ಸಂಘಮಿತ್ರೆ ನಾಗರಘಟ್ಟ
ತುಂಬಿದ ತಾಯಿ
ಆಸ್ಪತ್ರೆಯ ಹಾಸಿಗೆ ಮೇಲೆ
ಕಂದನ ಬಿಡುಗಡೆಗೊಳಿಸಲು
ಹಾಸಿಗೆಗೆ ಒರಗಿದ್ದ ಮಗ್ಗುಲನು
ಬದಲಿಸುತ್ತಲೇ ಇದ್ದಳು
ಆಗ ಅವಳ ಹಣೆಯಲ್ಲಿ
ಬೆವರು ಸಣ್ಣ ಕಣಿವೆಯ
ತೆರದಿ ಹರಿಯುತ್ತಾ
ಮೆಲ್ಲಗೆ ಗಂಟಾದ ಹುಬ್ಬು-ವಾಲಿದ
ಮೂಗು – ಮತ್ತೆ ಮತ್ತೆ ಬಿಗಿ ಹಿಡಿದ
ತುಟಿಗಳು- ನರಳಿ ನರಳಿ ಒಣಗಿದ
ಗಂಟಲು- ಸೋರುತ್ತಿದ್ದ ಬಿಳಿ
ಹಾಲಿನೆದೆಯ ನಡುವೆ
ನುಸುಳಿ – ಹೊಕ್ಕಳು ಸೇರುವ
ಹೊತ್ತಿಗೆ ಮುಂದಿದ್ದ ವೈದರು
ಇಲ್ಲಿ..! ಉಸಿರು ತಗೋಳಿ!
ಉಸಿರು ಬಿಡಿ.. ಎಂದು
ಥೇಟ್ ಯೋಗಾ ಮಾಸ್ಟರ್
ನಂತೆ ಸೂಚನೆ ನೀಡುತ್ತಲೇ
ಚಿಟಾರ್ ಎಂಬ ಅಮ್….ಮ್ಮ
ಎಂಬ ಕೂಗು ಕೇಳಿತು
ದಣಿದ ಗಲ್ಲದ ತುದಿಗೆ ಕಂದನ
ಮುಖ ಹತ್ತಿರಾದಾಗ ಅದರ
ಹಸಿ ನೆತ್ತರ ಕೂದಲಿನ ಸಣ್ಣ
ಬಿಂದು ಹಣೆಗೆ ತಾಗಿತು
ವಾಡ್೯ ಗೆ ಬಂದ
ಅಬ್ಬೆ ಮಗುವ ನೋಡುವ
ಬದಲು ಸೊಸೆಯ ಹಣೆಯ
ಬಿಂದಿ ಕಾಣೆಯಾಗಿರುವುದ
ಕಂಡು ಎಲ್ಲಿ ತನ್ನ ಕೂಸಿಗೆ
ಅಪಾಯವಿದೆಯೋ ಎಂದು
ವಿಲವಿಲನೇ ಒದ್ದಾಡುತ್ತಾ
ತನ್ನ ಕೈಚೀಲದೊಳಗಿದ್ದ ಗುಡಿಯ
ದೇವಿಯ ಕುಂಕುಮವನ್ನು ಇಡುವುದೇ
ತಡ ಹಸುಗೂಸಿನ ಆ ರಕ್ತವು
ತಾಯ ಹಣೆಗೆ ಹಸುವಿನ
ಕೆಚ್ಚಲಲಿ ಚಿಮ್ಮುವ ನೊರೆ ಹಾಲಿನಂತೆ
ಸಿಡಿದು ಹಡೆದವ್ವ ಮಹಾದಾಯಿಯಾದಳು!!
0 ಪ್ರತಿಕ್ರಿಯೆಗಳು