ಚನ್ನಣ್ಣನ ಚಿತ್ರವನ್ನು ನಾನು ಎಂದೆಂದಿಗೂ ಮನಸ್ಸಿನಿಂದ ಅಳಿಸಿ ಹಾಕಲಾರೆ.. 

ಜಿ ಎನ್ ಮೋಹನ್ 

ನಾನು ಕಲಬುರ್ಗಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿಯೇ ಈ ಸುದ್ದಿ ಅಪ್ಪಳಿಸಿತು.

ಚನ್ನಣ್ಣ ಎಂದಾಗಲೆಲ್ಲ ನನಗೆ ನೆನಪು ಬರುವುದು- ಅಂಬೇಡ್ಕರ್..

ಅಂಬೇಡ್ಕರ್ ದೇಶಕ್ಕೆ ಕೊಟ್ಟ ತಿರುವು, ಭರವಸೆ ಎಲ್ಲವನ್ನೂ ಈ ಸಮಾಜ ಹುಸಿಗೊಳಿಸುತ್ತಿರುವ, ಹುಸಿಗೊಳಿಸಬಹುದಾದ ಆತಂಕದ ಬಗ್ಗೆ ಅರ್ಥವತ್ತಾದ ಕವಿತೆ ಬರೆದದ್ದು ಚನ್ನಣ್ಣ ವಾಲೀಕಾರರು.

‘ನೀ ಹೋದ ಮರುದಿನ

ಮೊದಲಂಗ ನಮ್ಮ ಬದುಕು

ಆಗ್ಯಾದೋ ಬಾಬಾಸಾಹೇಬ..’

ಎಂದು ಕವಿತೆಯಲ್ಲಿ ಚನ್ನಣ್ಣ ನಿಟ್ಟುಸಿರಿಟ್ಟಿದ್ದರು.

ಆ ನಿಟ್ಟುಸಿರು ನನ್ನನ್ನು ಎಷ್ಟು ಗಾಢವಾಗಿ ತಟ್ಟಿತ್ತೆಂದರೆ ಆ ಕವಿತೆಯೂ, ಚನ್ನಣ್ಣನೂ  ನನಗೆ ಮನದಲ್ಲಿ ಅಚ್ಚಳಿಯದೆ ದಾಖಲಾಗಿಬಿಟ್ಟಿದ್ದರು.

ಬಂಡಾಯ ಸಾಹಿತ್ಯ ಸಂಘಟನೆಯ ಬೆಂಗಳೂರು ಕಮ್ಮಟದಲ್ಲಿ ಚನ್ನಣ್ಣ ಇದೇ ಹಾಡನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡಿದ್ದರು…

ನಿನ್ನಂತೆ ಇರುವವರು, ಕಳಕಳಿಯ ಪಡುವವರು 

ಇನ್ನತನ ಬರಲಿಲ್ಲ ಒಬ್ಬ..

ಎನ್ನುವಾಗ ಅವರೊಳಗಿನ ದನಿ ಭಾರವಾಗುತ್ತಿತ್ತು.

ಆ ಹಾಡು ನನ್ನೊಳಗೆ ಇಂದಿಗೂ ಪಯಣಿಸುತ್ತಲೇ ಇದೆ.

ಚನ್ನಣ್ಣ ವಾಲೀಕಾರರು ನಮಗೆ ಪರಿಚಯವಾಗುವ ಮುನ್ನವೇ ಬಂಡಾಯದ ವಲಯದಲ್ಲಿ ಅವರ ಬಗ್ಗೆ ಇದ್ದ ಸಾಕಷ್ಟು ಜೋಕುಗಳು ತಲುಪಿದ್ದವು. ಒಂದು ರೀತಿಯಲ್ಲಿ ಚನ್ನಣ್ಣ ಮೊದ್ದು ಎನ್ನುವ ಭಾವನೆಯನ್ನೇ ಎಲ್ಲರೂ ಹರಡುತ್ತಿದ್ದರೇನೋ ಎಂದು ನನಗೆ ಅನಿಸುತ್ತಿತ್ತು.

ನಾನು ‘ಪ್ರಜಾವಾಣಿ’ಯ ವರದಿಗಾರನಾಗಿ ಕಲಬುರಗಿಗೆ ಕಾಲಿಟ್ಟದ್ದು ನನಗೆ ಚನ್ನಣ್ಣನವರ ಪ್ರಾಮುಖ್ಯತೆಯನ್ನು ಇನ್ನೂ ಆಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಕಾಲನ ಪಯಣದಲ್ಲಿ ಯಾವುದೋ ಒಂದು ಹಂತದಲ್ಲಿ ಇನ್ನು ಮುಂದಕ್ಕೆ ನಾನು ಚಲಿಸಲಾರೆ ಎಂಬಂತೆ ನಿಂತುಬಿಟ್ಟಿರುವ ಹೈದ್ರಾಬಾದ್ ಕರ್ನಾಟಕದಲ್ಲಿ ಬಡತನ, ಸಾವು, ಶೋಷಣೆ ಇನ್ನಿಲ್ಲದಂತೆ ಕಾಡುತ್ತಿವೆ. ಇಂತಹ ವಾತಾವರಣದಲ್ಲಿ ಚನ್ನಣ್ಣ ಈ ಎಲ್ಲಕ್ಕೂ ಮಾತು ನೀಡಿದರು. 

ಚನ್ನಣ್ಣ ಅವರೊಳಗೆ ಕುದಿವ ಸಿಟ್ಟು ಇದ್ದಂತೆ ಹಸನ್ಮುಖ ಕೂಸಿನ ಮನೋಭಾವವೂ ಇತ್ತು. ಹಾಗಾಗಿಯೇ ನನಗೂ ಅವರಿಗೂ ಗುದ್ದಾಡುವ ಅನೇಕ ಸಂದರ್ಭಗಳಿದ್ದರೂ ತಾನಾಗಿ ಕರಗಿಹೋಗುತ್ತಿದ್ದವು.

ಅವರು ಬರೆದ ಪ್ರವಾಸ ಕಥನದ ಹೆಸರೇ ಎಷ್ಟು ಉದ್ದವಾಗಿತ್ತೆಂದರೆ ಅದೇ ಒಂದು ಪುಟದಷ್ಟಾಗುತ್ತದೆ ಎಂದು ನಾನು ‘ಪ್ರಜಾವಾಣಿ’ಯಲ್ಲಿ ಬರೆದಿದ್ದೆ. ಯಾಕೋ ಗೊತ್ತಿಲ್ಲ, ಚನ್ನಣ್ಣನವರಿಗೆ ಶ್ರೇಷ್ಠತೆಯ ವ್ಯಸನ ಬೆನ್ನತ್ತುಬಿಟ್ಟಿತು. ಜನ ಓದಲಾಗದ ಸಾಹಸಗಳಿಗೆ ಪೆನ್ನು ಹಚ್ಚಿ ಕೂತರು. ಅವರ ‘ವ್ಯೋಮಾವ್ಯೋಮ’ವಂತೂ ೧೦೩೦ ಪುಟಗಳ ಕೃತಿ. ಈ ಕೃತಿಯಲ್ಲಿ ಎಲ್ಲೂ ಪೂರ್ಣ ವಿರಾಮವಿಲ್ಲ, ಎಂತಹದ್ದೂ ಇಲ್ಲ. ಇಡೀ ಪುಸ್ತಕ ಒಂದು ಅರ್ಥದಲ್ಲಿ ಒಂದೇ ವಾಕ್ಯ ಅಷ್ಟೇ. ಇಂತಹ ಸಾಹಸಗಳಿಗೆ ಅವರು ಸಾಕಷ್ಟು ಗಂಟು ಬಿದ್ದರು. ಓದುಗರಿಗೂ ಅವರ ಮಧ್ಯೆಯೇ ಒಂದು ಗೋಡೆ ಏಳಲು ಅವರ ಈ ದುಸ್ಸಾಹಸಗಳೇ ಕಾರಣವಾದವು.

ನಾನು ಅಲ್ಲಿದ್ದ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿನ ಈ ತಂಡ ನಡೆಸಿದ ಮೊದಲ ಪ್ರಶಸ್ತಿ ಆಯ್ಕೆಯಲ್ಲಿ ಗೌರವ ಪ್ರಶಸ್ತಿಗೆ ನಾನು ಮುಂದು ಮಾಡಿದ್ದು ಚನ್ನಣ್ಣ ವಾಲೀಕಾರ ಅವರ ಹೆಸರನ್ನೇ. ಗಿರಡ್ಡಿ ಅವರಿಗೂ ಕಲಬುರ್ಗಿಯ ನಂಟು ಹೆಚ್ಚು. ಅವರ ಮನದಲ್ಲಿ ಅಲ್ಲಿನ ಭಾಗದ ಇನ್ನಾರ ಹೆಸರಿತ್ತೋ ಗೊತ್ತಿಲ್ಲ. ಆದರೆ ಚನ್ನಣ್ಣನವರ ಹೆಸರು ಪ್ರಸ್ತಾಪಿಸಿದಾಗ ಬೇಡ ಎನ್ನಲಿಲ್ಲ. ಚನ್ನಣ್ಣನವರಿಗೆ ಎಷ್ಟು ಖುಷಿಯಾಗಿ ಹೋಗಿತ್ತು ಎಂದರೆ ಅವರು ನನ್ನ ಮನೆಗೆ ಬಂದವರೇ ಅವರದ್ದೇ ಸ್ಟೈಲ್ ನಲ್ಲಿ ನನ್ನನ್ನು ಗಾಢವಾಗಿ ತಬ್ಬಿದರು. ಕರಡಿ ಹಿಡಿತ ಅದು.

ಪ್ರಶಸ್ತಿ ಪ್ರದಾನ ಮಾಡಲು ಆಗಿನ ಸಂಸ್ಕೃತಿ ಸಚಿವ ಎಂ ಪಿ ಪ್ರಕಾಶ್ ಹಾಗೂ ಯು ಆರ್ ಅನಂತಮೂರ್ತಿ ಅವರನ್ನು ಕರೆಸಿದ್ದೆವು. ಚನ್ನಣ್ಣ ಮತ್ತು ಸಂಭ್ರಮ ಒಂದೇ ನಾಣ್ಯದ ಎರಡು ಮುಖಗಳಂತಾಗಿದ್ದರು.

ಆ ನಂತರದಲ್ಲಿ ಚನ್ನಣ್ಣ ತಮ್ಮ ಮಹಾಕಾವ್ಯ ಬರೆಯುತ್ತಾ, ಅದರ ಬಗ್ಗೆ ಅವರಿಗೇ ಅಳುಕಿತ್ತೇನೋ ಅದನ್ನು ನಿವಾರಿಸಿಕೊಳ್ಳಲೆಂಬಂತೆ ನೂರೆಂಟು ಜನರ ಕಡೆಯಿಂದ ಆ ಸಾಹಸದ ಬಗ್ಗೆ ಬರೆಸುತ್ತಾ ಉಳಿದುಬಿಟ್ಟರು. ಅವರ ‘ಬೆಳ್ಯ’ ಓದಿ, ಅವರ ಕವಿತೆ ಕೇಳಿ ಅವರನ್ನು ಹಚ್ಚಿಕೊಂಡಿದ್ದ ನಾನು ಅವರು ರತಿ ವಿಜ್ಞಾನದಲ್ಲಿ ಮೂರನೇ ದರ್ಜೆಯ ಸೆಕ್ಸ್ ಬರಹ ಬರೆಯಲು ಆರಂಭಿಸಿದಾಗ ನಾಲ್ಕು ಹೆಜ್ಜೆ ಹಿಂದೆಯೇ ಉಳಿದೆ.

ಚನ್ನಣ್ಣನವರೊಳಗೊಬ್ಬ ಬಿಡೆ ಇಲ್ಲದ ಮನುಷ್ಯನಿದ್ದ. ಹಾಗಾಗಿಯೇ ಅವರಿಗೆ ತಮಗೆ ಅನಿಸಿದ್ದೆಲ್ಲವನ್ನೂ ಯಾವ ಮುಲಾಜೂ ಇಲ್ಲದೇ ಮಾಡಲು ಸಾಧ್ಯವಾಯಿತು ಎಂದು ಚನ್ನಣ್ಣ ಇಲ್ಲದಿರುವ ಈ ಹೊತ್ತಲ್ಲಿ ಸಮಾಧಾನ ಮಾಡಿಕೊಳ್ಳುತ್ತಾ ಕುಳಿತಿದ್ದೇನೆ

ಎಷ್ಟಂತ ನಾ ನಿನ್ನ ಗುಣಗಾನ ಮಾಡಲಿ

ತೇಕುವುದು ತಪ್ಪಿಲ್ಲ ನಮಗಾ.. 

ಎಂದು ದನಿ ಎತ್ತಿ ಹಾಡುತ್ತಿದ್ದ ಚನ್ನಣ್ಣನ ಚಿತ್ರವನ್ನು ನಾನು ಎಂದೆಂದಿಗೂ ಮನಸ್ಸಿನಿಂದ ಅಳಿಸಿ ಹಾಕಲಾರೆ.

‍ಲೇಖಕರು avadhi

November 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. Kotresh T A M Kotri

  ನಿಮ್ಮ ಬರಹ ತಾಕುವಂತಿದೆ.
  ವಾಲೀಕರರಿಗೆ ನಿಜ ಶ್ರದ್ಧಾಂಜಲಿ .

  ಪ್ರತಿಕ್ರಿಯೆ
 2. Sudha ChidanandaGowda

  Its a matter of fact that these writers had deeply impressed us, once upon a time. He was experimental, its true. We lost a truely dediated soul. RIP

  ಪ್ರತಿಕ್ರಿಯೆ
 3. ವರ್ಮರಾಜಾ.ಸಿ

  ಚನ್ನಣ್ಣನವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ

  ಪ್ರತಿಕ್ರಿಯೆ
 4. ಡಿ.ಎಮ್ ನದಾಫ್.

  ಆಪ್ತ ಬರಹ,
  ಸರ್
  ಚನ್ನಣ್ಣರಂತಹ ದೈತ್ಯ ಪ್ರತಿಭೆಯನ್ನು ನಾವು ಹೈ.ಕ.ಜನರು ಘನತೆಯಿಂದ ಕಾಣಲಿಲ್ಲವೇನೋ!! ಅನಿಸುತ್ತದೆ.
  ಕಲಬುರಗಿ-ರಾಯಚೂರಿನ ಸಾಂಸ್ಕೃತಿಕ ಲೋಕ ಮನಸ್ಸು ಮಾಡಿದ್ದರೆ ಚನ್ನಣ್ಣನವರು ಎಲ್.ಹನಮಂತಯ್ಯನವರಂತೆ ಸತತವಾಗಿ ವಿಧಾನ ಪರಿಷತ್ ಸದಸ್ಯ, ರಾಜ್ಯ ಸಭಾ ಸದಸ್ಯ ಆಗಿರುತ್ತಿದ್ದರು.
  ಡಿ.ಎಮ್ ನದಾಫ್
  .

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: