ಚಂದನ ಹಳ್ಳಿಯ ‘ಜವಾರಿ ಪ್ರೀತಿ..’

ಕವಿತಾ ವಿರೂಪಾಕ್ಷ

**

ಚಂದನ ಹಳ್ಳಿ ಹೆಸರಿಗೆ ತಕ್ಕಂತೆ ಚಂದದ ಹಳ್ಳಿ. ಕುಲ, ಗೋತ್ರ, ಜಾತಿ, ಧರ್ಮ ಇವೆಲ್ಲವುಗಳಿಂದ ದೂರವೇ ಉಳಿದ ಪುಟ್ಟ ಊರು. ಈ ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು specimen..! ಒಬ್ಬೊಬ್ಬರ ಬಗ್ಗೆನೇ ಒಂದೊಂದು ಕಾದಂಬರಿ ಬರೀಬಹುದು ಅಂತಹ ಅದ್ಭುತ ವ್ಯಕ್ತಿತ್ವದ ಮಂದಿ. ಅದರಲ್ಲಿ ನಮ್ಮ ‘ಸಣ್ಣಪ್ಪ’ ಕೂಡ ಒಬ್ಬ. ಈತನಿಗೆ ಊರ ಜನ ಸಣ್ಣಪ್ಪ ಅಂದಿದ್ದಕ್ಕಿಂತ ‘ಪಜೀತಪ್ಪ’ ಅಂದಿದ್ದೇ ಹೆಚ್ಚು. ಈತನಿಗೆ ಎಲ್ಲದೂ ತ್ರಾಸೆ. ಯಾವುದು ಈತನಿಗೆ ಸರಳವಾಗಿದ್ದು ಇತಿಹಾಸವೇ ಇಲ್ಲ! ಇಂತಹ ನಮ್ಮ ಸಣ್ಣಪ್ಪ, ಒಂದು ಸಂಜೆ ಹೊಲದಿಂದ ಮನೆಗೆ ಬಂದವನೇ ಒಳಗಡೆಯೂ ಹೋಗದೆ, ಹಾಗೆ ಬಸ್ ಸ್ಟ್ಯಾಂಡ್ ಕಡೆ ತಿರುಗಿದವನನ್ನು ಕಂಡು ಆತನ ಹೆಂಡತಿ ಶೇಖವ್ವ.

ಏ.. ಏನಾ.. ಎಲ್ಲಿಗ್ ಹೊಂಟಿ..? ನೀರಿಗಿಟ್ಟಿನಿ ನಿಂದ್ರಾ ಮಾರಾಯ, ಬೆಳಕರದ್ರ ಉಗಾದಿ ಐತಿ ಎರಕಂಡು ಹ್ವಾಗವಂತಿ..’ ಎಂದು ಕೂಗಿದ್ರು ಕೇಳದೇ ಇರೋವನ ತರ. “ಮೊನ್ನೆರ ವಾರದ ಕೆಳಗ ಎರಕಂಡಿನಿ ಮತ್ತೆ ಎರಕ.. ಎರಕಾ.. ಅಂತ ಬಡ್ಕೋತಾಳ ಬ್ಯಾವರ್ಸಿ. ‘ನಂದಾ ಹೊಲದಾಗಿಂದ ಬರೋತ್ಗೆ ಫಜೀತಿ ಎದ್ದೊಗೇತಿ..’  ಎಂದು ಸೀದಾ ಬಸ್ಟ್ಯಾಂಡಿನ ಮೂಲೆಯಲ್ಲಿದ್ದ ಕಾಳವ್ವನ ಹೋಟೆಲಿಗೆ ಎಡತಾಕಿದ. ಅಷ್ಟರಲ್ಲಾಗಲೇ ಕೆಲವ್ರು ಜಮಾಯಿಸಿ ಧೂಪಾರಾಧನೆಯ ಜೊತೆಗೆ, ಬೆಂಕಿ ಕಡ್ಡಿ ಗೀರಿ ಬೀಡಿ ಹಚ್ಚುತ್ತಾ ದೀಪಾರಾಧನೆಯನ್ನೂ ಸಹ ಮಾಡುತಿದ್ದರು.! ನಮ್ ಫಜೀತಪ್ಪನಿಗೂ ಧೂಪಾರಾಧನೆ ಮಾಡುವ ಮನಸಾಗಿ. ‘ಯಪ್ಪಾ ಯಪ್ಪಾ,ಎನ್ ಫಜೀತಲೇ ಕೆಂಚಣ್ಣ ನಂದು, ಕಡ್ಡಿ ಪಟ್ಣಕ್ಕೂ ಗತಿ ಇಲ್ದಂಗಾಗೇತಿ ನೋಡು, ಎಲಿ ಒಂದು ಕಡ್ಡಿ ಇದ್ರೆ ಕೊಡು..’  ಎಂದು ಕಿವಿಯಾಗ್ ಸಿಗ್ಸಿದ್ದ ಬೀಡಿ ತೆಗ್ದು ಬಾಯೊಳಗಿಡುತ್ತಾ.. ‘

‘ಯಕ್ಕಾ. ಒಂದು ಇಸ್ಟ್ರಾಂಗು ಟೀ ಹಾಕವಾ ..’ ಅಂದು ಕೆಂಚಣ್ಣನ ಕಡೆ ತಿರುಗಿ..,

‘ಅಲ್ಲಾ ಕೆಂಚಣ್ಣ, ಬೆಳಗಾಸಿಂದ ಅದೇನ್ ಫಜೀತಿ ಅಂತಿ, ಅಂತ ಹೊಗೆ ಬಿಡುತ್ತಾ ಆತನ ಮುಖ ನೋಡಿ, ಗೊಳ್ ಎಂದು ಬಿದ್ದು ಬಿದ್ದು ನಗಲಾರಂಭಿಸಿ., ‘ಅಯ್ಯಾ.. ಯಾಕೋ.. ಯಣ್ಣಾ.. ಏನ್ ಫಜೀತಿ ನಿಂದು..? ಮಖಾ ಹಾಂಗ ಕುಂಬಳಕಾಯಿ ಆಗೇತಲ್ಲ..’ ಅಂದಿದ್ದೇ ತಡ ಕೆಂಚಪ್ಪನಿಗೆ ನಖಶಿಖಾಂತ ಉರಿದೇ ಹೋಯ್ತು. ಅತಿ ಸಿಟ್ಟಿನಿಂದ. ‘ಮೂಳ.. ಹಳೇ ಮೂಳ.., ಊರಾಗೆಲ್ಲ ಗೊತ್ತಿರೋದು ನಿನಿಗೆ ಗೊತ್ತಿಲ್ಲ ಅನ್ನಂಗ ನಾಟ್ಕಾ ಮಾಡ್ತಿ ಏನ್ಲೇ? ಅಂದು ಅಲ್ಲಿಂದ ಸರಾಬರ ಎದ್ದೇ ಹೋದ!

ಇತ್ತ ನಮ್ ಫಜೀತಪ್ಪನಿಗೆ ಏನೂ ಅರ್ಥವಾಗದೇ.. ‘ ಅಯ್ಯಾ ಇವ್ನ.. ನಾ ಎನ್ ಮಾಡಿದೆ ಇವಾಗ..? ಕಷ್ಟ ಕೇಳಿದ್ದೇ ತೆಪ್ಪಾ..? ಎಂದು ಬಡಬಡಿಸ್ತಾ.., ಟೀ ಮಾಡುತ್ತಿದ್ದ ಕಾಳವ್ವನ ಕಡೆ ತಿರುಗಿ.. ‘ಇಲ್ನೋಡು ಯಕಾ. ಖರೇಗಂದ್ರು ಆತುಗಾ ಏನಾಗೇತಿ ಅಂತ ಗೊತ್ತಿಲ್ಲಬೇ. ಹಂಗ ಮಾರಿತಿರಿಕ್ಯಂಡು ಹೊಂಟೇ ಬಿಟ್ಟ ನೋಡು ..’ ಅಂದಿದ್ದಕ್ಕೆ ಕಾಳವ್ವ. ‘ಅಯ್ಯಾ.. ತಮ್ಮಾ ಗೊತ್ತಿಲ್ಲೇನು ನಿಂಗ..?! ಮೊನ್ನಿ ತನ್ನ ಹತ್ತಿ ಹೊಲದಾಗ, ಕಡುಜೀರ್ಗಿ ತಟ್ಟಿ ಇರೋದು ನೋಡಿ, ಹುಳ ಹೊಡಿಯಾಕಂತ ಮಣ್ಣೆoಡಿ ಹಿಡಕಂಡಿದ್ನಂತ.., ಹಾರ್ಯಾಡಿ ಹೊಡಿಯೋ ಟೇಮ್ನ್ಯಾಗ, ಹುಳ ಬಂದು ಮೂಗಿನ್ಮ್ಯಾಗ ಕುಂತತಿ.., ಇದು ಖಬರಿಲ್ಲದ್ದು ಕೈಯಾಗ ಎನ್ಡಿ ಇರೋದು ಮರ್ತು ಅದ್ರಿಲೇ ಹೊಡ್ಕಂಡಾನ.., ಹಿಂಗಾಗೇತಿ ನೋಡು..! 
ಇದ್ರ ಮಖಕ್ಕಾ ಕೈಯಾಗ ಎನ್ಡಿ ಬಂದ್ಲು ಕಲ್ಲಿದ್ದಿದ್ರೆ..! ಯವ್ವಾ..! ಗತಿ ಏನು..?!  ಶಿವಶಿವಾ  ಎಂದು ಮೇಲ್ನೋಡಿ ಕೈ ಮುಗಿತಾ ಫಜೀತಪ್ಪನ ಕೈಗೆ ಟೀ ಲೋಟಾ ಇಟ್ಲು..

‘ಅಯ್ಯೋ ಇವನೌನ.. ಹಿಂಗಾತ ಅದು.. ಏನ್ ಫಜೀತಿ ನೋಡ್ ಯಕ್ಕಾ ಇದು..’ ಎಂದು ಬಿದ್ದು ಬಿದ್ದು ನಗಾಡ್ತಾ ಟೀ ಹೀರತೊಡಗಿದ. ಅಷ್ಟರಲ್ಲಾಗಲೇ ಹೊರಗಡೆಯಿಂದ ಶೇಖವ್ವನ ಕೂಗು. ‘ಬೇ.. ಯಕಾ.. ನಮ್ಮಾತ ಬಂದಾನ ಇತ್ತಾsಗ..? ಅಂದಿದ್ಕೆ.. ಬಂದಾನೇನು ಇಲ್ಲೇ ಅದಾsನ ಬಾ.. ಅಂದ್ಲು ಕಾಳವ್ವ.. ಇತ್ತಾಗ ಶೇಖವ್ವನ ಒಮ್ಮೆಲೆ ನೋಡಿದ ನಮ್ ಫಜೀತಪ್ಪ. ‘ಹೊಗ್ಗಾ.. ಇದ್ರ ಮಂಜ್ಯಾಳಾಗ, ಇಲ್ಗೂ ಬಂತಾ ಇದು..?!! ಅಂತಿದ್ದ ಹಾಗೇನೇ ಒಳ ಬಂದ ಶೇಖವ್ವ. ‘ಅಯ್ಯಾ.. ನಿನ್ನ ಜ್ವಾಕ್ಮಾರ.. ನಾ ಊರು ಸುತ್ತಿ ಹುಡುಕಾಹತ್ತಿನಿ, ನೀ ಇಲ್ಲಿ ಕುಂತಿಯಾ..? ಅಲ್ಲಿ ಹಂಡೆ ನೀರು ಕುದ್ದು ಕುದ್ದು ಚೊಂಬಿನಾಸಾಗ್ಯಾವ ನೀ ಇಲ್ಲಿ ಕಥಿ ಹೊಡಿಯಾಕ್ಹತ್ತಿ..!!

‘ಯಕ್ಕಾ.. ಇದನ್ನ ಕಟಿಗ್ಯoಡಾಗಿಂದ ನಂದು ಇದಾ ಬಾಳು ಆತು ನೋಡೇ ಯವ್ವಾ..’ ನಾಳೆ ಉಗಾದಿ ಐತಿ.., ಎರಕಾ ಬಾsರ ಅಂತ ಸಾರಿ ಸಾರಿ ಹೇಳಿದ್ರು, ತಿರುಸ್ಗೆಂಡು  ಇಲ್ಲಿ ಬಂದು ಕುಂತಾನ ಮೂಳ..’ ಅಂದಿದ್ದನ್ನ ಕೇಳಿ ಕುಂತಲ್ಲೇ ಕುದ್ದು ಹೋದ ನಮ್ ಫಜೀತಪ್ಪ. ‘ಲೇ.… ಶೇಖಿ.. ಬಾಯಿ ಮುಚ್ಚಾ ನಿಮ್ಮೌನ.. ನಿನ್ಕಟ್ಗೆಂಡಾಗಿಂದ ನನ್ ಜೀವ್ನಾನೆ ಫಜೀತೆದ್ದೋತು..! ಅಲ್ಲಾ.. ನಾ ಏನಾರ ದನ ಕಟ್ಟಿನಾ ನನ್ ಮೈಯ್ಯಾಗ..? ಹೋಗ್ಲೇ ಸುಮ್.. ಮತ್ ಏಟಾ ಬೀಳ್ತಾವ್ ನೋಡು..’ ಅಂದಿದ್ಕೆ ಅಲ್ಲೇ ಇದ್ದ ಕಾಳವ್ವ.

‘ಲೇ ತಮ್ಮಾ.. ಅಕ್ಕಾಗಿ ಒಂದು ಮಾತು ಹೇಳ್ತಿನಿ ಕೇಳು.. ಒಂದಲ್ಲಾ.. ಊರಾಗಿನ ಇರೋ ಬರೋ ದನಾ ಕಟ್ಟೋ ದನದೊಡ್ಡಿ ಆದಂಗಾಗಿ ಗಬ್ಬೆದ್ದಿ.. ಹೋಗಿ ಎರಕಾ ಬಾರ್ದಾ ನಿನ್ನಾ.., ಎಂತಾವ ಅದಿಯಾ ಮಾರಾಯ.., ಹೋಗ್ಬಾರ್ದಾ ಎದ್ದು..’ ಅಂದಿದ್ದಕ್ಕೆ. ‘ಊರಾಗ ನನ್ ಮಾರ್ವಾದಿ ತೆಗಿಯಾಕ ಅಂತ ನಿಂತಿ ಅಲ್ಲೇನ್ಲೇ ನೀನು.. ಅದೇನ್ ಎರಿತಿಯೋ ಎರಿ ನಾನು ನೋಡೇ ಬಿಡ್ತೀನಿ..’ ಎಂದು ಎದ್ದು ಹೊರಟೇ ಹೋದ ನಮ್ ಫಜೀತಪ್ಪ. ಮನೆಗೆ ಬರೋ ಹೊತ್ಗೆ.., ಎರಡು ಕೊಳಗ ನೀರು, ಎಣ್ಣೆ,ಲೈಫ್ಬಾಯ್ ಸೋಪು, ಮೈ ತಿಕ್ಕಾಕ್ ಒಂದು ಕಲ್ಲು ಎಲ್ಲಾ ರೆಡಿ ಆಗಿದ್ವು..! 
ನಮ್ ಫಜೀತಪ್ಪ ಬಂದೋನೆ., ಸಲ್ಮಾನ್ ಖಾನ್ ತರ ಅಂಗಿ ಬಿಚ್ಚಿ ಎಸ್ದು ಕುಂತೇ ಬಿಟ್ಟ. ‘ಅಯ್ಯಾ.. ಇದನ್ನ ಮೊದ್ಲೇ ಮಾಡಿದ್ರೆ ಮೂದೇವಿ.. ಸರಿಗ್ ಕುಂದ್ರು..’ಎಂದು ಅಭ್ಯಂಜನ ಶುರು ಮಾಡೇ ಬಿಟ್ಲು ಶೇಖವ್ವ. ನೆತ್ತಿಗೆ ಹರಳೆಣ್ಣೆ ಸುರ್ದು ತಪಾ ತಪಾ ತಟ್ಟೋದನ್ನ ನೋಡಿ. ‘ಮೆಲ್ಕಲೇ.. ಇದಾ ಚಾನ್ಸು ಅಂತ ಹೊಡ್ಕಾಬ್ಯಾಡ..’ ಅಂದಿದ್ದಕ್ಕೆ. ‘ಅಯ್ಯಾ.. ಸುಮ್ ಕುಂದ್ರಾ ಜೋಕ್ಮಾರ.., ಹಂಗ ಮಾಡಾಕ ನಾನೇನ್ ನೀನಾ..’ ಎಂದು ಮತ್ತೆ ತಟ್ಟಲು ಶುರುಮಾಡಿದಳು ಶೇಖವ್ವಾ..!!

ವಾರದಿನೈದು ದಿನ ಎಣ್ಣೆ ಬೆಣ್ಣೆ ಕಾಣದ ನಮ್ ಫಜೀತಪ್ಪ ಕೆಸರಾಗಿನಿಂದ ಎದ್ದು ಬಂದ ಎಮ್ಮಿ ಕಂಡಂಗ ಕಾಣ್ತಿದ್ದ..! ಶೇಖವ್ವ ಎಣ್ಣೆ ಹಚ್ಚಿ, ತಿಕ್ಕಿ ತಿಕ್ಕಿ
 ತಲಿಮ್ಯಾಲೆ ಒಂದುಚೊಂಬು ನೀರಾಕಿದ್ದೇ ತಡ.., ಹಾಯ್ ಎನಿಸಿ ಹಾಗೆ ಕಣ್ಮುಚ್ಚಿ ಕುಳಿತೇ ಬಿಟ್ಟ..! ಇತ್ತ ನಮ್ ಶೇಖವ್ವ ನಾಲ್ಕು ಶ್ಯಾಂಪೂ ಹಾಕಿ ತಲಿ ತಿಕ್ಕಿ ವಾರದ ಕೊಳೆ ತಗ್ದು ಮೊದಲೇ ಹೊಂದಿಸಿ ಕೊಂಡಿದ್ದ ಕಲ್ಲು ತಗೊಂಡು ಗಸಗಸ ಉಜ್ಜಿದ್ರೂ ಫಜೀತಪ್ಪ ಕಮಕ್ ಗಿಮಕ್ ಅನ್ನದೇ ಹಾಗೇ ಕೂತಿದ್ದ..! ಕಡೇದಾಗಿ ಶೇಖವ್ವ.., ಸೋಪು ಹಾಕಿ ಮೈ, ಮಖಾ, ಬೆನ್ನು ತಿಕ್ಕಿ ಫಜೀತಪ್ಪನ ಸ್ನಾನ ಮುಗಿಸಿದಳು..!! ನಂತರ ಜಳಕ ಮಾಡಿದ ಗಂಡನ ತಲಿ ವರ್ಸಿ, ಕ್ರಾಪು ತೀಡಿ.., ತನ್ನ ಗಂಡನ ಮುಖಾ ನೋಡಿ ಒಂದು ಲಟಿಕೆ ತಗ್ದು..,”ಚಲುವ ನನ್ ಗಂಡ” ಎಂದು ಗಲ್ಲ ಹಿಡಿದು ಕೆನ್ನೆಗೆ ಮುತ್ತಿಟ್ಟಳು..!!

ಇದನ್ನೆಲ್ಲಾ ನೋಡಿದ ನಮ್ ಫಜೀತಪ್ಪನ ಕಣ್ತುಂಬಿ ಎದೆಭಾರವಾಗಿ. ‘ಲೇ.. ಶೇಖೀss .. ನೀ ಏನಾರ ಅನ್ನು, ಬಯ್ಯಿ.. ನೀ ನಮ್ಮವ್ವ ಇದ್ದಂಗಲೇ.. ನಾ ಏನಾರ ಬಾಯಿ ಮುಂದ್ಮಾಡಿ ಅಂದ್ರ ಕೆಟ್ಟವ ಅಂತ ನನ್ಮಾತ್ರ ಬಿಟ್ಟೋಗ್ಬ್ಯಾಡ ಯವ್ವಾ..”!! ಎಂದು ಶೇಖವ್ವಳನ್ನು ಭರಸೆಳೆದು ಎದೆಗೊರಗಿಸಿಕೊಂಡ..!! ಇಬ್ಬರ ಮದ್ಯೆ ಮಾತಿಲ್ಲ ಕಥೆ ಇಲ್ಲ.. ಕಣ್ಣಲ್ಲಿ ಮಾತ್ರ ಸಾರ್ಥಕದ ಕಣ್ಣೀರು..!! ಇವರಿಬ್ಬರ ನಿಷ್ಕಲ್ಮಶ ನಿಜದೊಲವ ನೋಡಿ.., ನಾಳೆಯ ಆ ಯುಗಾದಿ ಎಂಬೋ ಯುಗಾದಿಗೂ ಹೊಸತನ ಬಂದಿದ್ದು ಸುಳ್ಳಲ್ಲ..!!

‍ಲೇಖಕರು Admin MM

August 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: