ಜಯಲಕ್ಷ್ಮಿ ಪಾಟೀಲ್ ಅಂಕಣ – ತಿರುವಿನಲ್ಲಿ ತಿರುಗಿ ಕಾರು ಮಾಯವಾಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

37

ಮದುವೆಯಾದ ಮೇಲೆ ಊಟಿ, ಮೈಸೂರು, ಬೆಂಗಳೂರು ಎಂದು ಹನಿಮೂನ್ ಪ್ಲಾನ್ ಹಾಕಿದ್ದರು ನನ್ನ ಪತಿ. ಆಗೆಲ್ಲ ನಮಗೆ ಬೆಂಗಳೂರಿಗೆ ಹೋಗುವುದು ಎಂದರೆ ವಿದೇಶಕ್ಕೆ ಹೋಗುತ್ತಿದ್ದೇವೆ ಎನ್ನುವಂಥ ಸಂಭ್ರಮ! ಅಷ್ಟು ದೂರ ಆಗ ನಮಗೆ ಬೆಂಗಳೂರು. ಬಿಜಾಪುರದಿಂದ ಸರಕಾರಿ ಬಸ್ಸು, ಮಿಟರ್ ಗೇಜಿನ ಟ್ರೇನುಗಳ ವ್ಯವಸ್ಥೆ ಮಾತ್ರವಿತ್ತು. ಬೆಂಗಳೂರಿಗೆ ಸುಮ್ಮನೆ ಹೋಗಿ ಬರಲೆಂದೇ ಬಾಡಿಗೆ ಕಾರ್ ಮಾಡುವುದು ನಮ್ಮಂಥಾ ಮಧ್ಯಮವರ್ಗದ ಜನರಿಗೆ ಕನಸಿನ ಮಾತಾಗಿತ್ತು, ಅಷ್ಟು ದೂರ ಬೆಂಗಳೂರು ನಮಗಾಗ. ಯಾರಾದರೂ ಸತ್ತರೆ ಕೆಟ್ಟರೆ ಮಾತ್ರ ಅನಿವಾರ್ಯವಾಗಿ ಬಾಡಿಗೆ ಕಾರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಹೀಗಾಗಿ ಬೆಂಗಳೂರಿಗೆ ಹೋಗುವುದು ಎಂದರೆ ಅದೇನೋ ಒಂಥರಾ ಹುರುಪು. ಜೊತೆಗೆ ಊಟಿ ಮತ್ತು ಮೈಸೂರು! ನಾವು ಮೊದಲು ಮೈಸೂರಿಗೆ ಹೋಗಿ ಅಲ್ಲಿಂದ ಊಟಿ ನಂತರ ಬೆಂಗಳೂರು ಮುಗಿಸಿಕೊಂಡು ಬಿಜಾಪುರಕ್ಕೆ ಮರಳಿದ್ದೆವು.

ಮೈಸೂರಿನಲ್ಲಿ KSIC ಅಂಗಡಿಯಲ್ಲಿ ನಮ್ಮ ಅತ್ತೆಯವರಿಗೆ ಕಡುನೀಲಿ ಅಂಚು ಮತ್ತು ಸೆರಗಿರುವ ಎಣ್ಣೆಗೆಂಪು ಬಣ್ಣದ ಮೈಸೂರು ಸಿಲ್ಕ್ ಮತ್ತು ನಾದಿನಿ ಮಲ್ಲಮಳಿಗೆ ಗುಲಾಬಿ ಬಣ್ಣದ ಹೂಗಳಿರುವ ನೀಲಿ ಬಣ್ಣದ ಸಿಲ್ಕ್ ಸೀರೆಯನ್ನು ಕೊಂಡುಕೊಂಡೆ. ನಾವು ಮತ್ತೆ ಕಲಕೇರಿಗೆ ಹೋಗುವ ಪ್ಲಾನ್ ಇರಲಿಲ್ಲವಾಗಿ ಅವುಗಳನ್ನು KSICಯವರೇ ಪೋಸ್ಟ್ ಮಾಡುವ ಭರವಸೆ ಕೊಟ್ಟಿದ್ದರಿಂದ ಅಲ್ಲಿಂದಲೇ ಕಳುಹಿಸುವ ವ್ಯವಸ್ಥೆ ಮಾಡಿ ಊಟಿಗೆ ಬಂದೆವು. ಮೊದಲ ಸಲ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿದ್ದು ನಾವು ಊಟಿಯಲ್ಲಿಯೇ. ಅಲ್ಲಿನ ಬಾಟನಿಕಲ್ ಗಾರ್ಡನ್, ಸೂರ್ಯನ ಕಿರಣಗಳೊಡನೆ ಆಗಾಗ ಚಿನ್ನಾಟವಾಡುತ್ತಿದ್ದ ಮಂಜುಹೊದ್ದ ಸುತ್ತಲಿನ ವಾತಾವರಣ, ಅಲ್ಲಿನ ಲೇಕ್ ಎಲ್ಲವೂ ಅದು ಯಾವುದೋ ಸಿನಿಮಾದ ಒಂದು ಸುಂದರ ದೃಶ್ಯಗಳಂತೆ, ನಾವದರ ಭಾಗದಂತೆ ಭಾಸವಾಗುತ್ತಿತ್ತು.

ಎರಡನೇ ಸಲ ನಾನು ಅಂಥದ್ದೊಂದು ಸ್ವರ್ಗದ ವಾತಾವರಣವನ್ನು ಅನುಭವಿಸುತಲಿದ್ದೆ. ಈ ಮುಂಚೆ ಬಿಎಸ್ಸಿ ಮೊದಲ ವರ್ಷದ ಪ್ರವಾಸದಲ್ಲಿ, ಇಂಥದ್ದೇ ವಾತಾವರಣವಿರುವ ಕೊಡೈಕೆನಾಲನ್ನು ನೋಡಿದ್ದೆನಾದ್ದರಿಂದ ಇದು ನನಗೆ ಪರಿಚಿತ ಪ್ರದೇಶ ಅನಿಸುವಷ್ಟು ಆಪ್ತವೆನಿಸಿತು ಊಟಿ. ಬೆಂಗಳೂರಿಗೆ ಬಂದವರು ಸುತ್ತಾಟ ಮುಗಿಸಿ, ಆಗ ಶ್ರೀನಗರದ ಬಡಾವಣೆಯಲ್ಲಿದ್ದ ಅಶೋಕ ಮಾಮಾನ ಮನೆಗೆ ಹೋಗಿಬಂದೆವು. ಹನಿಮೂನ್ ಮುಗಿಸಿಕೊಂಡು, ಬಿಜಾಪುರಕ್ಕೆ ಹೋಗಿ ಅಲ್ಲಿಂದ ನನ್ನ ಬಟ್ಟೆಬರೆ, ಪುಸ್ತಕಗಳು ಮತ್ತು ಇತರ ಸಾಮಾನುಗಳೊಂದಿಗೆ ಪುಣೆಗೆ ಬಂದೆವು. 

ಮುಂದೆ ಎರಡೇ ತಿಂಗಳಲ್ಲಿ ನನ್ನ ಬಿಎಸ್ಸಿ ಕೊನೆಯ ವರ್ಷದ ಪರೀಕ್ಷೆಗಳಿದ್ದವು. ತುಂಬಾ ಓದನ್ನು ಹಚ್ಚಿಕೊಂಡ ವಿದ್ಯಾರ್ಥಿನಿಯೇನು ನಾನಾಗಿರಲಿಲ್ಲವಾದ್ದರಿಂದ ಮತ್ತು ಹೊಸ ಬದುಕಿನ ಅಮಲು ಜೋರಾಗೇ ಇತ್ತಾದ್ದರಿಂದ ನಮ್ಮಿಬ್ಬರಿಗೂ ಮೂರು ತಿಂಗಳು ಕಾಲ ಬಿಟ್ಟಿರುವುದು ಕಷ್ಟ ಅನಿಸಿ, ಇವರು, “ನಿನ್ನ ಬುಕ್ಸ್, ನೋಟ್ಸ್ ಏನದಾವೋ ಎಲ್ಲಾ ತೊಗೊಂಡುಬಿಡು, ಪರೀಕ್ಷಕ್ಕ ಅಲ್ಲೇ ಓದಾಕೆಂತ” ಎಂದಾಗ ಒಲ್ಲೆ ಅನ್ನದೇ ಅವರೊಂದಿಗೆ ಪುಣೆಗೆ ಹೊರಟುಬಂದಿದ್ದೆ. ನಮ್ಮ ಜೊತೆಗೆ ನನ್ನ ಮೂರನೇ ನಾದಿನಿ ಮಲ್ಲಮ್ಮನೂ ಬಂದಳು. ಪಾಪ ಅವಳಿಗೆ ಪ್ರವಾಸದುದ್ದಕ್ಕೂ ವಾಂತಿ! ಅದೆಷ್ಟು ಸೂಕ್ಷ್ಮ ಎಂದರೆ ಪುಣೆಗೆ ಬಂದ ಆರಂಭದಲ್ಲಿ ಆಟೊದಲ್ಲಿ ಕುಳಿತರೂ ಆಕೆಗೆ ವಾಂತಿಯಾಗುತ್ತಿತ್ತು! 

ಪುಣೆಯ ಸತಾರಾ ರಸ್ತೆಯಲ್ಲಿರುವ ಧನಕೌಡಿಯಲ್ಲಿ ದೇಶಮುಖ್ ಅನ್ನುವವರ ಮಹಡಿ ಮೇಲಿನ ಮನೆಯಲ್ಲಿ ನಮ್ಮ ಹೊಸ ಸಂಸಾರ ಆರಂಭಗೊಂಡಿತು. ಹಾಲ್, ೧ಬೆಡ್ರೂಮ್, ಕಿಚನ್ ಇದ್ದ ಮನೆ ಅದು. ಮನೆಗೆ ಸ್ವಲ್ಪ ದೂರದಲ್ಲೇ ಇವರ ಕನ್ಸ್ಟ್ರಕ್ಷನ್ ನಡೆಯುತ್ತಿತ್ತಾದ್ದರಿಂದ ಮದ್ಯಾಹ್ನದ ಊಟಕ್ಕೆ ಬನೆಗೆ ಬಂದು ಹೋಗುತ್ತಿದ್ದರು. ಆಗಿನ್ನೂ ಗ್ಯಾಸ್ ಒಲೆ ಇರಲಿಲ್ಲ ಇವರ ಹತ್ತಿರ. ಹೀಗಾಗಿ ಭರ್ರ್ ಎನ್ನುವ ಸ್ಟೌ ಮೇಲೆ ಅಡುಗೆ. ಎರಡೂ ಹೊತ್ತು ಎರಡು ಥರದ ಪಲ್ಯ, ಶೇಂಗಾದ ಚಟ್ನಿಪುಡಿ, ಮೊಸರು, ಚಪಾತಿ ಅನ್ನ ಸಾರು ಮಾಡುತ್ತಿದ್ದೆ. ಅಡುಗೆಗೆ ಮಲ್ಲಮ್ಮ ನನ್ನ ಕೈಗೂಡುತ್ತಿದ್ದಳು. ಬೆಳಗಿನ ಮನೆಗೆಲಸಗಳು, ತಿಂಡಿ ಮದ್ಯಾಹ್ನದ ಊಟ ಎಲ್ಲ ಮುಗಿಸಿ, ಪರೀಕ್ಷೆಗೆಂದು ಮದ್ಯಾಹ್ನ ಓದಿಕೊಳ್ಳುವ ಪ್ರಯತ್ನದಲ್ಲಿ ಕೆಲವೊಮ್ಮೆ ನಿದ್ದೆ ಬಂದುಬಿಡೋದು ನನಗೆ. ತವರಿನಲ್ಲಿ ಕೆಲಸದವರು ಬೆಳಗಿಟ್ಟ ಪಾತ್ರೆಗಳನ್ನ ಜೋಡಿಸಿಟ್ಟರೆ, ಅರ್ಜೆಂಟಿಗೆ ನಾಲ್ಕಾರು ಉಳ್ಳಾಗಡ್ಡಿ ಕಾಯಿಪಲ್ಲೆ ಹೆಚ್ಚಿಕೊಟ್ಟರೆ ಅದೇ ಅವ್ವನ ಮೇಲಿನ ನನ್ನ ಉಪಕಾರ ಎಂಬಂತೆ ಬೆಳೆದವಳಿಗೆ ಇಲ್ಲಿನ ಅಷ್ಟೂ ಕೆಲಸಗಳು ದಣಿಸುತ್ತಿದ್ದವು. ನನಗೆ ನಿತ್ಯ ಪಾತ್ರೆ ಬಟ್ಟೆಯಂಥ ಕೆಲಸಗಳನ್ನು ಮಾಡಿ ಅಭ್ಯಾಸವಿಲ್ಲ ಎಂದು ತಿಳಿದಿದ್ದ ನಮ್ಮನೆಯವರು ನನ್ನ ಅವಸ್ಥೆ ನೋಡಿ, ಓನರ್ ಮನೆಗೆ ಬರುತ್ತಿದ್ದ ಕೆಲಸದವಳನ್ನ ಕರೆದು ಮನೆ ಕೆಲಸಕ್ಕೆ ನೇಮಿಸಿದರು. ಆಗೊಂದಿಷ್ಟು ನಾನು ನಿರಾಳವಾದೆ. ಹಾಗೂ ಹೀಗೂ ಆದಷ್ಟು ಓದಿಕೊಳ್ಳುವ ಪ್ರಯತ್ನ ಮಾಡಿದೆ.

ಪುಣೆಗೆ ಬಂದ ಮೇಲೆ ಸುತ್ತಾಡಿ ಊರು ನೋಡದಿದ್ದರೆ ಹೇಗೆ? ಹದಿನೈದು ದಿನಗಳಿಗೊಮ್ಮೆ ಇವರು ನಮ್ಮನ್ನು ಪುಣೆಯ ಬೇರೆ ಬೇರೆ ಜಾಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಪಾಟೀಲ್ರು ಅಂದ್ರೆ ನಮ್ಮನೆಯವರು. ಕಾರಣ ಅವರಿಗೆ ವಾರಕ್ಕೊಮ್ಮೆ ಭಾನುವಾರದಂದು ಸಿಗುವ ರಜೆಯನ್ನು ರಜೆ ಅನ್ನುವ ಹಾಗಿರಲಿಲ್ಲ. ಸರಕಾರಿ ವೈದ್ಯರ ಹಾಗೆ ಭಾನುವಾರದಂದೂ ಅರ್ಧ ದಿನ ಕೆಲಸ ಮಾಡುವುದು ಕೆಲವೊಮ್ಮೆ ಪೂರ್ತಿ ದಿನ ಅನಿವಾರ್ಯವಾಗುತ್ತಿತ್ತು ಇವರಿಗೆ. ಬೆಂಗಳೂರಿಗೆ ಬಂದು ನೆಲೆಗೊಳ್ಳುವವರೆಗೆ ತಿಂಗಳ ನಾಲ್ಕೂ ಭಾನುವಾರ ಇವರು ಮನೆಯಲ್ಲಿದ್ದುದೇ ನೆನಪಿಲ್ಲ ನನಗೆ! ಕಾಂಟ್ರ್ಯಾಕ್ಟರ್ಸ್ ಹತ್ತಿರ ಕೆಲಸ ಮಾಡುವ ಎಲ್ಲಾ ಸಿವಿಲ್ ಇಂಜಿನಿಯರುಗಳ ಹಣೆಬರಹವೂ ಹೀಗೆಯೇ ಏನೋ ಪಾಪ. ಹೀಗಾಗಿ ಇವರಿಗೆ ಬಿಡುವು ಸಿಕ್ಕಷ್ಟು ಗಂಟೆಗಳ ಲೆಕ್ಕದ ಸಮಯವೇ ನನ್ನ ಪಾಲಿನ ಭಾನುವಾರವಾಗುತ್ತಿತ್ತು.

ಪರೀಕ್ಷೆಯ ಹೊತ್ತಿಗೆ ಬಿಜಾಪುರಕ್ಕೆ ಹೋಗಿ ಬರೆದು ಬಂದಿದ್ದೆ. ಬಿಜಾಪುರಕ್ಕೆ ಹೋಗುವಾಗ ನನ್ನ ಜೊತೆಗೆ ಮಲ್ಲಮ್ಮನೂ ಬಂದವಳು ಕಲಕೇರಿಗೆ ಹೋದಳು. ಬರುವಾಗ ನಾನೊಬ್ಬಳೇ ಪುಣೆಗೆ ಮರಳಿದ್ದೆ. 


ನಮ್ಮ ಓನರ್ ಸಾಕಿದ್ದ ಜರ್ಮನ್ ಶೆಫರ್ಡ್ ನಾಯಿ ‘ರಾಕಿ’ನ ಕಂಡರೆ ಉಳಿದವರು ಹೆದರಿ ಸಾಯುತ್ತಿದ್ದರು. ಆರಂಭದಲ್ಲಿ ನನಗೂ ಹೆದರಿಕೆಯಾಗಿತ್ತು ಅದರ ದೈತ್ಯ ಆಕಾರ ಕಂಡು. ಆದರೆ ದಿನಕಳೆದಂತೆ ನಮ್ಮ ಮನೆಯದೇ ಅನ್ನುವಷ್ಟು ಪ್ರೀತಿ ಬೆಳೆಯಿತು ಅದರ ಮೇಲೆ. ಅದೂ ಸಹ ಪುಣೆಯ ಸಭ್ಯತೆಯ ನೀರು ಗಾಳಿಗೆ ಒಗ್ಗಿಕೊಂಡಿತ್ತೇನೋ. ಊಟ ಮುಗಿಸಿದ್ದೇ ನಮ್ಮ ತಲಬಾಗಿಲ ಹೊಸ್ತಿಲ ಬಳಿ ಬಂದು, ಒಮ್ಮೆ ಬೌ ಎಂದು ತಾನು ಬಂದಿರುವುದನ್ನು ನನಗೆ ತಿಳಿಸಿ, ಅಲ್ಲಿಯೇ ಕುಳಿತುಕೊಳ್ಳುತ್ತಿತ್ತು. ಓನರ್ ಮನೆಯಲ್ಲಿ ಆ ದಂಪತಿ ಇಬ್ಬರೂ ರಾಕಿಗೆ ಅಷ್ಟೆಲ್ಲಾ ಅಕ್ಕರೆ ತೋರುತ್ತಿದ್ದರೂ ಅದ್ಯಾಕೋ ಕಾಣೆ ಅದರ ಕಣ್ಣಲ್ಲಿ ಒಂದು ಖಾಲಿಯತನ ಕಾಣಿಸುತ್ತಿತ್ತು ನನಗೆ.. ಪುಣೆ/ಪೂನಾ ಎಂದರೆ ಹವಾಮಾನದ ವಿಷಯದಲ್ಲಾಗಲಿ, ಮರಾಠಿಯ ಭಾಷೆಯ ಉಚ್ಛಾರಣೆಯ ವಿಷಯದಲ್ಲಾಗಲಿ, ವಿದ್ಯಾಭ್ಯಾಸಕ್ಕಾಗಲಿ, ಸಾಂಸ್ಕೃತಿಕವಾಗಿಯೇ ಆಗಲಿ ಎಲ್ಲ ರೀತಿಯಲ್ಲೂ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧ.

ಎಲ್ಲ ಹಿತಕಾರಿಯಾದ ಅಂಶಗಳನ್ನು ಅಳವಡಿಸಿಕೊಂಡು ಬೆಳೆದ ಬೆಳೆಯುತ್ತಲೇ ಇರುವ ಊರು. ಅಲ್ಲಿನ ಜನರ ಮರಾಠಿ ಕೇಳಲು ಮೃದು ಮಧುರ. ಮಹಾರಾಷ್ಟ್ರದ ಇತರ ಜಿಲ್ಲೆಗಳ ಮರಾಠಿಯ ಸೊಗಡಿಗೂ ಪುಣೆಯ ಮರಾಠಿಯ ಸೊಗಡಿಗೂ ತುಂಬಾ ವ್ಯತ್ಯಾಸವಿದೆ. ಶಿಷ್ಟತೆ ಪುಣೆಯ ಗಾಳಿ ನೀರಿನಲ್ಲಿ ಬೆರೆತಷ್ಟು ಸಹಜ ಅಲ್ಲಿನ ಮೂಲ ಜನರಲ್ಲಿ. ನಮ್ಮ ಬಿಜಾಪುರ ಜಿಲ್ಲೆಯ ಅನೇಕ ಕುಟುಂಬಗಳು ಅಲ್ಲಿನ ಅನುಕೂಲಕ್ಕೆ ಒಗ್ಗಿ ಅಲ್ಲಿಯೇ ನೆಲೆ ನಿಂತಿವೆ, ಬೆಂಗಳೂರಿನಲ್ಲಿ ನಾವೆಲ್ಲಾ ಬಂದು ನೆಲೆಸಿದಂತೆ. ನನ್ನಿಷ್ಟದ ಮರಾಠಿಯ ಖ್ಯಾತ ನಟರಾದ ವಿಕ್ರಮ್ ಗೋಖಲೆ ಅವರನ್ನು ಒಮ್ಮೆ ಪುಣೆಯ ಸಾರಸ್ ಭಾಗಲ್ಲಿ ದೂರದಿಂದಲೇ ನೋಡಿ ಪುಳಕಿತಳಾಗಿದ್ದೆ. ಮುಂದೆ ಮುಂಬಯಲ್ಲಿದ್ದಾಗ ಅವರು ಅಭಿನಯಿಸಿದ ನಾಟಕವೊಂದನ್ನು ನೋಡಲು ಹೋದಾಗ, ಗ್ರೀನ್ ರೂಮಿನ ಬಾಗಿಲಲ್ಲಿ ನಿಂತ ಅವರಿಗೆ ಕೈ ಮುಗಿದು, ‘ಸರ್, ನಿಮ್ಮ ಅಭಿನಯವೆಂದರೆ ನನಗೆ ತುಂಬಾ ಇಷ್ಟ’ ಎಂದು ಹೇಳುತ್ತಾ ಅವರ ಕಣ್ಣಲ್ಲಿ ಹೊಳೆದ ನಗುವನ್ನು ಕಣ್ತುಂಬಿಕೊಂಡಿದ್ದೆ ನಾನು. ಧನ್ಯವಾದ್ ಎಂದು ಪ್ರತಿಯಾಗಿ ಕೈ ಮುಗಿದಿದ್ದರು ಆ ಮಹಾನ್ ನಟ. 

ಒಂದು ಭಾನುವಾರದಂದು ಸುತ್ತಾಡಲು ಲಕ್ಷ್ಮಿರೋಡಿಗೆ ಹೋಗಿದ್ದೆವು ನಾವಿಬ್ಬರು. ಲಕ್ಷ್ಮಿ ರೋಡ್ ಮನೆಯ ಎಲ್ಲಾ ಅಗತ್ಯದ ವಸ್ತುಗಳನ್ನು ಖರೀದಿಸಲು ತಕ್ಕುದಾದ, ಪುಣೆಯ ನಟ್ಟನಡುವಿರುವ ಒಂದು ಪ್ರಸಿದ್ಧ ರಸ್ತೆ. ಸದಾ ಮಾರುವವರಿಂದ, ಕೊಳ್ಳುವವರಿಂದ ಗಿಜಿಗುಡುವ ರಸ್ತೆ. ಆ ರಸ್ತೆ ಒಂದು ಅಂಚಿಗೆ ಬಂದು ಬಲಕ್ಕೆ ತಿರುಗಿದರೆ ಖ್ಯಾತ ದಗಡುಶೇಠ್ ಗಣಪತಿಯ ದೇವಸ್ಥಾನವಿದೆ. ಲಕ್ಷ್ಮಿ ರೋಡ್ ಎನ್ನುವ ಹೆಸರು ಬಂದಿದ್ದೇ ದಿ. ಗೋವಿಂದ ದಗಡುಶೇಠ್ ಅವರ ತಾಯಿ ಲಕ್ಷ್ಮಿದೇವಿಯವರ ಹೆಸರನ್ನ ಆ ರಸ್ತೆಗಿಟ್ಟಿರುವುದರಿಂದ. ಕರ್ನಾಟಕ ಮೂಲದ ಶ್ರೀಮಂತ ದಗಡುಶೇಠ್ ಮತ್ತವರ ಹೆಂಡತಿ ಲಕ್ಷ್ಮಿಬಾಯಿ ಅವರು ಪುಣೆಯಲ್ಲಿ ಸಿಹಿತಿನಿಸುಗಳ ಅಂಗಡಿಯನ್ನಿಟ್ಟುಕೊಂಡು, ಅವರ ಅಡ್ಡಹೆಸರೇ ಹಲವಾಯಿ ಎನ್ನುವಷ್ಟು ಪ್ರಸಿದ್ಧಿ, ಅಪಾರ ಧನಸಂಪತ್ತು ಹೊಂದಿದ್ದ ದಂಪತಿ. ಅವರು ಈ ಗಣಪತಿಯನ್ನು ಸ್ಥಾಪಿಸಿ ಗುಡಿ ಕಟ್ಟಿದವರು.

ಪ್ರತೀವರ್ಷ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುತ್ತಿದ್ದವರು. ಇವರಿಗಿದ್ದ ಇಬ್ಬರು ಗಂಡುಮಕ್ಕಳೂ ಪ್ಲೇಗಿಗೆ ಬಲಿಯಾದಾಗ, ಸಂಬಂಧಿಯೊಬ್ಬರ ಮಗ ಗೋವಿಂದ ಅವರನ್ನು ದತ್ತು ತೆಗೆದುಕೊಳ್ಳುತ್ತಾರೆ. ಮುಂದೆ ಗೋವಿಂದ ದಗಡುಶೇಠ್ ಅವರು ದತ್ತು ತಂದೆ ದಿ. ಶ್ರೀಮಂತ ದಗಡುಶೇಠ್ ಅವರ ಗಣೇಶನ ಮೇಲಿನ ಭಕ್ತಿಯನ್ನು ಪಂಪರೆಯಾಗಿ ಮುಂದುವರೆಸಿಕೊಂಡು ಮೂರ್ತಿಯನ್ನು ಮರುಸ್ಥಾಪಿಸುತ್ತಾರಂತೆ. ಇವರು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುತ್ತಿದ್ದುದೇ ಲೋಕಮಾನ್ಯ ತಿಲಕ್ ಅವರಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಸಾರ್ವಜನಿಕರನ್ನು ಒಗ್ಗೂಡಿಸುವ ಉಪಾಯವಾಗಿ ಹೊಳೆದು ಅದನ್ನು ಅಭಿಯಾನವನ್ನಾಗಿಸಿದ್ದು ಈಗ ಇತಿಹಾಸ. ಲೋಕಮಾನ್ಯ ತಿಲಕ್ ಮತ್ತು ಗೋವಿಂದ ದಗಡುಶೇಠ್ ಇಬ್ಬರೂ ಆತ್ಮೀಯ ಗೆಳಯರಾಗಿದ್ದರಂತೆ.

ನಮ್ಮವರಿಂದ, ನಮ್ಮ ನೆಲದಿಂದ ದೂರವಿದ್ದಾಗಲೇ, ನಮ್ಮ ಸಂಬಂಧಗಳು, ಪರಿಸರ, ಭಾಷೆ ಅದೆಷ್ಟು ಆಳವಾಗಿ ನಮ್ಮೊಳಗೆ ಇಳಿದು ಬೇರೂರಿವೆ ಎನ್ನುವುದು ಅರಿವಿಗೆ ಬರುತ್ತದೇನೋ. ಹಾಗೆ ಸುತ್ತಾಡಲೆಂದು ಲಕ್ಷ್ಮಿರೋಡಿಗೆ ಬಂದಿದ್ದಾಗ ಅಂಥಾ ಕಿಕ್ಕಿರಿದ ರಸ್ತೆಯಲ್ಲಿ ಬಿಳಿಯ ಅಂಬಾಸಿಡರ್ ಕಾರೊಂದು ನಮ್ಮೆದುರಿಂದ ಹಾಯ್ದು ಮುಂದೆ ಸಾಗುತಿದ್ದಂತೆಯೆ ಸಹಜವಾಗಿಯೇ ನನ್ನ ಗಮನ ಅದರತ್ತ ಹೋಯಿತು. ಅದೇನಾಯಿತೋ ಗೊತ್ತಿಲ್ಲ, ಅದರ ಹಿಂದಿಂದೆ ಓಡತೊಡಗಿದೆ. ಹಿಂದಿನಿಂದ ಇವರು, “ಜಯಾ ನಿಂದ್ರು. ಏನಾಯ್ತು? ನಿಂದ್ರು. ಏನಾತು?” ಎಂದು ಕೂಗುತ್ತಾ ಓಡಿ ಬಂದವರು, ನನ್ನನ್ನು ಹಿಡಿದೆಳೆದು ನಿಲ್ಲಿಸಿ ಮತ್ತೆ ಕೇಳಿದರು. ಯಾಕ ಹಂಗ ಹುಚ್ಚಿಗತೆ ಓಡಾಕತ್ತಿ? ಏನಾಯ್ತು?” ಅವರ ದನಿಯಲ್ಲಿ ಗಾಬರಿ ಇತ್ತು. ಒಂದು ಕ್ಷಣ ಏನಾಯಿತೆಂದು ಹೇಳಲು ನನಗೂ ಹೊಳೆಯಲಿಲ್ಲ. ಕಾರು ಹೋದತ್ತ ಕೈ ಮಾಡಿದೆ. ಅತ್ತ ತಿರುಗಿದರೆ ಯಾವುದೋ ತಿರುವಿನಲ್ಲಿ ತಿರುಗಿ ಕಾರು ಮಾಯವಾಗಿತ್ತು. “ಅಲ್ಲೇನೈತಿ? ಏನಾಯ್ತು?” 

ಸುಧಾರಿಸಿಕೊಂಡು ನುಡಿದೆ,

“ಕನ್ನಡದಾಗ ‘ರಾಮಾಚಾರಿ’ ಅಂತ ಬರದಿತ್ತ್ರಿ ಆ ಕಾರಿನ ಮ್ಯಾಲೆ!!”

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಇಂಟೆರೆಸ್ಟಿಂಗ್ ಆಗಿ ಓದ್ತಾ ಹೋಗ್ತಿದ್ದೆ.. ಆಯೋ ಮುಗ್ದೆ ಹೋತು ಅನಸ್ತು ವಿಕ್ರಮ್ ಗೋಖಲೆ ಬೆಸ್ಟ್ ಆಕ್ಟರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: