ಜಯರಾಮಾಚಾರಿ
**
ಮನೆಗೆ ತಡರಾತ್ರಿ ಬಂದಾಗ ಜೋರು ಮಳೆ
ಕೈಯಲ್ಲಿಡಿದ ಛತ್ರಿ ಮಾಡಿಸಿ ಬಾಗಿಲ ಬಳಿ ನಿಂತಾಗ
ಬೆಚ್ಚಿಬಿದ್ದೆ.
ಬಾಗಿಲುಗಳು ತೆರೆದಿವೆ,
ಕಿಟಕಿಗಳು ಬೆತ್ತಲಾಗಿ ಅಲ್ಲಾಡುತ್ತಿವೆ,
ನಡುಮನೆಯಲ್ಲಿ ನೀರು ತುಂಬಿ ಕೂತಿದೆ,
ಅಡುಗೆಮನೆಯಲ್ಲಿ ಗ್ಯಾಸ್ ಲೀಕ್ ಆದ ವಾಸನೆ,
ನೆನ್ನೆ ಸಂಜೆ ಅಡಗಿಸಿಟ್ಟ ನೂರು ರೂಪಾಯಿ ನೋಟು
ಕಾಫಿ ಡಬ್ಬದಿಂದ ಕೆಳಗೆ ಬಿದ್ದು ದೋಣಿಯಂತೆ ತೇಲುತ್ತಿದೆ
ರೂಮಿನಲ್ಲಿ ಸೀರೆ ಲಂಗ ಬ್ಲೌಸ್ ಎಲ್ಲ ಕೆಳಗೆ ಬಿದ್ದು ರದ್ದಿ
ಲಾಕರ್ ಕೂಡ ಹೊಡೆದಿದೆ
ಗೋಡೆಗೆ ನೇತು ಹಾಕಿದ ಸತ್ತ ತಾಯಿಯ ಫೋಟೋ ವಾಲಿದೆ
ಗಂಧದ ದಾರ ಎಲ್ಲೋಯ್ತು?
ಗಾಜು ಕೂಡ ಹೊಡೆದಿದೆ
ಬಚ್ಚಲಿನಲ್ಲಿ ಬಕೇಟು ತುಂಬಿ ಹರಿದಿದೆ ನೀರು
ಆನ್ ಆಗಿದೆ ಗೀಸರು
ಆಗಷ್ಟೇ ಶಾಂಪೂ ಬಳಸಿರೋ ಅನುಮಾನ
ಸೋಪಿನ ಮೇಲೆ ನೊರೆ ಇನ್ನೂ ಹಸಿಹಸಿ
ಫ್ಲಶ್ ಬೆಳಗ್ಗೆ ಮಾಡಿದ್ದೇನಲ್ಲ
ಏನದು ಗಲೀಜು?
ಸುಮ್ಮನಿದ್ದರೆ ತಲೆನೋವು ಎಲ್ಲ ಸರಿಮಾಡಲೆಬೇಕೀಗ
ತೊಡೆಯವರೆಗೂ ಸೀರೆ ಎತ್ತಿ ಕಟ್ಟಿ ಕೈಯಲ್ಲಿ
ಕಸಪೊರಕೆ ಹಿಡಿದು
ನಡುಮನೆಗೆ ಬಂದೆ
ಹೋದವಾರ ಒಳ್ಳೆ ಫ್ರೆಂಡು ಎಂದು ಕರೆದುಕೊಂಡು ಬಂದ
ಗಂಡನ ಗ್ಯಾಂಗು
ಸಿಗರೇಟಿನ ಕೆಟ್ಟ ವಾಸನೆ
ಅಡುಗೆಮನೆಯಲ್ಲಿ ಪಕ್ಕದ ಮನೆಯವಳು
ಹೋದ ಸಲದಂತೆ ಈಗಲೂ ಗ್ಯಾಸ್ ಪಕ್ಕ ಕೂತು
ನೋಡಿ ನಗುತಿದ್ದಾಳೆ
ಹೋದ ಸಲದಂತೆ
ತನ್ನ ಗಂಡನ ನಿಮಿರುವಿಕೆ ಸಮಸ್ಯೆ ಕೂಡ ಹೇಳದೆ
ರೂಮಿನಲ್ಲಿ
ಕಳೆದು ಹೋದ ಕಳ್ಳಬೆಕ್ಕು ಮತ್ತೆ ಕೂತಿದೆ,
ಬೀದಿಯಲ್ಲಿ ಒಣಕಲು ಆಗಿ
ನಡುರಾತ್ರಿಯಲ್ಲಿ ಊಟ ಸಿಗದೇ ಥೇಟು ಮಗುವಿನಂತೆ ಕೂಗಿದ ಬೆಕ್ಕು
ಎದೆ ನಡುಗಿ
ಹಾಲು ಹುಡುಕಿ
ಕರೆದು ಕೊಟ್ಟಿದ್ದೆ..ಪಿಸ್ಸ್ಸ್ ಪ್ಸ್ಸ್ಸ್ ಎಂದು
ಈಗ ಧಡೂತಿಯಾಗಿದೆ.
ಓ ಈಗ ಅರ್ಥವಾಯ್ತು
ಇವರೆನ್ನೆಲ್ಲ ಸುಮ್ಮನೆ ಮನೆಗೆ ಕರೆದುಕೊಂಡು ಬಂದಿದ್ದೆ ತಪ್ಪಾಯ್ತು
ಗಂಡನ ಸ್ನೇಹಿತರ ದಂಡಿಗೆ
ನೆಂಚಿಕೊಳ್ಳಲು ಉಪ್ಪಿನಕಾಯಿ ಕಬಾಬು ಕೊಡಬಾರದಿತ್ತು
ಮುಸ್ಸಂಜೆಯಲ್ಲಿ ಬಂದು
ಗಂಡನ ಹಪಹಪಿತನ ಆಡಿಕೊಳ್ಳುವ ಪಕ್ಕದ ಮನೆಯವಳನ್ನು
ಸ್ಟವ್ ಪಕ್ಕದ ಜಾಗದಲ್ಲಿ ಕಾಲು ಆಡಿಸುತ್ತಾ ಕೂರಲು ಬಿಡಬಾರದಿತ್ತು
ಎಲ್ಲಕ್ಕಿಂತ
ಮಗುವಿನ ಧ್ವನಿಯಲ್ಲಿ ವರಾಂಡದಲ್ಲಿ
ಮಧ್ಯರಾತ್ರಿ ಕರೆದ ಕಳ್ಳ ಬೆಕ್ಕಿಗೆ
ಹಾಲು ಇಕ್ಕಬಾರದಿತ್ತು
ಕಸಪೊರಕೆಯಲ್ಲಿ ಒಬ್ಬೊಬ್ಬರನ್ನು ಬಡಿದು
ದಬ್ಬಿ ಗೇಟು ಆಚೆ ನೂಕಿ
ಗೇಟು ಹಾಕಿದೆ.
ಅವರು ತಿರುಗಿ ನೋಡದೆ ಪಕ್ಕದ ಮನೆಯ ಒಳಗೆ ನುಗ್ಗುತ್ತಿದ್ದಾರೆ.
ಮನೆಗೆ ಬಂದು ಕಿಟಕಿ ಮುಚ್ಚಿದೆ
ಬಾಗಿಲು ಮುಚ್ಚಿದೆ
ಈಗ ಎಲ್ಲವೂ ಮೊದಲಿನಂತೆ ಇದೆ
ಕಳ್ಳಬೆಕ್ಕುವಿನ ಮಗುವಿನಂಥ ಧ್ವನಿ ಪಕ್ಕದ ಮನೆಯವಳಿಗೆ
ಕೇಳಿದೆ
0 ಪ್ರತಿಕ್ರಿಯೆಗಳು