ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.
ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.
‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.
‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.
ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-
38
ಲಕ್ಷ್ಮಿ ರೋಡಿಂದ ಸ್ವಲ್ಪ ಮುಂದೆ ಬಂದರೆ ಬುಧವಾರ್ ಪೇಟ್ ಸಿಗುತ್ತದೆ. ಅಲ್ಲಿ ಹಾರ್ಡ್ವೇರ್, ಎಲೆಕ್ಟ್ರಿಕಲ್ ಅಂಗಡಿಗಳು ಸಾಲುಸಾಲಾಗಿದ್ದಂತೆಯೇ ಆರಂಭದ ಭಾಗದಲ್ಲಿ ರೆಡ್ ಲೈಟ್ ಏರಿಯಾ ಇದೆ. ಅಷ್ಟುದ್ದದ ಗಲ್ಲಿಯ ಇಕ್ಕೆಲದಲ್ಲೂ ಅಷ್ಟಕ್ಕೂ ಒಬ್ಬರೇ ಮಾಲಿಕರೇನೋ ಅನ್ನುವಂತೆ ಸಾಲಾಗಿ ಉದ್ದಕ್ಕಿರುವ ಹಳೆಯ ಒಂದಅಂತಸ್ಥಿನ ಮಹಡಿ ಮನೆಗಳು. ಅದರ ಎದುರಿಗೆ ವೈಯಾರವಾಗಿ ನಾನಾ ಭಂಗಿಗಳಲ್ಲಿ ನಿಂತು ಗಿರಾಕಿಗಳನ್ನು ಕರೆಯುತ್ತಲೋ, ಹರಟೆ ಹೊಡೆಯುತ್ತಲೋ, ಯಾರನ್ನೋ ಛೇಡಿಸುತ್ತಲೋ ಹೊಸ್ತಿಲ ಮೇಲೆ ಕುಳಿತ ಹೆಣ್ಣುಮಕ್ಕಳು, ಅವರೊಂದಿಗೆ ವ್ಯವಹಾರ ಕುದುರಿಸುತ್ತಲೋ, ಲೋಕಾಭಿರಾಮವಾಗಿ ಮಾತಾಡುತ್ತಲೋ ನಿಂತ ಗಂಡಸರು, ಇವರುಗಳ ನಡುವಿನಿಂದಲೇ ರಸ್ತೆಯ ಇನ್ನೊಂದು ಬದಿಯನ್ನು ಬೇಗ ತಲುಪಲೆಂದು ಧಾಪುಗಾಲಿಡುತ್ತಾ ಶಾರ್ಟ್ ಕಟ್ ದಾರಿಯನ್ನಾಗಿಸಿಕೊಂಡು ಕೆಂಡದ ಕೊಂಡ ಹಾಯ್ದವರಂತೆ ಹೋಗುವ ಒಂದಿಷ್ಟು ಮಂದಿ.
ಓದು, ಸಿನಿಮಾಗಳ ಪ್ರಭಾವವೋ ಅಥವಾ ಮೈಮಾರಿಕೊಳ್ಳುವವರ ಬಗ್ಗೆ ಇದ್ದ ತುಚ್ಛವೆಂಬ ಭಾವವೋ, ಮೊದಲ ಸಲ ನನ್ನ ಪತಿ ಬುಧವಾರ್ಪೇಟನ್ನು ತೋರಿಸಿದಾಗ, ನಮ್ಮನ್ನಲ್ಲಿ ನೋಡಿದವರು ಏನೆಂದುಕೊಂಡಾರು ಅನ್ನುವ ಆತಂಕದಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಂದ ಹೊರಟುಬಿಡೋಣ ಎಂದು ಇವರ ದುಂಬಾಲುಬಿದ್ದಿದ್ದೆ ನಾನು. ಹಾಗೇನು ಯಾರೂ ಏನೂ ಅಂದುಕೊಳ್ಳುವುದಿಲ್ಲ, ನಾವು ಆ ರಸ್ತೆಯಲ್ಲಿ ಹೋಗುತ್ತಿದ್ದೇವೆ ಅಷ್ಟೇ. ಇಲ್ಲಿನ ಜನಕ್ಕೆ ಅವರ ಮತ್ತು ನಮ್ಮ ನಡುವಿನ ವ್ಯತ್ಯಾಸ ಗೊತ್ತಿರುತ್ತೆ ಮತ್ತು ಯಾರ್ಯಾರ ಬಗ್ಗೆಯೋ ಅಭಿಪ್ರಾಯ ರೂಢಿಸಿಕೊಳ್ತಾ ಕೂರುವಷ್ಟು ಸಮಯ ಅಲ್ಲಿನ ಜನಕ್ಕಿರಲ್ಲ ಎಂದು ಇವರು ನನ್ನನ್ನು ಸಮಾಧಾನಿಸಿದ್ದರು. ಆದರೂ ಆ ಕಡೆಯಲ್ಲಿ ಹೋಗಬೇಕಾದ ಪ್ರಸಂಗ ಬಂದಾಗಲೆಲ್ಲ, ಆ ಗಲ್ಲಿ ಕಡೆಗೊಂದು ನನ್ನ ಕುತೂಹಲಭರಿತ ನೋಟ ಹರಿಯುತ್ತಲೇಯಿತ್ತು.
ಹೆಣ್ಣುಮಕ್ಕಳನ್ನು ಕದ್ದುತಂದಿಲ್ಲಿ ಮೈಮಾರಿಕೊಳ್ಳಲು ನಿಲ್ಲಿಸುತ್ತಾರೆ ಎನ್ನುವ ಮಾತಿಗೂ ಅಲ್ಲಿ ನಿಂತಿರುತ್ತಿದ್ದ ಹೆಣ್ಣುಮಕ್ಕಳ ಹಾವಭಾವಕ್ಕೂ ಹೋಲಿಕೆ ಕಾಣದೆ ಗೊಂದಲಗೊಂಡಿದ್ದೂ ಇದೆ. ಆದರೆ ಹತ್ತಿರ ಹೋಗಿ ಮಾತನಾಡಿಸದೇ ಯಾರ ಕಥೆಯೂ ನಮಗೆ ತಿಳಿಯದು ಅಲ್ಲವೇ? ದೂರದಿಂದ ಎಲ್ಲವೂ ಸಹಜವಾಗಿದೆ ಅಂತಲೇ ಕಾಣುತ್ತದೆ. ಹೌದು ಕಾಣುತ್ತದೆ, ಕೇಳಿಸುವುದಿಲ್ಲ, ಅನುಭೂತಿಗೆ ದಕ್ಕುವುದಿಲ್ಲ. ಇತ್ತೀಚಿಗಷ್ಟೇ ನನಗೆ ತಿಳಿದ ಒಂದು ಸಂಗತಿ ಏನೆಂದರೆ, ನಮ್ಮೂರಿನ ಹೆಣ್ಣುಮಗಳೊಬ್ಬಳಿಗೆ ಪುಣೆಯಲ್ಲಿ ಶೇಠು ಒಬ್ಬರ ಮನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡುಹೋಗಿ ಕಾಮಾಟಿಪುರದಲ್ಲಿ ಮಾರಿದ್ದನಂತೆ ಒಬ್ಬ.
ನಂತರ ಅಲ್ಲಿನ ಬದುಕು ಆಕೆಗೆ ಅನಿವಾರ್ಯವಾಗಿ, ಅಲ್ಲಿಯೇ ಆಕೆಗೆ ಮಕ್ಕಳೂ ಆಗಿ, ಅವರನ್ನು ದೂರದೂರಿನಲ್ಲಿ ಹಾಸ್ಟೆಲಿನಲ್ಲಿಟ್ಟು ಚೆನ್ನಾಗಿ ಓದಿಸಿ ಮದುವೆ ಮಾಡಿದಳಂತೆ. ಅಲ್ಲಿ ಬಲವಂತದಿಂದ ಎಳೆದುತಂದು ತುಟಿ ಕೆನ್ನೆಗಳಿಗೆ ರಂಗು ಬಳಿದು ಲಂಗ ಜಂಪರ್ ತೊಟ್ಟು ನಿಲ್ಲಿಸಿದ ಅಂಥ ಅದೆಷ್ಟು ಜೀವಗಳು ನಲುಗುತ್ತಿರುತ್ತವೆಯೋ ಯಾರಿಗೆ ಗೊತ್ತು!? ದೂರದಿಂದ ನೋಡಿದರೂ, ಆ ಗಲ್ಲಿ ಪಕ್ಕದಲ್ಲಿ ಹಾಯ್ದು ಹೋದರೂ ಮೈಲಿಗೆ ಅಂಟುಕೊಳ್ಳುತ್ತೇನೋ ಎಂಬಂತೆ ವರ್ತಿಸುವ ನನ್ನಂಥ ಮಡಿವಂತ ಮನಸುಗಳಿಗೆ ಆ ನೋವು ಅರ್ಥವಾಗುವುದಾದರೂ ಹೇಗೆ..? ಇದನ್ನು ನಿಮಗಿಲ್ಲಿ ಹೇಳುತ್ತಿರುವಾಗ ನನಗೆ ಹೀಗೆ ನನ್ನ ಮಡಿವಂತ(?!) ಮನಸ್ಥಿತಿಯ ಪುಕ್ಕಲುತನ ಹೊರಬಿದ್ದ ಘಟನೆಯೊಂದು ನೆನಪಾಗುತ್ತಿದೆ. ಮುಂದೆ ಆ ಕುರಿತು ಹೇಳುವೆ, ಸಧ್ಯಕ್ಕೆ ಬೇಡ. ಒಟ್ಟಿನಲ್ಲಿ ನಮ್ಮ ಮೆದುಳನ್ನು ಆಗಾಗ ನಾವು ಸ್ವಚ್ಛ ಮಾಡಿಕೊಳ್ಳದೇ ಹೋದರೆ ಮಡಿವಂತಿಕೆಯ ಕೊಳೆ ಶೇಖರಗೊಳ್ಳುತ್ತಾ, ಮನಸ್ಸು ಮೆದುಳುಗಳೆಂದಿಗೂ ಮಡಿಯಾಗಿ ಥಳಥಳಿಸುವುದೇ ಇಲ್ಲ. ಬದಲಿಗೆ ಸುತ್ತಲಿನ ವಾತಾವರಣದ ಮೇಲೂ ತಮ್ಮ ಕೆಟ್ಟ ಪ್ರಭಾವ ಬೀರುತ್ತವೆ. ತುಸು ತಡವಾದರೂ ಸರಿ ಅಂಥ ಅಪಾಯದಿಂದ ಪಾರಾದೆ ನಾನು ಎನ್ನುವುದು ನನ್ನ ಪಾಲಿನ ಸಮಾಧಾನ.
ಪುಣೆಯಲ್ಲಿ ನೋಡತಕ್ಕಂಥ ಸ್ಥಳಗಳು ಅನೇಕ. ಹೀಗಾಗಿ ಊರಿಂದ ಯಾರಾದರು ಸಂಬಂಧಿಕರು ನಮ್ಮಲ್ಲಿಗೆ ಬಂದರೆ ಅವರನ್ನು ಕರೆದುಕೊಂಡು ಊರು ತೋರಿಸುವುದೆಂದರೆ ನನಗೂ ನನ್ನ ಪತಿಗೂ ಭಾರಿ ಹುರುಪು. ಹೀಗಾಗಿ ನಾವು ಯಾವ ಊರಲ್ಲಿದ್ದರೂ, ಬಂದವರನ್ನು ಆ ಊರು ಮತ್ತು ಅದರ ಸುತ್ತಮುತ್ತಲಿರುವ ಪ್ರೇಕ್ಷಣೀಯ ಊರುಗಳಿಗೆ ಕರೆದುಕೊಂಡು ಹೋಗಿ ತೋರಿಸಿ ಖುಷಿಪಡಿಸಿದ್ದೇವೆ. ಪುಣೆಯಲ್ಲಿದ್ದಾಗ ನಮ್ಮ ಮನೆಯಲ್ಲಿ ಉಳಿದುಕೊಂಡು ನೌಕರಿ ಹುಡುಕಿಕೊಂಡು ನೆಲೆ ನಿಂತವರಿದ್ದಾರೆ.
ಪುಣೆ ತಮಗೆ ಒಗ್ಗುವುದಿಲ್ಲ ಎಂದು ಮರಳಿ ಊರಿಗೆ ಹೋದವರೂ ಇದ್ದಾರೆ. ಹಾಗೆ ಪುಣೆಗೆ ಬಂದು ೬ ತಿಂಗಳು ನಮ್ಮಲ್ಲಿದ್ದು ತನಗೆ ಅಲ್ಲಿ ಒಗ್ಗದು ಎಂದು ನಮ್ಮ ಸಂಬಂಧಿ ಒಬ್ಬ ಮರಳಿ ಹೋದರೆ, ತಮ್ಮ ನೆಲೆ ಕಂಡವರಲ್ಲಿ ನನ್ನ ಮೂರನೇ ಮಾಮಾನ ಸ್ನೇಹಿತರಾದ ಜಹಂಗೀರ್ ಮತ್ತು ಇನ್ನೊಬ್ಬ. ಇಬ್ಬರೂ ನಮಗೆ ಬಳಗವಲ್ಲ, ನನ್ನ ಅಥವಾ ನನ್ನ ಪತಿಯ ಸ್ನೇಹಿತರೂ ಅಲ್ಲ! ಬಿಜಾಪುರದಲ್ಲಿ ನಮ್ಮ ಓಣಿಯಲ್ಲಿಯೆ ಅವರುಗಳ ಮನೆಯೂ ಇದೆ. ನನಗೂ ಮತ್ತು ನನ್ನ ತವರಿನ ಜನರಿಗೂ ಅವರುಗಳ ಮತ್ತು ಅವರ ಮನೆಯವರ ಪರಿಚಯ ನಾನು ಚಿಕ್ಕವಳಿದ್ದಾಗಿನಿಂದಲೂ ಇದೆ. ಆ ಇಬ್ಬರೂ ಸಭ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ನನ್ನ ಸೋದರಮಾವನ ವಿನಂತಿಯ ಮೇರೆಗೆ ಅವರನ್ನು ನಮ್ಮ ಮನೆಯಲ್ಲಿರಿಸಿಕೊಂಡಿದ್ದೆವು.
ಮೊದಲು ಬಂದ ಜಹಂಗೀರ ತುಂಬಾ ಸಂಕೋಚದ ವ್ಯಕ್ತಿ, ವಿನಯವಂತ. ಬಂದ ಎಂಟುಹತ್ತು ದಿನಗಳಲ್ಲಿಯೇ ನನ್ನ ಪತಿ ತಮ್ಮ ಸೈಟಲ್ಲಿಯೇ ಸೂಪರ್ವೈಸರ್ ಕೆಲಸ ಕೊಡಿಸಿದರು. ಕೆಲಸ ಸಿಕ್ಕ ಕೂಡಲೇ ಜಹಂಗೀರ್ ನಮ್ಮನೆಯಿಂದ ಇತರ ಸೂಪರ್ವೈಸುಗಳಿದ್ದ ಜಾಗಕ್ಕೆ ಹೊರಟುಹೋದ. ಆಗಾಗ ಹಬ್ಬಗಳಲ್ಲಿ ಕರೆದರೆ ನಮ್ಮ ಮನೆಗೆ ಬಂದುಹೋಗುತ್ತಿದ್ದ. ಈಗ ಪುಣೆಯಲ್ಲೇ ವಾಸವಾಗಿರುವ ಜಹಂಗೀರ್ ಜೊತೆ ಮಾತುಕತೆ ಅಪರೂಪವಾದರೂ ಮೊದಲಿನದೇ ಆತ್ಮೀಯತೆ ನಮ್ಮಗಳ ನಡುವೆ ಇದೆ. ಇನ್ನೊಬ್ಬ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದವ. ನನ್ನ ಪತಿಯೂ ಸಿವಿಲ್ ಇಂಜಿನಿಯರ್ ಆದ್ದರಿಂದ ಪರಿಚಯವಿರುವೆಡೆ ಶಿಫಾರಸ್ಸು ಮಾಡಿ ಕೆಲಸ ಕೊಡಿಸುವಂತೆ ಕೇಳಿಕೊಂಡು ಬಂದವನು. ಉಳಿಯಲು ಬೇರೆಡೆ ಜಾಗವಿರದ ಕಾರಣ ನಮ್ಮ ಮನೆಯಲ್ಲೇ ಇದ್ದು ನೌಕರಿಗಾಗಿ ಓಡಾಡುತ್ತಿದ್ದ. ಬಂದ ೨-೩ ತಿಂಗಳಿಗೆ ನೌಕರಿ ಸಿಕ್ಕರೂ ನಮ್ಮನೆಯಿಂದ ವಾಸ್ತವ್ಯ ಬದಲಿಸದೇ ಇದ್ದಾಗ ನನಗೆ ಮುಜುಗರವಾಗತೊಡಗಿತು. ನನ್ನ ಗಂಡ, ಗಂಡನ ಮನೆಯವರು ಏನೆಂದುಕೊಂಡಾರು ಅನ್ನುವ ಆತಂಕ ನನಗೆ. ಗಂಡನ ಮನೆಯಲ್ಲಿ ಹೆಣ್ಣುಮಕ್ಕಳ ಬದುಕು ಹಗ್ಗದ ಮೇಲಿನ ನಡಿಗೆ ಎಂದು ವಿವರಿಸುವುದಾದರೂ ಹೇಗೆ? ಸೂಕ್ಷ್ಮವಾಗಿ ಹೇಳಿ ನೋಡಿದೆ. ಅರ್ಥ ಮಾಡಿಕೊಳ್ಳಲಿಲ್ಲ ಅವನು. ಕೈಯಲ್ಲಿ ಹಣವಿಲ್ಲ ಎಲ್ಲಿಗೆ ಹೋಗಲಿ? ಎಂದವನ ಮಾತಿನಲ್ಲಿಯೂ ನಿಜವಿದೆ ಎನಿಸಿ ಆ ತಿಂಗಳು ಸುಮ್ಮನಿದ್ದೆ. ಸಂಬಳ ಬಂದ ಮೇಲೂ ಬೇರೆಡೆ ಹೋಗದಿದ್ದಾಗ ನನ್ನಂತೆಯೇ ಇವರಿಗೂ ಇರುಸುಮುರುಸಾಗತೊಡಗಿತು. ಆಗ ಇನ್ನು ಸಾಕು ನಿನ್ನ ನೆಲೆ ನೀನು ನೋಡಿಕೊ ಎಂದು ಹೇಳುವುದು ಅನಿವಾರ್ಯವಾಯಿತು ನನಗೆ. ಬೇಸರ ಮಾಡಿಕೊಂಡೇ ಹೋದ. ಒಳ್ಳೆಯದನ್ನೇ ಮಾಡಿದರೂ ಪ್ರತಿಫಲವಾಗಿ ಇಂಥದ್ದೊಂದು ಕಹಿಯನ್ನು ಎದುರಿಸಬೇಕಾಯಿತಲ್ಲ ಎಂದು ಇಬ್ಬರೂ ಅನೇಕ ದಿನಗಳ ಕಾಲ ಹಳಹಳಿಸಿದ್ದಿದೆ. ನಂತರದಲ್ಲಿ ಯಾರಿಗೇ ಏನೇ ಸಹಾಯ ಮಾಡಿದರೂ ಮನೆಯಲ್ಲಿಟ್ಟುಕೊಂಡು ಉಪಚರಿಸಿ ಸಹಾಯ ಮಾಡುವ ಧೈರ್ಯ ಮಾಡಲಿಲ್ಲ ನಾವು. ನಮ್ಮಿಂದ ಸಾಧ್ಯವಾಗುವ ಏನೇ ಸಹಾಯವಿದ್ದರೂ ಅದು ಮನೆಯಾಚೆಗೆನೇ ಅಂತ ನಿರ್ಧರಿಸಿದೆವು. ಅಚ್ಚರಿ ಎಂದರೆ ಮುಂದೆ ಎಷ್ಟೋ ವರ್ಷ ಆ ವ್ಯಕ್ತಿ ಎದುರಾದರೆ ನಾನವತ್ತು ನಿನ್ನ ನೆಲೆ ನೀನು ನೋಡಿಕೊ ಅಂದಾಗ ನನ್ನ ಮೇಲೆ ತೋರಿದ ಅಸಹನೆಯನ್ನೆ ತೋರುತ್ತಿದ್ದುದು! ಒಮ್ಮೆಯೂ ಪರಕೀಯನಾದ ತನ್ನನ್ನು ನಾಲ್ಕು ತಿಂಗಳ ಕಾಲ ನಾವು ಗಂಡ ಹೆಂಡತಿ ಮನೆಯವನಂತೆಯೇ ನೋಡಿಕೊಂಡಿದ್ದು ನೆನಪೇಯಿಲ್ಲದವನಂತೆ ವರ್ತಿಸುತ್ತಿದ್ದುದು ಕಂಡು ನೊಂದುಕೊಳ್ಳುತ್ತಿದ್ದೆ. ಆದರೆ ಕಾಲ ಎಂಥವರನ್ನೂ ಮಾಗಿಸುತ್ತದೆ. ಇತ್ತೀಚಿಗೆ ನಮ್ಮ ಮಗಳ ಮದುವೆಗಾಗಿ ನಾವು ಬಿಜಾಪುರದಲ್ಲಿ ಛತ್ರ ಹುಡುಕುತ್ತಿದ್ದಾಗ ಅದೇ ವ್ಯಕ್ತಿ ಛತ್ರವೊಂದರ ವಿವರ ಮತ್ತು ಇತರ ವ್ಯವಸ್ಥೆಯ ಬಗ್ಗೆ ಮಾಹಿತಿ ಒದಗಿಸಿದಾಗ, ಸ್ವಲ್ಪ ಮಟ್ಟಿಗೆ ಏನೋ ವಿಚಿತ್ರ ಸಮಾಧಾನ.
ನನ್ನೂರಿನ ಜನ, ಅದೂ ಹುಡುಗರು! ಬೇರೆಯವರಾಗಿದ್ದರೆ ಹೆಂಡತಿಯನ್ನು ಅನುಮಾನಿಸಲು ಅಷ್ಟು ಸಾಕಿತ್ತು. ಆದರೆ ನನ್ನ ಗಂಡ ಹಾಗಿಲ್ಲದಿರುವುದೇ ನನ್ನ ಸಂಸಾರ ಒಡೆಯದೆ ಇರಲು ಮತ್ತು ಆ ಇಬ್ಬರೂ ತಮ್ಮ ಬದುಕಿನ ಭದ್ರತೆ ಕಂಡುಕೊಳ್ಳಲು ಸಾಧ್ಯವಾಗಿದ್ದು ಅನ್ನುವ ಸಾರ್ಥಕ ಭಾವ ನನ್ನದು. ಸಂಬಂಧಿಯೊಬ್ಬ ಮರಳಿಹೋಗದೆ ಸ್ವಲ್ಪ ಸಹನೆಯಿಂದಿದ್ದಿದ್ದರೆ ಅವನ ಬದುಕೂ ಹಸನಾಗಿರ್ತಿತ್ತು ಎಂದು ಆಗಾಗ ನಾನು, ನನ್ನ ಪತಿ ಮಾತನಾಡಿಕೊಳ್ಳುತ್ತಿರುತ್ತೇವೆ.
ನಮ್ಮ ಮೊದಲ ಆನಿವರ್ಸರಿ ಆಚರಿಸಲು ನಾವಿಬ್ಬರೂ ಮಹಾಬಳೇಶ್ವರಕ್ಕೆ ಹೋಗಿದ್ದೆವು. ಲೋನಾವಳದಂತೆಯೇ ಮಹಾಬಳೇಶ್ವರ, ಪಂಚಗಣಿ ಮಹಾರಾಷ್ಟ್ರದ ಹಿಲ್ ಸ್ಟೇಶನ್ನುಗಳು. ಪುಣೆಯಿಂದ ಮಹಾಬಳೇಶ್ವರ್ ಎರಡೂವರೆ ಗಂಟೆಯ ದಾರಿ. ಮುಂದೆ ಪಂಚಗಣಿ ಅರ್ಧ ಗಂಟೆ. ಅಲ್ಲಿಗೆ ಹೋಗುವುದೆಂದರೆ ಮಹಾರಾಷ್ಟ್ರದ ಜನರಲ್ಲಿ ಉತ್ಸಾಹ ಚಿಮ್ಮುತ್ತದೆ. ಆದರೆ ನಾನು ಅದಕ್ಕೂ ಮೊದಲೇ ಊಟಿ, ಕೊಡೈಕೆನಾಲ್ ನೋಡಿದ್ದೆನಾದ್ದರಿಂದ, ಅಯ್ಯಾ ಇದೆಂಥಾ ಹಿಲ್ ಸ್ಟೇಶನ್ನು ಅನಿಸಿತು ಅಲ್ಲಿಗೆ ಹೋಗಿ ನೋಡಿದಾಗ. ಆದರೆ ಹೇಗೂ ಬಂದಾಗಿದೆಯಲ್ಲ ಇರೋದನ್ನೇ ಅಸ್ವಾದಿಸೋದು ಎಂದು ಅಲ್ಲಿನ ಪರಿಸರವನ್ನು ಎಂಜಾಯ್ ಮಾಡತೊಡಗಿದೆವು. ಮದುವೆ ವಾರ್ಷಿಕೋತ್ಸವದ ರಾತ್ರಿ, ನಾನು ಪಕ್ಕಾ ಕೊಡಗಿನವರ ಶೈಲಿಯಲ್ಲಿ ಹಿಂದೆ ನಿರಿಗೆ ಮಾಡಿ ಕಿತ್ತಳೆ ಬಣ್ಣದ, ಒಡಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ಬಂಗಾರದ ಹೂಗಳಿದ್ದ ಸೀರೆ ಉಟ್ಟು ರಸ್ತೆ ಉದ್ದಕ್ಕೂ ಓಡಾಡಿದೆ. ಅಲ್ಲಿದ್ದ ಜನ ಅಚ್ಚರಿಯಿಂದ ತಿರುತಿರುಗಿ ನನ್ನನ್ನು ನೋಡುತ್ತಿದ್ದುದು ನನಗೆ ತುಂಬಾ ಖುಷಿಕೊಟ್ಟಿತ್ತು.
| ಇನ್ನು ಮುಂದಿನ ವಾರಕ್ಕೆ |
ತುಂಬ ಚೆನ್ನಾಗಿ ಬರ್ತಿದೆ ಅಂಕಣ ನೀವು ಮತ್ತು ಪಾಟೀಲರು ಎಲ್ಲರಿಗೂ ಸಹಾಯ ಮಾಡುವ ವಿಷ್ಯದಲ್ಲಿ no 1 ಜೋಡಿ. ಅದಕ್ಕೆ ನಿಮಗೆ ಯಾವತ್ತೂ ಒಳ್ಳೇದೇ ಆಗತ್ತೆ
ಮೊನ್ನೆ ತಾನೆ ಮಹಾಬಳೇಶ್ವರ್ ಗೆ ಹೋಗಿ ಬಂದ್ವಿ