ಗೆದ್ರೂ ಅವರೇ, ಸೋತ್ರೂ ಅವರೇ… ನಿಮ್ದೇನು ಕಥೆ?!!

ಸೋಮವಾರ (ಇಂದು) ತಡ ಮಧ್ಯಾಹ್ನದ ವೇಳೆಗೆ ಎಲ್ಲ ಸ್ಪಷ್ಟವಾಗಿರುತ್ತದೆ. ಗುಜರಾತಿನ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಗಳೆಲ್ಲವೂ ಬಿಜೆಪಿ ದಿಕ್ಕಿನಿಂದಲೇ ಹೊರಟಂತಹವು. ಅವರು ಗೆದ್ದರೆ, ಅದು ಕಳೆದ 20ವರ್ಷಗಳಿಂದ ಗುಜರಾತ್ ಅವರ ಭದ್ರ ಕೋಟೆ ಹಾಗಾಗಿ ಗೆದ್ದರು, ‘ವಿಕಾಸಣ್ಣ’ ಅವರ ಕೈ ಬಿಡಲಿಲ್ಲ ಎಂಬ ಮಾತುಗಳು ಕೇಳಿ ಬರಲಿವೆ. ಸೋತರೆ, ಸ್ವತಃ ಮೋದಿಯವರೇ ಹೇಳಿಕೊಂಡಂತೆ, ನೋಟು ರದ್ಧತಿ-ಜಿ ಎಸ್ ಟಿಯಂತಹ ಕ್ರಮಗಳಿಗೆ “ಬೆಲೆ ತೆತ್ತರು” ಎಂದು ಜನ ಆಡಿಕೊಳ್ಳಲಿದ್ದಾರೆ; ಅಯ್ಯೋ ಪಾಪ ದೇಶಕ್ಕಾಗಿ ತ್ಯಾಗ ಮಾಡಬೇಕಾಯಿತು ಎಂದು ಕರುಣೆ ತೋರುತ್ತಾರೆ.  ಅದೇ ವೇಳೆ ಕಾಂಗ್ರೆಸ್ ಗೆದ್ದರೆ, ಆ ಶ್ರೇಯಸ್ಸೂ ಕೂಡ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಅವರ ಪಾಲಾಗಲಿದೆಯೇ ಹೊರತು ಕಾಂಗ್ರೆಸ್ ಪಾಲಲ್ಲ.

ಅಂದರೆ, ಗೆದ್ದರೂ – ಸೋತರೂ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತನ್ನ ಶ್ರಮದ, ಹೋರಾಟದ ಯಶಸ್ಸಿನ ಪಾಲು ಸಿಗುವುದು ಕಷ್ಟ ಇದೆ. ಯಾಕೆ ಹೀಗಾಯಿತು?

ಇಪ್ಪತು ವರ್ಷಗಳ ಬಳಿಕ ಬೇಟನ್ ಹಸ್ತಾಂತರಿಸಿ, ಮಗ್ಗುಲು ಬದಲಿಸಿರುವ ಕಾಂಗ್ರೆಸ್ ತನ್ನನ್ನು ತಾನು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.

ಮೌನದ ಫಸಲು!

ನೆಹರೂ ಮತ್ತು ಇಂದಿರಾ ಅವರ ಮಾತಿನ ಭರಾಟೆಗಳ ಬಳಿಕ ದೇಶದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್, ಕಳೆದ 33 ವರ್ಷಗಳಲ್ಲಿ ವಿಚಿತ್ರವಾದೊಂದು ಮೌನದ ಕಡೆಗೆ ಸಾಗುತ್ತಾ ಬಂದಿದೆ. ಅದು ಈಗೀಗ… ಜವಾಬ್ದಾರಿಗಳನ್ನು ಇನ್ನೊಬ್ಬರಿಗೆ ದಾಟಿಸಿ, ತಾವು ಸುರಕ್ಷಿತವಾಗಿ ಕುಳಿತುಕೊಳ್ಳುವ ಮೌನ ಆಗಿ ಬೆಳೆದು ನಿಂತಿದೆ.  84ರಲ್ಲಿ ರಾಜೀವ್ ಗಾಂಧಿ ಅವರ ಮೆಲು ಮಾತುಗಳೊಂದಿಗೆ ಆರಂಭಗೊಂಡ ಈ ಮೌನದ ಗಿಡ ಬೆಳೆಯುತ್ತಾ ಬೆಳೆಯುತ್ತಾ ಇಂದು ಭೂತಾಕಾರ ತಳೆದಿದೆ. ಆ ಹಾದಿಯಲ್ಲಿ ಪಿ. ವಿ. ನರಸಿಂಹರಾಯರ ಮೌನ ದೇಶದ ಸೌಹಾರ್ದದ ಮೇಲೆ ಗಾಯ ಮಾಡಿದರೆ, ಮುಂದೆ ಮನಮೋಹನ ಸಿಂಗ್ ಅವರ ಮೌನ ದೇಶದ ವೈವಿದ್ಯತೆಯ ಮೇಲೆ ಪ್ರಹಾರಕ್ಕೆ ಕಾರಣ ಆಯಿತು. ಸೋನಿಯಾ ಗಾಂಧಿಯವರ ಮೌನ ಕಾಂಗ್ರೆಸ್ಸಿನಲ್ಲಿ  ಚಿಲ್ಲರೆ ರಾಜಕಾರಣಕ್ಕೆ ಅವಕಾಶ ತೆರೆದುಕೊಟ್ಟಿತು.

ಮಾತಾಡುವವನೇ ಮಹಾಶೂರ!

ಇದೇ ಅವಧಿಯಲ್ಲಿ, ದೇಶದ ಇನ್ನೊಂದು ಪ್ರಮುಖ ಪಕ್ಷವಾಗಿ ಬೆಳೆಯುತ್ತಾ ಬಂದ ಬಿಜೆಪಿಯಲ್ಲಿ ಮಾತು ಬೆಳೆಯುತ್ತಾ ಹೋಯಿತು ಎಂಬುದೂ ಗಮನಾರ್ಹ. ಆಡ್ವಾಣಿ, ವಾಜಪೇಯಿ ಕಾಲದಲ್ಲಿ ಗೊಣಗಾಟವಾಗಿ ಆರಂಭಗೊಂಡ ಈ ಮಾತು ಬರಬರುತ್ತಾ ಕಾವ್ಯವಾಗಿ, ಖಡಕ್ ಆಗಿ, ಖಡ್ಗವಾಗಿ ಬೆಳೆಯುತ್ತಾ ಈಗ ಮೋದಿ-ಅಮಿತ್ ಷಾ ಕಾಲದಲ್ಲಂತೂ ಬೆಂಕಿಯುಂಡೆ ಆಗಿ ಭುಗಿಲೆದ್ದಿದೆ!

ರಾಜಕೀಯದಲ್ಲಿ ಮಾತು ಸರ್ವಸ್ವ ಎಂಬ ಈವತ್ತಿನ ಸ್ಥಿತಿಯಲ್ಲಿ ಹಠಾತ್ತಾಗಿ ರಾಹುಲ್ ಗಾಂಧಿ ಅವರು ಈಗ ಮಾತಾಡಲೇ ಬೇಕಾದ ಹುಸಿ ಅನಿವಾರ್ಯತೆ ಸ್ರಷ್ಟಿ ಮಾಡಲಾಗಿದೆ. ಮಾತನಾಡದಿರುವುದೇ ಅವರ ‘ಪಪ್ಪುತನ’ ಎಂದು ಪೊಳ್ಳುಬ್ರಾಂಡ್ ಒಂದನ್ನು ಹುಟ್ಟುಹಾಕಲಾಗಿದೆ. ಇದು ರಾತ್ರಿ ಬೆಳಗಾಗುವ ಒಳಗೆ ಆದದ್ದಲ್ಲ. ಸ್ವಲ್ಪ ಹಿಂದಿರುಗಿ ನೋಡಿದರೆ, ಇಂದಿರಾ ಗಾಂಧಿ ಅವರಿಗಿದ್ದ ‘ ಗೂಂಗಿ ಗುಡಿಯಾ’ ಎಂಬ ಹೆಸರನ್ನು ಅವರು ಮೆಟ್ಟಿ ನಿಂತು ಕಾಂಗ್ರೆಸ್ಸಿನಲ್ಲಿದ್ದ ‘ಏಕೈಕ ಗಂಡುಗಲಿ’ ಅನ್ನಿಸಿಕೊಂಡಿದ್ದರು. ಬಳಿಕ, ಅದೇ ‘ಗೂಂಗಿ ಗುಡಿಯಾ’ ಪದವಿಯನ್ನು ಸೋನಿಯಾ ಗಾಂಧಿ ಅವರ ಮೇಲೂ ಹೇರಲಾಯಿತು. ಅವರು ಬರೆದು ಓದುವ ಭಾಷಣಗಳನ್ನು ಗೇಲಿ ಮಾಡಲಾಯಿತು. ಒಟ್ಟಿನಲ್ಲಿ, ರಾಜಕೀಯ ಸಾಮರ್ಥ್ಯ ತೋರಿಸಲು ಓತಪ್ರೋತ ಮಾತು ಅನಿವಾರ್ಯ ಎಂಬ ವಾತಾವರಣ ಸ್ರಷ್ಟಿ ಮಾಡಲಾಯಿತು.

ಈ ಮಾತಿನ ವರಸೆ ಆರಂಭ ಆದಂದಿನಿಂದ ಸೋತಿರುವುದು ಯಾವುದಾದರೂ ಇದ್ದರೆ ಅದು – ದೇಶದ ರಾಜಕಾರಣ.

ಕಾಂಗ್ರೆಸ್ಸಿನಲ್ಲಿ ಕೂಡ ಶ್ರಮ ಹಾಕಿ ತಳಮಟ್ಟದಲ್ಲಿ ಕೆಲಸ ಮಾಡುವ ರಾಜಕಾರಣಿಗಳು ಹಿಂದೆ ಸರಿದು, ಮಾತೇ ಬಂಡವಾಳ ಆಗಿರುವ ದಿಲ್ಲಿ ರಾಜಕಾರಣಿಗಳು, ಪಿರ್ಕಿಗಳು,  ವಕೀಲರುಗಳು ಮುಂಚೂಣಿಗೆ ಬಂದು ತಮಗೆಷ್ಟು ಸಾಧ್ಯವೋ ಅಷ್ಟು ಕೆಸರನ್ನು ಮೊಗೆ ಮೊಗೆದು ಹಾಕತೊಡಗಿದರು. ಮಾತಿಗೆ ಮಾತು ಬೆಳೆಯಿತು. ಅದರ ಬೇರು ದಿಲ್ಲಿಯಿಂದ ಗ್ರಾಮ ಪಂಚಾಯತುಗಳ ತನಕವೂ ಇಳಿಯಿತು. ಇದು ದೇಶದ ಈವತ್ತಿನ ರಾಜಕಾರಣ.

ಈಗ ನೋಡಿ, ಕೊಳ್ಳಿ ದೆವ್ವಗಳು ಬಾಯಲ್ಲಿ ಬೆಂಕಿ ಉಂಡೆ ಇಟ್ಟುಕೊಂಡು ಮಾತನಾಡತೊಡಗಿವೆ. ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ತೆಗೆದುಕೊಂಡಿರುವ ಜನಪ್ರತಿನಿಧಿಗಳ ಬಾಯಲ್ಲೇ ಸಂವಿಧಾನವನ್ನು ಹೀಗಳೆಯುವ ‘ ದೇಶಪ್ರೇಮದ’ ಮಾತುಗಳು ಹೊರಹೊಮ್ಮತೊಡಗಿವೆ, ರಸ್ತೆಗಳಲ್ಲಿ ರಾಜಕೀಯದ ಹೆಣಗಳು ಉರುಳತೊಡಗಿವೆ. ಇದಕ್ಕೆ ಆ ಪಕ್ಷ – ಈ ಪಕ್ಷ ಎಂಬ ಭೇದ ಇಲ್ಲ!

ಅಳೆದು, ಸುರಿದು ಕೊನೆಗೂ ಕಾಂಗ್ರೆಸ್ ಅಧ್ಯಕ್ಷ ಪದವಿ ಒಪ್ಪಿಕೊಂಡಿರುವ ರಾಹುಲ್ ಗಾಂಧಿ, ಈಗಾಗಲೇ ಪಕ್ಷದಲ್ಲಿ ಇಂಚಿಂಚನ್ನೂ ನೋಡಿಯಾಗಿದೆ. ತಲೆಯಿಂದ ಬುಡದ ತನಕವೂ ಹಳಬರು-ಹೊಸಬರ ನಡುವೆ ಬಿರುಕಿದೆ ಎಂಬ ಪುಕಾರುಗಳೂ ಕಾಂಗ್ರೆಸ್ಸಿನಲ್ಲಿವೆ, ಅದಕ್ಕೆ ಪುರಾವೆಗಳೂ ಇಲ್ಲದಿಲ್ಲ.  ಹೊಸ ಮ್ಯಾನೇಜ್ ಮೆಂಟ್, ಐಟಿ ತಜ್ನರನ್ನು ಹಾಕಿಕೊಂಡು (ಬಿಜೆಪಿ ಮಾಡಿದ್ದೂ ಇದನ್ನೇ!) ರಾಹುಲ್ ಮಾಡಿದ ಪ್ರಯೋಗಗಳನ್ನು ಕಾಂಗ್ರೆಸ್ಸಿನ ಹಳೆ ತಲೆಗಳು ಒಪ್ಪಲಿಲ್ಲ. ಹಾಗಾಗಿ ಈ ಬಿರುಕು ಮೂಡಿದ್ದು, ಸೋನಿಯಾ ಅವರ ಕಿಚನ್ ಕ್ಯಾಬಿನೆಟ್ಟಿನ ಸದಸ್ಯರ ತಾಕತ್ತು ಕುಂದಿದ್ದು ಸುಳ್ಳಲ್ಲ. ಆದರೆ, ಈ ಇಡೀ ಪ್ರಯೋಗ ಮೊದಲಿನಂತೆಯೇ  ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಆಯಿತೇ ಹೊರತು ಜವಾಬ್ದಾರಿಗಳನ್ನು ಹೊರಬಲ್ಲವರು ಸ್ರಷ್ಟಿ ಆಗಲಿಲ್ಲ; ಬದಲಾಗಿ ಹೊಸದೊಂದು ಕಿಚನ್ ಕ್ಯಾಬಿನೆಟ್ ಸ್ರಷ್ಟಿ ಆಯಿತು. ಜನ ಇದನ್ನು ಜನರೇಷನ್ ಗ್ಯಾಪ್ ಅಂದರು!

ರಾಹುಲ್ ಗಾಂಧಿ ಅವರಿಗೆ ನಿಜಕ್ಕೂ ಕಾಂಗ್ರೆಸ್ಸನ್ನು ಪುನಶ್ಚೇತನ ಮಾಡಬೇಕು, ದೇಶದ ರಾಜಕಾರಣದಲ್ಲಿ ತನ್ನದೊಂದು ಚಾಪು ಒತ್ತಬೇಕೆಂದಿದ್ದರೆ, ಅವರು ಮಾಡಬೇಕಿರುವ ಮೊದಲ ಕೆಲಸ: “ಹೌದು ನನಗೆ ನಿಮ್ಮಷ್ಟು ಚೆನ್ನಾಗಿ ಮಾತನಾಡಲು ಬರುವುದಿಲ್ಲ; ಏನೀಗ”? ಎಂದು ಬಾಯಿ ಬಿಟ್ಟು ಕೇಳುವ ದಾಢಸೀತನ ಬೆಳೆಸಿಕೊಳ್ಳುವುದು ಮತ್ತು ಕೆಲಸ ಮಾಡಿ, ಮಾತನಾಡೋರು ಮಾತ್ರ ಶೂರರಲ್ಲ ಎಂದು ತೋರಿಸುವುದು. ಈ ಕೆಲಸ ಆಗಬೇಕಿದ್ದರೆ, ಅವರು ದಿಲ್ಲಿಯಿಂದ ಹಳ್ಳಿಯ ತನಕವೂ ಪುಡಾರಿಗಳು, ತಳ ಇಲ್ಲದ ನಾಯಕ ಪಾತ್ರೆಗಳನ್ನು ಗುರುತಿಸಿ ಬದಿಗಿಟ್ಟು, ತಳಮಟ್ಟದಲ್ಲಿ ಜನರ ವಿಶ್ವಾಸ ಪಡೆದು ಕೆಲಸ ಮಾಡಬಲ್ಲ ಕಾರ್ಯಕರ್ತರ ತಂಡವನ್ನು ಕಟ್ಟುವುದು. ಇದು ಸಾವಯುವ ಕ್ರಷಿಯ ಹಾಗೆ ಆರಂಭದಲ್ಲಿ ಫಲ ಕೊಡದಿದ್ದರೂ ಮುಂದೆ ಬೇಕಾದಷ್ಟು ಫಸಲು ಕೊಡಲಿದೆ.

ಇದನ್ನು ಈಗ ಕಾಂಗ್ರೆಸ್ಸೇ ಏಕೆ ಮಾಡಬೇಕೆಂದರೆ, ಈವತ್ತು ಧರ್ಮಾಧಾರಿತ ರಾಜಕಾರಣದ ಅಪಾಯವನ್ನು ಎದುರಿಸಲು, ಬೇಕಾದ ಮೂಲಭೂತ ಸೌಕರ್ಯ ಇರುವುದು ಅಲ್ಲಿ ಮಾತ್ರ. ಈ ಮಟ್ಟಿಗೆ ಕಾಂಗ್ರೆಸ್ಸಿಗೆ ಪರ್ಯಾಯಗಳ್ಯಾವುವೂ ಸದ್ಯಕ್ಕೆ ಕಾಣಿಸುತ್ತಿಲ್ಲ.

‍ಲೇಖಕರು avadhi

December 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

 1. ಸಚಿನ್ ಕುಮಾರ ಹಿರೇಮಠ

  ಪಕ್ಕ ಕಾಂಗ್ರೆಸ್ ಲೇಖನ ಬರೆದಿದ್ದೀರಿ. ಜನಾದೇಶ ಇದು. ಧರ್ಮಾಧಾರಿತ ರಾಜಕಾರಣ ಎಲ್ಲ ಪಕ್ಷದಲ್ಲೂ ಇದೆ.

  ಪ್ರತಿಕ್ರಿಯೆ
 2. Venky

  ಕೊಳ್ಳಿ ದೆವ್ವಗಳು ಬಾಯಲ್ಲಿ ಬೆಂಕಿ ಉಂಡೆ ಇಟ್ಟುಕೊಂಡು ಮಾತನಾಡತೊಡಗಿವೆ. estu sariyaad helike. and I do see these Kolli Devvas started to build the fire already. I think we no more bother about development (I blame congress 60 year rule that we are so well off now that basic thing like poverty, education, healthcare are all taken care of and only religion matters now). My bad, I hope I will not be called AntiN because of my non following….

  ಪ್ರತಿಕ್ರಿಯೆ
 3. ಹರೀಶ

  ಸಾಹಿತ್ಯ ಬಿಟ್ಟು ರಾಜಕೀಯಕ್ಕೆ ಕಾಲಿಟ್ಟ “ಅವಧಿ”.

  ಪ್ರತಿಕ್ರಿಯೆ
 4. D S PRAKASH

  ‘ರಸ್ತೆಯಲ್ಲಿ ರಾಜಕೀಯ ಹೆಣಗಳು ಉರುಳತೊಡಗಿವೆ, ಇದಕ್ಕೆ ಆ ಪಕ್ಷ – ಈ ಪಕ್ಷ ಎಂಬ ಭೇದವಿಲ್ಲ’ ಎಂದಿದ್ದೀರಿ.
  ನೀವು ಕರ್ನಾಟಕದವರಾಗಿ ಈ ಮಾತನ್ನು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹೇಳುತ್ತಿದ್ದೀರಾ ?

  ಪ್ರಕಾಶ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: