ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನವರ ಪಾಲಿಗೆ ಪುಟ್ಟ ಹುಡುಗಿಯಾಗಿದ್ದೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

39

ಮದುವೆ ವಾರ್ಷಿಕೋತ್ಸವದ ಬಗ್ಗೆ ಹೇಳುತ್ತಿರುವಾಗ ಹೇಳಲೇಬೇಕೆನ್ನುವುದೊಂದನ್ನು ನಾನು ಮರೆತಿದ್ದು ನೆನಪಾಗುತ್ತಿದೆ ಈಗ. ನನ್ನ ಮುಂದಿನ ಭವಿಷ್ಯಕ್ಕೆ ಕನ್ನಡಿ ಹಿಡಿಯುವಂತೆ ನಮ್ಮ ಮದುವೆಯ ದೈವದ ಅಕ್ಕಿಕಾಳು  (ಆರತಕ್ಷತೆ) ನಮ್ಮಿಬ್ಬರ ನೆತ್ತಿಯ ಮೇಲೆ ಬಿದ್ದಿದ್ದು ನಾಟಕದ ಸ್ಟೇಜಿನ ಮೇಲೆ! ನಮ್ಮ ಮದುವೆ ಆಗಿದ್ದು ಕಲಕೇರಿಯಲ್ಲಿ. ಆ ಸಮಯದಲ್ಲಿ ಆಗಷ್ಟೆ ಅಲ್ಲಿನ ಮಡಿವಾಳೇಶ್ವರನ ಜಾತ್ರೆ ಮುಗಿದಿತ್ತು. ಜಾತ್ರೆಯ ಕಾರಣದಿಂದ ಅಲ್ಲಿ ನಾಟಕ ಕಂಪನಿಯೊಂದು ಟೆಂಟ್ ಹಾಕಿತ್ತು.

ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಜಾತ್ರೆಗಳಾದಾಗ ಹೀಗೇ ನಾಟಕ ಕಂಪನಿಗಳು ತಿಂಗಳುಗಟ್ಟಲೇ ನೆಲೆಯೂರಿ ಎರಡು ಮೂರು ದಿನಗಳ ಕಾಲ ಒಂದು ನಾಟಕದಂತೆ ಹತ್ತಾರು ನಾಟಕಗಳನ್ನಾಡಿ, ಕ್ಯಾಂಪ್ ಕಿತ್ತಿ ಬೇರೆ ಊರಿಗೆ ವಲಸೆ ಹೋಗುವುದು ಆಗ ಸಾಮಾನ್ಯವಾಗಿತ್ತು. ಈಗಲೂ ಹಾಗೇಯಿದೆಯಾ ಗೊತ್ತಿಲ್ಲ… ಆಗಿನ್ನೂ ಕಲಕೇರಿಯಲ್ಲಿ ಯಾವುದೇ ಕಲ್ಯಾಣಮಂಟಪ ಇರಲಿಲ್ಲ. ಹಳ್ಳಿ ಅದು. ಬೀಗರು ನಗರದವರು, ಮೇಲಾಗಿ ಡಾಕ್ಟರ್.

ಶಾಲೆಯ ಅಂಗಳದಲ್ಲಿ ಪೆಂಡಾಲ್ ಹಾಕಿ ಮದುವೆ ಮಾಡಿದರೆ ಸರಿಯಾಗಿ ವ್ಯವಸ್ಥೆಯಾಗದೆ ಬೀಗರ ಅಂತಸ್ಥಿಗೆ ಸರಿಹೋಗದು ಎಂದು ನಮ್ಮಾವನವರು ಪೇಚಾಡುತ್ತಿದ್ದಾಗ, ಅವರ ಜೊತೆ ಕೆಲಸ ಮಾಡುತ್ತಿದ್ದ, ನಮ್ಮಾವನವರಿಗೆ ತುಂಬಾ ಆತ್ಮೀಯರಾಗಿದ್ದ ಪಿಂಜಾರ್ ಮಾಸ್ತರ್ ಕೊಟ್ಟ ಐಡಿಯಾ ಇದು. ಮದುವೆಗೆ ಮಂಟಪ ಮಾತ್ರವಲ್ಲ, ಬಂದವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಗೂ ಪರದಾಡಬೇಕಿಲ್ಲ, ತುಂಬಾ ಅಚ್ಚುಕಟ್ಟಾಗಿ ಅಲ್ಲಿ ಮದುವೆ ನೆರವೇರಿಸಬಹುದು, ಸೌಂಡ್ ಸಿಸ್ಟಮ್ಮೂ ಇರುತ್ತದೆ, ಕಂಪನಿ ಮಾಲಿಕರ ಬಳಿ ಕೇಳಿ ಒಪ್ಪಿಸುವೆ ಎಂದವರು, ಮಾಲಿಕರನ್ನು ಒಪ್ಪಿಸಿ ನಮ್ಮ ಮದುವೆ ಅಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಿದ್ದರು. ಅವರಿಂದಾಗಿ ಮನೆಯ ದೇವರ ಕೋಣೆಯಲ್ಲಿ ಮಾಂಗಲ್ಯ ಧಾರಣೆಯಾದರೆ ಆರತಕ್ಷತೆ ರಂಗಮಂಟಪದಲ್ಲಿ ನೆರವೇರಿತ್ತು. ನನ್ನ ಪತಿ ಹುಬ್ಬಳ್ಳಿಯ ಹುಡುಗಿಯನ್ನು ಒಪ್ಪದೆ ನನ್ನನ್ನೇ ಮದುವೆಯಾಗುವುದಾಗಿ ಹಠ ಹಿಡಿದಾಗ, ಸೂಕ್ತ ಕಾರಣಗಳನ್ನು ವಿವರಿಸಿ ನಮ್ಮತ್ತೆಯವರನ್ನು ಒಪ್ಪಿಸಿದ್ದು ಇದೇ ಪಿಂಜಾರ್ ಮೇಷ್ಟ್ರು. 

ಬದುಕು unpredictable ಅನ್ನುವುದು ನಿಜವಾದರೂ ಮುಂದೆ ನಾನು ರಂಗಭೂಮಿಗೆ ಬರುತ್ತೇನೆ ಅನ್ನುವುದಕ್ಕೆ ಅದೊಂದು ಮುನ್ಸೂಚನೆಯಾಗಿತ್ತೇನೋ ಎಂದು ಒಮ್ಮೊಮ್ಮೆ ಅನಿಸುತ್ತಿರುತ್ತದೆ ನನಗೆ. ನಾನು ನಟಿಸಬೇಕು ಎನ್ನುವುದು ಆಸೆಯಾಗಿತ್ತಾದರೂ ಅದು ನನ್ನೊಳಗೆ ಕನಸಾಗಿ ಅವಿತು ಕುಳಿತಿತ್ತು ಅನ್ನುವುದು ನನಗೆ ಗೋಚರಿಸಿದ್ದು ಅದು ನನಸಾದಾಗಲೇ! ಬದುಕು ಸಹ ಕೌತುಕಮಯ ನಾಟಕದಲ್ಲಿನ ದೃಶ್ಯಗಳಂತೆ ಅನೇಕ ತಿರುವುಗಳನ್ನು ತೆಗೆದುಕೊಂಡಿದ್ದೂ ನಾನು ನನ್ನ ಮದುವೆಯಾದ ಜಾಗವನ್ನು ಮುನ್ಸೂಚನೆಗೆ ಹೋಲಿಸಿಕೊಳ್ಳಲು ಕಾರಣ.

ಪುಣೆಯಲ್ಲಿ ನಾವು ದೇಶಮುಖ್ ಅವರ ಮನೆಯಿಂದ ಸಾವಂತ್ ಅನ್ನುವವರ ಮನೆಗೆ ನಮ್ಮ ವಾಸ್ಥವ್ಯವನ್ನು ಬದಲಿಸಿದ್ದೆವು. ಸಾವಂತ್ ಅವರು ಇಂಜಿನಿಯರ್ ಆಗಿದ್ದು ಮುಂಬಯಿಯಲ್ಲಿ ವಾಸವಿದ್ದರು. ನೋಡಿದರೆನೇ ಗೌರವಿಸಬೇಕು ಎನಿಸುವಂಥ ವ್ಯಕ್ತಿಯಾಗಿದ್ದರು. ನಾಲ್ಕನೇ ಅಂತಸ್ಥಿನಲ್ಲಿ ಎರಡು ಬೆಡ್ ರೂಮು, ಹಾಲ್, ಕಿಚನ್ ಇದ್ದ ಮನೆ ಅದು. ಮನೆಯ ಒಂದು ಬೆಡ್ ರೂಮ್ ಮತ್ತು ಕಿಚನ್ ಗಿದ್ದ ಬಾಲ್ಕನಿ ಭಾಗವನ್ನ ಬಾಲ್ಕನಿಯಾಗಿಸದೆಯೇ ಇದ್ದುದ್ದರಿಂದ ಅವೆರಡೂ ತುಂಬಾ ವಿಶಾಲವಾಗಿದ್ದವು.

ಇನ್ನೊಂದು ಬೆಡ್ ರೂಮ್ ಚಿಕ್ಕದೂ ಅಲ್ಲದ ತೀರಾ ದೊಡ್ಡದೂ ಅಲ್ಲದ ಮಾಮೂಲಿ ಕೋಣೆಯಾಗಿತ್ತು. ಅದಕ್ಕೆ ಪ್ರತ್ಯೇಕ ಒಂದು ಬಾಗಿಲೂ ಇತ್ತಾದ್ದರಿಂದ ಅದನ್ನು ತಾವು ಬಂದಾಗ ಉಳಿದುಕೊಳ್ಳಲು ಅನುಕೂಲವಾಗುವಂತೆ ಉಳಿಸಿಕೊಂಡು ನಮಗೆ ಬಾಕಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಇರೋ ನಮ್ಮಿಬ್ಬರಿಗೆ ಅದೂ ಸಹ ತುಂಬಾನೇ ದೊಡ್ಡದಾಯಿತು ಅನಿಸುವಂತಿತ್ತು. ಎದುರಿನ ಮನೆಯಲ್ಲಿ ಸಿಂಧಿಯವರಾದ ಲೀಲಾ ಆಂಟಿ ಮತ್ತು ಅವರ ಮಗ ವಾಸಿಸುತ್ತಿದ್ದರೆ, ಅವರ ಪಕ್ಕದ ಮನೆಯಲ್ಲಿ ಮರಾಠಿಯ ಉಜ್ವಲಾ ಆಂಟಿ ಮಗಳು ಅಪರ್ಣಾ ಜೊತೆ ವಾಸಿಸುತ್ತಿದ್ದರು. ಅವರ ಪತಿ ಕಾಲವಾಗಿ ಅವರಿದ್ದ ಮೂವರು ಹೆಣ್ಣುಮಕ್ಕಳಲ್ಲಿ ಅದಾಗಲೇ ಇಬ್ಬರಿಗೆ ಮದುವೆಯಾಗಿತ್ತು.

ನಾವು ಅಲ್ಲಿ ವಾಸಕ್ಕೆ ಹೋದ ಸ್ವಲ್ಪ ದಿನಗಳಲ್ಲೇ ಅಪರ್ಣಾಗೂ ಮದುವೆಯಾಗಿ ಪುಣೆಯಲ್ಲೇ ಇದ್ದ ಗಂಡನಮನೆಗೆ ಹೊರಟುಹೋದಳು. ಈ ಇಬ್ಬರೂ ಹಿರಿಯ ಮಹಿಳೆಯರು ನಮ್ಮಿಬ್ಬರ ಮೇಲೆ ಹರಿಸಿದ ವಾತ್ಸಲ್ಯದ ಮಳೆ ಇದೆಯಲ್ಲ, ಅದರಿಂದಾಗಿಯೇ ನಮಗೆ ಪುಣೆ ಅಂಥಾ ಅಪರಿಚಿತ ಜಾಗವೆನ್ನಿಸಲೇಯಿಲ್ಲ ವಿಶೇಷವಾಗಿ ನನಗೆ! ಲೀಲಾ ಆಂಟಿ ತುಂಬಾ ಸೌಮ್ಯ ಸ್ವಭಾವದವರಾದರೆ ಉಜ್ವಲಾ ಆಂಟಿ ಗಟ್ಟಿಗಿತ್ತಿ. ತುಂಬಿದ ಕುಟುಂಬದಲ್ಲಿ ಬೆಳೆದವಳು ನಾನು. ಹೀಗಾಗಿ ಉಜ್ವಲಾ ಆಂಟಿ ಒಬ್ಬರೇ ಇರುತ್ತಿದ್ದುದು ಮತ್ತು ಯಾವುದಕ್ಕೂ ಹೆದರದೇ ಇದ್ದಿದ್ದು ಆಗ ನನಗೆ ಭಾರಿ ಆಶ್ಚರ್ಯ ಉಂಟು ಮಾಡಿತ್ತು. ಅದರಿಂದಾಗಿಯೇ ಅವರ ಬಗ್ಗೆ ಅಭಿಮಾನವೂ ಮೂಡಿತ್ತು.

 ನಾನವರ ಪಾಲಿಗೆ ಪುಟ್ಟ ಹುಡುಗಿಯಾಗಿದ್ದೆ. ಚಿಮಣಿ ಎಣ್ಣೆಯ ಸ್ಟೋವ್ ಮೇಲೆ ನಾನು ಅಡುಗೆ ಮಾಡುತ್ತಿದ್ದುದ್ದನ್ನು ಕಂಡು, ‘ಏಕ್ ಹೀ ಸ್ಟೋವ್ ಸೆ ಬೇಚಾರಿ ಕೊ ಕಿತನಾ ಮೆಹನತ್ ಕರ್ನಾ ಪಡ್ ರಹಾ ಹೈ’ ಎನ್ನುತ್ತಾ ತಾವು ಮಾಡಿದ ಅಡುಗೆಯನ್ನು ನನಗೆ ಕಳಿಹಿಸಿ ನನ್ನ ಕೆಲಸ ಕಮ್ಮಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ನಿತ್ಯ ನಮ್ಮೂವರ ಮನೆಯ ಅಡುಗೆಗಳು ಎಕ್ಸ್ಚೇಂಜ್ ಆಗುತ್ತಿದ್ದವು. ಯಾರಿಗಾದರು ಎಂದಾದರೂ ಅಡುಗೆ ಮಾಡುವುದು ಬೇಸರವೆನಿಸಿದರೆ ಅಂದು ಉಳಿದಿಬ್ಬರ ಮನೆಯಿಂದ ಮೂರೂ ಹೊತ್ತೂ ಅವರಿಗೆ ಊಟ ಹೋಗುತ್ತಿತ್ತು. ತಾಯಿಯ ಮನೆಯಲ್ಲಿ ಗ್ಯಾಸ್ ಸ್ಟೋವ್ ಇತ್ತು, ಇಲ್ಲಿ ಭುರ್ರ್ ಅನ್ನುವ ಚಿಮಣಿಎಣ್ಣೆ ಸ್ಟೋವ್! ನಿಜಕ್ಕೂ ನನಗೂ ಸಾಕೆನಿಸುತ್ತಿತ್ತಾದರೂ ಇವರ ಸಂಬಳದಲ್ಲಿ ತಕ್ಷಣ ಗ್ಯಾಸ್ ಸಿಲೆಂಡರ್ ಕೊಳ್ಳುವುದು ಅಸಾಧ್ಯವಾಗಿತ್ತು. ಬರುತ್ತಿದ್ದ ೨೮೦೦ ಸಂಬಳದಲ್ಲಿ ೭೦೦ ಮನೆ ಬಾಡಿಗೆಗೇ ಹೋಗುತ್ತಿತ್ತು.

೬೦೦ ತಿಂಗಳ ಕಿರಾಣಿ ಸಾಮಾನಿಗೆ. ಕರೆಂಟು ನೀರು ಇವರ ನಿತ್ಯದ ಓಡಾಟ ಇತ್ಯಾದಿಗಳಿಗೆ ೫೦೦-೬೦೦, ಭಾಂಡೆ ವಗ್ಯಾಣ ಮಾಡುವ ಕೆಲಸದವಳಿಗೆ ೧೦೦ ರೂಪಾಯಿಗಳು ಖರ್ಚಾಗಿ ಉಳಿದಿದ್ದು ಊರಿಗೆ ಹೋಗಿ ಬರಲು, ಅದಕ್ಕೆ ಇದಕ್ಕೆ ಎಂದಾಗಿ ಕೈಯಲ್ಲಿ ಹೆಚ್ಚಿಗೆ ಹಣ ಉಳಿಯುತ್ತಲೇ ಇರಲಿಲ್ಲ. ನನಗೋ ಗ್ಯಾಸ್ ಸ್ಟೋವ್ ಬೇಕು ಅನಿಸುತ್ತಿತ್ತು. ಆಗ ನನ್ನ ಕಿವಿಯಲ್ಲಿದ್ದ ಅರ್ಧ ತೊಲೆಯ ರಿಂಗ್ ಮಾರಿ ಗ್ಯಾಸ್ ಸ್ಟೋವ್ ಕೊಂಡುಕೊಳ್ಳಲು ಇವರನ್ನು ಒಪ್ಪಿಸಿದೆ. ಮೊದಲು ಇವರು ನನ್ನ ಆಭರಣವನ್ನು ಮಾರಲು ತುಂಬಾ ಹಿಂಜರಿದರು. ನನಗೆ ನಂತರ ಮಾಡಿಸಿಕೊಡಿ, ಈಗ ದಯವಿಟ್ಟು ನನಗೆ ಗ್ಯಾಸ್ ಒಲೆ ಕೊಡಿಸಿ ಎಂದು ಹೇಳಿದ ಮೇಲೆ ಒಪ್ಪಿದರು. ಈಗಿನ ಹಾಗೆ ಬೇಕೆಂದಾಕ್ಷಣ ಗ್ಯಾಸ್ ಸಿಲೆಂಡರುಗಳು ಆಗ ಸಿಗುತ್ತಿರಲಿಲ್ಲ. ಹೆಸರು ಹಚ್ಚಿ ಆರು ತಿಂಗಳು, ವರ್ಷಗಟ್ಟಲೆ ಕಾಯಬೇಕಿತ್ತು. ಬಿಜಾಪುರದ ಗ್ಯಾಸ್ ಏಜನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಗೆಳೆಯ ಹಿರೇಮಠ ಅವರಲ್ಲಿ ಇವರು ವಿನಂತಿಸಿಕೊಂಡಿದ್ದಕ್ಕೆ ಮೂರೇ ತಿಂಗಳಲ್ಲಿ ಗ್ಯಾಸ್ ಕನೆಕ್ಷನ್ ದೊರಕಿತ್ತು ನಮಗೆ. ಮದುವೆಯಾಗಿ ಒಂದೂವರೆ ವರ್ಷದ ನಂತರ ಸಿಕ್ಕ ಗ್ಯಾಸ್ ಒಲೆ ಕಂಡು ತುಂಬಾನೇ ಖುಷಿ ಪಟ್ಟಿದ್ದೆ. 

ಈ ನಡುವೆ ಮನೆಯಲ್ಲಿ ಒಬ್ಬಳೇ ಇದ್ದು, ಇಬ್ಬರಿಗಾಗಿ ಅಡುಗೆ ಮಾಡುವುದಕ್ಕೇನು ಹೆಚ್ಚಿನ ಸಮಯ ಬೇಕಿರಲಿಲ್ಲವಾದ್ದರಿಂದ ಉಳಿದ ಸಮಯವನ್ನು ಖರ್ಚು ಮಾಡುವುದು ಹೇಗೆಂದು ತೋಚದೇ ಕಿರಿಕಿರಿಯಾಗತೊಡಗಿದಾಗ ಬ್ಯೂಟಿಷಿಯನ್ ಕೋರ್ಸ್ ಮಾಡುವ ಯೋಚನೆ ಬಂತು. ಅದಕ್ಕಾಗಿ ಒಳ್ಳೆಯ ಟ್ರೇನರನ್ನು ಹುಡುಕತೊಡಗಿದೆ. ಹಾಗೊಬ್ಬರು ಹೇಳಿಕೊಡುವವರು ಪೇಪರಿನಲ್ಲಿ ಜಾಹಿರಾತು ಕೊಟ್ಟಿದ್ದನ್ನು ನೋಡಿ ಅವರ ಪಾರ್ಲರಿಗೆ ಹೋಗಿ ವಿಚಾರಿಸಿದೆ. ಆರು ತಿಂಗಳ ಕೋರ್ಸಿಗೆ ೬೦೦ ರೂಪಾಯಿ ಫ಼ೀಸ್, ಕೋರ್ಸ್ ಮುಗಿದ ಮೇಲೆ ಪರೀಕ್ಷೆ ಇರುತ್ತೆ, ಅದರಲ್ಲಿ ಪಾಸಾದ್ರೆ ಸರ್ಟಿಫಿಕೇಟ್ ಕೊಡುತ್ತೇವೆ ಅಂದರು. ಒಂದೇ ಸಲಕ್ಕೆ ೬೦೦ ರೂಪಾಯಿಗಳನ್ನು ಕಟ್ಟುವುದು ಸಾಧ್ಯವಾಗದ ಮಾತು ಎನಿಸಿತು.

ಮೂರು ಕಂತುಗಳಲ್ಲಿ ಫ಼ೀಸ್ ಕೊಡಬಹುದೇ ಎಂದು ಕೇಳಿಕೊಂಡಾಗ ಆಕೆ ಒಪ್ಪಿಕೊಂಡರು. ಮನೆಗೆ ಬಂದು ಪತಿಯನ್ನು ಒಪ್ಪಿಸಿ ಕೋರ್ಸಿಗೆ ಸೇರಿಕೊಂಡೆ. ತುಂಬಾ ಚೆನ್ನಾಗಿ ಹೇಳಿಕೊಟ್ಟರು ಆಕೆ. ಅವರ ಪಾರ್ಲರಿಗೆ ಯಾರಾದರೂ ಕನ್ನಡಿಗರು ಬಂದಾಗ, ‘ಜಯಾ ದೇಖೊ ಕಾನಡಿ ಲೋಗ್ ಆಯೆ ಹೈಂ. ಅಬ್ ಜೀ ಭರ್ ಕೆ ಕನ್ನಡ್ ಮೆ ಬಾತ್ ಕರ್ ಕೆ ಖುಷ್ ಹೋ ಜಾವೊ’ ಎಂದು ನಗುತ್ತಿದ್ದರು. ಆಕೆ ಮದುವೆಯಾಗಿ ಮುಂಬಯಿಂದ ಬಂದು ಪುಣೆಯಲ್ಲಿದ್ದವರು. ನಮಗೆ ಕಲಿಸುವುದು ಬೇಗ ಮುಗಿದ ದಿನ ತಮ್ಮ ತವರಿನ ಬಗ್ಗೆ ಮಾತಾಡುತ್ತಿದ್ದರು.

ಮುಂಬಯಿ ಬಗ್ಗೆ ಹೇಳುವಾಗಲೆಲ್ಲ ಅದೆಷ್ಟು ಭಾವುಕರಾಗುತ್ತಿದ್ದರೆಂದರೆ ಪ್ರತೀ ಸಲವೂ ಅವರ ಕಣ್ಣು ತುಂಬಿ ಬರುತ್ತಿದ್ದವು. ಮುಂಬಯಿ ಎದುರು ಅವರಿಗೆ ಪುಣೆ ತುಂಬಾ ಸಪ್ಪೆ ಊರು ಅನಿಸುತ್ತಿತ್ತು. ಅವರಲ್ಲಿ ಕಲಿಯಲೆಂದು ಬರುತ್ತಿದ್ದ ಮೂವರಲ್ಲಿ ನನ್ನ ಕಲಿಕೆ ಅವರಿಗೆ ಇಷ್ಟವಾಗುತ್ತಿತ್ತು. ಅಂತೂ ಕಲಿಯುವುದು ಮುಗಿದು, ಪರೀಕ್ಷೆ ಬರೆದು ಪಾಸಾಗಿ ನಾನು ನನ್ನದೇ ಪಾರ್ಲರ್ ತೆರೆಯಲು ಯೋಗ್ಯಳು ಎನ್ನುವ ಸರ್ಟಿಫಿಕೇಟ್ ಸಹ ದೊರೆಯಿತು.

ಅಡ್ವಾನ್ಸ್ ಕೋರ್ಸ್ ಮಾಡೋದಾದ್ರೆ ಅದಕ್ಕೆ ೨೦೦೦ ರೂಪಾಯಿ ಫ಼ೀಸ್ ಎಂದಾಗ ಅಷ್ಟು ಹಣ ಕಂತಿನಲ್ಲಿಯೂ ಕಟ್ಟುವುದು ಕಷ್ಟ ಎಂದು ಗೊತ್ತಿತ್ತಾದ್ದರಿಂದ ಅಡ್ವಾನ್ಸ್ ಕೋರ್ಸ್ ಮಾಡದೇ ಕಲಿತಿದ್ದರಲ್ಲಿ ಪಳಗಲೆಂದು ಅವರಲ್ಲಿಯೇ ಕೆಲಸ ಮಾಡಲು ಮತ್ತೆ ಮೂರು ತಿಂಗಳು ಹೋದೆ. ಬಿನ್ ಪಗಾರ್ ಕೆಲಸವದು. ಆದರೂ ಕೈಕೂರಲು ನಾನು ಅಲ್ಲಿ ಕೆಲಸ ಮಾಡುವುದು ಅನಿವಾರ್ಯವಿತ್ತು. ಆ ನಂತರ ನನ್ನದೇ ಪಾರ್ಲರ್ ತೆರೆಯಬೇಕಲ್ಲ? ಅದಕ್ಕಾಗಿ ಹೆಸರೊಂದನ್ನ ಹುಡುಕಿಟ್ಟೆ, ‘ಪಾವನಿ’! ಅಂಗಡಿ ಬಾಡಿಗೆ, ಅಡ್ವಾನ್ಸ್, ಅದರೊಳಗೆ ಮಾಡಿಕೊಳ್ಳಬೇಕಾದ ವ್ಯವಸ್ಥೆಗೆ ತಗಲುವ ಖರ್ಚನ್ನು ಲೆಕ್ಕ ಹಾಕಿ ನೋಡಿದಾಗ ಜೀವ ಝಲ್ ಎಂದಿತ್ತು.

| ಇನ್ನು ಮುಂದಿನ ವಾರಕ್ಕೆ | 

‍ಲೇಖಕರು Admin

August 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಎಷ್ಟೊಂದು ಸುಂದರ ನೆನಪುಗಳು ನೀವು ಪಾರ್ಲರ್ ಕೋರ್ಸ್ ಮಾಡ್ಕೊಂಡೇರಿ ಅನ್ನೋದು ಇವತ್ತೇ ಗೊತ್ತಾಯ್ತು . ತುಂಬ ಚೆನ್ನಾಗಿ ಬರ್ತಿದೆ ಹೊರಳು ನೋಟ. ಮುಂದಿನ ಕಂತಿಗಾಗಿ ವೇಟಿಂಗ್ ❤️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: