ನಾವು ಇಷ್ಟೇಕೆ ಹೆದರಿದ್ದೇವೆ?
ಸಂಯುಕ್ತಾ ಪುಲಿಗಳ್
ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕ್ಲಿಷ್ಟಕರ ಹೆರಿಗೆ ಸ್ವಾಮೀ ನಿತ್ಯಾನಂದರ ಆಶೀರ್ವಾದದ ಪವಾಡದ ಮೇಲಾಯಿತು ಎಂದು ಹೇಳಿಕೆ ಕೊಡುತ್ತಾನೆ. ಯಾರೋ ಬಾಬಾ ಅಂತೆ, ಅವರಿಗೆ ಒಂದು ಫೋನಾಯಿಸಿ ಹೆಸರು ಹೇಳಿಬಿಟ್ಟರೆ ನಮ್ಮ ಪಾಪ ಪುಣ್ಯಗಳ ಎಲ್ಲ ವಿವರಗಳನ್ನೂ ಕೊಟ್ಟು ಬಿಡುತ್ತಾರಂತೆ, ಮದುವೆ ನಿಶ್ಚಯವಾಗಿದ್ದ ಸ್ನೇಹಿತನೊಬ್ಬನು ರಾತ್ರಿ ಕಾರು ಚಾಲನೆ ಮಾಡುತ್ತಿದ್ದಾಗ ತಿಳಿಯದೆ ಒಂದು ಹಾವಿನ ಮೇಲೆ ಗಾಡಿ ಓಡಿಸಿ ಹೆದರಿಬಿಟ್ಟಿದ್ದ. ಆ ಹಾವು ಸಾಯಿತಲ್ಲ ಎನ್ನುವ ನೋವಿನಿಂದಲ್ಲ. ಸರ್ಪದೋಷ ಬಂದು ತನಗೆ, ತನ್ನ ಮದುವೆಗೆ ತೊಂದರೆಯಾದರೆ ಎಂದು.
ಇನ್ನು ಟಿವಿ ಚಾನೆಲ್ ಗಳನ್ನಂತೂ ಹೆಸರಿಸುವುದೇ ಅಸಹ್ಯಕರ! ಜ್ಯೋತಿಷಿಯೊಬ್ಬನ ಪ್ರಕಾರ ನನ್ನ ರಾಶಿ, ನಕ್ಷತ್ರ ಇರುವ ಹೆಣ್ಣು ಮಕ್ಕಳಿಗೆ ಮನೆಯ ಮೆಟ್ಟಿಲ ಕೆಳಗೆ ಅತ್ಯಾಚಾರ ಜರುಗುವ ಸಂಭವವಿದೆಯಂತೆ! “ಮಾಟಮಂತ್ರ, ವಶೀಕರಣ, ಗಂಡು-ಹೆಣ್ಣು ಕಲಹ, ಪುತ್ರ ಲಾಭ” ಇತ್ಯಾದಿಗಳಿಗಾಗಿ ಕೆಲಸವಾದ ನಂತರ ಸಂಭಾವನೆ ಕೊಡಿ ಎಂದು ನಿರ್ಭಿಡೆಯಿಂದ ಘೋಷಣೆ ಕೊಡುತ್ತಿರುತ್ತಾರೆ. ಹನುಮಾನ್ ಚಾಲೀಸವನ್ನು ಲೇಜರ್ ಮೂಲಕ ಸಣ್ಣ ಹರಳಿನಲ್ಲಿ ಕೊರೆದು ತಯಾರು ಮಾಡಿ, ಅದನ್ನು ಕುತ್ತಿಗೆಗೆ ಹಾಕಿ ಒಂದು ವಾರದಲ್ಲೇ ನಿಮ್ಮ ಕೆಲಸ ಪೂರೈಸುತ್ತದೆ ಎಂದು ಮಾರ್ಕೆಟಿಂಗ್ ಮಾಡುತ್ತಾರೆ. ಕಂತೆಗೆ ತಕ್ಕ ಬೊಂತೆ ಎಂದು ಹುಡುಗನೊಬ್ಬ, ಆ ಹಾರ ಧರಿಸಿದ ತಕ್ಷಣ ನಾಲ್ಕೇ ದಿನಗಳಲ್ಲಿ ಮೆಚ್ಚಿನ ಕೆಲಸದ ಅಪಾಯಿಂಟ್ಮೆಂಟ್ ಆರ್ಡರ್ ಸಿಕ್ಕಿತು ಎಂದು ಬೇಜಿಜಕ್ ಹೇಳಿಬಿಡುತ್ತಾನೆ.
ಇಂತಹದ್ದೇ ಮೌಢ್ಯಗಳನ್ನು ಲೇವಡಿ ಮಾಡಿ, ನಮ್ಮ ಕಣ್ಣು ತೆರೆಸಲು ಪ್ರಯತ್ನಿಸುವ ಸಿನೆಮಾಗಳು ವ್ಯಾಜ್ಯ ಹೊತ್ತು ಪಾರ್ಲಿಮೆಂಟಿನ ಮೆಟ್ಟಿಲೇರುತ್ತದೆ. ಕಾರ್ಟೂನುಗಳು ಸಾವು ತರುತ್ತದೆ. ಪುಸ್ತಕಗಳು ಹೇಳ ಹೆಸರಿಲ್ಲದೆ ಬ್ಯಾನ್ ಆಗಿಹೋಗುತ್ತದೆ. ಇವೆಲ್ಲವನ್ನೂ ನೋಡ ನೋಡುತ್ತಲೇ ಸುಮ್ಮನೆ ತಮ್ಮಷ್ಟಕ್ಕೆ ತಾವಿದ್ದುಬಿಡುತ್ತಿರುವ ಸಾಮಾನ್ಯ ಜನರ ಮೌನ ಏನನ್ನು ಸೂಚಿಸುತ್ತಿದೆ? ನಮ್ಮ ಬಾಲ್ಯದಲ್ಲಿ ವಾರಕ್ಕೊಂದು ಎಲ್ಲೋ ಪತ್ರಿಕೆಯ ಒಂದು ಮೂಲೆಯಲ್ಲಿ ಕಂಡುಬರುತ್ತಿದ್ದ ಭವಿಷ್ಯ-ಜ್ಯೋತಿಷ್ಯ ಫಲಗಳ ಕಾಲಮ್ಮುಗಳು ಇದೀಗ ಹೇರಳವಾಗಿವೆ. ಅಷ್ಟೇ ಅಲ್ಲದೆ ಪ್ರತಿ ಚಾನೆಲ್ಲಿನಲ್ಲೂ ವಿಧವಿಧವಾದ ಇಂತಹ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ ಎಂದರೆ ಇದಕ್ಕೆ ಕಾರಣವಾದರೂ ಯಾರು? ದೂರದ ದೇಶದ ಶಾಲೆಯೊಂದರಲ್ಲಿ ಮಕ್ಕಳು ಬಂದೂಕಿನ ಗುಂಡಿಗೆ ಬಲಿಯಾಗಿದ್ದಾರೆ ಎಂಬ ಸುದ್ದಿಗೆ, “ಒಳ್ಳೆಯದೇ ಆಯಿತು. ಇನ್ನು ಮುಂದೆ ಹುಟ್ಟುವ ಭಯೋತ್ಪಾದಕರ ಸಂಖ್ಯೆ ಕಡಿಮೆಯಾದೀತು” ಎಂದು ಪ್ರತಿಕ್ರಿಯಿಸುವ ವಿಕ್ಷಿಪ್ತ ಮನಸ್ಸುಗಳು ಇಂದು ಪಾಪಾಸುಕಳ್ಳಿಗಳಂತೆ ಹರಡಿಕೊಳ್ಳುತ್ತಿದೆ ಎಂದರೆ ಇದರರ್ಥವಾದರೂ ಏನು?
ಇದಕ್ಕೆಲ್ಲಾ ಕಾರಣ ನಾವೇ! ನಾವು ಮತ್ತು ನಮ್ಮೊಳಗಿನ ಭೀತಿ! ಯಾತಕ್ಕಾಗಿ, ಯಾರಿಗಾಗಿ ಇಷ್ಟು ಹೆದರಿದ್ದೇವೆ ಎಂದು ತಿಳಿಯುತ್ತಿಲ್ಲ. ಆದರೆ, ನಾವು ತುಂಬಾ ಹೆದರಿದ್ದೇವೆ. ಪರಸ್ಪರ ವ್ಯಕ್ತಿಗಳಲ್ಲಿ ನಂಬಿಕೆಯಿಲ್ಲ. ಯಾವುದೋ ಅನಗತ್ಯ ಸ್ಟಾರ್ ಪ್ರಿಡಿಕ್ಷನ್ನುಗಳನ್ನರಸಿ ಹೋಗುತ್ತೇವೆ. ಎಲ್ಲ ಮೌಢ್ಯಗಳೂ, ಧರ್ಮಾಂಧತೆಗಳು ನಮ್ಮೊಳಗೆ ನಾವೇ ಸಹಿಸಲಾರದ ಒಂದು ಭೀತಿಯಿಂದ ಪೋಷಿಸಲ್ಪಟ್ಟಿವೆ. ಮೌಢ್ಯ, ಧರ್ಮಾಂಧತೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಒಂದಕ್ಕೊಂದು ಪೂರಕ. ಯಾವುದೇ ಧರ್ಮ ಇರಲಿ, ಯಾವುದೇ ನಂಬಿಕೆಗಳಿರಲಿ ಒಂದು ಮಿತಿಯವರೆಗಷ್ಟೇ (ಅಗತ್ಯವಿದ್ದವರಿಗೆ) ನಮ್ಮ ಶಕ್ತಿಯಾಗಿರುತ್ತದೆ. ನಮ್ಮ ಮಾನಸಿಕ ಧೈರ್ಯವಾಗಿರುತ್ತದೆ. ಅದನ್ನು ಮೀರಿ ಗೆರೆ ದಾಟುವುದು ಮನುಷ್ಯತ್ವದ ವಿನಾಶಕ್ಕೆ ದಾರಿದೀಪವಾಗುತ್ತದೆ. ಆ ಗೆರೆ ದಾಟುವ ಪ್ರಕ್ರಿಯೆಗೆ ಯಾವ ರಾಕ್ಷಸತ್ವವೂ ಕಾರಣವಲ್ಲ ಬದಲಾಗಿ ಹೇಡಿತನ ಕಾರಣ. ಇಷ್ಟೆಲ್ಲಾ ದೊಡ್ಡ ವಿಶ್ವದಲ್ಲಿ, ಕತ್ತಲಲ್ಲಿ, ಬೆಳಕಲ್ಲಿ, ಗಾಳಿಯನಡುವೆ, ಕಾಡು-ಮರಗಳ ನಡುವೆ, ಭೂಮಿಯ ಅಗಾಧತೆಯ ನಡುವೆ ನಾವು ನಡುಗಿಹೋಗಿದ್ದೇವೆ. ಅನಾಥರಾಗಿದ್ದೇವೆ. ಆದ್ದರಿಂದಲೇ ದಿಕ್ಕುತಪ್ಪಿದ ಮಕ್ಕಳಂತೆ ನಾವು ತೋಚಿದಂತೆ ನಮ್ಮ ನಮ್ಮ ಚಿತ್ರಗಳನ್ನು ಬಿಡಿಸುತ್ತಾ ಬಂದಿದ್ದೇವೆ! ಕಾಲಾಯಗತ ನಾವು ಮಾಡಿಕೊಂಡುಬಂದದ್ದಿಷ್ಟೇ. ಇದರಿಂದಲೇ ನಮಗೆ ನಮ್ಮ ನಂಬಿಕೆಗಳು, ಧರ್ಮಗಳು ಮಿಗಿಲಾಗಿ ಕಾಣುತ್ತವೆ. ಬೇರೆಯವರಿಗೆ ಅವರದ್ದು. “ದೇವನೊಬ್ಬ, ನಾಮ ಹಲವು” ಎಂದು ಬಾಯಲಷ್ಟೇ ಹೇಳಿ, ನೂರಾರು ನಂಬಿಕೆಗಳನ್ನು, ಸಾವಿರಾರು ವಿಧಿ-ವಿಧಾನಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.
ನಮ್ಮ ಯಾವುದೇ ನಂಬಿಕೆಗಳು, ಗ್ರಹಿಕೆಗಳು, ತರ್ಕಗಳು ಎಲ್ಲವೂ ಈ ಅಗಾಧ ಬ್ರಹ್ಮಾಂಡದಂತಹ ಲಾರ್ಜೆಸ್ಟ್ ಸ್ಕೇಲ್ ನಲ್ಲಿ ತೂಗುಹಾಕಿದರೆ ಮಿಲಿಮೀಟರಿನ ಮಿಲಿಮೀಟರಿನಷ್ಟು ಸಹ ಗಣನೆಗೆ ಬರುವುದಿಲ್ಲ. ಅಂಥದ್ದರಲ್ಲಿ, ಅದ್ಯಾವ ಧರ್ಮ, ಅದ್ಯಾವ ನಂಬಿಕೆ, ಅದ್ಯಾವ ತತ್ವಗಳನ್ನರಸಿ ನಾವು ಹೋರಾಡುತ್ತಿದ್ದೇವೆ? ಅಥವಾ ಹೆದರಿ ದೂಷಿಸುತ್ತಿದ್ದೇವೆ? ನನ್ನ ಕಲಾವಿದ ಸ್ನೇಹಿತ ಹೇಳಿದ ಮಾತು, “ಒಂದು ಚೆಂಡನ್ನು ಮೇಲೆಸೆದರೆ ಅದು ತಕ್ಷಣ ಕೆಳಕ್ಕೆ ಬೀಳುತ್ತದೆ. ಅಂತಹ ಭದ್ರ ಭೂವ್ಯೋಮ ವ್ಯವಸ್ಥೆಯಲ್ಲಿ, ಯಾವ ಆಧಾರವೂ ಇಲ್ಲದ ನಮ್ಮ ಊಹೆಗೂ ಮೀರಿದಷ್ಟು ದೊಡ್ಡ ಚೆಂಡೊಂದು ನಿಂತಿದೆ ಮತ್ತು ಅದರ ಮೇಲೆ ನಾವೆಲ್ಲರೂ, ಕೋಟ್ಯಾನುಕೋಟಿ ಜೀವಿಗಳು! ಇದೇ ಒಂದು ಅತಿದೊಡ್ಡ ಕೌತುಕದ ವಿಷಯವಲ್ಲವೇ! ಇದನ್ನು ನಾವು ಸಂಭ್ರಮಿಸುವ ಬದಲು ಯಾವುದೋ ಕಾರಣ ಹುಡುಕಿ ಕಾದಾಡುತ್ತಲೇ ಇರುತ್ತೇವೆ.” ಎಂತಹ ಸರಳ ಸತ್ಯವಿದು. ನಮ್ಮ ಭೂಮಂಡಲವೇ ನಮಗಿಷ್ಟು ಥ್ರಿಲ್ ಆಗಿರುವಾಗ ಇನ್ನು ಇದೇ ರೀತಿ ಅದೆಷ್ಟು ಮಂಡಲಗಳಿವೆಯೋ, ಅವುಗಳಲ್ಲೆಲ್ಲಾ ಅವೆಷ್ಟು ಜೀವಿಗಳಿದ್ದಾವೋ, ಆ ಜೀವಿಗಳ ನಂಬಿಕೆಗಳು, ತರ್ಕಗಳು, ಲಾಜಿಕ್ಕುಗಳದೇನಿವೆಯೋ? ಯಾರಿಗೂ ಗೊತ್ತಿಲ್ಲ! ಆದರೆ…”ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ” ನಾವು ಯಾಕೆ ಹಾಗೆ ಕ್ಷೋಭೆಗೊಳಗಾಗಿದ್ದೇವೆ!? ನಮಗೆ ಅರಿಯದ ಭೂರಹಸ್ಯಗಳನ್ನು ನಾವು ಸ್ವೀಕರಿಸುತ್ತಲೇ, ನಮ್ಮಲ್ಲಿ ನಾವು ಧೈರ್ಯ, ನಂಬಿಕೆ ಬೆಳೆಸಿಕೊಳ್ಳಬೇಕು. ಒಂದು ಸಿನೆಮಾ ಮಾಡುವ ಮೂಲಕ ನಮ್ಮ ಧರ್ಮವಿನಾಶವಾಗುತ್ತದೆ ಎಂಬ ಮಾತುಗಳು ಹೆದರಿಕೆಯನ್ನಲ್ಲದೆ ಮತ್ತೇನನ್ನು ಸೂಚಿಸುತ್ತದೆ ಹೇಳಿ? ವ್ಯಕ್ತಿಗತವಾಗಿ ಬದಲಾವಣೆಗಳು ಮೊದಲು ಜರುಗಬೇಕು, ಆಗ ಸಮಾಜ ಗಟ್ಟಿಗೊಳ್ಳುತ್ತದೆ. ಹನಿ ಹನಿಗೂಡಿದರೆ ಹಳ್ಳ.
ನಮ್ಮನ್ನು ಆಕ್ಟೊಪಸ್ಸಿನಂತೆ ಆವರಿಸುತ್ತಿರುವ ಮೌಢ್ಯ, ಅಂಧಕಾರಗಳನ್ನು ಧಿಕ್ಕರಿಸುವ ಧೈರ್ಯ, ಮನಸ್ಥಿತಿ ನಾವು ವ್ಯಕ್ತಿಗತವಾಗಿ ಬೆಳೆಸಿಕೊಳ್ಳಬೇಕು. ನಾವೆಷ್ಟೇ ಸಂಗಜೀವಿಗಳಾದರೂ, ಮೂಲತಃ ಈ ಭೂಮಿಯಲ್ಲಿ ವ್ಯಕ್ತಿಯೊಬ್ಬ (ಏಕಾಂಗಿ ಎಂಬ ಪದಬಳಕೆ ಸರಿಯಾಗಿರದುದರಿಂದ) ಸ್ವತಂತ್ರ ಜೀವಿಯೇ. ಹಾಗಾಗಿ ನಾವು ಪ್ರಕೃತಿಯ ಜೊತೆಗೆ ಎಷ್ಟು ಕನೆಕ್ಟ್ ಆಗಬಲ್ಲೆವು ಎಂಬ ಪ್ರಜ್ಞೆಯಲ್ಲಷ್ಟೇ ನಮ್ಮನ್ನು ನಾವು ಘನವಾಗಿಸಿಕೊಳ್ಳಬೇಕೆ ಹೊರತು, ಯಾರೋ ನಮ್ಮ ಜಾತಕ, ಹೆಸರು ನೋಡಿ ಹೇಳುವ ಜ್ಯೋತಿಷ್ಯದಿಂದಲ್ಲ, ಅಥವಾ ಕಾಲ, ರಾಹು, ಕಲಿಗಳಿಂದಲ್ಲ! ನನಗೆ, ನಮ್ಮ ಸಮಾಜ ಸದಾ ಒಂದು ಬಹುದೊಡ್ಡ ನೂಡಲ್ ಉಂಡೆಯಂತೆ ಕಾಣುತ್ತಿರುತ್ತದೆ. ಯಾವೊಂದು ನೂಡೆಲ್ಲಿನ ದಾರವನ್ನು ಅದು ಮುರಿಯದಂತೆ ಬಿಡಿಸಲು ಸಾಧ್ಯವೇ ಇಲ್ಲ. ಅದೇ ರೀತಿ ಸಮಾಜದ ಪ್ರತಿಯೊಂದು ಘಟನೆಗಳೂ ಒಂದಕ್ಕೊಂದು ಸೇರಿಕೊಂಡು, ಒಂದಕ್ಕೊಂದು ಪೂರಕವಾಗಿವೆ. ಒಂದನ್ನು ತೊರೆಯದೆ, ಮುರಿಯದೆ ಇನ್ನೊಂದನ್ನು ಬಿಡಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗಡಿಯಾರ ತನ್ನ ಪಾಡಿಗೆ ತಾನು ಮುಂದುವರೆಯುತ್ತಿರುತ್ತದೆ. ನಾವು ನಮ್ಮ ಮೂಗಿನ ನೇರಕ್ಕೆ ಅದನ್ನು ತಿರುವಿಕೊಳ್ಳುವುದೇ ತಪ್ಪು ಅಥವಾ ಅಸಂಬದ್ಧ. ಕೆ.ಎಸ್.ನ ರವರ ಮಾತಿನಂತೆ “ಸರಿಯಾಗಿರುವುದೆಲ್ಲ ಸರಿಯಾಗಿದೆ”, ನಾವು ನಮ್ಮ ಮೇಲೆ ಭರವಸೆಯಿತ್ತು ಮುನ್ನಡೆಯಬೇಕೆ ಹೊರತು, ಹೆದರಿ, ಬೆದರಿ; ನಂಬಿಕೆ, ಮೌಢ್ಯ, ಧರ್ಮಾಚಾರ-ಅನಾಚಾರ, ಎಂಬಂತಹ ಎಕ್ಸ್ಟರ್ನಲ್ ಸಪೋರ್ಟ್ ಗಳ ಮೊರೆಹೋಗುವುದರಿಂದಲ್ಲ.
ಅದೇ ಕಲಾವಿದ ಸ್ನೇಹಿತ ತುಂಬು ಹೃದಯದಿಂದ ಮಾತನಾಡುತ್ತಾ “ನನಗೆ ಆ ಕಾಲದಲ್ಲಿ ಪೇಯಿಂಟ್ ಕೊಂಡುಕೊಳ್ಳಲು ಸಹ ಹಣವಿರಲಿಲ್ಲ”, “ನನಗೆ ಅಪ್ಪಾ ಅನ್ನುವ ಪದವೇ ಹೊಸತು. ಬಹಳ ಸಣ್ಣ ವಯಸ್ಸಿನಲ್ಲೇ ಅವರನ್ನು ಕಳೆದುಕೊಂಡೆ”, ಇತ್ಯಾದಿ ಮಾತುಗಳನ್ನು ಸಹಾ ಮಗುವಿನ ಹೊಳಪಿನ ಕಂಗಳಿಂದ ಒಂದು ಸಂಭ್ರಮದ ವಿಷಯವಾಗಿ ನನ್ನೊಡನೆ ಹಂಚಿಕೊಳ್ಳುವಾಗ, ಕಾಲು ಸಣ್ಣಗೆ ಮುರಿದು ಕೆಲವೇ ದಿನಕ್ಕಾಗಿ ಮನೆಯಲ್ಲಿ ಕೊರಗಿ ಕೂತಿದ್ದ ನಾನು ಬೆರಗಾದೆ! ಇಂತಹ ಎಲ್ಲವನ್ನೂ ಸಂಭ್ರಮಿಸುವ, ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಮನಸ್ಥಿತಿ ನಮ್ಮಲ್ಲಿರಬೇಕಲ್ಲವೇ? ಶಾಂತಿನಾಥ ದೇಸಾಯರ ‘ಮುಕ್ತಿ’ ಕಾದಂಬರಿಯಲ್ಲಿ ವ್ಯಕ್ತಿಯೊಬ್ಬ ದೊಡ್ದ ಖಾಯಿಲೆಯಿಂದ ನರಳುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿರುತ್ತಾನೆ. ಅವನ ಜೀವದ ಗೆಳೆಯ, ಅವನ ತಂಗಿ ತನ್ನ ಬಳಿ ಬಂದು ತಮ್ಮ ಪ್ರೇಮ ವೈಫಲ್ಯ, ಸಂಸಾರದ ಜಂಜಾಟ ಇತ್ಯಾದಿ ದುಃಖಗಳನ್ನು ತೋಡಿಕೊಳ್ಳುವಾಗ, ಆ ಖಾಯಿಲೆಯುಳ್ಳ ವ್ಯಕ್ತಿ ಒಂದೇ ಒಂದು ಮಾತು ಹೇಳುತ್ತಾನೆ. “ಅದ್ಯಾವ ದುಃಖ, ದುಮ್ಮಾನಗಳನ್ನು ಹಿಡಿದು ಕೂತಿರುವಿರಿ! ನೀವು ಬದುಕಿದ್ದೀರಿ ಅಷ್ಟು ಸಾಲದೇ? ವಿಫಲವಾದ ಪ್ರೇಮ, ವಿರಹಗಳನ್ನು ಅನುಭವಿಸುವುದಕ್ಕಾದರೂ ನೀವು ಜೀವಂತವಿದ್ದೀರಿ! ಇದಕ್ಕಿಂತ ಸುಖವಿನ್ನೇನಿದೆ. celebrate your sorrows!” ಎನ್ನುತ್ತಾನೆ. ಬಹುಶಃ ಈ ಮಾತು ನಾನು ಜೀವನಪರ್ಯಂತ ಮರೆಯಲಾರೆ.
ಬದುಕು ದೊಡ್ಡದು! ಅದರ ನಂತರವೇ ನಮ್ಮೆಲ್ಲ ಧರ್ಮ, ಅರ್ಥಗಳು, ಅವುಗಳ ತೀವ್ರ ನಿಲುವುಗಳು ಅಥವಾ ಯಾವುದಾದರೂ ನಿಲುವುಗಳು! ಒಮ್ಮೆ ಕಣ್ಣು ತೆರೆದು ನೋಡಿದರೆ ಮಸುಕಾಗಿ ತಿಳಿಯಬಹುದು ನಮ್ಮ ಊಹೆಗೂ ಮೀರಿದ ಅಗಾಧ ಅನಂತತೆಯನ್ನು! ಆ ಅನಂತ ವ್ಯೋಮದ ನಡುವೆ ನಾವು ಕ್ರಿಮಿಗಳು ಎಂಬ ವಿಷಯ ನಾವು ಅರಿತ ದಿನದಿಂದ ಮತ್ತು ಆ state of being ಅನ್ನು ನಾವು ಧೈರ್ಯವಾಗಿ, ಸಂತೋಷವಾಗಿ ಒಪ್ಪಿಕೊಳ್ಳುವುದರಿಂದ ಮತ್ತೊಬ್ಬರ ಕಂಡು ಅಸೂಯೆ ಪಡುವುದು, ಹೆದರುವುದು, ಆಗ್ರಹಿಸುವುದು, ಕೊಲ್ಲುವುದು, ದ್ವೇಷಿಸುವುದು, ನಮ್ಮಲ್ಲಿನ ದೌರ್ಬಲ್ಯಗಳಿಗೆ ಅದ್ಯಾವುದೋ ಪವಾಡಗಳ ಮೂಲಕ ಉತ್ತರ ಹುಡುಕುವುದು, ಮತ್ತು ಇಂಥದೇ ವ್ಯಭಿಚಾರಗಳು ದೊಡ್ಡ ಮಟ್ಟದಲ್ಲಿ ರಾಜ್ಯ, ದೇಶ-ವಿದೇಶಗಳಲ್ಲಿ ನಡೆಯುವುದು, ಈ ವಿಕಾರಗಳಿಗೆ ನಾವು ಧರ್ಮ, ಮೋಕ್ಷ, ಸತ್ಯ, ರಾಷ್ಟ್ರೀಯತೆ, ಸಮಾನತೆ, ದೈವೀಕ ಪವಾಡಗಳು ಎಂಬ ಅವಹೇಳನಾಕಾರಿ ಹೆಸರುಗಳು ಕೊಡುವುದು ಇವೆಲ್ಲಾ ಕಡಿಮೆಯಾಗಬಹುದೇನೋ!
(ಸಿನೆಮಾದೊಂದರಲ್ಲಿ ರಾಜಾ ರವಿವರ್ಮನ ಮನಮೋಹಕ ಚಿತ್ರಕಲಾ ಶಿಲ್ಪವನ್ನು ಧರ್ಮಾಂಧನೊಬ್ಬ ಕತ್ತಿಯಿಂದ ಬಗೆದು ಸೀಳಿದ ದೃಷ್ಯ ನೋಡಿ, ಆ ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ. ಅದೇ ಧೋರಣೆಗಳು ಇಂದು ಇನ್ನೂ ಹೆಚ್ಚಾಗುತ್ತಿವೆ, ನಮ್ಮ ದೈನಂದಿನ ಸಮಾಜದಲ್ಲೇ ಜರುಗುತ್ತಿದೆ ಎಂಬ ವಿಚಾರವನ್ನು ನಡುರಾತ್ರಿ ನೆನೆದು ನಡುಗಿದ ಪೆನ್ನು ಈ ಲೇಖನವನ್ನು ಬರೆಸಿತು.)
ಹೆದರಿಕೆ ಅಲ್ಲ ದುರಾಸೆ… ಶ್ರಮವಿಲ್ಲದೆ ಫಲ ಬೇಡುವ ಮನಸ್ಥಿತಿ… Well written
Well said Vidyashankar!
Superb!
Thank you for sharing the lines of Shanthinatha Desai form his “Mukthi”,Vidyashankar comment is the reality.
ಹೌದು,ಹೆದರಿದ್ದೇವೆ ಎನ್ನುವುದು ಸರಿಯೆನಿಸುತ್ತದೆ. ಹೆದರಿದ್ದು ಖಂಡಿತವಾಗಿಯೂ ಒಳಗಿಗಿಂತ ಹೊರಗನ್ನೇ ಆಶ್ರಯಿಸಲು ಪ್ರಾರಂಭಿಸಿದಾಗಿನಿಂದ; ಒಳ ಹೊರಗುಗಳ ಸಮನ್ವಯ ತಿಳಿಯದಾದಾಗಿನಿಂದ.
Howdalla, naavyaakishtu hedariddeve?
Janagru sariyaada haadiyalli nadeyade iddashtoo bheetiyee..Ee bheetiyannu encash maadikolta iruva TV channelgalu…Jyothishigalu…Local busgalalli hacchho pamplets : Jaadu Tona….If nothing happens in 3 days – money vaapas guarantee anta bareyo bhooparu…
Nanna manassina maatgalige neevilli akshragala roopa kottiddakkagi thanks Samyukta Puligal.
odisikondu hoguva haaguu chintanege hachuva baraha nice..madam..
ನಮ್ಮ ಯಾವುದೇ ನಂಬಿಕೆಗಳು, ಗ್ರಹಿಕೆಗಳು, ತರ್ಕಗಳು ಎಲ್ಲವೂ ಈ ಅಗಾಧ ಬ್ರಹ್ಮಾಂಡದಂತಹ ಲಾರ್ಜೆಸ್ಟ್ ಸ್ಕೇಲ್ ನಲ್ಲಿ ತೂಗುಹಾಕಿದರೆ ಮಿಲಿಮೀಟರಿನ ಮಿಲಿಮೀಟರಿನಷ್ಟು ಸಹ ಗಣನೆಗೆ ಬರುವುದಿಲ್ಲ.ಅನುವಲ್ಲಿ ಅಣುವಾದ ನಾವೂ..
ಅಲ್ವಾ?? ನಂಗೂ ತುಂಬ ಸಲ ಹೀಗೇ ಅನಿಸ್ತದೆ ಸಮ್ಮೂ.