ಜಯರಾಮಚಾರಿ ಕಥೆ – ಡರ್ಟಿ ಟಾಕ್…

ಜಯರಾಮಚಾರಿ

‘ಯುವರ್ ಟೆಕ್ಸ್ಟ್ ಆರ್ ವರ್ಚುಯಲ್ ಇಂಟರ್ ಕೋರ್ಸ್ ಕಣೋ ಎಂದು ನಕ್ಕಳು’

ನಾನು ಕಣ್ಣು ಹೊಡೆವ ಇಮೊಜಿ ಕಳಿಸಿದೆ, ಅವಳು ಮುತ್ತುಗಳ ಇಮೊಜಿ ಕಳಿಸಿದಳು, ‘ಟ್ರೈ ಮಾಡೋಣ್ವಾ?’ ಎಂದು ಕಳಿಸಿದೆ, ಅವಳು ಟೈಪಿಸುತ್ತಿದ್ದಾಗಲೇ ಸೆಕ್ಯೂರಿಟಿ ಸೂಪ್ರವೈಸರ್ ಆ ಹುಡುಗನನನ್ನು ಎಳೆದುಕೊಂಡು ಬಂದು ನನ್ನ ಎದುರು ನಿಂತ, ನಾನು ಟಕ್ಕನೆ ನನ್ನ ಮೊಬೈಲ್ ಸ್ಕ್ರೀನ್ ಆಫ್ ಮಾಡಿ ಅವನತ್ತ ಅಧಿಕಾರಯುತ ಪ್ರಶ್ನಾರ್ಥಕ ಲುಕ್ ಕೊಟ್ಟೆ, ಅವನಿಗೆ ಅದು ಅರ್ಥವಾಗಿ ‘ಸರ್ ಈ ಹುಡುಗ ಬಾತ್ ರೂಮಲ್ಲಿ ಸಿಕ್ಕಿಹಾಕೊಂಡ, ಒಳಗೇನೇ ಇದ್ದ ಲಾಕ್ ಮಾಡ್ಕೊಂಡಿದ್ದ’ ಎಂದ, ಅವನ ಮಾತಿನಿಂದ ನನಗೆ ಏನು ಗೊತ್ತಾಗದೆ ಮತ್ತೆ ‘ಏನು’ ಎಂದೆ, ಅವನು ಮತ್ತೆ ಅದನ್ನೇ ಸ್ವಲ್ಪ ಎಳೆದು ಹೇಳಿದ ‘ಸರ್ ಈ ಹುಡುಗ ಬಾತ್ ರೂಮ್ ಒಳಗೆ ಹೋಗಿ ಲಾಕ್ ಮಾಡ್ಕೊಂಡಿದ್ದ, ಬಾಗಿಲು ತೆಗಿಲೇ ಇಲ್ಲ, ಆಮೇಲೆ ಬಾಗಿಲು ಬಡಿದು ಎಳ್ಕೊಂಡ್ ಬಂದೆ’ ಅಂದ.

ಸ್ವಲ್ಪ ವಿಷಯ ಗೊತ್ತಾಯ್ತು ಆದರೂ ಪೂರ್ತಿ ಅವನು ಏನು ಹೇಳುತ್ತಿದ್ದಾನೆ ಗೊತ್ತಾಗಲೇ ಇಲ್ಲ, ಆ ಹುಡುಗ ಸಿಕ್ಕಿಹಾಕಿಕೊಂಡಿದ್ದು ರೆಸ್ಟ್ ರೂಮಿನಲ್ಲಿ, ಮಾಲ್ ನಲ್ಲಿ ಬೆಳ್ ಬೆಳಗ್ಗೆ ಜನ ಕಮ್ಮಿ ಅದರಲ್ಲೂ ವಾರದ ದಿನಗಳಲ್ಲಿ ಕಮ್ಮಿ, ಅಂತಹ ಸಮಯ ನೋಡಿಕೊಂಡು ಕಾಲೇಜಿನ ಹುಡುಗರು ಹುಡುಗಿಯರ ಜೊತೆ ಬಂದು ಸ್ವಲ್ಪ ಹೊತ್ತು ಹೊಂಚು ಹಾಕಿ ಹುಡುಗರ ರೆಸ್ಟ್’ರೂಮಿಗೋ ಇಲ್ಲ ಹುಡುಗಿಯರ ರೆಸ್ಟ್ ರೂಮಿಗೋ ಹೋಗಿ ತಮ್ಮ ಪ್ರೈವಸಿ ಸಮಯ ಹಂಚಿಕೊಳ್ಳುವುದು ಆಗಾಗ್ಗೆ ನಡೆಯುತ್ತದೆ, ಆದರೆ ಮಾಲ್ ಎಂದ ಮೇಲೆ ಅಲ್ಲಿ ಸಿಸಿಟಿವಿ ಇದ್ದೆ ಇರುತ್ತೆ ಅನ್ನೋ ಪರಿಜ್ಞಾನ ಆ ಕ್ಷಣದ ರೋಚಕತೆಗೆ ಅವರಿಗೆ ಗೊತ್ತಾಗಿರುವುದಿಲ್ಲ, ಅವರು ಕ್ಯಾಮೆರಾ ಮುಂದೆ ಆಡುವ ನಾಟಕ, ಹೊಂಚುವಿಕೆ ಎಲ್ಲವನ್ನ ಸರ್ವಲೈನ್ಸ್ ಅವರು ನೋಡುತ್ತಾ ಕೂತಿರುತ್ತಾರೆ, ಅಲ್ಲಿ ಕ್ಯಾಮೆರಾ ಮುಂದೆ ಜನ ಬಾರದ ಜಾಗದಲ್ಲಿ ಈ ತರ ಕಾಲೇಜು ಹುಡುಗರ ಬಾಡಿ ಲ್ಯಾಂಗ್ವೇಜ್ ನಲ್ಲೆ ಅವರ ಸ್ಥಿತಿ ಗೊತ್ತಾಗಿರುತ್ತೆ, ಯಾವಾಗ ತಮ್ಮ ಸಂಗಾತಿ ಜೊತೆ ಅವರು ಅವಸರದಲ್ಲಿ ಒಂದೇ ರೆಸ್ಟ್’ರೂಮಿಗೆ ಹೋಗುತ್ತಾರೋ ಕೂಡಲೇ ಸೆಕ್ಯುರಿಟಿಯವರಿಗೆ ತಿಳಿಸುತ್ತಾರೆ, ಸೆಕ್ಯುರಿಟಿಯವರು ಎರಡೇ ನಿಮಿಷಕ್ಕೆ ಹೋಗಿ ಹಿಡಿದುಹಾಕುತ್ತಾರೆ.

ಇದೇನು ಹೊಸದಲ್ಲ ಆಗಾಗ್ಗ್ಗೆ ಮಾಲಿನಲ್ಲಿ ನಡೆಯುತ್ತಿರುತ್ತದೆ, ಅಂತಹ ಸಮಯದಲ್ಲಿ ಹಾಗೆ ಸಿಕ್ಕಿಹಾಕಿಕೊಂಡವರನ್ನ ಹಿಡಿದು ಫ್ಲೋರ್ ಮ್ಯಾನೇಜರ್ ಬಳಿ ಕರೆದುಕೊಂಡು ಬರುತ್ತಾರೆ, ಇವತ್ತು ಮೊದಲ ಶಿಫ್ಟ್’ನಲ್ಲಿ ನಾನಿದ್ದೆ, ಆದರೆ ನನಗೆ ಆಶ್ಚರ್ಯವಾಗಿದ್ದು ಸೆಕ್ಯೂರಿಟಿ ಸೂಪ್ರವೈಸರ್ ಕರೆದುಕೊಂಡು ಬಂದಿದ್ದು ಜೋಡಿಯಲ್ಲ, ಒಬ್ಬ ಟೀನೇಜರ್ ಅಷ್ಟೇ! ಆಗಾಗಿ ನನಗೆ ಪೂರ್ತಿ ಚಿತ್ರಣ ಸಿಗಲಿಲ್ಲ. ನಾನು ಆ ಹುಡುಗನನ್ನು ನೋಡಿದೆ, ಸುಮಾರು ಆರು ಅಡಿ ಇದ್ದ, ತೆಳ್ಳಗಿದ್ದ, ಬಾದಾಮಿ ಕಲರಿನ ಶರ್ಟ್ ಕಂದು ಬಣ್ಣದ ಪ್ಯಾಂಟ್ ಶರ್ಟ್ ಮೇಲೆ ಕಂದು ಬಣ್ಣದ ಬ್ಲೇಜರ್ ಹಾಕಿದ್ದ, ಕಾಲೇಜು ಹುಡುಗ ಅಂತ ಅಂದುಕೊಂಡೆ, ಬೆಳ್ಳಗಿದ್ದ, ಅರ್ಧ ಮುಖ ಮುಚ್ಚಿ ಹೋಗುವಂತೆ ಮಾಸ್ಕ್ ಬೇರೆ ಹಾಕಿದ್ದ, ಅವನನ್ನು ನೋಡಿ ‘ಯಾಕಪ್ಪ ಬಾತ್ ರೂಮ್ ಡೋರ್ ಲಾಕ್ ಮಾಡಿಕೊಂಡಿದ್ದೆ?’ ಎಂದು ಸ್ವಲ್ಪ ಗಡಸು ಧ್ವನಿಯಲ್ಲಿ ಕೇಳಿದೆ, ನಾನು ಕೇಳಿದ ಪ್ರಶ್ನೆ ನಂಗೇನೇ ಅಸಂಬದ್ಧವಾಗಿ ತೋರಿತು, ಆದರೂ ಅದನ್ನ ಮುಖದಲ್ಲಿ ತೋರ್ಪಡಿಸಿಕೊಳ್ಳದೆ ಅವನನ್ನು ನೋಡಿದೆ. ಅವನು ತುಂಬಾ ಅನ್- ಕಂಫರ್ಟ್ ಆಗಿ ನಿಂತಿದ್ದ, ಎರಡು ಕೈಗಳನ್ನು ಸುಮ್ಮನಿರಲು ಬಿಡದೆ ಶರ್ಟಿನ ತುದಿ ಒಮ್ಮೆ, ಹಾರಾಡುವ ಕೂದಲುಗಳ ಒಮ್ಮೆ ಕೆದರಿಕೊಳ್ಳುತ್ತಿದ್ದ, ಬ್ಲೇಜರ್ ಬೇರೆ ಸರಿ ಮಾಡಿಕೊಳ್ಳುತ್ತಿದ್ದ, ಒಟ್ಟಿನಲ್ಲಿ ಟೆನ್ಸ್ ಆಗಿದ್ದ, ಸುಮ್ ಸುಮ್ನೆ ಯಾರು ಹಾಗೆ ಆಡೊಲ್ಲ, ಏನೋ ಕಂತ್ರಿ ಕೆಲಸ ಮಾಡಿದ್ದಾನೆ ಅಂತ ಅನಿಸಕ್ಕೆ ಶುರುವಾಯ್ತು, ‘ನಿನ್ನೆ ಕೇಳ್ತಾ ಇರೋದು ಯಾಕಪ್ಪ ಲಾಕ್ ಮಾಡ್ಕೊಂಡಿದ್ದೆ?’ ಎಂದು ಮತ್ತೆ ಕೇಳಿದೆ.

‘ಸರ್ ಪ್ಲೀಸ್ ಸರ್ ಐ ಡಿಂಟ್ ಡೂ ಎನಿಥಿಂಗ್ ರಾಂಗ್’ ಎಂದ, ಸೆಕ್ಯೂರಿಟಿ ಸೂಪ್ರವೈಸರ್ ಕಡೆ ತಿರುಗಿ ‘ಏನ್ರಿ ಇವ್ನ್ ಕತೆ’ ಎಂದೆ, ಅವನು ಮತ್ತೆ ಹೇಳಿದ್ದನ್ನೇ ಇನ್ನು ಎಳೆದು ಹೇಳಿದ ‘ಸರ್ ಈ ಹುಡುಗ ಬಾತ್ರೂಮಿಗೆ ಹೋಗಿದ್ದಾನೆ, ಲಾಕ್ ಮಾಡ್ಕೊಂಡಿದ್ದಾನೆ, ತುಂಬಾ ಹೊತ್ತು ಅದನ್ನ ಹೌಸ್ ಕೀಪಿಂಗ್ ನೋಡಿ ಹೇಳಿದ್ರು, ಹೋಗಿ ಬಾಗಿಲು ತಟ್ತುದ್ರೆ ತೆಗೆದ, ತೆಗೆದು ಓಡಿ ಹೋಗಕ್ಕೆ ಹೋಗ್ತಿದ್ದ ಹಿಡ್ಕೊಂಡ್ವಿ’ ಎಂದ, ಓಡಿಹೋಗಕ್ಕೆ ಅವನು ಯಾಕೆ ಹೋದ? ಬಾತ್ರೂಮ್ ಲಾಕ್ ಮಾಡ್ಕೊಂಡ್ ಏನ್ ಮಾಡ್ತಿದ್ದ? ಪ್ರಶ್ನೆಗಳು ತಲೆಗೆ ಬಂದು, ಸ್ವಲ್ಪ ಮರ್ಯಾದೆ ಬದಿಗಿಟ್ಟು ‘ಹೇಯ್ ಯಾಕೋ ಓಡಕ್ಕೆ ಹೋದೆ’ ಎಂದು ಗದರಿಸುವ ಧ್ವನಿಯಲ್ಲಿ ಕೇಳಿದೆ ‘ಸರ್ ಟ್ರಸ್ಟ್ ಮೀ, ಯೂರಿನ್ ಹೋಗಕ್ಕೆ ತುಂಬಾ ಅರ್ಜೆಂಟ್ ಆಯ್ತು, ಅಲ್ಲಿ ಏನೋ ಕೆಲಸ ಮಾಡ್ತಾ ಇದ್ರೂ ಒಂದೇ ಬಾತ್ರೂಮ್ ಫ್ರೀ ಇತ್ತು ಅದಕ್ಕೆ ಹೋದೆ ಅಂಕಲ್ ಬಾಗಿಲು ತಟ್ಟುವಾಗ ಹೊಟ್ಟೆ ನೋಯ್ತಿತ್ತು ಅದಕ್ಕೆ ಲೇಟ್ ಆಯ್ತು, ಆಮೇಲೆ ಗಾಬರಿಲಿ ಓಡಿ ಹೋಗಕ್ಕೆ ಹೋದೆ, ಪ್ಲೀಸ್ ಟ್ರಸ್ಟ್ ಮೀ’ ಎಂದ, ಜೆಂಟ್ಸ್ ಟಾಯ್ಲೆಟ್ಟಿನ ಮೆನ್ ಡೋರ್ ಸ್ವಲ್ಪ ಪ್ರಾಬ್ಲಮ್ ಇತ್ತು, ಸರಿಯಾಗಿ ಕ್ಲೋಸ್ ಆಗ್ತಾ ಇರಲಿಲ್ಲ ಅಂತ ಕಂಪ್ಲೇಂಟ್ ಇತ್ತು, ಬೆಳಗ್ಗೆಯೇ ಕೆಲ್ಸದವರು ಬಂದು ರಿಪೇರಿ ಶುರು ಹಚ್ಚಿಕೊಂಡಿದ್ರು ಅದೆಲ್ಲ ನೆನಪಾಗಿ ಪಾಪ ಹುಡುಗನ ತಪ್ಪೇನು ಇಲ್ಲ, ಏನೋ ಒಳಗೆ ಹೋಗಿರ್ತಾನೆ ಹೆಚ್ಚೆಂದರೆ ಸ್ಮೋಕ್ ಮಾಡಿರ್ತಾನೆ, ಇನ್ನು ಹದಿನೆಂಟು ತುಂಬಿಲ್ಲ, ವಯೋಸಹಜ ಕೀಟಲೆ ಆಸೆಗಳು ಎಂದುಕೊಂಡು ‘ಏನೋ ಸ್ಮೋಕ್ ಮಾಡ್ತಾ ಇದ್ದ?’ ಎಂದೆ, ಅವನು ತಲೆ ಮೇಲೆ ಕೈಯಿಟ್ಟುಕೊಂಡು ‘ನೋ ಸಾರ್’ ಎಂದು ಅಳುವ ಧ್ವನಿಯಲ್ಲಿ ಉತ್ತರಿಸಿದ, ಸರಿ ಅವನನ್ನ ಇಟ್ಟುಕೊಂಡು ಏನು ಪ್ರಯೋಜನ ಅಂದುಕೊಂಡು ಕಳಿಸಿಬಿಡೋಣ ಅಂದುಕೊಳ್ಳುವಷ್ಟರಲ್ಲಿ, ಸರ್ವಲೈನ್ಸ್ ಸೂಪ್ರವೈಸರ್ ರಾಜನ್ ಬಂದು ಚೇರು ಎಳೆದು ಕೂತ.

ರಾಜನ್ ಸ್ವಲ್ಪ ಅಧಿಕಪ್ರಸಂಗಿ, ಈ ವಾಲೆಂಟೈನ್ಸ್ ದಿನ ಪ್ರೇಮಿಗಳು ಸಿಕ್ರೆ ತಾಳಿ ಕಟ್ಟಿಸಬೇಕು ಅಂತಾರಲ್ಲ ಅಂತೋನು, ರೇಪ್ ಬಗ್ಗೆ ಮಾತಾಡುದ್ರೆ ಜೀನ್ಸ್ ಹಾಕೊಂಡ್ ಹೊಕ್ಳು ತೋರ್ಸುದ್ರೆ ಇನ್ನೇನ್ ಆಗುತ್ತೆ ಅಂತ ವಾದ ಮಾಡೋ ಕಡೆಯವನು, ಹದ್ದಿನ ಕಣ್ಣಿನವನು ಕಲ್ಲಿನ ಹೃದಯದವನು, ಅವನಿಗೆ ಇಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಇರಲಿಲ್ಲ ಆದರೂ ಮಾಡ್ತಾ ಇದ್ದ, ನಿತ್ಯಕಿರಿಕಿರಿ ಅವನಿಗೆ, ಯಾವುದಾದರೊಂದು ಸ್ಕ್ರೀನ್’ಲಿ ರಿಕ್ಲೈನರ್ ಸೀಟೊ, ಇಲ್ಲ ಖಾಲಿ ಹೊಡೆದ ಸಿನಿಮಾದ ಸ್ಕ್ರೀನ್’ನ ಕಾರ್ನರ್ ಸೀಟಿನಲ್ಲಿ ಜೋಡಿಗಳು ಕೂತು ಸಿನಿಮಾ ಸುರು ಆಗುತ್ತಿದ್ದಂತೆ ಶುರುಹಚ್ಚಿಕೊಳ್ಳುತ್ತಿದ್ದ ಪೋಲಿ ಆಟಗಳನ್ನು ನೋಡಿ ಕೆಂಡಾಮಂಡಲವಾಗಿಬಿಡುತ್ತಾನೆ, ಎಷ್ಟೋ ಸಲ ಟಾರ್ಚರ್ ಕೈಲಿ ಹಿಡಿದುಕೊಂಡು ಹೋಗಿ ಕತ್ತಲಲ್ಲಿ ಕರಗಿಹೋಗುತ್ತಿರುವವರಿಗೆ ಬೆಳಕು ರಾಚಿ ವಾರ್ನಿಂಗ್ ಮಾಡಿ ಬರುತ್ತಾನೆ, ‘ಹಿಂಗೆಲ್ಲ ಮಾಡುದ್ರೆ ಯಾರು ಬರೋಲ್ಲ, ಅವರೇನು ಬಿಟ್ಟಿ ಬಂದಿದ್ದಾರಾ? ಟಿಕೇಟೂಗೆ ಪಾಪ್ ಕಾರ್ನ್ ಗೆ ದುಡ್ಡು ಕೊಟ್ಟಿಲ್ವಾ, ಅವರಿಗೂ ಪ್ರೈವಸಿ ಎಲ್ಲಿ ಸಿಗುತ್ತೆ ಇಲ್ಲಿ, ಏನೋ ಮಾಡ್ಕಳ್ಳಿ ಬಿಡ್ರಿ, ಅಬ್ಬಬ್ಬಾ ಅಂದ್ರೆ ಏನು ಮಾಡಕ್ಕೆ ಆಗುತ್ತೆ’ ಅಂತ ಯಾವಾಗ ಅವರ ಮ್ಯಾನೇಜರ್ ಬಯ್ದುಬಿಟ್ಟನೋ ಅವತ್ತಿನಿಂದ ಹಲ್ಲುಕಚ್ಚಿಕೊಂಡು ಕೆಲಸ ಮಾಡುತ್ತಿದ್ದಾನೆ, ಅವನಿಗೆ ಎಲ್ಲ ಸೂಕ್ಷ್ಮವೂ ಗೊತ್ತು, ನೋಡುತ್ತಲೇ ಇವರು ಕಮಿಟ್ ಆದವರು, ಇವರು ಶುದ್ಧ ವೆಜ್ ಪ್ರೇಮಿಗಳು, ಇವರು ನಾನ್ ವೆಜ್ ಪ್ರೇಮಿಗಳು, ಇವನು ನೋಡು ಬೇಕಾದ್ರೆ ಇಂಟರ್ವಲ್ ಗೆ ಇನ್ನು ಐದು ನಿಮಿಷಕ್ಕೆ ಇದ್ದ ಹಾಗೆ ಎದ್ದು ಹೋಗ್ತಾನೆ, ಇವಳು ನೋಡು ಸಿನಿಮಾ ಮುಗಿಯಕ್ಕೆ ಹತ್ತು ನಿಮಿಷ ಇದ್ದಂಗೆ ಎದ್ದು ವಾಷ್ ರೂಮಿಗೆ ಹೋಗ್ತಾಳೆ ಎಂದು ನವಯುಗದ ಕತ್ತಲೆಯ ಹಾದರದ ಸೂಕ್ಷ್ಮ ವಿಚಾರಗಳನ್ನ ನಮಗೆ ಆಶ್ಚರ್ಯವಾಗುವಂತೆ ಬಿಡಿಸುತ್ತುತ್ತಿದ್ದ, ಈಗ ಅವನು ಹೀಗೆ ಮುಖ ಊದಿಸಿಕೊಂಡು ಚೇರು ಎಳೆದು ಕೂತಾಗ ನನಗೆ ಇಮ್ಮಿಡಿಯೇಟಲಿ ಆ ಸಿಕ್ಕಿಹಾಕಿಕೊಂಡ ಹುಡುಗನ ಮೊದಲು ಕಳಿಸಬೇಕು ಈ ರಾಜನ್ ಗೆ ಸಿಕ್ಕಿಹಾಕಿಕೊಂಡ್ರೆ ಮುಗೀತು ಅವನ ಕತೆ ಎಂದುಕೊಂಡೆ, ಆ ಹುಡುಗನ ಅದೃಷ್ಟದ ಬಾಗಿಲು ಆಗಷ್ಟೇ ಮುಚ್ಚಿಹೋಗಿತ್ತು, ‘ಪೊಲೀಸ್ ಕರೆಸಿ ಸರ್ ಸರಿ ಹೋಗುತ್ತೆ’ ಎಂದು ಶುರುಮಾಡಿದ, ಬಾತ್ರೂಮಲ್ಲಿ ಲಾಕ್ ಮಾಡಿಕೊಂಡ್ರೆ ಪೊಲೀಸ್ ಆ? ಎಂದು ಮನಸಲ್ಲಿ ಅಂದುಕೊಂಡು ‘ಹೋಗ್ಲಿ ಬಿಡಿ ಸರ್ ಪಾಪ ಚಿಕ್ ಹುಡುಗ ಇಷ್ಟು ಚಿಕ್ ವಿಷಯಕ್ಕೆ ಪೊಲೀಸ್ ಯಾಕೆ’ ಅಂದೇ, ನಮ್ಮಲ್ಲಿ ಪೊಲೀಸ್ ಕರೆಸೋದು ಕೆಲವು ವಿಷಯಗಳನ್ನ, ಜನರನ್ನ, ಜಗಳಗಳನ್ನ ಇನ್ನು ನಮ್ಮ ಕೈಯಲ್ಲಿ ಕಂಟ್ರೋಲ್ ಮಾಡಕ್ಕೆ ಆಗೋಲ್ಲ ಅನ್ನುವ ಸಂಧರ್ಭದಲ್ಲಿ ಮಾತ್ರ, ಇಂತ ಚಿಕ್ಕ ವಿಷಯಕ್ಕೆ ಪೊಲೀಸ್ ಯಾಕೆ?, ‘ಚಿಕ್ಕ ವಿಷ್ಯಾನ ? ಹೇ ನಿನ್ ಜೊತೆ ಓಡಿ ಹೋಗಿದ್ದ ಹುಡುಗಿ ಎಲ್ಲೋ? ಯಾರೋ ಅದು?’ ಎಂದು ರಾಜನ್ ಚೇರಿನ ತುದಿಯಲ್ಲಿ ಕೂತು ಗದರಿಸಿದರು.

ಒಂದು ಕ್ಷಣ ಏನು ನಡೀತಿದೆ ಅನ್ನೋದೇ ಗೊತ್ತಾಗಲಿಲ್ಲ ಸಡನ್ನಾಗಿ ಮಧ್ಯೆ ಬಂದ ‘ಹುಡುಗಿ’ ಯಾರು?, ಶಾಕ್ ನಲ್ಲೆ ಸೆಕ್ಯೂರಿಟಿ ಸೂಪ್ರವೈಸರ್ ಕಡೆಗೆ ತಿರುಗಿ ‘ಯಾರಿ ಹುಡುಗಿ? ಎಲ್ಲಿ ಇದ್ಳು? ಯಾವಾಗ ಓಡಿ ಹೋದ್ಳು?’ ಒಂದೇ ಸಲಕ್ಕೆ ಮೂರು ಪ್ರಶ್ನೆಗಳನ್ನ ಎಸೆದೆ, ಅವನು ತಪ್ಪಿತಸ್ಥ ಭಾವನೆಯಲ್ಲೇ ಮತ್ತೆ ಹೇಳಿದ್ದನ್ನೇ ಬೇರೆ ವರ್ಷನಲ್ಲಿ ಹೇಳಿದ ‘ಅದೇ ಸರ್ ಈ ಹುಡುಗ ಲಾಕ್ ಮಾಡ್ಕೊಂಡಿದ್ದು ಲೇಡೀಸ್ ರೆಸ್ಟ್ ರೂಮ್ ಅಲ್ಲಿ, ಹೌಸ್ ಕೀಪಿಂಗ್ ಅವನು ನೋಡಿ ಹೇಳಿದ್ದು, ನಾನು ಹೋಗಿ ತಟ್ಟಿದೆ, ಹೊರಗೆ ಬಂದು ಇವನು ಮತ್ತೆ ಇನ್ನೊಂದು ಹುಡುಗಿ ಒಳಗೆ ಇದ್ರು, ತಪ್ಪಿಸಿಕೊಳ್ಳಕ್ಕೆ ಹೋದ್ರು, ಇವನು ಸಿಕ್ಕಿದ ಆ ಹುಡುಗಿ ಸಿಗಲಿಲ್ಲ’ ಎಂದು ಹೇಳಿದ, ಏನೋ ಚಿಕ್ ಹುಡುಗ ಸುಮ್ನೆ ಇರೋದೆಲ್ಲ ಹೇಳಿ ಅವನಿಗೆ ತೊಂದರೆ ಮಾಡಬಾರದು ಅಂತ ಅವನ ಮನಸಲ್ಲಿ ಇತ್ತೇನೋ ಆಗಾಗಿ ಏನು ಆಗಿಲ್ಲದ ತರದ ಕತೆಯನ್ನ ಹೇಳಿದ್ದ ಹೇಳಬೇಕಾದ್ದನ್ನು ಮುಚ್ಚಿದ್ದ, ನನಗೆ ಸಿಟ್ಟು ಬಂತು ‘ರೀ ಮೊದಲೇ ಹೇಳಕ್ಕೆ ಏನಾಗಿತ್ತು ಇದೆಲ್ಲ’ ಎಂದು ಹೇಳಿ ಆ ಹುಡುಗನ ಕಡೆ ತಿರುಗಿ ‘ಹೌದೇನೋ ಹುಡುಗಿ ಜೊತೆ ಇದ್ಯಾ?’ ಎಂದೆ, ಆ ಹುಡುಗ ಅಳೋದು ಬಾಕಿ, ಅಳುವ ಧ್ವನಿಯಲ್ಲೇ ಏನೋ ಹೇಳಲು ಬಂದು ಹೇಳದೆ ನಡುಗುತ್ತ ನಿಂತ, ರಾಜನ್ ‘ಹೇ ಹೇಳೋ, ಏನು ನಿನ್ ಹೆಸರು, ನಿಮ್ ಅಪ್ಪ ಅಮ್ಮನ ನಂಬರು ಕೊಡು, ಆ ಹುಡುಗೀನ ಕರಿ ಇಲ್ಲಿ’ ಎಂದು ಗದರಿಸಿದರು, ಹುಡುಗ ‘ಪ್ಲೀಸ್ ಸರ್..ಅಪ್ಪ ಬೇಡ…ಪ್ಲೀಸ್ ಸರ್..ಐ ಡನ್ ಮಿಸ್ಟೇಕ್ ಈ ನೋ ಇಟ್ ಸರ್..ಪ್ಲೀಸ್’ ಎಂದ, ಅಯ್ಯೋ ಪಾಪ ಅನ್ಸ್ತು ಅವನ ಮುಖ ನೋಡಿ, ಆದರೆ ಈ ವಯಸ್ಸಲ್ಲೇ ಅವನ ಕಿಲಾಡಿತನ ಕಂಡು ಮೆಚ್ಚುಗೆ ಆದರೂ ಕೆಲ್ಸದ ಸಾಮಾಜಿಕ ಪ್ರಜ್ಞೆ ರಪ್ ಅಂತ ತಲೆಗೆ ಬಂದು ‘ಕರೆಕ್ಟ್ ಆಗಿ ಹೇಳು ಏನು ನಡೀತು ಇಲ್ಲ ಪೊಲೀಸ್ ಕರಿಸ್ತೀವಿ’ ಎಂದೆ, ನಾನು ಈ ಕಡೆ ಪೊಲೀಸ್ ಅಂದು, ರಾಜನ್ ಆ ಕಡೆ ಅಪ್ಪ ಅಮ್ಮನ ಕರಿಸ್ತೀವಿ ಎಂದಾಗ, ಆ ಹುಡುಗ ‘ಸರ್ ನಾನು ಆ ಹುಡುಗಿ ಒಟ್ಟಿಗೆ ಬಂದ್ವಿ, ನಾನು ಟಾಯ್ಲೆಟ್ ಗೆ ಹೋದೆ, ಆ ಹುಡುಗಿ ಲೇಡೀಸ್ ಟಾಯ್ಲೆಟ್ ಗೆ ಹೋಯ್ತು, ಆಮೇಲೆ ಯಾರೋ ಹೊರಗೆ ಇಂದ ಲಾಕ್ ಮಾಡಿದ್ದಾರೆ ಅಂತ ಕಾಲ್ ಮಾಡಿ ಹೇಳುದ್ಳು ನಾನು ಹೋದೆ ಅವಳಿಗೆ ಸುಸ್ತಾಗಿ ಕೂತಿದ್ಳು ಸಮಾಧಾನ ಮಾಡ್ತಾ ಇದ್ದಾಗ ಯಾರೋ ಮತ್ತೆ ಲಾಕ್ ಮಾಡುದ್ರು ಅಷ್ಟರಲ್ಲಿ ಅಂಕಲ್ ಬಾಗಿಲು ತಟ್ತುದ್ರು ಸ್ವೇರ್ ಸರ್ ನಾನೇನು ಮಾಡಿಲ್ಲ’ ಎಂದ.

ಕತೆ ತುಂಬಾ ಚೆನ್ನಾಗಿ ಕಟ್ಟಿದ, ನನಗೆ ಒಳಗೊಳಗೇ ನಗು, ಹೊರಗೆ ಕೃತಕವಾಗಿ ಗಂಭೀರವಾಗಿ ಕೂತಿದ್ದೆ ‘ಅಲ್ಲ ಇವಾಗ ತಾನೇ ಬೇರೆ ಏನೋ ಹೇಳಿ ಸರ್ ಹೇಳಿದ ಮೇಲೆ ಇನ್ನೇನೋ ಹೇಳ್ತ ಇದ್ಯಾ, ಹೆಂಗೆ ನಿನ್ನ ನಂಬೋದು, ಟೆಲ್ ಮೀ ಕರೆಕ್ಟ್ಲಿ’ಎಂದೆ, ಅವನು ಅದೇ ಕತೆಯನ್ನ ಎರಡು ಸಲ ಹೇಳಿ ಗೋಡೆಗೆ ಒರಗಿಕೊಂಡು ನಿಂತ, ಆಗಿರೋದು ಇಷ್ಟೇ ವಯಸ್ಸಿನ ಹುಡುಗರು ಇಲ್ಲಿ ಪ್ರೈವಸಿ ಸಿಗುತ್ತೆ ಎಂದು ಬಂದಿರ್ತಾರೆ ಸಮಯ ನೋಡಿ ಒಳಗೆ ಹೋಗಿರ್ತಾರೆ ಪಾಪ ಅಷ್ಟರಲ್ಲಿ ಸಿಗಕೊಂಡಿದ್ದಾರೆ, ಆಗಂತ ಅವರನ್ನು ಪ್ರೋತ್ಸಾಹಿಸೋ ತರ ಮಾತನಾಡುವ ಆಗಿಲ್ಲ, ಅದನ್ನೇ ಅಡ್ವಾಂಟೇಜ್ ಆಗಿ ಪಡೆದುಕೊಂಡರೆ ಕಷ್ಟ, ಅವನ ಜೇಬಿನಲ್ಲಿ ಕಾಂಡೊಮ್ ಇದ್ಯಾ ಎಂಬ ಸಂಶಯ ಬಂತು, ಅದೆಲ್ಲ ಇದ್ದಷ್ಟು ಒಳ್ಳೆಯದೇ ಅಲ್ವ ಅಂತ ಆಲೋಚನೆ ಕೂಡ ಬಂತು ‘ಸಿಗರೇಟ್ ಏನಾದ್ರು ಇಟ್ಕೊಂಡಿದ್ದಾನಾ’ ಚೆಕ್ ಮಾಡಿ ಎಂದೆ, ಚೆಕ್ ಮಾಡಿದ ಏನು ಸಿಗಲಿಲ್ಲ, ಪಾಪ ಒಳ್ಳೆ ಹುಡುಗ ಅಂದುಕೊಂಡೆ, ಏನೇನೋ ಅಂದುಕೊಂಡು ಬಂದವನು ಈ ತರ ಸಿಕ್ಕಿಕೊಂಡಿರುವ ಸ್ಥಿತಿ ನೋಡಿ ಕನಿಕರ ಹುಟ್ಟಿ ಬಂತು, ಈ ಹಿಂದೆ ನಾನು ಪ್ರೀತಿಯಲ್ಲಿದ್ದಾಗ ಒಂದು ಸಲ ನಾನು ಮತ್ತೆ ನನ್ನವಳು ಪ್ರೈವಸಿ ಸಿಗದೇ ಒದ್ದಾಡಿ ಕೊನೆಗೆ ಮನೆ ಮಹಡಿ ಮೇಲಿನ ಬಾತ್ರೂಮಲ್ಲಿ ಮೀಟ್ ಆಗೋಣ ಎಂದು ಚಾಟ್ ಮಾಡಿದ ಹಸಿಬಿಸಿ ರಾತ್ರಿಯ ನೆನಪು ಬಂತು, ಇವಾಗ ರಾಜನ್ ಕೈಯಿಂದ ಇವನನ್ನು ಬಿಡಿಸದೆ ಇದ್ದರೆ ಅವನ ಕತೆ ಅಷ್ಟೇ ಅಂದುಕೊಂಡು ‘ಸರಿ ಇವಾಗ ಒಂದ್ ಕೆಲಸ ಮಾಡು’ ರಾಜನ್ ಮತ್ತು ಆ ಹುಡುಗ ಇಬ್ಬರು ನನ್ನ ಅದೇನದು ಎಂದು ನೋಡಿದರು.
‘ನೋಡಪ್ಪ ಹಂಗೆಲ್ಲಾ ಇಲ್ಲಿ ಮಾಡಬಾರದು, ಅಕಸ್ಮಾತ್ ಬೇರೆ ಯಾವುದಾದ್ರೂ ಹುಡುಗಿ ಇರೋ ಟಾಯ್ಲೆಟ್ ಗೆ ನೀನು ನುಗ್ಗಿದ್ರೆ ಅವರು ನಿನ್ನ ಸುಮ್ನೆ ಬಿಡ್ತಾ ಇದ್ರಾ? ಕೇಸ್ ಹಾಕ್ತಾ ಇದ್ರು, ಪೊಲೀಸ್ ಬರ್ತಾ ಇದ್ರು, ಸೀ ನಿನ್ನ ಸ್ಥಿತಿ ಅರ್ಥ ಆಗುತ್ತೆ,ಪ್ರೈವಸಿ ಇಶ್ಯೂ ಗೊತ್ತು, ಆದರೂ ಜನ ಓಡಾಡೋ ಕಡೆ ಇವೆಲ್ಲ ಬೇಡ ಕಣೋ, ಆಯ್ತಾ’ ಎಂದೆ.

ಆ ಹುಡುಗನಿಗೇನೋ ನನ್ನ ಮಾತು ಸಮಾಧಾನ ಕೊಟ್ಟಿರಬಹುದು ಆದರೆ ನನ್ನ ಮಾತಿನಿಂದ ರಾಜನ್ ಗೆ ಕೋಪ ಬಂದು ‘ಹೇ ಸುಮ್ನೆ ಇರಿ ಸರ್ ನೀವು, ಇವತ್ತು ಇವನು ಬಂದು ಹೋದ ನಾಳೆ ನಾಲ್ಕು ಜನಕ್ಕೆ ಹೇಳ್ತಾನೆ ಅವರು ಬರ್ತಾರೆ ಆಮೇಲೆ, ಇದೇನು ದಂಧೆ ನಡೆಯೋ ಜಾಗ ಕೆಟ್ಟೋಯ್ತಾ’ ಎಂದ, ಅವನ ಧ್ವನಿ ಸಿಟ್ಟಿನಿಂದ ಕೂಡಿತ್ತು, ತುಟಿಗಳು ಬೇರೆ ಶೇಕ್ ಆಗುತ್ತಿದ್ದವು, ಈಗ ಅವನನ್ನು ಸಮಾಧಾನ ಮಾಡಬೇಕು ಜೊತೆಗೆ ಆ ಹುಡುಗನನ್ನು ಬೇರೆ ಪಾರು ಮಾಡಬೇಕು ‘ಸರಿ ಆ ಹುಡುಗಿನ ಕರಿಸೋ ನಿಜ ಗೊತ್ತಾಗುತ್ತೆ, ಇದು ಹುಡುಗಿ ವಿಷ್ಯ ಜಾಸ್ತಿ ನಾವು ಕೆದಕಬಾರದು ನಾಳೆ ದಿನ ಏನಾದ್ರು ಹೆಚ್ಚು ಕಮ್ಮಿ ಆದ್ರೆ ನಮ್ ಮೇಲೆ ಅಲ್ವ ಸರ್’ ಎಂದು ರಾಜನ್ ಕಡೆ ತಿರುಗಿದೆ, ನಾನು ಬಿಟ್ಟ ಬಾಣ ನೆಟ್ಟಿತು ಅನ್ಸುತ್ತೆ ಧ್ವನಿ ಕಮ್ಮಿ ಮಾಡಿಕೊಂಡು ಕಾಲು ಮೇಲೆ ಕಾಲು ಹಾಕಿಕೊಂಡು ‘ಹೂ’ ಎಂದಷ್ಟೇ ಎಂದ, ಆದರೆ ಹುಡುಗ ಅಳತೊಡಗಿದ ‘ಸಾರ್ ಪ್ಲೀಸ್ ಅವಳ ಮುಂದೆ ಇನ್ಸಲ್ಟ್ ಮಾಡಬೇಡಿ, ನನಗೆ ಗೊತ್ತು ನಾನು ತಪ್ಪು ಮಾಡಿದೆ, ಪ್ಲೀಸ್ ಸರ್..ಇಟ್ಸ್ ಸೊ ಎಂಬ್ರಾಸ್ಸಿಂಗ್..’ ಎಂದು ನೆಲಕ್ಕೆ ಕೂತ, ಸ್ವಲ್ಪ ಹೊತ್ತಿನ ಮುಂದೆ ವೀರಾವೇಶದಲ್ಲಿ ಬಾತ್ರೂಮಲ್ಲಿ ಲಾಕ್ ಮಾಡಿಕೊಂಡು ಬಹುಷ ಲಿಪ್ ಲಾಕ್ ಮಾಡಿಕೊಂಡ ಶೂರ ಹುಡುಗ ತನ್ನ ಹುಡುಗಿ ಎದುರು ಬಯ್ಸಿಕೊಳ್ಳುವುದು ಅವನಿಗೆ ಇಷ್ಟವಿರಲಿಲ್ಲ ಅದೊಂದು ಅವಮಾನವೇ ಅಲ್ವ? ಆದರೆ ಬೇರೆ ದಾರಿ ಇರಲಿಲ್ಲ ‘ಆ ಹುಡುಗಿ ಬಂದು ನಿಜ ಹೇಳಿದ್ರೆ ಬಿಡೋದು, ಇಲ್ಲ ಪೊಲೀಸ್ ಕರೀಬೇಕಾ’ ಎಂದೆ, ರಾಜನ್ ಗೆ ಹೋಲಿಸಿಕೊಂಡರೆ ಪೊಲೀಸ್ ಗಳು ಪರವಾಗಿಲ್ಲ ಅಂತ ಗೊತ್ತಿತ್ತು, ಜೊತೆಗೆ ಆ ಹುಡುಗಿ ಅದೆಷ್ಟು ಕಿಲಾಡಿ ಇರಬಹುದು ಪಾಪ ಇವನನ್ನು ಬಿಟ್ಟು ಓಡಿಹೋಗಿದ್ದಾಳೆ ಅಂತ ಅನಿಸಿ ನಗು ಬಂತು, ಆ ಹುಡುಗ ‘ಹುಡುಗಿ ಹೋಗಿದ್ದಾಳೆ ಸರ್, ಎಲ್ಲಿ ಹುಡುಕೋದು’ ಅನ್ನಕ್ಕೆ ಶುರು ಮಾಡಿದ, ರಾಜನ್ ‘ಕ್ಯಾಮೆರಾ ಲಿ ನೋಡಿದ್ದೀನಿ ಕೆಳಗೆ ಪಾರ್ಕಿಂಗ್ ಹತ್ರ ಇದ್ದಾಳೆ ಕರಿ ಅವಳನ್ನ’ ಅಂದ, ಹುಡುಗ ಸ್ವಲ್ಪ ಹೊತ್ತು ಕಾಡಿ ಬೇಡಿ ಕೊನೆಗೆ ಕಾಲ್ ಮಾಡಿದ, ಇಂಗ್ಲೀಷ್ನಲ್ಲೇ ವಿವರಿಸಿ ಕರೆದ, ಆ ಹುಡುಗಿ ಬಂದಳು, ಬಿಳಿ ಚೂಡಿದಾರ್ ತೊಟ್ಟಿದ್ಳು, ಕೂದಲು ಹಾರಿಬಿಟ್ಟಿದ್ಳು, ಎಡಗಡೆ ಭುಜಕ್ಕೆ ಬ್ಯಾಗ್ ಹಾಕಿದ್ಳು, ತುಂಬಾ ಸಿಂಪಲ್ ಆಗಿದ್ರು ಆಕರ್ಷಕವಾಗಿದ್ಳು, ನಾವೆಲ್ಲ ಅವನ ಏಜಲ್ಲಿ ಹುಡುಗಿಯನ್ನ ಮಾತಾಡಿಸಕ್ಕೆ ಭಯ ಪಡುತ್ತಿದ್ದ ಜನರೇಷನ್ ಅವರು, ಅಂತದರಲ್ಲಿ ಆ ಹುಡುಗ ಹದಿನೆಂಟಕ್ಕೆ ಅಂತ ಒಳ್ಳೆ ಹುಡುಗಿಯನ್ನ ಬೀಳಿಸಿಕೊಂಡು ಬಾತ್ರೂಮಿಗೆ ಕರೆದುಕೊಂಡು ಹೋದ ಅಂದರೆ ಅವನ ಧೈರ್ಯ ಮೆಚ್ಚಬೇಕು, ನಾನು ಮೆಚ್ಚಿದೆ ಕೂಡ.

ಆ ಹುಡುಗಿ ಭಯ ಪಡುತ್ತಿರುವ ತರ ನಟಿಸುತ್ತಿದ್ದಳು, ಅವನನ್ನು ಕೆಕ್ಕರಿಸಿ ನೋಡುತ್ತಿದ್ದಳು, ಅವನು ಅವಮಾನಿತನಾಗಿ ‘ಸಾರಿ ಸಾರಿ’ ಎಂದು ಹೇಳಿ ತಲೆ ತಗ್ಗಿಸಿದ್ದ, ‘ಹೂ ಹೇಳಮ್ಮ ಏನಾಯ್ತು ಯಾಕೆ ಓಡಿ ಹೋದೆ’ ಎಂದೆ, ಅವಳು ನಡುಗುವ ಧ್ವನಿಯಲ್ಲೇ ತೀರಾ ಮೆಲ್ಲನೆ ಧ್ವನಿಯಲ್ಲಿ ‘ಐ ಗಾನ್ ಟು ರೆಸ್ಟ್ ರೂಮ್, ಇವನು ಬೇಡ ಅಂದ್ರು ಬಂದ ಆಮೇಲೆ ಭಯ ಆಯಿತು, ಸೊ ಓಡಿದೆ’ ಎಂದು ಹೇಳಿ ಮತ್ತೆ ಆ ಹುಡುಗನ ಕೆಕ್ಕರಿಸಿ ನೋಡಿದಳು, ಅವನು ಅವಳ ನೋಟಕ್ಕೆ ಆ ನೋಟದಲ್ಲಿನ ತಿರಸ್ಕಾರಕ್ಕೆ ಇನ್ನೂ ಅವಮಾನಿತನಾಗಿ ತಲೆ ತಗ್ಗಿಸಿದ, ನನಗೆ ಅದೇ ಒಳ್ಳೆ ಸಮಯ ಎಂದು ‘ಸರಿ ಇಬ್ರು ಹೊರಡಿ, ನಿಮ್ಮ ಪ್ರೈವಸಿ ಗೆ ಬೇರೆ ಜಾಗ ಹುಡ್ಕೊಳ್ಳಿ’ ಎಂದೆ, ಅವರು ಹೋಗುವಾಗ ರಾಜನ್ ಎದ್ದು ‘ನೀವು ಮಾಡೋ ಕೆಲಸ ನಿಮ್ಮ ಅಪ್ಪ ಅಮ್ಮಗೆ ಗೊತ್ತಾದ್ರೆ ಎಷ್ಟು ಹರ್ಟ್ ಆಗುತ್ತೆ, ಮೊದಲು ನೆಟ್ಟಕ್ಕೆ ಓದಿ ಶೇಮ್ ಆನ್ ಯೂ ಪೀಪಲ್’ ಎಂದ, ಇಬ್ಬರು ಅಳುತ್ತ ಹೋದರು, ‘ಅಲ್ಲ ಸರ್ ನೀವು ಯಾಕೆ ಅಷ್ಟು ಈಸಿ ಆಗಿ ಬಿಟ್ರಿ ಇನ್ನು ರುಬ್ಬಬೇಕಿತ್ತು ಬೋಳಿಮಕ್ಳುಗೆ ನಾಯಿ ನಾಯಿ ತರ ಆಡ್ತಾರೆ ಸಿಕ್ಕ ಸಿಕ್ಕ ಕಡೆ’ ಎಂದ, ನಾನು ‘ವಯಸು ಹುಡುಗ್ರು ಜಾಸ್ತಿ ಏನಾದ್ರು ಹೇಳಿ ಏನಾದ್ರು ಮಾಡ್ಕೊಂಡ್ರೆ ಕಷ್ಟ ಸರ್ ಈಗಿನ ಹುಡುಗರು ಇಂಪಲ್ಸಿವ್’ ಎಂದು ತಿಪ್ಪೆ ಸರಿಸಿದೆ, ಅದು ಅವನಿಗೆ ಇಷ್ಟ ಆಗದೆ ಸರಿ ಸರ್ ಎಂದು ಹೋದ, ನಾನು ಅಲ್ಲಿಯವರೆಗೂ ಬದಿಗಿಟ್ಟಿದ್ದ ಸೈಲೆಂಟ್ ಮಾಡಿದ್ದ ಮೊಬೈಲ್ ತೆಗೆದೆ, ಇಪ್ಪತ್ತು ಮೆಸೇಜುಗಳು ಇತ್ತು.

‘ಶ್ಯೂರ್ ತಾನೇ, ಯಾರು ಬರಲ್ಲ ತಾನೇ, ಯಾರಿಗಾದ್ರೂ ಗೊತ್ತಾದ್ರೆ’ ಎಂದು ರಶ್ಮಿ ಮೆಸೇಜ್ ಮಾಡಿದ್ದಳು, ಬಿದ್ದು ಬಿದ್ದು ನಗಾಡಿಬಿಟ್ಟೆ.

ಆ ಹುಡುಗ ಸಿಕ್ಕಿಕೊಳ್ಳುವ ಮುನ್ನ ಬೆಳ ಬೆಳಗ್ಗೆಯೇ ರಶ್ಮಿಗೆ ಮೆಸೇಜ್ ಮಾಡಿದ್ದೆ, ತುಂಬಾ ದಿನ ಆಯ್ತು ಸಿಕ್ತಿಯ ಇಲ್ವಾ?, ನನಗೆ ನಿನ್ನ ಗಟ್ಟಿ ಆಗಿ ತಬ್ಬಿಕೋಬೇಕು, ನಿನ್ನ ತುಟಿ ಕಚ್ಚಬೇಕು ಹಾಗೆ ಹೀಗೆ ಎಂದೆಲ್ಲ ನಾನು ರೊಚ್ಚಿಗೆದ್ದು ಅವಳನ್ನು ರೊಚ್ಚಿಗೆಬ್ಬಿಸಿದ್ದೆ, ಹಾಳು ಆಷಾಡ ಬಂದು ಅವಳನ್ನು ನನ್ನನ್ನು ಬೇರೆ ಮಾಡಿತ್ತು, ‘ಅಲ್ಲ ಮನೆಗೆ ಬಂದ್ರೆ ಗೊತ್ತಾಗುತ್ತೆ, ಎಲ್ಲಿ ಸಿಗೋದು’ ಎಂದು ಕೊನೆಗೂ ಒಪ್ಪಿಕೊಂಡಿದ್ಳು, ನಾನು ತುಂಬಾ ಯೋಚಿಸಿ ‘ಇಲ್ಲೇ ನಮ್ ಮಾಲಿಗೆ ಬಾ, ಸೋಮವಾರ ಅಲ್ವ ಜನ ಕಮ್ಮಿ ರೆಸ್ಟ್ ರೂಮ್ ಇದ್ಯಲ್ಲ, ಹೋದ ಸಲ ಮಿಸ್ ಆಗಿತ್ತಲ್ಲ, ಅದೊಂದು ಫ್ಯಾಂಟಸಿ ಹಾಗೆ ಉಳ್ಕೊಂಡಿತ್ತಲ್ಲ, ಮುಗಿಸಿಬಿಡೋಣ’ ಎಂದು ಕಣ್ಣು ಹೊಡೆಯುವ ಇಮೊಜಿ ಕಳಿಸಿದ್ದೆ, ಅವಳು ಮುತ್ತುಗಳ ಇಮೊಜಿ ಕಳಿಸಿದ್ದಳು ಅದೊಂತರ ಒಪ್ಪಿಗೆ ತರವೇ ಇತ್ತು, ನಾನು ‘ಟ್ರೈ ಮಾಡೋಣ್ವಾ?’ ಎಂದು ಕೇಳಿ ಅವಳು ಟೈಪಿಸುತ್ತಿದ್ದಾಗ ಈ ಸೆಕ್ಯೂರಿಟಿ ಸೂಪ್ರವೈಸರ್ ಆ ಹುಡುಗನ ಹಿಡಿದುಕೊಂಡು ಬಂದಿದ್ದ. ಮತ್ತೆ ಅವಳ ಇಪ್ಪತ್ತು ಮೆಸೇಜು ಓದಿ ಇಲ್ಲಿ ನಡೆದ ಘಟನೆ ಹೇಳಿ ಬಿದ್ದು ಬಿದ್ದು ನಗತೊಡಗಿದೆ.

ಕೊನೆಗೆ ‘ಇಲ್ಲಿ ಬೇಡ ಸಿಗಕೊಂಡ್ರೆ ಕಷ್ಟ ಎರಡನೇ ಸಲ ಮದುವೆ ಮಾಡಿಸಿಬಿಡ್ತಾರೆ ನೋಡೋಣ ಬೇರೆ ಜಾಗ ಹೇಳ್ತಿನಿ’ ಎಂದು ಮತ್ತೆ ಕಾಮನ ಬಾಣಗಳನ್ನು ಬಿಡುತ್ತ ಹೋದೆ, ಅವಳು ಮೆಸೇಜಿನಲ್ಲಿ ಸಾಯುತ್ತಾ ಹೋದಳು, ಕೊನೆಗೆ “ಯುವರ್ ಟೆಕ್ಸ್ಟ್ ಆರ್ ವರ್ಚುಯಲ್ ಇಂಟರ್ ಕೋರ್ಸ್ ಕಣೋ” ಎಂದು ಮೆಸೇಜು ಕಳಿಸಿದಳು.

‍ಲೇಖಕರು avadhi

February 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: