ಚಿತ್ತ ಚಿತ್ ಮಾಡಿದ ಆಂಡ್ರ್ಯೂ ಪಾಲ್‌!

ಮ ಶ್ರೀ ಮುರಳಿ ಕೃಷ್ಣ

**

ಕಳೆದ ಸೋಮವಾರ ಪ್ರಸಿದ್ಧ ಕಲಾವಿದ ನಂದಲಾಲ್‌ ಬೋಸ್‌ ಅವರ ʼರಾಮಪುರ ಪ್ಯಾನೆಲ್‌ʼನ್ನು ವೀಕ್ಷಿಸಲು ನಮ್ಮ ಕುಟುಂಬ ಬೆಂಗಳೂರಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡ್ರನ್‌ ಆರ್ಟ್(‌NGMA)ಗೆ ಹೋಯಿತು. ಗೇಟಿನ ಬಳಿ ಹೋದಾಗ ಸೆಕ್ಯುರಿಟಿ ಗಾರ್ಡ್‌ ರಜೆಯ ದಿನ ಎಂದು ತಿಳಿಸಿದಾಗ ನಮಗೆ ಜ್ಞಾನೋದಯವಾಯಿತು! ಉತ್ಸಾಹ ಜರ್ರನೇ ಇಳಿಯಿತು! ಮಗರಾಯ ಚಿತ್ರಕಲಾ ಪರಿಷತ್‌(CKP)ಗೆ ಹೋಗೋಣ ಎಂದ. ಸರಿ, ಅಲ್ಲಿಗೆ ಹೊರಟಿತು ನಮ್ಮ ರಥ.

CKPಯಲ್ಲಿ ಚಿತ್ರಕಲಾವಿದ ಆಂಡ್ರ್ಯೂ ಪಾಲ್‌ ಅವರ ʼTranscending Boundariesʼ ಶೀರ್ಷಿಕೆಯ ಚಿತ್ರಕಲಾ ಪ್ರದರ್ಶನವಿತ್ತು. ʼಅಮೂರ್ತ ಅಭಿವ್ಯಕ್ತಿ ಚಿತ್ರಕಲಾಪಂಥ ʼ(Abstract Expressionism)ದ ಈ ಕಲಾವಿದ ಬಣ್ಣಗಳ ಮೂಲಕ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿದ್ದರು. ಕೋವಿಡ್‌ ಪಿಡುಗು ಇಡೀ ಪ್ರಪಂಚವನ್ನು ತಲ್ಲಣಗೊಳಿಸಿದ ಬಗೆ ನಮಗೆ ತಿಳಿದೇ ಇದೆ. ಅವರು ವೈಯಕ್ತಿಕ ಹಾಗೂ ಸಾಮೂಹಿಕ ಮಟ್ಟದ ಸಂಕಟಗಳನ್ನು ಅಮೂರ್ತವಾಗಿ ಹೊರಗೆಡಹಿದ್ದಾರೆ.

ʼಅಂತ್ಯವಿಲ್ಲದ್ದುʼ( ʼThe unendingʼ), ʼಕತ್ತಲೆಯ ಮಾತುಕತೆಗಳುʼ (ʼConversations in the darkʼ), ʼನನ್ನ ಜೀವನಗಾಥೆʼ (ʼStory of my lifeʼ) ಮುಂತಾದ ತಲೆಬರಹಗಳುಳ್ಳ ಪೈಂಟಿಂಗ್‌ಗಳು ಕಲಾವಿದನ ಮನೋವಲಯದ ಭಾವನೆಗಳನ್ನು ಕ್ಯಾನ್ವಾಸಿನ ಮೇಲೆ ಮೂಡಿರುವ ಪರಿ ನಾನಾ ಅರ್ಥಗಳನ್ನು ಸ್ಪುರಿಸುತ್ತವೆ. ಟೈಂ, ಸ್ಪೇಸ್‌, ಮಿಲನದ ಅನುಭೂತಿ, ನೆನಪುಗಳ ಲಗ್ಗೆ, ದೈವತ್ವದ ಪ್ರಶ್ನಿಸುವಿಕೆ ಇತ್ಯಾದಿ ವಿಷಯಗಳ ಬಗೆಗೆ ಈ ಕಲಾವಿದ ತಮ್ಮದೇ ಆದ ರೀತಿಯಲ್ಲಿ ದಾಟಿಸಿದ್ದಾರೆ.

ಸಾಂಪ್ರದಾಯಿಕ ಬ್ರಶ್‌ಗಳನ್ನು ಮಾತ್ರ ಬಳಸದೆ ಆಂಡ್ರ್ಯೂ ಇಟ್ಟಿಗೆ ಮುಂತಾದ ಸಾಧನಗಳನ್ನು ಬಳಸಿದ್ದಾರೆ! ಸಾಧನ ಯಾವುದೇ ಆಗಿರಲಿ, ಕಲೆಯನ್ನು ಅರಳಿಸುವ ಬ್ರಹ್ಮನಾಗುತ್ತಾನೆ ಸೃಜನಶೀಲ ಕಲಾವಿದ! ಆತನ ಆಲೋಚನೆಗಳ, ಉದ್ದೇಶಗಳ ಅಭಿವ್ಯಕ್ತಿಗೆ ಆಗಸವೇ ಮಿತಿ! ಅವರು ಅಕ್ರೆಲಿಕ್‌, ಇದ್ದಿಲು, ಆಯಿಲ್‌ ಸ್ಟಿಕ್ಗಳು ಮತ್ತು ಸ್ಪೇ ಪೈಂಟ್ಗಳನ್ನು ಬಳಸುತ್ತಾರೆ. 2016ರಲ್ಲಿ ʼMighty my saviorʼ ಎಂಬ ಅವರ ಪೈಂಟಿಂಗ್‌ ‘ಆಕ್ಸ್ಫರ್ಡ್‌ ಎನ್ಸೈಕ್ಲೊಪೀಡಿಯಾ ಆಫ್‌ ಬೈಬಲ್‌ ಅಂಡ್‌ ದಿ ಆರ್ಟ್ಸ್‌ʼ ನಲ್ಲಿ ಸೇಪರ್ಡೆಯಾಗಿದೆ.

ಕಲಾಕೃತಿಗಳನ್ನು ಒಂದು ಸುತ್ತು ವೀಕ್ಷಿಸಿದ ತರುವಾಯ ಸ್ವಪರಿಚಯ ಮಾಡಿಕೊಂಡ ಬಳಿಕ ಆಂಡ್ರ್ಯೂ ನಿಧಾನವಾಗಿ ಬಿಚ್ಚಿಕೊಳ್ಳತೊಡಗಿದರು ; ಒಂದು ಲಹರಿಗೆ ಆತುಕೊಂಡರು! “ನೋಡಿ, ಪ್ರಸ್ತುತ ಕಾಲಘಟ್ಟದಲ್ಲಿ ಅನೇಕರು, ಅದರಲ್ಲೂ ಯುವಜನರು ಇಂತಹ ಕಲಾಪ್ರದರ್ಶನಗಳಿಗೆ ಭೇಟಿ ನೀಡಿದಾಗ, ಕ್ಷಿಪ್ರವಾಗಿ ನೋಟಗಳನ್ನು ಹರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಪೈಂಟಿಂಗ್ ಗಳನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿಯುತ್ತಾರೆ. ಬರಿ ನೋಟಕ್ಕೆ ಮಾತ್ರ ಸೀಮಿತವಾಗದೆ ಕಲಾಪ್ರದರ್ಶನಗಳ ವೀಕ್ಷಣೆ ರಸಾನುಭೂತಿಗೆ, ಭಿನ್ನ ಅನುಭವಕ್ಕೆ ದಾರಿಯಾಗಬೇಕು” ಎಂಬ ಅರ್ಥಪೂರ್ಣ ನುಡಿಗಳನ್ನಾಡಿದರು.

ಆಂಡ್ರ್ಯೂಈ ಕಲಾಪ್ರದರ್ಶನದಲ್ಲಿ ತಮಗೂ ಒಂದು ವಿಶಿಷ್ಟ ಅನುಭವ ದೊರೆತ ಪ್ರಸಂಗವನ್ನು ತಿಳಿಸಿದರು. ಒಬ್ಬ ಮಹಿಳೆ ಕೆಲವು ಕಲಾಕೃತಿಗಳ ರಚನಾ ಸಮಯವನ್ನು ಕೇಳಿದರಂತೆ. ಅದಕ್ಕೆ “2017- 2020″ ಎಂದು ಅವರು ಉತ್ತರಿಸಿದರಂತೆ. ಆ ಮಹಿಳೆ, “ಹಾಗಾದರೆ ನೀನು ಇನ್ನೂ ಬದುಕಿದ್ದೀಯಲ್ಲ?” ಎಂಬ, ಯಾರಿಗಾದರೂ ಇರುಸುಮುರುಸನ್ನು ಉಂಟು ಮಾಡುವ ರೀತಿಯಲ್ಲಿ ಪ್ರಶ್ನಿಸಿದರಂತೆ. ಆವಕ್ಕಾದ ಕಲಾವಿದ “ ಏಕೆ ಹೀಗೆ ಕೇಳುತ್ತಿರುವಿರಿ?” ಎಂದು ಸಮಾಧಾನದಿಂದ ವಿಚಾರಿಸಿದರಂತೆ. “ಇಲ್ಲ, ನನ್ನ ಮಗಳು ಇದೇ ತೆರನಾದ ಪೈಂಟಿಂಗ್‌ಗಳನ್ನು ಮಾಡುತ್ತಿದ್ದಳು. ಆಕೆಯೂ ನಿಮ್ಮಂತೆ ಕೆಂಪು ಬಣ್ಣವನ್ನು ಜಾಸ್ತಿ ಬಳಸುತ್ತಿದ್ದಳು. ಅವಳು ಈಗ ಬದುಕಿಲ್ಲ. ಅದಕ್ಕೆ ಕೇಳಿದೆ…” ಎಂದು ಅವರು ಹೇಳಿದರಂತೆ. ಮಗಳ ಅಕಾಲಿಕ ಮರಣ ತಾಯಿಯನ್ನು ತೀವ್ರವಾಗಿ ಘಾಸಿಗೊಳಿಸಿದ ರೀತಿಯನ್ನು ಅರಿತ ಆಂಡ್ರ್ಯೂ ಮೌನಕ್ಕೆ ಶರಣಾದರಂತೆ!

ಸಿನಿಮಾಗಳು ಕೂಡ ನಮ್ಮ ಮಾತುಕತೆಯಲ್ಲಿ ನುಸುಳಿದವು. ನಾನೊಬ್ಬ ಸಿನಿಮೋತ್ಸಾಹಿ ಎಂದು ತಿಳಿದ ಆಂಡ್ರ್ಯೂ ತಾವೊಬ್ಬ ಫಿಲ್ಮೇಕರ್‌ ಮತ್ತು ಫೋಟೋಗ್ರಾಫರ್‌ ಕೂಡ ಎಂಬ ಮಾಹಿತಿಯನ್ನು ನೀಡಿದರು. ನಮಗೆ ತಮ್ಮ ಎರಡು ಎಕ್ಸ್ಪಿರಿಮೆಂಟಲ್‌ ಶಾರ್ಟ್‌ ಫಿಲ್ಮ್‌ಗಳನ್ನು ತೋರಿಸಿದರು. ಪೈಂಟಿಂಗ್‌ಗಳನ್ನು ವೀಕ್ಷಿಸುತ್ತಿದ್ದಾಗ ಸಣ್ಣ ಪರದೆಯ ಮೇಲೆ ಆಂಡ್ರ್ಯೂ ತಮ್ಮ ಎರಡು ಕೈಗಳನ್ನು ಕ್ಯಾನ್ವಾಸಿನ ಮೇಲೆ ಬಳಸುವಾಗ ದೊಡ್ಡ ಬ್ರಶ್ಗಳಿಂದ ಮೂಡಿದ ಶಬ್ದ ಬೇರೆಯೇ ಅನುಭವವನ್ನು ನೀಡಿತು!

ನಿಜ, ಹಲವು ಊಹೆಗಳಿಗೆ, ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವ ಅಮೂರ್ತ ಕಲೆಯದ್ದು ಒಂದು ವಿಶಿಷ್ಟ, ವಿಸ್ಮಯಕಾರಿ ಲೋಕ. ಪ್ರಥಮ ನೋಟಕ್ಕೆ ಏನೂ ಅರ್ಥವಾಗುತ್ತಿಲ್ಲವಲ್ಲ ಎಂಬ ಅನಿಸಿಕೆ ಕಾಡಿದರೂ, ವೀಕ್ಷಿಸುವುದನ್ನು ಮುಂದುವರೆಸಿದಾಗ ಕೆಲವು ಹೊಳಹುಗಳು ದೊರಕುವ ಸಾಧ್ಯತೆಗಳಿರುತ್ತವೆ. ಅವು ಕೃತಿಕಾರನ ಸೃಜನಶೀಲ ಅಭಿವ್ಯಕ್ತಿಯ ಆಲೋಚನೆಗಳಿಗೆ ಕಿಂಚಿತ್ತು ತಾಳೆಯಾಗದೇ ಇರಬಹುದು! ಆದರೂ ಅವು ವೀಕ್ಷಕನ ಅನುಭವದ ಭಾಗವಾಗುತ್ತದೆ. ಅರ್ಥೈಸಿಕೊಳ್ಳುವ ರೀತಿ ತಪ್ಪೋ, ಸರಿಯೋ ಎಂಬ ಬೈನರಿಗಳಿಂದಾಚೆ ಕಲಾವಿದನೊಬ್ಬನ ಅಭಿವ್ಯಕ್ತಿಯನ್ನು ಅರಿತುಕೊಳ್ಳುವ ಪ್ರಕ್ರಿಯೆ ಇದೆಯಲ್ಲ, ಅದು ನೀಡುವ ಸಂತಸ ಹಾಗೂ ಸಮಾಧಾನ ಮುಖ್ಯವಾಗುತ್ತವೆ. ಅಂತೂ ಚಿತ್ರಕಲೆಯ ಪ್ರದರ್ಶನದ ಜೊತೆಗೆ ಕಲಾವಿದನ ಜೊತೆ ನಡೆಸಿದ ಮಾತುಕತೆ ಚಿತ್ತಕ್ಕೆ ಹಾಯೆನಿಸುವ ತಂಪನ್ನು ನೀಡಿತು. NGMA ಮತ್ತು CKPಗೆ ಹೋದಾಗಲೆಲ್ಲ ಮನಸ್ಸು ಗರಿಗೆದರಿದ ನವಿಲಾಗುತ್ತದೆ!

‍ಲೇಖಕರು Admin MM

May 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: