ಬಶೀರ್ ಬಿ ಎಮ್
ನನ್ನ ತಾಯಿ ತೀರಿ ಹೋದ ಬಳಿಕ ನಾನು ಒಬ್ಬಂಟಿ ಕಣ್ಣೀರು ಹಾಕಿದ್ದು ನಿನ್ನೆ ರಾತ್ರಿ ಮಾತ್ರ.
ಈ ಹಿಂದೆ ಗೌರಿ ಮೇಡಂ ಹುಟ್ಟು ಹಬ್ಬಕ್ಕೆ ಬರೆದ ಕವಿತೆಯೊಂದನ್ನು ಮತ್ತೆ ಹಾಕುತ್ತಿದ್ದೇನೆ. ಗೌರಿ ಮೇಡಂಗೆ ಬಲಿದಾನದ ಶುಭಾಶಯಗಳು
ದಾರಿ ಹೋಕರು ಎಸೆದ ನೂರು
ಕಲ್ಲುಗಳ ತಾಳಿಕೊಂಡು
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ
ಹಣ್ಣು
ಲಂಕೇಶರ ಕನಸುಗಳ
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ
ಕಾವು ಕೊಡುತ್ತಾ
ಎರಗುವ ಹದ್ದುಗಳ ಜೊತೆಗೆ
ಬೀದಿಗಿಳಿದು ಬಡಿದಾಡುತ್ತಾ
ಕೋರ್ಟು ಕಚೇರಿ ಎಂದು ಅಲೆದಾಡುತ್ತ
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ
ಕೆಲವರ ಪಾಲಿಗೆ ಅಕ್ಕ
ಹಲವರ ಪಾಲಿಗೆ ಅವ್ವ
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ
ನೀಲು, ನಿಮ್ಮಿ… ಎಲ್ಲರೊಳಗೂ
ಚೂರು ಚೂರಾಗಿ ನೀವು…
ನಿಮ್ಮೊಳಗೆ ಲಂಕೇಶರು
ಹೊಸದಾಗಿ ಹುಟ್ಟಿದರು
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ
ಸೇದುತ್ತಿದೆ…
ಪ್ರತಿವಾರ ಸುಡು ಕೆಂಡ
ವಿಷ ಹೀರಿದ ನಂಜುಂಡ
ಮಾತಿಲ್ಲದವರ ಪಾಲಿಗೆ
ಪತ್ರಿಕೆಯೇ ನಾಲಗೆ
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ
ನಾಡು, ನುಡಿಯನ್ನು ನೀವು ಮುಟ್ಟಿದ ದಿನ
0 Comments