ಗುಹೆಯೊಳಗೆ ಹೊಕ್ಕು..

ಎಲ್ಲ ಕಾಲದ ವಿಸ್ಮಯ: ಅಜಂತಾ ಗುಹೆಗಳು

ಪ್ರಿಯದರ್ಶಿನಿ ಶೆಟ್ಟರ, ಧಾರವಾಡ

**

ನಮ್ಮ ಕೌಟುಂಬಿಕ ವಾರ್ಷಿಕ ವಿಶೇಷ ಪ್ರವಾಸದ ಅಂಗವಾಗಿ ಈ ಸಲ ಐತಿಹಾಸಿಕ ಮಹತ್ವದ ತಾಣವೊಂದನ್ನು ಆಯ್ದುಕೊಳ್ಳಬೇಕೆಂಬುದು ನಮ್ಮ ಬಹುದಿನದ ಆಶಯವಾಗಿತ್ತು. ಅಜಂತಾ, ಎಲ್ಲೋರ ಮತ್ತು ಸುತ್ತಮುತ್ತಲಿನ ತಾಣಗಳಿಗೆ ಅಕ್ಟೋಬರ್‌ (2023) ತಿಂಗಳಲ್ಲಿ ನಾವು ಪ್ರವಾಸ ಕೈಗೊಂಡಿದ್ದೆವು. ಅಲ್ಲಿಯ ಗುಹೆಗಳಲ್ಲಿನ ಅಮೋಘವಾದ ಶಿಲ್ಪಕಲೆ ಮತ್ತು ಚಿತ್ರಕಲೆಗಳ ಕುರಿತ ಪರಿಚಯಾತ್ಮಕ ಬರಹವೊಂದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಮುಂದಿನ ಬರಹಗಳಲ್ಲಿ ಮತ್ತಷ್ಟು ವಿವರಗಳನ್ನು ನೀಡಲು ಪ್ರಯತ್ನಿಸುತ್ತೇನೆ.

ಅಜಂತಾ ಗುಹೆಗಳು ಭಾರತೀಯ ಕಲಾ ಸಮೃದ್ಧತೆಯ, ಅದರಲ್ಲೂ ವಿಶೇಷವಾಗಿ ಗುಹಾ ಚಿತ್ರಕಲೆಯ ಅದ್ಭುತ ಉದಾಹರಣೆಗಳಾಗಿವೆ. ಮಹಾರಾಷ್ಟ್ರದ ಔರಂಗಾಬಾದ್‌ ಸಮೀಪದಲ್ಲಿರುವ ಈ ಗುಹೆಗಳು 1983ನೇ ಇಸವಿಯಲ್ಲಿ ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇಲ್ಲಿನ ಬಂಡೆಗಳಲ್ಲಿ ಚೈತ್ಯಗಳನ್ನು ಹಾಗೂ ವಿಹಾರಗಳನ್ನು ಕೆತ್ತಲಾಗಿದೆ. ಈ ಕಣಿವೆಯ ವಾತಾವರಣವು ಪ್ರಶಾಂತತೆಯಿಂದ ಕೂಡಿದ್ದು ಅಂದಿನ ಕಾಲದ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳಿಗೆ ಆಶ್ರಯತಾಣವಾಗಿತ್ತು. ಪ್ರತಿ ಗುಹೆಯು ಜಲಮೂಲಗಳಿಗೆ ಮೆಟ್ಟಿಲುಗಳ ಮೂಲಕ ಸಂಪರ್ಕ ಹೊಂದಿದ್ದು, ನಂತರದ ಅವಧಿಯಲ್ಲಿ ನಶಿಸಿದ್ದರೂ ಕೂಡ ಕೆಲವೆಡೆ ಅವುಗಳ ಗುರುತನ್ನು ಇಂದಿಗೂ ಕಾಣಬಹುದಾಗಿದೆ. ಎಲ್ಲಾ ಮೂವತ್ತು ಗುಹೆಗಳನ್ನು ಅವರ ಅಗತ್ಯ, ಅನುಕೂಲತೆಗನುಗುಣವಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಕೆತ್ತಲಾಗಿದೆ.

ಇಲ್ಲಿರುವ ಗುಹೆಗಳ ಪೈಕಿ ಐದು (9, 10, 19, 26 ಮತ್ತು 29) ಚೈತ್ಯಗೃಹಗಳಾದರೆ ಉಳಿದವು ವಿಹಾರಗಳಾಗಿವೆ. ಗುಹೆಗಳನ್ನು ಅವು ನಿರ್ಮಾಣವಾದ ಕಾಲ ಮತ್ತು ಅವುಗಳ ವಿನ್ಯಾಸದ ತಳಹದಿಯ ಮೇಲೆ ಎರಡು ರೀತಿಯಾಗಿ ವಿಂಗಡಿಸಬಹುದು. ಮೂವತ್ತರಲ್ಲಿ ಆರು ಗುಹೆಗಳು ಬೌದ್ಧ ಧರ್ಮದ ಹೀನಯಾನ ಪಂಥಕ್ಕೆ ಸೇರಿವೆ. 9 ಮತ್ತು 10 ಸಂಖ್ಯೆಯ ಗುಹೆಗಳನ್ನು ಚೈತ್ಯಗೃಹಗಳೆಂದೂ 8, 12, 13 ಮತ್ತು 15A ಗುಹೆಗಳನ್ನು ವಿಹಾರಗಳೆಂದೂ ಗುರುತಿಸಲಾಗಿದೆ. ಈ ಗುಹೆಗಳು ಕ್ರಿಸ್ತ ಪೂರ್ವ ಕಾಲಕ್ಕೆ ಸೇರಿದ್ದು, ಗುಹೆ- 10 ಕ್ರಿಸ್ತ ಪೂರ್ವ ಎರಡನೇ ಶತಮಾನದಲ್ಲಿ ನಿರ್ಮಾಣಗೊಂಡ ಸ್ತೂಪವಾಗಿದೆ. ಕಟ್ಟಿಗೆಯ ಕೆತ್ತನೆಗಳಂತೆ ಬಿಂಬಿತವಾದ ಇಲ್ಲಿನ ಶಿಲ್ಪಕಲೆಯಲ್ಲಿ ಕಂಬಗಳನ್ನು ಕಟ್ಟಿಗೆ ಬಳಸಿದ ರೀತಿ ಕಾಣುವಂತೆ ಮಾಡಲಾಗಿದೆ.   

ಪುರಾತನ ಗುಹೆಗಳಲ್ಲಿನ ಚಿತ್ರಕಲೆಗಳು ಕಾಲ ಉರುಳಿದಂತೆ ಅಲ್ಲಲ್ಲಿ ಮಾಸಿಹೋಗಿದ್ದರೂ ಸಹ, ಬಹಳಷ್ಟು ಉಳಿದುಕೊಂಡಿವೆ. ಈ ಚಿತ್ರಗಳಲ್ಲಿನ ಶಿರಸ್ತ್ರಾನಗಳು ಹಾಗೂ ಒಡವೆಗಳು ಸಾಂಚಿ ಮತ್ತು ಭರ್ಹುತ್ ನಲ್ಲಿಯ ಶಿಲ್ಪಕಲೆಯನ್ನು ಹೋಲುತ್ತವೆ. ಗುಪ್ತರ ಆಡಳಿತದ ಸಮಕಾಲೀನರಾದ ವಾಕಾಟಕರ ಕಾಲದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಗುಹೆಗಳನ್ನು ಕಾಣಬಹುದು. ರಾಜಕುಟುಂಬಗಳು ಮತ್ತು ಸಾಮಂತರು ಆ ಪ್ರದೇಶವನ್ನು ಉತ್ಖನನ ಮಾಡಿದ್ದರು. ವಾಕಾಟಕ ರಾಜನಾದ ಹರಿಶೇನನ (ಕ್ರಿಸ್ತ ಶಕ 475 – 500) ಮಂತ್ರಿಯಾಗಿದ್ದ ವರಾಹದೇವನು 16ನೇ ಗುಹೆಯನ್ನು ಬೌದ್ಧ ಸಂಘಕ್ಕೆ ಅರ್ಪಿಸಿದ್ದನು ಹಾಗೂ 17ನೇ ಗುಹೆಯನ್ನು ಸಾಮಂತನಾಗಿದ್ದ ರಾಜಕುಮಾರನಿಗೆ ಕಾಣಿಕೆಯಾಗಿ ನೀಡಿದ್ದನು. 5ನೇ ಶತಮಾನದ ಮಧ್ಯಭಾಗದಿಂದ 6ನೇ ಶತಮಾನದ ಮಧ್ಯಭಾಗದವರೆಗಿನ ಅವಧಿಯಲ್ಲಿ ಅಜಂತಾದಲ್ಲಿ ತೀವ್ರಗತಿಯ ಚಟುವಟಿಕೆಗಳು ದಾಖಲಾಗಿವೆ. 7ನೇ ಶತಮಾನದ ಮೊದಲಾರ್ಧದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಖ್ಯಾತ ಚೀನೀ ಪ್ರವಾಸಿ ಹುಯೆನ್‌ ತ್ಸಾಂಗ್‌ ಅವರು ಇಲ್ಲಿನ ಗುಹೆಗಳಿಗೆ ಭೇಟಿ ನೀಡದಿದ್ದರೂ ಸಹ ಇಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಬೌದ್ಧ ಧರ್ಮದ ಬಗ್ಗೆ ಸ್ಪಷ್ಟವಾದ ಹಾಗೂ ಸಚಿತ್ರ ವಿವರಣೆಗಳನ್ನು ನೀಡಿದ್ದಾರೆ.

ಗುಹೆ – 26ರಲ್ಲಿಯ ರಾಷ್ಟ್ರಕೂಟ ಶಾಸನವೊಂದು ಎಂಟರಿಂದ ಒಂಭತ್ತನೇ ಶತಮಾನದ ಕಾಲಘಟ್ಟವನ್ನು ಸೂಚಿಸುತ್ತದೆ. ಹಿಂದಿನ ಶೈಲಿಗಿಂತ ಭಿನ್ನವಾದ ಎರಡನೇ ಹಂತವು ಇಲ್ಲಿಯ ವಿನ್ಯಾಸದಲ್ಲಿನ ಹೊಸ ಮಾದರಿಗಳನ್ನು ಪರಿಚಯಿಸುತ್ತದೆ. ಜೊತೆಗೆ ಬುದ್ಧನನ್ನು ಕೇಂದ್ರೀಕರಿಸಿದ ಶಿಲ್ಪಕಲೆ ಹಾಗೂ ವರ್ಣ ಚಿತ್ರಕಲೆಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿನ ವರ್ಣಚಿತ್ರಗಳನ್ನು ಒಂದೇ ಕಾಲಘಟ್ಟದಲ್ಲಿ ಚಿತ್ರಿಸಿದ್ದರೂ ಸಹ ವಾಕಾಟಕರ ಕಾಲದಲ್ಲಿ ಈ ಮಾದರಿಯ ವರ್ಣಚಿತ್ರಗಳ ಅತ್ಯುತ್ತಮ ಉದಾಹರಣೆಗಳನ್ನು 1, 2, 16 ಮತ್ತು 17ನೇ ಗುಹೆಗಳಲ್ಲಿ ಮಾತ್ರ ಗಮನಿಸಬಹುದು. ಬೇರೆ ಬೇರೆ ಕಲಾವಿದರು ತಮ್ಮ ಸಮಕಾಲೀನ ಶೈಲಿಯನ್ನು ಅಳವಡಿಸಿಕೊಂಡ ಕಾರಣ ಇಲ್ಲಿನ ಶೈಲಿಗಳಲ್ಲಿ ಅನೇಕ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ.

ಇಲ್ಲಿರುವ ವರ್ಣಚಿತ್ರಗಳಲ್ಲಿನ ಮುಖ್ಯವಿಷಯಗಳೆಂದರೆ ಜಾತಕ ಕಥೆಗಳು. ಬುದ್ಧನ ಜೀವನದ ವಿವಿಧ ಹಂತಗಳನ್ನು ಚಿತ್ರಿಸುವುದರ ಜೊತೆಗೆ ಸಮಕಾಲೀನ ಘಟನೆಗಳನ್ನು ಹಾಗೂ ಸಾಮಾಜಿಕ ಜೀವನದ ವಿವರಣೆಯನ್ನು ಪ್ರವಾಸಿಗರು ಇಂದಿಗೂ ಕಾಣಬಹುದು. ಇಲ್ಲಿನ ಮೇಲ್ಛಾವಣಿಯ ಅಲಂಕಾರವು ಏಕರೂಪ ಅಲಂಕಾರಿಕ ಮಾದರಿಗಳಾದ ಜ್ಯಾಮಿತೀಯ ಹಾಗೂ ಪುಷ್ಪಾಲಂಕೃತ ರಚನೆಗಳನ್ನು ಹೊಂದಿದೆ. ವರ್ಣಚಿತ್ರಗಳೊಂದಿಗೆ ಶಿಲ್ಪಕಲೆಯ ಕುಸುರಿ ಕೆತ್ತನೆಯೂ ಕೂಡ ಇರುವುದು ಅಜಂತಾ ಗುಹೆಗಳ ಸೌಂದರ್ಯವನ್ನು ನೂರ್ಮಡಿಗೊಳಿಸಿದೆ. 

ಅಜಂತಾದಲ್ಲಿನ ವರ್ಣಚಿತ್ರಗಳು ಟೆಂಪರಾ ತಂತ್ರದ ಬಳಕೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಮೊದಲು ಬಂಡೆಗಲ್ಲಿನ ಮೇಲ್ಮೈಯನ್ನು ಸಿದ್ಧಪಡಿಸಿ, ಚೂಪಾದ ಆಯುಧಗಳಿಂದ ಹದಗೊಳಿಸಲಾಗಿದೆ. ನಂತರ ಕಬ್ಬಿಣಾಂಶ ಹೊಂದಿದ ಮಣ್ಣು ಮಿಶ್ರಿತ, ಉಸುಕು ಹಾಗೂ ಸಾವಯವ ಮೂಲದ ನಾರಿನ ವಸ್ತುಗಳನ್ನು ಬಳಸಿ ತಯಾರಿಸಿದ ಮೇಲ್ಪದರದ ಮೇಲೆ ಸುಣ್ಣದ ಲೇಪನ ಮಾಡಿ, ಅದರ ಮೇಲೆ ಚಿತ್ರಗಳನ್ನು ಬಿಡಿಸಿ, ವಿವಿಧ ಬಣ್ಣಗಳನ್ನು ಹಾಕಲಾಗಿದೆ. ಕೆಂಪು, ಹಳದಿ, ಹಸಿರು, ಕಯೊಲಿನ್‌, ಜಿಪ್ಸಮ್‌, ಕಪ್ಪು ಮತ್ತು ನೀಲಿ ಬಣ್ಣಗಳ ಬಳಕೆಯನ್ನು ಇಲ್ಲಿ ಕಾಣಬಹುದು. ಅಂಟನ್ನು ಪ್ರಮುಖವಾದ ಬೈಂಡಿಂಗ್‌ ಏಜೆಂಟ್‌ ಆಗಿ ಬಳಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಪೇಂಟಿಂಗ್‌ಗಳನ್ನು ಮುಟ್ಟದೇ ಇರುವಂತೆ ಮಾಡಲು ಕಟ್ಟಿಗೆಯ ಸ್ಟ್ಯಾಂಡ್‌ಗಳನ್ನು ಎಲ್ಲ ಗುಹೆಗಳಲ್ಲಿ ಇಟ್ಟಿದ್ದಾರೆ. ಜೊತೆಗೆ ಕತ್ತಲೆಯಲ್ಲಿ ಗೋಡೆಯ ಮೇಲಿನ ಕಲಾಕೃತಿಗಳು ಸ್ಪಷ್ಟವಾಗಿ ಕಾಣಲು ಅಲ್ಲಲ್ಲಿ ಎಷ್ಟು ಬೇಕೋ ಅಷ್ಟು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆರ್ಕಿಯೊಲೊಜಿಕಲ್‌ ಸರ್ವೆ ಆಫ್‌ ಇಂಡಿಯಾದವರು ಸೂಕ್ತ ರಕ್ಷಣಾ ವ್ಯವಸ್ಥೆಯ ಜೊತೆಗೆ ಕುಡಿಯುವ ನೀರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯಗಳ ವ್ಯವಸ್ಥೆ ಮಾಡಿದ್ದಾರೆ.

‍ಲೇಖಕರು avadhi

January 3, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: