ಚಿಕ್ ಚಿಕ್ ಸಂಗತಿ: ವಿಜಯಮ್ಮ ಮತ್ತು ಅಮೀರ್ ಖಾನ್

ನಾವೆಲ್ಲಾ ‘ಅಮ್ಮ’ ಎಂದೇ ಪ್ರೀತಿಯಿಂದ ಕರೆಯುವ ಡಾ ವಿಜಯಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗರಿ.

ಅವರ ಆತ್ಮಕಥೆ ‘ಕುದಿ ಎಸರು’ ಈ ಹೆಮ್ಮೆಗೆ ಪಾತ್ರವಾಗಿದೆ

ಈ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಬರೆದ ಒಂದು ಪುಟ್ಟ ಬರಹವನ್ನು ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ

-ಜಿ ಎನ್ ಮೋಹನ್

 

ಈ ವಾರ ಎರಡು ಘಟನೆಗಳಿಗೆ ನಾನು ಸಾಕ್ಷಿಯಾದೆ

ಒಂದು ವೇದಿಕೆಯ ಮೇಲೆ, ಇನ್ನೊಂದು ತೆರೆಯ ಮೇಲೆ

ಒಂದು ಅಪ್ಪ, ಇನ್ನೊಂದು ಅಮ್ಮ

ಒಬ್ಬ ಪುರುಷ, ಇನ್ನೊಬ್ಬ ಮಹಿಳೆ

ಒಬ್ಬ ಅಮೀರ್ ಖಾನ್, ಇನ್ನೊಬ್ಬರು ವಿಜಯಮ್ಮ

**

‘ಅಮ್ಮ’ ಎಂದೇ ನಮ್ಮೆಲ್ಲರಿಂದಲೂ ಕರೆಸಿಕೊಳ್ಳುವ ಡಾ ವಿಜಯಾ ಅವರು ಬರೆದ
ಲೇಖನಗಳ ಸಂಕಲನ ‘ಚಿತ್ತ ಕೆತ್ತಿದ ಚಿತ್ರ’ ಬಿಡುಗಡೆಯಿತ್ತು.
ಇಡೀ ಕಾರ್ಯಕ್ರಮದ ಉದ್ದಕ್ಕೂ ಅಮ್ಮ ತಲೆ ತಗ್ಗಿಸಿಯೇ ಕುಳಿತಿದ್ದರು.
ಯಾವಾಗಲೂ ತಲೆ ಎತ್ತಿ ನಡೆಯುವ, ಸುತ್ತ ಇದ್ದವರ ಜೊತೆ ಗದ್ದಲ ಮಾಡುತ್ತಾ ಕೂರುವ,
ಒಂದು ಕ್ಷಣವೂ ನಗು ವೇಸ್ಟ್ ಆಗಬಾರದು ಎನ್ನುವಂತೆ ನೋಡಿಕೊಳ್ಳುವ ಅಮ್ಮ ಅವತ್ತು
ತಲೆ ತಗ್ಗಿಸಿ ಕುಳಿತೇ ಇದ್ದರು ಮತ್ತು ಮೌನಕ್ಕೆ ಶರಣಾಗಿ ಹೋಗಿದ್ದರು

ಅವರು ಮಾತನಾಡುವ ಸಮಯ ಬಂದಾಗ –
ನಾನು ಈ ಮಕ್ಕಳಿಗೆ ನಿಮಗೆ ಏನು ಬೇಕು ಎಂದು ಕೇಳಲಿಲ್ಲ,
ನಿಮಗೆ ಏನು ಇಷ್ಟ ಎಂದು ಕೇಳಲಿಲ್ಲ.
ಬದಲಿಗೆ ನನಗೆ ಆಗಿದ್ದು ಮಾಡುತ್ತಾ ಹೋದೆ.
ಅವರು ನನಗೆ ಹೊಂದಿಕೊಳ್ಳುತ್ತಾ ಹೋದರು.
ನನ್ನ ಸಮಯ, ಅನಿವಾರ್ಯತೆ ನನ್ನನ್ನು ಹಾಗೆ ಕೇಳದಂತೆ ಮಾಡಿಬಿಟ್ಟಿತ್ತು.
ಅವರಿಗೆ ನಾನು ಋಣಿಯಾಗಿರಬೇಕು

**

ಕೈಯಲ್ಲಿ ಕತ್ತರಿ ಹಿಡಿದಿದ್ದ ಆತ ಎದುರು ನಿಂತಿದ್ದ.
ಮುಂದೆ ಕುಳಿತಿದ್ದ ಹುಡುಗಿ ಕಣ್ಣೀರಾಗಿ ಹೋಗಿದ್ದಳು
ಪಪ್ಪಾ.. ಬೇಡ ಪಪ್ಪಾ.. ಎನ್ನುತ್ತಾ ರೋಧಿಸುತ್ತಿದ್ದಳು
ಎದುರಿಗೆ ನಿಂತಿದ್ದ ತಂಗಿಯ ಮುಖದಲ್ಲೂ ಗಾಬರಿ ಚಿಮ್ಮುತ್ತಿತ್ತು
ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಆಕೆಯ ಅಮ್ಮ ನೋವು ತಿನ್ನುತ್ತಾ ಇದ್ದರು.

ಅವರ ಎದುರು ನಿಂತ ಆ ಅಪ್ಪ ಅಮೀರ್ ಖಾನ್ ಅಲಿಯಾಸ್ ಮಹಾವೀರ್ ಸಿಂಗ್ ಪೋಗಟ್
ಮುಖದಲ್ಲಿ ಮಾತ್ರ ಒಂದು ಗೆರೆಯೂ ಹೆಚ್ಚು ಕಮ್ಮ್ಮಿಯಾಗಲಿಲ್ಲ
ಆತ ನಿಶ್ಚಯಿಸಿ ಆಗಿತ್ತು
ಎದುರಿಗಿದ್ದ ಕ್ಷೌರಿಕ ತನ್ನ ಬೆಳೆದ ಮಗಳ ತಲೆಗೂದಲು ಕತ್ತರಿಸಲೇಬೇಕು.
ಕತ್ತರಿಸುತ್ತಾನೆ ಅಷ್ಟೇ.. ಎನ್ನುವುದೂ ಅವನಿಗೆ ಗೊತ್ತಿತ್ತು.
ಇಲ್ಲದಿದ್ದರೆ ಆತನಿಗೆ ಅದನ್ನು ಕತ್ತರಿಸಿ ಹಾಕುವುದೂ ಗೊತ್ತಿತ್ತು.

**

ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನು ಹಡೆದ,
ಇನ್ನೂ ಕನಸುಗಳ ವಸಂತ ಕಾಲಿಡುವ ಮುಂಚೆಯೇ ಮನೆಯಿಂದ ಹೊರಬೀಳಬೇಕಾಗಿ ಬಂದ
ವಿಜಯಮ್ಮ ಗುಬ್ಬಿಯಾಗಿ ಹೋಗಿದ್ದರು
ನಾನು ‘ಏನು ಬೇಕು ನಿಮಗೆ’ ಎಂದು ಕೇಳದೇ ಬೆಳಸಿದ ಮಕ್ಕಳು ಇಂದು
ಹೀಗೆಲ್ಲಾ ನನಗಾಗಿ ನಿಂತಿದ್ದಾರಲ್ಲ ಎಂದು

ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಗಂಟಲಲ್ಲಿತ್ತೇನೋ
ಎಂದೂ ವಿಚಲಿತವಾಗದ ಅಮ್ಮನ ಕಂಠವೂ ಅಂದು ಒಂದಿಷ್ಟು ಅಲುಗಿತ್ತು.
ಕಣ್ಣಂಚಿಗೆ ಬಂದ ನೀರು ಹೊರಗೆ ಜಾರಲಿಲ್ಲ ಅಷ್ಟೇ

ತನ್ನ ಸ್ಥಿತಿಯಿಂದಾಗಿ ಮಕ್ಕಳ ಕನಸನ್ನು ಕೊಂದೆನಲ್ಲಾ ಎಂದು ಅವರಿಗೆ ಅನಿಸಿತ್ತು
ತನ್ನ ಸ್ಥಿತಿಯಿಂದಾಗಿ ಮಕ್ಕಳ ಬೇಕು ಬೇಡ ನೋಡಲಾಗಲಿಲ್ಲವಲ್ಲ ಎಂದು ಮನಸ್ಸು ನೊಂದಿತ್ತು

**

ಆ ಕತ್ತರಿ ಹಿಡಿದು ಕೂದಲನ್ನು ಕತ್ತರಿಸುತ್ತಾ ಇದ್ದವನ ಎದುರು ನಿಂತಿದ್ದ
ಆತನೂ ವಿಚಲಿತನಾಗಿರಲಿಲ್ಲ
ಏಕೆಂದರೆ ಆತನಿಗೆ ಕನಸುಗಳಿತ್ತು
ಆತನಿಗೆ ಅದನ್ನು ನನಸು ಮಾಡಿಕೊಳ್ಳಲಾಗಿರಲಿಲ್ಲ
ಆತ ಒಂದೇ ಮಾತಿನಲ್ಲಿ ಹೇಳಿಬಿಟ್ಟಿದ್ದ
ನನ್ನ ಕನಸನ್ನು ಇವರ ಮೂಲಕ ನನಸು ಮಾಡಿಕೊಳ್ಳುತ್ತೇನೆ

ಹಾಗಾಗಿಯೇ ಇವನು ಮಕ್ಕಳ ಕನಸೇನು ಎಂದು ಕೇಳಲು ಸಿದ್ಧನಿರಲಿಲ್ಲ
ಮಕ್ಕಳ ಬೇಕು ಬೇಡಗಳನ್ನು ತಿಳಿಯಲು ಬಿಲ್ ಕುಲ್ ಒಪ್ಪಿರಲಿಲ್ಲ
ಮಕ್ಕಳೇ ತಮ್ಮ ಇಷ್ಟಗಳನ್ನು ಹೇಳುತ್ತಿದ್ದರೂ ಕಿವಿಗೊಟ್ಟಿರಲಿಲ್ಲ
ಬೇಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ಇದು ಬೇಡಪ್ಪಾ ಎಂದು ಗೋಗರೆಯುವಾಗಲೂ ಆತ ಅದಕ್ಕೆ ಸೊಪ್ಪು ಹಾಕಿರಲಿಲ್ಲ

**

ವ್ಯತ್ಯಾಸ ಇಷ್ಟೇ ಇತ್ತು
ಮಕ್ಕಳ ಕನಸು ಏನೆಂದು ತಿಳಿಯಲಾಗಲಿಲ್ಲವಲ್ಲ ಎಂದು ಅವಲತ್ತುಕೊಳ್ಳುತ್ತಿದ್ದ ಅಮ್ಮನನ್ನು
ಸಮಾಜ ಇನ್ನಿಲ್ಲದಂತೆ ಕಾಡಿಸಿತ್ತು, ನೋಯಿಸಿತ್ತು,
ಕೀಳರಿಮೆಯಿಂದ ಒದ್ದಾಡುವಂತೆ ಮಾಡಿತ್ತು

ಆದರೆ ಅಲ್ಲಿ ನಿಮ್ಮ ಕನಸುಗಳು ನನಗೆ ಬೇಕಿಲ್ಲ ನನ್ನ ಗುರಿ ಅಷ್ಟೇ ನನಗೆ
ಎಂದವನ ಜೊತೆ ಇಡೀ ದೇಶ ನಿಂತುಬಿಟ್ಟಿತ್ತು
ಶಹಬಾಷ್ ಗಿರಿ ನೀಡಿತ್ತು
ಮೂರ್ ದಿನಕ್ಕೆ ನೂರು ಕೋಟಿಗೂ ಹೆಚ್ಚು ಹಣ ಬಾಚಿಕೊಳ್ಳುವಂತೆ ಮಾಡಿತ್ತು

**

ಒಂದೆಡೆ ಬಿಕ್ಕುತ್ತಿದ್ದ ಅಮ್ಮ
ಇನ್ನೊಂದೆಡೆ ಸಂಭ್ರಮಿಸಿ ಮೀಸೆ ತಿರುವುತ್ತಿದ್ದ ಅಪ್ಪ

**

ಒಂದೆಡೆ ಚಿತ್ತ, ಚಿತ್ರ ಬರೆಯಲು ಯತ್ನಿಸುತ್ತಿತ್ತು
ಇನ್ನೊಂದೆಡೆ ದಂಗಲ್ ಬೆಳ್ಳಿ ತೆರೆಯೇರಿ ದೇಶ ಉನ್ಮಾದ ಚಿಮ್ಮಿಸುತ್ತಿತ್ತು

**

ಆ ಮಕ್ಕಳಿಗೆ ಕನಸಿತ್ತು. ಎಲ್ಲರಂತೆ ಎಲ್ಲರಷ್ಟೇ ಸಮಯ ಮಲಗಬೇಕು,
ಎಲ್ಲರಂತೆ ಕನಸು ಬೀಳಬೇಕು
ಎಲ್ಲರಿಗೂ ಬೆಳಕಾದಾಗಲೇ ಬೆಳಕಾಗಬೇಕು ಎಂದು
ಎಲ್ಲರಂತೆ ಪಾನಿಪೂರಿ ತಿನ್ನಬೇಕು
ಎಲ್ಲರಂತೆ ತಲೆಗೂದಲಿರಬೇಕು ಎಲ್ಲರಂತೆ ಅದಕ್ಕೆ ಟೇಪು, ಒಂದಿಷ್ಟು ಹೂವು
ತಲೆಗಿಷ್ಟು ಎಣ್ಣೆ

ಎಲ್ಲರಂತೆ ತುಟಿಗೆ ಲಿಪ್ ಸ್ಟಿಕ್
ಎಲ್ಲರಂತೆ ಒಂದಿಷ್ಟು ಐಸ್ ಕ್ರೀಮ್
ಎಲ್ಲರಂತೆ ಒಂದಿಷ್ಟು ಡಾನ್ಸ್

ಚಿನ್ನ ಚಿನ್ನ ಆಸೈ

ಅಪ್ಪನ ಮುಂದೆ ಅವರು ಅದನ್ನು ಹೇಳಿಕೊಂಡಿದ್ದರೂ ಕೂಡಾ

**

ಆ ಮಕ್ಕಳಿಗೆ ಕನಸಿತ್ತೋ ಇಲ್ಲವೋ ಗೊತ್ತೇ ಆಗಿರಲಿಲ್ಲ
ಅವರು ಹೇಳಲೂ ಇಲ್ಲ
ಬದುಕು ಕಟ್ಟಲು ಹೊರಟಿದ್ದ ಅಮ್ಮನ ಹಿಂದೆ ನಡೆದು ಬಂದುಬಿಟ್ಟವು ಬೆನ್ನಿಗಿದ್ದ ನೆರಳಿನಂತೆ

**

ಒಬ್ಬ ಅಪ್ಪ
ಒಬ್ಬ ಅಮ್ಮ

**

ಒಬ್ಬ ಪುರುಷ
ಒಬ್ಬ ಮಹಿಳೆ

**
ಒಂದು ಮಣ್ಣಿನ ಅಖಾಡ
ಇನ್ನೊಂದು ಬದುಕಿನ ಅಖಾಡ

‍ಲೇಖಕರು admin

December 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

23 ಪ್ರತಿಕ್ರಿಯೆಗಳು

  1. Shylesh

    ಒಂದು ಮಣ್ಣಿನ ಅಖಾಡ
    ಇನ್ನೊಂದು ಬದುಕಿನ ಅಖಾಡ…

    ಪ್ರತಿಕ್ರಿಯೆ
  2. Anonymous

    ಪ್ರೀತಿಯ ಮೋಹನ್,
    ನಿಮ್ಮ ಈ ಬರವಣಿಗೆಗಳ ಆರ್ದ್ರತೆ ಹೃದಯಸ್ಪರ್ಶಿ.
    ಇದರ ರೀತಿಗೆ ಪ್ರೀತಿಯೊಂದೇ ನನ್ನ ಸ್ಪಂದನ.
    ಹೀಗೇ ಬರೆಯುತ್ತಾ ಇರಿ .
    -ಜಯರಾಮ ಅಡಿಗ

    ಪ್ರತಿಕ್ರಿಯೆ
    • Avadhi

      thanks sir, ನನ್ನ ಬರವಣಿಗೆಗಳ ಹಿಂದೆ ನೀವು ಕೊಟ್ಟ ಉಸಿರು ಇದೆ

      ಪ್ರತಿಕ್ರಿಯೆ
  3. K NALLATAMBI

    ಸರ್ ಬಹಳ ಸೊಗಸಾಗಿದೆ. ಬರವಣಿಗೆಯ ಶೈಲಿ ವಿಷೇಶವಾಗಿದೆ. …..ಸಿನಿಮಾ ನೋಡಿಲ್ಲ ನೋಡುವೆ.. ವಿಜಯಮ್ಮ ಅವರನ್ನು ಬಹಳ ವರ್ಷಗಳ ಹಿಂದೆ ನೋಡಿರುವೆ. ಪರಿಚಯವಿಲ್ಲ. ………

    ಪ್ರತಿಕ್ರಿಯೆ
  4. Anonymous

    ಖಂಡಿತ ಧಂಗಲ್ ಹಲವು ಪ್ರಶ್ನೆಗಳನ್ನು ಕೇಳುವ ಸಾಧ್ಯ ತೆಗಳಿದ್ದರು ಅದರ ಕ್ಲೈಮಾಕ್ಸ ಎಲ್ಲ ರನ್ನು ಸಂಭ್ರಮಿಸುವ ಂಂತೆ ಮಾಡುತ್ತದೆ.

    ಪ್ರತಿಕ್ರಿಯೆ
  5. mm shaik

    namaste sir..samajavannu edurisuva aa manastitige hatsoffff…lekhana preraNadaayaka..

    ಪ್ರತಿಕ್ರಿಯೆ
  6. ಮಮತ

    ಅದೆಷ್ಟೋಂದು ಆರ್ದ್ರವಾಗಿ ಬರೆದಿದ್ದೀರಿ .! ಎರಡೂ ಸಂದರ್ಭಗಳನ್ನು ಎಷ್ಟು ಆಪ್ತವಾಗಿ ಹೋಲಿಸಿ ಚಿತ್ರಿಸಿದ್ದೀರಿ . ಬರಹದ ತೇವದ ತೀಕ್ಷ್ಣತೆಗೆ ಕಣ್ಣೀರು ಬಂದವು . ಸಿನೆಮಾ ನೋಡಿಲ್ಲ . ಬದುಕು ಅದಕಿಂತ ಕಡಿಮೆಯೇನಿಲ್ಲ . “ಅಮ್ಮ”ನ ಆ ಎಲ್ಲಾ ಸಂಕಟಗಳನ್ನು ಆಳದಿಂದ ಊಹಿಸಬಲ್ಲೆ . ಈಗವರು ಇಂದು ತಲುಪಿದ ಸಾಧನಾ ಶಿಖರ, ನಾಡಿಗೆ ಅಮ್ಮನಾದದ್ದು ಸುಲಭವಲ್ಲ . ಅಮ್ಮನ ಮಕ್ಕಳಾಗಿ ಜೊತೆಯಾಗಿ ನಡೆದುಬಂದದ್ದೂ ಸರಳವಲ್ಲ . ಅಮ್ಮನಿಗೆ ಪ್ರಣಾಮ . ನಿಮಗೆ ಶರಣು .

    ಪ್ರತಿಕ್ರಿಯೆ
  7. ಸಂಧ್ಯಾರಾಣಿ

    ಒಂದು ಸಿನಿಮಾವನ್ನು ನಾನು ಕೇವಲ ಕಲಾತ್ಮಕತೆಯ ದೃಷ್ಟಿಯಿಂದ ನೋಡಲಾರೆ. ಅದು ಹೇಗೆ ಹೇಳುತ್ತದೆ ಎನ್ನುವಷ್ಟೇ ಮುಖ್ಯವಾಗಿ ಅದು ಏನು ಹೇಳುತ್ತದೆ ಎನ್ನುವುದೂ ನನಗೆ ಮುಖ್ಯವಾಗುತ್ತದೆ. ದಂಗಲ್ ನ ಅಪ್ಪ ಮಾಡಿದ್ದು ಸರಿ ಎಂದು ಸಮರ್ಥಿಸುವಾಗ ನಾವು ತಮ್ಮ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಮಕ್ಕಳ ಬೆನ್ನು ಬೀಳುವ ಅನೇಕ ತಂದೆ ತಾಯಿಯರ ಜೊತೆಯೂ ಇರುತ್ತೇವೆ. ಮುಂದೆಂದೋ ಐಐಟಿ ಪರೀಕ್ಷೆ ಬರೆಯಲಿ ಎಂದು ಶಾಲಾ ದಿನಗಳ ರಜೆಗಳಲ್ಲಿ ಹಗಲೆಲ್ಲಾ ಕೋಚಿಂಗ್ ಕಳಿಸುವ ಪೋಷಕರು, ಧರ್ಮದ ಉದ್ಧಾರ ಮಾಡುತ್ತೇವೆ ಎಂದು ಮಕ್ಕಳನ್ನು ಮಠಾಧಿಪತಿ ಆಗಲು ಬಿಟ್ಟುಕೊಡುವವರು, ಒಳ್ಳೆ ಕಡೆ ಸಂಬಂಧ ಸಿಕ್ಕಿತು ಮುಂದೆ ಸುಖವಾಗಿರುತ್ತಾರೆ ಎಂದು ಮಕ್ಕಳನ್ನು ’ಒಪ್ಪಿಸಿ’ ಮದುವೆ ಮಾಡುವ ಅಪ್ಪ ಅಮ್ಮಂದಿರು…… ದಂಗಲ್ ನ ಅಮೀರ್ ಖಾನ್ ನಲ್ಲಿ ನನಗೆ ಇವರೆಲ್ಲಾ ಕಾಣುತ್ತಾರೆ. ದಂಗಲ್ ನ ಆಮೀರ್ ಮತ್ತು ನಮ್ಮ ನಡುವಿನ ಅಮ್ಮ ವಿಜಯಮ್ಮ – ಬೇರೆ ಬೇರೆ ಅನ್ನಿಸಿದರೂ ಅವರಿಬ್ಬರನ್ನೂ ಹೋಲಿಸುವ ಮೂಲಕ ನೀವು ಹೇಳುವ ಸತ್ಯ ಎದೆಯನ್ನು ತಾಕುತ್ತದೆ. ಓದಿ ಮುಗಿಸಿದಾಗ ಕಣ್ಣು ತುಂಬಿ ಬಂದಿತ್ತು.

    ಪ್ರತಿಕ್ರಿಯೆ
  8. ಸ. ಜಗನ್ನಾಥ

    ಬರವಣಿಗೆ ಚೆನ್ನಾಗಿದೆ. ಡಾ:ವಿಜಯಾ ಅವರನ್ನು 25 ವರ್ಷಗಳ ಹಿಂದೆ ನನ್ನ ‘ಗಂಗೇಗಂಡನ ಪದಗಳು’ ಮೊದಲ ಮುದ್ರಣದ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲು ಚಾಮರಾಜ ಪೇಟೆಯ ಮನೆಗೆ ಹೋಗಿದ್ದೆವು. ನಂತರ ಅಲ್ಲೊಂದು ಇಲ್ಲೊಂದು ಸಿನಿಮಾ ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರು. ಮಕ್ಕಳ ಬದುಕು ಕಟ್ಟಲು ಪಟ್ಟಿದ್ದ ಅವರಶ್ರಮದ ಹಿನ್ನೆಲೆ ಅಗಲ ಕುಂಕುಮದ ಮುಗುಳು ನಗೆಯ ಮುಖ ಮರೆಮಾಡುತ್ತಿತ್ತು. ಬಿ ಸುರೇಶ್ ಒಡನೆ ಅಬ್ಬಯ್ಯ ನಾಯ್ಡು ಅವರ ತಾಯವ್ವ ಸಿನಿಮಾ ಸಮಯದಲ್ಲಿ ಸುಮಾರು ದಿನಗಳು ಕಳೆದಿದ್ದು ನೆನಪಾಗುತ್ತಿದೆ.

    ಪ್ರತಿಕ್ರಿಯೆ
  9. ಭಾರತಿ ಬಿ ವಿ

    ತುಂಬ ಇಷ್ಟವಾಯ್ತು ಈ ಬರಹ … ಎಂಥ ಸೂಕ್ಷ್ಮತೆ ….

    ಪ್ರತಿಕ್ರಿಯೆ
  10. Anonymous

    . ನಾನು ದಂಗಲ್ ಸಿನಿಮಾ ನೋಡಿಲ್ಲ . ವಿಜಯಮ್ಮ ಅವರನ್ನು ತುಂಬಾ ವರ್ಷಗಳಿಂದ ಬಲ್ಲೆ . ನಿಮ್ಮ ಬರಹ ಹೃದಯಸ್ಪರ್ಶಿಯಾಗಿದೆ .

    ಪ್ರತಿಕ್ರಿಯೆ
  11. Sudha ChidanandGowd

    Whatever may be the names…
    Difference lays in attitude of man and woman..
    If woman have daughters, that itself is a big difference-it can’t be denied.
    Women like Vijayamma are role models ..
    She build families as well as society.
    What all tough time she might have faced-we can imagine. But, what of MEN..?
    Things are so easy for them and men will have support of society too.
    What men have to do is-making decisions.
    Yes, just good decision…
    To support daughters..

    ಪ್ರತಿಕ್ರಿಯೆ
  12. Anonymous

    ತುಂಬಾ ಚೆನ್ನಾಗಿದೆ ಸಾರ್. ಲೇಖನ ಓದುತ್ತಿದ್ದರೆ ಹಲವು ಸನ್ನಿ‌ವೇಶಗಳು ತುಂಬಾ ನೆನಪಾಗುತ್ತವೆ..

    ಪ್ರತಿಕ್ರಿಯೆ
  13. Anonymous

    Very touching…….. soo true….. thumba chennagide sir… very nice writing…..

    ಪ್ರತಿಕ್ರಿಯೆ
  14. Priyadarshini Shettar

    When I saw the movie what I thought was finally his daughters were successful, so someone ended up making a movie; but what if they were failures?

    The another thing is nowadays parents are unnecessarily behind their kids’ “dreams”.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: