ಚಿತ್ತಾಲರ ಒಡನಾಟವೊಂದು ಆಪ್ತ ಸೌಭಾಗ್ಯ…

ಗೋಪಾಲ ತ್ರಾಸಿ

2003ರ ಅಗಸ್ತ್ ತಿಂಗಳ ಗುರುತು ಮಾಸಿಕದ ನನ್ನ ಅಂಕಣ (ಭಾವ ಪ್ರಪಂಚ) ದಲ್ಲಿ, ‘ಎಪ್ಪತ್ತೈದರ ಹೊಸ್ತಿಲಲ್ಲಿ ಹನೇಹಳ್ಳಿಯ ಕತೆಗಾರ ‘ ಅಂತ ಪುಟ್ಟ ಲೇಖನ ಬರೆದಿದ್ದೆ. ಅದೇ ಅಗಸ್ತ್  ಮೂರರಂದು ಮಾನ್ಯ ಸಾಹಿತಿ ಯಶವಂತ ಚಿತ್ತಾಲರಿಗೆ ಫೋನಿನ ಮೂಲಕ ಹುಟ್ಟು ಹಬ್ಬಕೆ ಶುಭಾಶಯ ಹೇಳಿ, “ಸರ್ ನಾನು ಮುಂದೆ ಮನೆಗೆ ಬರುವಾಗ ಖಂಡಿತ ಕೇಕ್ ತರುವೆ” ಅಂತ ನಗುತ್ತ ಹೇಳಿದ್ದೆ.  ತಕ್ಷಣ ಅವರು, “ಅರೇ ನೀವು ಕೇಕಿಗಿಂತಲೂ ಶುಚಿ ರುಚಿಯಾದ ಲೇಖನ ಬರೆದಿದ್ದಿರಲ್ಲಾ, ಅದೇನು ಕಡಿಮೇನಾ  ಅಷ್ಟು ಸಾಕು” ಅಂದರು. ಲೇಖನ ಇಷ್ಟವಾಯಿತೊ ಇಲ್ಲವೊ ಎಂದು ಅನುಮಾನಿಸುತ್ತಿದ್ದವನಿಗೆ ಅವರ ಮಾತು ಕೇಳಿ ಅಬ್ಬಾ ಸಾಕು ! ಅನ್ನಿಸಿತ್ತು. ಅವರು ಹೇಳಿದ ಧಾಟಿಯಲ್ಲೇ ಅವರ ಮನಸ್ಸಿನ ಪ್ರಫುಲ್ಲತೆ ಅರಿವಾಯಿತು. 

ಒಂದು ಆದಿತ್ಯವಾರ ಲ್ಯಾಂಡ್ ಲೈನ್ ನಲ್ಲಿ ಅವರು ಮಾಡಿದ ಕರೆಯನ್ನು ನನ್ನ ನಾಲ್ಕು ವರ್ಷದ ಮಗ ಧ್ರುವ  ಎತ್ತಿ ಮಾತಾಡುತಿದ್ದ. ಯಾರ ಫೋನು ಅಂತ  ಕೇಳಿದಾಗ, ‘ಯಾರೋ ಅಜ್ಜ..’ಅಂದವನಿಂದ ಫೋನು ಎತ್ತಿಕೊಂಡಾಗ, “ನಿಮ್ಮ ಮಗ ಎಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತಾನೆ“ ಅಂತ ಖುಷಿ ಪಟ್ಟಿದ್ದರು. ಫೋನು ಇಡುವ ಮೊದಲುಅವರು  ‘ಮನೆಗೆ ಬನ್ನಿ’ ಅಂತ  ಪ್ರತಿ ಸಲ  ಹೇಳಲೇಬೇಕು.  ನಾವು ಚುಕ್ಕಿಸಂಕುಲದ ಗೆಳೆಯರು ಮಹಾಮಾಯಿ ನಾಟಕ ಮಾಡಿದಾಗ ಅತಿಥಿಯಾಗಿ ಚಿತ್ತಾಲರನ್ನು ಆಹ್ವಾನಿಸಿದ್ದೆವು.  ಕೆಲವು ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೋಬೇಕು ಹಾಗಾಗಿ ಸಂಜೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ ಅಂತಂದವರು ಪೂರ್ಣ ನಾಟಕ ನೋಡಿ, ವೇದಿಕೆಗೆ ಬಂದು ಹಾರೈಸಿ ನಮಗೆಲ್ಲ ಮಹಾ ಆಶ್ಚರ್ಯವುಂಟು ಮಾಡಿದ್ದರು.

ಪ್ರತಿ ಆಗಸ್ತ್ 3 ರಂದು ಈ ನಮ್ಮ ಧೀಮಂತ ಸಾಹಿತಿ ಯಶವಂತ ಚಿತ್ತಾಲರನ್ನು ಮಾತಾಡಿಸುವ ಜೊತೆಗೆ  ವರ್ಷಕ್ಕೆ ಒಮ್ಮೆಯಾದರೂ ಕವಿ, ನಾಟಕಕಾರ ಗೆಳೆಯ ಸಾ.ದಯಾ ಜೊತೆಗೆ ಮನೆಗೆ ಹೋಗಿ ಭೇಟಿ ಮಾಡುವ ಪರಿಪಾಠ. ಹಲವು ಬಾರಿ ಒಳನಾಡಿನಿಂದ ಬರುವ ಚಿತ್ತಾಲರ ಅಭಿಮಾನಿ ಸಾಹಿತಿಗಳಿಗೆ ಸಾಥ್ ನೀಡಿದ್ದೂ ಇದೆ. ಆಗೆಲ್ಲ ಅವರಿಗೆ ಅಪರಿಮಿತ ಖುಷಿಯಾಗೋದು. ಸದಾ ಲವಲವಿಕೆಯಿಂದ ಇರುವ ಚಿತ್ತಾಲರ  ಜೀವನ ಪ್ರೀತಿ, ಜೀವನೋತ್ಸಾಹ ಅಂತಹದ್ದು. ಚಿತ್ತಾಲರೇ ಹೇಳುವಂತೆ, ಅವರಿಗೆ ಮಾತಿಗಿಂತ ಮಾತುಕತೆ ಇಷ್ಟ. ಮನೆಗೆ ಬಂದವರನ್ನು ಮಾತನಾಡಿಸುವ, ಪ್ರೀತಿದೋರುವ ಪರಿಗೆ ಯಾರೂ ಮಾರು ಹೋಗದೆ ಇರಲಾರರು. ಒಮ್ಮೆ ಹೋದಾಗ ಏಕ ದಿನ ಕ್ರಿಕೇಟ್ ಪಂದ್ಯ ನೋಡುತ್ತ ಕುಳಿತಿದ್ದರು. ಸಚಿನ್ ಬ್ಯಾಟಿಂಗ್ ಮಾಡುತಿದ್ದ, ನಾವೂ ಚಿತ್ತಾಲರ  ಜೊತೆಯಾದೆವು .  

ಇದು 2013ರಲ್ಲಿ ಅಗಸ್ತ್ ತಿಂಗಳ ಒಂದು ಆದಿತ್ಯವಾರ.

“ಸಾರ್ ಹೇಗಿದ್ದೀರಿ? ಸಂಜೆ ಮನೆಯಲ್ಲೇ ಇರುವಿರಾ? ಅಂತ ಪೋನಿನಲ್ಲಿ ವಿಚಾರಿಸಿಕೊಂಡು ಮಧ್ಯ ಮುಂಬೈನ ಬಾಂದ್ರಾದ ಕಡಲ ತೀರದಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ಆಪಾರ್ಟಮೆಂಟಗೆ ಸಾ.ದಯಾ ಅವರ ಜೊತೆಯಾಗಿ ಹೋದಾಗ, ಬಾಗಿಲು ತೆರೆಯುತ್ತಲೇ, “ನಾಲ್ಕೂವರೆಯಿಂದ ಕಾಯ್ತಾ ಇದ್ದೇನೆ, ಬನ್ನಿ ಬನ್ನಿ ಕುಳಿತುಕೊಳ್ಳಿ. ಅಲ್ಲಿ ಅಷ್ಟು ದೂರ ಯಾಕೆ, ಇಲ್ಲಿ ಹತ್ತಿರ ಬನ್ನಿ…”ಎನ್ನುತ್ತ ಸೋಫಾದ ‘ಆ’ ತುದಿಯಲ್ಲಿ ಕುಳಿತು ಮಾತುಕತೆಗೆ ಆರಂಭಿಸುತ್ತಾರೆ. ಇನ್ನೂ ನೆನಪಿದೆ ನನಗೆ, ಸೋಫಾದ ‘ಆ’ ತುದಿಯ ಮಹತ್ವ ತಿಳಿದದ್ದು ಬಹಳ ವರ್ಷಗಳ ಹಿಂದೆ ಮೊದಲ ಬಾರಿ ಅವರ ಮನೆಗೆ ಹೋದ ಸಂದರ್ಭ. ಅಂದು, ಒಳಗೆ ಬರಮಾಡಿಕೊಂಡವರನ್ನು ಹಿಂಬಾಲಿಸಿ ವಿಶಾಲವಾದ ಹಾಲ್ ನ ದಕ್ಷಿಣ ಗೋಡೆಗೆ ಆತುಕೊಂಡ ಮರದ ಆ ಸೋಫಾದ ಆ ಮೂಲೆಯ ಮೇಲೆ ನಾನು  ಇನ್ನೇನು ಕುಳಿತುಕೊಳ್ಳಬೇಕು, ತಕ್ಷಣ ತಡೆದ ಚಿತ್ತಾಲರು,” ನಿಲ್ಲಿ, ಅಲ್ಲಿ ಕುಳಿತುಕೋ ಬೇಡಿ. ಅಲ್ಲಿ ಕುಳಿತರೆ ನೀವು ಕತೆ ಬರೆಯಬೇಕಾಗುತ್ತದೆ” ಅಂತ ಅವರು ನನ್ನನ್ನು ತಡೆದ ಅಥವ ಯಾರನ್ನೂ ತಡೆಯಲು ಬಹು ದೊಡ್ಡ ಕಾರಣವನ್ನು ಮಂದಸ್ಮಿತರಾಗಿ ಹೇಳಿದ್ದು ಹೀಗೆ , 

’’ಸೋಫಾದ ಆ ತುದಿಯಲ್ಲಿ ನಾನು ಕುಳಿತಿರಬೇಕು. ಈ ತುದಿಯಲ್ಲಿ ಆ ಪುಟ್ಟ ದೀಪದ ಬೆಳಕಿರುತ್ತದೆ. ಹೊರಗೆ ತಂಗಾಳಿಯ ಜೊತೆ ಸಮುದ್ರದ ಅಲೆಗಳ ಕಲರವ ಬಿಟ್ಟರೆ ಮತ್ತೆಲ್ಲ ನಿಶ್ಯಬ್ದ. ಬೆಳಗ್ಗಿನ ನಾಲ್ಕೂವರೆಯ ಸಮಯ ಅದು, ನನ್ನ ಬರವಣಿಗೆಗೆ ಸಶಕ್ತ ಘಳಿಗೆ…” ಅವರ ಆ ಮಾತುಗಳಲ್ಲೇ ಕಥನ ಕಲೆಯ ಘಮ ಇರುವುದಲ್ಲ! ಅನ್ನಿಸದಿರದು.

ಹೌದಲ್ಲ, ಅಲ್ಲಿಂದ ತೆರದ ದೊಡ್ಡ ಬಾಲ್ಕನಿಯಿಂದ   ನೋಟ ನೇರವಾಗಿ ತಾಕುವುದು ಆ ವಿಶಾಲ ಸಮುದ್ರವನ್ನು!. ತಮ್ಮ ಸೃಜನಶೀಲ ಕ್ರಿಯೆಯ ಬಹುಮುಖ್ಯ ಭಾಗವೇ ಆದ ಸೋಫಾದ ‘ಆ’ ತುದಿಯ ಕುರಿತು ಆಪ್ಯಾಯಮಾನದಿಂದ ತಮ್ಮ ಮನಸ್ಸನ್ನು ಬಿಚ್ಚುವ ಬಗೆ ಆತರಹದ್ದು.  

ಅದೇ  2013ರ ಅಗಸ್ತ್ ತಿಂಗಳಲ್ಲಿ ಎಂಬತ್ತಾರನೇ ಹುಟ್ಟು ಹಬ್ಬ ಆಚರಿಸಿದ ಚಿತ್ತಾಲರ ಮನೆಗೆ ವಾರ ಬಿಟ್ಟು ಹೋದೆವು. ಅವರು  ಯಾವತ್ತಿನಂತೆ ಬಿಳಿ ಪೈಜಾಮದ ಮೇಲೆ ಬನಿಯನ್ ತರಹದ ತೆಳ್ಳನೆ ಬಿಳಿ ಅಂಗಿ ತೊಟ್ಟಿದ್ದರು.  ಆ ಕ್ಷಣ ನನಗೆ ಅವರು ಶಿವರಾಮ ಕಾರಂತರಂತೆ ಕಂಡು ಬಂದರು! ಮೆಲ್ಲನೆ ಸಾ.ದಯಾಗೆ ಹಾಗೇ ಹೇಳಿದೆ.   ಚಿತ್ತಾಲರು ಏನು ಏನು ? ನನಗೂ ಹೇಳಿ ಅಂದಾಗ, “ನೀವು ಈ ಪೋಷಾಕಿನಲ್ಲಿ ತುಂಬಾ ಚೆಂದ ಕಾಣುತ್ತಿದ್ದೀರಿ” ನಗುತ್ತ ಅಂದೆ. “ನಾನು ಚೆಂದ ಇದ್ದೇನೆ,ಅದಕ್ಕೇ ಚೆಂದ ಕಾಣುವುದಲ್ಲವಾ“ ಅಂತ ಮತ್ತದೇ ಮಂದಹಾಸದೊಂದಿಗೆ ಹೇಳಿದರು. ಯಾರೊಂದಿಗೂ ಹಂಚಿಕೊಳ್ಳದ ಅಂದು ನಾ ಸೆರೆಹಿಡಿದ ಚಿತ್ರಗಳು, ಪುಟ್ಟ ವಿಡಿಯೋ ಸಹ ದಾಖಲಿಸಿದ ಫೋನು ಮುಂದೊಂದು ದಿನ ರೈಲಿನಲ್ಲಿ ಕಳೆದು ಹೋದಾಗ ಆದ ಪರಿತಾಪ ಅಷ್ಟಿಷ್ಟಲ್ಲ.

“ಉತ್ತರ ಕನ್ನಡ ಜಿಲ್ಲೆ ಅದರಲ್ಲೂ ನನ್ನ ಹುಟ್ಟುರಾದ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರಲ್ಲ…” ಅಂತಾರೆ. ಹೌದು ಹನೇಹಳ್ಳಿ ಮತ್ತು ಮುಂಬಯಿ ಚಿತ್ತಾಲರ ಸಾಹಿತ್ಯದ ಮೂಲ ಸೆಲೆ ಮತ್ತು ಪ್ರೇರಕ ಶಕ್ತಿಗಳು. ಅವರ ಕತೆ, ಕಾದಂಬರಿಯ ಪಾತ್ರಗಳ ಭಾವ ಪ್ರತಿಮೆ ಹಾಗು ವಿನ್ಯಾಸಗಳ ಮೂಲಕ ಇವನ್ನು ಕಂಡುಕೊಳ್ಳಬಹುದೆಂದು ಹಲವು ವಿಮರ್ಶಕರು ಗುರುತಿಸುತ್ತಾರೆ.

ಬಾಲಕನಾಗಿದ್ದಾಗ ಚಿತ್ತಾಲರಿಗೆ ಚಿತ್ರಕಲೆ ಮತ್ತು ಮಿಮಿಕ್ರಿ ಬಗ್ಗೆ ಅಮಿತ ಆಸಕ್ತಿ! ಕನ್ನಡ ಸಾಹಿತ್ಯಲೋಕದ ಸುದೈವ ಅನ್ನಿ ಅಣ್ಣಂದಿರಾದ ದಾಮೋದರ  ಹಾಗೂ ಪ್ರಖ್ಯಾತ ಕವಿ ಗಂಗಾಧರ ಚಿತ್ತಾಲರ ಮುಖಾಂತರ ಸಾಹಿತ್ಯದ ನಂಟು. ಕಲಿತದ್ದು ಕುಮಟ, ಧಾರವಾಡ, ಮುಂಬಯಿ ಮತ್ತು  ಅಮೇರಿಕೆಯ ನ್ಯೂಜೆರ್ಸಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್. ಮುಂಬೈಯಲ್ಲಿ ಬೇಕೆಲೈಟ್ ಹೈಲಮ್ ಲಿಮಿಟೆಡ್ ಕಂಪನಿಯಲ್ಲಿ ದುಡಿಮೆ. ಮುಂದೆ ಅದೇ ಕಂಪನಿಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ 1985 ರಲ್ಲಿ ನಿವೃತ್ತರಾದರು. ನಿವೃತ್ತಿ ಜೀವನದ ಬಹುಪಾಲು ಸಮಯವನ್ನು ಚಿತ್ತಾಲರು ತಮಗೆ ಅತ್ಯಂತ ಪ್ರಿಯವಾದ ಓದು-ಬರಹಗಳಲ್ಲಿ ಕಳೆಯುತ್ತಾರೆ. ಹೌದು ಅವರ ನಿರಂತರ ಓದು, ಅಭ್ಯಾಸ ಗುಣಗಳಿಂದಾಗಿಯೇ ಅವರ ಬರಹಗಳಲ್ಲಿ ಖಚಿತತೆ, ಚಿಂತನೆಯಲ್ಲಿ ಸ್ಪಷ್ಟತೆ, ಮತ್ತಷ್ಟನ್ನು ತಿಳಿದುಕೊಳ್ಳಬೇಕೆಂಬ ಹಂಬಲ ತಿಳಿದುಕೊಂಡದ್ದನ್ನು ಹಂಚಿಕೊಳ್ಳಬೇಕೆಂಬ ತಹತಹ ವ್ಯಕ್ತವಾಗುತ್ತವೆ.

ಚಿತ್ತಾಲರು 1949ರ ಸುಮಾರಿಗೆ  ಮುಂಬೈಗೆ ಬರುವ ಮೊದಲು ಕಾರವಾರದ ಸಮೀಪ ಇರುವ ಬಾಡ ಎಂಬ ಹಳ್ಳಿಯಲ್ಲಿನ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಎರಡು ತಿಂಗಳ ಮಟ್ಟಿಗೆ ಮಾಸ್ತರಿಕೆ ಮಾಡುತ್ತಾರೆ. ಆಗ ಹತ್ತಿರದ ಸಂಬಂಧಿಕರ ಮನೆಯಲ್ಲಿ ವಾಸ. ಆ ದಿನಗಳಲ್ಲೆ ಮುಂದೆ ಕೈ ಹಿಡಿದು ಬಾಳ ಸಂಗಾತಿಯಾಗುವ ಚೆಲುವಂತ ಗುಣವಂತ ಮಾಲತಿಯವರನ್ನು ಕಂಡದ್ದು, ಮೆಚ್ಚಿದ್ದು. ಹಾಗಾಗಿ  ಅವರೇ ಹೇಳುವಂತೆ, ಅವರ ಮೊದಲ ಕತೆಗೂ  ಪ್ರೇಮದ ಮೊದಲ ಸಖ್ಯಕ್ಕೂ ಒಂದೇ ವಯಸ್ಸು !

“ ಆ ಒಂದು ಮಧ್ಯಾಹ್ನ ಊಟದ ನಂತರ ನಿದ್ದೆ ಮುಗಿಸಿ ಚಾಹದ ಹಾದಿ ಕಾಯುತ್ತಿರಬೇಕಾದರೆ; ಅಷ್ಟು ದೂರದಲ್ಲಿ ಕಾಣುವ ಗದ್ದೆಯ ಕಡೆಗೆ ನೋಟ ಹರಿದಾಗ; ಸಂಜೆಯನಸು ಹಳದಿ ಬಣ್ಣದ ಬಿಸಿಲಲ್ಲಿ ಲವಲವಿಕೆ ಸೂಸುವ ಅಶ್ವತ್ಥದ ತಿಳಿಹಸಿರು ಎಲೆಗಳು ಅಲ್ಲಾಡುವ ಬಗೆ ಕಣ್ಣು ತುಂಬುತ್ತಿರುವಾಗ; 

ಆ ಮರದ ಟೊಂಗೆಯಲ್ಲೆಲ್ಲೊ ಅವಿತು ಕುಳಿತ ಒಂಟಿ ಕಾಗೆಯ ಕೂಗು ಕಿವಿಯ ಮೇಲೆ ಬಿದ್ದದ್ದೇ ತಡ, ಅಮ್ಮನ ನೆನಪು! ಹನೇ ಹಳ್ಳಿಯ ನೆನಪು. ಅಮ್ಮ ಸತ್ತು ಆಗಲೇ ಏಳು ವರ್ಷಗಳು! ಅಂದೇ ‘ ಬೊಮ್ಮಿಯ ಹುಲ್ಲು ಹೊರೆ ‘ ಚಿತ್ತಾಲರನ್ನು ಕತೆಗಾರರನ್ನಾಗಿ ಮಾಡಿ ಬಿಟ್ಟಿತು. ಅಲ್ಲಿಂದ ಮುಂದೆ ಸರಿಸುಮಾರು ಐದು ದಶಕಗಳಷ್ಟು ಸುಧೀರ್ಘ ಕಾಲಗಟ್ಟದ ಬರವಣಿಗೆಯ ಸಾರ ಕನ್ನಡ ಸಾಹಿತ್ಯಲೋಕದ ಇತಿಹಾಸದಲ್ಲಿ ದಾಖಲಾಗಿದೆ.

‘ನಾವು ಮನುಷ್ಯರಾಗಿ ಹುಟ್ಟಿದವರಲ್ಲ, ಮನುಷ್ಯರಾಗಲು ಹುಟ್ಟಿದ್ದು’ ಎನ್ನುವ ಕತೆಗಾರನ ಮನಸ್ಸು ರಸಋಸಿ ಮಹಾ ಕವಿ ಕುವೆಂಪು ನುಡಿ ಮುತ್ತಿನ ಮುಂದುವರಿಕೆಯೇ ಹೌದು.

“ಬರಹಗಾರ ಮೊದಲು ಪ್ರೀತಿಸಲು ಕಲಿಯಬೇಕು. ಮನುಷ್ಯ ಪ್ರೀತಿಯನ್ನು ಅರಸುತ್ತ ಹೋಗಬೇಕು. ಆದರೆ ನಾವು ಮನುಷ್ಯರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದೇವೆ“ ಕತೆಗಾರನ ಮನುಷ್ಯ ಪ್ರೀತಿಯ  ಹಂಬಲ ಈ ತರಹದ್ದು. ಸುಮಾರು ಐದು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ ಚಿತ್ತಾಲರು  ಸಾಹಿತ್ಯಕ ಚಳವಳಿಗಳಿಂದ ದೂರ ನಿಂತವರು. ಬಂಡಾಯ,ದಲಿತ ಸಾಹಿತ್ಯದ ಬದ್ಧತೆ, ನಿಲುವುಗಳು ಚಿತ್ತಾಲರಿಗೆ ಪತ್ಯವಾದಂತಿಲ್ಲ. “ ಸಾಮಾಜಿಕ ಪ್ರಜ್ಞೆ ಕೇವಲ ಸಾಹಿತಿಗೆ ಮಾತ್ರ ಯಾಕೆ? ಈ ಜವಾಬ್ದಾರಿ ಒಬ್ಬ ಬಡಗಿಗೆ, ಕುಸುರಿ ಕೆಲಸ ಮಾಡುವವರಿಗೆ ಯಾಕೆ ಬೇಡ? ಎಂದು ಪ್ರಶ್ನಿಸುವ ಚಿತ್ತಾಲರನ್ನು ಅನೇಕರು ದಂತಗೋಪುರದಲ್ಲಿ ಕುಳಿತು ಬರೆಯುವ ಸಾಹಿತಿಗಳ ಸಾಲಿಗೆ ಸೇರಿಸಿದ್ದೂ ಇದೆ. ಇವರ ಕೃತಿಗಳಲ್ಲಿನ ಯಾಂತ್ರಿಕ ಮಹಾನಗರ ಜೀವನದ ಧಾವಂತ, ಒಂಟಿತನ, ಕೃತಿಮತೆ ಇವೆಲ್ಲ ಬರೇ ನವ್ಯ ಪ್ರಜ್ಞೆಯಾಗಿರದೆ ಮುಂಬೈ ಜೀವನ ಶೋಧನೆಯ ದ್ರವ್ಯವಾಗಿರುತ್ತವೆ ಎಂದು ವಿಮರ್ಶಕರು ಗುರುತಿಸುತ್ತಾರೆ.

ಅವರ ಮೂರನೇ ಪ್ರಬಂಧ ಸಂಕಲನ ‘ಅಂತಃಕರಣ’ ಬಿಡುಗಡೆ ಸಂದರ್ಭ, ಆ ಕೃತಿಯ ಹುಟ್ಟಿಗೆ ಕಾರಣ ತಮಗೆ ‘ಅತಿಯಾಗಿ ಕಾಡಿದ ಏಕಾಕಿತನ. ಗೆಳೆಯರು, ಸಾಹಿತ್ಯದ ಕುರಿತು ವಿಚಾರಿಸುವವರು ದೂರಾದುದರಿಂದ ನನಗೆ ಒಂಟಿತನ ಕಾಡಿದ ದಿನಗಳವು’ ಎಂದು ಅಲವತ್ತುಕೊಂಡಿದ್ದರು. 

ಮುಂದೊಂದು ದಿನ ಅವರನ್ನು ಭೇಟಿಯಾದಾಗ ತುಸು ಗಾಬರಿಯಾಗಿತ್ತು. ಕಾರಣ ಅವರು ವಾರದ ಹಿಂದೆಯಷ್ಟೆ ರಸ್ತೆದಾಟುವಾಗ ಆಯತಪ್ಪಿ ಬಿದ್ದು ಎಡಗಡೆಯ ಕಣ್ಣು ಮತ್ತು ಹಣೆಯ ಮೇಲೆ ತುಸು ದೊಡ್ಡ ಪ್ರಮಾಣದಲ್ಲೇ ಪೆಟ್ಟಾಗಿ ಇಂಚುದ್ದ ಗಾಯವಾಗಿತ್ತು! ಕನ್ನಡಕ ಇದ್ದುದರಿಂದಲೇ ಕಣ್ಣಿಗೆ ಗಂಭೀರ ಅಪಾಯವಾಗಲಿಲ್ಲ ಎಂದು ತಣ್ಣಗೆ ನುಡಿದರು.  ಎಂದಿನಂತೆ ಆ ಸಂಜೆ ಕಡಲ ಕಿನಾರೆಗೆ ಸುತ್ತಾಡಲು ಹೋಗಿ ಬರುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮಳೆ ಬಂತಂತೆ. ಈಗೀಗ ಕೈಯಲ್ಲಿ ಊರುಗೋಲಾಗಿ ಉಪಯೋಗಿಸುತ್ತಿದ್ದ ಕೊಡೆಯನ್ನು ಎತ್ತಿ ರಸ್ತೆದಾಟಬೇಕು ಅನ್ನುವಷ್ಟರಲ್ಲಿ ವೇಗದಿಂದ ಕಾರೊಂದು ಹಾದು ಬರುತ್ತಿತ್ತಂತೆ. ಓಡಿ ರಸ್ತೆ ದಾಟ ಬೇಕುನ್ನುವಾಗ ರಸ್ತೆ ಬದಿಯಲ್ಲಿದ್ದ ಜವುಳು ಹೊಯಿಗೆ ರಾಶಿಯಿಂದ ಕಾಲೂರಿ ಆಯತಪ್ಪಿ ಬಿದ್ದು ಬಿಟ್ಟರಂತೆ !!   ನಗುಮೊಗದಿಂದ   ಬಾತಿದ ಗಾಯದ ಮೇಲೆ ಬೆರಳಾಡಿಸುತ್ತ, “ಈಗ ಅಷ್ಟು ನೋವಿಲ್ಲ. ಆದರೆ ಕತೆಯೊಂದನ್ನು ಕೊನೇ ಕಾಪಿ ಮಾಡಿ ಕಳುಹಿಸಲು ಬಾಕಿ ಇದೆ“ ಕೇವಲ ನಾಲ್ಕೇ ಸೆಸ್ಸನ್ಸ್ ನಲ್ಲಿ ಮುಗಿಸಿದ ಕತೆ ‘ದಿಗ್ಬಂಧನ ‘ಬರೆದಿಟ್ಟ ಡೈರಿಯನ್ನು ಕೊಡುತ್ತ, “ಕತೆ ಮುಗಿದ ಮೇಲಷ್ಟೇ ನನಗೆ ಹೊಳೆದದ್ದು, ಅರೇ ಕತೆ ಮುಗಿದು ಬಿಟ್ಟಿತ್ತಲ್ಲ!” ಎಂದು ಮಗುವಿನ ಮುಗ್ಧತೆಯಲ್ಲಿ ನುಡಿದರು. ಹೌದು, ತಾವು ಬರೆಯುತ್ತಿರುವುದನ್ನು, ಬರೆದದನ್ನು ಬಂದವರಿಗೆ ತೋರಿಸಲೇ ಬೇಕು. ಅವರ ಆ ದುಂಡು ಮಲ್ಲಿಗೆಯಂತಹ ಚಿತ್ತಿಲ್ಲದ ಪದಗಳೋ…..

ತಮ್ಮ ಬರವಣಿಗೆ ಬಗೆಗೆ, ತಾವೇ ಕುತೂಹಲದಿಂದ , ಆಶ್ಚರ್ಯದಿಂದ ಮತ್ತು ದಿಗ್ಬ್ರಮೆಯಿಂದ ನೋಡುವ, ಮನಸ್ಸು ಚಿತ್ತಾಲರದ್ದು. ಮುಂಬಯಿ ಶಹರಿನ ಏಕಾಕಿತನದ ಬದುಕಿನ ಅಸ್ಥಿರತೆ, ಇದ್ದಕ್ಕಿದ್ದಂತೆ ಕಳೆದುಹೋಗುವ ಭಯವನ್ನು ಮಿರುವ ಛಲ, ಆ ಮೂಲಕ ಬದುಕಿನಲ್ಲಿ ಮುಟ್ಟಬಹುದಾದ ಗುರಿ ಇತ್ಯಾದಿ ಇತ್ಯಾದಿ ತಲ್ಲಣ, ತಹತಹ ಚಡವಡಿಕೆಗಳೇ ಚಿತ್ತಾಲರ ಕತೆ ಕಾದಂಬರಿಯ ಪಾತ್ರಗಳ ಗುಣ ವಿಶೇಷಗಳು. ತನ್ನ ತಾನೇ ಪ್ರಶ್ನಿಸಿಕೊಳ್ಳುವಂತಾಹದ್ದು, ತನಗೆ ತಾನೇ ಉತ್ತರಿಸಿಕೊಳ್ಳುವಂತಾಹದ್ದು, ತನಗೆ ತಾನೇ ತಿದ್ದಿಕೊಳ್ಳುವಂತಾಹದ್ದು.. ಅವರು ತಮ್ಮ ಬರಹದ ಬಗ್ಗೆ ಟೀಕೆಯನ್ನು ಸಹಿಸದ ಅಸಹಿಷ್ಣರು! ಅಂತಹದನ್ನು ಮೆಲುಕು ಹಾಕುವವರಂತೆ ನಮ್ಮೆದುರು ವಿಷಾದದಿಂದ ತೆರೆದಿಡುವರು. “ಕೆಲವು ಸಂಘಟನೆಯವರು ಯಾಕೋ ನನ್ನನ್ನು ದೂರ ಇಟ್ಟಿರುವರು.  ವಿಚಿತ್ರ ಅಂದರೆ, ವಿದ್ಯಾರ್ಥಿಗಳನ್ನೂ ಸಹ ಮನೆಗೆ ಬರಲು ಅಡ್ಡಿ ಮಾಡುತ್ತಾರಂತೆ !  ಅಂತಹದ್ದೇನನ್ನು ನಾನು ಮಾಡಿದ್ದೇನೋ….” ತೀವೃ ವ್ಯಥಿತರಾಗುವರು. ಅತಿಸೂಕ್ಷ್ಮ ಸಂವೇದನಶೀಲರಾದ ಚಿತ್ತಾಲರ ಆ ಮನಸ್ಸೇ ಅವರ ಸಾಹಿತ್ಯ ಸೃಷ್ಟಿಯ ಜೀವದ್ರವ್ಯವಾಗಿರುತ್ತದೆ. ಚಿತ್ತಾಲರನ್ನು ಭೇಟಿಯಾಗಿ ಅವರ ಮಾತುಗಳನ್ನು ಕೇಳುವಾಗಲ್ಲೆಲ್ಲ ನಮಗೆ ಅನ್ನಿಸುವುದು; ಚಿತ್ತಾಲರು ಬೇರೆ ಅಲ್ಲ ಅವರು ಸೃಜಿಸಿದ ಸಾಹಿತ್ಯ ಬೇರೆಯಲ್ಲ. “66 ಕತೆಗಳನ್ನು ಬರದಿದ್ದೇನೆ, ಇನ್ನೂ 9 ಬರೆಯಬೇಕು. ಒಟ್ಟು 75 ಕತೆಗಳನ್ನು ಬರೆಯಬೇಕೆಂಬ ಆಸೆ. ಎಂಬ ಈ ದಿಗ್ಗಜ ಕತೆಗಾರನ ಕತೆ ಹೇಳಬೇಕೆಂಬ ಹುರುಪಿಗೆ ಎಂದಿಗೂ ಕುಂದಿಲ್ಲ, ಅದು ಕನ್ನಡ ಸಾಹಿತ್ಯದ ಭಾಗ್ಯ.

”ಸದಾ ಬರೆಯುತ್ತ ಇರಿ. ಆದರೆ ಭಾಷಾ ಪ್ರಯೋಗದ ಬಗ್ಗೆ ಎಚ್ಚರವಿರಲಿ” ಎಂದು ಎಳೆಯರನ್ನು ತುಸು ಎಚ್ಚರದ ಧಾಟಿಯಲ್ಲೇ ಹುರುದುಂಬಿಸುವ ಚಿತ್ತಾಲರಿಗೆ ಬಹು ಪ್ರಚಾರಿತ ಅದ್ಧೂರಿಯ ಕೃತಿ ಬಿಡುಗಡೆ ಕಾರ್ಯಕೃಮಗಳ ಕುರಿತು ಸದಾ ಅಸಮದಾನವಿದೆ.  ಭಾಷೆಯ ‘ದುಡಿಸುವಿಕೆ’ ಈ ಈ ಪದ ಪ್ರಯೋಗದ ಕುರಿತು ಅಸಹನೀಯರಾಗಿ, “ಭಾಷೆ ದುಡಿಸಲು ಬರುವಂತಹದ್ದಲ್ಲ. 

ಭಾಷೆ ತನ್ನಿಂದ ತಾನೇ ಮೈದಾಳಬೇಕು. ಆಗ ಮಾತ್ರ ಭಾಷೆಗೆ ಜೀವಂತಿಕೆ ಬರುತ್ತದೆ. ಸಾಹಿತ್ಯ ಮೈದಾಳುವುದು ಕೊನೆಗೂ ಭಾಷೆಯಲ್ಲಿ ತಾನೆ! ಭಾಷೆಯ ಕುರಿತಂತಹ ಒಂದು ನಂಬಿಕೆಯಲ್ಲಿ. ಅದು ಇನ್ನೊಬ್ಬನ ಮೇಲೆ ಪರಿಣಾಮ ಮಾಡಬಲ್ಲದು. ಅಂಥ ಮಾಂತ್ರಿಕ ಬಲ ಶಬ್ದಕ್ಕೆ ಇರುವಂತಹ ಶೃದ್ಧೆಯಲ್ಲಿ ಸಾಹಿತ್ಯದಂತಹ ಮಾನವೀಯ ಚಟುವಟಿಕೆಯ ಉಗಮವಿದೆ” ಎನ್ನುವ ಚಿತ್ತಾಲರ ಭಾವ ಪ್ರಪಂಚದಲ್ಲಿ ಮೈದಾಳಿದ ಪಾರೂ,ಉತ್ತಮಿ,ಅಬೋಲಿನಾ, ಬೊಮ್ಮಿ, ಎಂಕು, ನಾಗಪ್ಪ, ಪುರುಸೋತ್ತಮ, ಸಿದ್ಧಾರ್ಥ… ಇಂತಹ ಅನೇಕಾನೇಕ ಪಾತ್ರಗಳು  ಅವರ ಐದು ಕಾದಂಬರಿಗಳು, ಒಂಬತ್ತು ಕಥಾ ಸಂಗ್ರಹಗಳು ಮತ್ತು ಮೂರು ಪ್ರಬಂಧ ಸಂಗ್ರಹಗಳ ಮೂಲಕ ಸದಾ ಜೀವಂತವಾಗಿರುವವು.

ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿಯೂ ಸೇರಿ, ಸಿಗಬೇಕಾದ ಗೌರವ ಪುರಸ್ಕಾರಗಳು ತಡವಾಗಿಯಾದರೂ ಸಿಕ್ಕಿವೆ; ಎಲ್ಲಕ್ಕೂ ಮಿಗಿಲಾಗಿ ಕನ್ನಡ ಓದುಗ ಮಂದಿ ಚಿತ್ತಾಲರನ್ನು ಅತ್ಯಂತ ಆತ್ಮೀಯತೆಯಿಂದ, ಗೌರವಾದರಗಳಿಂದ ಕಾಣುತ್ತಾ ಬಂದಿದ್ದಾರೆ. ನವ್ಯ ಕತೆಗಾರರ ಪರಂಪರೆಯಲ್ಲಿ ಚಿತ್ತಾಲರದ್ದು ಬಹುದೊಡ್ಡ ಹೆಸರಾಗಿ ಕನ್ನಡ ಸಾಹಿತ್ಯ ಚರಿತ್ರೆ ದಾಖಲಿಸುತ್ತದೆ.

“ದೋಷವಿಲ್ಲದೆ, ಸ್ವಚ್ಛ ಸುಂದರವಾಗಿ ಬರೆಯುವ, ಮಾತನಾಡುವ ತಾಳ್ಮೆ, ಶಿಸ್ತು, ನಾವು ಮನಸ್ಸಿನ ಸೃಜನಶೀಲ ಸ್ಥಿತಿಗೆ ಆ ಮೂಲಕ ಬದುಕಿಗೆ ತೋರುವ ಗೌರವವೂ ಆಗಿದೆ. ಒಳ್ಳೆಯ ಮನಸ್ಸು, ಒಳ್ಳೆಯ ಭಾಷೆಯ ಸೃಷ್ಟಿಯಾಗಿದೆ. ಒಳ್ಳೆಯ ಭಾಷೆ ಒಳ್ಳೆಯ ಸಾಹಿತ್ಯದ ಕೊಡುಗೆಯಾಗಿದೆ” ಎಂದು ನುಡಿಯವ, ನಂಬಿದ ಸೃಜನಶೀಲ ಮನಸ್ಸಿನ ಶೃೇಷ್ಠ ಉದಾಹರಣೆ ಈ ನಮ್ಮ ಯಶವಂತ ಚಿತ್ತಾಲರು. 

ಈ ಮಧ್ಯ ಚಾಹ, ಚಿವುಡಾ, ಉಪ್ಪಿಟ್ಟು ಮತ್ತು ಸಿಹಿ ತಿಂಡಿಯನ್ನು ಅವರ ಪತ್ನಿ ಮಾಲತಿಯವರು ಮುಗುಳು ನಗುತ್ತ ತಂದಾಗ, “ಇವೆಲ್ಲ ಮನೆಯಲ್ಲೇ ಮಾಡಿದವುಗಳು. ಉಪ್ಪಿಟ್ಟಿನೊಂದಿಗೆ ಚಿವುಡಾ ಹಾಕಿ ತಿನ್ನಿ ರುಚಿಯಾಗುತ್ತದೆ.” ಎಂದು  ಪತ್ನಿಯತ್ತ ಅಕ್ಕರೆಯ ನೋಟ ಬೀರುತ್ತ  ನುಡಿದು ಚಿತ್ತಾಲರು ಮತ್ತೆ ನಮ್ಮನ್ನು ಕತಾ ಲೋಕಕ್ಕೆ ಕರೆದೊಯ್ದರು. ಹೊಸ ಕತೆ ಹುಟ್ಟಿದ ಪರಿಗೆ, ಅದನ್ನು ಬರೆದು ಮುಗಿಸಿದ ಖುಷಿಗೆ ತಾವೇ ಆಶ್ಚರ್ಯ ಪಟ್ಟುಕೊಂಡ ಕುರಿತು… ಹೀಗೆ ಆ ಮೆಲುದನಿಯ ಮಾತುಗಳನ್ನು ಕೇಳುತ್ತ ತಾಸೆರಡು ಕಳೆದದ್ದು ಅರಿವಾಗಲೇ ಇಲ್ಲ. ನಮ್ಮ ತಟ್ಟೆಯಲ್ಲಿರುವ ತಿಂಡಿ ನೋಡಿ, “ಎಲ್ಲಾ ತಿನ್ನಬೇಕು, ನಿದಾನ ಆದರೂ ಸರಿ” ಅಂತ ಕಕ್ಕುಲಾತಿ ತೋರುವರು.

ಮೊದಲ ಕತೆ ‘ಬೋಮ್ಮಿಯ ಹುಲ್ಲಿನ ಹೊರೆ’ಯಿಂದ ಆರಂಭವಾದ ಸಂವೇದನಾಶೀಲ ಕಿರುದಾರಿ, ಇನ್ನಷ್ಟೆ ಪ್ರಕಟಗೊಳ್ಳಲಿರುವ ‘ದಿಗ್ಬಂಧನ’ ಕತೆ ತನಕದ  ಪಯಣ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸೃಜನಶೀಲ ಹೆದ್ದಾರಿಯಾಗಿ ಮೂಡಿ ಬಂದ ಹಿಂದೆ ಒಳಿತನ್ನು ಕಾಣುವ, ಒಳಿತನ್ನು ಹಾರೈಸುವ ಪ್ರೀತಿ ತುಂಬಿದ ಹೃದಯವಿದೆ, ಸಾಚಾ ಮನುಷ್ಯನ ಅಂತಃ ಕರಣವಿದೆ.

ಮಧ್ಯ ಮುಂಬೈನ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ಕಡಲ ಕಿನಾರೆಯ ಎದುರು ನಿಂತಿರುವ ಅದೇ ಹೆಸರಿನ ಕಟ್ಟಡದ ಆ ವಿಶಾಲ ಮನೆಯಲ್ಲಿ, ಹೊರಗೆ ದಟ್ಟ ಕತ್ತಲು ಕವಿದಿರುವಂತಹ ಮುಂಜಾನೆ ಎದ್ದು,ಆ

ಪುಟ್ಟ ದೀಪದ ಬೆಳಕಿನೊಂದಿಗೆ, ಸೋಫಾದ ಆ ಮೂಲೆಯಲಿ ಕುಳಿತು,ಕೈಯಲ್ಲಿ  ಹಿಡಿದ  ಲೇಖನಿಯ ಕಣ್ಣಲ್ಲಿ ತುಳುಕುವ  ಸೃಜನಶೀಲ ಪ್ರತಿಮೆಗಳು ಅಕ್ಷರಗಳಲಿ ಮೈದಾಳುವ ಬಗೆಯನ್ನು ಧ್ಯಾನಿಸುವ ಆ ಚಿತ್ತ ಸೋಜಿಗವಿದೆಯಲ್ಲಾ……!!

ಭಾಗ – 2

2014, ಮಾರ್ಚ್  22 ಶನಿವಾರ ಸಂಜೆ ತಮ್ಮ 86 ನೇ ವಯಸ್ಸಿನಲ್ಲಿ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ಕೇಳಿ ತಣ್ಣನೆ ವಿಷಣ್ಣತೆ ಕಾಡಿತು. ಮರುದಿನ ಆದಿತ್ಯವಾರ ಬೆಳಿಗ್ಗೆ 9 ಘಂಟೆಗೆ ಅಂತಿಮ ಸಂಸ್ಕಾರವೆಂದು ತಿಳಿಯಿತು. ನಾನೂ ಸಾ. ದಯಾ ಬೆಳಿಗ್ಗೆ 8.30ರ ಹಾಗೆ ಬ್ಯಾಂಡ್ ಸ್ಟ್ಯಾಂಡ್ ತಲುಪಿದೆವು.  ಆ ಅದೇ ಸೋಫಾದ ಎದುರು ಗಡೆ ಉಸಿರು ನಿಂತ ಸೃಜನಶೀಲ ಪ್ರತಿಮೆಯನ್ನು ಮಲಗಿಸಿದ್ದರು.ಸುತ್ತ ಎಲ್ಲವೂ ಮೌನ, ಕಡಲೂ ಸಹ. ಮನೆಯಲ್ಲಿ ಅವರ ಪರಿವಾರದ ಮತ್ತು ಒಂದಷ್ಟುಆಪ್ತ ಮಂದಿ ಸೇರಿದ್ದರಷ್ಟೆ . ಅರೇ ! ನಿನ್ನೆ ರಾತ್ರಿಯೇ ಸುದ್ದಿ ತಿಳಿದಿದ್ದರೂ ತಮ್ಮ ಭಾಷಣ, ಬರಹಗಳಲ್ಲಿ, ಚಿತ್ತಾಲರೊಂದಿಗಿನ ಫೋಟೋಗಳಲ್ಲಿ ಮಿಂಚುವ  ಮಹಾನುಭಾವರೆಲ್ಲ ಎಲ್ಲಿ !!!    

ಒಂದಿನಿತು ಸಮಯ ವ್ಯರ್ಥ ಮಾಡದೆ  ಮನೆಯಿಂದ  9 ಘಂಟೆಗೆ ಸುಮಾರಿಗೆ ಶಿವಾಜಿ ಪಾರ್ಕಿನ ಸ್ಮಶಾನದತ್ತ ಶವಯಾನ ಹೊರಟಿತು. ಅಲ್ಲಿ ಶವಾಗಾರದ ವಿದ್ಯುತ್ ಚಿತಾಗಾರ ಪ್ರವೇಶಿಸುವ ಮುನ್ನ ಒಂದೈದು ನಿಮಿಷ ನೇರ ಸ್ಮಶಾನಕ್ಕೆ   ಬಂದವರಿಗಾಗಿ ದರ್ಶನಕ್ಕೆ ಅನುವುಮಾಡಿ ಕೊಡಲಾಯಿತು. ನಿಜ,  ಕೊನೆಯ ಬಾರಿ ಭೌತಿಕ ಶರೀರವನ್ನು ಕಣ್ತುಂಬಿಕೊಳ್ಳಲಾಗಲೇ ಇಲ್ಲ !  ಕಣ್ಣು ಕೊಳವಾಗಿತ್ತು. 

………

ಮರುದಿನ ಬೆಳಿಗ್ಗೆ ಕನ್ನಡ ಪತ್ರಿಕೆಯ ಮುಖಪುಟದಲ್ಲಿ ಸುದ್ದಿಯ ಜೊತೆಗೆ ಸ್ಮಶಾನದಲ್ಲಿ ಗಾಢ ನಿದ್ದೆಯಲ್ಲಿದ್ದಂತಹ ಚಿತ್ತಾಲರ ತಲೆಯ ಪಕ್ಕದಲ್ಲಿ ನಿಂತು ನಮಿಸುವ ನನ್ನ  ಫೋಟೋ ನೋಡಿ ಆವಕ್ಕಾದೆ ! ಪಕ್ಕನೆ ನೆನಪಾದದ್ದು, ಬಹಳ ವರ್ಷಗಳ ಹಿಂದೊಂದು ಕಾರ್ಯಕೃಮದ ಅಧ್ಯಕ್ಷತೆ ವಹಿಸಿದ್ದ ಚಿತ್ತಾಲರ ಕೈಯಿಂದ ನಾನು ಪುಷ್ಪ ಗೌರವ ಸ್ವೀಕರಿಸುವಾಗ ಕ್ಯಾಮರದವನು ಸರಿಯಾಗಿ ಕ್ಲಿಕ್ಕಿಸಲಾಗದೆ ಪುನ: ಕರೆದಾಗ ನಾನು ನಿರ್ಲಕ್ಷಿಸಿ ಮುಂದೆ ಸರಿದೆ. ಅದಕ್ಕೆ ಚಿತ್ತಾಲರು, “ಏನು ನನ್ನ ಜೊತೆ ಫೊಟೋ ಇಷ್ಟ ಇಲ್ಲವಾ”? ಅಂತ ನಗುತ್ತ ನುಡಿದಾಗ, ತಟ್ಟನೆ ಹಿಂದೆ ಬಂದು,  “ಸರ್ ಹಾಗಲ್ಲ, ನಿಮಗೆ ಮತ್ತೆ ಮತ್ತೆ ತೊಂದರೆಯಲ್ಲವಾ“ ಅಂತಂದು ಫೊಟೋ ತೆಗೆಯಿಸಿಕೊಂಡಿದ್ದೆ. 

ಒಮ್ಮೆನಾನು ಎಂದಿನ ಸಲಿಗೆಯಿಂದ “ಸರ್, ಶಾಹರುಕ್ ಖಾನ್ ತಗೊಂಡ ‘ಮನ್ನತ್‘ ಬಂಗಲೆ ಪಕ್ಕದಲ್ಲೇ ನಿಮ್ಮ ಮನೆ “ ಅಂದಾಗ, “ನಾನಿಲ್ಲಿ ಮನೆ ತಗೊಂಡು ನಲವತ್ತು ವರ್ಷ ಮೇಲಾಯಿತು. ನನ್ನಮನೆ ಶಾಹರುಕ್ ನ ಬಂಗಲೆ ಪಕ್ಕದಲ್ಲಿ ಅಲ್ಲ, ಅವನು ಬಂಗಲೆಯನ್ನು ನನ್ನ ಮನೆ ಪಕ್ಕದಲ್ಲಿ ತಕ್ಕೊಂಡದ್ದು“ ಪಟ್ಟಂತ ಉತ್ತರ ಕೊಟ್ಟಾಗ, ‘ಅದು ಹೌದು ಸರ್ ‘ ಅಂತ ಅವರ ಜೊತೆ ನಕ್ಕಿದ್ದೇ ನಕ್ಕಿದ್ದು.  

ನಮ್ಮ ಪಯಣವಿನ್ನು ಜೀವನೋತ್ಸಾಹದ ಚಿಲುಮೆಯಂತಿದ್ದ ಗೌರವಾನ್ವಿತ ಹಿರಿ ಜೀವದ ಜೊತೆಗಿನ ಈ ಸುಂದರ ನೆನಪುಗಳ ಜೊತೆಯಷ್ಟೆ…

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: