ಜಯಲಕ್ಷ್ಮಿ ಪಾಟೀಲ್ ಅಂಕಣ- ಕಾಲೇಜ್ ಪ್ರವಾಸಕ್ಕೆ ಹೊರಟೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

28

ಆಕ್ಟಿಫಯಿಡ್! ಇದು ಧೂಳಿನಿಂದ ಅಲರ್ಜಿ ಉಂಟಾಗಿ ನೆಗಡಿಯಾದಾಗಲೆಲ್ಲ ನಾನು ತೆಗೆದುಕೊಳ್ಳುತ್ತಿದ್ದ ಮಾತ್ರೆ. ಉಳಿದೆಲ್ಲ ಅಲರ್ಜಿಯ ಮಾತ್ರೆಗಳಂತೆ  ಈ ಮಾತ್ರೆಯೂ ಸಹ; ನುಂಗಿದಾಗಲೆಲ್ಲ ಜೋರು ನಿದ್ದೆ ಬರೋದು. ಆದರೆ ಕಾಲೇಜಿರುತ್ತಿತ್ತಾದ್ದರಿಂದ ಹಗಲ್ಹೊತ್ತು ಮಲಗುವಂತೆಯೇ ಇರಲಿಲ್ಲವಲ್ಲ. ವರ್ಷಕ್ಕೆ  ೨- ೩ ಸಲ ನೆಗಡಿ ಬಂದರೆ ಸುಸ್ತು ಅಂತ ರಜೆ ಮಾಡಿ ಮಲಗಬಹುದೇನೋಪಾ ಆದರೆ ಆಗುಂಬೆಯ ಜಿಟಿ ಜಿಟಿ ಮಳೆಯಂತೆ ವರ್ಷವಿಡೀ ಮೂಗು ಗುಳುಗುಳು ಅನ್ನುತ್ತಾ ಸೋರುತ್ತಿದ್ದರೆ ಮಲಗಲು ಹೇಗೆ ತಾನೇ ಸಾಧ್ಯ?! ಈ ವಾರವಿಡೀ ನೆಗಡಿ ಎಂದರೆ ಅದರ ಮುಂದಿನ ವಾರ ಮುಳ್ಳು ಮೂಗನ್ನು ಸರಿಪಡಿಸಿಕೊಳ್ಳುವುದರಲ್ಲಿ ಹೋಗುತ್ತಿತ್ತು.

ನೆಗಡಿಯಿಂದಾಗಿ ಮೂಗನ್ನು ಉಜ್ಜಿದ್ದರ ಪರಿಣಾಮವಾಗಿ ಮೂಗಿನ ಚರ್ಮವೆಲ್ಲ ಸುಲಿದು ಮುಳ್ಳು ಮುಳ್ಳಿನಂತೆ ಮೂಗಿನ ಹೊಳ್ಳೆಗಳ ಸುತ್ತ ಎದ್ದು ನಿಂತು ಮುಜುಗರವನ್ನು ಉಂಟು ಮಾಡುತ್ತಿತ್ತು. ಹಾಗಾಗಿ ಅದನ್ನು ತಪ್ಪಿಸಲು ನೆಗಡಿ ಕಾಣಿಸಿಕೊಳ್ಳುತ್ತಲೇ ಆಕ್ಟಿಫಾಯಿಡ್ ಮಾತ್ರೆಯನ್ನು ತಪ್ಪದೇ ತೆಗೆದುಕೊಳ್ಳುತ್ತಿದ್ದೆ ಮತ್ತು ಅದರಿಂದಾಗಿ ಮಂಪರು ಆವರಿಸಿ ಒಂಥರಾ ಕುಡಿದವರಂತೆ ಅಮಲುಗಣ್ಣಿನೊಂದಿಗೆನೇ ಓಡಾಡುತ್ತಿದ್ದೆ. ಬಿಎಸ್ಸಿ ಗೆ ಬಂದ ಮೇಲೆ ಗೆಳತಿಯರಾದ ಸುಹಾಸಿನಿ ಮತ್ತು ವಾಣಿ ನನ್ನ ಕಣ್ಣು ನೋಡುತ್ತಲೇ ಮಾತ್ರೆ ತೆಗೆದುಕೊಂಡಿರುವುದನ್ನು ಕಂಡುಹಿಡಿದು ‘ಆಕ್ಟಿಫಾಯಿಡ್ ಇಫೆಕ್ಟ್’ ಎಂದು ರೇಗಿಸುತ್ತಿದ್ದರು.

ಬಿಎಸ್ಸಿ ಯ ಮೊದಲನೇ ವರ್ಷ ಕಾಲೇಜಿನಿಂದ ೮ ದಿನದ ಶೈಕ್ಷಣಿಕ ಪ್ರವಾಸ ಏರ್ಪಡಿಸಿದ್ದರು. ಶೈಕ್ಷಣಿಕ ಎಂದರೆ ಶೈಕ್ಷಣಿಕ ಪ್ರವಾಸವೇ ಸೈ ಅದು. ಬೆಂಗಳೂರಿನ ಹೊರತಾಗಿ ನಮ್ಮನ್ನು ಕರೆದುಕೊಂಡು ಹೋದ ಉಳಿದೆಲ್ಲ ಜಾಗಗಳಲ್ಲಿ ನೋಡಲು ಸಿಗುತ್ತಿದ್ದ ಪ್ರಾಣಿಗಳ, ಅವುಗಳ ಪಳೆಯುಳಿಕೆಗಳ ವರ್ಗ, ಅವು ಯಾವ ಫ್ಯಾಮಿಲಿ, ಸಬ್ ಫ್ಯಾಮಿಲಿ ಸೇರಿದವು ಅವುಗಳ ಗುಣಲಕ್ಷಣಗಳು ಏನು ಎಂದು ನಮ್ಮನ್ನು ಪ್ರಶ್ನಿಸುತ್ತಾ, ವಿವರಿಸುತ್ತಿದ್ದರು ನಮ್ಮ ಜೊತೆಗೆ ಬಂದಿದ್ದ ಪ್ರಾಧ್ಯಾಪಕರು.

ಈ ಪ್ರವಾಸ ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯಾಗಿತ್ತು ಮತ್ತು ಸರಕಾರವೂ ಈ ಪ್ರವಾಸಕ್ಕೆ ಸಹಾಯಧನವನ್ನು ನೀಡಿತ್ತೆಂಬ ಮಸುಕು ನೆನಪು. ಜೊತೆಗೆ ಪ್ರತೀ ವಿದ್ಯಾರ್ಥಿಯಿಂದ ಕಾಲೇಜಿನವರು ಮುನ್ನೂರು ರೂಪಾಯಿಗಳನ್ನು ಪ್ರಯಾಣ ವೆಚ್ಚವಾಗಿ ಪಡೆದುಕೊಂಡಿದ್ದರು. ಬಹುಶಃ ಊಟದ ಬಾಬತ್ತೂ ಅದರಲ್ಲಿಯೇ ಸೇರಿತ್ತು ಅಂದುಕೊಳ್ತೀನಿ, ಈಗ ಸರಿಯಾಗಿ ನೆನಪಾಗ್ತಿಲ್ಲ. ಉಳಿದ ಮೇಲಿನ ಖರ್ಚಿಗೆ ಅಪ್ಪಾ ಕೊಟ್ಟ ಹಣ ಕಡಿಮೆ ಅನಿಸಿ, ನಾನು ಟ್ಯೂಷನ್ ಹೇಳುತ್ತಿದ್ದ ಮನೆಯವರ ಹತ್ತಿರ ಆ ತಿಂಗಳ ಮತ್ತು ಮುಂದಿನ ಆರು ತಿಂಗಳ ಫೀಸ್ ಕೇಳಿ ಪಡೆದುಕೊಂಡೆ. ಮುಂಗಡವಾಗಿ ಆರು ತಿಂಗಳ ಫೀಸ್ (ಇಬ್ಬರಿಗೆ ಸೇರಿ ತಿಂಗಳಿಗೆ ೫೦ ರೂಪಾಯಿಗಳು) ಕೊಟ್ಟ ಅವರಿಗೆ ನನ್ನ ಮೇಲಿರುವ ನಂಬಿಕೆ ಮತ್ತು ಪ್ರೀತಿಯನ್ನು ಕಂಡು ಮೂಕಳಾಗಿದ್ದೆ. ಅವರ ಪ್ರತಿ ಗೌರವ ಇಮ್ಮಡಿಯಾಗಿತ್ತು. ಅರೇ ಹೌದಲ್ಲವಾ!? ನಾನು ನಿಮಗೆ ನಾನು ಟ್ಯೂಷನ್ ಹೇಳುತ್ತಿದ್ದ ವಿಷಯವನ್ನು ಹೇಳಲೇ ಮರೆತಿದ್ದೆ! ಇಂಜಿನಿಯರಿಂಗ್ ನ ಮೊದಲ ವರ್ಷ ಫೇಲಾಗಿ ಮತ್ತೆ ಅಲ್ಲಿ ಅಡ್ಮಿಶನ್ ತೆಗೆದುಕೊಳ್ಳಲು ನಿರಾಕರಿಸಿದ್ದೆನ್ನಲ್ಲ, ಆಗ ಟ್ಯೂಷನ್ ಹೇಳಿಸಿಕೊಂಡು ಇಂಜಿನಿಯರಿಂಗ್ ನ ಪರೀಕ್ಷೆ ಕಟ್ಟುವುದು ಎಂದು ನಿರ್ಧರಿಸಿ ಎರಡು ಮೂರು ವಿಷಯಗಳಿಗೆ ಟ್ಯೂಷನ್ ಗೆ ಹೋಗುತ್ತಿದ್ದೆ. ಈ ಬಗ್ಗೆ ಆಗಿನ ನನ್ನ ಒಣ ಪ್ರತಿಷ್ಠೆಯನ್ನು ಈಗ ನೆನೆದರೆ ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತದೆ.

ನಮ್ಮ ಪಕ್ಕದ ಮನೆಯಲ್ಲಿ ಆಬೀದ್ ಮತ್ತು ಜಾವೇದ್ ಹೆಸರಿನ ಇಬ್ಬರು ಪುಟ್ಟ ಮಕ್ಕಳಿಗೆ ಅವರಮ್ಮ ಗಣಿತ ಮತ್ತು ಕನ್ನಡ ಹೇಳಿಕೊಡಲು ನನ್ನನ್ನು ಕೇಳಿದ್ದರಾದ್ದರಿಂದ ದಿನವೂ ಒಂದು ಗಂಟೆಯ ಕಾಲ ಅವರಿಗೆ ಪಾಠ ಮಾಡುತ್ತಿದ್ದೆ. ಅವರಿಬ್ಬರೂ ಆ ಎರಡೂ ವಿಷಯಗಳಲ್ಲಿ ಚೆನ್ನಾಗೇ ಅಂಕ ಗಳಿಸಿ ಪಾಸಾಗಿದ್ದರು. ನಾನು ನನ್ನ ಪರೀಕ್ಷೆಯಲ್ಲಿ ಮತ್ತೂ ಫೇಲಾಗಿದ್ದೆ. ಇನ್ನಾಗದು ಎಂದು ಇಂಜಿನಿಯರಿಂಗ್ ಓದನ್ನು ಮೊಟಕುಗೊಳಿಸಿ ಬಿಎಸ್ಸಿ ಸೇರಿದ್ದೆ.  

ಹೀಗೆ ಟ್ಯೂಷನ್ ಹೇಳಿ ಸಂಪಾದಿಸಿದ ಹಣವನ್ನು ಅಪ್ಪಾ ಕೊಟ್ಟ ಹಣದೊಂದಿಗೆ ಸೇರಿಸಿಕೊಂಡು ಪ್ರವಾಸಕ್ಕೆ ಹೊರಟೆ ನನ್ನ ಸಹಪಾಠಿಗಳೊಂದಿಗೆ.

ತಿರುವನಂತಪುರ, ಕನ್ಯಾಕುಮಾರಿ, ರಾಮೇಶ್ವರ, ಬೆಂಗಳೂರು ನಮ್ಮ ಪ್ರವಾಸಿ ತಾಣಗಳಾಗಿದ್ದವು. ಉದ್ದಕ್ಕೂ ರೇಲ್ವೆ ಪ್ರಯಾಣ. ಪ್ರಯಾಣದಲ್ಲಿ ನನ್ನನ್ನೂ (ನನ್ನದಲ್ಲ, ಸ್ನೇಹಿತರಿಂದ ಕಡವಾಗಿ ತಂದಿದ್ದು) ಸೇರಿ ಒಂದಿಬ್ಬರ ಬಳಿ ವಾಕ್ಮನ್ ಇತ್ತು. ಇಡೀ ಪ್ರವಾಸದಲ್ಲಿ ರೇಲ್ವೆಯಲ್ಲಿ ಪ್ರಯಾಣಿಸುವಾಗ, ಮಾಧುರಿ ದೀಕ್ಷಿತ್, ಅನಿಲ್ ಕಪೂರ್ ನಟಿಸಿದ ಆಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ‘ತೇಜಾಬ್’ನ ‘ಸೋ ಗಯಾ ಯೆಹ್ ಜಂಹಾ, ಸೋ ಗಯಾ ಆಸಮಾನ್’ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೆವೆಂದರೆ ಮೊದಲಿನ ಕ್ಯಾಸೆಟ್ಟಿನ ಟೇಪ್ ಸವೆದು ಹರಿದುಹೋಗಿ, ಹುಡುಗರು ಇನ್ನೆರಡು ತೇಜಾಬ್ ಕ್ಯಾಸೆಟ್ಟುಗಳನ್ನು ಕೊಂಡು ತಂದು, ಬಳಸೀ ಬಳಸೀ ಅವೂ ಹರಿದುಹೋಗಿದ್ದವು! ಇವತ್ತಿಗೂ ಯಾವುದೇ ಪ್ರವಾಸ ಹೊರಟರೂ ಮೊದಲು ನೆನಪಾಗುವುದೇ ಮತ್ತು ಈ ಹಾಡು. ಇದು ಬಾಲಿವುಡ್ ನ ಪ್ರಖ್ಯಾತ ಗಾಯಕರಾಗಿದ್ದ ಮುಕೇಶ್ ಅವರ ಮಗ ನಿತೀನ್ ಮುಕೇಶ್, ಶಬ್ಬೀರ್ ಕುಮಾರ್ ಅಲ್ಕಾ ಯಾಗ್ನಿಕ್ ಹಾಡಿದ ಹಾಡು.

ತಿರುವನಂತಪುರದಲ್ಲಿನ (ಟ್ರಿವೆಂಡ್ರಮ್) ಎರಡು ಘಟನೆಗಳನ್ನು ಯಾವತ್ತಿಗೂ ಮರೆಯಲಾರೆ ನಾನು. ಒಂದು; ಅಂದು ತೊಟ್ಟು ಮಾಸಲಾದ ನಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಲೆಂದು ನಾನು, ಸುಹಾಸಿನಿ ಮತ್ತು ವಾಣಿ ಮೂವರೂ ಒಮ್ಮೆಗೇ ನಾವುಳಿದುಕೊಂಡಿದ್ದ ಡಾರ್ಮೆಟ್ರಿಯ ಕಾಮನ್ ಬಾತ್ರೂಂ ಹೊಕ್ಕು ಬಾಗಿಲು ಹಾಕಿಕೊಂಡೆವು. ಬಟ್ಟೆಗೆ ಸಾಬೂನು ಹಚ್ಚಿ ಉಜ್ಜುತ್ತಲೇ ಮಾತಾಡುತ್ತಿರುವಾಗ, ಬೇರೆ ಬೇರೆ ಆಕಾರದ ಬಣ್ಣ ಬಣ್ಣದ ನೇಯಲ್ ಪಾಲೀಶ್ ಹಚ್ಚಿದ ಕೃತಕ ಉಗುರುಗಳು ಆಗಷ್ಟೆ ಮಾರುಕಟ್ಟೆಗೆ ಬಂದ ವಿಷಯ ಬಂದು, ಅಚ್ಚರಿಗೊಳ್ಳುತ್ತಾ, ಇದು ಅತಿಯಾಯ್ತು ಎನ್ನುತ್ತಲೇ ಅಕಸ್ಮಾತ್ ಹೀಗೆಯೇ ಕೃತಕ ಮೂಗುಗಳೂ ಮಾರ್ಕೇಟಲ್ಲಿ ಬಂದರೆ ಹೇಗಿರುತ್ತೆ? ಎನ್ನುತ್ತಾ, ಅವುಗಳ ಬಣ್ಣ ಆಕಾರ ಇತ್ಯಾದಿಗಳನ್ನು ಒಬ್ಬೊಬ್ಬರೂ ನಮ್ಮ ಕಲ್ಪನೆಗೆ ಬಂದಿದ್ದನ್ನ ಹೇಳುತ್ತಾ, ನಮ್ಮನ್ನೂ ಒಳಗೊಂಡು ಯಾರೆಲ್ಲ ಯಾವ ಯಾವ ಥರದ ಮೂಗನ್ನು ಕೊಳ್ಳಬಹುದು, ಅದರಲ್ಲಿ ನಾವೆಲ್ಲ ಹೇಗೆ ಕಾಣಬಹುದು ಎಂದು ಊಹಿಸಿ ನಗತೊಡಗಿದೆವು.

ಅಂದು ಅದ್ಯಾವ ಪರಿ ನಕ್ಕೆವೆಂದರೆ ನಮ್ಮ ನಗು ಇಡೀ ಡಾರ್ಮೆಟ್ರಿಯಲ್ಲಿ ಪ್ರತಿಧ್ವನಿಸಿ ಎಲ್ಲರೂ ನಾವಿದ್ದ ಬಾತ್ರೂಮ್ ವರೆಗೆ ಬಂದೂ ಬಂದೂ ಹೋಗಿದ್ದಾರೆ, ನಮಗದು ಅರಿವಿಗೇ ಬಂದಿಲ್ಲ. ಹುಚ್ಚುಚ್ಚು ನಗೆ ಅದು. ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ ಸಾಧ್ಯವಾಗುತ್ತಿರಲಿಲ್ಲ. ಇಷ್ಟು ನಗ್ತಿದೀವಿ, ಮುಂದೆ ಅಳೋದು ಗ್ಯಾರಂಟಿ, ಸಾಕಿನ್ನು ಎನ್ನುತ್ತಿದ್ದೇವಾದರೂ ನಗು ನಿಲ್ಲುತ್ತಿಲ್ಲ. ಕೊನೆಗೆ ಹುಡುಗಿಯೊಬ್ಬಳು ಬಂದು ಜೋರಾಗಿ ಬಾಗಿಲು ತಟ್ಟುತ್ತಾ, “ಸಾಕ್ ಹೊರಗ ಬರ್ರಿ ಇನ್ನ, ನಮ್ಮೂವೂ ಅರಬಿ ಅದಾವ. ನಾವೂ ಒಕ್ಕೋಬೇಕು, ಮೂರ್ ತಾಸಾತು ಒಳಗ ಹೊಕ್ಕು ನೀವು” ಎಂದು ಸಿಡಿಮಿಡಿಗೊಂಡಾಗಲೇ, ಎದ್ದು ಆಚೆ ಬಂದೆವು. ನಂತರ ಹುಡುಗನೊಬ್ಬನ ಜೊತೆ ವಿನಾಕಾರಣ ಜಗಳವೂ ಆಗಿ ನನ್ನ ಅಳುವಿನೊಂದಿಗೆ ಈ ಪ್ರಸಂಗಕ್ಕೆ ತೆರೆ ಬಿದ್ದಿತ್ತು. ಇಲ್ಲದಿದ್ದರೆ ಊರು ತಲುಪುವ ತನಕ ಹಲ್ಲು ಕಿಸಿಯುತ್ತಲೇ ಇರುತ್ತಿದ್ದೆವೋ ಏನೋ! ಆ ವಯಸ್ಸೇ ಹಾಗೆ ಅಲ್ಲವೆ? ನಗಲು ಯಾವುದೊ ದೊಡ್ಡದೊಂದು ಕಾರಣ ಬೇಕೆಂದೇನೂ ಇರುವುದಿಲ್ಲ, ನಗುವಿರುತ್ತದೆ.

ಎರಡು; ಮರುದಿನ ಅಲ್ಲಿನ ಪ್ರಸಿದ್ಧ ಪದ್ಮನಾಭಸ್ವಾಮಿಯ ದೇವಸ್ಥಾನವನ್ನು ನೋಡಿದ ನಂತರ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮೀನುಗಳ ಲೋಕವನ್ನು ಅಭ್ಯಾಸಿಸುವುದು ಎಂದಾಗಿತ್ತಾದ್ದರಿಂದ, ಎಲ್ಲರೂ ದೇವಸ್ಥಾನಕ್ಕೆ ಬಂದೆವು. ನಮ್ಮಲ್ಲಿನ ಬಹಳಷ್ಟು ಹುಡುಗಿಯರು ಸ್ಕರ್ಟ್, ಚೂಡಿದಾರ್ ಧರಿಸಿದ್ದರಿಂದ, ಅಲ್ಲಿನ ಅರ್ಚಕರು ನಮಗೆಲ್ಲ ಒಳಗೆ ಬಿಡದೆ, ಲಂಗ ಬ್ಲೌಸ್ ಹಾಕಿಕೊಂಡವರನ್ನಷ್ಟೇ ದರ್ಶನಕ್ಕೆ ಹೋಗಲು ಸೂಚಿಸಿ ನಮಗೆಲ್ಲ ಬಟ್ಟೆ ಬದಲಿಸಿಕೊಂಡು ಬರಲು ಸೂಚಿಸಿದ್ದು ನನ್ನನ್ನು ಕೆರಳಿಸಿತ್ತು. ನಮ್ಮನ್ನೂ ದರ್ಶನ ಪಡೆಯಲು ಬಿಡಬೇಕೆಂದು ಅವರ ಜೊತೆಗೆ ವಾದ ಮಾಡತೊಡಗಿದೆ, ನಾನು ಇಂಗ್ಲಿಷ್ ಬೆರೆಸಿದ ಕನ್ನಡದಲ್ಲಿ, ಅವರು ಇಂಗ್ಲಿಷ್ ಬೆರೆತ ಮಲಯಾಳಂನಲ್ಲಿ. ಹುಡುಗಿಯೊಬ್ಬಳು ಹೀಗೆ ಎದುರುತ್ತರ (ಅವರ ಪಾಲಿಗೆ) ಕೊಡುತ್ತಿರುವುದು ಅವರಿಗೆ ಸಹಿಸಲಾಗಲಿಲ್ಲ ನನ್ನನ್ನು ತುಚ್ಛವಾಗಿ ನೋಡುತ್ತಾ ಸಿಟ್ಟಿನಿಂದ ಗದರಿಸತೊಡಗಿದರು. “ಬಟ್ಟೆ ನೋಡಿ ನಮ್ಮನ್ನಳೆಯುವ, ಬೇಧ ತೋರುವ ನಿಮ್ಮ ಈ ದೇವರು ಅದೆಂಥಾ ದೇವರು? ನನಗವನ ದರ್ಶನ ನನಗೆ ಬೇಡವೇಬೇಡ ಬಿಡಿ. ಬಟ್ಟೆ ಬದಲಿಸುವುದಿಲ್ಲ ನಾವು.” ಎಂದು ಕೂಗಾಡಿದ ನನ್ನನ್ನು ಸಮಾಧಾನಿಸುತ್ತ ಗೆಳತಿಯರು ತಾವೂ ಒಳಗೆ ಹೋಗದೆ, ಅಲ್ಲಿಂದ ನಮ್ಮನ್ನು ಉಳಿಸಿದ್ದಲ್ಲಿಗೆ ಕರೆದುಕೊಂಡು ಬಂದರು. ಆದರೆ ಲಂಗ ಬ್ಲೌಸ್ ತೊಟ್ಟಿದ್ದ ಇಬ್ಬರು ಹುಡುಗಿಯರು ಮಾತ್ರ ಪಾರಿತೋಷಕ ಗೆದ್ದವರಂತೆ ತುಂಬಾ ಖುಷಿಯಿಂದ ಹೋಗಿ ದೇವರ ದರ್ಶನ ಪಡೆದುಕೊಂಡು ಬಂದರು. ಮರುದಿನ ಕಟ್ಟಿಮನಿ ಸರ್ ನನ್ನನ್ನು ಕರೆದು, ಇನ್ನುಳಿದ ಶಿಕ್ಷಕರ ಸಮ್ಮುಖದಲ್ಲಿ, ಪ್ರವಾಸ ಮುಗಿಯುವವರೆಗೆ ಎಲ್ಲಾ ಹುಡುಗಿಯರನ್ನು ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ವಹಿಸಿದರು! ನನಗೇ ಯಾಕೆ ಎಂದು ಆಗ ತಿಳಿದಿರಲಿಲ್ಲವಾದರೂ ಆ ಕ್ಷಣ ನನಗೆ ಖುಷಿಯಾಗಿದ್ದು ಮಾತ್ರ ನಿಜ. 

“ಮುಂದ ಏನ್ ಆಗಬೇಕಂತ ಮಾಡೀರಿ?” ಎಂದರು ಕಟ್ಟಿಮನಿ ಸರ್. ಪೋಲಿಸ್ ಆಫೀಸರ್ ಆಗಬೇಕು ಅನಕೊಂಡೀನ್ರಿ ಸರ್ ಎಂದೆ, ನಕ್ಕರು. “ಅದಕ್ಕ physical fitness ಬೇಕಾಕ್ಕತಿ ಗೊತ್ತೈತಲ್ಲಾ? ಮದ್ಲ ಗಟ್ಟಿಮುಟ್ಟಿ ಆಗ್ರಿ, ಛಂದಂಗ ಓದ್ರಿ” ಎಂದು ಹೇಳಿ ಶುಭ ಹಾರೈಸಿದರು. ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ. ಆದರೆ ಕಟ್ಟಿಮನಿ ಸರ್ ವಹಿಸಿದ್ದ ಜವಾಬ್ದಾರಿಯನ್ನು ಶಿರಸಾ ವಹಿಸಿ ಪಾಲಿಸಿದ್ದೆ. ಇದರಿಂದ ಕೆಲ ಹುಡುಗಿಯರಿಗೆ ಇರುಸುಮುರುಸಾಗಿದ್ದೂ ಅಷ್ಟೇ ನಿಜ. “ಇಕಿ ಯಾರ್ ನಮಗ ಹೇಳಾಕ?” ಎನ್ನುವ ಭಾವ ಅವರಲ್ಲಿತ್ತು. ಪ್ರವಾಸ ಮುಗಿಸಿ ಮರಳಿದಾಗ ಹುಡುಗ ಹುಡುಗಿ ಎನ್ನುವ ಅಂತರ ನಮ್ಮ ಕ್ಲಾಸಿನಲ್ಲಿ ಕಡಿಮೆಯಾಗಿತ್ತು. ನಮ್ಮಲ್ಲಿ ಚೆಂದದೊಂದು ಗೆಳೆತನದ ಕೊಂಡಿ ಆತ್ಮೀಯತೆಯನ್ನು ಬೆಸೆದಿತ್ತು. ಹೊಸ ಹುರುಪಿನಿಂದ ಕ್ಲಾಸಿಗೆ ಬರತೊಡಗಿದೆವು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: