ಜಗತ್ತು ಈಗ ಗಾಂಧೀಜಿಯ ಶೋಧನೆಯ ಅನಿವಾರ್ಯತೆಗೆ ಸಿಲುಕಿದೆ..

ಮನೆಯೊಳಗೆ ಮನೆಯೊಡೆಯನಿಲ್ಲ

ಚಂದ್ರಶೇಖರ ಹೆಗಡೆ

ಗಾಂಧೀಜಿ ಈ ಜಗತ್ತಿನ ಮೋಹಕ ರೂಪಕ. ವಿಶ್ವವೇ ತಲೆಬಾಗಿ ಶರಣಾಗುವ ಕೆಲವೇ ರೂಪಕಗಳಲ್ಲಿ ಗಾಂಧಿ ಕೂಡ ಒಬ್ಬರು. ಹೆಸರೇ ಮೋಹನದಾಸ. ಮೋಹನ ವಿಶ್ವರೂಪಿಯಾದರೆ, ದಾಸ ಯೋಗಿಯ ಪ್ರತಿರೂಪ. ಕವಿತ್ವ ಮತ್ತು ದಾರ್ಶನಿಕತೆಗಳು ಒಂದೇ ಆತ್ಮದೊಳಗೆ ಉದಯಿಸುವುದು ಎಷ್ಟು ಅಪರೂಪವೋ ಅಷ್ಟೇ ವಿರಳ ಮೋಹ ಹಾಗೂ ನಿರ್ಮೋಹಗಳೆರಡೂ ಐಕ್ಯವಾಗುವುದು. ಅಂತಹ ಐಕ್ಯತೆಯ ಆತ್ಮ ಗಾಂಧೀಜಿ.

ಗಾಂಧೀಜಿ ಎಂಬ ವಸ್ತುವನ್ನಿಟ್ಟುಕೊಂಡೇ ನೂರಾರು ಕಥೆ ಕವಿತೆ ಲೇಖನ ಕಾದಂಬರಿಗಳು ರಚನೆಯಾಗಿವೆ. ಏಕೆಂದರೆ ಗಾಂಧೀಜಿ ಆಧುನಿಕ ಜಗದ ಭರವಸ ; ಭವಿಷ್ಯ ; ಇತಿಹಾಸ ಹಾಗೂ ಪರಿಹಾರ. ಬಹುಶಃ ಈ ಭುವನವು ಗಾಂಧೀಜಿಯವರನ್ನು ವ್ಯಾಖ್ಯಾನಿಸಿದಷ್ಟು ಬೇರಿನ್ನಾವ ಚೇತನವನ್ನೂ ವಿಮರ್ಶಿಸಿಲ್ಲವೆಂಬುದು ನನ್ನ ಗ್ರಹಿಕೆ. ಬಗೆದಷ್ಟೂ ಆಳ, ಏರಿದಷ್ಟೂ ಎತ್ತರ, ಚಾಚಿದಷ್ಟೂ ವಿಸ್ತಾರವಾದ ವಿಶ್ವದ ಏಕೈಕ ದಾರ್ಶನಿಕರೆಂದರೆ ಗಾಂಧೀಜಿ.

ನಾವೆಲ್ಲರೂ ಗಾಂಧೀಜಿಯನ್ನು ಇಂದು ಬಯಸುತ್ತಿರುವುದು ಕೇವಲ ಭೌತಿಕವಾಗಿ ಮಾತ್ರ. ಅವರನ್ನು ನಮ್ಮ ಆತ್ಮದೊಳಗೆ ಇಳಿಸಿಕೊಳ್ಳುವುದೆಂದರೆ ಹೆದರಿ ಪಲಾಯನ ಮಾಡಿಬಿಡುತ್ತೇವೆ ಸದ್ದಿಲ್ಲದೇ. ಎಂದರೆ ಗಾಂಧೀಜಿ ನಮಗೆಷ್ಟು ಪ್ರಸ್ತುತವೆಂಬುದೇ ಯಕ್ಷ ಪ್ರಶ್ನೆ! ವೈಚಾರಿಕತೆಯಲ್ಲಿ ಗಾಂಧಿಯನ್ನು ಅನಾಯಾಸವಾಗಿ ಒಪ್ಪಿಕೊಳ್ಳುವ ನಾವು ಸಹಚಾರಿಕೆಯಲ್ಲಿ, ಶೋಧಿಸಲು ತೊಡಗುವ ಸಂಶೋಧಕರಾಗಿಬಿಡುತ್ತೇವೆ. ಅವರ ವಿಚಾರಗಳನ್ನು ನಿತ್ಯಜೀವನದಿಂದ ದೂರವಿಡುವ ಹರಸಾಹಸ ಮಾಡುತ್ತೇವೆ.

ಗಾಂಧೀಜಿಯವರಿಗಿದು ನಾವು ತರುತ್ತಿರುವ ನಿತ್ಯದ ಸಾವು; ಕ್ಷಣ ಕ್ಷಣದ ನೋವು. ಮೂರ್ತಿಯನ್ನಾಗಿ ನಿಲ್ಲಿಸಿ, ಎದೆಯೊಳಗೆ ಒಮ್ಮೆ ಇಲ್ಲವಾಗಿಸಿದರೆ, ಮಗದೊಮ್ಮೆ ವರುಷಕ್ಕೊಮ್ಮೆ ಆಚರಿಸಿ ಮರೆತು ನಿರಾಳವಾಗುತ್ತೇವೆ. ಇದನ್ನೇ ಜಿ.ಎಸ್. ಶಿವರುದ್ರಪ್ಪನವರು ತಮ್ಮ ಗಾಂಧಿ ಕವಿತೆಯಲ್ಲಿ ಹೀಗೆ ಹಾಡುತ್ತಾರೆ-

ನೀನಿದ್ದೆ ಎಂಬುದಕ್ಕೆ ಸ್ಮಾರಕ ನಿರ್ಮಿಸುವುದನ್ನು
ನಾವು ಮರೆತಿಲ್ಲ ಇಗೊ ಈ ಚೌಕದಲ್ಲಿ, ಆ ಮಹಲಿನಲ್ಲಿ
ಈ ಪಾರ್ಕಿನಲ್ಲಿ ನಿನ್ನ ವಿಗ್ರಹವನ್ನು ಸ್ಥಾಪಿಸಿ
ವರ್ಷ ವರ್ಷವೂ ನಿನ್ನ ನೆನಪುಗಳಲ್ಲಿ ಕೈ ತೊಳೆದುಕೊಳ್ಳುತ್ತಿದ್ದೇವೆ
ಆದರೂ ಕೈಗಂಟಿಕೊಂಡಿರುವ ನಿನ್ನ ರಕ್ತದ ಗುರುತು
ಇನ್ನೂ ಹೋಗುತ್ತಿಲ್ಲ

ಗಾಂಧೀಜಿ ನಮ್ಮ ಆತ್ಮವೂ ಹೊರಲಾಗದ ಬಹುದೊಡ್ಡ ಭಾರವಾಗಿದ್ದಾರೇನೋ ಎಂದೆನಿಸಿದೆ ನನಗೆ. ಅರೆ ಗಾಂಧೀಜಿಗೂ ಈ ಕೊರೊನಾ ಕಾಲಘಟ್ಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ ಎಂಬ ಸೋಜಿಗ ನಿಮ್ಮದಾಗಿದ್ದರೆ ಬನ್ನಿ ವಿಚಾರಿಸೋಣ. ಗಾಂಧೀಜಿ ಅಂದು ಹೋರಾಟವನ್ನಾರಂಭಿಸಿದ್ದು ವಿಮುಕ್ತಿಗಾಗಿ. ಕಣ್ಣೆದುರೇ ನಿಂತು ಭಾರತವನ್ನಾಳುತ್ತಿದ್ದ ಬ್ರಿಟೀಷರ ವಿರುದ್ದ ಸ್ವರಾಜ್ಯವೇ ನಮ್ಮ ಜನ್ಮಸಿದ್ಧ ಹಕ್ಕು ಎಂದು ಹೋರಾಟಕ್ಕಿಳಿದರು ಗಾಂಧೀಜಿಯೊಂದಿಗೆ ಲಕ್ಷಾಂತರ ಹೋರಾಟಗಾರರು. ಇಂದು ಕಣ್ಣಿಗೆ ಕಾಣದ ಕೊರೊನಾ ವೈರಸ್ ವಿರುದ್ದ ಯುದ್ದವನ್ನು ಸಾರಿದ್ದೇವೆ.

ಇಂದೂ ಹೋರಾಟ ನಡೆದಿರುವುದು ವಿಮುಕ್ತಿಗಾಗಿಯೇ. ಅಂದು ಸ್ವಾತಂತ್ರ‍್ಯವೆಂಬ ಜೀವ ಹಾಗೂ ಜೀವನಕ್ಕಾಗಿ ಸಂಘರ್ಷ ರೂಪಿತಗೊಂಡಿದ್ದರೆ ಇಂದು ಜೀವ ಹಾಗೂ ಜೀವನವೆಂಬ ಸ್ವಾತಂತ್ರ‍್ಯಕ್ಕಾಗಿ ವೈರಾಣುವಿನ ವಿರುದ್ಧ ಇಂಜೆಕ್ಷನ್ ಮಸೆಯುತ್ತಿದ್ದೇವೆ. ಅಂದರೆ ಹೋರಾಟ ನಿತ್ಯೋತ್ಸವವಿದ್ದ ಹಾಗೆ. ಅದು ಸಾರ್ವಕಾಲಿಕ ಹಾಗೂ ಸಾರ್ವತ್ರಿಕ. ಬ್ರಿಟೀಷರು- ಊಳಿಗಮಾನ್ಯ ವ್ಯವಸ್ಥೆ- ಬಂಡವಾಳಶಾಹಿ ವ್ಯವಸ್ಥೆ- ಉದಾರೀಕರಣ, ಜಾಗತೀಕರಣ, ಖಾಸಗೀರಣ (LPG) -ಭಯೋತ್ಪಾದನೆ- ಕೊರೊನಾ ಹೀಗೆ ನಾವು ಎದುರಿಸುತ್ತಿರುವ ಸಮಸ್ಯೆಗಳು ಕಾಲಕಾಲಕ್ಕೆ ವೇಷಾಂತರಗೊಂಡು, ರೂಪಾಂತರಗೊಂಡು ಮತ್ತೆ ಮತ್ತೆ ಹೋರಾಟವನ್ನು ಮರುರೂಪಿಸುವ ಜರೂರತ್ತನ್ನು ಸೃಷ್ಟಿಸಿವೆ.

ಜಗತ್ತು ಈಗ ಗಾಂಧೀಜಿಯ ಶೋಧನೆಗೆ ತೊಡಗಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಸತ್ಯಕ್ಕಾಗಿ ಆಗ್ರಹಿಸುವ ಜೀವಿಗಾಗಿ ಹಪಹಪಿಸುತಿದೆ; ಶಾಂತಿಗಾಗಿ ಹಂಬಲಿಸುವ ಚೇತನಕ್ಕಾಗಿ ಚಾತಕಪಕ್ಷಿಯಾಗಿದೆ; ಹಿಂಸೆಯನ್ನು ನುಂಗುವ ವಿಷಕಂಠನಿಗಾಗಿ ಕಣ್ಣರಳಿಸಿ ನಿಂತಿದೆ. ಗಾಂಧೀಜಿಯನ್ನು ಗಲ್ಲಿಗಲ್ಲಿಗಳಲ್ಲಿ ಶಿಲ್ಪವಾಗಿ ನಿಲ್ಲಿಸಿ ಮರೆತಿರುವುದರ ಕಾರಣಕ್ಕಾಗಿ ಇಂದು ಅವನಿಗಾಗಿ ಕಾಯುವ ದುಸ್ಥಿತಿಯನ್ನು ತಂದುಕೊಂಡಿದ್ದೇವೆ.

ಕಾಳಸಂತೆಯೊಳಗೆ ಔಷಧ ಮಾರುವವನ ಎದೆಯೊಳಗೆ ಹಿಂದೆಯೇ ಗಾಂಧಿ ನೆಲೆಸಿದ್ದರೆ, ಅದರಿಂದ ಉಪಶಮನವಾಗಿ ಉಳಿದ ಅದೆಷ್ಟು ಉಸಿರುಗಳಲ್ಲಿ ಗಾಂಧೀಜಿ ಪರಿಮಳವಾಗಿರುತ್ತಿದ್ದರು. ಅನಧಿಕೃತವಾಗಿ ಆಸ್ಪತ್ರೆಯ ಹಾಸಿಗೆಯನ್ನು ಕಾಯ್ದಿರಿಸುವ ದಂಧೆಯೊಳಗೆ ತೊಡಗಿದ ವೈದ್ಯರು ಹಾಗೂ ನರ್ಸುಗಳ ಹೃದಯದೊಳಗೆ ಗಾಂಧೀಜಿಯೆಂಬ ನಿಸ್ವಾರ್ಥತೆ ಹರಿದಾಡಿದ್ದರೆ, ಪ್ರಾಣ ಉಳಿಸಿಕೊಂಡ ಅದೆಷ್ಟು ಬಡಜೀವಿಗಳ ಶ್ವಾಸಕೋಶಗಳು ಇಂದು ಗಾಂಧೀಜಿಯನ್ನೇ ಉಸಿರಾಗಿಸಿಕೊಳ್ಳುತ್ತಿದ್ದವೋ ಏನೋ? ಲಸಿಕೆಯನ್ನು ಕದ್ದೊಯ್ಯುವವನ ಅಂತರಂಗದೊಳಗೆ ಗಾಂಧೀಜಿಯ ಸತ್ಯಮೇವ ಜಯತೆ ಸ್ಥಾವರವಾಗಿದ್ದರೆ, ಅದೆಷ್ಟು ಶ್ರಮಜೀವಿಗಳು ಗಾಂಧೀಜಿಯನ್ನೇ ಆಮ್ಲಜನಕ ಮಾಡಿಕೊಳ್ಳುತ್ತಿದ್ದವೋ ಏನೋ.

ಆಮ್ಲಜನಕದ ಸಿಲಿಂಡರುಗಳನ್ನು ಹೊತ್ತೊಯ್ಯುವವರ ಆತ್ಮದೊಳಗೆ ಗಾಂಧೀಜಿಯವರ ಪ್ರಾಮಾಣಿಕತೆ ಸಾಗರವಾಗಿ ಉಕ್ಕಿದ್ದರೆ, ಅದೆಷ್ಟು ಪ್ರಾಣಗಳು ಗಾಂಧೀಜಿಯನ್ನು ತಮ್ಮ ಪ್ರಾಣವನ್ನಾಗಿಸಿಕೊಳ್ಳುತ್ತಿದ್ದರೋ ಏನೋ. ಗಾಂಧೀಜಿಯ ಅನುಪಸ್ಥಿತಿ ಜಗತ್ತಿನಲ್ಲಿ ಅದೆಂತಹ ತಲ್ಲಣಗಳ ಸುನಾಮಿಯನ್ನೆಬ್ಬಿಸಿದೆಯೆಂಬುದನ್ನು ಗಮನಿಸಿ. ಇವು ಕೆಲವು ಉದಾಹರಣೆಗಳಷ್ಡೇ ಕಣ್ಣಿಗೆ ಕಾಣದ ಎಷ್ಟೋ ಅನಾಚಾರಗಳಿಗೆ ಪರಿಹಾರವಾಗಿ ಗಾಂಧೀಜಿಯ ಅನುಪಸ್ಥಿತಿ ಎದ್ದುಕಾಣುತ್ತಿದೆಯಲ್ಲವೇ ?

ಕತ್ತಿ ಕೋವಿ ಹಿಡಿಯಲಿಲ್ಲ
ಆದರೂ ಯುದ್ಧ ಮಾಡಿದೆ

ಎಂದು ಗಾಂಧೀಜಿಯನ್ನು ಜಿ.ಎಸ್.ಎಸ್. ಆಲಾಪಿಸಿದ ಹಾಗೆ ನಾವು ಸುರಕ್ಷತೆಯನ್ನು ಕತ್ತಿಯಂತೆ, ಲಸಿಕೆಯನ್ನು ಗುರಾಣಿಯಂತೆ ಬಳಸಿ ಕೋವಿಡ್ ಹೆಮ್ಮಾರಿಯ ಕ್ರೂರತನದ ವಿರುದ್ಧ ಯುದ್ಧ ಮಾಡಬೇಕಾಗಿದೆ. ಆಳುವವರ ಕೆಲವರೆದೆಗಳಲ್ಲಿಯೂ ಗಾಂಧೀಜಿ ಪ್ರೇಮದ ಗೂಡು ಕಟ್ಟಬೇಕಾಗಿತ್ತು ಎಂದೆನಿಸಿದೆ. ಕೆಂಪು ಕೋಟೆಯ ಮೇಲೆ ನಾಯಕರೆಲ್ಲರೂ ಸ್ವಾತಂತ್ರ‍್ಯ ದೊರೆತ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರೆ, ಇತ್ತ ಗಾಂಧೀಜಿ ಕೊಲ್ಕೋತಾದ ಬೀದಿ ಬೀದಿಗಳಲ್ಲಿ ಸಂಭವಿಸಿದ ಕೋಮುದಳ್ಳುರಿಯಲ್ಲಿ ಬೆಂದ ಜೀವಗಳ ಹೆಗಲ ಮೇಲೆ ಕೈಹಾಕಿ ಅವರ ಕಣ್ಣೀರನ್ನೊರೆಸುತ್ತಿದ್ದರು. ಇದು ಗಾಂಧೀಜಿಯವರಿಗೆ ಮಾತ್ರ ಸಾಧ್ಯವಾಗಬಹುದಾದ ತಪಸ್ಸು.

ಕೊರೊನಾ ಕಾಲಘಟ್ಟದಲ್ಲಿ ಗಾಂಧೀಜಿ ಬದುಕಿದ್ದರೆ ಜಗತ್ತು ಅದೆಷ್ಟು ನಿರಮ್ಮಳವಾಗಿರುತ್ತಿತ್ತು. ಅದೆಷ್ಟು ಜೀವಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದವೋ ಏನೋ ಅದೊಂದು ಕಾಲ್ಪನಿಕ ವಿಸ್ಮಯ. ಈ ದುರಿತ ಕಾಲಘಟ್ಟದ ಪ್ರತಿ ಘಳಿಗೆಯಲ್ಲೂ ಗಾಂಧೀಜಿಯ ಅಗತ್ಯವನ್ನು ಮನಗಾಣಬೇಕಾಗಿದೆ ನಾವು. ನಿರ್ಗತಿಕರು ಹಸಿವಿಗಾಗಿ ಅಲೆಯುವಾಗ, ರೈತರು ಬೆಳೆದ ಬೆಳೆಯನ್ನು ಬೀದಿಯಲ್ಲಿ ತಂದು ಸುರಿಯುವಾಗ, ಹಾಸಿಗೆ ಸಿಗದೇ ರೋಗಿ ನರಳುವಾಗ, ಪ್ರೀತಿಪಾತ್ರರನ್ನು ಕಳೆದುಕೊಂಡ ಸಂಬಂಧಿಕರು ರೋದನಗೈಯ್ಯುವಾಗ, ಶವಗಳನ್ನು ನದಿಗೆ ಎಸೆಯುವಾಗ, ದೇಶಗಳ ಮಧ್ಯೆ ಲಸಿಕೆಯ ಪೇಟೆಂಟ್ ಗಾಗಿ ಸ್ಪರ್ಧೆ ಏರ್ಪಟ್ಟಿರುವಾಗ, ಇದೇ ಸರಿಯಾದ ಸಂದರ್ಭವೆಂದು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರನ್ನು ಕಂಡಾಗ ನನಗೆ ಗಾಂಧೀಜಿ ಅವಶ್ಯವಾಗಿ ಇನ್ನಿಲ್ಲದಂತೆ ಕಾಡುತ್ತಾರೆ. ಹಾಗೆಂದು ಅವರಿಲ್ಲವೇ ಇಲ್ಲ ಈ ವಿಶ್ವದಲ್ಲಿ ಎನ್ನುವ ಹಾಗಿಲ್ಲ.

ರಷ್ಯಾ, ಫ್ರಾನ್ಸ್, ಅಮೇರಿಕಾ, ಫ್ರಾನ್ಸ್ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೊರತೆಯಾದಾಗ ಲೆಕ್ಕವಿಲ್ಲದಷ್ಟು ಆಮ್ಲಜನಕದ ಟ್ಯಾಂಕರ್‌ಗಳನ್ನು, ಕಾನ್ಸಂಟ್ರೇಟರ್ ಗಳನ್ನು ಕಳುಹಿಸಿ ಮೆರೆದಿರುವ ಮಾನವೀಯತೆಯಲ್ಲಿ ಗಾಂಧೀಜಿ ಕೈಕಟ್ಟಿಕೊಂಡು ಮಂದಹಾಸ ಬೀರಿರುವುದನ್ನು ಕಂಡು ಹೆಮ್ಮೆಯಿಂದ ಬೀಗಿದ್ದೇನೆ. ಪುಟ್ಟ ರಾಷ್ಟ್ರಗಳೂ ಕೂಡ ತಮ್ಮ ಕೈಲಾದಷ್ಟು ವೈದ್ಯಕೀಯ ಸಾಧನಗಳನ್ನೊದಗಿಸಿ ಚಾಚಿರುವ ಸಹಾಯಹಸ್ತದಲ್ಲಿ ಗಾಂಧೀಜಿಯವರ ದುಂಡನೆಯ ಕನ್ನಡಕದೊಳಗಿನಿಂದ ಇಳಿದುಬಂದ ಆನಂದಭಾಷ್ಪಗಳನ್ನು ಕಂಡು ಕಣ್ಣೀರಾಗಿದ್ದೇನೆ.

ಹಸಿದು ಅಲೆದಾಡುವ ನಿರ್ಗತಿಕರಿಗೆ, ಬಡವರಿಗೆ, ವೃದ್ಧರಿಗೆ, ಅಸಹಾಯಕರಿಗೆ, ರೋಗಿಗಳಿಗೆ, ದುಡಿಮೆಯಿಲ್ಲದೇ ಕೈಚೆಲ್ಲಿ ಕುಳಿತ ಒಣಗಿದ ಜಠರದೊಡೆಯರಿಗೆ ಅನ್ನವನಿಕ್ಕಿ ನೀರೆರೆದು ಪೋಷಿಸಿದ ದೈವಾಂಶಸಂಭೂತರ ಮುಖಾರವಿಂದಗಳ ಧನ್ಯತೆಯ ಹಿಂದೆ ಕೋಲು ಹಿಡಿದು ಮಂದಸ್ಮಿತರಾದ ಗಾಂಧೀಜಿಯನ್ನು ದರ್ಶಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇನೆ.

ತುಮಕೂರಿನಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆಯೊದಗಿಸುವ ಸಾಕ್ಷಾತ್ ನಾರಾಯಣನಂತಿರುವ ವೈದ್ಯರೊಬ್ಬರ ಮೊಗದಲ್ಲಿನ ಸಂತೃಪ್ತಿಯಲ್ಲಿ ಪ್ರತ್ಯಕ್ಷವಾಗುವ ಗಾಂಧೀಜಿಯನ್ನು ನೆನೆದು ಕೈಮುಗಿದಿದ್ದೇನೆ. ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥವಾದ ಕಂದಮ್ಮಗಳಿಗೆ ಆಸರೆಯನ್ನೊದಗಿಸಲು ಮುಂದೆ ಬಂದಿರುವ ಸಂಘ ಸಂಸ್ಥೆಗಳ ಸದಸ್ಯರೊಳಗಿನ ಗಾಂಧೀಜಿಗೆ ಪ್ರಣಾಮಗಳನ್ನು ಸಲ್ಲಿಸಿರುವೆ. ಗಾಂಧೀಜಿಯ ಗೈರುಹಾಜರಿಯ ಚಿಂತೆಯ ಗೆರೆಗಳ ಮಧ್ಯೆ ಗಾಂಧೀಜಿಯ ಉಪಸ್ಥಿತಿಯ ಚೈತನ್ಯವನ್ನೂ ಗುರ್ತಿಸಿ ಮೊಗೆಮೊಗೆದು ತುಂಬಿಕೊಂಡಿದ್ದೇನೆ ಒಡಲೊಳಗೆ.

ಗಾಂಧೀಜಿ ಈ ಜಗತ್ತಿಗೆ ಅನಿವಾರ್ಯವೆಂಬ ಸಂಗತಿಯನ್ನು ನನ್ನ ಮನದ ಮುನ್ನಲೆಗೆ ತಂದ ಮತ್ತೊಂದು ಸಂಗತಿಯೆಂದರೆ ಇಸ್ರೇಲ್ ಹಾಗೂ ಪ್ಯಾಲಿಸ್ಟೀನ್ ಗಳ ಮಧ್ಯೆ ನಡೆಯುತ್ತಿರುವ ಸಮರದಂತಹ ಕದನ. ಟಾಲ್‌ಸ್ಟಾಯ್ ಅವರ ‘ಯುದ್ಧ ಮತ್ತು ಶಾಂತಿ’ ಹಾಗೂ ಗಾಂಧೀಜಿ ಈ ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸಬಲ್ಲ ಸಂಜೀವಿನಿಗಳು. ಒಂದೆಡೆ ದೇಶಗಳ ಮಧ್ಯೆ ಆವರಿಸಿಕೊಳ್ಳುತ್ತಿರುವ ಭೌತಿಕ ಯುದ್ಧ, ಮಗದೊಂದೆಡೆಗೆ ಮನುಷ್ಯನೊಳಗೆ ನಡೆಯುತ್ತಿರುವ ಆಂತರಿಕ ಯುದ್ಧ, ಇನ್ನೊಂದೆಡೆಗೆ ಕೊರೊನಾ ಹಾಗೂ ಮನುಷ್ಯರ ನಡುವೆ ನಡೆಯುತ್ತಿರುವ ಒಡಲಾಳದ ಸಮರ.

ಹೀಗೆ ಮೂರು ಪ್ರಕಾರದ ಯುದ್ಧಗಳು ಸದ್ಯ ವರ್ತಮಾನದಲ್ಲಿ ಸಂಭವಿಸುತ್ತಿವೆ. ಡಾ. ರಾಜಶೇಖರ ಮಠಪತಿಯವರ ಹೊಸ ಕಾದಂಬರಿ ‘ದಂಡಿ’ ಯಲ್ಲಿಯೂ ಕೂಡ ಹೋರಾಟ ಹೇಗೆ ನಿರಂತರವಾಗಿರುತ್ತದೆ ಎಂಬುದರ ಪ್ರತಿಪಾದನೆಯಿದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ನಡೆದ ಸತ್ಯಾಗ್ರಹವು ಇಂದು ತನ್ನ ರೂಪವನ್ನು ಬದಲಿಸಿಕೊಂಡು ಲಸಿಕೆಯ ಮೇಲೆ ವಿವಿಧ ದೇಶಗಳು ಹೇರುತ್ತಿರುವ ಮಾರುಕಟ್ಟೆಯ ಬುದ್ಧಿಸ್ವಾಮ್ಯತ್ವದ ವಿರುದ್ಧದ ವೇಷವನ್ನು ಧರಿಸಿ ಬಂದಿದೆ. ಭಾರತವೂ ಇದಕ್ಕಾಗಿ ಜಾಗತಿಕ ವೇದಿಕೆಯ ಮೇಲೆ ಪ್ರತಿಭಟನೆಯನ್ನು ಸಲ್ಲಿಸಿದೆ.

ಗಾಂಧೀಜಿಯವರು ಇವರಂತೆಯೇ ತಮ್ಮ ಸತ್ಯಾಗ್ರಹವನ್ನು ಪೇಟೆಂಟ್ ಮಾಡಿದ್ದರೆ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ಸ್ಮರಿಸಿಕೊಳ್ಳಿ. ಸತ್ಯಾಗ್ರಹಗಳು ನಿತ್ಯನಿರಂತರವೆಂಬುದನ್ನು ನಾವು ಅರಿಯಬೇಕಾಗಿದೆ. ಗುರಿ, ಸ್ಥಳ, ಕಾಲ, ಸಮಸ್ಯೆಗಳು ಪಲ್ಲಟಗೊಳ್ಳಬಹುದು ಆದರೆ ಹೋರಾಟ ಮಾತ್ರ ಅವಿರತವಾಗಿ ಸಂಭವಿಸುತ್ತಲೇ ಇರುತ್ತದೆ. ಗಾಂಧೀಜಿ ಇದನ್ನು ಮನಗಂಡೇ ಸ್ವಾತಂತ್ರ‍್ಯ ಬಂದಾಗ ಆಕಾಶಕ್ಕೆ ನೆಗೆದು ಸಂಭ್ರಮಿಸಲಿಲ್ಲ. ಬದಲಾಗಿ ಕ್ಷಣ ಕ್ಷಣವೂ ಭಾರತಿಯ ಭವಿಷ್ಯವನ್ನು ನೆನೆದು ಕೊರಗುತ್ತಿದ್ದರು ಕಂಗಾಲಾಗಿ. ಜಿ.ಎಸ್.ಎಸ್. ರಾಗಿಸುವಂತೆ
‘ಉತ್ತ ಹೊಲ ತೆರೆದ ಪುಸ್ತಕ
ಗಾಜು ಮೈ ಗಡಿಯಾರ ನಿನ್ನ ಬದುಕು
…….
ತೆರೆದ ಬಯಲಿನ ಕೆಳಗೆ ಎಲ್ಲರ ಜೊತೆಗೂ ಕೂತು
ಪ್ರಾರ್ಥಿಸಿದೆ; ಸಬಕೋ ಸನ್ಮತಿ ದೇ ಭಗವಾನ್’

ಈಗಲೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ಜನರ ಮಧ್ಯೆ ಕೂತು ಗಾಂಧೀಜಿ ಹೀಗೆ ಪ್ರಾರ್ಥಿಸುತ್ತಿದ್ದಾರೇನೋ ಎಂದೆನಿಸುತ್ತಿದೆ ನನಗೆ. ಗಾಂಧೀಜಿ ಮಾನಸಿಕವಾಗಿ ಘಾಸಿಗೊಂಡ ಕೋಟಿ ಭಾರತೀಯರಿಗೂ ಈ ಸಂದರ್ಭದ ಸಂಜೀವಿನಿಯಾಗಿದ್ದಾರೆ ಎಂಬುದನ್ನು ನಾನು ಅಲ್ಲಗಳೆಯಲಾರೆ. ಅವರನ್ನು ನಮ್ಮ ಮಧ್ಯೆ ಕಾಣುವ ಹಾಗೂ ಇರದಿದ್ದರೆ ಹೃದಯದೊಳಗಿಸಿಕೊಳ್ಳುವ ಅಂತಃಪ್ರಜ್ಞೆಯನ್ನು ಹೊಂದಬೇಕಾಗಿದೆ. ಆಶ್ಚರ್ಯವೆಂದರೆ ಗಾಂಧೀಜಿಯವರು ವೈದ್ಯರನ್ನು ವಿರೋಧಿಸುತ್ತಾರೆ.

ರೋಗದ ಮೂಲವಾದ ಮನುಷ್ಯನ ಲಯ ತಪ್ಪಿದ ಅಪಸವ್ಯಗಳನ್ನು ಪತ್ತೆ ಹಚ್ಚಿ ಅದಕ್ಕೆ ಔಷಧ ನೀಡಬೇಕೆ ವಿನಃ ಬಂದ ರೋಗಕ್ಕೆ ಮದ್ದು ನೀಡಿದರೇನು ಲಾಭವೆನ್ನುವುದು ಗಾಂಧೀಜಿಯವರ ಅಭಿಮತ. ಅಂದರೆ ಒಬ್ಬನು ಆಹಾರ ರುಚಿಯಾಗಿದೆಯೆಂದು ಎಂದಿಗಿಂತ ಹೆಚ್ಚಾಗಿ ಉಂಡು ಅಜೀರ್ಣ ಮಾಡಿಕೊಂಡು ವೈದ್ಯರಲ್ಲಿಗೆ ಹೋದರೆ ಅವರು ಮದ್ದು ಕೊಟ್ಟು ಕಳಿಸಿಬಿಡುತ್ತಾರೆ. ಆದರೆ ರೋಗಿಗೆ ಇದರಿಂದ ಬಂದ ತಿಳುವಳಿಕೆಯೇನು? ಆತನ ಅತಿಬಯಕೆಯನ್ನು ತಿದ್ದುವವರಾರು ? ಅವನ ತಪ್ಪನ್ನು ತಿದ್ದಿದರೆ ಮುಂದೆ ತಾನೇ ಜಾಗರೂಕನಾಗಿ ವೈದ್ಯರನ್ನು ಕಾಣುವ ಪ್ರಮೇಯವೇ ಬರುವುದಿಲ್ಲ.

ವೈದ್ಯರು ಮದ್ದರೆದು ಮುದ್ದು ಮಾಡಿದರೆ ರೋಗಿ ಪದೇ ಪದೇ ತಪ್ಪು ಮಾಡುತ್ತಲೇ ಹೋಗುತ್ತಾನೆ ಎನ್ನುವುದು ಗಾಂಧೀಜಿಯವರ ಪ್ರಬಲವಾದ. ಅವರು ವಿರೋಧಿಸಿದ ವೈದ್ಯರಿಂದು ನಾರಾಯಣ ಹರಿಗಳಾಗಿದ್ದಾರೆ. ಕೋವಿಡ್ -೧೯ ನ್ನು ಎದುರಿಸಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಮುಂಚೂಣಿಯಲ್ಲಿ ನಿಂತು ಯೋಧರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗಾಂಧೀಜಿಯವರ ಈ ವೈದ್ಯಕೀಯ ತಾತ್ವಿಕತೆಯನ್ನು ಅಪ್ಪಿಕೊಳ್ಳುವ ವ್ಯವಧಾನದವಂತೂ ಈ ಜಗತ್ತಿಗಿಲ್ಲ. ಹಾಗಾಗಿ ಅವರ ಸಿದ್ಧಾಂತಗಳೇ ಬೇರೆ; ಆಧುನಿಕ ಲೋಕದ ಅನಿವಾರ್ಯತೆಗಳೇ ಭಿನ್ನ. ಗಾಂಧೀಜಿ ಅವರು ವಿರೋಧಿಸಿದ ಮತ್ತೆರಡು ಸಂಗತಿಗಳೆಂದರೆ ರೈಲು ಹಾಗೂ ಕೋರ್ಟು.

ಆಧುನಿಕ ಯಂತ್ರನಾಗರಿಕತೆಯ ಮೇಲೆ ವಿಶ್ವಾಸವಿರದ ಗಾಂಧೀಜಿ ಪ್ರತಿಪಾದಿಸಿದ್ದು ಶ್ರಮಸಂಸ್ಕೃತಿಯನ್ನು. ಮೂಲಶಿಕ್ಷಣದ ಪ್ರತಿಪಾದನೆಯ ಮೂಲಕ ಗುಡಿಕೈಗಾರಿಕೆಗಳ ಪುನರುಜ್ಜೀವನವಾಗಬೇಕೆ ವಿನಹ ಯಂತ್ರಗಳ ಚಕ್ರದೊಳಗೆ ಅವುಗಳ ಅಧಃಪತನವಲ್ಲ. ಗಾಂಧೀಜಿಯವರು ತಿರಸ್ಕರಿಸಿದ ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯನ್ನು ಜೀವನಾಡಿಯೊಳಗೆ ಬ್ಲ್ಯಾಕ್ ಫಂಗಸ್ ನಂತೆ ಬಿಟ್ಟುಕೊಂಡಿರುವ ನಾವು ಆಧುನಿಕ ಜಗತ್ತಿನಿಂದ ನಿರೀಕ್ಷಿಸುವುದಾದರೂ ಏನನ್ನು? ಹೀಗೆ ಗಾಂಧೀಜಿಯವರು ದೂರವಿಡಬೇಕೆಂದು ಹೇಳಿದ್ದ ಸಂಗತಿಗಳೆಲ್ಲವನ್ನೂ ಇನ್ನಿಲ್ಲದಂತೆ ಅಪ್ಪಿಕೊಂಡು ಮರುಳಾಗಿಹೋಗಿದ್ದೇವೆ. ಇಂತಹ ಆಧುನಿಕ ಜೀವನಶೈಲಿಯಿಂದಾಗಿ ಕೊರೊನಾದಂತಹ ವೈರಸ್‌ಗಳ ಅಡಿಯಾಳಾಗಿ ಗುಲಾಮಗಿರಿಯನ್ನು ಎದುರಿಸುತ್ತಿರುವ ನಮಗೆ ಗಾಂಧೀಜಿ ಜೀವವುಳಿಸುವ ಅಮೃತ ಧಾರೆಯಾಗಿ ಕಾಣುತ್ತಾರೆ ನನಗೆ. ಪಿ. ಬಿ. ಶೆಲ್ಲಿಯ ಒಝಿಮ್ಯಾಂಡಿಯಸ್ ಕುರಿತ ಕವಿತೆಯು

‘My name is Ozymandias, king of kings:
Look on my works, ye Mighty, and despair!’
Nothing beside remains. Round the decay
Of that colossal wreck, boundless and care
The lone and level sands stretch far away.’

ಅಹಂಕಾರದ ಮನುಜನೇ ಹತಾಶನಾಗಿಬಿಡು ಎಂದು ಐತಿಹಾಸಿಕ ಸತ್ಯದ ಆಳಕ್ಕಿಳಿಯುತ್ತದೆ. ಹೀಗೆ ಕೊರೊನಾ ಕಟ್ಟಿದ ಸಾಮ್ರಾಜ್ಯವೂ ನಮ್ಮನ್ನು ಹತಾಶೆಯ ನದಿಗೆ ತಳ್ಳುತ್ತಿದೆ. ಕೋಟೆ ಕಟ್ಟಿ ಮೆರೆದವರೆಲ್ಲರೂ ಒಂದು ದಿನ ಮಣ್ಣಾಗಿ ಹೋಗಲೇಬೇಕು. ಆ ದಿನಕ್ಕಾಗಿ ಸರಕಾರದ ಮಾರ್ಗಸೂಚಿಗಳಂತೆ ಎಚ್ಚರಿಕೆಯಿಂದ ಸುರಕ್ಷಿತವಾಗಿದ್ದು ಕಾಯುವ ತಾಳ್ಮೆಯನ್ನು ವಹಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಎಂಬ ಭಯೋತ್ಪಾದಕನ ವಿರುದ್ಧ ಸೆಣಸಾಡುವ ಅಂತಃಶಕ್ತಿಯಾಗಿ ನಮಗೆ ದಕ್ಕಬೇಕಿರುವವರು ಗಾಂಧೀಜಿ ಮಾತ್ರ. ಅವರ ಕನ್ನಡಕದ ಗಾಜುಗಳಲ್ಲಿ ಭರವಸೆಯ ಬೆಳಕಿನ ಕಿರಣಗಳ ದರ್ಶನವಡಗಿದೆ.

ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ನಡುಗಿಸಿದ ಗಾಂಧೀಜಿಯವರ ಹೃದಯವಂತಿಕೆಯ ಸಾಮ್ರಾಜ್ಯ ಎಲ್ಲ ಕಾಲಕ್ಕೂ ಸಲ್ಲುವ ಜಂಗಮಸ್ವರೂಪಿಯಾಗಿರುವುದರಲ್ಲಿಯೇ ಮಹೋನ್ನತಿಯಡಗಿದೆ. ಶೆಲ್ಲಿ ಹೇಳುವಂತೆ ಓಝಿಮ್ಯಾಂಡಿಯಸ್ ಸಮಾಧಿಯಾಗಿದ್ದಾನೆ, ಆದರೆ ಗಾಂಧೀಜಿ ಮಾತ್ರ ನಮಗೆ ಕೇರಳದ ಶೈಲಜಾ ಟೀಚರ್‌ರವರಂತಹ ಕಾಯಕದಲ್ಲಿ ಈಗಲೂ ಕಾಣಸಿಗುತ್ತಾರೆ.

ವಾರಸುದಾರರಿಲ್ಲದೇ ಅನಾಥಶವಗಳಾಗಿ ಮಲಗಿದ ಬಲಿಪಶುಗಳ ಸಮಾಧಿ ಮಾಡುವವರ ಅಂತರಾಳದಲ್ಲಿ ಗಾಂಧೀಜಿ ನೆಲೆಸಿರಲೇಬೇಕು. ಮಣ್ಣಾಗಿ ಹೋಗುವ ಸಾಮ್ರಜ್ಯಶಾಹಿಯೇ ಹತಾಶನಾಗು ಎಂದು ಉಪದೇಶಿಸಿದರೆ, ಸ್ವತಃ ತಾನೊಂದು ಮಹಾಕಾವ್ಯವಾಗಿರುವ ಗಾಂಧೀಜಿ ಪುಟಿದೇಳು ಎಂದು ಎಲ್ಲ ಕಾಲದಲ್ಲಿಯೂ ಹೀಗೆ ಆವಾಹಿತರಾಗಿ ಎಚ್ಚರಿಸುತ್ತಲೇ ಇದ್ದಾರೆ. ಈ ಸಂಕಟದ ಕಾಲದಲ್ಲಿ ಗಾಂಧೀಜಿ ಹೀಗೆ ಕಾಡುವುದಕ್ಕೆ ನಮ್ಮ ನಾಡಿನ ಮೂರನೇಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ‘ಗಾಂಧಿ’ ಕವಿತೆಯ ಅಧ್ಯಾಪನವೂ ಕಾರಣವಾಯಿತು. ಆ ಕವಿತೆಯ ಮತ್ತಷ್ಟು ಸಾಲುಗಳು ಹೀಗಿವೆ-

‘ಕಾಸಿಗೆ ಕಾಸು, ಬಡ್ಡಿಗೆ ಬಡ್ಡಿ ಸೇರಿಸುತ್ತಾ
ಕತ್ತಲ ಮೂಲೆಯಲ್ಲಿ ದಿನವೂ ಇಲಿ ಹೆಗ್ಗಣಗಳೊಡನೆ
ತೂತು ಕೊರೆಯುತ್ತಾ ಬ್ಯಾಂಕಿನಲ್ಲಿ ಬೆಳೆವ ಬಡ್ಡಿಗೆ
ರೋಮಾಂಚನಗೊಳ್ಳುತ್ತಾ, ಕುಳಿತವರ ನಡುವೆ
ನೀನು ಎಲ್ಲಿಂದ ಬಂದೆಯೋ ಮಹರಾಯ ?’

ಎಂದು ಆಧುನಿಕ ಲೋಕದಲ್ಲಿ ಗಾಂಧೀಜಿಯವರ ಮರುಶೋಧನೆಗಿಳಿಯುತ್ತದೆ ಈ ಕವಿತೆ. ಪ್ರಸ್ತುತ ದುರಿತ ಕಾಲಕ್ಕೆ ಅದೆಷ್ಟು ಅರ್ಥಪೂರ್ಣವಾಗಿ ಈ ಸಾಲುಗಳು ಅನ್ವಯವಾಗುತ್ತವೆಯಲ್ಲವೇ ? ಔಷಧಿ ಹಾಗೂ ಲಸಿಕೆಗಳನ್ನು ಹಣದ ದುರಾಸೆಗಾಗಿ, ಇರುವ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ದುರಾಚಾರವನ್ನು ಕವಿತೆ ವಿಡಂಬಿಸುವಂತಿದೆ. ಮುಂದುವರೆದ ಸಾಲುಗಳು ಇನ್ನೂ ಮಾರ್ಮಿಕವಾಗಿವೆ ಕೇಳಿಬಿಡಿ-

‘ಭದ್ರವಿರದ ಈ ಮನೆಯ ಕಿಟಕಿ ಕದಗಳು
ಗಾಳಿಗೆ ಹೊಯ್ದಾಡುತ್ತಿವೆ
ನಿನ್ನ ನೆನಪನ್ನೇ ಹೊದ್ದು ನಿಟ್ಟುಸಿರು ಬಿಡುತ್ತಾ
ಎಂದಾದರೂ ನೀನುತ್ತು ಬಿತ್ತಿದ ಬೀಜ
ಮೊಳೆತಾವೇ ಎಂದು ಕೊರಗುತ್ತೇನೆ.’

ಹೌದು ಈ ಭುವನದ ಕಿಟಕಿಗಳು ಹೊಯ್ದಾಡುತ್ತಿವೆ ಸದ್ಯ ನೀನಿಲ್ಲದೇ; ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಹಾಡನ್ನು ನೆನಪಿಸಿಕೊಳ್ಳುತ್ತಾ. ಹೀಗೆ ಗಾಂಧೀಜಿಯವರನ್ನು ಈ ವಿಶ್ವಕ್ಕೆ ಸ್ವಾಗತಿಸಬೇಕೆಂದಿರುವಾಗ ಗಾಂಧಿವಾದಿಗಳಾಗಿದ್ದ ಎಚ್.ಎಸ್. ದೊರೆಸ್ವಾಮಿಗಳ ಕಾಲವಾದ ವಾರ್ತೆ ಬರುತ್ತಿದೆ. ಹಿನ್ನೆಲೆಯಲ್ಲಿ ಜನಗಣಮನ ಕೇಳಿಸುತ್ತಿದೆ. ಹೀಗೆ ಮನೆಯೊಳಗಿನವರು ಹೊರಗೆ ಹೊರಟಿದ್ದಾರೆ. ತಡೆಯುವುದೆಂತೋ ?….ಗಾಂಧೀಜಿಯವರೇ ಹೇಳಬೇಕು.

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: