ಚಂಪಾ ಎಮರ್ಜೆನ್ಸಿಯ ಹೀರೋ…

ಎನ್‌ ಎಸ್‌ ಶಂಕರ

ಚಂದ್ರಶೇಖರ ಪಾಟೀಲರನ್ನು ನಾನು ಮೊದಲು ಕಂಡಿದ್ದು ಬೆಂಗಳೂರಿನ ಒಂದು ಸಭೆಯಲ್ಲಿ. ನಿರಂಜನರ ಸಂಪಾದಕತ್ವದಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಸಂಗ್ರಹಿಸಿ ಕನ್ನಡೀಕರಿಸಿದ್ದ ಕತೆಗಳ 25 ಸಂಪುಟಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರಕಟಿಸಿತ್ತು. (ವಿಶ್ವಕಥಾಕೋಶ). ಅದಕ್ಕೆ ಸಂಬಂಧಪಟ್ಟ ಪತ್ರಿಕಾಗೋಷ್ಠಿಗೆ ನಾನು ಪ್ರಜಾವಾಣಿ ವರದಿಗಾರನಾಗಿ ಹೋಗಿದ್ದೆ. (ವುಡ್ಲ್ಯಾಂಡ್ಸ್ ಹೋಟೆಲ್- 1982). ಅಲ್ಲಿಗೆ ಅಚಾನಕ್ ಚಂಪಾ ಬಂದಾಗ ನಿರಂಜನರು ಮೈಕಿನಲ್ಲಿ ‘ಬನ್ನಿ ಬನ್ನಿ, ಎಮರ್ಜೆನ್ಸಿಯ ಹೀರೋ’ ಅಂತ ಸ್ವಾಗತಿಸಿದ್ದರು.

ನಿಜ, ಕನ್ನಡ ಲೇಖಕರ ಪೈಕಿ ತುರ್ತುಸ್ಥಿತಿ ವಿರೋಧಿಸಿ ಜೈಲುಪಾಲಾದವರು ಚಂಪಾ ಒಬ್ಬರೇ ಆದ್ದರಿಂದ ಅವರು ನಮ್ಮ ಕಣ್ಣಿಗೂ ಹೀರೋ ಆಗಿಯೇ ಕಾಣುತ್ತಿದ್ದರು. ಮುಂದಕ್ಕೆ ನನಗೆ ಅವರ ನೇರ ಪರಿಚಯ ಆಗಿದ್ದು ಧಾರವಾಡದಲ್ಲಿ-ಬೆಂಗಳೂರಿನಿಂದ ನನಗೆ ಧಾರವಾಡಕ್ಕೆ ಪ್ರಜಾವಾಣಿ- ಡೆಕನ್ ಹೆರಾಲ್ಡ್ ವರದಿಗಾರನಾಗಿ ವರ್ಗ ಮಾಡಿದಾಗ. ಧಾರವಾಡ ಮೊದಲೇ ಒಂದು ಸಣ್ಣ ಜಗತ್ತು. ಅಲ್ಲಿ ಎಲ್ಲ ವಲಯಗಳ ಪ್ರಮುಖರು ವಾರ ಒಪ್ಪತ್ತಿನಲ್ಲೇ ಸಂಪರ್ಕಕ್ಕೆ ಬಂದುಬಿಡುವುದು ಸಹಜ. ನಮಗೂ ಅವರು ಬೇಕು, ಅವರಿಗೂ ಪತ್ರಕರ್ತ ಬೇಕು!

ನಾನು 1983ರ ಜನವರಿಯಲ್ಲಿ ಅಲ್ಲಿಗೆ ಹೋದಾಗ ಗೋಕಾಕ್ ಚಳವಳಿ ಆಗಲೇ ಅಂತಿಮ ಹಂತಕ್ಕೆ ಬಂದಿತ್ತು. ಆ ಚಳವಳಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಧಾರವಾಡದ ಸಾಂಸ್ಕೃತಿಕ ಬಳಗ ಎರಡು ಬಣಗಳಾಗಿ ಸೀಳಿಹೋಗಿತ್ತು. ಒಂದಕ್ಕೆ ಚಂಪಾ ಮುಂತಾದವರ ನಾಯಕತ್ವ, ಮತ್ತೊಂದಕ್ಕೆ ಪಾಟೀಲ ಪುಟ್ಟಪ್ಪನವರು. ಪಾಟೀಲ ಪುಟ್ಟಪ್ಪನವರು ಸಾಮಾನ್ಯವಾಗಿ ಆಳುವವರಿಗೆ ಹತ್ತಿರ ಇದ್ದುದರಿಂದ ನಮಗೆಲ್ಲ ಅವರಿಗಿಂತ ಬಂಡುಕೋರ ಚಂಪಾ ಆತ್ಮೀಯರೆನಿಸುತ್ತಿದ್ದರು.

ಒಂದು ರಾತ್ರಿ ವಿದ್ಯಾವರ್ಧಕ ಸಂಘದಲ್ಲಿ ಪಾಪು ನೇತೃತ್ವದ ಸಭೆ ಮುಗಿಸಿಕೊಂಡು ಸಭಾಂಗಣದಿಂದ ಹೊರಬಂದಾಗ ಚಂಪಾ ಸಿಕ್ಕರು. ‘ಏನ್ಸಾರ್ ಅವರೂ ಕ್ರಿಯಾ ಸಮಿತಿ ಅಂತ ಕರಕೋತಾರೆ, ನಿಮ್ಮದೂ ಒಂದು ಕ್ರಿಯಾ ಸಮಿತಿ ಇದೆ. ಯಾವುದು ನೈಜವಾದ್ದು?’ ಅಂತ ಕೇಳಿದೆ. ಅವರು ಆರಾಮಾಗಿ ‘ನಮ್ಮದು ಮೊದಲು ಆಗ್ಯತಲ್ರೀ, ನಮ್ಮದು ಪೂರ್ವ ಕ್ರಿಯಾ ಸಮಿತಿ. ಅವರದು ಆಮ್ಯಾಲ ಅಗ್ಯತಲ್ರೀ, ಅವರದು ಉತ್ತರ ಕ್ರಿಯಾ ಸಮಿತಿ’ ಅಂದರು!… ಚಂಪಾ ಇಂಥ ಇರಿಯುವ ವ್ಯಂಗ್ಯಕ್ಕೇ ಸುವಿಖ್ಯಾತರು ಎಂಬುದು ಎಲ್ಲರಿಗೂ ಗೊತ್ತು. ಧಾರವಾಡದಲ್ಲಿದ್ದಷ್ಟು ಕಾಲವೂ ಆಗಾಗ ಅವರಿಗೆ ಡಿಕ್ಕಿ ಹೊಡೆಯುವುದು, ಇಂಥ ಮಾತುಗಳ ವಿನಿಮಯ- ಇದ್ದಿದ್ದೇ. ಆದರೆ ಅವರ ಮೊನಚು ವಿಡಂಬನೆ ಕೆಲವೊಮ್ಮೆ ಎಷ್ಟು ಗಾಢವೂ ಪ್ರಬುದ್ಧವೂ ಅಗಿತ್ತೆನ್ನಲು ಒಂದು ಉದಾಹರಣೆ ಕೊಡಬೇಕು.

ಈಗ ಹಲವಾರು ವರ್ಷಗಳ ಹಿಂದೆ ಮಿತ್ರ ಅನಂತ ಚಿನಿವಾರ್ ಜೀ ಟಿವಿಗೆ ‘ಅಖಾಡ’ ಎಂಬ ವಾರದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅವರಿನ್ನೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ ಹೋಗಿರಲಿಲ್ಲ. ಆಗೊಮ್ಮೆ ಗಣರಾಜ್ಯೋತ್ಸವದ ಸಂದರ್ಭಕ್ಕೆಂದು ಅವರು ಒಂದು ಸಮೂಹ ಸಂವಾದ ಕಾರ್ಯಕ್ರಮ ಆಯೋಜಿಸಿ ಅದನ್ನು ಚಿತ್ರೀಕರಿಸಿದರು. ಆ ಸಂವಾದ ಏರ್ಪಟ್ಟಿದ್ದು ತಾಜ್ ಹೋಟೆಲಿನ ಉದ್ಯಾನದಲ್ಲಿ. ವೇದಿಕೆ ಮೇಲೆ ಕೆ.ಎಚ್. ರಂಗನಾಥ್, ಯು.ಆರ್. ಅನಂತಮೂರ್ತಿ, ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್, ಮತ್ತೆ ಇನ್ನೊಬ್ಬರು.

ಆ ನಾಲ್ಕನೆಯವರು ಯಾರೆಂದು ಈಗ ಮರೆತುಹೋಗಿದೆ. ಕೆಳಗೆ ಹುಲ್ಲು ಹಾಸಿನ ಮೇಲೆ ನಾವೆಲ್ಲ ಸುಮಾರು ಐವತ್ತು ಮಂದಿ ಆಹ್ವಾನಿತರಿದ್ದೆವು ಅನಿಸುತ್ತದೆ. ಮೂರು ಅಥವಾ ನಾಲ್ಕು ಮಂದಿ ಒಂದೊಂದು ಟೇಬಲ್ ಸುತ್ತ ಕೂತಿದ್ದವು. ವೇದಿಕೆಯವರ ಮಾತುಗಳು ಮುಗಿದ ಮೇಲೆ ಚಿನಿವಾರ್ ನಮ್ಮೆಲ್ಲರ ಬಳಿ ಬಂದು ಮೈಕ್ ಹಿಡಿದು ಪ್ರಶ್ನೆ ಕೇಳುವುದು, ನಾವು ಏನೋ ಒಂದು ಹೇಳುವುದು- ಹೀಗೆ.

ಅನಂತಮೂರ್ತಿ ಆ ಸಂಜೆ ಸಮಾನ ಶಾಲೆಗಳ ಬಗ್ಗೆ ಮಾತಾಡಿದರು. ಯಾವ ಭೇದ ಭಾವಗಳಿಲ್ಲದೆ, ಯಾವುದೇ ವರ್ಗ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಶಾಲೆಯಲ್ಲಿ ಓದುವುದು ಎಷ್ಟು ಮುಖ್ಯ ಎಂದು ಬಣ್ಣಿಸಿದರು.

ಚಿತ್ರೀಕರಣವೆಲ್ಲ ಮುಗಿದ ಮೇಲೆ ನಾವು ಕೂತಕೂತಲ್ಲೇ ಪಾರ್ಟಿ. ಅಂದರೆ ಪಾನೀಯ ಮತ್ತು ಊಟ. ಈ ಊಟದ ಸಮಯದಲ್ಲಿ ಚಂದ್ರಶೇಖರ ಪಾಟೀಲರು ನಮ್ಮೊಂದಿಗೆ ಕೂತಿದ್ದರು. ಎಂದಿನಂತೆ ರಸವತ್ತಾದ ಹರಟೆ. ನಡುವೆ ನಾನು ಬಾತ್ ರೂಮಿಗೆ ಎದ್ದುಹೋದಾಗ ಅಲ್ಲಿ ಅನಂತಮೂರ್ತಿ ಕಂಡರು. ನಾನು ಅವರನ್ನು ನಮ್ಮ ಟೇಬಲಿಗೆ ಆಹ್ವಾನಿಸಿದೆ. ಚಂಪಾ ಮತ್ತು ಅವರ ಕಾಂಬಿನೇಷನ್ ಹೇಗಿರಬಹುದೆಂಬ ಚೇಷ್ಟೆಯ ಕುತೂಹಲ ನನ್ನದು.

ಅನಂತಮೂರ್ತಿ ಕೂಡಲೇ ನಮ್ಮ ಟೇಬಲಿಗೆ ಬಂದು ಕೂತರು. ಅವರ ಜೊತೆ ಯ.ಆರ್. ರಾವ್ ಕೂಡ ಸೇರಿಕೊಂಡರು. ಅನಂತಮೂರ್ತಿ ತಮ್ಮ ‘ಕಾಮನ್ ಸ್ಕೂಲಿನ’ ಪ್ರತಿಪಾದನೆಯನ್ನೇ ಇಲ್ಲೂ ಮುಂದುವರೆಸಿದರು. ‘ನಾನು ಚಿಕ್ಕಂದಿನಲ್ಲಿ ಮನೆಯೊಳಗಿದ್ದಾಗ ಅಂಗವಸ್ತ್ರ ಧರಿಸುತ್ತಿದ್ದೆ. ಸ್ಕೂಲಿಗೆ ಹೋಗುವಾಗ ಅಂಗಿ ಹಾಕುತ್ತಿದ್ದೆ. ನನ್ನನ್ನು ಬರಹಗಾರನನ್ನಾಗಿ ಮಾಡಿದ್ದು ಅಂಗಿ ಧರಿಸಿ ನಾನು ಎಲ್ಲರೊಂದಿಗೆ ಬೆರೆತು ಪಡೆದ ಅನುಭವವೇ ಹೊರತು ಅಂಗವಸ್ತ್ರವಲ್ಲ’ ಅಂದರು ಅವರು.

ಅದಕ್ಕೆ ಚಂಪಾ ಬಹಳ ಸರಳವಾಗಿ ‘ಆದ್ರ ನೀವು ಎರಡೂ ಮೇಂಟೇನ್ ಮಾಡೀರಿ’ ಅಂದುಬಿಟ್ಟರು. ಅನಂತಮೂರ್ತಿಗೆ ಅದು ಎಲ್ಲಿ ನಾಟಬೇಕೋ ನಾಟಿತು! ನಸುನಗೆಯ ಮುಸುಕಿನಲ್ಲಿ ‘ದುಷ್ಟ, ದುಷ್ಟ’ ಎಂದು ಶಪಿಸಿದರು!

ನನಗೆ ಆ ಕ್ಷಣಕ್ಕೆ ಬಾಯಿ ತುಂಬ ನಗು ಬಂದರೂ, ಮುಂದಕ್ಕೆ ಯೋಚನೆ ಮಾಡಿದಷ್ಟೂ, ಚಂಪಾ ಎಂಥ ಗಾಢ ಸತ್ಯವನ್ನು ಎಷ್ಟುಅನಾಯಾಸವಾಗಿ ಒಂದೇ ವಾಕ್ಯದಲ್ಲಿ ಒಗಾಯಿಸಿಬಿಟ್ಟರಲ್ಲ ಎಂಬ ಬೆರಗು ಹುಟ್ಟುತ್ತಿತ್ತು. ಅಲ್ಲವಾ? ಅನಂತಮೂರ್ತಿಯವರ ಬಗ್ಗೆ ಉದ್ದಕ್ಕೂ ಬಂದ ಆಕ್ಷೇಪವೇ ಇದಲ್ಲವೇ? ಅವರೇ ಬರೆದಂತೆ- ಅವರು ಬಾಹ್ಮಣ್ಯ ಬಿಟ್ಟರೂ, ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ! ಅಲ್ಲವೇ?….

‍ಲೇಖಕರು Admin

January 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: