ಗೋಪಾಲ ತ್ರಾಸಿ ಓದಿದ ‘ಕಡಲ ಕರೆಯ ಚಿತ್ರಗಳು’

ಅಕ್ಕರೆಯಿಂದ ಊರು ಸುತ್ತಾಡಿಸುವಂತಹ ಅನುಭೂತಿ

ಗೋಪಾಲ ತ್ರಾಸಿ

‘ಚರಾ’ ಕಾವ್ಯನಾಮದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲರು ಬರೆದ ತಮ್ಮೂರು ಸೋಮೇಶ್ವರ- ಉಚ್ಚಿಲ ಕರಾವಳಿಯ ಜನಜೀವನ ಸಾಂಸ್ಕ್ರತಿಕ ಚಿತ್ರಣವುಳ್ಳ ವಿಶಿಷ್ಟ ಪ್ರಬಂಧ ಕೃತಿಯಿದು. ಮೊದಲು ಮುದ್ರಣಗೊಂಡದ್ದು 1956 ರಲ್ಲಿ, ಕನ್ನಡ ನಾಡು ಮೈಸೂರು ರಾಜ್ಯವಾಗಿ ಉದಯವಾದ ಕಾಲದಲ್ಲಿ. ದ್ವಿತೀಯ ಮುದ್ರಣ 1991 ರಲ್ಲಿ. ಸೋಮೇಶ್ವರ ಉಚ್ಚಿಲ ಮೂಲದ ಲೇಖಕರು ವಿಪರೀತ ಯಕ್ಷಗಾನದ ಸೆಳೆತದಿಂದ 8ನೇ ತರಗತಿಯಲ್ಲಿ ಫೈಲ್ ಆಗಿ ಹೇಳದೆ ಕೇಳದೆ ಮುಂಬೈಗೆ ಮುಖ ಮಾಡಿದವರು.

ರಾತ್ರಿ ಶಾಲೆಯಲಿ ಕಲಿತು ಮುಂದೆ ಅದೇ ಮಕ್ಕಳಿಗೆ ಶಿಸ್ತಿನ ಶಿಕ್ಷಕರಾಗಿ, ಕಾಲ್ಚೆಂಡಾಟ ಆಡುತ್ತ, ತರಬೇತಿಯನ್ನೂ ನೀಡುತ್ತ, ಗಮಕ ವಾಚನ, ತಾಳ ಮದ್ದಳೆ ಅರ್ಥದಾರಿಯಾಗಿ, ಯಕ್ಷಗಾನ ಪ್ರದರ್ಶನಗಳು ಹದಗೆಡುತಿದ್ದಾಗ ಕಪ್ಪು ಬಾವುಟದೊಂದಿಗೆ ಪ್ರತಿಭಟಿಸುತ್ತ, ಕವಿ ಮುದ್ದಣ ಜಯಂತಿ ಕಾರ್ಯಕ್ರಮವನ್ನು ಬಹಳ ಶೃದ್ಧೆಯಿಂದ ಮಾಡುತ್ತ ಬಂದವರು. ಮುಂಬೈಯಲ್ಲಿ ಸಾಧನಾ ವಠಾರದಲಿ ನಿರಂಜನ, ಬಲ್ಲಾಳ, ನಿಂಜೂರು ರಂತಹವರೊಂದಿಗೆ ಸಾಹಿತ್ಯಕೂಟದಲಿ ನಿರತರಾದವರು. ವಿದ್ವದ್ ಲೋಕದಲ್ಲಿ ತಮ್ಮ ನೇರ ನಡೆ ನುಡಿ ಬರಹಗಳಿಂದ ವ್ಯಕ್ತಿತ್ವಕೊಂದು ಘನತೆ ಗೌರವ ಕಾಪಿಟ್ಟುಕೊಂಡವರು.   

ಒಂದು ಕಡೆ ಅವರು ಹೀಗೆ ಹೇಳಿಕೊಂಡಿದ್ದಾರೆ, ‘… ‘ತಾಯಿ ನುಡಿ’ಯ ಯಶಸ್ಸಿನಲ್ಲಿ ನನ್ನ ಪಾಲಿಲ್ಲದಿದ್ದರೂ ಅದು ನಿಂತು ಹೋದುದರಲ್ಲಿ ಸ್ವಲ್ಪ ನನ್ನ ಪಾಲೂ ಖಂಡಿತ ಇದೆ.’ ಈ ಮಾತು ಅವರ ಪ್ರಾಮಾಣಿಕ ಮನಸ್ಸಿನ ವಿನಮ್ರತೆಯ ದರ್ಶನ ನೀಡುತ್ತದೆ. ಡಿ.ಕೆ. ಮೆಂಡನ್ ಅವರ ‘ತಾಯಿ ನುಡಿ’ಯಲ್ಲಿ ಯಕ್ಷಗಾನ, ನಾಟಕ, ಕೃತಿ ವಿಮರ್ಶೆ, ಟೀಕೆ ವ್ಯಂಗ್ಯ ಹೀಗೆ ತೀಕ್ಷ್ಣವಾಗಿಯೇ ಬರೆಯುತ್ತಿದ್ದುದರಿಂದ ಬಹಳಷ್ಟು ವ್ಯಕ್ತಿಗಳ, ಸಂಘ ಸಂಸ್ಥೆಗಳ ನಿಷ್ಠುರ ಕಟ್ಟಿಕೊಂಡಿದ್ದರು. ಯಕ್ಷಗಾನದ ಹುಚ್ಚಿರುವ ಉಚ್ಚಿಲರಿಗೆ ಬರವಣಿಗೆಯ ದಾರಿ ತೋರಿಸಿದವರು ‘ನುಡಿ’ ಪತ್ರಿಕೆಯ ಹೊಸಬೆಟ್ಟು ಸೋಮನಾಥ. ಮುಂದೆ ಇವರಿಬ್ಬರ ಗಳಸ್ಯ ಕಂಠಸ್ಯ ಮಿತ್ರತ್ವ ‘ಪ್ರಾಣ ಗೆಳೆತನ’ದ ತನಕ ಬೆಳೆಯಿತೆಂದು ಉಚ್ಚಿಲರು ತಮ್ಮ ‘ನೆನಪಿನ ಬುತ್ತಿ’ ಯಲ್ಲಿ ನಮೂದಿಸುತ್ತಾರೆ.

ಪ್ರಸ್ತುತ ಕಡಲ ಕರೆಯ ಚಿತ್ರಗಳು ಕೃತಿಯ ಬೆನ್ನುಡಿಯಲ್ಲಿ ಪ್ರಾ. ಕೇಶವ ಉಚ್ಚಿಲರು, ‘ಹಳ್ಳಿಯ ಪರಿಸರದ ಮುಗ್ಧ ಚೆಲುವನ್ನು ಕನ್ನಡಿಗರಿಗೆ ಉಣ ಬಡಿಸಿದ ಎರಡು ರಮಣೀಯ ಕೃತಿಗಳು – ಗೋರೂರ ‘ನಮ್ಮ ಊರಿನ ರಸಿಕರು’ ಮತ್ತೊಂದು ಕಾರಂತರ ‘ಹಳ್ಳಿಯ ಹತ್ತು ಸಮಸ್ತರು’. ಇವೆರಡರ ನಡುವೆ ಎದ್ದು ಕಾಣುವುದು ಚರಾ ಅವರ ಕಡಲ ಕರೆಯ ಚಿತ್ರಗಳು’. ಕೃತಿಯ ವಿಶಿಷ್ಟತೆಯನ್ನು ಸಾರುವ ಮಾತುಗಳು. ಈ ಕೃತಿ ಬರೆಯುವ ಹಿಂದಿನ ಉದ್ಧೇಶವನ್ನು ಲೇಖಕರು ಈ ರೀತಿ ಹೇಳಿಕೊಂಡಿದ್ದಾರೆ. ‘ಕಂಡು, ಕಂಡು ಕಡಲು ಒಮ್ಮೆ ಸಸಾರವಾದರೂ ಕಣ್ಮರೆಯಾದ ಕೂಡಲೆ ಅದರ ಹೆಚ್ಚುಗಾರಿಕೆ ಕಣ್ಣ ಮುಂದೆ ಕುಣಿಯುತ್ತದೆ. ಅದನ್ನೇ ನೆಚ್ಚಿಕೊಂಡಿರುವ ಜನತೆಯ ಜೀವನದ ಸುತ್ತ ಮುತ್ತೆಲೆಲ್ಲ ಕಣ್ಣು ಓಡಿಸುವಂತೆ ಮಾಡುತ್ತದೆ. ಆ ಬಾಳಿನಲ್ಲೂ ಸ್ಮರಿಸಬೇಕಾದ ಚೇತನ ರಸಿಕತೆ ನೋವು ನಲಿವು ಇದೆಯೆಂಬ ನೆನಪು ಮರಳುತ್ತದೆ’. 

ಹೌದಲ್ಲ, ಕಡಲು ಮತ್ತು ಅದನ್ನು ನಂಬಿ ಬದುಕುವವರ ಬದುಕು ಬರಿಗಣ್ಣಿಗೆ ನೀರಸ ಉಪ್ಪು ನೀರು, ಒರಟು ಜೀವನವೆಂದು ಕಂಡರೂ, ಲೇಖಕರು ಅಂತಹ ನೀರಸ ಬದುಕಿನಲ್ಲೂ  ಒಂದು ಸಹಜ ಜೀವಪರ ಚೆಲುವು ಇದ್ದೇ ಇದೆ ಎಂಬ ಅರಿವಿನ ಸ್ಪೂರ್ತಿಯೊಂದಿಗೆ ಕಡಲ ಕರೆಯ ಜನ ಜೀವನ ಚಿತ್ರಗಳನ್ನು ಶಾಬ್ಧಿಕವಾಗಿ ಚಿತ್ರಿಸುತ್ತಾರೆ; ನಿಸ್ಸಂದೇಹವಾಗಿ ಅತ್ಯಂತ ಸಫಲರೂ ಆಗಿದ್ದಾರೆ. ‘ಈ ಬಗೆಯ ಉದ್ದದ ಬರಹಗಳನ್ನು ಬರೆದದ್ದು ಇದೇ ಮೊದಲು. ಇದನ್ನು ಬರೆಸಿದ ಕೀರ್ತಿ ಏನಿದ್ದರೂ ಅದು ನಮ್ಮ ಊರ ರಸಿಕ ಜನಕ್ಕೇ ಸಲ್ಲಬೇಕು’ ಎನ್ನುವ ಕೃತಿಕಾರರು ಈ ಕೃತಿಯನ್ನು ಅರ್ಪಿಸಿದ್ದು ಅವರ ‘ಗೆಳೆಯ (ಪ್ರಾಣ ಮಿತ್ರ) ಯಚ್. ಸೋಮನಾಥನಿಗೆ; ಅವನ ಒಪ್ಪಿಗೆ ಇಲ್ಲದೆ’ ಅಂತಲೂ ಬರೆಯುತ್ತಾರೆ! ಹಾಗೆ ಬರೆದಿರುವ ಕಾರಣವನ್ನು ಒಂದು ಕಡೆ ಹೇಳುತ್ತಾರೆ.

ಈ ಅರ್ಪಣೆಯ ವಿಷಯ ಮುಂದೊಂದು ದಿನ ಸೋಮನಾಥರಿಗೆ ಗೊತ್ತಾದಾಗ, ‘ಯಾಕೆ ಹಾಗೆ ಮಾಡಿದೀ? ನಾನು ಯಾವ ದೊಡ್ಡ ಜನ ಎಂದು ನನಗೆ ಅರ್ಪಣೆ ಮಾಡಿದ್ದಿ’ ಎಂದು ಜಗಳಕ್ಕೇ ನಿಂತರಂತೆ. ಆಗ ಉಚ್ಚಿಲರು ನಡುವೆ ಏನೂ ಹೇಳದೆ ಕೊನೆಗೆ, ‘ಅದಕ್ಕೇ ‘ಅವನ ಒಪ್ಪಿಗೆ ಇಲ್ಲದೆ’ ಎಂದು ನಾನು ಬರೆದಿದ್ದೇನಲ್ಲಾ. ನಿನ್ನ ತಕರಾರು ಏನಿದ್ದರೂ ಆ ವಾಕ್ಯದಿಂದ ಮಾಯವಾಗುತ್ತದೆ’. ಎಂದಾಗ ಸೋಮನಾಥ ಸುಮ್ಮನಾದರಂತೆ. ಈ ಮಹಾನುಭಾವರುಗಳ ವ್ಯಕ್ತಿತ್ವಕ್ಕೆ ವಿಶಿಷ್ಟ ಮೆರುಗು ಬರುವುದು ಈ ಇಂತಹ ಜೀವನ ಮೌಲ್ಯಗಳಿಂದ. ಇಂತಹವರೂ ಇರುತ್ತಾರಾ! ಅನ್ನಿಸದಿರದು.

ಈ ಕೃತಿಯ ಹೂರಣ ಇಲ್ಲಿಯವರೆಗೆ ಅಜ್ಞಾತವಾಗಿದ್ದ ಬೋವಿ ಜನಾಂಗ, ಊರ ಇತರ ಜನಜೀವನದ ಶಬ್ಧ ಚಿತ್ರಣದೊಂದಿಗೆ ಸುತ್ತ ಮುತ್ತಣ ಪ್ರಾಕೃತಿಕ ಸೌಂದರ್ಯದ ನೈಜ ವರ್ಣನೆಯಾಗಿದೆ. ಮೊದಲೇ ಆ ಕಾಲದ ಪ್ರತಿಷ್ಠಿತ ‘ವಿದ್ವಾನ್’ ರಾಗಿರುವ ಲೇಖಕರು ಪಂಡಿತ ಪರಂಪರೆಯ ಶಿಕ್ಷಕರು. ಕೃತಿಯಲ್ಲಿನ ಭಾಷಾ ಪ್ರೌಢಿಮೆಗೆ ಸರಿಸಾಟಿ ಇಲ್ಲ. ಆದರೆ ಎಲ್ಲೂ ಬೌದ್ಧಿಕ ಹೇರಿಕೆಯ ಭಾರ ಇಲ್ಲವೇ ಇಲ್ಲ. ಕ್ಲಿಶೆಯಿಲ್ಲದ ಸರಳ ನಿರೂಪಣೆಯಿಂದಾಗಿ ಓದಿಗೊಂದು ಸಹಜ ಓಘ ಲಭಿಸುವುದು. ಹೇಳಿ ಕೇಳಿ ಊರಿನ ಸಮಸ್ತವನ್ನು ಹೇಳ ಹೊರಟಿರುವುದರಿಂದ ಲೋಕಾಭಿರಾಮ ಮಾತನ್ನು ಕೇಳುವ ಅನುಭವವಾಗುವುದು. ಆದರೂ ಆಗಾಗ ಗಹನವಾದ ವಿಷಯದತ್ತ ತಿರುವು ಕೊಡುವ, ತಿಳಿ ಹಾಸ್ಯದ ಬರವಣಿಗೆಯ ಶೈಲಿ ಗಮನಾರ್ಹವಾಗಿದೆ. ಓದುವ ಸ್ವಾರಸ್ಯ ಎಲ್ಲೂ ಬಿಟ್ಟು ಕೊಡುವುದಿಲ್ಲ. ಲೇಖಕರ ಅಪಾರ ಅನುಭವದ ಹಿನ್ನೆಲೆಯಲ್ಲಿ ನೈಜವಾಗಿ ಮೂಡಿಬಂದ ಕಥನ ಕೃತಿಯಿದು. 

 ಅಪರೂಪವೆನಿಸುವ ಹಳ್ಳಿಯ ಜನಪದ ನುಡಿಗಟ್ಟುಗಳು ಕೃತಿಗೆ ಭಾಷಿಕ ಸೊಬಗನ್ನು ನೀಡಿವೆ. ಹಾಸ್ಯ, ವಿನೋದ ಸುಲಲಿತವಾಗಿ ನಿರೂಪಿತಗೊಂಡು ಓದಿನ ಮೋಜಿಗೆ ಮುದ ನೀಡುತ್ತದೆ ಮತ್ತು ಖಂಡಿತ ಕೃತಿಯ ಹೆಗ್ಗಳಿಕೆಯೂ ಆಗಿದೆ. ಸುತ್ತು ಬಳಸಿಲ್ಲದ ಸರಳ ಹಾಗು ಖಚಿತ ಬರವಣಿಗೆ. ಆರಂಭದ ಸಾಲುಗಳನ್ನೇ ಗಮನಿಸಿ; ‘ನಮ್ಮ ಊರು ಯಾವ ಇತಿಹಾಸಕಾರನ ಚಿತ್ತವನ್ನು ಸೆಳೆದ ಊರಲ್ಲ. ಇತಿಹಾಸಕಾರನಿಗೆ ಬೇಕಾದುದು ನಮ್ಮಲ್ಲಿ ಏನೂ ಇಲ್ಲ. ದಿನ ಬೆಳಗಾದರೆ ಮೂಗರಳಿಸಿ ಕೊಳ್ಳಬೇಕಾದ ಮೀನಿನ ವಾಸನೆಯ ಮೂಲವನ್ನು ಕಂಡು ಹಿಡಿಯುವ ಹುಚ್ಚು ಯಾವ ಇತಿಹಾಸಕಾರನಿಗೆ ಇದೇ ?’ ಕೃತಿಯ ಇನ್ನೊಂದು ಗಮನಾರ್ಹ ಅಂಶವೆಂದರೆ, ಕಣ್ಣಿಗೆ ಕಟ್ಟುವಂತೆ ದೃಶ್ಯ, ಸನ್ನಿವೇಶಗಳನ್ನು ಕಣ್ಣೆದುರು ತಂದು ನಿಲ್ಲಿಸುವಂತಹ ಚಿತ್ರಕ ಶಕ್ತಿವುಳ್ಳ ಬರವಣಿಗೆ. ‘ಎಲ್ಲಿ ನೋಡಿದರೂ ಸಕ್ಕರೆ ಹರಡಿದಂತೆ ಕಾಣುವ ಮಳಲ ರಾಶಿ. ಒಂದು ಕ್ಷಣವೂ ಸೋಮಾರಿಯಾಗಿರದೆ ದಂಡೆಗೆ ಅಪ್ಪಳಿಸಿ ಪುನ: ತಾಯ ಮಡಿಲನ್ನು ಸೇರಿ ಮುಖ ಮರೆಸಿಕೊಳ್ಳುವ ಮಗುವಿನಂಥ ಕಡಲ ತೆರೆ…’ ಇಂತಹ ಕಾವ್ಯಾತ್ಮಕ ಅಭಿವ್ಯಕ್ತಿ ಕೃತಿಯ ಹಿರಿಮೆ.

ಹಳ್ಳಿಯ ಸಾಮಾನ್ಯ ಬಡ ಜನರ ಬದುಕಿನ ಆಗು ಹೋಗುಗಳು, ಅವಾಂತರಗಳು ಸೃಷ್ಟಿಸುವ ಹಾಸ್ಯ ಪ್ರಸಂಗಗಳು, ನಂಬಿಕೆ ಜ್ಞಾನ ಅಜ್ಞಾನಗಳ ಹೊರತಾಗಿಯೂ ಇಲ್ಲಿ ತನಕ ಹಿನ್ನೆಲೆಯಲ್ಲಿದ್ದ ಊರಿನ ಉಗ್ರಾಣಿಗಳು, ಮೀನುಗಾರರು, ಉಪಾಧ್ಯಾಯರುಗಳು, ಭಗವತಿಗಳು, ಅರ್ಥಧಾರಿಗಳು, ಜೋತಿಷಿಗಳು ಹೀಗೆ ಇಂತಹವರ ಬದುಕಿನ ಕಥನ ಕುತೂಹಲಗಳು ಅನಾವರಣಗೊಳ್ಳುತ್ತವೆ. ಕರಾವಳಿ ಎಂದ ಮೇಲೆ ಬೇಸಿಗೆಯ ಬಿಸಿಲನ್ನು ಮುಚ್ಚಿಡಲಾದೀತೇ ? ‘ಕರಾವಳಿಯನ್ನು ಬೇಸಿಗೆ ಕಾಲದಲ್ಲಿ ಬಂದು ನೋಡಬೇಕು. ಕರಾವಳಿಯ ಸುಡು ಮರಳಿನ ಕಾಯ್ಪು ಜನ್ಮಾಂತರಕೂ ಮರೆತು ಹೋಗಲಾರದು’ ಎನ್ನುವ ಲೇಖಕರು ಇಳಿ ಹೊತ್ತಿನ ಕಡಲ ಕರೆಯ ನಿಸರ್ಗ ರಮಣೀಯತೆಯನ್ನು ಬಣ್ಣಿಸುವುದು ಹೀಗೆ. ‘ಮೇಗಾಳಿಯ ಹದವಾದ ಬೀಸುವಿಕೆಯಿಂದ ತಂಪನ್ನು ಅಪ್ಪಿಕೊಳ್ಳಲು ತೀರ ಆತುರ ಪಡುತ್ತಿರುವ ಕಡಲ ಕರೆ; ಮೀನುಗಾರರ ಕಾಟ ಕಡಿಮೆಯಾಯಿತೆಂದು ಒಂದು ಕ್ಷಣ ಸಂತೋಷ ಪಟ್ಟು ನೀರಿಂದ ಮೇಲೆ ಕುಪ್ಪಳಿಸಿ ಮಿಂಚಿನ ಭ್ರಾಂತಿಯನ್ನು ಹುಟ್ಟಿಸುವ ಮೀನಿನ ಸಂಭ್ರಮ; ಆ ಸಮಯವನ್ನೇ ಹೊಂಚುತ್ತಿರುವ ಬೆಳ್ಳಕ್ಕಿಗಳ ಸಾಲು; ಕೊಲ್ಲುವ-ಕೊಲ್ಲಿಸಿಕೊಳ್ಳುವ ವ್ಯಾಪಾರವನ್ನು ನೋಡಿ ಮೂಕ ವೇದನೆಯಿಂದ ದಂಡೆಗೆ ಅಪ್ಪಳಿಸಿಕೊಳ್ಳುವ ಕಡಲು.’ ಎಂಥಾ ಕಾವ್ಯಮಯ ರಸೋಕ್ತಿಗಳು!

ಕಡಲ ತೀರದ ಸೌಂದರ್ಯವೆಂದರೆ ಅಲೌಕಿಕ ಅನುಭೂತಿ ನೀಡುವಂತಹದ್ದೇನಲ್ಲ. ಲೇಖಕರು ಹೇಳುವಂತೆ, ಸಾಲು ಸಾಲಾಗಿಟ್ಟ ದೋಣಿಗಳು,  ಮರಳಲ್ಲಿ ಒಣಗಲು ಹಾಕಿದ ಮೀನಿನ ಗಂಧ, ಅವುಗಳಿಗೆ ಹೊಂಚು ಹಾಕಿಕೊಂಡಿರುವ ಕಾಗೆ ಗಿಡುಗ ನಾಯಿಗಳ ಕದನ ಕೋಲಾಹಲ; ಮೀನನ್ನು ಒಟ್ಟು ಮಾಡುವ ಹೆಣ್ಣು ಮಕ್ಕಳು; ಮೀನು ದೋಣಿಯನ್ನೇ ಕಾದು ನಿಂತಿರುವ ಬ್ಯಾರಿಗಳು; ಮೀನಿನ ವ್ಯಾಪಾರಕ್ಕಾಗಿ ಬರುವ ಮೊಗೇರ ಹೆಂಗಸರು. ಇವೇ ಕಡಲ ಕರೆಯ ವಾಸ್ತವ ಸೌಂದರ್ಯ ಸಾಧನಗಳು. 

ರಾತ್ರಿಯಿಡೀ ಕಡಲಲ್ಲಿ ಮೀನು ಹಿಡಿಯುವುದರಲ್ಲಿ  ಮಗ್ನವಾಗಿರುವ ದೋಣಿಗಳು ಮುಂಜಾನೆ ದಡದತ್ತ ಮುಖ ಮಾಡುವಾಗ ದಡದಲ್ಲಿ ಕಾಯುವವರು ಮಖ್ಯವಾಗಿ ಹೆಂಗಸರು ದೂರದಿಂದಲೇ ತಮ್ಮ ತಮ್ಮ ಗಂಡಂದಿರ ದೋಣಿಗಳನ್ನು ಗುರುತು ಹಿಡಿಯುವುದು, ಹಲವೊಮ್ಮೆ ತಪ್ಪು ತಪ್ಪಾಗಿ ಗುರುತಿಸಿ ಓರಗೆಯವರ ಹಾಸ್ಯಕ್ಕೆ ಗುರಿಯಾಗುವುದು; ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದ ಕಾಂಗ್ರೇಸಿಗರಿಂದ ನಡೆದ ಪಾನಮುಕ್ತ ‘ಲೆಚ್ಚರ್’; 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಾದ ಅವಾಂತರದಲ್ಲಿ ಊರಿನ ಮುಗ್ಧ ಮಂಜು ಮೌಲಿ, ಪಕೀರ ಬೋವಿ, ಇಸ್ಮಾಯಿಲ್ ಬ್ಯಾರಿ ಮುಂತಾದವರು ಸುಖಾ ಸುಮ್ಮನೆ ಸಿಕ್ಕಿಹಾಕಿಕೊಂಡು ಪೇಜಾಡಿದ್ದು, ಕೊನೆಗೆ ಯಾವುದೋ ಊರಿನ ಗಾಂಧಿ ಟೋಪಿಧಾರಿಣಿ ಯುವಕನೊಬ್ಬ ವಿನಾ:ಕಾರಣ ಆರೆಷ್ಟ್ ಆದದ್ದು… ಮುಂತಾದ ಘಟನೆಗಳು ಆ ಕಾಲಘಟ್ಟದ ಕಪ್ಪು ಬಿಳುಪು ಚಿತ್ರಣವನ್ನು ಮೂಡಿಸುವುದು.

ಆಗಿನ ಕಾಲದಲ್ಲಿ ಕರಾವಳಿಗರ ಮುಖ್ಯ ವೃತ್ತಿ ಬೇಸಾಯ ಮತ್ತು ಮೀನುಗಾರಿಕೆ. ಬೇಸಾಯ ಮಾಡುವವರು ದಿನದಿಂದ ದಿನಕ್ಕೆ ಕಡಿಮೆಯಾಗಲು ಮುಖ್ಯ ಕಾರಣ ‘ಧಣಿಯ ಆಳಾಗಿ ದುಡಿದರೆ ಆರೆಂಟು ತಿಂಗಳ ಅರೆ ಹೊಟ್ಟೆ ಅನ್ನ ಗತಿ. ಅದಕ್ಕಿಂತ ಕೂಲಿ ನಾಲಿ ಮಾಡುವುದೇ ಲೇಸೆಂದು ನಮಸ್ಕಾರ ಹೊಡೆಯುವವರೇ ಹೆಚ್ಚು. ಮೀನುಗಾರರದ್ದೂ ಅದೇ ಹಾಡು. ಶಾಲೆ ಮತ್ತು ವಿದ್ಯೆಯ ಮಹತ್ವ ಅರಿವಾದಂತೆ ದೋಣಿಗಳ ಸಂಖ್ಯೆ ಕಡಿಮೆಯಾಗತೊಡಗಿದವು. ಶಾಲೆ ಕಲಿಯುತ್ತ ಮಕ್ಕಳು ಬಲೆ ಹೊಲಿಯುವ, ಬಲೆ ಕಟ್ಟುವ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಕ್ಕಳು ಹೈಸ್ಕೂಲಿಗೆ ಕಾಲಿಡತೊಡಗಿದಂತೆ ಮುಗಿಯಿತು. ಹೆತ್ತವರೂ ಮಕ್ಕಳ ಓದಿಗೆ ಅಡಚಣೆಯಾಗುವುದೆಂದು ಅವರ ಪಾಡಿಗೆ ಬಿಟ್ಟು ಬಿಟ್ಟರು. ಆದರೆ ಮಕ್ಕಳು ಕಲಿತ ದೊಡ್ಡ ವಿದ್ಯೆ ಮಾತ್ರ ತಂದೆ ತಾಯಿಯರ ಇಳಿಗಾಲದಲ್ಲಿ ಅವರ ಬದುಕಿಗಾಗಲಿ, ಮಕ್ಕಳ ಬದುಕಿಗಾಗಲಿ ಸಹಾಯಕವಾಗುವುದು ಬಹಳ ವಿರಳ’ ಎಂದು ಲೇಖಕರು ಕಾಯಕದ ಮಹತ್ವವನ್ನು ಕಲಿಸದ ಶಿಕ್ಷಣದ ಕುರಿತು ವಿಷಾದ ವ್ಯಕ್ತ ಪಡಿಸಿರುವುದು ಇಂದಿಗೂ ಪ್ರಸ್ತುತವೆನ್ನಿಸುವುದು. ಇಡೀ ಊರಿಗೆ ಇದ್ದ ಒಬ್ಬನೇ ಮರದ ಕೆಲಸದ ವಿಶ್ವಕರ್ಮನಿಂದ ಆಗುತಿದ್ದ ಅತೀ ವಿಳಂಬದ ವ್ಯಾದೆಯ ತೊಂದರೆ ಸಹಿಸಲಾರದೆ ಕೋಲ್ಯದಿಂದ ತಿಮ್ಮ ನಾಯ್ಕನೆಂಬ ಇನ್ನೊಬ್ಬ ಆಚಾರಿಯನ್ನು ಊರಿಗೆ ಕರೆತಂದದ್ದು, ಅಲ್ಲಿ ತನಕ ಮುಳಿ ಹುಲ್ಲಿನಿಂದ ಶೋಭಿಸುತಿದ್ದ ಊರಿಗೆ ಊರೇ ‘ಕೆಂಪು ಮಾಡಿನ’ ಹಂಚಿನ ಮನೆಗೆ ಸ್ಥಿತ್ಯಂತರ ಹೊಂದುವ ಕಾಲಮಾನವನ್ನು ಕಟ್ಟಿ ಕೊಡುತ್ತಾರೆ.

ಊರಿನ ಹೊಟ್ಟೆಯನ್ನು ಸೀಳಿ ಓಡಾಡುವ ರೈಲು, ಸ್ಟೇಷನ್ನು, ಅಲ್ಲಿನ ಪೋರ್ಟರ್ ನೊಂದಿಗೆ ಶಾಲಾ ಮಕ್ಕಳ ತಂಟೆಕೋರತನ; ರೈಲ್ವೆ ಮಾರ್ಗದ ಉದ್ದಕ್ಕೂ ಇರುವ ತಂತಿಗಳಿಗೆ ಶಾಲಾ ಮಕ್ಕಳು ಕಲ್ಲಿನಿಂದ ಕರಾರುವಾಕ್ ಹೊಡೆದು ಹೊರಡಿಸುವ ನಾದ ತರಂಗ; ಮಕ್ಕಳ ಗೇರು ಬೀಜದ ಬಿಲ್ಲೀಸ್ ಆಟದ ಗೀಳು, ಮುಂತಾದ ಸಣ್ಣ ಸಣ್ಣ ಸನ್ನಿವೇಶಗಳನ್ನು ಆಪ್ತವಾಗಿ ಚಿತ್ರಿಸುತ್ತಾರೆ.

ಊರಿಗೊಂದು ಭಜನೆ ಗುಡಿ. ಅಲ್ಲಿ ಪ್ರತಿ ಶನಿವಾರ ಭಜನೆಯ ವಿಶೇಷ ಸಂಭ್ರಮ. ಆದರೆ ಈಗೀಗ ಅಲ್ಲಿ ಭಜನೆ ಸದ್ದು ಕೇಳದೆ ಎಷ್ಟು ಕಾಲವಾಯಿತೆಂದು ಹೇಳುವುದು ಸಾಧ್ಯವಿಲ್ಲ ಅಂತಾರೆ. ಈ ಭಜನೆ ಗುಡಿಯ ಕುರಿತಾದ ಒಂದು ಮೋಜಿನ ಪ್ರಸಂಗವನ್ನು ಈ ರೀತಿ ನಿರೂಪಿಸುತ್ತಾರೆ. ‘ಭಜನೆ ಎನ್ನುವಾಗ ಆ ಕಾಲದಲ್ಲಿ ಹಾಡುತಿದ್ದ ಹಾಡುಗಳ ನೆನಪಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕಾದರೆ ‘ನಾ ನಿನ್ನ ದಾಸನಯ್ಯ ಸೀತಾರಾಮ’ ಎಂಬೊಂದು ಹಾಡಿನ ಹೊರತು ಬೇರೆ ಹಾಡು ಅಲ್ಲಿಗೆ ಕಾಲಿರಸಲೇ ಇಲ್ಲ. ಕಾಲಿರಿಸಿದ್ದರೆ ಅದೇ ಧಾಟಿಯ ಭಗವತಿಯ ಸ್ತೋತ್ರಗಳು. ಒಮ್ಮೆ ಹಾಡು ಕೇಳಿ ಕೇಳಿ ಬೇಸರಗೊಂಡ ಮುದುಕರೊಬ್ಬರು, ‘ಓ ಸೀತಾರಾಮ, ಒಮ್ಮೆ ಪಕ್ಕದ  ಉಳ್ಳಾಲಕ್ಕಾದರೂ ಹೋಗಪ್ಪ ಕೇಳಿ ಕೇಳಿ ನಮಗೆ ತಲೆ ಸಿಡಿಯುತ್ತದೆ’ ಎಂದು ನಗಾಡಿದರು.’  ಮುಂದೆ  ಭಜನೆ ನಿಲ್ಲಲಿಕ್ಕೂ ಊರ ಪ್ರಸಿದ್ಧ ರಾಮ ಲಕ್ಷ್ಮಣರೆಂಬ ಭಗವತಿ ಪಾತ್ರಿ ಜೋಡಿ ಕಾರಣ ಎಂದು ಹೇಳುವ ಲೇಖಕರು ಆ ಅಪರೂಪದ ಜೋಡಿಯ ನಾನಾ ಪ್ರತಾಪ ಪ್ರಸಂಗಗಳನ್ನು ಸ್ವಾರಸ್ಯಕರವಾಗಿ ದಾಖಲಿಸುತ್ತಾರೆ.

ಮುಂದೆ ಬರುವುದೇ ಊರಿನ ಎಲ್ಲಾ ಚಟುವಟಿಗಳಿಗೆ ಕೇಂದ್ರವಾಗಿರುವ  ಬಜಾರಿನ ವೃತ್ತಾಂತ. ಕೃತಿಯ ಬಹು ಮುಖ್ಯ ಭಾಗವೂ ಹೌದು.  ಬಜಾರ್ ಅಂದರೆ ಅದೇನು ಮಹಾ ಮಾರುಕಟ್ಟೆಯಲ್ಲ. ನಾಲ್ಕೈದು ಹಾದಿಗಳು ಕೂಡುವ ಕೇಂದ್ರ ಅಷ್ಟೆ. ಅಲ್ಲಿ ಒಂದಷ್ಟು ಹೊಟೇಲುಗಳು. ಸಂಜೆ ಶ್ರಮಿಕರೆಲ್ಲ ಸೇರುವ ಇಲ್ಲಿ ಸಿಗುವ ನಾನಾ ಬಾತ್ಮಿಯಗಳು. ಹಾಗಾಗಿ ಲೇಖಕರು ‘ ಹೊಟೇಲುಗಳೆಂದರೆ ಹಳ್ಳಿಯ ಸುದ್ದಿ ಪ್ರಸಾರ ಯಂತ್ರಗಳು’ ಅಂತಾರೆ. ಈ ಇಂತಹ ಬಜಾರಿನ ದೈನಂದಿನ ಮಹಿಮೆಯನ್ನು ಮನೋಜ್ಞವಾಗಿ ಬರೆಯುತ್ತಾರೆ. ಸಂಜೆ ಹೊತ್ತಿನಲ್ಲಿ ಸಾಲಗಾರ ಗಿರಾಕಿ ಮತ್ತು ಹೊಟೇಲು ಮಾಲಿಕರ ನಡುವೆ ಜಗಳ ನಡೆಯದ ದಿನವೇ ಇಲ್ಲ. ಈ ಕಾಸಿಲ್ಲದ ಗಿರಾಕಿ ಗಳಿಂದ ಒಂದು ನೂರು ಹೊಟೇಲುಗಳಾದರೂ ಸತ್ತಿರಬೇಕು ಎನ್ನುತ್ತಾರೆ. ಬೇರೆ ಜಾತಿ ವರ್ಗದವರು ಬಿಡಿ ಬ್ರಾಹ್ಮಣರೂ ಹೊಟೇಲು ಮಾಡಿ ಸೋತದ್ದಕ್ಕೆ ಸುಭ್ರಾಯ ಭಟ್ಟರ ಉದಾಹರಣೆ ಮತ್ತು ಅದಕ್ಕೆ ಕಾರ್ಯಕಾರಣವನ್ನು  ಕೊಡುತ್ತಾರೆ. 

ಈ ಸುಭ್ರಾಯ ಭಟ್ಟರಿಗೆ ವಿಪರೀತ ಯಕ್ಷಗಾನದ ಹುಚ್ಚು. ಸಂಜೆ ಏಳು ಗಂಟೆಯಾಗುವುದೇ ತಡ ಹೊಟೇಲು ವ್ಯಾಪಾರ ಹಿಂದೆ ಸರಿದು ತಾಳ ಮದ್ದಳೆ ಮುಂದಕ್ಕೆ ಬರುವುದು. ಸ್ವತಃಹ ಭಾಗವತಿಕೆ ಮಾಡುವ ಭಟ್ಟರ ಜೊತೆ ರಾಮಕುಮಾರ, ಪಕೀರ ಬೋವಿ, ಪಂಚಾಂಗದ ಮಮ್ಮದ್, ಇವರೆಲ್ಲ ಅವರವರ ಮಟ್ಟಿಗೆ ಭರ್ಜರಿ ಅರ್ಥಧಾರಿಗಳು. ಒಮ್ಮೆ ಮೂಗಿನವರೆಗೆ ಕುಡಿದು ಬಂದಿದ್ದ ಪಕೀರ ಬೋವಿ, ಬಂದವನೇ ಪಂಚವಟಿ ರಾಮಾಯಣ ತಾಳಮದ್ದಳೆ ಪ್ರಸಂಗದ ಸಂದರ್ಭ, ಮಹಾಭಾರತದ ಧರ್ಮರಾಜನ ಒಡ್ಡೋಲಗದ ಅರ್ಥ ಹೇಳುವುದರಲ್ಲಿ ತಲ್ಲೀನನಾದ ಸನ್ನಿವೇಶ ಓದುವಾಗ ನಗು ಉಕ್ಕಿ ಬರುವುದು. ಹೀಗೆ ಭಟ್ಟರ ತಾಳಮದ್ದಳೆ ಹುಚ್ಚು, ಇವರಿಗೆ ಬಾಕಿ ಹಣ ಕೊಡುವವರು ಕೋಡದೆ, ಇವರ ಸಾಲ ಹೆಚ್ಚಾಗಿ, ಹೊಟೇಲು ಮುಚ್ಚಿ ಊರು ಬಿಡಲು ಕಾರಣವಾಗುವುದು. ಭಟ್ಟರು ಹೋದ ನಂತರ ಊರಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಬ್ಬು ಕವಿಯಿತು ಅಂತ ಲೇಖಕರು ವಿಷಾದ ವ್ಯಕ್ತ ಪಡಿಸುತ್ತಾರೆ. 

ಊರಿನ ರುದ್ರಭೂಮಿಯ ಕುರಿತು ಬರೆಯುವಾಗ, ‘ನಮ್ಮೂರಿನಲ್ಲಿ ಬೋವಿಗಳಿಂದ ಹಿಡಿದು ಬ್ಯಾರಿ, ತೀಯಾರವರೆಗೆ ಸತ್ತವರನೆಲ್ಲ ಹೂಳುವುದೇ ಪದ್ಧತಿ’ ಎಂದು ಊರವರ ಧರ್ಮ ಜಾತಿ ಮೀರಿದ ಉದಾರ ಮನಸ್ಥಿತಿಯನ್ನು ದಾಖಲಿಸುತ್ತಾರೆ. ಊರಿನ ಅಪರೂಪದ ಸುಂದರ್ ಬನ್ ಉಧ್ಯಾನದ ಇತಿಹಾಸ, ಬಹು ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನದ ಐತಿಹ್ಯ, ಅಲ್ಲಿನ ವಾರ್ಷಿಕ ಜಾತ್ರೆಯ ಸಂಭ್ರಮ, ಅದರೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಪ್ರಸಂಗವನ್ನು ಸ್ವಾರಸ್ಯಕರವಾಗಿ ನಮೂದಿಸುತ್ತಾರೆ. 

ಊರ ದೇವತೆ ವಿಷ್ಣುವನ್ನು ಕಾಯುವವರು ಬಂಟ- ಜುಮಾತಿ ದೈವಗಳು. ಈ ಬಂಟ ಜುಮಾತಿ ತೀಯಾ ಜನಾಂಗದ ರಕ್ಷಣೆ ದೈವಗಳು. ಆದರೆ ಈ ದೈವಗಳಿಗೂ ಅವರ ಭಕ್ತರಾದ ತೀಯಾರಂತೆ ವಿಷ್ಣು ದೇವಸ್ಥಾನದ ಅಂಗಣದೊಳಗೆ ಕಾಲಿಡುವಂತಿಲ್ಲ! 

ಪೂಜೆಯ ಬ್ರಾಹ್ಮಣರ ಈ ಜಾತಿ ತಾರತಮ್ಯವನ್ನು ವಾರ್ಷಿಕ ಉತ್ಸವ ಜಾತ್ರೆಯಂದು ಒಂದಲ್ಲ ಒಂದು ರೀತಿಯಲ್ಲಿ ಟೀಕಿಸಿ ತೃಪ್ತಿ ಪಟ್ಟುಕೊಳ್ಳುವ ಮೋಜಿನ ಪ್ರಸಂಗವೊಂದು ಇಂತಿದೆ; ‘ನಮ್ಮ ಊರಿನ ಬಂಟನಿಗೆ (ದೈವ) ಬಾಯಿ ಬರುವುದಿಲ್ಲ. ಬಂಟನ ಅಪ್ಪಣೆ ಏನಿದ್ದರೂ ಒಂದು ‘ಕೂ’ ವಿನಲ್ಲೇ ಮುಗಿದು ಹೋಗುತ್ತದೆ.  ಒಮ್ಮೆ ಜಾತ್ರೆಯ ಕಾಲದಲ್ಲಿ ಬಂಟನಿಗೆ ದರ್ಶನ ಬಂದು ಬ್ರಾಹ್ಮಣ ತಂತ್ರಿಗಳೆಲ್ಲ ಕಂಗಾಲಾಗಿ ಬಿಟ್ಟರು. ದೇವಸ್ಥಾನದಲ್ಲಿ ವಿಷ್ಣು ದೇವರು ಅಲಂಕರಿಸಿಕೊಂಡು ಪ್ರದಕ್ಷಣೆ ಹೊರಡಬೇಕಾದರೆ ಬಂಟ-ಜುಮಾತಿಗಳು ಅಪ್ಪಣೆ ಕೊಡಲೇ ಬೇಕು, ಇದು ಪದ್ಧತಿ. ಯಾವುದೋ ಒಂದು ಕಾರಣಕ್ಕೆ ವಿಷ್ಣುವಿನ ಅರ್ಚಕರಿಗೂ ಬಂಟನ ಪಾತ್ರಿಗೂ ಸ್ವಲ್ಪ ವೈಮನಸ್ಸು ಉಂಟಾಗಿತ್ತು. ಆಗ ಅರ್ಚಕರು ಬಂಟನ ಪಾತ್ರಿಯನ್ನು ಹೀನಾಯಮಾನವಾಗಿ ಬೈದಿದ್ದರು. ಅದನ್ನು ಅರ್ಚಕರು ಮರೆತಿದ್ದರೂ ಪಾತ್ರಿ ರಾಮ ಬೆಲ್ಚಡ ಮರೆತಿರಲಿಲ್ಲ. ಜಾತ್ರೆಯ ದಿನ ಬಂಟನಿಗೆ ದರ್ಶನ ಬಂತು.

ದರ್ಶನ ಬಂದ ಮೇಲೆ ವಿಷ್ಣು ದರ್ಶನಕ್ಕೆ ಹೋಗಬೇಕು. ಆದರೆ ಬಂಟ ದೇವರ ದರ್ಶನಕ್ಕೆ ಹೋಗಲು ಒಪ್ಪಲೇ ಇಲ್ಲ. ಜಾತ್ರೆ ನೋಡಲು ಬಂದವರೆಲ್ಲ ಅಡ್ಡ ಬಿದ್ದು ಕೈ ಮುಗಿದು ಬೇಡಿಕೊಂಡರೂ ಬಂಟ ಕೇಳಲಿಲ್ಲ. ತನ್ನ ಎದೆ ತಟ್ಟಿಕೊಂಡು ‘ಕೂ’ ಎಂದು ಆರ್ಭಿಟಿಸಿ ಅರ್ಚಕರ ಎದೆಗೆ ತಿಯುವಂತೆ ಬೆರಳು ತೋರಿಸಿ ಮತ್ತೆ, ‘ಏನು? ’ ಎಂಬಂತೆ ಅಭಿನಯ ಮಾಡಿದ ಬಂಟ. ಅರ್ಚಕರು ಏನೇನು ಸಮಾಧಾನ ಹೇಳಿದರೂ ಬಂಟನ ಕೋಪ ತಣಿಯಲಿಲ್ಲ. ಕೊನೆಗೆ, ‘ಆಗಲಿ ಬಂಟನಿಗೆ ನಮ್ಮ ಮೇಲೆ ಅಸಮಧಾನ ಇದೆ. ಇದ್ದರೂ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸಿ ಬಿಡಬೇಕು. ನಾವು ಎಷ್ಟೆಂದರೂ ಮನುಷ್ಯರು, ನೀವು ಮಾಯಾಕಾರರು, ಅದನ್ನೆಲ್ಲ ಎಣಿಸದೆ ಕಾಪಾಡಬೇಕು’ ಎಂದು ಕೇಳಿಕೊಂಡರು. ಈಗ ಬಂಟನಿಗೆ (ರಾಮ ಬೆಳ್ಚಡ) ಮುಗುಳು ನಗೆ ಬಂತು. ಇನ್ನೊಮ್ಮೆ ಸಭೆಯನ್ನೆಲ್ಲ ನೀಳ್ನೋಟದಲ್ಲಿ ನೋಡಿ, ‘ಕೇಳಿದಿರಾ ಅರ್ಚಕರ ಪಾಪ ಸಂಕೀರ್ತನ’ ಎಂಬ ಅರ್ಥ ಬರುವಂತೆ ‘ಕೂ’ ಎಂದು ಆರ್ಭಟಿಸಿ ದೇವ ದರ್ಶನಕ್ಕೆ ಸಿದ್ಧನಾದ. ‘ಈ ಘಟನೆ ಮೇಲ್ನೋಟಕ್ಕೆ ಹಾಸ್ಯಮಯ ಅನ್ನಿಸಿದರೂ ಜಾತಿ ತಾರತಮ್ಯ ಪಿಡುಗನ್ನು ಸಮಚಿತ್ತದಿಂದ, ಸೂಕ್ಷ್ಮವಾಗಿ ಬಹಿರಂಗ ಪಡಿಸುವಲ್ಲಿ ಲೇಖಕರು ಯಶಸ್ಸಾಗಿದ್ದಾರೆ.   

ಕೇವಲ ನೂರ ಆರು ಪುಟಗಳ ಈ ಪುಟ್ಟ ಕೃತಿಯಲ್ಲಿ ಲೇಖಕರ ಅಪಾರ ಜೀವನಾನುಭವದ ಹಿನ್ನೆಲೆಯಲ್ಲಿ ಒಂದು ಸಮೃದ್ಧ ಕಾದಂಬರಿಯಾಗಬಲ್ಲ ಕಥನ ಸಾಮಾಗ್ರಿಗಳಿವೆ. ಮುಂಬೈಯಲ್ಲಿ ಅವರ ಒಡನಾಟ ಭಾಗ್ಯ ಪಡೆದ ನನಗಂತೂ ಈ ಕೃತಿಯ ಮರು ಓದು ಮಾನನೀಯ ಹಿರಿಯಜ್ಜ  ಅಕ್ಕರೆಯಿಂದ ಕೈ ಹಿಡಿದು ತಮ್ಮ ಊರನ್ನು ಸುತ್ತಾಡಿಸುವಂತಹ ಅನುಭೂತಿ ಉಂಟಾಗಿದೆ. 

‍ಲೇಖಕರು Admin

October 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: