ಚನ್ನಪ್ಪ ಅಂಗಡಿ
—
ಏನು ಮಾಡಿದಿರಿ… ಗಳೆ? ಇದೇನು?
ಎದ್ದು ಬಿದ್ದು ಹೋಗುವ ಮಾತಿಗೆ ಗದ್ದ ಊರಿದಿರಿ
ಸಾರಿದಿರಿ ಸರಿದಿರಿ, ಜಾರಿದಿರಿ ಜರಿದಿರಿ; ನಮ್ಮನ್ನೇ – ಕರಿಯಿರಿ!?
ಕರೆದವರನ್ನು ಮರೆದಿರಿ; ಮರೆದವರನ್ನು ಕರಿಯಿರಿ
ಬದುಕು ಬರೆಯಿಸಿದ ಅಕ್ಷರ, ಕವಿಯ ಪಟ್ಟ – ʻಪಾಡುʼ
ಹುಳಿ ಸಿಹಿ ಒಗರು, ಅದಕೂ ಒಂದು ರುಚಿ
ಹಣ್ಣಾಗದಿರೆ ಬಿಡಿ ಸ್ವಾಮಿ, ಹೆಣ್ಣಾಗದಿರೆ ಹೇಗೆ?
ನಾಮರೂಪಗಳನು ದಾಟಿ, ಜೀವತಂತುಗಳನು ಮೀಟಿ
ಲೋಕದೊಳಗಿನ ಸಂಚಾರ ಅನ್ನ ನೀರಿಗೆ ಸಂಚಕಾರ
ಹಸಿದವನ ಮುಂದೆ ಹಾಡೇ, ಎಡಬಲದ ಪಾಡೇ?
ಕುರಿತೋದದೆಯುಂ… ಕುರಿತೇ ಮಾತುಕತೆ
ಆಟಪಾಠದೊಂದಿಗೆ ಸಾಗಬೇಕೆನ್ನುವ ಪರಿಪಾಠ
ಅರಿತಾದರೂ ನೋಡು ಮರೆತಾದರೂ ನೀಡು
ಅಡಿಯಡಿಗೆ ಬಿಡುಗಡೆಗಾಗಿ ಹಾತೊರೆವ ಮನದಲಿ
ಬಲಿತ ಬುದ್ಧಿಯ ಲೋಕ ವ್ಯವಹಾರ
ಬುದ್ಧಿಜೀವಿಯ ಬುದ್ಧಿ, ತನ್ನ ಜೀವಕ್ಕೇ ಮಣಭಾರ
ತರ್ಕಕ್ಕೆ ಪೂರ್ಣ ಅಧಿಕಾರ
ವಿವೇಕಕ್ಕೆ ಹೊತ್ತುಗಳೆಯುವ ಪಗಾರ
ಸಹೃದಯರ ಮೇಲೆ ಕವಿ-ದ ಕವಾಯತು
ಕಾದಿದೆ ಮುಂದೆ ಕವಿಯೇರು
ಶಬ್ದಾರ್ಥ ಅಸ್ತ್ರಗಳ ಝಳಪಿಸಿ ಬ್ರಹ್ಮಾನಂದ ಪಡೆವ
ಬ್ರಹ್ಮನಿಂದೆ.
ಋಷಿಯಂಶದ ದ್ರಷ್ಟಾರನೆ ಯಾವುದೀ ಸೃಷ್ಟಿ?
ಬ್ರಹ್ಮನಾಗಬೇಡವೋ ಮನವೆ, ಬೊಮ್ಮನಾಗು;
ಸಾಧ್ಯವಾದರೆ ಮನುಷ್ಯನಾಗು.
ನವನವನವ ಉನ್ಮೇಷಶಾಲಿನಿ
ರವರವರವ ಉಲ್ಲೇಖಶಾಲಿನಿ
ಮತ್ತಮತ್ತಮತ್ತ ಪ್ರತಿಭಾಮತಾ
ಸೃಷ್ಟಿಯ ಮುನ್ನ, ತೆರೆಯಲೊಂದು ದೃಷ್ಟಿ
ಎಲ್ಲಿದ್ದೀಯಪ್ಪ ʻಕವಿʼ ಎಂದೆ
ಎಲ್ಲಿಯೂ ಹೋಗದೇ ಅಲ್ಲಿಯೇ ನಾ-ನಿಂದೆ.
ಎಲ್ಲೆಲ್ಲೂ ನೀನೇ ಕಂಡಂತಾಗುತ್ತದೆ
ನೆರಳೂ ಭ್ರಮೆ ಹುಟ್ಟಿಸುತ್ತದೆ
ಲೌಕಿಕದಲಿ ಹೆಜ್ಜೆ ಸಂಭಾಳಿಸಿಕೊಂಡು, ಶಾಸ್ತ್ರದಲಿ ಈಜಿ
ಮನದ ಮಾತಿನಲಿ ತಡವರಿಸುತ್ತಿ, ಕವಿದ ಕತ್ತಲಲಿ ತಡಕಾಡುತ್ತಿ
ತತ್ವಪದ, ಪಾದದಲಿ ಧೂಳಾಗಿ
ಸತ್ವವೆಂಬುದು ಸವಕಳಿ ನಾಣ್ಯ
ಪ್ರಸಾಧನದ ಡಬ್ಬಿ ಖಾಲಿಯಾಗುತಿದೆ, ನಿಲುವುಗನ್ನಡಿ ಮೈಗೆ
ಮಸಕು ಕವಿಯುತಿದೆ, ಶರೀರದ ಭಾರವೇರುತಿದೆ.
ಆತ್ಮ ಗಾಳಿಯಲಿ ತರಗೆಲೆಯಂತೆ ಸೀಳಿ ಕ್ಷೀಣಿಸುತಿದೆ ಧ್ವನಿ.
ಶಬ್ದ ನಿಶ್ಶಬ್ದವಾಗುವ ಕಿವಿಯ ಲಾಳಿಕೆಯೊಂದು ಬೇಕಿದೆ
ಹೃದಯ ಗೋಡೆಯು ಬಿರುಬೇಸಿಗೆಯಲೂ ಜಿನುಗಬೇಕಿದೆ;
ಬೆವರಿನಿಂದಲಾದರೂ
ನೆರೆದ ದೃಶ್ಯವ ಬಣ್ಣದಲಿ ಅದ್ದಿ, ಕಣ್ಣಕುಂಚದಲಿ ತೀಡಿ
ಮನದ ಭಿತ್ತಿಯ ಮೇಲಿನ ಚಿತ್ರ ಚೆಂದಗಾಣಬೇಕಿದೆ
ಬುದ್ಧಿ-ಭಾವ ಬೆರೆತು ಅಂದಗಾಣಬೇಕಿದೆ.
ಕವಿತೆ,
ಆಗಬೇಕಿದೆ
ಇನ್ನೂ…
0 ಪ್ರತಿಕ್ರಿಯೆಗಳು