ಚಿತ್ರಾ ಸಂತೋಷ್ ನೋಡಿದ ‘ಫಸ್ಟ್ ಗ್ರೇಡರ್’

ಚಿತ್ರಾ ಸಂತೋಷ್

ಕೀನ್ಯಾದ ‘ಮೌ ಮೌ’ ಹೋರಾಟಗಾರರಾದ ಕಿಮಾನಿ ಮರುಗೆ ತನ್ನ 84ರ ವಯಸ್ಸಿನಲ್ಲಿ ಶಾಲೆಗೆ ಪ್ರವೇಶ ಪಡೆಯಲು ಪಟ್ಟ ಪಾಡನ್ನು ಚಿತ್ರಿಸುವ ಫಸ್ಟ್ ಗ್ರೇಡರ್ ಸಾರ್ವಕಾಲಿಕ ಸ್ಫೂರ್ತಿದಾಯಕ ಚಿತ್ರ. ಅದು 2002ನೇ ಇಸವಿ. ಕೀನ್ಯಾ ಸರಕಾರ ಸರ್ವರಿಗೂ ಉಚಿತ ಶಿಕ್ಷಣದ ಘೋಷಣೆಯನ್ನು ಮಾಡುತ್ತದೆ. ಬಡತನವನ್ನೇ ಬದುಕುತ್ತಿದ್ದ ಅಲ್ಲಿನ ಜನರಿಗೆ ಸರಕಾರದ ಈ ಘೋಷಣೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ. ಹಳ್ಳಿಹಳ್ಳಿಗಳಲ್ಲೂ ಜನರು ಈ ಸುದ್ದಿಯನ್ನು ರೇಡಿಯೋ ಮೂಲಕ ಕೇಳಿ ಖುಷಿಪಡುತ್ತಾರೆ. ಎಲ್ಲರಿಗೂ ಶಾಲೆಗೆ ಹೋಗುವ ಕಾತರ.

ಹಳ್ಳಿಯ ಬಯಲು ಪ್ರದೇಶವೊಂದರಲ್ಲಿದ್ದ ಆ ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗಷ್ಟೇ ಅವಕಾಶಗಳಿದ್ದರೂ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಎಲ್ಲಾ ಪೋಷಕರು ತಮ್ಮ ಮಕ್ಕಳು ಶಾಲೆ ಸೇರಬೇಕು ಎನ್ನುವ ಉದ್ದೇಶದಿಂದ ಮಕ್ಕಳ ಪ್ರವೇಶಕ್ಕೆ ಹಾತೊರೆಯುತ್ತಾರೆ. ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಬರಲು ಉತ್ಸುಕರಾಗಿದ್ದರೆ, ಇತ್ತ 84ರ ಹರೆಯದ ವೃದ್ಧರೊಬ್ಬರು ತಾವೂ ಶಾಲೆಗೆ ಸೇರಬೇಕೆಂದು ಅರ್ಜಿಯೊಂದಿಗೆ ಆಗಮಿಸುತ್ತಾರೆ. ಅವರ ಹೆಸರು ಕಿಮಾನಿ ಮರುಗೆ.

ಬಣ್ಣ ಮಾಸಿದ ಚಡ್ಡಿ, ಶರ್ಟು, ಕೈಯಲ್ಲೊಂದು ಊರುಗೋಲು, ಹೆಗಲೇರಿಸಿಕೊಂಡ ಬ್ಯಾಗು, ಸರಿಯಾಗಿ ನಡೆಯಲಾಗದ ಕಾಲುಗಳು, ಸುಕ್ಕುಗಟ್ಟಿದ ಮುಖ, ಮಂದವಾದ ಕಣ್ಣುಗಳು… ಹಾಗೇ ಅರ್ಜಿಯೊಂದನ್ನು ನಡುಗುವ ಕೈಯಲ್ಲಿಡಿದು ಶಾಲೆಯ ಮರದ ಗೇಟಿನ ಮುಂದೆ ನಿಂತಾಗ ಆ ಶಾಲೆಯ ಪ್ರಿನ್ಸಿಪಾಲ್ ಜಾನೇ ಸೇರಿದಂತೆ ಎಲ್ಲರಿಗೂ ಬೆರಗು. ಪುಟ್ಟ ಮಕ್ಕಳಿಗೇ ಶಾಲೆಯಲ್ಲಿ ಸ್ಥಳವಕಾಶದ ಕೊರತೆಯಿದೆ. ನಿಮ್ಮಂಥ ವೃದ್ಧರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಿನ್ಸಿಪಾಲ್ ಹೇಳಿದರೂ ಕೇಳದ ಆ ವಯೋವೃದ್ಧ ಪ್ರತಿದಿನವೂ ಶಾಲೆಯ ಗೇಟಿನ ಮುಂದೆ ಅರ್ಜಿ ಹಿಡಿದು ನಿಲ್ಲುತ್ತಾರೆ.

ಪುಟ್ಟ ಮಕ್ಕಳಂತೆ ಅಜ್ಜ ಕಿಮಾನಿಯ ಹಠ. ಕಾನೂನಿನ ಪ್ರಕಾರ ಶಾಲೆಯಲ್ಲಿ ಸೀಟು ನೀಡಲೇಬೇಕು ಎಂದು ಪಟ್ಟುಹಿಡಿದ ಕಿಮಾನಿ ಕೊನೆಗೂ ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಮಕ್ಕಳಂತೆ ಅಜ್ಜನಿಗೂ ತಿಳಿನೀಲಿ ಬಣ್ಣದ ಶರ್ಟ್, ಕಡುನೀಲಿ ಬಣ್ಣದ ಚಡ್ಡಿ ಯೂನಿಫಾರ್ಮ್. ಪುಟ್ಟ ಬಾಲಕನಂತೆ ಕಿಮಾನಿಯೂ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸಿ ಶಾಲೆಗೆ ಬಂದರು. ಪುಟಾಣಿಗಳ ಜೊತೆಗೆ 84ರ ಕಿಮಾನಿ ಮರುಗೆಗೆ ಎಬಿಸಿಡಿ ಪಾಠವೂ ಶುರುವಾಯಿತು. ಪ್ರಿನ್ಸಿಪಾಲ್ ಜಾನೆಯ ಈ ನಿರ್ಧಾರಕ್ಕೆ ಊರಿಗೇ ಊರೇ ಮಕ್ಕಳೊಡನೆ ವಯಸ್ಸಾದವರಿಗೆ ಪಾಠ ಮಾಡುವಂತಿಲ್ಲ, ಮರುಗೆಯನ್ನು ಶಾಲೆಗೆ ಸೇರಿಸಿಕೊಂಡಿದ್ದೇ ತಪ್ಪು ಎಂದು ಹೋರಾಟವೇ ಶುರುವಾಯಿತು.

ಊರಿನ ಜನರೆಲ್ಲರೂ ಶಾಲೆಗೆ ಮುತ್ತಿಗೆ ಹಾಕಿದರು. ಪ್ರಿನ್ಸಿಪಾಲ್ ಜಾನೆಯ ವರ್ಗಾವಣೆಯೂ ಆಗೋಯ್ತು. ಇಷ್ಟೆಲ್ಲಾ ನಡೆದರೂ ಕಿಮಾನಿ ಎದೆಗುಂದಲಿಲ್ಲ, ಹುಟ್ಟು ಹೋರಾಟಗಾರನಾಗಿದ್ದ ಕಿಮಾನಿ ಮರುಗೆ ಜಾನೆಯನ್ನು ಮತ್ತೆ ಅದೇ ಶಾಲೆಗೆ ದಕ್ಕಿಸಿಕೊಳ್ಳುವುದರಲ್ಲೂ ಹೋರಾಟ ಮಾಡಿ ಗೆಲ್ಲುತ್ತಾರೆ. ಅಂತಿಮವಾಗಿ ಶಾಲಾ ಓದನ್ನೂ ಪೂರ್ಣಗೊಳಿಸುತ್ತಾರೆ.ಕಿಮಾನಿಯ ಶಾಲೆ ಕಲಿಕೆ ಮಾತ್ರವಲ್ಲ ಅವರ ಸ್ವಾತಂತ್ರ್ಯ ಹೋರಾಟ, ಕೀನ್ಯಾದ ಆರ್ಥಿಕ ಪರಿಸ್ಥಿತಿ, ಜನಜೀವನ ಎಲ್ಲವನ್ನೂ ಸೂಕ್ಷ್ಮವಾಗಿ ಈ ಚಿತ್ರ ಕಟ್ಟಿಕೊಡುತ್ತದೆ.

2002ರಲ್ಲಿ ಕೀನ್ಯಾ ಸರಕಾರ ಉಚಿತ ಸಾರ್ವಜನಿಕ ಶಿಕ್ಷಣ ಘೋಷಣೆ ಮಾಡಿದಾಗಿನ ಘಟನಾವಳಿಗಳೊಂದಿಗೆ ಕಿಮಾನಿ ಮರುಗೆ ಎಂಬ ಬಡರೈತನ ನಿಜ ಬದುಕನ್ನು ಆಧರಿಸಿ ಜಸ್ಟೀನ್ ಚಾಡ್ವಿಕ್ ಈ ಚಿತ್ರ ನಿರ್ದೇಶಿಸಿದ್ದಾರೆ.

ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಕಿಮಾನಿ ತನ್ನ ಕೊನೆಯ ದಿನಗಳವರೆಗೂ ಶಿಕ್ಷಣಕ್ಕಾಗಿ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ನಿರತರಾಗಿದ್ದರು. 2005ರಲ್ಲಿ ವಿಶ್ವಸಂಸ್ಥೆಯ ವಿಶ್ವ ಸಮಾವೇಶದಲ್ಲಿಯೂ ಉಚಿತ ಪ್ರಾಥಮಿಕ ಶಿಕ್ಷಣದ ಕುರಿತು ಮಾತನಾಡಿದ್ದರು. ವಯಸ್ಕ ವ್ಯಕ್ತಿಯಾಗಿ ಪ್ರಾಥಮಿಕ ಶಿಕ್ಷಣ ಪಡೆದ ಜಗತ್ತಿನ ಪ್ರಪ್ರಥಮ ವಿದ್ಯಾರ್ಥಿ ಎಂಬುದಾಗಿ ಕಿಮಾನಿ ಹೆಸರು ಗಿನ್ನಿಸ್ ದಾಖಲೆಯಾಗಿದೆ.

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: