ಚಿನ್ನ ಬೆಳೆಯುವ ಕಾಶ್ಮೀರ: ಹಸಿರು ಗದ್ದೆಗಳ ಕೇಸರಿ ಕಥೆ

ರಾಧಿಕಾ ವಿಟ್ಲ


ʻಹೌದೂ, ಇದ್ಯಾಕೆ ಈ ಸಮಯದಲ್ಲಿ ಇಲ್ಲಿ ಬಂದ್ರಿ? ಕಾಶ್ಮೀರವನ್ನು ನೀವು ಈ ಕಾಲದಲ್ಲಿ ನೋಡಬಾರದು. ಮರಗಳೆಲ್ಲ ಎಲೆ ಉದುರಿಕೊಂಡು ಖಾಲಿ ಖಾಲಿಯಾಗಿ ನಿಂತುಬಿಡುತ್ತವೆ. ಇದರಲ್ಲಿ ಸೌಂದರ್ಯ ಇಲ್ಲ. ವಸಂತ ಕಾಲ ಶುರುವಾದಾಗ ಬನ್ನಿ ನೀವು. ಎಪ್ರಿಲ್‌- ಮೇ ಕಾಲದಲ್ಲಿ. ಎಲ್ಲ ಕಡೆಯೂ ಹಸಿರು ಹಸಿರು. ಹೂಗಳೆಲ್ಲ ಅರಳಿ ಕಾಶ್ಮೀರವೆಂದರೆ ಸ್ವರ್ಗದಂತೆ ಕಾಣುತ್ತದೆʼ, ಎಂದು ಆಗ ಅಲ್ಲಿ ಅಷ್ಟು ದೊಡ್ಡ ಚಿನಾರ್‌ ಮರದಡಿಯಲ್ಲಿ, ಇಷ್ಟು ಬೃಹತ್ ಮರದ ಒಂದು ಚೆಂದದ ಫೋಟೋ ತೆಗೆಯಬೇಕಲ್ಲಾ ಎಂದು ತಲೆಕೆಡಿಸಿಕೊಂಡು ಕೈಚೆಲ್ಲಿ ನಿಂತಿದ್ದಾಗ ಅವರು ನನ್ನೆಡೆ ನೋಡಿ ಆಶ್ಚರ್ಯದಿಂದ ಹೇಳಿದ್ದರು.

ಈ ಕ್ಯಾಮರಾವೆಂಬ ಉಪಕರಣವೇ ಒಂದು ವಿಸ್ಮಯ. ಚೆಂದವಿಲ್ಲದ್ದನ್ನೂ ಚೆಂದಗಾಣಿಸೋದು ಇದಕ್ಕೆ ಗೊತ್ತು. ಬೇರೆ ಬೇರೆ ಆಯಾಮ ಕೊಡೋದು ಗೊತ್ತು, ಆದರೆ, ಕೆಲವೊಮ್ಮೆ ನಿಜವಾದ ಅದ್ಭುತಕ್ಕೆ ನ್ಯಾಯ ಸಲ್ಲಿಸುವಲ್ಲಿ ಇದು ಸೋತುಬಿಡುತ್ತದೆ ಅಂತ ಯೋಚಿಸುತ್ತಾ, ಆತನ ಮಾತಿಗಿನ್ನೂ ನಾನು ಪ್ರತಿಮಾತನಾಡಿಯೇ ಇಲ್ಲ ಎಂದು ನೆನಪಾಗಿ, ʻನಾವು ಹೇಗೆ ನೋಡುತ್ತೇವೆ ಅನ್ನೋದರಲ್ಲಿ ಇರೋದು ನೋಡಿ. ಎಲೆ ಹಣ್ಣಾದ ಈ ಚೀನಾರ್‌ ಮರಗಳನ್ನು ಹಳದಿಗೆಂಪಿನಲ್ಲಿ ನೋಡುವುದೂ ಒಂದು ಸೊಗಸೇ ಅಲ್ಲವೇ. ಎಲೆಯೇ ಇಲ್ಲದ ಬೋಳು ಮರಗಳಲ್ಲೂ ಚಂದವಿದೆ. ಕಾಶ್ಮೀರವನ್ನು ಬೇರೆ ಬೇರೆ ಕಾಲಗಳಲ್ಲಿ ನೋಡಬೇಕು, ಎಲ್ಲ ಕಾಲಕ್ಕೂ ಅದರದ್ದೇ ಆದ ಸೊಗಸಿದೆ.  ಖಂಡಿತ ಏಪ್ರಿಲಿನಲ್ಲಿಯೂ ಬಂದರಾಯಿತು. ಅದಕ್ಕೇನಂತೆ. ಆದರೆ, ಈ ಸಾರಿ ನಮ್ಮನ್ನು ಎಳೆದು ತಂದದ್ದು ನಿಮ್ಮ ಕೇಸರಿʼ ಎಂದೆ. ಅವರು ಈ ಉತ್ತರ ನಿರೀಕ್ಷಿಸಿರಲಿಲ್ಲ ಅನಿಸುತ್ತದೆ. ʻಕೇಸರಿಯಾ? ಅದರಲ್ಲೇನಿದೆ ನೋಡೋಕೆ?ʼ ಎಂದರು.

ʻನಿಮಗಾದರೋ ಇದು ನಿತ್ಯದ ಬದುಕು. ಅದರಲ್ಲೇನಿದೆ ಅಂತಾನೇ ಅನಿಸೋದು. ಆದರೆ, ನಮಗೆ ನೋಡಬೇಕು ಅಂತ ಹಳೇ ಬಯಕೆ. ಅದ್ಕೇ, ಕೇಸರಿಯ ಹೂವಿನ ತಿಳಿ ನೇರಳೆಯ ಗದ್ದೆಗಳನ್ನು ನೋಡುವ ಅಂತ ಹೊರಟುಬಿಟ್ಟೆವುʼ ಎಂದೆ. ಅವರು ನಗುತ್ತಾ, ಒಳ್ಳೇದು, ಸರಿ, ಈಗೇನು ಕೊಡಲಿ? ನೂನ್‌ ಚಾಯ್‌ (ಕಾಶ್ಮೀರದ ಸಾಂಪ್ರದಾಯಿಕ ಉಪ್ಪು ಚಹಾ) ಬೇಕಾ ಆಥವಾ ಸಾದಾ ಮಸಾಲೆ ಟೀಯೋ? ಬೇಕಿದ್ದರೆ ಖಾವಾವೂ ಇದೆ ಅಂದರು. ನಾನು ಖಾವಾ (ಏಲಕ್ಕಿ, ಚಕ್ಕೆ, ಲವಂಗ ಹಾಗೂ ಕೇಸರಿ ಹಾಕಿದ ಸಾಂಪ್ರದಾಯಿಕ ಕಾಶ್ಮೀರಿ ಟೀ) ಎಂದೆ.

ಇಡೀ ಕಾಶ್ಮೀರ ಖಾಲಿ ಹೊಡೆಯುತ್ತಿತ್ತು. ಸ್ಥಳೀಯರು ಬಿಟ್ಟರೆ, ಪ್ರವಾಸಿಗರು ಒಬ್ಬರೂ ಇಲ್ಲ. ಕಾರಣ ಒಂದು, ಪ್ರವಾಸಿಗರ ಕಾಲವಲ್ಲ ಇದು, ಇನ್ನೊಂದು ಬಹುಮುಖ್ಯವಾಗಿ ಕೊರೋನಾ, ಮತ್ತೊಂದು ಕಾಶ್ಮೀರಕ್ಕೇ ಈಗ ಅನ್ವರ್ಥವಾಗಿಬಿಟ್ಟ ಜನರ ಸಹಜ ʻಭಯʼ!

ಮೂರು ವರ್ಷಗಳ ಹಿಂದೆ ದೆಹಲಿಯಿಂದ ಶ್ರೀನಗರದವರೆಗೆ ಡಿಸೆಂಬರ್‌ ಅಂತ್ಯದ ಚಳಿಗಾಲದಲ್ಲೊಂದು ಡ್ರೈವ್‌ ಹೋಗಿದ್ದೆವು. ಆಗ ಎಲ್ಲೆಲ್ಲೂ ಎಲೆ ಉದುರಿದ ಮರಗಳು, ಖಾಲಿ ಖಾಲಿ ಬಟ್ಟಬಯಲು ಗದ್ದೆಗಳು. ಯಾಕೆ ನಮಗೆ ಅಲ್ಲಿನ ಯಾವೊಂದು ಗದ್ದೆಯಲ್ಲೂ ಕೇಸರಿ ನೋಡಲು ಸಿಕ್ಕಲಿಲ್ಲ ಎಂಬ ಸಹಜ ಕುತೂಹಲವನ್ನು ಶ್ರೀನಗರದ ಲಾಲ್‌ ಚೌಕಿನ ಆ ಅಂಗಡಿಯೊಂದರ ಮಾಲೀಕನಲ್ಲಿ ತೋಡಿಕೊಂಡಿದ್ದೆವು.

ಕೇಸರಿಗೆ ಅದಕ್ಕೇ ಆದ ಕಾಲವಿದೆ. ಕೇವಲ ೧೦-೧೫ ದಿನಗಳು ಮಾತ್ರ ಗದ್ದೆಗಳು ತಿಳಿನೇರಳೆಮಯವಾಗುತ್ತದೆ, ಅಷ್ಟೇ. ಆ ಚಂದವನ್ನು ನೋಡಬೇಕೆಂದರೆ ನೀವು ಅಕ್ಟೋಬರ್‌ ಅಂತ್ಯ- ನವೆಂಬರ್‌ ಮೊದಲ ವಾರದಲ್ಲಿ ಬರಬೇಕು. ಒಂದೆರಡು ದಿನ ಆಚೀಚೆ ಆದರೂ ಕೊಯ್ಲು ಮುಗಿದುಬಿಡುತ್ತದೆ ಎಂದಿದ್ದರು. ಆಗಿನಿಂದ ಅಂಥದ್ದೊಂದು ಯೋಚನೆ ತಲೆಯೊಳಗಿಟ್ಟು, ಮೂರು ವರ್ಷ ಸುಮ್ಮನೆ ಸರಿದುಹೋಗಿದ್ದವು. ಕೊನೆಗೂ ಮೊನ್ನೆ ಮೊನ್ನೆ ಥಟ್ಟಂತ ನಾವೂ ಅಂದುಕೊಳ್ಳದೆ, ಶ್ರೀನಗರ ಬಾ ಎಂದು ಕರೆಯಿತೇನೋ! ಚಕ್ಕಂತ ಅದೊಂದು ದೊಡ್ಡ ಪಯಣಕ್ಕೆ ಗಂಟುಮೂಟೆ ಕಟ್ಟೇಬಿಟ್ಟಿದ್ದೆವು.

ಆತ ಬಿಸಿ ಬಿಸಿ ಖಾವಾ ತಂದಿಟ್ಟ. ಹೊಂಬಣ್ಣದ ಆ ಪೇಯದಲ್ಲಿ ಕೆಂಪನೆ ಕೇಸರಿ ಎಳೆಗಳು ಮಾತ್ರ ಮುದ್ದುಮುದ್ದಾಗಿ ತೇಲಿಮುಳುಗಿ ಮಾಡುತ್ತಿದ್ದವು. ಸೊನ್ನೆ ಡಿಗ್ರಿ ತೋರಿಸುತ್ತಿದ್ದ ಆ ಚಳಿಗೆ ಗಂಟಲಿಗೂ ಹಿತವಾಗಿಯೇ ಇತ್ತು ಆ ಬಿಸಿ ಪಾನಕದಂತಹ ಚಹಾ.

ಕಾಶ್ಮೀರಕ್ಕೆ ಕೇಸರಿ ಹೀಗೆಯೇ ಬಂತು ಎಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. ೧೨ನೇ ಶತಮಾನದಲ್ಲಿ ಸೂಫಿ ಸಂತರಿಬ್ಬರು ಊರಿನ ಗಣ್ಯರೊಬ್ಬರ ಕಾಯಿಲೆ ಗುಣ ಮಾಡಿ ಕೊಟ್ಟದ್ದಕ್ಕೆ ಫಲವಾಗಿ ಸಿಕ್ಕ ಹೂವಿನ ಬೀಜ ಎಂಬ ಜನಪದ ಕಥೆ ಈ ಪ್ರದೇಶದಲ್ಲಿ ಜನಜನಿತ. ಈಗಲೂ ಕಾಶ್ಮೀರದ ಕೇಸರಿ ಬೆಳೆಗಾರರು ತಮ್ಮ ನಾಟಿ ಶುರುಮಾಡುವ ಮೊದಲು ಈ ಸೂಫಿ ಸಂತರಿಗೆ ಪ್ರಾರ್ಥನೆ ಸಲ್ಲಿಸಿಯೇ ಕೆಲಸ ಆರಂಭಿಸುತ್ತಾರೆ.

ಆದರೆ, ಇನ್ನೂ ಕೆದಕಿದರೆ, ಇದಕ್ಕೂ ಮೊದಲೇ ಕ್ರಿಸ್ತಪೂರ್ವದಲ್ಲೇ ಪರ್ಷಿಯನ್ನರು ಇಲ್ಲಿಗೆ ಇದನ್ನು ತೆಗೆದುಕೊಂಡು ಬಂದಿದ್ದರು ಎಂಬ ಮಾಹಿತಿಯೂ ಲಭ್ಯವಾಗುತ್ತದೆ. ಕೆಲವು ಆಧಾರಗಳ ಪ್ರಕಾರ, ಚೀನಾದಿಂದ ಬೌದ್ಧ ಬಿಕ್ಷುಗಳ ಮುಖಾಂತರ ಇಲ್ಲಿಗೆ ಬಂತು ಎಂಬ ವಿವರಗಳಿವೆ. ಏಳನೇ ಶತಮಾನದ ಸಂಸ್ಕೃತ ನಾಟಕ ‘ರತ್ನಾವಳಿ’ಯಲ್ಲೂ ಕಾಶ್ಮೀರದ ಕೇಸರಿ ಬಳಕೆಯ ಉಲ್ಲೇಖವಿದೆ. ಕಾಶ್ಮೀರದ ಸುಪ್ರಸಿದ್ಧ ವಿದ್ವಾಂಸ ಕಲ್ಹಣ ಕ್ರಿ.ಶ. ೭೨೫ರಲ್ಲಿ ತನ್ನ ಕೃತಿ ‘ರಾಜತರಂಗಿಣಿ’ಯಲ್ಲೂ ಕೇಸರಿ ಬೆಳೆಯ ಬಗ್ಗೆ ಉಲ್ಲೇಖಿಸಿದ ಆಧಾರಗಳಿವೆ.

ಹಾಗಾಗಿ, ಈಗ ಜನಜನಿತವಿರುವ ಜನಪದ ಕಥೆಗಿಂತಲೂ ಹಿಂದೆಯೇ ಕೇಸರಿ ಇತ್ತೆಂಬುದಕ್ಕೆ ಆಧಾರಗಳಿವೆ. ಆದರೂ ಮೊಘಲರ ಕಾಲದಲ್ಲಿ ಆಹಾರದ ಬಳಕೆಯಲ್ಲಿ, ಸುಗಂಧದ್ರವ್ಯವಾಗಿ ಯಥೇಚ್ಛವಾಗಿ ಬಳಕೆಯಾಗತೊಡಗಿದ ಈ ಕೇಸರಿ ಶ್ರೀಮಂತಿಕೆಯ ಸಂಕೇತವಾಗಿ ಬದಲಾಯಿತು. ಮೊಘಲ್‌ ದೊರೆ ಅಕ್ಬರನಿಗೆ ಈ ಕೇಸರಿಯ ಮೇಲೆ ಅದೆಂಥಾ ವ್ಯಾಮೋಹವಿತ್ತೆಂದರೆ, ಆತ ತನ್ನ ಅರಮನೆಯ ತನ್ನ ಕೋಣೆಯ ಕಿಟಕಿಯಿಂದ ಕಾಣುವಂತೆ ಕೇಸರಿಯ ಗದ್ದೆಯನ್ನು ಬೆಳೆಸಿದ್ದ ಎಂಬ ವಿಚಾರವೂ ಇತಿಹಾಸದಲ್ಲಿ ದಾಖಲಾಗಿದೆ. 

ಕವಿಗಳ ಪಾಲಿಗೆ ರಮ್ಯಾದ್ಭುತವಾದ, ರಾಜಮಹಾರಾಜರುಗಳು ಕನಸಿನಲ್ಲಿಯೂ ತಳಮಳಿಸಿದ, ಸಾಧುಗಳಿಂದ ಪೂಜಿಸಲ್ಪಟ್ಟ ಕೇವಲ ಹೂವೊಂದರ ಮೂರೇ ಮೂರು ಕೇಸರವೆಂಬ ಎಳೆಗಳ ಶಕ್ತಿಯೇ ಅಂಥಾದ್ದು. ತನ್ನ ಬಣ್ಣ, ರುಚಿ, ಶಕ್ತಿ ಮಾತ್ರವಲ್ಲದೆ ಸೌಂದರ್ಯ, ಸುವಾಸನೆಯಲ್ಲೂ ಇದನ್ನು ಮೀರಿಸುವ ಮತ್ತೊಂದು ವಸ್ತು ಹುಟ್ಟಿಲ್ಲ ಎಂದರೂ ಕಡಿಮೆಯೇ. ಪ್ರಪಂಚದಾದ್ಯಂತ ತನ್ನದೇ ಘನತೆಯನ್ನು ಇಂದಿಗೂ ಉಳಿಸಿಕೊಂಡಿರುವ ಕಾಶ್ಮೀರದ ಈ ಕೇಸರಿಯೆಂಬ ಚಿನ್ನ, ಬೆಲೆಯಲ್ಲಿ ಚಿನ್ನಕ್ಕೂ ಪೈಪೋಟಿ ಕೊಡುವ ವಸ್ತು.

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಶ್ರೀನಗರಕ್ಕೆ ಇನ್ನೇನು ೧೮ ಕಿಮೀ ಇದೆ ಅನ್ನುವಷ್ಟರಲ್ಲಿ ಸಿಗುವ ಊರು ಪಂಪೋರ್.‌ ಸುತ್ತಮುತ್ತಲ ಲೇತಿಪುರ, ಕಿಶ್ತ್‌ವಾರ್‌, ಅನಂತನಾಗ್‌ನ ಕೆಲ ಹಳ್ಳಿಗಳು ಮಾತ್ರ ಕೇಸರಿ ಬೆಳೆಯುವ ಚಿನ್ನದ ಊರುಗಳು. ಈ ಪುಟ್ಟ ಊರೇ ಕೇಸರಿಯ ಹೆಸರಿನಲ್ಲಿ ಅದ್ದಿ ತೆಗೆದ ಹಾಗೆ ಹಾದಿಯುದ್ದಕ್ಕೂ ಕೇಸರಿಯ ಗದ್ದೆಗಳು, ಕೇಸರಿಯ ಅಂಗಡಿಗಳು. ಅದಕ್ಕೇ ಪಂಪೋರ್‌ಗೆ ಇನ್ನೊಂದು ಹೆಸರು ಸಾಫ್ರನ್‌ ಟೌನ್.‌ ಹೆದ್ದಾರಿಯ ಇಕ್ಕೆಲಗಳ ಖಾಲಿ ಗದ್ದೆಗಳು ಅಕೋಬರ್‌ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ನೇರಳೆಯಾಗುತ್ತದೆ, ಕೆಲವೇ ದಿನಗಳಿಗಾಗಿ. ನೆಲದಿಂದೆದ್ದು ಬರುವ ಈ ಹೂಗಳು ಗದ್ದೆಗೆ ಜೀವಕಳೆ ನೀಡುತ್ತದೆ.

ಕೊಯ್ಲು ಮುಗಿದ ಕೂಡಲೇ ಮತ್ತೆ ಇವು ಬರಡು ನೆಲಗಳಂತೆ. ಆದರೆ ರೈತರ ಪಾಲಿಗೆ ಇವು ಬರಡು ನೆಲವಲ್ಲ. ದೇವರೇ ಕೊಟ್ಟ ಭೂಮಿ ಎಂಬ ಭಕ್ತಿ ಭಾವ. ಕೇಸರಿ ಬೆಳೆದ ಮೇಲೆ ಈ ಗದ್ದೆಗಳನ್ನು ಏನು ಮಾಡುತ್ತೀರಿ? ಬೇರೆ ಬೆಳೆ ಬೆಳೆಯೋದಿಲ್ವಾ ಎಂದರೆ, ʻಇಲ್ಲ. ಇದು ಕೇಸರಿಗಾಗಿಯೇ ಇರುವ ಗದ್ದೆಗಳು. ಇಲ್ಲಿ ಅಲ್ಪಸ್ವಲ್ಪ ಮನೆಗಾಗಿ ಏನಾದರೂ ಬೆಳೆದುಕೊಂಡರೂ ವ್ಯಾಪಾರೀ ಉದ್ದೇಶಗಳಿಗೆ ಬೆಳೆಯೋದು ಕೇಸರಿಯೊಂದೇ. ನಮಗೆ ಅನ್ನ ನೀಡುವ ಕೇಸರಿಗಾಗಿಗೇ ಇರುವ ಚಿನ್ನದ ಗದ್ದೆಗಳಿವು ಎನ್ನುತ್ತಾರೆ.

ಕೆಲವೊಮ್ಮೆ ಭಾರೀ ಸಿನಿಮಾದ ನಿರೀಕ್ಷೆಯಲ್ಲಿ ಕನಸುಗಳನ್ನು ಕಟ್ಟಿಕೊಂಡು ಸಿನಿಮಾ ನೋಡಿದ ಮೇಲೆ ಚಂದವಿದ್ದರೂ ಸಣ್ಣಗೆ ನಿರಾಸೆಯಾಗುತ್ತದಲ್ಲ, ಹಾಗೆಯೇ, ಅಂದುಕೊಂಡಷ್ಟು ತುಂಬಿದ ಗದ್ದೆಗಳು ದಕ್ಕಲಿಲ್ಲವಾದರೂ, ಅಲ್ಲಲ್ಲಿ ಕೊಯ್ಲು ಬಾಕಿ ಇರಿಸಿಕೊಂಡಿದ್ದ ಗದ್ದೆಯ ಸಣ್ಣಪುಟ್ಟ ಭಾಗಗಳು ಸಿಕ್ಕವಾದ್ದರಿಂದ ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡೆ.

ನಾವು ಲೇತಿಪುರದ ಆ ಗದ್ದೆಗಳೆಲ್ಲ ನೇರಳೆಯಾಗಿರಬಹುದೆಂದು ಕನಸು ಕಂಡುಕೊಂಡು ಅಲ್ಲಿಗೆ ತಲುಪಿದಾಗ, ಗದ್ದೆಗಳೆಲ್ಲ ಹಾಗೆಯೇ ಇದ್ದವು. ಇನ್ನೂ ಕಣ್ಣು ದೊಡ್ಡದು ಮಾಡಿ ನೋಡಿದಾಗ ಅಲ್ಲಲ್ಲಿ ಪುಟ್ಟ ಪುಟ್ಟ ನೇರಳೆ ಬಣ್ಣಗಳು ಗೋಚರಿಸತೊಡಗಿದವು. ಒಂದು ಕುಟುಂಬ ದೊಡ್ಡ ಬುಟ್ಟಿ ತುಂಬಾ ಹೂವು ಕೊಯ್ಯುತ್ತಿತ್ತು. ಪುಟಾಣಿ ಹುಡುಗ ಸಲ್ಮಾನನ ಕೈತುಂಬ ನೀಲಿ ಹೂ. ಅವನಮ್ಮ ಮಸ್ರತ್‌ ಕೈಯಲ್ಲೂ. ಇವರ ಜೊತೆಗೆ ಜೇನುಹುಳಗಳ ದಂಡೊಂದು ಹೂ ಕೊಯ್ಯುವ ಮೊದಲೇ ಮಕರಂದವನ್ನು ಸಂಗ್ರಹಿಸುವ ಉಮೇದಿನಲ್ಲಿ ಭರ್ಜರಿ ಕೆಲಸದಲ್ಲಿದ್ದವು. 

ಅಂದಹಾಗೆ, ಜಗತ್ತಿನಲ್ಲಿ ಬೆಳೆಯುವ ಕೇಸರಿಯ ಶೇಕಡಾ ೯೦ರಷ್ಟನ್ನು ಇರಾನ್‌ ಒಂದೇ ಬೆಳೆಯುತ್ತದೆ. ಭಾರತದ ಪಾಲು ಏನೇನೂ ಇಲ್ಲ. ಭಾರತದಲ್ಲಿ ಕೇಸರಿಯ ಡಿಮ್ಯಾಂಡು ವರ್ಷಕ್ಕೆ ೧೦೦ ಟನ್‌.  ಆದರೆ ನಮ್ಮಲ್ಲಿ ಬೆಳೆಯೋದು ೬-೭ ಟನ್‌ ಅಷ್ಟೇ. ನಾವು ಯಾವುದೇ ಕೇಸರಿ ಕಂಡರೂ ಕಾಶ್ಮೀರಿ ಕೇಸರಿ ಅಂತಲೇ ಅಂದುಕೊಂಡುಬಿಡುತ್ತೇವೆ. ಆದರೆ, ಕಾಶ್ಮೀರಿ ಕೇಸರಿಗೂ ಇರಾನಿಂದ ಬರುವ ಕೇಸರಿಗೂ ಗುಣದಲ್ಲಿ ವ್ಯತ್ಯಾಸವಿದೆ. ಕಾಶ್ಮೀರಿ ಕೇಸರಿಯಷ್ಟು ಪರಿಮಳ, ಸಿಹಿ, ಬಣ್ಣ ಎಲ್ಲವುಗಳ ಪಕ್ಕಕ್ಕೂ ಬೇರೆ ಕೇಸರಿ ನಿಲ್ಲಲಾರವು. ಕಾಶ್ಮೀರ ಬಿಟ್ಟು ಭಾರತದಲ್ಲೆಲ್ಲೂ ಕೇಸರಿ ಬೆಳೆಯುವ ಹವಾಮಾನ ಇಲ್ಲ ಎನ್ನಲಾಗುತ್ತದೆ. ಮೊನ್ನೆ ಮೊನ್ನೆ ಪರೀಕ್ಷಾರ್ಥವಾಗಿ ಸಿಕ್ಕಿಂನಲ್ಲಿ ಕೇಸರಿ ಬೆಳೆದು ನೋಡಿದ್ದೂ ಆಗಿದೆ. ಯಶಸ್ಸಾದರೆ, ಇನ್ನೂ ಹಲವೆಡೆಗೆ ಕೇಸರಿ ವಿಸ್ತರಣೆಯಾಗುತ್ತದೆ. 

ಈ ಕೇಸರಿಯ ಹಿಂದೆ ಕೆಲಸ ಎಷ್ಟಿದೆ ಎಂದು ಸಣ್ಣ ಮಾಹಿತಿ ಕೊಟ್ಟಿದ್ದು ಅಲ್ಲೇ ಹೂ ಕೀಳುತ್ತಿದ್ದ ಮಸ್ರತ್.‌ ಚಳಿಗಾಲ ಮುಗಿಸಿಕೊಂದು ಸೂರ್ಯ ಬಿಸಿಯೇರಿಸಿದಂತೆಲ್ಲ, ಏಪ್ರಿಲಿನಲ್ಲಿ ಇವರ ಗದ್ದೆ ಕೆಲಸ ನಿಧಾನಕ್ಕೆ ಶುರುವಾಗುತ್ತದೆ. ೨ ಸಲ ಗದ್ದೆ ಉತ್ತು, ಆಗಸ್ಟ್‌ ತಿಂಗಳ ಹಾಗೆ ಬಿತ್ತನೆ ನಡೆಸಿ ಒಂದು ತಿಂಗಳ ಕಾಲ ಹಾಗೇ ಬಿಡಲಾಗುತ್ತದೆ.ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಮೆಲ್ಲನೆ ಬೀಜಗಳಿಂದ ಸಸಿ ಮೇಲೆದ್ದು ಬರಲಾರಂಭಿಸುತ್ತದೆ. ಮತ್ತೆ, ಹತ್ತಿಪ್ಪತ್ತು ದಿನಗಳೊಳಗಾಗಿ ಮೊಗ್ಗಾಗಿ ಹೂವಾಗಿ ಕೊಯ್ಲು ಆರಂಭವಾಗುತ್ತದೆ. ಆಮೇಲೆ  ಕೆಲಸವೋ ಕೆಲಸ, ಹೂಕೊಯ್ಯುವುದು, ಕೇಸರಿ ಪ್ರತ್ಯೇಕಿಸುವುದು, ಒಣಗಿಸುವುದು, ಪ್ಯಾಕಿಂಗ್ ಇತ್ಯಾದಿ. ಚಳಿಗಾಲದ ದಿನಗಳಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತು ಮಾಡಲು ಕೈತುಂಬ ಕೆಲಸ. ಹೂವಿನಲ್ಲಿ ಮೂರು ಮುಖ್ಯ ಭಾಗಗಳು. ಒಂದು ನೇರಳೆ ಬಣ್ಣದ ದಳಗಳು, ಇನ್ನೊಂದು ಹಳದಿ ಕೇಸರ, ಮತ್ತೊಂದು ಕೆಂಪನೆಯ ಕೇಸರಿ! ಇದರಲ್ಲಿ ದಳಗಳು ಔಷಧಿಗೆ ಬಳಸಲು ಬೇಡಿಕೆ ಇದೆಯಾದರೂ ಹೆಚ್ಚೂ ಇದನ್ನು ತ್ಯಾಜ್ಯವೆಂದೇ ಎಸೆಯಲಾಗುತ್ತದೆ. ಹೀಗೆ ಹೂವಿನ ಅತ್ಯಂತ ಮುಖ್ಯವೆನಿಸುವ ಭಾಗ ಕೇವಲ ಕೆಂಪನೆಯ ೩ ಕೆಂಪನೆಯ ಎಳೆಗಳು.

ಅದ್ಸರಿ, ಕೇಸರಿ ಎಂಬ ಈ ವಸ್ತು ಯಾಕೆ ಇಷ್ಟೊಂದು ದುಬಾರಿ ಎಂಬ ಪ್ರಶ್ನೆಯೂ ಬಾರದಿರದು. ಒಮ್ಮೆ ಊಹಿಸಿ ನೋಡಿ. ಒಂದು ಹೂವಿನಲ್ಲಿ ಮೂರೇ ಮೂರು ಎಳೆಗಳು. ಕಡಿಮೆ ಎಂದರೂ ೩೦೦ ರೂ ಕೊಡುವ ಈ ಕಾಶ್ಮೀರ ಕೇಸರಿಯ ಒಂದು ಗ್ರಾಂ ಆಗಬೇಕಾದರೆ ಅಂದಾಜು ೩೫೦ ಎಳೆಗಳು ಬೇಕಂತೆ ಅಂದರೆ ೧೧೩ ಹೂಗಳು! ಇನ್ನು ಒಂದು ಕೆಜಿಯ ಬಗ್ಗೆ ಮಾತನಾಡುವುದಾದರೆ, ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹೂಗಳು!

ಇಷ್ಟೆಲ್ಲ ಆಗಿ ಸುಸ್ತಾಗಿ ಹೋಗಿ ಆ ಡಲ್‌ ಸರೋವರದಲ್ಲಿ ಮರದ ತೇಲುವ ಮನೆಯಲ್ಲಿ ಕುಳಿತು ನೀಲಿಗತ್ತಲನ್ನು ನೋಡುತ್ತಿದ್ದೆ. ಸಣ್ಣಗೆ ಕೊರೆಯುವ ಚಳಿ. ಎದುರಿಗೆ ಜಬರ್ವಾನ್‌ ಪರ್ವತ ಸಾಲು. ಬೆಟ್ಟದ ಮೇಲಿನ ಶಂಕರಾಚಾರ್ಯ ಮಂದಿರದಿಂದ ಗಂಟೆ ಸದ್ದು ಮುಂದಿದ್ದ ರಸ್ತೆಯಲ್ಲಿ ಭರ್ರನೆ ಸಾಗುವ ವಾಹನಗಳ ಧ್ವನಿಯಲ್ಲಿ ಕ್ಷೀಣವಾಗುತ್ತಿತ್ತು. ಸರೋವರದಲ್ಲಿ ಪುಟಾಣಿ ಲಾಟೀನು ಹೊತ್ತು ಹಾದುಹೋಗುವ ಪ್ರತಿಯೊಂದು ದೋಣಿಯಿಂದಲೂ ಕೂಗು. ʻಕೇಸರ್‌ ಚಾಹಿಯೇ ಕ್ಯಾ?ʼ ನಾನು ಬೇಡ ಎಂದರೂ ಬಿಡಲು ಅವರು ತಯಾರಿಲ್ಲ. ಗ್ರಾಂಗೆ ನೂರರಂತೆ ಕೊಡಲೂ ಸಿದ್ಧ. ಯಾವುದು ನಿಜವಾದ ಕೇಸರಿ, ಯಾವುದು ಅಲ್ಲ ಎಂಬುದು ಕಾಶ್ಮೀರಕ್ಕೆ ಹೋದರೂ ಅಳೆದು ತೂಗಿ ಚಿಂತಿಸಿ ಖರೀದಿಸುವುದು ಬಹಳ ಕಷ್ಟ. ಬೇಡ ಬೇಡ ಹೇಳಿ ಹೇಳಿ ಸಾಕಾಗಿ ಇವರಿಂದ ತಪ್ಪಿಸಿಕೊಳ್ಳಲು ಎಂದು ಮತ್ತೆ ಒಳಗೆ ಬಂದು ಕೂತರೆ, ರಾತ್ರಿಗೇನು ಊಟ ತಯಾರು ಮಾಡಿಸಲಿ ಎಂದು ಕೇಳಲು ಆದಿಲ್‌ ಬಂದ. ಆಗಷ್ಟೇ ಈ ಕೇಸರಿಯ ಗೊಂದಲದಲ್ಲಿ ಮುಳುಗಿದ್ದ ನನ್ನೆದುರೊಂದು ಭರ್ಜರಿ ಭಾಷಣವನ್ನೇ ಬಿಗಿದ. 

ʻನೋಡಿ, ನಮಗೆ ಕೇಸರಿ ಕೇವಲ ಆಹಾರದೊಂದಿಗೆ ಸೇರಿಸಲಾಗುವ ಒಂದು ಪದಾರ್ಥ ಮಾತ್ರವಲ್ಲ, ಅದು ಕಾಶ್ಮೀರದ ಭಾವನೆ. ಹೇಗೆ ಸುಗಂಧ ದ್ರವ್ಯಗಳನ್ನು ಸಂಗ್ರಹಿಸೋ ಅಭ್ಯಾಸ ಕೆಲವರಿಗಿರುತ್ತೋ, ಹಾಗೆಯೇ ಕೇಸರಿಯನ್ನೂ ಇಷ್ಟಪಡೋದು ಒಂದು ಪ್ರೆಸ್ಟೀಜ್‌ನ ಹಾಗೆ. ಇಲ್ಲಿ ಕೇಸರಿಯಿಲ್ಲದೆ ಮದುವೆ, ಮುಂಜಿ ಹಬ್ಬ ಹರಿದಿನಗಳು ನಡೆಯುವುದೇ ಇಲ್ಲ. ಅದೊಂದು ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ, ನೀವೆಲ್ಲ ಕಾಶ್ಮೀರ ಕೇಸರಿ ಎಂದು ಕಡಿಮೆ ಬೆಲೆಗೆ ತೆಗೆದುಕೊಂಡಿರಿ ಎಂದರೆ, ಅದು ನಮ್ಮ ಕೇಸರಿಯೇ ಅಲ್ಲ. ಒಂದೋ ಈ ಹೆಸರಿನಲ್ಲಿ ಭಾರತಕ್ಕೆ ಬರುವ ಇರಾನಿ ಕೇಸರಿಯೋ ಅಥವಾ ಕೇಸರಿಯ ಮುಖವಾಡ ಹಾಕಿಕೊಂಡ ಇನ್ಯಾವುದೋ ರಾಸಾಯನಿಕವೋ ಆಗಿರಬಹುದು ಅಷ್ಟೇ. 

ಆದರೆ ನಮ್ಮ ಕೇಸರಿಯೇ ಬೇರೆ. ನೀವು ಒಂದು ಗ್ರಾಂಗೆ ೨೫೦/  ೩೦೦ ರೂಗಿಂತ ಕಡಿಮೆ ಕೊಟ್ಟು ತೆಗೆದುಕೊಂಡಿರೆಂದರೆ ಅದು ನಮ್ಮ ಕೇಸರಿ ಖಂಡಿತಾ ಅಲ್ಲವೇ ಅಲ್ಲ. ನಿಜವಾದ ಕೇಸರಿಯೆಂದರೆ ಹಳದಿ ಬಣ್ಣ ಕೊಡುವ ಕೆಂಪು ಚಿನ್ನ. ಇಂಥದ್ದೊಂದು ಬೇರೆ ವಸ್ತು ಜಗತ್ತಿನಲ್ಲಿಲ್ಲ. ಇದನ್ನು ಬೇರೆ ವಸ್ತುವಿನಿಂದ ರಿಪ್ಲೇಸ್‌ ಮಾಡೋದಕ್ಕೂ ಆಗೋದಿಲ್ಲ ಎಂದು ಖಂಡತುಂಡವಾಗಿ ವಾದ ಮಂಡಿಸಿಬಿಟ್ಟ ಆದಿಲ್.‌ ಆದಿಲ್‌ನ ವಾದ ಕೇಳಿ ಆತ ಬರಹೇಳಿದ ಅವರದೇ ಕುಟುಂಬಸ್ಥರ ಕೈಯ ಕೇಸರಿಯ ರುಚಿ ಪರಿಮಳ ಎಲ್ಲವನ್ನು ನೋಡಿ ಮೂಸಿ ಒಂದು ದಿನ ಸಂಪನ್ನವಾದ ಖುಷಿಯಲ್ಲಿ ನೆಮ್ಮದಿಯಿಂದ ನಿದ್ದೆಹೋದೆ.

‍ಲೇಖಕರು avadhi

November 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: