
ಎನ್ ರವಿಕುಮಾರ್ ಟೆಲೆಕ್ಸ್
6/9/2017 ರಲ್ಲಿ ಬರೆದ ಬರಹ ಮತ್ತೆ ನಿಮ್ಮ ಮುಂದೆ
************
*ನಾನೂ ಗೌರಿ….*
ನನ್ನದೆಗೆ,ಹಣೆಗೆ ಗುಂಡಿಕ್ಕುವ ಮುಂಚೆ ಅದೆಷ್ಟು ಹಸಿದಿದ್ದೋ ಏನೋ?
ನನಗಾಗಿ ಕಾದು ,ಅಲೆದಾಡಿ,ಹಿಂಬಾಲಿಸಿ ಅದೆಷ್ಟು ಬಾಯಾರಿದ್ದೋ ಏನೋ?
ನಿನ್ನ ಸೊಂಟದಲ್ಲಿದ್ದ ಪಿಸ್ತೂಲ್ ನ್ನು ಹೊರ ತೆಗೆಯುವುದು ನನ್ನ ಕಣ್ಣಿಗೆ ಬೀಳದೆ ಇದ್ದಿದ್ದರೆ ಒಳ ಕರೆದು ಫ್ರಿಜ್ ನಲ್ಲಿಟ್ಟಿದ್ದ ಚಪಾತಿಯನ್ನು ಬಿಸಿ ಮಾಡಿ ಕೊಡುತ್ತಿದ್ದೆ.
ಬೆಲ್ಲದ ಜೊತೆ ತಣ್ಣನೆಯ ನೀರು ಕೊಡುತ್ತಿದ್ದೆ. ಅದ್ಯಾರ ಒತ್ತಡವೋ ಏನೋ? ,
ಅದೇನು ಕಷ್ಟ , ಭಾದೆ ನಿನ್ನನ್ನು ನನ್ನ ಕೊಲ್ಲಲು ಅನಿವಾರ್ಯಕ್ಕಿಡು ಮಾಡಿತೋ?
ನನ್ನದೆಗೆ ಗುಂಡಿಕ್ಕುವ ಕ್ಷಣ ಮುಂಚೆ ನನ್ನನ್ನು ಕೊಲ್ಲುವುದರಿಂದ ನಿನ್ನ ಬದುಕು ಸಾರ್ಥಕವಾಗುತ್ತದೆ.
ಕಷ್ಟಗಳು ನೀಗುತ್ತವೆ, ಕುಟುಂಬದ ಬವಣೆ ಇಲ್ಲವಾಗುತ್ತವೆ.

(ಬಯಲುಸೀಮೆ ಕಟ್ಟೆಪುರಾಣ ನಾಟಕದ ಪಾತ್ರಧಾರಿಯಾದ ನನ್ನೊಂದಿಗೆ ಗೌರಕ್ಕ)
ಅಥವಾ
ನನ್ನ ಕೊಲ್ಲುವುದರಿಂದ ನೀನು ಈ ದೇಶದ ಚರಿತ್ರೆಯಲ್ಲಿ ಸಾಮ್ರಾಟನಂತೆ ಚಿರಸ್ಥಾಯಿಯಾಗಿ
ಸಾವಿಲ್ಲದೆ ಸವ್ಯಸಾಚಿಯಾಗಿ ಉಳಿಯುವ ಮಹತ್ವಾಕಾಂಕ್ಷೆ ಇದೆ ಎಂಬುದನ್ನು ಹೇಳಿಬಿಟ್ಟಿದ್ದರೆ ಸಾಕಿತ್ತು.
’ಮರಿ’ ಎಂದು ನಿನ್ನ ಹಣೆಗೊಂದು ಮುತ್ತಿಟ್ಟು
ನಾನೆ ಎದೆಗೊಟ್ಟು ಆ ಪಿಸ್ತೂಲಿನ ಗುಂಡುಗಳನ್ನು ನಗುನಗುತ್ತಾ ಸ್ವಾಗತಿಸುತ್ತಿದ್ದೆ
ಮಗನೊಬ್ಬನಿಂದ ಮುಕ್ತಿ ಪಡೆದ ಧನ್ಯತೆಯಲ್ಲಿ ನಿನ್ನ ತೋಳಲ್ಲೆ ಕಾಲಾವಾಗಿ ಬಿಡುತ್ತಿದ್ದೆ.
ಈಗ ನೋಡು,
ಅದೆಲ್ಲಿ ತಲೆ ಮರೆಸಿಕೊಂಡು ಅಲೆದಾಡುತ್ತಿದ್ದಿಯೋ? ಏನೋ? ಎಂಥೋ?
ಸರಿಯಾಗಿ ತಿಂದ್ಯೋ ,ಇಲ್ಲವೋ?
ಅವರು ನಿನಗೆ ಹೇಳಿ ಕಳುಹಿಸಿದ್ದರಂತೆ ನನ್ನ ಕೊಲ್ಲಲು.!
ನಿನ್ನ ಮೆದುಳಿಗೆ ವಿಷ ಚಿಮುಕಿಸಿರುವುದು ಗೊತ್ತಾಯಿತು.
ನಿನ್ನ ಎಳೆ ಕೈಗಳಿಗೆ ನನ್ನದೆ ರಕ್ತ ಮೆತ್ತಿಕೊಂಡಿದೆ.
ಕಣ್ಣೀರಿನಲ್ಲಿ ತೊಳೆದಿಕೋ.

‘ಅವರು’ ಬಂದು ಗಂಗಾಜಲದಿಂದ ಮಡಿಯಾಗಿಸಿ, ಗೋ ಗವ್ಯಗಳನ್ನು ಕುಡಿಸಿ ,ಹಸ್ತೋದಕ ನೀಡಿ, ಗರಿಕೆ,ತುಳಸಿ ಸುಗಂಧ ಧೂಮಗಳಿಂದ ಪವಿತ್ರಗೊಳಿಸುವವರೆಗೂ ಕಾಯಬೇಡ. ಅವರೆಲ್ಲಾ ಈಗ ದೇವಲೋಕದಲ್ಲಿ ವರದಿ ಒಪ್ಪಿಸುತ್ತಿದ್ದಾರೆ.
ನೋಡು ನೀನೆನೋ ಕೊಂದು ಹೋದೆ. ಮುಂದಿನದ್ದನ್ನು ಅವರು ಮಾಡುತ್ತಿದ್ದಾರೆ.
ಇಲ್ಲೊಬ್ಬ ವಿಷಾತ್ಮ ನನ್ನ ಹೆಣಕ್ಕೆ ಹತ್ತಾರು ಪೆನ್ನುಗಳಿಂದ ಚುಚ್ಚಿ ಚುಚ್ಚಿ ನಗುತ್ತಿದ್ದಾನೆ.
ಹೆಪ್ಪಾದ ರಕ್ತವನ್ನು ಅಕ್ಷರದ ಒಲೆಯಲ್ಲಿ ಉರಿ ಹಾಕಿ ಕುದಿಸಿ
ಕಾಲದಿಂದ ಕಾಯ್ದುಕೊಂಡು ಬಂದ ಕೇಡನ್ನು ತೀರಿಸಿಕೊಳ್ಳುತ್ತಿದ್ದಾನೆ.
ಇಷ್ಟು ದಿನ ಇಲ್ಲೆ ಇದ್ದ ನಗುನಗುತಾ.
ಮತ್ತೊಬ್ಬ ನನಗೆ ತಕ್ಕ ಶಿಕ್ಷೆಯಾಗಿದೆ ಎಂದು ಮೈಕು ಕಟ್ಟಿಕೊಂಡು ತಿರುಗುತ್ತಿದ್ದಾನೆ.
ಪ್ರಧಾನಿಗೆ ಟೈಮಿಲ್ಲ.
ಪ್ರಜೆಯೊಬ್ಬಳು ಕೊಲೆಯಾದ ಸುದ್ದಿಯನ್ನು ಯಾರೂ ತಲುಪಿಸುವ ಧೈರ್ಯ ಮಾಡಿಲ್ಲ.
ಅವರು ಯುದ್ಧ ತಪ್ಪಿಸಿ ಕೋಟ್ಯಾಂತರ ಜನರ ಜೀವ ಉಳಿಸಲು ಗಹನ ಮಾತುಕತೆಯಲ್ಲಿ ತೊಡಗಿದ್ದಾರೆ.
ಇರಲಿ ಬಿಡು, ’ಮನ್ ಕೀ ಬಾತ್’ ನಲ್ಲಿ ನೆನಪು ಮಾಡಿಕೊಳ್ಳಬಹುದು.
ಅದೆಲ್ಲಾ ಹೋಗಲಿ, ಬೆನ್ನ ಹಿಂದೆ ನನ್ನದೆ ರಕ್ತ ಹಂಚಿಕೊಂಡು ಹುಟ್ಟಿದವನೂ ನನ್ನ ಸಾವನ್ನು ವ್ಯಾಪಾರಕ್ಕಿಟ್ಟಂತೆ ಕಾಣುತ್ತಿದೆ. ಛೇ…!!!
ಮರಿ,
ಅದ್ಯಾವ ತಾಯಿ ಹಡೆದ ಮಗನೋ ನೀನು. ನಿನ್ನ ಮೇಲೆ ನನಗೆ ಯಾವ ಕೋಪವೂ ಇಲ್ಲ.
ನಿನ್ನಂತಹವರೇ ಅದೆಷ್ಟೋ ಹುಡುಗರು ಇಂದು ಬಲಿಯಾಗಿದ್ದಾರೆ,ಬಲಿಯಾಗುತ್ತಿದ್ದಾರೆ.
ನಿನ್ನನ್ನು ಈ ಕೃತ್ಯ ಕ್ಕಿಳಿಸಿದವರ ಬಗ್ಗೆಯಷ್ಟೇ ನನ್ನ ಆಜನ್ಮ ತಕರಾರಿತ್ತು ನಿಜ,
ಆದರೆ ಕೊಲ್ಲುವಷ್ಟಲ್ಲ.
ಪುಟ್ಟಾ,
ಓಡಿ, ಓಡಿ ಸುಸ್ತಾಗಿದ್ದೀಯಾ?
ನಿನ್ನನ್ನು ಯಾರೂ ಗುರುತಿಸಿಲ್ಲ. ಬಾ,
ನನ್ನೂರ ಸ್ಕೂಲ್ ಮೈದಾನದಲ್ಲಿ ನನ್ನ ನೆಪದಲ್ಲಿ ಷಾಮಿಯಾನ ಹಾಕಿದ್ದಾರೆ.
ಕಣ್ಣೀರ ಜೊತೆ ನೀರು ,ಅನ್ನದ ಪ್ಯಾಕೇಟುಗಳನ್ನು ಹಂಚುತ್ತಿದ್ದಾರೆ . ತಿಂದು,ಕುಡಿದು ,ನೆರಳಿಗೆ ಒರಗಿ ಆಯಾಸ ತೀರಿಸಿಕೋ.
ನನ್ನನ್ನು ಹಚ್ಚಿಕೊಂಡ ಹುಚ್ಚರು ಹಾಡು ಹೇಳುತ್ತಿದ್ದಾರೆ, ಲಾವಣಿ ಕಟ್ಟಿದ್ದಾರೆ, ತಮಟೆ,ಡೋಲು ಬಾರಿಸುತ್ತಾ, ಘೋಷಣೆ ಹಾಕುತ್ತಿದ್ದಾರೆ. ಹಾಡು ಕೇಳಿಸಿಕೊಂಡು ನಿರಾಳಾಗು. ಮಧ್ಯದಲ್ಲೆ ನಿನ್ನ ಬೈಯ್ಯಲೂ ಬಹುದು. ಕಿವಿಗೊಡ ಬೇಡ!
ಅಲ್ಲೇ ಯಾರಿಂದಲಾದರೂ ಸೆಲ್ ಪೋನ್ ಪಡೆದು ನಿನ್ನ ಹೆತ್ತವಳಿಗೊಂದು ಪೋನ್ ಮಾಡು
ಅವಳು ಅದೆಷ್ಟು ಕೊರಗಿ ಕಾದಿದ್ದಾಳೋ… ?
ಹ್ಹಾ.., ನನ್ನ ಕೊಂದ ವಿಷಯ ಹೇಳಬೇಡ ಅವಳಿಗೆ.
ಅವಳೂ ಒಂದು ಹೆಣ್ಣು..,ತಾಯಿ. ಕಣ್ಣೀರಿಟ್ಟು ಶಾಪವೇನಾದರೂ ನಿನಗೆ ಹಾಕಿ ಬಿಟ್ಟಾಳು….
*ಮರಿ…,
ನಾನೀಗ ಹೂ ಗಳೊಂದಿಗೆ ಮಲಗಿದ್ದೇನೆ.
…..ನಾನು ಗೌರಿ
( ಚಿತ್ರ:)
0 ಪ್ರತಿಕ್ರಿಯೆಗಳು