ಚಂಪಾ ಸಾರ್…ನಿಮಗೆ ಪ್ರೀತಿಯ ಅಪ್ಪುಗೆ…

ಚಂದ್ರಪ್ರಭ ಕಠಾರಿ

ಆಶಯ, ಔಚಿತ್ಯ, ಧ್ವನಿ, ಲಯ, ಅಲಂಕಾರ ಇತ್ಯಾದಿ ಕಾವ್ಯಗುಣದ ಯಾವ ಅರಿವಿರದೆ, ಸಾಹಿತ್ಯದ ವಿದ್ಯಾರ್ಥಿಯಲ್ಲದೆ, ಸಿವಿಲ್ ಇಂಜಿನಿಯರ್ ಆಗಿ ತೋಚಿದಂತೆ ಕವನ ರಚಿಸುತ್ತಿದ್ದೆ. ಬರೆದವುಗಳನ್ನು ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ಕಸದಬುಟ್ಟಿಯಲ್ಲಿ ಮುಕ್ತಿ ಹೊಂದುತ್ತಿದ್ದವು. ಹಿಂಜರಿಕೆಯಿಂದಲೇ, ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಸಂಕ್ರಮಣಕ್ಕೆ ಕವನ ಕಳುಹಿಸಿದ್ದೆ. ಆಶ್ಚರ್ಯವೆಂಬಂತೆ ನನ್ನ ಮೊದಲ ಕವನ ಹಳೇ ಚಾಳೀಸು ಪ್ರಕಟವಾಗಿತ್ತು.

ನಾನೂ ಬರೆಯಬಹುದೆಂಬ ಧೈರ್ಯ ತುಂಬಿತ್ತು. ನನ್ನಂತಹ ಅನೇಕ ಎಲೆಯ ಮರೆಯ ಪೀಚುಗಳು ಚಂಪಾರ ಸಂಕ್ರಮಣದಲ್ಲಿ ಬೆಳಕಿಗೆ ಬಂದಿದೆ. ಚಂಪಾ ಅವರು ಹೊಸ ಲೇಖಕರನ್ನು, ಯುವಕರನ್ನು ಮುನ್ನೆಲೆಗೆ ತರುವುದನ್ನು ಸಂಕ್ರಮಣ ನಿಲ್ಲುವವರೆಗೂ ಬದ್ಧತೆಯಿಂದ ಮಾಡುತ್ತಿದ್ದರು.

ಚಂಪಾರ ನುಡಿ, ಬರಹಗಳು ಎಷ್ಟು ನೇರ ಖಡಕ್ಕಾಗಿರುತ್ತಿದ್ದವೊ, ಅವರೊಂದಿಗೆ ಸಂವಾದ ಕಿರಿಯರೊಂದಿಗೂ ಸಹಿತ ಗೆಳೆಯನಂತಿರುತ್ತಿದ್ದವು. ಮತ್ತೆ ಅವರ ನೆನಪಿನ ಶಕ್ತಿ ಮತ್ತು ಸ್ನೇಹಪರತೆ. ಅವರನ್ನು ಒಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನದ ಸಂಕ್ರಮಣ ಪುಸ್ತಕ ಮಳಿಗೆಯಲ್ಲಿ ಮಾತಾಡಿಸಿದ್ದೆನಷ್ಟೆ, ಆದರೆ ಮತ್ತೊಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಸಿಕ್ಕು ನಾನು ನಮಸ್ಕಾರ ಎಂದು ಹೇಳುವ ಮೊದಲೇ ‘ಚಂದ್ರಪ್ರಭ ಕಠಾರಿ ಅಲ್ಲೇನ್ರಿ?’ ಎಂದು ನನ್ನಂಥ ಅನಾಮಿಕನನ್ನು ಗುರುತಿಸಿದಾಗ ಆದ ಸಂತೋಷವನ್ನು ಮರೆಯುವ ಹಾಗೇ ಇಲ್ಲ.

ಕರ್ನಾಟಕ ಸ್ವಾಭಿಮಾನಿ ವೇದಿಕೆ ಮೀನಾ ಪಾಟೀಲ ಅವರ ಅಂಚಿಲ್ಲದ ಆಕಾಶ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅದರೊಂದಿಗೆ ಕವಿಗೋಷ್ಟಿ ಇತ್ತು. ಹಲವಾರು ಹಿರಿಯ ಕವಿಗಳ ಉಪಸ್ಥಿತಿಯಲ್ಲಿ ಕವನ ವಾಚಿಸಲು ಕರೆದಾಗ ಕೈ ನಡುಕ ಶುರುವಾಗಿತ್ತು. ಅದರ ಆಹ್ವಾನ ಪತ್ರಿಕೆಯನ್ನು ಈಗಲೂ ಪ್ರಶಸ್ತಿ ಪತ್ರದಂತೆ ಕಾಪಿಟ್ಟು ಕೊಂಡಿದ್ದೇನೆ.

ಸಂಕ್ರಮಣ ಪತ್ರಿಕೆಯನ್ನು ಮತ್ತೆ ಸಾಹಿತ್ಯಾಸಕ್ತರ ಒತ್ತಾಸೆ ಮೇರೆಗೆ ಪ್ರಾರಂಭಿಸುವ ವಿಚಾರ ಬಗ್ಗೆ ಫೋನು ಮಾಡಿದ್ದರು (ಬಹುಶಃ ಅದೇ ಅವರೊಂದಿಗಿನ ಕೊನೆಯ ಮಾತುಗಳು ಅನ್ನಿಸುತ್ತೆ). ಕನ್ನಡ ಪ್ರೀತಿಯ, ಸ್ಥಿತಿವಂತ ಗೆಳೆಯರಿಂದ ಒಂದಷ್ಟು ದೇಣಿಗೆಯನ್ನು ಸಂಗ್ರಹಿಸಿ ಕಳಿಸಿದ್ದೆ. ಕೆಲವು ದಿನಗಳ ನಂತರ ಮತ್ತೆ ಫೋನು ಮಾಡಿದ್ದರು. ಅವರ ಧ್ವನಿಯಲ್ಲಿ ನಿರಾಶೆಯಿತ್ತು. ಅಂದುಕೊಂಡಂತೆ ಹಣ ಸಂಗ್ರಹವಾಗದೆ ಸಂಕ್ರಮಣವನ್ನು ಮತ್ತೆ ಪ್ರಾರಂಭಿಸಲಾಗದಿದ್ದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಹಾಗೆ, ಸಂಕ್ರಮಣ ಪತ್ರಿಕೆ ಪ್ರಾರಂಭ ೧೯೬೪ರಿಂದ ಇಲ್ಲಿಯವರೆಗೂ ಸಂಕ್ರಮಣ ಸುವರ್ಣ ಸಂಪುಟ ನಾಲ್ಕು (೧೯೭೨ರವರೆಗು) ಬಂದು ಅದೂ ನಿಂತದ್ದು, ಕನ್ನಡ ಸಾಹಿತ್ಯದ ಪ್ರಮುಖ ಲೇಖನಗಳು ದಾಖಲಾಗದೆ ಹೋದದ್ದು ನೋವಿನ ಸಂಗತಿ.

ಇನ್ನು, ಅವರ ಅಖಂಡ ಕನ್ನಡ ಪ್ರೀತಿ. ಬರವಣಿಗೆಯ ಎಲ್ಲಾ ವ್ಯವಹಾರದಲ್ಲೂ ಕನ್ನಡ ಅಂಕಿಯನ್ನೇ ಬಳಸುತ್ತಿದ್ದರು. ಕನ್ನಡ ಹೋರಾಟಗಳಿಗೆ ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ’ ಎಂಬ ಘೋಷವಾಕ್ಯವನ್ನು ಕೊಟ್ಟವರು.

ಚಂಪಾ ಸಾರ್… ನೀವೆಲ್ಲೂ ಹೋಗಿಲ್ಲ. ಇಲ್ಲೇ ಇದ್ದೀರಿ ನಮ್ಮೊಂದಿಗೆ. ಕನ್ನಡ ಮನಸ್ಸುಗಳೊಂದಿಗೆ. ನಿಮ್ಮದೇ ಮಾತಿನೊಂದಿಗೆ ‘ನಾನು ಪ್ರೀತಿಯಿಲ್ಲದೆ ಏನನ್ನೂ ಮಾಡಲಾರೆ. ದ್ವೇಷವನ್ನು ಕೂಡ’ ನಿಮಗೆ ಪ್ರೀತಿಯ ಅಪ್ಪುಗೆಗಳು.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: