ಗೌರವ ಸ್ವೀಕರಿಸದೆ ಓಡಿದರಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಹಿಂದುಳಿದ ಮತ್ತು ದುರ್ಬಲ ವರ್ಗಗಳ ಸಮುದಾಯಗಳ ಮಕ್ಕಳ ಆರೋಗ್ಯ, ರಕ್ಷಣೆ, ಶಿಕ್ಷಣದ ಅವಕಾಶಗಳನ್ನು ಖಚಿತ ಪಡಿಸುವ ಕೆಲಸಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಚೈಲ್ಡ್‌ ರಿಲೀಫ್‌ ಅಂಡ್‌ ಯೂ (ಕ್ರೈ) ಸಂಸ್ಥೆ ೧೯೭೯ರಲ್ಲಿ ಆರಂಭವಾಗಿತ್ತು. ಕ್ರೈನಿಂದ ಹಣಕಾಸು ಬೆಂಬಲ ಮತ್ತು ಮಾಹಿತಿ, ಸಂಪರ್ಕ ಜಾಲಗಳ ಸಹಾಯ ಮತ್ತು ತರಬೇತಿ ಪಡೆದು ಹತ್ತಾರು ಸಂಘಸಂಸ್ಥೆಗಳು ಭಾರತದ ವಿವಿಧ ರಾಜ್ಯಗಳಲ್ಲಿ, ಬಹಳ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಸಮುದಾಯಗಳೊಡನೆ ಮಕ್ಕಳ ಹಿತ ಕಾಪಾಡುವ  ಕೆಲಸ ಮಾಡುತ್ತಿದ್ದರು.

ಇಂತಹ ಬೆಂಬಲವನ್ನು ಯಾವ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ನೀಡಬೇಕು ಎಂದು ಗುರುತಿಸುವುದು, ಅಂತಹವರಿಗೆ ಹಣಕಾಸು ಬೆಂಬಲ ನೀಡಲು ಕ್ರೈಗೆ ಸಲಹೆ ನೀಡುವುದು, ಅಷ್ಟೇ ಅಲ್ಲ, ಈ ಸಂಸ್ಥೆಗಳು ನಡೆಸುತ್ತಿರುವ ಕೆಲಸಗಳ ಉಸ್ತುವಾರಿ ಮಾಡಿ ವರದಿ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ನನ್ನೊಡನೆ ಡಾ. ಮಹೇಂದ್ರ ರಾಜನ್‌, ಪ್ರಕಾಶ್‌ ಕಾಮತ್‌, ವಿನತೆ ಶರ್ಮಾ, ವಿಕ್ಟರ್‌ ಟಾರೋ ಮತ್ತು ಅರುಣ್‌ ಸೆರಾವ್‌ ಮತ್ತಿತರರ ತಂಡ ವಿವಿಧ ಕಾಲಘಟ್ಟಗಳಲ್ಲಿತ್ತು.

ವರ್ಷದುದ್ದಕ್ಕೂ ನಾವು ಕರ್ನಾಟಕ, ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸುತ್ತುತ್ತಿದ್ದೆವು. ಎರಡೂ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ, ಮಳೆ ಮತ್ತು ಚಳಿಗಾಲಗಳಲ್ಲಿ, ವಿವಿಧ ರಾಜಕೀಯ ಹವಾಮಾನದ ದಿನಗಳಲ್ಲಿ ಜನರ ಬದುಕು ಬವಣೆ ಹೇಗಿರುತ್ತದೆ ಎಂದು ಸಾಕಷ್ಟು ತಿಳಿದಿದ್ದೆವು. ಸ್ವಯಂಸೇವಾ ಸಂಘಟನೆಗಳೊಡನೆ, ಸರ್ಕಾರದ ಪ್ರತಿನಿಧಿಗಳೊಡನೆ ಮಾತುಕತೆ, ಸಮುದಾಯದ ಜನರೊಂದಿಗೆ ಸಮಾಲೋಚನೆಗಳು, ಮಕ್ಕಳಿಗಾಗಿ ಸೇವೆ ಸೌಲಭ್ಯಗಳನ್ನು ಒದಗಿಸುವವರೊಡನೆ ಚರ್ಚೆ, ಸಂಪರ್ಕ ಜಾಲಗಳ ನಿರ್ಮಾಣ, ಆ ಮೂಲಕ ಮಕ್ಕಳ ಪರವಾದ ಕೆಲಸಗಳಲ್ಲಿನ ಗುಣಮಟ್ಟ ಉತ್ತಮಗೊಳಿಸಲು ವಕೀಲಿ, ಒತ್ತಡ ಹೀಗೆ ಹತ್ತು ಹಲವು ಕೆಲಸಗಳು.

ಇಂತಹದೊಂದು ಭೇಟಿಯ ಸಮಯದಲ್ಲಿ ಅಲ್ಲಿ ಇಲ್ಲಿ ಕೇಳಿದ್ದ ಒಂದು ಅಚ್ಚರಿಯ ಸಂಗತಿ ಮುಖಾಮುಖಿಯಾಗಿತ್ತು (೧೯೯೬-೯೭).

ಅವಿಭಜಿತ ಆಂಧ್ರಪ್ರದೇಶದ ತೆನಾಲಿಗೆ ಅದು ನನ್ನ ಎರಡನೇ ಭೇಟಿ. ತೆನಾಲಿಯಲ್ಲಿ ನಮ್ಮ ಜೊತೆಗಾರ ರಾಮಕೃಷ್ಣ. (ತನ್ನ ಯೋಜನೆಗೆ ಸಹಾಯ ನೀಡಿ ಎಂದು ಫೆಲೋಷಿಪ್‌ಗಾಗಿ ಕೇಳಿಕೊಂಡು ತೆನಾಲಿಯಿಂದ ಈತ ಪತ್ರ ಬರೆದಿದ್ದಾಗ ಕ್ರೈ ಕಛೇರಿಯಲ್ಲಿ ನಾವೆಲ್ಲಾ ಚಕಿತರಾಗಿದ್ದೆವು. ಕತೆಗಳಲ್ಲಿ ಓದಿದ್ದ ತೆನಾಲಿ ರಾಮಕೃಷ್ಣ ಈಗ ನಿಜವಾಗಿ ನಮಗೆ ಪತ್ರ ಬರೆದಿದ್ದಾರೆ! ಆತ ಕೊಟ್ಟಿದ್ದ ಯೋಜನೆಯನ್ನು ನೋಡುವುದಕ್ಕಿಂತಲೂ ಈ ‘ನವ’ ತೆನಾಲಿ ರಾಮಕೃಷ್ಣನನ್ನು ಭೇಟಿ ಮಾಡುವುದೇ ನಮಗೆ ಮುಖ್ಯವಾಗಿಬಿಟ್ಟಿತ್ತು.) ರಾಮಕೃಷ್ಣ ತನ್ನೂರಿನ ಸುತ್ತಮುತ್ತಲಲ್ಲಿನ ಹಳ್ಳಿಗಳಲ್ಲಿ ಹಿಂದುಳಿದ ಜಾತಿ ವರ್ಗಗಳ ಕುಟುಂಬಗಳ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಕನಸು ಕಟ್ಟಿಕೊಂಡಿದ್ದರು.

ತೆನಾಲಿಯಲ್ಲಿ ರಾಮಕೃಷ್ಣನವರ ಮನೆಯ ವಿಳಾಸ ಈಗಲೂ ನನ್ನ ಮನಸ್ಸಿನಲ್ಲಿದೆ, ‘between two gates’. ಮೊದಲು ಅದೇನೆಂದು ತಿಳಿದಿರಲಿಲ್ಲ. ಆತನೊಡನೆ ನಡೆಸಿದ ಸಂದರ್ಶನದಲ್ಲಿ ಬಂದಿದ್ದ ಒಂದು ಪ್ರಮುಖ ವಿಚಾರ ‘ಇದೇನಿದು ಎರಡು ಗೇಟುಗಳ ಮಧ್ಯ?’ ಆತನ ಮನೆ, ಕಛೇರಿ ತೆನಾಲಿಯ ರೈಲ್ವೆ ಜಂಕ್ಷನ್‌ ಬಳಿ ಇದ್ದು, ಅಲ್ಲಿ ರೈಲ್ವೆ ಹಳಿಗಳು ಇಬ್ಭಾಗವಾಗಿ ಎರಡು ವಿಭಿನ್ನ ದಿಕ್ಕಿನತ್ತ ಹೊರಡುತ್ತವೆ. ಮಧ್ಯದಲ್ಲಿ ವಿಶಾಲ ಪ್ರದೇಶ. ಮೊದಲಿಂದಲೂ ಅಲ್ಲಿ ಜನವಸತಿ ಇತ್ತು. ರೈಲ್ವೆ ಹಳಿಗಳು ರಸ್ತೆಯ ಮೇಲೆ ಹಾದು ಹೋಗುವ ಎರಡೂ ಕಡೆ ರಸ್ತೆಗಡ್ಡವಾಗಿ ದೊಡ್ಡ ದೊಡ್ಡ ಗೇಟ್‌ಗಳು. ಮಧ್ಯದಲ್ಲಿ ಮನೆಗಳು ಇವೆ. ಚರ್ಚು, ದೇವಸ್ಥಾನ, ಅಂಗಡಿ, ಆಸ್ಪತ್ರೆ, ಶಾಲೆ, ಎಲ್ಲವೂ. ಹೀಗಾಗಿ ‘ಎರಡು ಗೇಟ್‌ಗಳ ನಡುವೆ’ ಎನ್ನುವ ವಿಳಾಸ ಅಲ್ಲಿನವರಿಗೆಲ್ಲಾ ಸುಪರಿಚಿತ!

ಈ ಉಪಕತೆಯನ್ನು ನಾವು ಗೆಳೆಯರು ಭೇಟಿಯಾದಾಗ ಈಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ.

ಈ ರಾಮಕೃಷ್ಣನೊಡನೆ ಅವರ ಕಾರ್ಯಕ್ಷೇತ್ರಗಳನ್ನು ನೋಡಲೆಂದು ಬಾಡಿಗೆ ಜೀಪು ಮಾಡಿಕೊಂಡು ನಾನು ಮತ್ತು ಡಾ. ಮಹೇಂದ್ರ ಹೊರಟಿದ್ದೆವು. ಸುಮಾರು ಇಪ್ಪತ್ತೈದು ಮೂವತ್ತು ಕಿಲೋಮೀಟರ್‌ ದೂರ ಹಳ್ಳಿಗಳ ಹಾದಿಯಲ್ಲಿ ಸುತ್ತಿ ಸುತ್ತಿ ಐದಾರು ಹಳ್ಳಿಗಳ ಸಮುದಾಯಗಳಲ್ಲಿ ರಾಮಕೃಷ್ಣ ಮತ್ತವರ ಸಂಗಡಿಗರ ಕೆಲಸಗಳ ಪರಿಚಯ ನಡೆದಿತ್ತು.

ಹಿಂದುಳಿದ ಜಾತಿ ಜನಾಂಗಗಳ ಕುಟುಂಬಗಳ ಮಕ್ಕಳನ್ನು ಶಾಲೆಗೆ ತರುವ ಸಾಹಸ, ಅಂತಹ ಕೆಲಸಗಳನ್ನು ಹತ್ತಿರದಿಂದ ಕಂಡವರಿಗೆ, ಮಾಡಿದವರಿಗೆ ಬೇಗ ಅರ್ಥವಾಗುತ್ತದೆ. ಎಷ್ಟೋ ಪೋಷಕರು ೧೯೯೦ರ ದಶಕದ ಕೊನೆಯಲ್ಲೂ ಕೇಳುತ್ತಿದ್ದುದು ‘ನಮಗ್ಯಾಕೆ ತೊಂದರೆ ಕೊಡ್ತೀರಿ? ಬೇಕಾದ್ರೆ ಮಕ್ಕಳು ಬಡಿಗೆ (ಶಾಲೆಗೆ) ಬರ್ತಾರೆ. ಇಲ್ದಿದ್ರೆ ಇಲ್ಲ’. ಅದೂ ನಿಜವೆ, ಸರಿ ಎನ್ನಿಸಬಹುದಾದಷ್ಟು ಸಹಜವಾದ ವಾದ! ಜೊತೆಗೆ ಬಹಳ ದಟ್ಟವಾಗಿ ಹರಡಿಕೊಂಡಿದ್ದ ಜೀತಪದ್ಧತಿ. ಬೇರೆ ಬೇರೆ ಹೆಸರಿನಲ್ಲಿ ಮಕ್ಕಳನ್ನು ದುಡಿಮೆಗೆ ತೆಗೆದುಕೊಳ್ಳುವವರು, ದುಡಿಮೆಗೆ ದೂಡುವವರು, ಇಷ್ಟರ ನಡುವೆಯೂ ಸರ್ಕಾರದಿಂದ ನೂರಾರು ಶಾಲೆಗಳು, ಅಲ್ಲೆಲ್ಲಾ ಶಿಕ್ಷಕರು. ಇಷ್ಟೇ ಅಲ್ಲ ಸರ್ಕಾರೇತರರ ಶಾಲೆ ನಡೆಸುವ ಭಾರೀ ಭರಾಟೆ, ಪೈಪೋಟಿ. 

ಸರ್ಕಾರೀ ಶಾಲೆಗಳಿಗೆ ಮಕ್ಕಳು ‘ಬರುವುದಿಲ್ಲ ಎಂಬುದಲ್ಲ’, ಶಾಲೆಗಳೇ ತಮ್ಮ ಸ್ಥಿತಿಗತಿ, ಶಿಕ್ಷಕ ವರ್ಗದ ಮನೋಭಾವದಿಂದ ‘ಶಾಲೆಗೆ ಬರಬೇಡಿ’ ಎಂದು ಹೊರದೂಡುತ್ತವೆ ಎಂದು ಎಂ.ವಿ. ಫೌಂಡೇಶನ್ನಿನ ಡಾ. ಶಾಂತಾ ಸಿನ್ಹಾ ಅವರು ಹೇಳುತ್ತಿದ್ದ ಮಾತು ಅಕ್ಷರಸಃ ವಾಸ್ತವವಾಗಿರುವ ವಾತಾವರಣ.

ಆ ಪಾಟಿ ಸರ್ಕಾರೀ ಶಾಲೆಗಳಿರುವಾಗ ಸರ್ಕಾರೇತರರ ಶಾಲೆಗಳು ಏಕೆ ಬೇಕು? ಇದು ಬಹಳ ಸಹಜವಾದ ಪ್ರಶ್ನೆ.

ಶಾಲೆಗೆ ಬರುವುದಿಲ್ಲ, ಕಳುಹಿಸುವುದಿಲ್ಲ ಎಂದು ನಿಲ್ಲುವ ಸಮುದಾಯಗಳ ಮಧ್ಯೆಯೂ ಸರ್ಕಾರೇತರ ಶಾಲೆಗಳಲ್ಲಿ ಕಿಕ್ಕಿರಿದಿರುವ ಮಕ್ಕಳು. ಸರ್ಕಾರೀ ಶಾಲೆಗಳಲ್ಲಿ ಅಷ್ಟೇನೂ ಮಕ್ಕಳ ಸಾಂದ್ರತೆ ಇರುತ್ತಿರಲಿಲ್ಲ!

ನಮ್ಮ ಮೊದಲ ಭೇಟಿಯಲ್ಲಿ ಆಂಧ್ರಪ್ರದೇಶದ ಈ ‘ವೈಶಿಷ್ಟ್ಯ’ ದ ಬಗ್ಗೆ ನಮ್ಮ ಸಹವರ್ತಿ ಸಂಸ್ಥೆಗಳ ಗೆಳೆಯರು ಹೇಳುತ್ತಿದ್ದಾಗ ನಮಗೆ ಅಷ್ಟು ಸ್ಪಷ್ಟವಾಗಿ ಅರ್ಥವಾಗುತ್ತಿರಲೇ ಇಲ್ಲ. ನಿಧಾನವಾಗಿ ಒಂದಷ್ಟು ಕ್ಷೇತ್ರ ಭೇಟಿಗಳು, ಸಮಾಲೋಚನೆಗಳಾದಾಗ ಸ್ಪಷ್ಟ ಚಿತ್ರಣ ಸಿಗತೊಡಗಿತ್ತು. 

ಬಹುತೇಕ ಸರ್ಕಾರೀ ಶಾಲೆಗಳಿಗೆ ಒಬ್ಬರೇ ಶಿಕ್ಷಕರು (ಪಂತುಲು). ಬಹುತೇಕ ಕಡೆಗಳಲ್ಲಿ ಈ ಪಂತುಲು ಶಾಲೆಗಳಿಗೆ ಹೋಗುತ್ತಲೇ ಇರಲಿಲ್ಲ. ಅವರು ನಡೆಸಬೇಕಿದ್ದ ಶಾಲೆಗಳು ಸದಾ ಮುಚ್ಚಿರುತ್ತಿದ್ದವು. ಯಾವಾಗಲಾದರೊಮ್ಮೆ ಅವರು ಶಾಲೆಗೆ ಬಂದು ಎಲ್ಲ ದಾಖಲೆಗಳನ್ನು ಸರಿ ಮಾಡಿಕೊಂಡು ಹೋಗುತ್ತಿದ್ದರು! ಕೆಲವು ಶಿಕ್ಷಕರು ವಾರದಲ್ಲಿ ನಿರ್ದಿಷ್ಟ ದಿನಗಳಲ್ಲಿ ಹಾಜರು. ಕೆಲವರು ತಮ್ಮ ಬದಲಿಗೆ ಬೇರೆ ಯಾರನ್ನೋ ತಾತ್ಕಾಲಿಕವಾಗಿ ನೇಮಿಸಿಕೊಂಡಿರುತ್ತಿದ್ದರು. ಈ ತಾತ್ಕಾಲಿಕ ಜನ (ಚಿನ್ನ ಪಂತುಲು) ಶಾಲೆ ನಡೆಸುತ್ತಿದ್ದರು! ಇದೊಂದು ರೀತಿಯ ಎಲ್ಲರಿಗೂ ತಿಳಿದಿರುವ ರಹಸ್ಯ. ನಮಗೆ ತಿಳಿದಿರಲಿಲ್ಲ ಅಷ್ಟೆ.

***

ರಾಮಕೃಷ್ಣರೊಡನೆ ಕ್ಷೇತ್ರಭೇಟಿಯ ಜೀಪು ಪ್ರಯಾಣ ನಡೆದಿತ್ತು. ಮಧ್ಯಾಹ್ನದ ಊಟದ ಬಿಡುವು ತೆಗೆದುಕೊಳ್ಳದೆ ನಾವು ಭೇಟಿಗಳನ್ನು ಮುಗಿಸಿಯೇ ಬಿಡುವುದೆಂದು ನಡೆದಿದ್ದೆವು. ಊಟಕ್ಕೆ ತೆನಾಲಿಗೆ ಹಿಂದಿರುಗುವುದು ಎಂಬ ಮಾತಾಗಿತ್ತು. ಸರಿ ಎಲ್ಲ ಭೇಟಿಗಳ ನಂತರ ಜೀಪು ಹಿಂದಕ್ಕೆ ಹೊರಟಿತು. ಮುಖ್ಯ ರಸ್ತೆಯಲ್ಲಿ ವಾಹನ ಓಡುತ್ತಿತ್ತು. ಇನ್ನೇನು ತೆನಾಲಿ ಸುಮಾರು ಹತ್ತೋ ಹನ್ನೆರೆಡೋ ಕಿಲೋಮೀಟರ್‌ ದೂರವಿದೆ ಎನ್ನುವಾಗ ಜೀಪು ಚಾಲಕ ಕೇಳಿದ, ‘ವಾಪಸ್‌ ತೆನಾಲಿಗೆ ತಾನೆ?ʼ ಹೌದು. ‘ಹಾಗಾದರೆ ಇಲ್ಲೊಂದು ಸ್ವಲ್ಪ ಒಳಗೆ ಒಂದು ಹಳ್ಳಿಗೆ ಹೋಗಿ ಬರಬಹುದಲ್ಲ?’ ಯಾಕೆ? ‘ನನ್ನ ತಮ್ಮ ಇದ್ದಾನೆ. ಹೇಗೂ ಬಂದಿದ್ದೀನಲ್ಲ, ಕರ್ಕೊಂಡು ಹೋಗಬಹುದಲ್ಲ…’ ಆಯ್ತು.

ಜೀಪು ಮುಖ್ಯ ರಸ್ತೆ ಬಿಟ್ಟು ಯಾವುದೋ ಹಳ್ಳಿಯತ್ತ ನಡೆಯಿತು. ಒಂದು ಕಡೆ ಜೀಪು ನಿಂತಿತು. ಇವನು ಜೋರಾಗಿ ಹಾರ್ನ್‌ ಮಾಡಿದ. ಕೆಲ ಕ್ಷಣಗಳಲ್ಲೇ ‘ಓ ಬಂದʼ ಎಂದ ಚಾಲಕ. ನಮಗೇನೂ ಗೊತ್ತಾಗಲಿಲ್ಲ. ಏನು ಎಂದು ಕೇಳಿದಾಗ ತೋರಿಸಿದ. ರಸ್ತೆಯಿಂದ ಸಾಕಷ್ಟು ದೂರದಲ್ಲಿ ಒಂದು ದಿಣ್ಣೆ. ಆ ದಿಣ್ಣೆಯ ಮೇಲೊಂದು ಚಿಕ್ಕ ಕಟ್ಟಡ. ಅದರ ಮುಂದೆ ಬಾಗಿಲಿಗೆ ಬಂದ ಒಬ್ಬ ವ್ಯಕ್ತಿ ಕೈಯಾಡಿಸುತ್ತಿದ್ದ. ಅವನ ಕೈನಲ್ಲಿ ಒಂದು ಪುಸ್ತಕ ಇರುವುದು ಕಾಣುತ್ತಿತ್ತು. ಚಾಲಕನೂ ಕೈಯಾಡಿಸುತ್ತಿದ್ದ. ಮುಂದಿನ ಕೆಲವು ಕ್ಷಣಗಳಲ್ಲಿ ಲಾಂಗ್‌ಬೆಲ್‌. ಒಂದಷ್ಟು ಮಕ್ಕಳು ಓ ಎಂದು ಕೂಗಿಕೊಂಡು ಹೊರ ಬಂದರು. ಆ ವ್ಯಕ್ತಿಯು ಬಾಗಿಲು ಮುಚ್ಚಿ ಬೀಗ ಜಡಿದು ಓಡುತ್ತಾ ಬಂದು ಜೀಪ್‌ ಹಿಂದೆ ಹತ್ತಿದ. ಜೀಪ್‌ ಹೊರಟಿತು.

ಏನಾಗುತ್ತಿದೆ? ಅರ್ಥವಾಯಿತು. ಅದು ಶಾಲೆ. ಈತ ಶಿಕ್ಷಕ. ಶಾಲೆಯ ಸಮಯ ಇನ್ನೂ ಮುಗಿದಿಲ್ಲ. ಇವ ಹೀಗೆ ಬಂದನಲ್ಲಾ?

ಪ್ರಶ್ನೆ ಉತ್ತರಗಳು ಮುಂದಿನ ದಾರಿಯ ಮಾತುಕತೆಗೆ ಸರಕಾಯಿತು.

ಈ ಮನುಷ್ಯನೂ ಒಬ್ಬ ಚಿನ್ನ ಪಂತುಲು! ಇವನ ನಿಜ ಪಂತುಲು ತೆನಾಲಿಯಲ್ಲೇ ಇರುತ್ತಾರೆ. ಅವರು ಒಂದು ‘ಪ್ರೈವೇಟ್‌ ಶಾಲೆ’ ನಡೆಸುತ್ತಾರೆ. ಈ ಹುಡುಗ ಆಗ್ಗೆ ಪೀಯೂಸಿ ಮಟ್ಟದವರೆಗೂ ಓದಿರುವವನು. ಅವನಿಗೆ ನಿಜ ಪಂತುಲು ಒಂದಷ್ಟು ಹಣ ಕೊಡ್ತಾರೆ. ಅವರು ನಿಜವಾದ ಸಂಬಳವನ್ನು ಪಡೆಯುತ್ತಾರೆ. ಈ ಡ್ರೈವರ್‌ ಅಣ್ಣ ಯಾವಾಗಲಾದರೂ ಈ ರಸ್ತೆಗೆ ಬಂದಾಗ ಹೀಗೆ ಹಾರ್ನ್‌ ಹೊಡೆದು ಬೇಗ ಕರೆದುಕೊಂಡು ಹೋಗುವ ಭಾಗ್ಯ ಈ ಚಿನ್ನ ಪಂತುಲುವಿಗೆ ಸಿಗುತ್ತದೆ. ಮಕ್ಕಳು ಮನೆಗೆ ಬೇಗ ಓಡಲು ಅವಕಾಶ.

ಹಾಗೇ ಮಾತಿನಲ್ಲಿ ತಿಳಿದಿದ್ದು ‘ನಿಜ ಪಂತಲು/ ಟೀಚರ್‌’ಗಳಲ್ಲಿ ಅನೇಕರು ಬೇರೆ ಕೆಲಸಗಳಲ್ಲಿ ನಿರತರು. ಕೆಲವರು ಯೂನಿಯನ್‌ ಲೀಡರ್‌ಗಳು. ಅನೇಕರು ಕೃಷಿ, ಹೈನುಗಾರಿಕೆ ನಡೆಸುತ್ತಾರೆ. ಅಂಗಡಿಗಳಿವೆ. ಕೆಲವರು ಸಾಲ ಕೊಡುತ್ತಾರೆ. ಬಡ್ಡಿ ವಸೂಲು ಮಾಡುವುದೇ ಅವರಿಗೆ ದೊಡ್ಡ ಕೆಲಸ. ಇನ್ನೊಂದಷ್ಟು ಜನ ಸದಾ ಕಾಲ ರಾಜಕಾರಣಿಗಳ ಹಿಂದೆ ಸುತ್ತುತ್ತಿರುತ್ತಾರೆ.  ಈ ಹುಡುಗನ ನಿಜ ಪಂತುಲುವಿನಂತೆಯೇ ಅನೇಕರು ವಿವಿಧೆಡೆ ತಮ್ಮದೇ ಶಾಲೆಗಳನ್ನು, ಹಾಸ್ಟೆಲ್‌/ವಸತಿ ಶಾಲೆಗಳನ್ನು, ಟ್ಯೂಷನ್‌ ಸ್ಕೂಲ್‌ಗಳನ್ನು ನಡೆಸುತ್ತಾರೆ. ಅವರೆಲ್ಲಾ ತುಂಬಾ ಬಿಝಿ!

ಈಗ ನಮಗೆ ಮಾತಿಗೆ ಸಿಕ್ಕ ಹುಡುಗನಂತೆ ಒಂದಷ್ಟು ಜನರಿಗೆ ಉದ್ಯೋಗಾವಕಾಶ…

***

ಇಷ್ಟೆಲ್ಲಾ ಪೀಠಿಕೆ, ನಮ್ಮ ಮತ್ತು ರಾಮಕೃಷ್ಣನ ನಡುವೆ ನಂತರ ನಡೆದ ಸಮಾಲೋಚನೆ ಮತ್ತು ಯೋಜನೆ ವಿವರಿಸಲೇ ಆಗಿದೆ. ಈ ಸರ್ಕಾರೀ ಶಿಕ್ಷಕರನ್ನು ಬಡಿ (ಶಾಲೆ)ಗೆ ತರುವುದು ಹೇಗೆ? ಎಷ್ಟೋ ಕಡೆ ತಮ್ಮ ಶಾಲೆಯ ಶಿಕ್ಷಕರಾರು ಎನ್ನುವುದೇ ಅನೇಕ ಪೋಷಕರಿಗೆ ಗೊತ್ತಿರಲಿಲ್ಲ. ರಾಮಕೃಷ್ಣನ ಮನೆ/ಕಛೇರಿಯಲ್ಲಿ ಕುಳಿತು ಮಾತು ಆಡಿ ಆಡಿ ನಾವೆಲ್ಲಾ ಸೇರಿ ಒಂದು ಯೋಜನೆ ಸಿದ್ಧಪಡಿಸಿದೆವು.

ಮೊದಲು ತನ್ನ ಕಾರ್ಯಕ್ಷೇತ್ರದ ಹಳ್ಳಿಗಳಲ್ಲಿ ಎಲ್ಲೆಲ್ಲಿ ಸರ್ಕಾರಿ ಶಾಲೆಗಳು ಇವೆ ಎಂದು ರಾಮಕೃಷ್ಣ ಗುರುತಿಸುವ ಕೆಲಸವಾಗಬೇಕು. (ಅಂದರೆ ಮ್ಯಾಪಿಂಗ್‌ ಕೆಲಸ). ಆ ಶಾಲೆಗಳ ಕೋಡ್‌ ನಂಬರ್‌, ಹಳ್ಳಿ ಹೆಸರು ಹಿಡಿದುಕೊಂಡು ಆಯಾ ಮಂಡಲದಲ್ಲಿರುವ (ನಮ್ಮ ಗ್ರಾಮ ಪಂಚಾಯತಿ, ತಾಲೂಕು ಎನ್ನಬಹುದಾದ ವಿಭಾಗ) ಶಿಕ್ಷಣ ಇಲಾಖೆಯ ಕಛೇರಿಗಳಿಗೆ ಹೋಗಿ ಆತ ಗುರುತಿಸಿರುವ ಶಾಲೆಗಳ ಶಿಕ್ಷಕರು ಯಾರು ಯಾರು ಎಂದು ಅವರ ಪೂರ್ಣ ಹೆಸರು, ಅವರ ಮನೆಯ ವಿಳಾಸ ಪಡೆದುಕೊಳ್ಳಬೇಕು. ನಂತರ ಒಂದು ಕರಪತ್ರ ಸಿದ್ಧಪಡಿಸಬೇಕು. ಅದರ ಪಠ್ಯ ಈ ಮುಂದಿನಂತೆ:

‘ನಮ್ಮ ಮಕ್ಕಳಿಗೆ ವಿದ್ಯೆ ನೀಡುತ್ತಿರುವ ಶಿಕ್ಷಕರಿಗೆ ಅಭಿನಂದನೆಗಳು.’

ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಇದಕ್ಕಾಗಿ ನಮ್ಮ ಶಿಕ್ಷಕರು ನೀಡುತ್ತಿರುವ ಸೇವೆಯನ್ನು ನಾವು ಗೌರವಿಸುತ್ತೇವೆ. 

ಸಮುದಾಯದ ಜನರೇ ನಿಮ್ಮ ಶಾಲೆಯ ಶಿಕ್ಷಕರ ಬಗ್ಗೆ ತಿಳಿದುಕೊಳ್ಳಿ. ನಿಮಗೆ ತಿಳಿದಿಲ್ಲದಿದ್ದರೆ ಈ ಪತ್ರದೊಂದಿಗೆ ಇರುವ ಪಟ್ಟಿಯನ್ನು ಗಮನಿಸಿ. ಅವರನ್ನು ಶಾಲೆಯಲ್ಲಿ ಭೇಟಿ ಮಾಡಿ ನಿಮ್ಮ ಗೌರವ ಸಲ್ಲಿಸಿ. ನಿಮಗೆ ಅವರು ಶಾಲೆಯಲ್ಲಿ ಸಿಗದಿದ್ದರೆ ಶಿಕ್ಷಣ ಇಲಾಖೆಯ ಮಂಡಲ ಕಛೇರಿಯ ವಿಳಾಸವನ್ನು ನೀಡಿದ್ದೇವೆ. ಅಲ್ಲಿ ನಿಮ್ಮ ಶಿಕ್ಷಕರ ಅಧಿಕಾರಿಗಳನ್ನು ಭೇಟಿ ಮಾಡಿ ಶಿಕ್ಷಕರ ಬಗ್ಗೆ ತಿಳಿದು ಹೋಗಿ ಗೌರವಿಸಿ. ಅವರು ಮಂಡಲ ಕಛೇರಿಯಲ್ಲೂ ಸಿಗದಿದ್ದರೆ ಸಾಧ್ಯವಾದರೆ ನಿಮ್ಮ ಶಿಕ್ಷಕರನ್ನು ಅವರ ಮನೆಯ ವಿಳಾಸದಲ್ಲಿ ಭೇಟಿಯಾಗಿ ಗೌರವಿಸಿ. ವಿಳಾಸದ ಪಟ್ಟಿ ನೀಡಲಾಗಿದೆ.’  

ಜೊತೆಗೆ ಆಯಾ ಮಂಡಲದ ಸರ್ಕಾರೀ ಶಿಕ್ಷಕ ಶಿಕ್ಷಕಿಯರ ಹೆಸರು, ಅವರ ಶಾಲೆ, ಮತ್ತು ಮನೆಯ ವಿಳಾಸ.

ಆಗಿನ್ನೂ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಬಂದಿರಲಿಲ್ಲ. ಆದರೆ ಆ ಹಕ್ಕನ್ನು ಕುರಿತು ಸರ್ವೋಚ್ಚ ನ್ಯಾಯಾಲಯ ೧೯೯೨ರಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತು ಜೆ.ಪಿ.ಉನ್ನಿಕೃಷ್ಣನ್‌ ನಡುವಿನ ವ್ಯಾಜ್ಯವನ್ನು ವಿಶ್ಲೇಷಿಸಿ ‘ಸಂವಿಧಾನದ ಪರಿಚ್ಛೇದ ೨೧ರಂತೆ ಬದುಕುವ ಹಕ್ಕು ಇದೆ ಎಂದಾದರೆ, ಅದರಲ್ಲಿ ಅಡಕವಾಗಿಯೇ ಎಲ್ಲ ೧೪ ವರ್ಷದೊಳಗಿನ ಮಕ್ಕಳಿಗೆ ಗುಣಮಟ್ಟದ ಮತ್ತು ಉಚಿತ ಪ್ರಾಥಮಿಕ ಶಿಕ್ಷಣದ ಹಕ್ಕು ಇದೆ’ ಎಂದು ತೀರ್ಪಿತ್ತಿತ್ತು. ಅದರಲ್ಲಿ ಒಂದು ಪ್ರಮುಖ ಅಂಶ ಸರ್ಕಾರವು ಎಲ್ಲ ಜನಸಮುದಾಯಗಳ ನಡುವೆ ಶಾಲೆಗಳನ್ನು ಸ್ಥಾಪಿಸಿ, ಅಲ್ಲಿಗೆಲ್ಲಾ ಸರ್ಕಾರಗಳು ಅರ್ಹ ತರಬೇತಿ, ಶಿಕ್ಷಣ ಪಡೆದಿರುವ ಶಿಕ್ಷಕರನ್ನು ನೇಮಿಸಬೇಕು ಎಂಬುದು.  

ಇದನ್ನೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೨೮ ಮತ್ತು ೨೯ ಸ್ಪಷ್ಟಪಡಿಸಿರುವುದು – ‘ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಕ್ಕು ಆಗಬೇಕು’. 

***

ರಾಮಕೃಷ್ಣನಿಗೆ ಈ ಯೋಜನೆ ಹಿಡಿಸಿತು. ಇದರಲ್ಲಿ ಸ್ವಲ್ಪ ಕೀಟಲೆ ಮತ್ತು ರೋಚಕತೆ ಇರುವುದನ್ನು ಆತ ಮತ್ತು ನಾವು ಆಗಲೇ ಗುರುತಿಸಿ ಪುಳಕಗೊಂಡಿದ್ದೆವು. ಆದರಿಂದಾಗಬಹುದಾದ ಪರಿಣಾಮ / ಅಡ್ಡ ಪರಿಣಾಮಗಳ ಬಗ್ಗೆ ಅಲ್ಪಸ್ವಲ್ಪ ಮಾತನಾಡಿಕೊಂಡೆವು! ರಾಮಕೃಷ್ಣ ಮತ್ತು ಅವನ ಸಹಚರರು ಸುಮಾರು ಒಂದು ತಿಂಗಳು ಅಲೆದಾಡಿ ಒಂದಷ್ಟು ಶಿಕ್ಷಕರ ಮನೆಗಳ ವಿಳಾಸಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. (ಬಹಳಷ್ಟು ಶಿಕ್ಷಕರ ಮನೆ ವಿಳಾಸ ಬೇರಾವುದೋ ಮಂಡಲದಲ್ಲಿತ್ತು. ಕೆಲವರಂತೂ ದೂರದ ಜಿಲ್ಲೆಗಳ ನಿವಾಸಿಗಳು. ಅವರಿಗೆ ಸ್ಥಳೀಯ ವಿಳಾಸವೇ ಇರಲಿಲ್ಲ). ಕರಪತ್ರವನ್ನು ಮುದ್ರಿಸಿ ಅದನ್ನು ಹಂಚಲು ವ್ಯವಸ್ಥೆ ಮಾಡಿ, ರಾಮಕೃಷ್ಣ ಬೆಂಗಳೂರಿನಲ್ಲಿ ನಾವು ಏರ್ಪಡಿಸಿದ್ದ ಒಂದು ತರಬೇತಿಗಾಗಿ ಬಂದಿದ್ದರು.

ತರಬೇತಿಯ ನಡುವೆ ಕ್ರೈ ಕಛೇರಿಗೆ ತೆನಾಲಿಯಿಂದ ಒಂದು ತುರ್ತು ಕರೆ ಬಂದಿತ್ತು. ತಕ್ಷಣ ರಾಮಕೃಷ್ಣ ತನ್ನ ಸಂಗಡಿಗರಿಗೆ ಫೋನು ಮಾಡಬೇಕು ಎಂಬ ಸುದ್ದಿ ನಮಗೆ ಮುಟ್ಟಿತು. (ಆಗ ಮೊಬೈಲ್‌ ಇನ್ನೂ ಎಲ್ಲರ ಕೈಗೆ ಬಂದಿರಲಿಲ್ಲ!) ಎಸ್.ಟಿ.ಡಿ. ಬೂತ್‌ನಿಂದ ಫೋನ್‌ ಮಾಡಿ ಬಂದಿದ್ದ ರಾಮಕೃಷ್ಣ ಸ್ವಲ್ಪ ಆತಂಕಗೊಂಡಿದ್ದರು. ಕಾರಣ, ಅವರ ಕಛೇರಿಗೆ ಒಂದಷ್ಟು ಜನ ಸ್ಥಳೀಯ ಶಿಕ್ಷಕರು, ಮತ್ತವರ ಸಂಗಡಿಗರು ಬಂದು ಗದ್ದಲ ಎಬ್ಬಿಸಿದ್ದರಂತೆ. ನೀವ್ಯಾರು ಇಂತಹ ಕರಪತ್ರ ಮಾಡಲಿಕ್ಕೆ, ನಮ್ಮ ವಿಳಾಸ ಯಾಕೆ ಹಾಕಿದಿರಿ, ಹೀಗೆ ಮಾಡಿರುವುದು ಅವಮಾನಕರ, ನಿಮ್ಮ ಮೇಲೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ತೀವಿ ಎಂದೆಲ್ಲಾ ಕೂಗಾಡಿದ್ದರಂತೆ. ಟೀಚರ್ಸ್‌ ಅಸೋಸಿಯೇಷನವರಿಗೆ ಹೇಳ್ತೀವಿ ಹುಷಾರ್‌ ಎಂದರಂತೆ. ಸದ್ಯ ಆ ಗುಂಪು ರಾಮಕೃಷ್ಣರವರ ಕಛೇರಿಯನ್ನು ಧ್ವಂಸಪಡಿಸಿರಲಿಲ್ಲ.  ಯಾರದೂ ಕಾಲು ಮುರಿದಿರಲಿಲ್ಲ.

ನಾವೆಂದುಕೊಂಡಂತೆಯೇ ಆಗಿತ್ತು!

***

ತರಬೇತಿ ಕಾರ್ಯಕ್ರಮ ಮುಗಿಸಿ ತೆನಾಲಿಗೆ ರಾಮಕೃಷ್ಣ ವಾಪಸ್‌ ಹೋದರು. ಮುಂದಿನೊಂದು ವಾರದಲ್ಲಿ ಅವರಿಂದ ಫೋನ್‌ ಬಂದಿತ್ತು. ‘ಸಾರ್‌ ನಾವು ವಿಳಾಸ ಹಾಕಿದ್ದೆವಲ್ಲ ಶಿಕ್ಷಕರದ್ದು, ಅದರಲ್ಲಿ ಕೆಲವರು ಈಗ ಶಾಲೆಗೆ ಬರ್ತಿದ್ದಾರೆ. ಆದ್ರೆ ತುಂಬಾ ಜನ ಮಂಡಲ್‌ ಆಫೀಸು, ಜಿಲ್ಲಾ ಆಫೀಸು ಸುತ್ತುತ್ತಿದ್ದಾರೆ… ಅವರಿಗೆ ಸನ್ಮಾನ ಬೇಡವಂತೆ, ಬದಲಿಗೆ ಈ ಜಿಲ್ಲೆಯಿಂದಲೇ ಟ್ರಾನ್ಸ್‌ಫರ್‌ ಕೇಳ್ತಿದ್ದಾರಂತೆ… ನಮ್ಮ ಜಿಲ್ಲಾ ಶಿಕ್ಷಣ ಕಛೇರಿಯಿಂದ ನನಗೆ ಬುಲಾವ್‌ ಬಂದಿತ್ತು. ಆಫೀಸರ್‌ ಎಲ್ಲರೆದುರು ನನಗೆ ಸ್ವಲ್ಪ ಬೈದು, ಹೀಗೆಲ್ಲಾ ಮಾಡಬಾರದು. ಇಂತಹ ಮಾಹಿತಿಯನ್ನ ನೀವು ಅರ್ಜಿ ಹಾಕಿ ತೆಗೆದುಕೊಳ್ಳಬೇಕು. ಪಾಂಪ್ಲೆಟ್ಟು ಪೋಸ್ಟರ್‌ ಮುದ್ರಿಸುವ ಮೊದಲೇ ನಮ್ಮ ಅನುಮತಿ ತೆಗೆದುಕೊಳ್ಳಬೇಕೆಂದು ದಬಾಯಿಸಿದರು. ಆದರೆ ಆಮೇಲೆ ಎಲ್ಲರೂ ಹೋದ ಮೇಲೆ ಒಳಗೆ ಕರೆದು ಒಳ್ಳೆಯ ಕೆಲಸ ಮಾಡಿದ್ದೀಯಾ. ಬೇರೆ ಜಿಲ್ಲೆಗಳಲ್ಲೂ ಹೀಗೆ ಮಾಡಲು ಹೇಳಿಕೊಡು’ ಅಂದರು.

ನಾವೆಂದುಕೊಂಡಂತೆಯೇ ಆಗುತ್ತಿತ್ತು…!

‍ಲೇಖಕರು ವಾಸುದೇವ ಶರ್ಮ

February 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: