ಚಂದ್ರಕಾಂತ ವಡ್ಡು
—-
ಅಂದು-ಕೊಂಡಿದ್ದೆ
ನಂದೇ ದೀಪ
ನಂದಾ ದೀಪ
ಹೊರಳಿದ ಎಲ್ಲ ಕಡೆ ಕಿರಣ ಪಡೆ
ಅದೆಷ್ಟೋ ಅರಿವು ಚಲನೆಯ ಚೆಲುವು
ಹಾರಿ ಮರಳಿದರೆ ಉರಿಯ ಮಡಿಲಿಗೆ
ಚಟಪಟ ಚಟಪಟ ಸುಡುಸುಡು ಕಾವು
ಬೆಂಕಿಗೆ ಆಹುತಿ ಬೇಕೇಬೇಕೇ?
ಬೆಳಕಿನ ಹುಳುವೇ ಆಗಬೇಕೇ?
ಚಿಕ್ಕ ಪುಚ್ಚಕ್ಕೆ ಅದೆಷ್ಟು ಕೆಚ್ಚು
ಬಿಚ್ಚಬಾರದಿತ್ತು ರೆಕ್ಕೆ
ಎತ್ತರದ ಹುಚ್ಚು ಅತಿ ಹೆಚ್ಚು
ಆ ಅತಿಮತಿಗಾಗಿ ಈ ಧಕ್ಕೆ
ಆಹಾ!
ಎಂಥ ಎಚ್ಚರಿಕೆ? ಎಂಥ ಮುಚ್ಚಳಿಕೆ?
ಅದೇ ಹತ್ತಿ ಒಂದೇ ಬತ್ತಿ
ಬೆಳಕು ಬತ್ತಿ ಅಳುಕು ಹತ್ತಿ
ಮತ್ತೆ ಮತ್ತೆ
ಹತ್ತಿ ಹತ್ತಿ ಬತ್ತಿ ಬತ್ತಿ
ಹೊಸೆದು ಹೊಸತೇ
ಹತ್ತಿಸಿ ಹೊತ್ತಿಸಿ
ಇಳಿದಂತೆ ಮುಸುಕು ಇಳೆಗೆ
ಮಾಸಲು ಬೆಳಕು ಸುತ್ತಲು
ಉಳಿದಂತೆ ತುಸು ಎಣ್ಣೆ
ಎದೆತುಂಬ ಕನಸು ಕತ್ತಲು
ಹೊರಗದೆ ನಂದಾ ದೀಪ
ಒಳಗಿದೆ ನಂದೇ ದ್ವೀಪ
ಹೊತ್ತಿಲ್ಲ ಗೊತ್ತಿಲ್ಲ
ಮತ್ತು ಇಲ್ಲವೇ ಇಲ್ಲ!
0 ಪ್ರತಿಕ್ರಿಯೆಗಳು