ಜಟಾಪಟಿಯಲ್ಲ, ಮಾಫಿಯಾ ಕೈವಾಡ..

ಜಿ ಪಿ ಬಸವರಾಜು

ಮೈಸೂರು ಎರಡು ಕಾರಣಗಳಿಗಾಗಿ ಇಡೀ ರಾಷ್ಟ್ರದಲ್ಲಿ ಸುದ್ದಿ ಮಾಡಿದೆ. ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚಿನ ಕೋವಿಡ್‍ ಪ್ರಕರಣಗಳು ಮತ್ತು ಸಾವುಗಳು ಆದದ್ದು ಮೈಸೂರಿನಲ್ಲಿಯೇ. ಕೋವಿಡ್‍ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿ ಮಾಧ್ಯಮಗಳ ಗಮನವನ್ನು ಸೆಳೆಯಿತು. ಮೈಸೂರು ಜಿಲ್ಲೆಯ ಜನತೆ ಇದರಿಂದ ಬಹಳ ಕಳವಳಕ್ಕೆ ಈಡಾದರು; ಸಾವು ನೋವಿನ ಸಂಕಟವನ್ನೂ ಅನುಭವಿಸಿದರು.

ರಾಷ್ಟ್ರೀಯ ಸುದ್ದಿಗೆ ಗ್ರಾಸವನ್ನು ಒದಗಿಸಿದ ಇನ್ನೊಂದು ಪ್ರಮುಖವಾದ ಅಂಶ ಇಬ್ಬರು ಐಎಎಸ್ ಅಧಿಕಾರಿಗಳ ನಡುವಣ ಸ್ವಪ್ರತಿಷ್ಠೆಯ ಜಗಳ. ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾನಾಗ್‍ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಈ ಜಗಳ ಎಷ್ಟೊಂದು ರಭಸವಾಗಿ ನಡೆಯಿತೆಂದರೆ ಕೋವಿಡ್‍ ಮಹಾಮಾರಿಯನ್ನು ಜನ ಮರೆತೇ ಬಿಟ್ಟರು. ರಾಜಕಾರಣಿಗಳಿಗೂ ಈ ಜಗಳವೇ ಜಪವಾಗಿಬಿಟ್ಟಿತು. ಈ ಜಗಳವನ್ನು ಪರಿಹರಿಸುವಂತೆ ಸರ್ಕಾರ ಇಬ್ಬರು ಅಧಿಕಾರಿಗಳನ್ನೂ ವರ್ಗಮಾಡಿ ಸಮಾಧಾನ ಪಟ್ಟುಕೊಂಡಿತು.

ಇದು ಮೇಲ್ನೋಟಕ್ಕೆ ಕಾಣುವ ಚಿತ್ರ. ಒಳಹೊಕ್ಕು ನೋಡಿದರೆ ಸತ್ಯ ಸಂಗತಿ ಬೇರೆಯೇ ಆಗಿದೆ. ಇದನ್ನು ತಿಳಿಯುವ ಕುತೂಹಲ ಜನರಿಗೆ ಇದ್ದಂತೆ ಕಾಣುವುದಿಲ್ಲ. ಇಬ್ಬರು ಅಧಿಕಾರಿಗಳಲ್ಲಿ ತಮಗೆ ಬೇಕಾದವರ ಪರ ವಹಿಸಿ, ತಮ್ಮದೇ ಕಾರಣಗಳನ್ನು ಕಂಡುಕೊಂಡು ವಾದ, ವಿವಾದ, ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ನಡೆಸಿ ತೃಪ್ತಿಪಟ್ಟ ಜಾಣರೂ ಇದ್ದಾರೆ.

ಬಹಳ ಮುಖ್ಯವಾದ ಮಾತೆಂದರೆ, ಈ ಇಬ್ಬರು ಅಧಿಕಾರಿಗಳೂ ದಕ್ಷರು, ಪ್ರಾಮಾಣಿಕರು, ಒಳ್ಳೆಯ ರೆಕಾರ್ಡ್ ಇಟ್ಟುಕೊಂಡು ಕೆಲಸ ಮಾಡಿದವರು. ಯಾರೂ ಈ ಅಧಿಕಾರಿಗಳನ್ನು ಭ್ರಷ್ಟರು ಎಂದು ಹೇಳಿಲ್ಲ. ಅದಕ್ಕೆ ದಾಖಲೆಗಳನ್ನು ಒದಗಿಸಿಯೂ ಇಲ್ಲ. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಮತ್ತು ಅಹಂ ಎಂಬುದು ಪರಸ್ಪರ ಹೊಂದಿಕೊಂಡು ಕೆಲಸ ಮಾಡಲು ಬಿಡಲಿಲ್ಲ ಎಂಬುದು ನಿಜ.  ಸಣ್ಣ ಹೊಂದಾಣಿಕೆಯೊಂದಿಗೆ, ಅತ್ಯುತ್ತಮ ಕೆಲಸವನ್ನು ಮಾಡಿ ಜನತೆಯ ಮೆಚ್ಚುಗೆ ಗಳಿಸಬಹುದಾದ ಅವಕಾಶವನ್ನು ಇಬ್ಬರೂ ಕಳೆದುಕೊಂಡರೇ? ಅಥವಾ ಇವರ ವರ್ಗಾವಣೆಯ ಹಿಂದೆ ವ್ಯವಸ್ಥಿತ ಸಂಚು ಇತ್ತೇ ಎಂಬುದು ಪ್ರಮುಖವಾದ ಪ್ರಶ್ನೆ.

ಶಿಲ್ಪನಾಗ್‍ ರಾಜೀನಾಮೆ ಕೊಟ್ಟಾಗ ಮಹಾನಗರ ಪಾಲಿಕೆಯ 65 ಜನ ಸದಸ್ಯರು ಪಕ್ಷಭೇದ ಮರೆತು ಅವರ ಬೆಂಬಲಕ್ಕೆ ನಿಂತರು; ಪಾಲಿಕೆಯ ನೌಕರರು, ಸಿಬ್ಬಂದಿವರ್ಗ ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ಘೋಷಿಸಿದರು. ಶಿಲ್ಪನಾಗ್‍ ಅವರ ಕಾರ್ಯದಕ್ಷತೆಯನ್ನು ಇದು ತೋರಿಸುತ್ತದೆ. ಅಷ್ಟೇ ಅಲ್ಲ, ಇವರ ಪ್ರಾಮಾಣಿಕತೆಯ ಬಗ್ಗೆ ಯಾವ ರಾಜಕಾರಣಿಯಾಗಲಿ, ಸಾರ್ವಜನಿಕ ವ್ಯಕ್ತಿಯಾಗಲಿ ಬೆರಳು ತೋರಿಸಲಿಲ್ಲ. ನಾಗ್‍ ಕೆಲಸ ಮಾಡಲಿಲ್ಲ, ಲೆಕ್ಕ ಕೊಡಲಿಲ್ಲ ಎಂದು ರೋಹಿಣಿ ದೂರಿದರೂ, ನಾಗ್‍ ಅವರ ಕೆಲಸವನ್ನು ಮೈಸೂರಿನ ಜನತೆ ಗಮನಿಸಿದರು. ಅವರ ಲೆಕ್ಕ ತೆರೆದಿಟ್ಟ ಪುಸ್ತಕದಂತೆಯೇ ಇದೆ ಎಂಬುದು ಕೂಡಾ ನಿಜ. ಲೆಕ್ಕ ಕೊಡಲಿಲ್ಲ ಎಂದರೆ ಹಣವನ್ನು ನುಂಗಿದ್ದಾರೆ ಎಂದರ್ಥ. ಇಂಥ ಆಪಾದನೆಯನ್ನು ಯಾರೊಬ್ಬರೂ ಮಾಡಿಲ್ಲದಿರುವಾಗ, ವೆಚ್ಚದ ಲೆಕ್ಕ ಕೊಡಲಿಲ್ಲ ಎಂಬುದು ದೊಡ್ಡ ಸಂಗತಿಯಾಗುವುದಿಲ್ಲ.  

ಇನ್ನು ರೋಹಿಣಿ ದರ್ಪದ ಅಧಿಕಾರಿ, ಯಾರಿಗೂ ಸೊಪ್ಪು ಹಾಕದ ಅಧಿಕಾರಿ. ಪ್ರಾಮಾಣಿಕತೆ ಮತ್ತು ದಕ್ಷತೆ ಇರುವವರು ಯಾರಿಗೆ ಸೊಪ್ಪು ಹಾಕಬೇಕು, ಜನತೆಯನ್ನು ಬಿಟ್ಟು? ಹಾಗೆ ಬಾಗುವುದನ್ನು ತೋರಿಸಿದರೆ ನಮ್ಮ ಬಹುಪಾಲು ರಾಜಕಾರಣಿಗಳು ತಲೆಯ ಮೇಲೆ ಕೂಡುತ್ತಾರೆ ಮತ್ತು ತಮ್ಮ ಅವ್ಯವಹಾರಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅಧಿಕಾರಿಗಳನ್ನು ದಾಳಗಳಾಗಿ ಮಾಡಿಕೊಳ್ಳುತ್ತಾರೆ. ಇದಕ್ಕೆ ರೋಹಿಣಿ ಅವಕಾಶ ಕಲ್ಪಿಸಿಕೊಡಲಿಲ್ಲ ಎಂಬುದೇ ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ.

ಈ ಇಬ್ಬರು ಅಧಿಕಾರಿಗಳನ್ನು ವರ್ಗಾಯಿಸುವುದರ ಬದಲು ಬೇರೆ ರೀತಿಯಿಂದ ಜಗಳ ಪರಿಹರಿಸುವ ಅವಕಾಶ ಸರ್ಕಾರಕ್ಕೆ ಇತ್ತು. ಅದನ್ನೆಲ್ಲ ಕೈಬಿಟ್ಟು ವರ್ಗಾವಣೆಯ ಮಾರ್ಗವನ್ನೇ ಸರ್ಕಾರ ಹಿಡಿದದ್ದು ಸಂಶಯಕ್ಕೆ ದಾರಿಮಾಡಿಕೊಡುತ್ತದೆ. ಇದರ ಹಿಂದೆ ವ್ಯವಸ್ಥಿತ ಸಂಚು ಇರುವುದು ಕಾಣಿಸುತ್ತದೆ. ಮುಖ್ಯವಾಗಿ ರೋಹಿಣಿ ಅವರ ವರ್ಗಾವಣೆ. ಮೈಸೂರನ್ನು ಕಬಳಿಸುತ್ತಿರುವ ಭೂ ಮಾಫಿಯಾ, ಮೆಡಿಕಲ್‍ ಮಾಫಿಯಾ ಮತ್ತು ರಿಯಲ್‍ ಎಸ್ಟೇಟ್‍ ಧಂದೆ, ರೋಹಿಣಿ ಅವರನ್ನು ಸಹಿಸುವುದು ಸಾಧ್ಯವಿರಲಿಲ್ಲ. ಯಾಕೆಂದರೆ ರೋಹಿಣಿ ಹಾವಿನ ಹುತ್ತಕ್ಕೇ ಕೈಹಾಕಿದ್ದರು.

ಈ ಮಾಫಿಯಾಗಳನ್ನು ಬಗ್ಗುಬಡಿಯಲು ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಂಡಿದ್ದರೆಂದು ಹೇಳಲಾಗುತ್ತಿದೆ. ಅವರದೇ ಆದ ಕಾರ್ಯಯೋಜನೆಯೂ ಕಾಣಿಸುತ್ತಿತ್ತು. (ಏಳು ತಿಂಗಳ ಅವಧಿಯಲ್ಲಿಯೇ ಇವರು ಭೂ ಒತ್ತುವರಿಯ ಕೆಲವು ಪ್ರಕರಣಗಳಲ್ಲಿ ದಕ್ಷವಾಗಿ, ದಿಟ್ಟ ನಿಲುವಿನಿಂದ ಕೆಲಸ ಮಾಡಿದ್ದರು) ಈ ಮಾಫಿಯಾಗಳ ಹಿಂದಿನ ಶಕ್ತಿ ರಾಜಕೀಯ ವ್ಯಕ್ತಿಗಳೇ. ಕಳೆದ ಮೂರ್ನಾಲ್ಕು ದಶಕಗಳಿಂದ ಮೈಸೂರಿನಲ್ಲಿ ಈ ಮಾಫಿಯಾಗಳು ಕ್ರಿಯಾಶೀಲವಾಗಿವೆ. ಭೂ ಮಾಫಿಯಾ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ತ.ಮ.ವಿಜಯಭಾಸ್ಕರ್‍ ಅವರು ನೀಡಿದ್ದ 900 ಪುಟಗಳ ವರದಿಯನ್ನು ಯಾವ ಸರ್ಕಾರವೂ ಈವರೆಗೆ ಮುಟ್ಟುವ ಧೈರ್ಯಮಾಡಿಲ್ಲ .

 ಬೆಂಗಳೂರನ್ನು ನುಂಗಿ ನೊಣೆದ ಮೇಲೆ ಕೈಚಾಚಿದರೆ ಸಿಗುವುದು ಮೈಸೂರೇ. ರೋಹಿಣಿ ಈ ಮಾಫಿಯಾಗಳ ಮೇಲೆ ಕೆಂಗಣ್ಣು ಬಿಟ್ಟಮೇಲೆ, ಇವರಿದ್ದರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ತಿಳಿದ ಈ ಶಕ್ತಿಗಳು ರೋಹಿಣಿಯ ಎತ್ತಂಗಡಿಗೆ ರೂಪುರೇಷೆಗಳನ್ನು ಹೆಣಿಯತೊಡಗಿದರು. ರೋಹಿಣಿ ಈಜುಕೊಳ ನಿರ್ಮಿಸಿಕೊಂಡರು, ಜಿಮ್‍ಗೆ ಹಣ ಖರ್ಚುಮಾಡಿದರು ಇತ್ಯಾದಿ ಆರೋಪಗಳು ತನಿಖೆಯಲ್ಲಿವೆ. ಅವರು ತಪ್ಪು ಮಾಡಿದ್ದರೆ ಅದಕ್ಕಾಗಿ ಶಿಕ್ಷೆಯನ್ನೂ ಅನುಭವಿಸಬೇಕು. ಇದು ದೊಡ್ಡ ಸಂಗತಿಯಲ್ಲ. ಮಾಫಿಯಾಗಳ ಅಪಾಯವನ್ನು ಮರೆಮಾಚಿ ಈ ಸಣ್ಣಪುಟ್ಟ ಸಂಗತಿಗಳನ್ನು ಎತ್ತುವುದು ಘನಂದಾರಿ ಕೆಲಸವಲ್ಲ. ಇಲ್ಲಿಯೂ ರೋಹಿಣಿಯವರ ವೆಚ್ಚದ ಆದ್ಯತೆಯ ಕೊರತೆಯನ್ನು ಕಾಣಬಹುದೇ ಹೊರತು, ಭ್ರಷ್ಟಾಚಾರವನ್ನಲ್ಲ.

ಈ ಮಾಫಿಯಾಗಳು ಬೆಂಗಳೂರನ್ನು ತಿಂದು ಹಾಕಿವೆ. ಜನ ಅಲ್ಲಿ ಉಸಿರಾಡುವುದೂ ಕಷ್ಟವಾಗಿದೆ. ಮೈಸೂರು ಅದೇ ಸ್ಥಿತಿಯನ್ನು ತಲುಪುವ ದಿನಗಳು ದೂರವಿಲ್ಲ. ಇದನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಕೆಲವು ರಾಜಕಾರಣಿಗಳು, ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಆದರೆ ಅದು ಶಕ್ತಿಶಾಲಿಯಾದ ದೊಡ್ಡ ದನಿಯಲ್ಲ. ಮೌನ ವಹಿಸಿರುವವರೆ ಬಹಳ. ಇದು ಅನೇಕ ಸಂಗತಿಗಳನ್ನು ಹೇಳುತ್ತದೆ.

ಅಧಿಕಾರಿಗಳ ಈ ಜಗಳ ಇನ್ನೊಂದು ಅಂಶದ ಮೇಲೂ ಬೆಳಕು ಚೆಲ್ಲಿದೆ. ಇದೇನೂ ಹೊಸ ಅಂಶವಲ್ಲ. ಆದರೂ ಅದನ್ನು ಎಚ್ಚರದಿಂದ ನೋಡಬೇಕಾದ ಅಗತ್ಯವಿದೆ. ಜಾತಿ ರಾಜಕಾರಣ ನಾಚಿಕೆಬಿಟ್ಟು ಮೆರೆಯುತ್ತಿರುವುದು, ಮಠಗಳು ಜಾತಿ ರಾಜಕಾರಣದ ಅಧಿಕಾರ ಕೇಂದ್ರಗಳಾಗಿ ಕ್ರಿಯಾಶೀಲವಾಗಿರುವುದು ಪ್ರಜಾಪ್ರಭುತ್ವಕ್ಕೆ ಒಡ್ಡುತ್ತಿರುವ ಬಹುದೊಡ್ಡ ಸವಾಲು ಮತ್ತು ಅತ್ಯಂತ ಅಪಾಯಕರ ಬೆಳವಣಿಗೆ. ದಲಿತರು, ಹಿಂದುಳಿದವರು ಮತ್ತು ಜಾತ್ಯತೀತ ಪ್ರಜಾಪ್ರಭುತ್ವದ ತತ್ವಗಳನ್ನು ನಂಬಿಕೊಂಡಿರುವ ನಾಗರಿಕರ ಏಳಿಗೆಗೆ ಇಂಥ ಬೆಳವಣಿಗೆ ಮಾರಕ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿರುವುದು ಇಂದಿನ ಜರೂರು.

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This