಂದಿರಲಿಲ್ಲ. ಆ ವಯಸ್ಸೇ ಅಂಥದ್ದೋ ಅಥವಾ ನಾನೇ ಹಾಗಿದ್ದೆನೋ. ಒಟ್ಟಿನಲ್ಲಿ ಈ ಜನರೇಶನ್ ಗ್ಯಾಪ್ ಎರಡೂ ಕಡೆಯಲ್ಲಿ ನೋವನ್ನೇ ನೀಡಿತ್ತು. ಆ ಘಟನೆಯ ನಂತರ ಅಪ್ಪ ನನಗೆಂದೂ ಹೊಡೆಯಲಿಲ್ಲ, ಅವ್ವ ಬೈಯಲಿಲ್ಲ. 

ಆಗಿನಂತೆ ಕೂಡುಕುಟುಂಬಗಳ ಒತ್ತಡ ಈಗಿಲ್ಲವಾದರೂ ಅಲ್ಲಲ್ಲಿ ಆತ್ಮಹತ್ಯೆಗಳು ನಿಂತಿಲ್ಲವೆನ್ನುವುದೂ ಅಷ್ಟೇ ಸತ್ಯ. ಕಾರಣ ಮಕ್ಕಳಿಗೆ ಹಿರಿಯರ ಒತ್ತಡಗಳು ಅರ್ಥವಾಗುವುದಿಲ್ಲ. ಹಿರಿಯರಿಗೆ ತಮ್ಮ ಒತ್ತಡಗಳು, ಜಗದ ರೀತಿನೀತಿಗಳ ಎದುರು ಎಳೆಯರ ಮನಸ್ಥಿತಿ ಅರ್ಥವಾಗುವುದಿಲ್ಲ., ಒಂಚೂರು ಪ್ರೀತಿ,ಒಂದು ಭರವಸೆ ಮತ್ತು ತಪ್ಪಿದಾಗ ಅದನ್ನು ತೋರಿಯೂ ಸರಿಪಡಿಸಿಕೊಳ್ಳುವ ಒಂದು ಹಿತವಚನ ಇವು ಮಕ್ಕಳು ಆತ್ಮಹತ್ಯೆಗೆ ಮುಂದಾಗುವುದನ್ನು ತಪ್ಪಿಸುವ ‘ಒಂದು’ ಬಗೆ ಎನಿಸುತ್ತದೆ ನನಗೆ. ಆತ್ಮಹತ್ಯೆಗಳಿಗೆಲ್ಲ ಇದೇ, ಇದಿಷ್ಟೇ ಕಾರಣ ಎನ್ನುತ್ತಿಲ್ಲ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: