ಜಯಲಕ್ಷ್ಮಿ ಪಾಟೀಲ್ ಅಂಕಣ- ಅಪ್ಪಾ ಹೆದರಿದ್ದರು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

13

ನಾನು ಹೈಸ್ಕೂಲಿನಲ್ಲಿದ್ದಾಗ ಕಂಡಿದ್ದೇನೆಂದರೆ ಬೇಂದ್ರೆ, ಕುವೆಂಪು, ಕಣವಿ, ಡಿವಿಜಿ, ರನ್ನ, ಪೊನ್ನ, ಪಂಪ ಇತ್ಯಾದಿ ಸಾಹಿತಿಗಳೆಲ್ಲ ಪಠ್ಯಕ್ಕೆ ಮಾತ್ರ ಸೀಮಿತವಾಗಿದ್ದರು. ಆಗೆಲ್ಲ ಹೆಚ್ಚಾಗಿ ಎಲ್ಲರೂ ಓದುತ್ತಿದ್ದುದು ಸಾಯಿಸುತೆ, ಉಷಾ ನವರತ್ನರಾಮ್, ಎಚ್. ಜಿ ರಾಧಾದೇವಿ, ಅಶ್ವಿನಿ ಅವರ ಕಾದಂಬರಿಗಳನ್ನೆ. ನಂತರ ನಿಧಾನವಾಗಿ ತ್ರಿವೇಣಿ, ಎಂ.ಕೆ ಇಂದಿರಾ, ಈಚನೂರು ಶಾಂತಾ, ಈಚನೂರು ಜಯಲಕ್ಷ್ಮಿ ಇವರುಗಳ ಕಾದಂಬರಿಗಳು ನನಗೆ ಸಿಗತೊಡಗಿದವು. ಇವರೆಲ್ಲರ ಅನೇಕ ಕಾದಂಬರಿಗಳನ್ನು ನಾನು ವಾರಪತ್ರಿಕೆಗಳಲ್ಲಿ, ಪುಸ್ತಕ ರೂಪದಲ್ಲಿ ಓದಿದ್ದೆ. ಆಗೆಲ್ಲ ನನಗೆ ಅವೆಲ್ಲ ಅವುಗಳ ಕತೆಗಳಿಂದಾಗಿ ಇಷ್ಟವಾಗುತ್ತಿದ್ದವೇ ವಿನಹ ಯಾವುದೇ ತಂತ್ರಗಾರಿಕೆ, ಭಾಷಾ ಬಳಕೆ ಇತ್ಯಾದಿಗಳನ್ನು ಗಮನಿಸಬೇಕು ಎನ್ನುವುದು ತಿಳಿದಿರಲಿಲ್ಲ.

ಕಾದಂಬರಿಗಳಲ್ಲಿ ಬರುವ ಎಸ್ಟೇಟ್ ಚಿತ್ರಣ, ಮನೆ ಎದುರಿನ ಪೋರ್ಟಿಕೊ, ಅಲ್ಲಿ ಹಂಸದಂತೆ ತೇಲಿ ಬಂದು ನಿಲ್ಲುವ ಕಾರು, ನಾಯಕಿಯ ಉದ್ದನೆಯ ಜಡೆ, ಮುಡಿದ ಹೂವು, ಜರಿ ಅಂಚಿನ ಸೀರೆಗಳು, ನಾಯಕಿಯರು ಬಿಡುವಿನಲ್ಲಿ ಪುಸ್ತಕ ಹಿಡಿದು ಓದಲು ಕೂರುವುದು ಎಲ್ಲವೂ ನನ್ನೊಳಗೊಂದು ರಮ್ಯ, ಸುಂದರ ಲೋಕವನ್ನು ಸೃಷ್ಠಿಸಿದ್ದವು ಮತ್ತು ಆ ರಮ್ಯ ಲೋಕದಲ್ಲಿ ವಾಸನೆಗೆ ಜಾಗವೇ ಇರಲಿಲ್ಲ! ಆಗ ಬರುತ್ತಿದ್ದ ಸಿನಿಮಾಗಳಲ್ಲಿಯೂ ಕೂಡ ಗಂಡು ಹೆಣ್ಣಿನ ಮಿಲನದ ದೃಶ್ಯಗಳು ಹೂವಿಗೆ ಹೂವು ಮುತ್ತಿಡುವಂತೆಯೋ, ಹೂವಿನ ಮೇಲೆ ದುಂಬಿಯೋ ಚಿಟ್ಟೆಯೋ ಬಂದು ಕೂರುವುದರೊಂದಿಗೆ ಮುಗಿಯುತ್ತಿದ್ದವಾದ್ದರಿಂದ, ನಾನು ಹಾಗೆಂದರೇನು ಎಂದು ಅವುಗಳ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿರಲಿಲ್ಲವಾದ್ದರಿಂದ, ಈ ಕಾದಂಬರಿಗಳು ಮತ್ತು ಆ ಸಿನಿಮಾಗಳು ನನ್ನೊಳಗಿನ ಮುಗ್ಧತೆಯನ್ನು ಬಹುಕಾಲ ಕಾಪಾಡಿದವೆಂದೇ ಹೇಳಬೇಕು.

ನಾವು ದೋಟಿಹಾಳಕ್ಕೆ ಬಂದಾಗ ಅಪ್ಪ ಮನೆ ಮಾಡಿದ್ದು ಕೇಸೂರಿನಲ್ಲಿ. ಕೇಸೂರು ಮತ್ತು ದೋಟಿಹಾಳ ಎರಡೂ ಸಯಾಮಿ ಅವಳಿ ಊರುಗಳು. ಎರಡೂ ಊರುಗಳನ್ನು ಡಾಂಬರು ರಸ್ತೆಯೊಂದು ಅಂಟಿಸಿತ್ತು! ಇದು ನನಗೆ ಬಲು ಸೋಜಿಗದ ವಿಷಯವಾಗಿತ್ತು. ದೋಟಿಹಾಳದಲ್ಲಿ ಹೆಚ್ಚಿನ ಮನೆಗಳು ನೇಕಾರರವೇ ಆಗಿದ್ದರೆ ಕೇಸೂರಿನಲ್ಲಿ ಬೆರಳೆಣಿಕೆಯ ನೇಕಾರರು. ದೋಟಿಹಾಳದಲ್ಲಿ ಇಳಕಲ್ ಸೀರೆಗಳನ್ನು ನೇಯಲಾಗುತ್ತದೆ. ನೂಲು ತೆಗೆಯುವುದು, ಲಡಿ ಸುತ್ತುವುದು, ಹತ್ತಿ ಮತ್ತು ರೇಶಿಮೆ ನೂಲುಗಳಿಗೆ ಬಣ್ಣ ಹಾಕುವುದು, ಮಗ್ಗದ ಕುಣಿಯಲ್ಲಿ ಸಮನಾಗಿ ಒಂದು ಪದರಿನಲ್ಲಿ ಸರಿಯಾದ ಕಾಂಬಿನೇಶನ್ನಿನಲ್ಲಿ ಎಳೆದು ಕಟ್ಟಿದ ನೂಲುಗಳ ನಡುವೆ ಒಮ್ಮೆ ಅತ್ತ ಒಮ್ಮೆ ಇತ್ತ ಕಳಕ್ ಕಳಕ್ ಎಂದು ಓಡಾಡುವ ಲಾಳಿಯ ಸದ್ದು ಎಲ್ಲ ಓಣಿಗಳಲ್ಲೂ ಕೇಳಿ ಬರುತ್ತಿತ್ತು. ಆಗಿನ್ನೂ ಕೈಮಗ್ಗಗಳೇ ಇದ್ದವಲ್ಲಿ. ಈಗ ಹೇಗೋ ಗೊತ್ತಿಲ್ಲ.

ಅಪ್ಪಾರಿಗೆ ವರ್ಗಾ ಆದ ಹೊಸತರಲ್ಲಿ ದೋಟಿಹಾಳದಲ್ಲಿ ಟಾಯ್ಲೆಟ್ ಇರುವ ಮನೆಗಳು ಬಾಡಿಗೆಗೆ ಇರಲಿಲ್ಲವಾಗಿ, ಕೇಸೂರಿನಲ್ಲಿ ಟಾಯ್ಲೆಟ್ ಸೌಲಭ್ಯವಿದ್ದ ಮನೆ ಸಿಕ್ಕು ಅಲ್ಲಿ ಮನೆ ಮಾಡಿದ್ದರು. ಆದರೆ ಆ ಊರಿಗೆ ಆಗಿನ್ನೂ ಕರೆಂಟ್ ಬಂದಿರಲಿಲ್ಲ. ದೋಟಿಹಾಳದಲ್ಲಿ ಕರೆಂಟಿತ್ತು. ಅಷ್ಟು ವರ್ಷಗಳ ಕಾಲ ವಿದ್ಯುಚ್ಛಕ್ತಿಯ ಬೆಳಕಲ್ಲೇ ಬೆಳೆದ ನಮಗೆಲ್ಲ ಒಂಥರಾ ಎಲ್ಲೋ ಕುಗ್ರಾಮವೊಂದಕ್ಕೆ ಬಂದು ಸಿಕ್ಕಿಹಾಕಿಕೊಂಡಂತೆ ಅನಿಸುತ್ತಿತ್ತು. ಕೇಸೂರಿನ ಮನೆ ಹಳ್ಳಿಗಳಲ್ಲಿರುವಂಥ ಮನೆಯೇ ಆದರೂ ವಿಶಾಲವಾಗಿತ್ತು ಮತ್ತು ಅಪ್ಪ, ಅವ್ವ ನಾವು ೮ ಜನ ಮಕ್ಕಳ ವಾಸಕ್ಕೆ ಸರಿಯಾಗಿತ್ತು. ನಾವಿದ್ದ ಆ ಮನೆಗೆ ಅಂಟಿಕೊಂಡಂತೆಯೇ ಇರುವ ಮನೆಯಲ್ಲಿ ಒಬ್ಬ ತಾಯಿ ತನ್ನ ಮೂರು ಜನ ಹೆಣ್ಣುಮಕ್ಕಳೊಡನೆ ವಾಸವಾಗಿದ್ದಳು.

ಆ ಮನೆಯಲ್ಲಿ ಒಬ್ಬ ಪುರುಷನೂ ವಾಸವಾಗಿದ್ದಾನೆ ಎನ್ನುವುದು ತುಂಬಾ ದಿನಗಳ ನಂತರ ತಿಳಿಯಿತು ನಮಗೆ. ನಮ್ಮ ಮನೆಯ ಮಾಳಿಗೆ ಏರಿದರೆ ಅವರ ಮನೆಯ ಹಿತ್ತಲಲ್ಲಿ ನಡೆವ ವಿದ್ಯಮಾನಗಳನ್ನು ಯಾರೂ ನೋಡಬಹುದಾಗಿತ್ತು. ನಮ್ಮ ಉತ್ತರ ಕರ್ನಾಟಕದಲ್ಲಿ ಹಿತ್ತಲೆಂದರೆ ಮನೆಯ ಹಿಂಭಾಗದಲ್ಲಿನ ಅಂಗಳ. ಮಲೆನಾಡು, ಕರಾವಳಿ ಭಾಗದಲೆಲ್ಲ ಹಿತ್ತೆಲೆಂದರೆ ಮನೆಯದುರಿನ ಅಂಗಳವೂ ಹೌದಾದ್ದರಿಂದ ಈ ವಿವರಣೆ. ನಮ್ಮನೆಯ ಎಡದಲ್ಲಿ ನಾಲ್ಕು ರಸ್ತೆಗಳು ಸೇರುವ ಇಕ್ಕಟ್ಟಾದ ಜಾಗವಿದ್ದು ಅಲ್ಲಿ ಐನೋರ ಮನೆಯೊಂದಿತ್ತು ಅದು ನಾವುಗಳಿದ್ದ ಮನೆಗಿಂತಲೂ ದೊಡ್ಡದಾಗಿತ್ತು. ನಾವಿದ್ದ ಮನೆಯ ಹಿಂಬದಿಯ ರಸ್ತೆಯಲ್ಲಿ ಗೋತಗಿಯವರ ಮನೆಯಿತ್ತು. ಅವರ ಕಿರಾಣಿ ಅಂಗಡಿ ಈ ಅವಳಿ ಊರುಗಳು ಮತ್ತು ಸುತ್ತಲ ಹತ್ತು ಹಳ್ಳಿಗಳಿಗೇ ದೊಡ್ಡ ದಿನಸಿ ಅಂಗಡಿ. ಗೋತಗಿಯವರ ಶ್ರೀಮತಿ ದಾವಣಗೆರೆಯವರಾಗಿದ್ದರಿಂದ, ನನ್ನ ತಾಯಿಯ ಪಿಯೂಸಿ ದಾವಣಗೆರೆಯಲ್ಲೇ ಆಗಿದ್ದ ಕಾರಣ ಅವ್ವ ಮತ್ತು ಅವರ ನಡುವೆ ಬೇಗನೇ ದೋಸ್ತಿ ಬೆಳೆಯಿತು.

ಹೀಗಾಗಿ ಅವರ ಮಗಳು ರೇಣುಕಾ ನನ್ನ ಗೆಳತಿಯಾದಳು. ಆ ಊರಿಗೆ ಬಂದ ಸ್ವಲ್ಪ ದಿನಗಳಲ್ಲೇ ಶ್ರಾವಣ ಕಾಲಿಟ್ಟಿತ್ತು. ಊರ ತುಂಬೆಲ್ಲಾ ಅನೇಕ ಮನೆಗಳಲ್ಲಿ, ಸಣ್ಣ ದೊಡ್ಡ ಮರಗಳಲ್ಲಿ ಜೋಕಾಲಿಗಳ ಸಡಗರ. ಮರಗಳಿಗೆ ಕಟ್ಟಿದ ಎಲ್ಲ ಜೋಕಾಲಿಗಳಲ್ಲೂ ಕೂರಬೇಕೆಂಬ ಹುಚ್ಚು ಹಂಬಲ ಮಕ್ಕಳದ್ದು. ದೊಡ್ಡವರು ಕೂರಿಸಿ ನಾಲ್ಕು ಜೀಕು ತೂಗಿದಂತೆ ಮಾಡಿ ಕೆಳಗಿಳಿಸಿ ಅಟ್ಟುತ್ತಿದ್ದುದೇ ಹೆಚ್ಚು. ಮುಂದೆ ಗೌರಿ ಹುಣ್ಣಿಮೆ, ಶೀಗಿ ಹುಣ್ಣಿಮೆಗಳಲ್ಲಿ ಅಲ್ಲಿನ ಹೆಣ್ಣುಮಕ್ಕಳೆಲ್ಲ ೧೫ ದಿನಗಳ ಕಾಲ ಮನೆಯಲ್ಲಿ (ಮರದಿಂದ ಮಾಡಿದ್ದು) ಕೂರಿಸಿ ಪೂಜಿಸಿದ್ದ ಗೌರಿ/ಶೀಗಿಯರಿಗೆ ಸಂಜೆ ದೀಪ ಮುಡಿಸುವ ವೇಳೆಗೆ ಅರಿಶಿನ ಕುಂಕುಮ, ಅವರೇಹೂವಿನ ಅಲಂಕಾರ ಮಾಡಿ, ದೀಪದ ಆರತಿ, ಸಕ್ಕರೆಯಚ್ಚಿನ ಆರತಿಗಳೊಂದಿಗೆ ಊರಾಚೆ ಇರುವ ದೊಡ್ಡ ಮರದ ಕೆಳಗೆ ಸೇರುತ್ತಿದ್ದರು.

ಅಲ್ಲೊಂದು ದೇವಿಯ ಪುಟ್ಟ ಮಂದಿರ. ಅಲ್ಲಿ ಪೂಜೆಗಳೆಲ್ಲ ಆದ ನಂತರ ಪೈಪೋಟಿ ಎಂಬಂತೆ ಗೌರಿಯ ಮೇಲೆ ಶೀಗಿಯ ಮೇಲೆ ಹಾಡುಗಳು. ನಂತರ ಸಕ್ಕಾಸರಗಿ, ಕುಂಟುಮುಟ್ಟಾಟದಂತಹ ಹೆಣ್ಣುಮಕ್ಕಳ ಆಟಗಳು. ಜಗತ್ತಿನ ಸಂಭ್ರಮವೆಲ್ಲ ಅಲ್ಲೇ ಸುರಿಯಲ್ಪಟ್ಟಿದೆ ಏನೋ ಎಂಬಂತೆ ಎತ್ತ ನೋಡಿದರತ್ತ ಖುಷಿ ನಗು ತಮಾಷೆ. ಕೊನೆಗೆ ತಾವು ತಂದ ಊಟವನ್ನ ಹಂಚಿ ಉಂಡು ಮನೆಗೆ ತೆರಳುತ್ತಿದ್ದರು. ಒಂದೇ ಒಂದು ಸಲ ಈ ಸಂಭ್ರಮದಲ್ಲಿ ನಾನು ರೇಣುಕಾಳೊಡನೆ ಪಾಲ್ಗೊಂಡಿದ್ದೆನಾದರೂ ಅಂದಿನ ಸಂಭ್ರಮದ ನೆನಪು ಅಚ್ಚಳಿಯದಂತೆ ಮನದಲ್ಲುಳಿದಿದೆ.

ನಾನಾಗ ಆರನೇ ತರಗತಿಯಲ್ಲಿದ್ದು ವಾರ್ಷಿಕ ಪರೀಕ್ಷೆಗಳಿಗೆ ತಿಂಗಳೆರಡು ಬಾಕಿ ಇತ್ತು. ಅಂದು ಅವಧೂತ ಶುಕಮುನಿಯ ಜಾತ್ರೆ ಇತ್ತು. ಪ್ರತಿ ವರ್ಷ ಶಿವರಾತ್ರಿಗೆ ಶುಕಮುನಿಯ ತಾತನ ಜಾತ್ರೆ. ಅದಕ್ಕೂ ಒಂದು ವಾರ ಮೊದಲಿಂದ ಪಲ್ಲಕ್ಕಿ ಉತ್ಸವ ಶುರುವಾಗಿದ್ದು ಜಾತ್ರೆಯ ದಿನ ಅಂತ್ಯಗೊಳ್ಳುತ್ತದೆ.

ಮೊದಲ ಬಾರಿ ಈ ಪಲ್ಲಕ್ಕಿ ಉತ್ಸವದ ಬಗ್ಗೆ ಕೇಳಿದ್ದೆನಾದ್ದರಿಂದ ನೋಡುವ ಉತ್ಸುಕತೆ ನನ್ನಲ್ಲಿ. ಅಪ್ಪ ಅವ್ವ ಪರವಾನಿಗಿ ಕೊಟ್ಟರು. ಪಕ್ಕದ ಮನೆಯಲ್ಲಿ ಹೆಣ್ಣುಮಕ್ಕಳಿದ್ದರು ಎಂದೆನಲ್ಲ, ಅವರಲ್ಲಿ ಚಿಕ್ಕವಳು ಶಾಂತಾ ನನಗಿಂತ ೩-೪ ವರ್ಷ ದೊಡ್ಡವಳು. ಅವಳಲ್ಲಿ ಹೋಗೋಣ್ವಾ ಎಂದು ಕೇಳಿದೆ. ಆಕೆ ಒಪ್ಪಿಕೊಂಡು ಸೀರೆ ಉಟ್ಕೊಳ್ಳೋಣ ಅಂದಳು. ನನಗೋ ಸೀರೆ ಉಡಲು ಬರದು. ಆಕೆಯೇ ಉಡಿಸುವುದಾಗಿ ತಿಳಿಸಿದಳು, ಒಪ್ಪಿದೆ. ನನ್ನ ಅವ್ವ ಉಡಲು ಅವಳಿಗೆ ತನ್ನ ಸೀರೆ ಕೊಟ್ಟರು. ಅವಳು ನನಗೆ ತನ್ನ ಸೀರೆಯೊಂದನ್ನು ಉಡಿಸಿದಳು. ಹೆಚ್ಚು ಎತ್ತರವಿಲ್ಲದಿದ್ದರೂ ಶಾಂತಾ ಹಾಲು ಬಣ್ಣದ ಚಲುವೆ. ಅವಳು ಮುಂದೆಲೆಯ ಸ್ವಲ್ಪ ಕೂದಲನ್ನು ಎರಡೂ ಬದಿಯಲ್ಲಿ ಕತ್ತರಿಸಿಕೊಂಡು ಮುಂಗುರುಳು ಮಾಡಿಕೊಂಡಿದ್ದಳು. ಅವಳ ಮುಖದ ಮೇಲೆ ಆಗಾಗ ಓಲಾಡುವ ಆ ಮುಂಗುರುಳು ನನ್ನನ್ನು ಆಕರ್ಷಿಸಿತ್ತು.

ಆಸೆಯಿಂದ ಹೇಗೆ ಮಾಡಿಕೊಂಡೆ ಎಂದವಳನ್ನು ಕೇಳಿದೆ. ಬ್ಲೇಡ್ ತೆಗೆದುಕೊಂಡು ಕತ್ತರಿಸಿ, ಕತ್ತರಿಸಿದ ಕೂದಲಿಗೆ ನೀರು ಹಚ್ಚಿ, ಬೆರಳಲ್ಲಿ ಸುತ್ತಿ ಸುರಳಿ ಮಾಡಿ ಸ್ವಲ್ಪ ಹೊತ್ತು ಹಾಗೇ ಹಿಡಿದಿಟ್ಟು ಬಿಟ್ಟಲ್ಲಿ ತನ್ನಂತೆ ಮುಂಗುರುಳು ಆಗುತ್ತವೆ ಎಂದಳು. ನಾನೂ ಹಾಗೆ ಮಾಡಿಕೊಳ್ಳುವುದೇ ಸೈ ಎಂದು ನಿರ್ಧರಿಸಿ, ಬಲು ಖುಷಿಯಿಂದ ಅವಳೊಡನೆ ಹೊರಟು, ಗೋತಗಿಯವರ ಮನೆಯ ಎದುರಿನ ಮನೆಯ ಕಟ್ಟೆಯ ಮೇಲೆ, ಆ ದಾರಿಗುಂಟ ಹಾಯ್ದು ಹೋಗುವ ಪಲ್ಲಕ್ಕಿಗಾಗಿ ಕಾಯುತ್ತಾ ನಿಂತೆ. ರೇಣುಕಾ ಕೂಡ ನಮ್ಮ ಜೊತೆಗಿದ್ದಳು. ಎಲ್ಲರ ಮನೆಗಳ ಮುಂದೆಯೂ ದೊಡ್ಡ ದೊಡ್ಡ ರಂಗೋಲಿ ಹಾಕಲಾಗಿತ್ತು. ಮನೆಗಳ ಕಟ್ಟೆಯ ಮೇಲೆ ಕಂಬಳಿ ಹಾಸಿ, ತುಂಬಿದ ಕೊಡವೊಂದನ್ನು ಇಟ್ಟಿದ್ದರು. ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆಯೇ, ಕೊಡದಲ್ಲಿನ ನೀರನ್ನು ಆ ದಾರಿಯಲ್ಲಿ ಸುರಿದು ಬರ ಮಾಡಿಕೊಳ್ಳುತ್ತಿದ್ದರು. ಪ್ರತಿಯೊಬ್ಬರಿಗೂ ತಮ್ಮ ಮನೆಗೆ ಪಲ್ಲಕ್ಕಿ ಬಂದು ಕೂರಬೇಕೆಂಬ ಹಂಬಲ. ಆದರೆ ಹಾಗಾಗುತ್ತಿರಲಿಲ್ಲ. ಇಂಥದ್ದೇ ಮನೆಗೆ ಪಲ್ಲಕ್ಕಿ ಬಂದು ಕೂರಲಿದೆ ಎಂಬ ಯಾವ ನಿಶ್ಚಯವೂ ಇರುತ್ತಿರಲಿಲ್ಲವಾಗಿ ಜನರಲ್ಲಿ ಅಪಾರ ಕುತೂಹಲ. ತಮ್ಮ ಮನೆಗೆ ಪಲ್ಲಕ್ಕಿ ಬಂದಿತೆಂದರೆ ಆ ಮನೆಯವ ಸಂಭ್ರಮ ಹೇಳತೀರದು. ಧನ್ಯತೆ ಅವರೆಲ್ಲರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಪಲ್ಲಕ್ಕಿ ಬಂದು ಸಮಾಧಾನದಿಂದ ಕುಳಿತೋ ಇಲ್ಲವೆ ನಿಂತೇ ಪೂಜೆ ಮಾಡಿಸಿಕೊಂಡು ಹೋದರೆ ಶುಭ ಅಂತಲೂ, ಬಂದ ಪಲ್ಲಕ್ಕಿ ಮನೆಯ ಗೋಡೆಗೆ ಇಲ್ಲಾ ಬಾಗಿಲಿಗೆ ಗುದ್ದಿ ಹೋದರೆ ಅಶುಭ ಅಂತಲೂ, ಆ ವರ್ಷ ಆ ಮನೆಯಲ್ಲಿ ಸಾವೋ ನೋವೋ ನಿಶ್ಚಿತ ಎಂಬ ನಂಬಿಕೆ ಇದೆ ಅಲ್ಲಿ. ಹೀಗಾಗಿ ಪಲ್ಲಕ್ಕಿ ಬಂದು ಹೋಗುವವರೆಗೆ ಎಲ್ಲರ ಮನದಲ್ಲಿ ಆತಂಕವೂ ಇರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಗೋತಗಿಯವರ ಮನೆಯ ಕಟ್ಟೆಯ ಮೇಲೆ ಕುಳಿತಾಗ ರೇಣುಕಾ ಟಣ್ಣನೆ ಜಿಗಿದು ತಮ್ಮ ಮನೆಗೆ ಓಡಿದಳು. ಅವಳೊಡನೆ ಹೊರಟು ನಿಂತ ನನ್ನನ್ನು ಶಾಂತಾ ತಡೆದು ನಿಲ್ಲಿಸಿದಳು. ನನಗೋ ಪಲ್ಲಕ್ಕಿಯನ್ನು ಹತ್ತಿರದಿಂದ ನೋಡಬೇಕೆನ್ನುವ ಚಡಪಡಿಕೆ. ಶಾಂತಾ ಹೋಗಲು ಬಿಡುತ್ತಿಲ್ಲ. ಪಲ್ಲಕ್ಕಿ ಮುಂದೆ ನಡೆದ ನಂತರ ಅವರ ಮನೆಗೆ ಬಂದ ನನ್ನನ್ನು ಕಂಡು ರೇಣುಕಾರ ತಾಯಿ ಅಕ್ಕರೆಯಿಂದ,
“ಎದ್ರಿಗೇ ತಾತನ ಪಲ್ಲಕ್ಕಿತ್ತು. ಬಂದು ಸನಮಾಡಬಾರ್ದಿತ್ತಾ? ಅಕಿ ಜತಿಗೆ ಅಲ್ಲೇ ಯಾಕ ನಿಂತಿ?” ಸಣ್ಣಗೆ ಗದರಿದರು.

ನಾನೆಷ್ಟು ಕರೆದರೂ ಶಾಂತಾ ರೇಣುಕಾರ ಮನೆಯೊಳಗೆ ಬರದೆ ಹೊರಗೇ ನನಗಾಗಿ ಕಾಯುತ್ತಾ ನಿಂತಿದ್ದಳು. ಆ ಮನೆಯವರೂ ಆಕೆಯನ್ನು ಮನೆಯೊಳಗೆ ಕರೆಯಲಿಲ್ಲ. ರೇಣುಕಾರ ತಾಯಿಯ ವರ್ತನೆಯಿಂದ ಆಕೆ ಅವರ ಮನೆಯೊಳಗೆ ಬರುವುದು ಅವರಿಗಿಷ್ಟವಿಲ್ಲ ಎನ್ನುವುದು ಒಡೆದು ತೋರುತ್ತಿತ್ತು. ಹಾಗೆ ಮಾಡಬಾರದು, ಪಾಪ ಅದರಿಂದ ಶಾಂತಾಗೆ ನೋವಾಗುತ್ತದೆ ಅನ್ನುವುದು ದೊಡ್ಡವರಾದ ಅವರಿಗೆ ತಿಳಿಯುವುದಿಲ್ಲವೇ ಎಂದೆನಿಸಿತು ನನಗೆ. ಆದರೆ ಶಾಂತಾ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳದೆ ನಿರಾಳವಾಗಿದ್ದಳು. ಇಬ್ಬರೂ ಮನೆಗೆ ಮರಳಿದೆವು.

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ. ನಡಿ ಒಳಗ ಅಂದ್ರು. ಮನೆ ಒಳಗೇ ಇದ್ದ ನನಗೆ ತಿಳಿಯದೇ ಅಪ್ಪರ ಮುಖ ನೋಡುತ್ತಾ ನಿಂತೆ. ಅಡುಗೆ ಮನೆಗೆ ಕೈ ಹಿಡಿದು ಕರೆ ತಂದವರೇ ಅಲ್ಲಿದ್ದ ಒಡಗಟ್ಟಿಗೆ ಒಂದನ್ನು ಹಿರಿದೆಳೆದು ಎರಡು ಬಿಟ್ಟರು ನನಗೆ. ಕಾರಣ ತಿಳಿಯದೇ ಕಂಗಾಲಾಗಿದ್ದೆ ನಾನು.

“ಚೋಟದಿ. ಫ್ಯಾಶನ್ ಮಾಡ್ತೀ ಫ್ಯಾಶನ್ನು? ಅದೂ ಆ ಶಾಂತಾನ್ನ ನೋಡಿ! ಮನಿ ಮರ್ಯಾದಿ ಮಣ್ಣಪಾಲು ಮಾಡಬೇಕಂತಿ ಮಾಡಿ ಏನು?” ಎನ್ನುತ್ತಾ, ಎರಡೂ ಕೈ ಮೇಲೆತ್ತಿ, ಒಂಟಿಗಾಲಲ್ಲಿ ನಿಲ್ಲಲು ಹೇಳಿದರು. ನನ್ನ ತಮ್ಮ ತಂಗಿಯರಿಗೆಲ್ಲ ನಾನು ಹಾಗೆ ಒಂಟಿಗಾಲಲ್ಲಿ ನಿಂತಿದ್ದು ಮೋಜು. ನಗುವನ್ನು ತಡೆಹಿಡಿದುಕೊಳ್ಳುವ ಪ್ರಯತ್ನದಲ್ಲಿ ಯಾರೋ ಕಿಸಕ್ ಅಂದಿದ್ದೂ ಕೇಳಿಸಿತು. ಸಿಟ್ಟಿನಲ್ಲಿದ್ದ ಅಪ್ಪಾ ಅವರನ್ನೂ ಗದರಿದರು. ಚಿಳ್ಳೆಗಳು ಬಾಲ ಮುದುರಿಕೊಂಡು ಸುಮ್ಮನಾದವು. ನಾನು ಒಳಗೊಳಗೇ ಉರಿಯುತ್ತಿದ್ದೆ.

ಅಪ್ಪಾ ಹಾಗೆ ಸಿಟ್ಟಿಗೇಳಲು ಕಾರಣವಿತ್ತು ಎನ್ನುವುದು ನಂತರ ಗೊತ್ತಾಯಿತು. ಅಂದು ನಾನು ಶಾಂತಾನ ಜೊತೆಯಲ್ಲಿ, ಅವಳ ಸೀರೆಯುಟ್ಟು ನಿಂತಿದ್ದನ್ನ ಕಂಡವರ್ಯಾರೋ ಅಪ್ಪಾರ ಬಳಿ ಶಾಂತಾಳ ಕುಲಕಸುಬನ್ನು ತಿಳಿಸಿದ್ದರು. ನಮ್ಮ ಪಕ್ಕದ ಮನೆಯವರಾದ ಆ ತಾಯಿ ಮತ್ತು ಮಕ್ಕಳು ಮೈ ಮಾರಿಕೊಳ್ಳುವ ವೃತ್ತಿಯಲ್ಲಿದ್ದರು! ಅದನ್ನು ಕೇಳಿದ ಅಪ್ಪಾ ನನ್ನ ಮುಂಗುರುಳ ಪ್ರಯೋಗವನ್ನು ಕಂಡು ಸಹಜವಾಗಿಯೇ ಹೆದರಿದ್ದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: